Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಅಂತಃಸ್ಫೋಟದ ಅಂಚಿನಲ್ಲಿ ಪಾಪಿಸ್ತಾನ

pakistan

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2023/03/pak-2-compressed-1.mp3

ಜಾನಪದ ಐತಿಹ್ಯಗಳ- ಕಥೆಗಳ ಸೊಗಸೇ ಸೊಗಸು. ಅವುಗಳ ಸಂದೇಶವೋ ಮಾರ್ಮಿಕ, ಅದ್ಭುತ. ನಮ್ಮ ಹಿರಿಯರು ಅಂತಹ ಒಂದು ಕಥೆ ಹೇಳುತ್ತಿದ್ದರು. ಒಂದು ಊರಿನಲ್ಲಿ ಚರಂಡಿಯೊಂದರ ಮೇಲೆ ಒಂದು ಕಲ್ಲು ಇತ್ತಂತೆ. ಓಡಾಡುವವರೆಲ್ಲರೂ ಅದನ್ನು ತುಳಿದುಕೊಂಡು ಆಚೀಚೆ ಹೋಗಿಬರುತ್ತಿದ್ದರು. ಕರುಣಾಳು ಪುಣ್ಯಾತ್ಮನೊಬ್ಬ ಸೂಕ್ಷ್ಮವಾಗಿ ನೋಡಿದ. ಇದು ಮಾಮೂಲಿ ಕಲ್ಲಿನಂತೆ, ಚಪ್ಪಡಿಯಂತೆ ಕಾಣುತ್ತಿಲ್ಲ, ಎನಿಸಿತು. ಕಷ್ಟಪಟ್ಟು ಅದನ್ನು ಎತ್ತಿ ನಿಲ್ಲಿಸಿ ಒರಗಿಸಿ ನೋಡಿದ. ಆಶ್ಚರ್ಯಪಟ್ಟ. ಅದೊಂದು ದೇವರ ವಿಗ್ರಹ. ಮುಖ ಅಡಿಯಾಗಿ ಅದು ಚರಂಡಿಯ ಮೇಲಿತ್ತು. ಹಾಗಾಗಿ ಅದೊಂದು ವಿಗ್ರಹ ಇರಬಹುದು, ಎಂಬುದೇ ಯಾರಿಗೂ ಗೊತ್ತಿರಲಿಲ್ಲ. ಕರುಣಾಳು ಅದನ್ನು ತೊಳೆದು ಒರಗಿಸಿ ಅಚ್ಚುಕಟ್ಟು ಮಾಡಿದ. ಕುಂಕುಮ ಹಚ್ಚಿ, ಹೂವು ಹಾಕಿ ಪೂಜೆಯನ್ನೇ ಮಾಡಿದ. ಆ ದೇವರು “ನೀನು ಹಾಳಾಗಿಹೋಗು, ನಿನ್ನ ನಿರ್ವಂಶವಾಗಲಿ, ನಿನ್ನ ಸರ್ವನಾಶವಾಗಲಿ” ಎಂದು ಶಪಿಸಿತು. ಕರುಣಾಳುವಿಗೆ ಅಚ್ಚರಿಯಾಯಿತು, ಬೆಚ್ಚಿಬಿದ್ದ. ಆ ದೈವಕ್ಕೆ ಕೇಳಿದ, “ಅದೇಕೆ ಶಪಿಸುತ್ತಿರುವೆ. ಎಲ್ಲರೂ ನಿನ್ನನ್ನು ತುಳಿದುಕೊಂಡು ಓಡಾಡುತ್ತಿದ್ದರು. ನಾನು ನಿನ್ನನ್ನು ಎತ್ತಿ ನಿಲ್ಲಿಸಿ, ಒರಗಿಸಿ ಪೂಜೆಯನ್ನೂ ಮಾಡಿದ್ದೇನೆ. ಅಂತಹ ನನ್ನನ್ನು ನೀನು ಹಾಳಾಗಿಹೋಗು, ಎಂದು ಶಪಿಸುತ್ತಿರುವೆಯಲ್ಲಾ? ಆಶ್ಚರ್ಯವಾಗುತ್ತಿದೆ” ಎಂದ.

ಅದು “ನಿಜ, ನಾನು ಹಾಳುದೇವರು. ಮಾಮೂಲಿ ದೇವರಲ್ಲ. ಎಲ್ಲರೂ ತುಳಿದುಕೊಂಡು ಓಡಾಡುತ್ತಿದ್ದುದೇ ಸರಿಯಿತ್ತು. ನೀನು ಎತ್ತಿ ನಿಲ್ಲಿಸಿದೆ. ನನಗೆ ಪೂಜೆ, ಪುನಸ್ಕಾರ, ನಮಸ್ಕಾರ ಎಲ್ಲವೂ ಅಪಥ್ಯ, ವರ್ಜ್ಯ. ನನ್ನನ್ನು ಎಲ್ಲರೂ ತುಳಿದುಕೊಂಡೇ ಓಡಾಡಬೇಕು. ನೀನು ಅಜ್ಞಾನದಿಂದ ಮಾಡಿದ ತಪ್ಪಿಗೆ, ಮತ್ತೊಮ್ಮೆ ನಿನ್ನ ಸರ್ವನಾಶವಾಗಲಿ ಎಂದು ಶಾಪ ಹಾಕುತ್ತೇನೆ” ಎಂದಿತು. ಈ ಜಾನಪದ ಕಥೆಯನ್ನು ಕೇಳಿ ಅರುವತ್ತು ವರ್ಷಗಳಿಗಿಂತ ಹೆಚ್ಚೇ ಆಗಿದೆ. ಆಗ ಬಾಲ್ಯದಲ್ಲಿ ಅರ್ಥವಾಗಿರಲಿಲ್ಲ. ಇತ್ತೀಚೆಗೆ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ, ಈ ಕಥೆ ಮತ್ತೆ ನೆನಪಾಯಿತು. ಅಷ್ಟೇ ಅಲ್ಲ. ಅರ್ಥವೂ ಆಯಿತು. ಈ ಕಥೆ ಅದ್ಭುತವಾದ ಸಂದೇಶವನ್ನೇ ನೀಡುತ್ತದೆ, ಎನಿಸಿತು.

ಪಾಕಿಸ್ತಾನ ಹುಟ್ಟಿದ್ದೇ ದ್ವೇಷದಿಂದ. ಅದೂ ಶತಶತಮಾನಗಳ ಹಿಂದೂ-ದ್ವೇಷ. ಜಿಹಾದಿಗಳಿಗೆ ಭಾರತೀಯ ಸಂಸ್ಕೃತಿ, ಕಲೆ, ಸಾಹಿತ್ಯ, ಶಿಲ್ಪಕಲೆ, ಧರ್ಮ ಎಲ್ಲವೂ ಎಲ್ಲವೂ ಅಪಥ್ಯವೇ. ಎಷ್ಟು ದೇವಾಲಯಗಳನ್ನು ನಾಶಪಡಿಸಿದರೂ ಸಾಲದು. ಎಷ್ಟು ನರಹತ್ಯೆ ಮಾಡಿದರೂ ಸಾಲದು. ಲಕ್ಷ ಲಕ್ಷ ಗ್ರಂಥಗಳನ್ನು ಸುಟ್ಟು ಸುಟ್ಟು ಹಾಕಿದರೂ ಸಮಾಧಾನವಿಲ್ಲ. ತನ್ನ ಮಿಸ್ಸೈಲುಗಳಿಗೆ ಘೋರಿ, ಘಜನಿ, ಅಬ್ದಾಲಿ, ಹೀಗೆಲ್ಲಾ ನರರಾಕ್ಷಸರ ಹೆಸರಿಟ್ಟರೂ ಪಾಕಿಸ್ತಾನಕ್ಕೆ ಇನ್ನೂ ಸಮಾಧಾನವಿಲ್ಲ. ಏಕೆ, ಏಕೆ ಹೀಗೆ, ಎಂಬ “ಮುಗ್ಧರ” ಪ್ರಶ್ನೆಗಳಿಗೆ ಅವರಿಂದ “ನಾವು, ನಮ್ಮ ಮತ, ನಮ್ಮ ದೇಶ, ನಮ್ಮ ಜನ ಇರುವುದೇ ಹೀಗೆ” ಎನ್ನುವ ಉತ್ತರ ಸ್ಪಷ್ಟವಾಗಿಯೇ ದೊರೆಯುತ್ತದೆ.

ಕೊಲ್ಲಿಯ ದೇಶಗಳಿಗೇನೋ ತೈಲ ನಿಕ್ಷೇಪಗಳ ಸಂಪತ್ತಿದೆ. ಬೇರೆ ದೇಶಗಳಿಗೆ, ಪಾಪ, ಅಂತಹ “ಅದೃಷ್ಟ” ಇಲ್ಲ. ಅವು ಜೀವನ ನಿರ್ವಹಣೆಗೆ ಬೆವರು ಹರಿಸಲೇಬೇಕು. ಆದರೇನು ಮಾಡುವುದು, ಅವರಿಗೆ ಗೊತ್ತಿರುವುದು ಬೇರೆ ಮತಧರ್ಮಗಳ ಜನರ ರಕ್ತ ಹರಿಸುವುದು ಮಾತ್ರವೇ! ಕೇವಲ ಅದರ ರಿಲಿಜನ್ ಕಾರಣಕ್ಕೆ, ಪಾಕಿಸ್ತಾನಕ್ಕೆ ತುಂಬಾ ವರ್ಷ ಭಿಕ್ಷೆ, ಎಂಜಲು ಸಿಕ್ಕಿದೆ. ಕೆಲವು ಭಾರತ-ದ್ವೇಷಿ ದೇಶಗಳು ಪಾಕಿಸ್ತಾನವನ್ನು ಅನೇಕ ದಶಕಗಳ ಕಾಲ ಪೋಷಣೆಯನ್ನೂ ಮಾಡಿಕೊಂಡು ಬಂದಿವೆ. ಆದರೇನು? ಎಲ್ಲದಕ್ಕೂ ಒಂದು ಅಂತ್ಯ, ಒಂದು ಕೊನೆ, ಒಂದು ಮುಕ್ತಾಯ ಇರುತ್ತದೆಯಲ್ಲವೇ? ಇದೀಗ ಪಾಕಿಸ್ತಾನವು ಅರಾಜಕತೆಯ, ಅಂತಃಸ್ಫೋಟದ, ಅಂತಃಕಲಹದ ಅಂಚಿಗೇ ತಲುಪಿದೆ. ಅಯ್ಯೋ, ಪಾಪ ಎನ್ನುವ ತಥಾಕಥಿತ “ಕರುಣಾಳು”ಗಳು ನಮ್ಮ ದೇಶದಲ್ಲಿಯೂ ಇದ್ದಾರೆ. “ಇದು ಪಾಕಿಸ್ತಾನದ ಆಡಳಿತದ ತಪ್ಪು. ಅಲ್ಲಿನ ಆಳುವವರ ತಪ್ಪು. ಜನಸಾಮಾನ್ಯರ ತಪ್ಪೇನು?” ಎಂದು ಕೆಲವು ಮುಗ್ಧರು- ಪುಣ್ಯಾತ್ಮರು ಅಳುವುದುಂಟು. ಆದರೆ, ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಪಾಕಿಸ್ತಾನದ ಜನಸಾಮಾನ್ಯರೇ, ಹಿಂದೂಗಳ – ಸಿಖ್ಖರ – ಬೌದ್ಧರ ಹತ್ಯಾಕಾಂಡ ನಡೆಸಿದ್ದಾರೆ, ಹೆಣ್ಣುಮಕ್ಕಳ ಸಾಲು ಸಾಲು ಶೀಲಹರಣಗಳೇ ನಡೆದಿವೆ. ಕ್ರಿಕೆಟ್ಟಿನಲ್ಲಿ ಪಾಕಿಸ್ತಾನದ ಮೇಲೆ ಭಾರತ ಗೆದ್ದಾಗಲೂ ಅಲ್ಲಿ (ಅಂದರೆ ಪಾಕಿಸ್ತಾನದಲ್ಲಿ) ಹಿಂದೂ ಅಲ್ಪಸಂಖ್ಯಾತರ ಮೇಲೆ ಅಮಾನುಷ ದಾಳಿ ನಡೆದಿದೆ. ಅಂತಹ ದುರ್ಘಟನಾವಳಿಗಳ ಹೇಯ ವಿವರಗಳನ್ನು ಹೇಳಲೂ ಆಗುವುದಿಲ್ಲ, ಬರೆಯಲೂ ಆಗುವುದಿಲ್ಲ. “ಕೇವಲ ಪಾಕಿಸ್ತಾನದ ಆಡಳಿತದ ತಪ್ಪು” ಎನ್ನುವವರು ಯಾರೇ ಇರಲಿ, ಬೇಜವಾಬ್ದಾರಿಯ “ಮುಗ್ಧ”ರು ಅಷ್ಟೇ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಸಾಂಚಿ ಎಂಬ ಅಚ್ಚರಿ

ನಮ್ಮ ಹೆಮ್ಮೆಯ ಭಾರತೀಯ ಸೇನೆಯ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ಧಮಾನ್ ಅವರು ನಾಲ್ಕು ವರ್ಷಗಳ ಹಿಂದೆ ಫೆಬ್ರವರಿ 2019ರಲ್ಲಿ, ಶತ್ರು ದೇಶ ಪಾಕಿಸ್ತಾನದ ವಿಮಾನವೊಂದನ್ನು ಅಟ್ಟಿಸಿಕೊಂಡು ಹೋದಾಗ, ಪಾಕ್ ವಿಮಾನವೊಂದು ಅಭಿನಂದನ್ ಅವರ ವಿಮಾನವನ್ನು ಹೊಡೆದುರುಳಿಸಿತು. ಪ್ಯಾರಾಚೂಟ್‌ನಲ್ಲಿ ಅಭಿನಂದನ್ ವಿಮಾನದಿಂದ ಹಾರಿ ಕೆಳಗಿಳಿದರು. ತಾವು ಇಳಿದುದು ಭಾರತದಲ್ಲಿಯೋ ಪಾಕಿಸ್ತಾನದಲ್ಲಿಯೋ ಎಂಬುದು ಅವರಿಗೆ ಗೊತ್ತಿರಲಿಲ್ಲ. ತಾವು ಇಳಿದ ಹೊರಾನ್ ಎಂಬ (ಪಾಕ್ ಆಕ್ರಮಿತ ಕಾಶ್ಮೀರದ) ಹಳ್ಳಿಯಲ್ಲಿ ಹುಡುಗನೊಬ್ಬನನ್ನು ಕೇಳಿದಾಗ, ಇದು ಭಾರತ ಎಂದು ಆತ ಸುಳ್ಳು ಹೇಳಿದ. ನಿಜವೆಂದುಕೊಂಡ ಅಭಿನಂದನ್ ಭಾರತದ ಪರವಾದ ಘೋಷಣೆಗಳನ್ನು ಹಾಕಿದರು. ಒಡನೆಯೇ ಅಲ್ಲಿ ಸೇರಿದ ಆ ಹಳ್ಳಿಯ ಪಾಕಿಸ್ತಾನಿ ಜಿಹಾದಿ ಜನರು, ಅವರಿಗೆ ರಕ್ತ ಬರುವಂತೆ ಹೊಡೆದರು, ಬಡಿದರು. ಅನಂತರದ್ದು ಎಲ್ಲರಿಗೂ ಗೊತ್ತಿರುವ ಇತಿಹಾಸ. ಮುಖ್ಯವಾಗಿ ನಾವಿಲ್ಲಿ ಗಮನಿಸಬೇಕಾದುದು ಭಾರತೀಯ ಸೈನಿಕನೆಂದು ಗೊತ್ತಾದ ತಕ್ಷಣ ಊರಿನ ಜನ, ಸಾಮಾನ್ಯ ಜನ ಅವರನ್ನು ಕಟ್ಟಿಹಾಕಿದರು, ಹೊಡೆದರು ಎನ್ನುವುದು. “ಎಲ್ಲ ಎಲ್ಲ ತಪ್ಪೂ ಪಾಕಿಸ್ತಾನದ ರಾಜಕಾರಣಿಗಳದ್ದು, ಪಾಕಿಸ್ತಾನದ ಸೇನಾ ಆಡಳಿತದ್ದು” ಎಂದು ಕಟುವಾಸ್ತವದ ದಿಕ್ಕು ತಪ್ಪಿಸುವವರು ನಮ್ಮಲ್ಲೇ – ನಮ್ಮ ದೇಶದಲ್ಲಿಯೇ ಧಂಡಿಯಾಗಿ ಇದ್ದಾರೆ.

ಹಸಿವು, ಬೆಲೆಯುಬ್ಬರ, ಆರ್ಥಿಕ ಹಿಂಜರಿತ, ದುಃಸ್ಥಿತಿಗಳಿಂದ ಪಾಕಿಸ್ತಾನದ ಸಾಮಾನ್ಯ ಜನ “ನಮಗೆ ಮೋದಿಯಂತಹ ಪ್ರಧಾನಿ ಬೇಕು, ಮೋದಿಯೇ ಪ್ರಧಾನಿಯಾಗಬೇಕು” ಎಂದೆಲ್ಲಾ ಹೇಳಿದ್ದಾರೆ. ನಮ್ಮ ದೇಶದ ಕೆಲವರು ಭಾರತವು “ಮೇಲೆ ಬಿದ್ದು” ಸಹಾಯ ಮಾಡಬೇಕು ಎಂದು ದೊಡ್ಡ ದೊಡ್ಡ ಮಾತು ಆಡುತ್ತಿದ್ದಾರೆ. ಹಾಸ್ಯಾಸ್ಪದವಾದುದೆಂದರೆ ಹಿಂದೆ ಪ್ರವಾಹಗಳಿಂದ – ಭೂಕಂಪದಿಂದ ವಿಪತ್ತಿನ ಪರಿಸ್ಥಿತಿ ಉಂಟಾದಾಗಲೂ, ಪಾಕಿಸ್ತಾನವು ಭಾರತದ ನೆರವು ಕೇಳಿಲ್ಲ. ಈಗಲೂ ಕೇಳಿಲ್ಲ. ಪೆಟ್ರೋಲ್ ಬೆಲೆ ಜಾಸ್ತಿಯಾದರೆ, ಗ್ಯಾಸ್ ಸಿಲಿಂಡರ್ ಬೆಲೆಯೇರಿಕೆಯಾದರೆ ಗಲಾಟೆ ಮಾಡುವ ನಾವು ಮೂರ್ಖರಂತೆ, ಅವಿವೇಕಿಗಳಂತೆ ಈ ಭಾರತ-ದ್ವೇಷಿ ಪಾಕಿಸ್ತಾನದ ಭಾರವನ್ನು ಹೊರಬೇಕೇ? ಹೊರಲಾಗುವುದೇ?

ಇಲ್ಲೊಂದು ಘಟನೆ ನೆನಪಾಗುತ್ತದೆ. ಕೆಲ ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಪ್ರವಾಹದಿಂದ ವಿಕೋಪದ ಪರಿಸ್ಥಿತಿ ಉಂಟಾಗಿತ್ತು. ಭಾರತೀಯ ಸೇನೆಯು ಅನೇಕರನ್ನು ಅತೀವ ಶ್ರಮದಿಂದ, ಸಾಹಸದಿಂದ ರಕ್ಷಿಸಿತ್ತು. ಅನಂತರದ ಕೆಲವು ದಿನಗಳಲ್ಲಿಯೇ ಭಾರತೀಯ ಸೇನೆಯ ಮೇಲೆ ಕಲ್ಲೆಸೆದು ಪರೋಕ್ಷ ಯುದ್ಧವನ್ನೇ ಸಾರುತ್ತಿದ್ದ ದುಷ್ಟ ಜಿಹಾದಿ ಯುವಕರ ಚಿತ್ರಗಳು ಕ್ಯಾಮೆರಾ ಕಣ್ಣಿಗೆ ಸಿಕ್ಕಾಗ ದೇಶವೇ ಬೆಚ್ಚಿಬಿದ್ದಿತ್ತು. ಏಕೆಂದರೆ, ಸೈನಿಕರು ರಕ್ಷಿಸಿದ್ದ ಯುವಕನೊಬ್ಬ ಸೇನೆಯ ಮೇಲೆ ಕಲ್ಲು ತೂರಿದ ಚಿತ್ರಗಳೂ ದೊರೆತಿದ್ದವು. In fact, ಇದು ಅಪರೂಪದ ಘಟನೆಯಲ್ಲ, ಆಕಸ್ಮಿಕವೂ ಅಲ್ಲ. ಅದು ಜಿಹಾದ್. ಅದು ಎಂದೆಂದಿಗೂ ಮುಗಿಯದ ಜಿಹಾದ್. ಅದು ಕಾಫಿರರ ಮತಧರ್ಮಗಳನ್ನು ಸಮೂಲ ನಾಶಮಾಡಿಬಿಡುವ ಭಯಾನಕ ಯುದ್ಧ. ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಷ್ಟೇ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ: ಒಂದೆಡೆ ಭೂಮಿಯ ಕೇಂದ್ರ ಮಹಾಕಾಲ, ಇನ್ನೊಂದೆಡೆ ಕಾಲಭೈರವನಿಗೆ ಮದ್ಯಾರ್ಪಣೆ: ಸೋಜಿಗದ ಉಜ್ಜಯಿನಿ 

ಸ್ವಾತಂತ್ರ್ಯಪೂರ್ವದ ಅವಿಭಜಿತ ಭಾರತದ ಲಾಹೋರ್ ನಗರದಲ್ಲಿ ಹಿಂದೂಗಳ – ಸಿಖ್ಖರ ಪಾತ್ರ ದೊಡ್ಡದಿತ್ತು. ಅಲ್ಲಿನ ಎಲ್ಲ ಆಸ್ಪತ್ರೆಗಳನ್ನು ನಿರ್ಮಿಸಿದವರೂ ಹಿಂದುಗಳೇ, ಸಿಖ್ಖರೇ. ಬ್ರಿಟಿಷರ ಪ್ರೀತಿಪಾತ್ರರು, ದಲ್ಲಾಳಿಗಳು, ದೇಶವಿಭಜನೆ ಆಗುವುದಿಲ್ಲ, ಎಂದೇ ಸುಳ್ಳು ಹೇಳುತ್ತ ಬಂದರು. ಮುಗ್ಧ ಹಿಂದೂಗಳು – ಸಿಖ್ಖರು ನಂಬಿಬಿಟ್ಟರು. ಲಾಹೋರಿರಲಿ, ಎರಡೂ ದೇಶಗಳ ಪ್ರಸ್ತಾಪಿತ ಗಡಿರೇಖೆಯೇ ಸಿದ್ಧವಾಗಿರಲಿಲ್ಲ. 15ನೆಯ ಆಗಸ್ಟ್ 1947ರಂದು ಸಹ ಯಾರಿಗೂ ತಾವು ಪಾಕಿಸ್ತಾನದಲ್ಲಿದ್ದೇವೋ, ಭಾರತದಲ್ಲಿದ್ದೇವೋ ತಿಳಿದಿರಲಿಲ್ಲ.

ಬ್ರಿಟಿಷರ ದಲ್ಲಾಳಿಗಳು “ಅದೇಕೋ” ಗಡಿರೇಖೆಯ ವಿವರಗಳನ್ನು ಕೊನೆಯವರೆಗೆ ರಹಸ್ಯವಾಗಿಯೇ ಇಟ್ಟರು. ವಿವರಗಳ ಸುದ್ದಿ-ಸ್ಫೋಟ ಭಯಾನಕವಾಗಿತ್ತು. ಹಿಂದೂಗಳಿಗೆ, ಸಿಖ್ಖರಿಗೆ ಸರ್ವನಾಶವೆಂದರೆ ಏನು ಎಂಬುದು ಅರ್ಥವಾಗುವುದರೊಳಗೆ ಜಿಹಾದಿಗಳು ಹತ್ಯಾಕಾಂಡ ನಡೆಸಿದರು, ಹೆಣ್ಣುಮಕ್ಕಳ ಸಾಲು ಸಾಲು ಶೀಲಹರಣಗಳು ತಾರಕಕ್ಕೇರಿದ್ದವು. ಸಾಲು ಸಾಲು ಆಸ್ಪತ್ರೆಗಳನ್ನು, ಶಾಲಾ-ಕಾಲೇಜುಗಳನ್ನು ನಿರ್ಮಿಸಿದವರು ಕರಾಳ ಇತಿಹಾಸಕ್ಕೆ ಸೇರಿದರು, ಹೇಳಲಾಗದ ಬರೆಯಲಾಗದ ಅತ್ಯಾಚಾರಗಳಿಗೆ ತುತ್ತಾದರು.

ಪಾಕಿಸ್ತಾನದ ಜನ, ನೇತಾರರು ಎಲ್ಲರೂ ಮೇಲೆ ಹೇಳಿದ ಹಾಳುದೇವರ ಪ್ರವರ್ಗದವರೇ. ಅವರಿಗೆ ಅಯ್ಯೋ ಎಂದರೆ ನಮ್ಮಂತಹ ತಿಳಿಗೇಡಿಗಳಿಲ್ಲ, ನಮ್ಮಂತಹ ಬೇಜವಾಬ್ದಾರಿಯ ಜನರಿಲ್ಲ.

ಮಾಧ್ಯಮಗಳಲ್ಲಿ ಕಳೆದ ವರ್ಷ ಪ್ರಕಟವಾದ ತಾಯಿ-ಮಗುವಿನ ಈ ಚಿತ್ರ ನೋಡಿ. ಇದು ಪಾಕಿಸ್ತಾನದ್ದು. ಅಲ್ಲಿನ ಅಲ್ಪಸಂಖ್ಯಾತ ಹಿಂದೂ ತಾಯಿ-ಮಗುವಿಗೆ ಸರಪಳಿ ಹಾಕಿದ್ದಾರೆ. ಪುಟ್ಟ ಕಂದಮ್ಮನಿಗೂ ಸರಪಳಿ ಹಾಕಿದ್ದಾರೆ! ಇಂತಹ ಪಾಕಿಸ್ತಾನಕ್ಕೆ ಭಾರತವು ಸಹಾಯಹಸ್ತ ಚಾಚಬೇಕೇ?

ಅಂದ ಹಾಗೆ, ನಮ್ಮ ಪೂರ್ವಿಕರು ಸಾವಿರಾರು ವರ್ಷಗಳ ಹಿಂದೆಯೇ ಬರೆದಿಟ್ಟಿರುವ ಈ ಸುಭಾಷಿತವನ್ನು ಓದಿ:

“ಉಪಕಾರೋಪಿ ನೀಚಾನಾಂ
ಅಪಕಾರಾಯ ಕಲ್ಪತೇ
ಪಯಃಪಾನಂ ಭುಜಂಗಾನಾಂ
ಕೇವಲಂ ವಿಷವರ್ಧನಂ”

ನೀಚರಿಗೆ ಉಪಕಾರವನ್ನು ಮಾಡಿದರೂ
ಅವರು ಅಪಕಾರವನ್ನೇ ಮಾಡುತ್ತಾರೆ.
ವಿಷಸರ್ಪಕ್ಕೆ ಹಾಲು ಉಣಿಸಿದರೆ,
ಅದರ ವಿಷ ಮಾತ್ರ ಹೆಚ್ಚಾಗುತ್ತದೆ
(ವಿಷ ಕಕ್ಕುವ ಅದರ ಸ್ವಭಾವದಲ್ಲಿ ಬದಲಾವಣೆಯಿರುವುದಿಲ್ಲ).

ಇದನ್ನೂ ಓದಿ: ನನ್ನ ದೇಶ ನನ್ನ ದನಿ | ಭಾರತೀಯ ಇತಿಹಾಸದ ಧ್ರುವನಕ್ಷತ್ರ ಅಹಲ್ಯಾಬಾಯಿ ಹೋಳ್ಕರ್

Exit mobile version