Site icon Vistara News

ನನ್ನ ದೇಶ ನನ್ನ ದನಿ | ಭಾರತೀಯ ಇತಿಹಾಸದ ಧ್ರುವನಕ್ಷತ್ರ ಅಹಲ್ಯಾಬಾಯಿ ಹೋಳ್ಕರ್

ahalyabai holkar

ಈ ಅಂಕಣವನ್ನು ಇಲ್ಲಿ ಕೇಳಿ:

http://vistaranews.com/wp-content/uploads/2023/01/ANM-Audio-file-on-Ahalyabai-Holkar-VISTARA.mp3

1988ರ ನವೆಂಬರ್ 13ರಂದು ನಡೆದ 20ನೆಯ ʼನೆಹರೂ ಸ್ಮಾರಕ ಉಪನ್ಯಾಸ ಕಾರ್ಯಕ್ರಮʼದಲ್ಲಿ, ಆಫ್ರಿಕಾ ಖಂಡದ ನೈಜೀರಿಯಾ ದೇಶದ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ (1986ರಲ್ಲಿ ಪ್ರಶಸ್ತಿ) ವೋಲೆ ಶೋಯಿಂಕಾ ಅವರು ಒಂದು ಮುಖ್ಯವಾದ ಚಿಂತನೆಯನ್ನು ಹಂಚಿಕೊಂಡರು. ಐರೋಪ್ಯರ ವಸಾಹತುಗಳ ಇತಿಹಾಸಗಳನ್ನು, ಐರೋಪ್ಯ ದೃಷ್ಟಿಕೋನದಿಂದ ಬರೆಯಲಾಗಿದೆ, ಎಂದರು. ಭಾರತದ ಇತಿಹಾಸ ಪಠ್ಯಗಳ ಬಗೆಗೂ ಅವರು “ಬ್ರಿಟಿಷ್ ಇತಿಹಾಸಕಾರರು ಬರೆದ ಇತಿಹಾಸದ ಪ್ರತಿಯೊಂದು ಆಖ್ಯಾಯಿಕೆಗೂ ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಿದೆ” ಎಂದೂ ಹೇಳಿದರು. “ಆಫ್ರಿಕಾದ ಇತಿಹಾಸವನ್ನೂ ಪುನಾರಚಿಸುವ” ಕೆಲಸ ಆಗಬೇಕಾಗಿದೆ ಮತ್ತು ಈ ಕುರಿತಂತೆ ಆಫ್ರಿಕಾದಲ್ಲಿ ಗಂಭೀರ ಪ್ರಯತ್ನಗಳು ನಡೆಯುತ್ತಿವೆ, ಎಂದೂ ಸೇರಿಸಿದರು.

ಹೀಗೆ ಇತಿಹಾಸವನ್ನು ಪುನಾರಚಿಸುವ ಕಾರ್ಯದ ಯೋಜನೆಗಳು ಆಫ್ರಿಕಾದಲ್ಲಿ ಯಾವ ಸ್ಥಿತಿಯಲ್ಲಿವೆಯೋ ಗೊತ್ತಿಲ್ಲ; ಆದರೆ, ಭಾರತದಲ್ಲಂತೂ ಈ ದಿಕ್ಕಿನಲ್ಲಿ ನಡೆದ ಪ್ರಯತ್ನಗಳು ತೀರ ಅತ್ಯಲ್ಪ ಎನ್ನುವ ಯಶಸ್ಸು ಪಡೆದಿವೆ. ಹೀಗೆ ಪುನಾರಚಿಸುವವರ ಸಂಖ್ಯೆಯಲ್ಲೇನೂ ಕೊರತೆಯಿಲ್ಲವಾದರೂ, ಅವರ ಪ್ರತಿಭೆಯು ಅವರ ಕಾರ್ಯೋತ್ಸಾಹಕ್ಕೆ ಅನುಗುಣವಾಗಿಲ್ಲ. ಇನ್ನಾದರೂ ಭಾರತದಲ್ಲಿ ವಸಾಹತುಶಾಹಿ ಮತ್ತು ಅವರ ʼಉತ್ತರಾಧಿಕಾರಿಗಳುʼ ರಚಿಸಿದ ಸುಳ್ಳು-ಇತಿಹಾಸದ ಸದ್ದಡಗಿ, ನಿಜ-ಇತಿಹಾಸದ ಪ್ರಥೆ ಬೆಳಗಲಿ.

ಮೂರು ಶತಮಾನಗಳ ಹಿಂದೆ ಭಾರತದ ಸ್ಥಿತಿ ಚಿಂತಾಜನಕವಾಗಿತ್ತು. ಇಸ್ಲಾಮೀ ಆಕ್ರಮಣಕಾರಿಗಳು ವಿಜೃಂಭಿಸುತ್ತಿದ್ದರು. ಹಿಂದೂ ದೇವಾಲಯಗಳ ಧ್ವಂಸ, ಪವಿತ್ರ ತಾಣಗಳ ನಾಶ ಮಿತಿಮೀರಿತ್ತು. 17ನೆಯ ಶತಮಾನದ ಉತ್ತರಾರ್ಧದಲ್ಲಿ ದೇಶಾದ್ಯಂತ ಭಾರತೀಯ ಸಂಸ್ಕೃತಿಯ ನಾಶ ಎಲ್ಲೆ ಮೀರಿತ್ತು.

ಉದಯಪುರ, ಜೋಧಪುರ, ಚಿತ್ತೂರುಗಢ ಸೇರಿದಂತೆ ಕಾಶಿಯ ವಿಶ್ವೇಶ್ವರ ದೇವಾಲಯ, ಮಥುರೆಯ ಕೃಷ್ಣನ ದೇವಾಲಯ (ಕೇಶವ ದೇವ ದೇವಾಲಯ) ಮುಂತಾದ ಪ್ರಮುಖ ದೇವಾಲಯಗಳನ್ನು ಔರಂಗಜೇಬನು ಧ್ವಂಸ ಮಾಡಿದ. ಹಿಂದೂಗಳ ಮೇಲೆ ಅಮಾನವೀಯವಾದ ಜಿಜಿಯಾ ತೆರಿಗೆಯನ್ನು ಮತ್ತೆ ಹೇರಿದ. ಸುಲ್ತಾನರ, ಮೊಘಲರ ಇಂತಹ ಇಸ್ಲಾಮ್-ಪ್ರಣೀತ ಪರಮತಧರ್ಮನಾಶದ ಈ ಅವಧಿಯಲ್ಲಿ ಅವರಿಗೆ ಅದ್ಭುತವಾದ ಪ್ರತಿರೋಧವನ್ನು ನೀಡಿದವರಲ್ಲಿ ಮರಾಠಾ ರಾಜ-ರಾಣಿಯರ ಕೊಡುಗೆ, ಸಾಧನೆಗಳು ನಿಜಕ್ಕೂ ಅತ್ಯದ್ಭುತ.

ಭಾರತ-ದ್ವೇಷಿ ಮೆಕಾಲೆವಾದಿಗಳು ಬರೆದಿಟ್ಟಿರುವ ನಮ್ಮ ಇತಿಹಾಸ ಪಠ್ಯಗಳಲ್ಲಿ ಸ್ವದೇಶೀ ವೀರಾಗ್ರಣಿಗಳ ಚಿತ್ರಣ ಅತ್ಯಲ್ಪವೆನ್ನುವಷ್ಟು ಕಡಿಮೆ. ಅದೇ, ವಿದೇಶೀ ಇಸ್ಲಾಮೀ ಹಾಗೂ ಬ್ರಿಟಿಷ್ ವಸಾಹತುಶಾಹಿಗಳ ಗುಣಗಾನ ಮಾಡುತ್ತಾ ಅವರು ಸಂಪುಟ ಸಂಪುಟಗಳನ್ನೇ ತುಂಬಿಸಿಬಿಟ್ಟಿದ್ದಾರೆ. ಮಧ್ಯಪ್ರದೇಶದ ಮಾಹೇಶ್ವರದಲ್ಲಿ, ಮರಾಠಾ ಮೂಲದ ಹೋಳ್ಕರ್ ರಾಜವಂಶವನ್ನು ಸ್ಥಾಪಿಸಿದ ಅಹಲ್ಯಾಬಾಯಿ ಹೋಳ್ಕರ್ ಅವರ ಬಗೆಗೆ ನಮ್ಮ ಪಠ್ಯಪುಸ್ತಕಗಳಲ್ಲಿ ದೊರೆಯುವ ಮಾಹಿತಿ ಏನೇನೂ ಸಾಲದು. ಇಂದೂರು, ಮಾಹೇಶ್ವರಗಳನ್ನು ಸ್ವತಃ ಭೇಟಿ ಮಾಡಿದಾಗ ನಮಗೆ ಅಚ್ಚರಿಯೇ ಕಾದಿರುತ್ತದೆ. ಅಹಲ್ಯಾಬಾಯಿ ಅವರ ಸಾಧನೆಯು ನಮ್ಮನ್ನು ನಿಬ್ಬೆರಗಾಗಿಸುತ್ತದೆ. ಶಿವಾಜಿ ಮಹಾರಾಜರ ತಾಯಿ ವೀರಮಾತೆ ಜೀಜಾಬಾಯಿ ಅವರಂತಹ ತಾಯಿ ಅಹಲ್ಯಾಬಾಯಿ ಹೋಳ್ಕರ್ ಅವರಿಗೂ ಲಭಿಸಿದ್ದು ಒಂದು ಸುಯೋಗ. ಖಂಡೇ ರಾವ್ ಹೋಳ್ಕರ್ ಅವರನ್ನು ಮದುವೆ ಆದನಂತರವೂ, ರಾಜ್ಯಾಡಳಿತದಲ್ಲಿ – ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ತಾಯಿಯ ತರಬೇತಿ ಮುಂದುವರಿಯಿತು.

ಪತಿ ಖಂಡೇ ರಾವ್ ಹೋಳ್ಕರ್ ಅವರ ಅನಿರೀಕ್ಷಿತ ದುರ್ಮರಣವಾದಾಗ, ಅಹಲ್ಯಾಬಾಯಿ ಅವರಿಗೆ ಬೆಂಬಲವಾಗಿ ನಿಂತವರು ಮಾವ ಮಲ್ಹಾರ್ ರಾವ್ ಹೋಳ್ಕರ್. ಅವರು ಸಮರ ತರಬೇತಿಯನ್ನೂ ನೀಡಿದರು. ಮಾವನವರ ಮರಣಾನಂತರ ರಾಜನಾದವನು ಅಹಲ್ಯಾಬಾಯಿ ಹೋಳ್ಕರ್ ಅವರ ಮಗ. ವಿಧಿಯ ಲೀಲೆಯೇ ವಿಚಿತ್ರ. ಮಗ ಸಹ ತೀರಿಹೋದ. ಮೂರು ಮೂರು ಮರಣಗಳ ಆಘಾತದಿಂದ ಚೇತರಿಸಿಕೊಂಡ ಅಹಲ್ಯಾಬಾಯಿ, 1767ರಲ್ಲಿ ತಾವೇ ಸ್ವತಃ ರಾಣಿಯಾಗಿ ಆಡಳಿತದ ಸೂತ್ರಗಳನ್ನು ತಮ್ಮ ಕೈಗೆ ತೆಗೆದುಕೊಂಡರು. ಮರಾಠಾ ರಾಜ ಪೇಶ್ವೆ ಒಂದನೆಯ ಮಾಧವರಾಯರ ಅನುಮತಿ ಪಡೆದು ಅಹಲ್ಯಾಬಾಯಿ ಹೋಳ್ಕರ್ ಇಂದೂರಿನ ಮಹಾರಾಣಿ ಆದರು. ಇಪ್ಪತ್ತೆಂಟು ವರ್ಷಗಳ ಅವರ ರಾಜ್ಯಭಾರ ವಿಸ್ಮಯ ತರುವಂತಹುದು. ಪ್ರಜೆಗಳ ಕಷ್ಟಸುಖಗಳಿಗೆ ಅವರು ಸದಾ ಸರ್ವದಾ ಸ್ಪಂದಿಸುತ್ತಿದ್ದರು. ತಮ್ಮ ರಾಜ್ಯದ ಆದಾಯವನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಂಡರು. ಅಂದಿನ ಭಾರತೀಯ ಸಮಾಜವನ್ನು ಉಳಿಸಿದ, ಉಳಿಸಿಕೊಂಡ ಶ್ರೇಯಸ್ಸು ಅವರದಾಗುತ್ತದೆ. ಅವರ ರಾಜ್ಯವನ್ನು ಮೀರಿದ ರಾಷ್ಟ್ರೀಯ ದೃಷ್ಟಿ ಅವರದ್ದಾಗಿತ್ತು. ಅಹಲ್ಯಾಬಾಯಿ ಹೋಳ್ಕರ್ ಅವರ ಜೀವನಗಾಥೆಯನ್ನು ಅಭ್ಯಾಸ ಮಾಡಿದವರಿಗೆ, ಕೆಲವರ “ಬ್ರಿಟಿಷರೇ ಈ ದೇಶವನ್ನು ಒಂದುಗೂಡಿಸಿದ್ದು, ಬ್ರಿಟಿಷರಿಗಿಂತ ಮೊದಲು ನಾವೊಂದು ರಾಷ್ಟ್ರವೇ ಆಗಿರಲಿಲ್ಲ” ಎನ್ನುವ ದುರುದ್ದೇಶದ ಹೇಳಿಕೆಗಳು ನಗೆಯುಕ್ಕಿಸುತ್ತವೆ.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ | ಎಲ್ಲಿಯ ರೂಸ್‌ವೆಲ್ಟ್, ಎಲ್ಲಿಯ ಭಾರತ ಸ್ವಾತಂತ್ರ್ಯ !

ಭಾರತಾದ್ಯಂತ ಅಹಲ್ಯಾಬಾಯಿ ಹೋಳ್ಕರ್ ಅವರು ಅನೇಕ ಪವಿತ್ರ ನದಿಗಳ ತೀರದಲ್ಲಿ ಸ್ನಾನಘಟ್ಟಗಳನ್ನು ನಿರ್ಮಿಸಿದರು. ಹಳೆಯ ಮತ್ತು ವಿಧ್ವಂಸಗೊಂಡ ದೇವಾಲಯಗಳ ಪುನರ್ನಿರ್ಮಾಣ ಮಾಡಿಸಿದರು. ಇಂದು ಕಾಶಿಯಲ್ಲಿ ಪೂಜೆಗೊಳ್ಳುತ್ತಿರುವ ಕಾಶಿ ವಿಶ್ವೇಶ್ವರನ ದೇವಾಲಯವನ್ನು ಪುನರ್ನಿರ್ಮಿಸಿದವರೇ ಅವರು (ಮೂಲ ದೇವಾಲಯ ಔರಂಗಜೇಬನಿಂದ 1669ರಲ್ಲಿ ಧ್ವಂಸಗೊಂಡಿತು). ಬಾವಿಗಳನ್ನು, ಕೆರೆಗಳನ್ನು ಮತ್ತು ಭಾರತೀಯ ಶಿಲ್ಪಕಲೆಗೆ ಮೆರುಗು ತಂದ ಮೆಟ್ಟಿಲು-ಬಾವಿಗಳನ್ನೂ (stepwells) ಕಟ್ಟಿಸಿದರು. ಯಾತ್ರಿಗಳಿಗೆ ಅನ್ನಛತ್ರಗಳನ್ನು ಸಹ ನಿರ್ಮಿಸಿದರು.

ದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರಗಳ ಜೊತೆಗೆ ಅವುಗಳ ನಿಯಮಿತ ನಿರ್ವಹಣೆಗೂ ವ್ಯವಸ್ಥೆ ಮಾಡಿದರು. ಪಂಡಿತರಿಂದ ದೇವಾಲಯಗಳಲ್ಲಿ ಶಾಸ್ತ್ರಗ್ರಂಥಗಳ ಪ್ರವಚನಗಳಿಗೂ ವ್ಯವಸ್ಥೆ ಮಾಡಿದರು. ಹಿಮಾಲಯದ ಬದರೀನಾಥ, ಕೇದಾರನಾಥ, ದಕ್ಷಿಣ ಸಮುದ್ರದ ರಾಮೇಶ್ವರಂ, ಪಶ್ಚಿಮದ ದ್ವಾರಕೆ- ಸೋಮನಾಥ, ಪೂರ್ವದ ಪುರಿ, ಗಯಾ, ಹರಿದ್ವಾರ, ಅವಂತಿ, ಕರ್ನಾಟಕದ ನಮ್ಮ ಗೋಕರ್ಣ, ಹೀಗೆ ಎಲ್ಲೆಡೆ ದೇವಾಲಯಗಳ ನಿರ್ವಹಣೆಗೆ ಧನಸಹಾಯ ಮಾಡಿದರು. ಭಾರತಾದ್ಯಂತ ಬೇರೆಬೇರೆ ಪ್ರಾಂತಗಳಲ್ಲಿ ಬೇರೆಬೇರೆ ಆಳರಸರಿದ್ದರು. ಆಸೇತು ಹಿಮಾಚಲ ಅವರೆಲ್ಲರೊಂದಿಗೂ ಸಂವಹನ ಸಾಧಿಸಿ, ಯಶಸ್ವಿಯಾಗಿ ನಡೆಸಿದ ಅವರ ಜೀರ್ಣೋದ್ಧಾರ ಕಾರ್ಯಗಳು ಇದು ನಿಜವೇ, ಎನ್ನುವಂತೆ ಅಚ್ಚರಿಪಡಿಸುತ್ತವೆ.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ | ದೆಹಲಿ ಬ್ರಿಟಿಷರ ರಾಜಧಾನಿ ಆದುದಾದರೂ ಹೇಗೆ?

ವ್ಯಾಪಾರಿಗಳಿಗೆ, ರೈತರಿಗೆ ಬೆಂಬಲವಾಗಿ ನಿಂತರು. 108 ರಾಮಾಯಣಗಳನ್ನು ರಚಿಸುವ ಸಾಹಸಕ್ಕೆ ಉದ್ಯುಕ್ತರಾದ ಮಯೂರೇಶ್ವರ ರಾಮಚಂದ್ರ ಪರಾಡಕರ್ (ಮೋರೋಪಂತ್) ಅವರನ್ನು ಒಳಗೊಂಡಂತೆ ಕವಿಗಳಿಗೆ- ಸಾಹಿತಿಗಳಿಗೆ ಪ್ರೋತ್ಸಾಹ ನೀಡಿದರು.

ವನವಾಸಿಗಳಾದ ಭೀಲರು, ಗೊಂಡರು ಮಾಹೇಶ್ವರ ರಾಜ್ಯದ ಗಡಿಭಾಗಗಳಲ್ಲಿ ದಾಳಿ ಮಾಡಿ ಕಿರಿಕಿರಿ ಉಂಟುಮಾಡುತ್ತಿದ್ದರು. ಅಂತಹವರನ್ನೂ ರಾಣಿ ಅಹಲ್ಯಾಬಾಯಿ ಸಕಾರಾತ್ಮಕವಾಗಿ ನೋಡಿ ಅವರಿಗೆ ಗುಡ್ಡಗಾಡುಗಳ ಭೂಭಾಗಗಳನ್ನು ಅಧಿಕೃತವಾಗಿ ನೀಡಿ, ಅಲ್ಲಿ ಹಾದುಹೋಗುವ ಸಾರ್ಥಗಳಿಂದ ಸಮಂಜಸವೆನ್ನುವಂತಹ ಸುಂಕ ವಸೂಲಿ ಮಾಡುವ ಅಧಿಕಾರ ನೀಡಿ, ಅವರ ಜೀವನೋಪಾಯಕ್ಕೂ ದಾರಿ ಮಾಡಿದರು.

ಅವರ ಅಭಿವೃದ್ಧಿ ಕಾರ್ಯಗಳ ವ್ಯಾಪ್ತಿ ವಿಸ್ಮಯವುಂಟುಮಾಡುತ್ತದೆ. ಶಿಲ್ಪಿಗಳಿಗೆ, ನೇಕಾರರಿಗೆ ಅವರು ನೀಡಿದ ಪ್ರೋತ್ಸಾಹ ಮೆಚ್ಚುವಂತಹುದು. ಇವೆಲ್ಲವುಗಳ ನಡುವೆ ಮಾಹೇಶ್ವರದ ತಮ್ಮ ರಾಜ್ಯವನ್ನೂ ಕಾಪಾಡಿಕೊಳ್ಳಬೇಕಿತ್ತು. ಯುದ್ಧಕಾಲದಲ್ಲಿ ಅವರು ಸ್ವತಃ ಸಮರಾಂಗಣದಲ್ಲಿದ್ದು ಆಕ್ರಮಣ- ಪ್ರತ್ಯಾಘಾತಗಳನ್ನು ಯೋಜಿಸುತ್ತಿದ್ದರು. ಹಾಗೆಂದೇ ಅವರ ಆಳ್ವಿಕೆಯಾವಧಿಯಲ್ಲಿ ಯಾರೂ ಮಾಹೇಶ್ವರವನ್ನು ಆಕ್ರಮಿಸಿಕೊಳ್ಳುವ ದುಸ್ಸಾಹಸ ಮಾಡಲಿಲ್ಲ.

ಹಾಗೆಂದೇ, ಸಂತ ಪರಮಹಂಸ ಯೋಗಾನಂದರು ಅಹಲ್ಯಾಬಾಯಿ ಅವರನ್ನು “ಆಧುನಿಕ ಭಾರತದ ಮಹಾನ್ ಮಹಿಳೆ” ಎಂದು ಸೂಕ್ತವಾಗಿಯೇ ಕೊಂಡಾಡಿದ್ದಾರೆ.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ | ಶತಮಾನದ ಕಾಲ ತುಳಿಯಲ್ಪಟ್ಟರೂ ಭಾರತೀಯ ಕ್ಷಾತ್ರ ಸಿಡಿದೆದ್ದಿತು

Exit mobile version