ನಿರಂಜನ ಅವರ ಜನ್ಮ ಶತಮಾನೋತ್ಸವ
ಈ ಅಂಕಣವನ್ನು ಇಲ್ಲಿ ಆಲಿಸಿ:
ನನ್ನ ದೇಶ ನನ್ನ ದನಿ ಅಂಕಣ: “ಇಡೀ ಜಗತ್ತಿನ ಇತಿಹಾಸವನ್ನು (History) ಕನ್ನಡದಲ್ಲಿ ಬರೆಯಬೇಕು ಎನಿಸುತ್ತಿದೆ” ಎಂದು ಆಸೆಪಟ್ಟಿದ್ದರು ನಿರಂಜನ (Niranjana).
ಇದೀಗ ಲೇಖಕ, ಸಂಪಾದಕ, ಕಾದಂಬರಿಕಾರ, ಅಪರೂಪದ ಸಾಧಕ “ನಿರಂಜನ” (ಜನನ : ಜೂನ್ 1924) ಅವರ ಶತಮಾನೋತ್ಸವ. ನಿರಂಜನ ಎಂದರೆ ಜ್ಞಾನ, ದೋಷರಹಿತವಾದುದು ಎಂಬೆಲ್ಲಾ ಅರ್ಥಗಳಿವೆ. ಶಿವ ಎನ್ನುವ ಅರ್ಥವೂ ಇದೆ. ಮೂಲತಃ ಕುಳಕುಂದ ಶಿವ ರಾವ್ ಆಗಿದ್ದ ಅವರು “ನಿರಂಜನ” ಎಂಬ ಕಾವ್ಯನಾಮ ಬಳಸಿದುದು ಅನ್ವರ್ಥವೇ ಆಗಿತ್ತು. ಕನ್ನಡ ಸಾಹಿತ್ಯದಲ್ಲಿ ಶಿವರಾಮ ಕಾರಂತರಂತೆ, ಮಹತ್ತ್ವದ ಮತ್ತು ಬಹು-ಆಯಾಮದ ಸಾಹಿತ್ಯ ರಚನೆ ಮಾಡಿದವರು ವಿರಳ. ಆದರೆ ಎಚ್ಚೆಸ್ಕೆ, ನಿರಂಜನ ಅವರನ್ನು ಈ ಕ್ಷಣಕ್ಕೆ ನೆನಪು ಮಾಡಿಕೊಳ್ಳಬಹುದು. ಸ್ವಯಂಭೂ, ಸ್ವಯಂಘೋಷಿತ ಸಾಹಿತ್ಯ ಧುರಂಧರ ಭಯಂಕರರ ಮಾಫಿಯಾದ ಅಬ್ಬರದಲ್ಲಿ, ಪ್ರಶಸ್ತಿ – ಸ್ಥಾನಮಾನ ಇತ್ಯಾದಿಗಳಿಗೆ ಹಾತೊರೆಯದೆ ತಮ್ಮ ಪಾಡಿಗೆ ತಾವು ಶುದ್ಧ ಸಾಹಿತ್ಯ ಸೇವೆಯನ್ನು ವ್ರತದಂತೆ ಪಾಲಿಸಿದವರು ಈ ಎಚ್ಚೆಸ್ಕೆ, ನಿರಂಜನ ಅಂತಹವರು.
1982ರಲ್ಲಿ ಒಮ್ಮೆ ಹೀಗಾಯಿತು. ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆಗಳು ಆರಂಭವಾದವು. ಕನ್ನಡದ ನಮ್ಮ ಸಮಾಜವಾದೀ, ಸಾಮ್ಯವಾದೀ ಲೇಖಕರು ಭಾರೀ ಗದ್ದಲವೆಬ್ಬಿಸಿದರು. ಅವರದ್ದೇ ನಿಯಂತ್ರಣದ ಪತ್ರಿಕೆಗಳನ್ನು ಓದಿದರೆ, ಏನೋ ಆಗಬಾರದ್ದು ಆಗಿಹೋಗಿದೆ, ಪ್ರಳಯವೇ ಆಗುತ್ತಿದೆ, ಎಂಬಂತಹ ಅಭಿಪ್ರಾಯ ಮೂಡುತ್ತಿತ್ತು. ಒಂದು ಪ್ರತಿಭಟನಾ ಸಭೆಯನ್ನೇ ಆಯೋಜಿಸಲಾಯಿತು. ನಾನೂ ಸಭಿಕನಾಗಿ ಹೋಗಿದ್ದೆ. ನಿರಂಜನ ಅವರದ್ದೇ ಅಧ್ಯಕ್ಷತೆ. ಒಬ್ಬೊಬ್ಬರಾಗಿ “ಕೆಲವೇ ಕೆಲವು ನಿಮಿಷಗಳ ಈ ಸಂಸ್ಕೃತ ವಾರ್ತೆಯ ಪ್ರಸಾರದಿಂದ” ಹೇಗೆ ಮತ್ತು ಎಷ್ಟು ಅನಾಹುತವಾಗುತ್ತಿದೆ, ಎಂದೆಲ್ಲಾ ಕೂಗಾಡತೊಡಗಿದರು. ಅನಂತರ ನಮ್ಮ ಸಮಾಜವಾದೀ ಲೇಖಕ ಮಿತ್ರ ಕಾಳಪ್ಪನವರು ಎದ್ದು ಮೈಕ್ ಮುಂದೆ ನಿಂತು ರೋದಿಸಲು ಪ್ರಾರಂಭಿಸಿದರು. “ನೋಡಿ, ಸತ್ತ ಭಾಷೆ ಸಂಸ್ಕೃತಕ್ಕೆ ಮಣೆ ಹಾಕಲಾಗುತ್ತಿದೆ. ಆದರೆ ಜನಭಾಷೆ ಉರ್ದುವಿಗೆ ಸ್ಥಾನವಿಲ್ಲ” ಇತ್ಯಾದಿ ಗಳಹತೊಡಗಿದರು. ತಡೆಯಲಾರದೆ, ನಾನು ಎದ್ದು ನಿಂತು ಗಟ್ಟಿಯಾಗಿ “ಎರಡಕ್ಕೂ ಹೋಲಿಕೆಯಿಲ್ಲ, ಉರ್ದುವಿಗೆ ಆಕಾಶವಾಣಿಯಲ್ಲಿ ಪ್ರತ್ಯೇಕ ಸ್ಟೇಷನ್ ಇದೆ” ಎಂದು ಆಕ್ಷೇಪಿಸಿದೆ. ನಮ್ಮ ಕಾಳಪ್ಪನವರಿಗೆ ಬರೀ ದ್ವೇಷ, ಪೂರ್ವಗ್ರಹಗಳೇ ಹೊರತು ಮಾಹಿತಿಯೂ ಇಲ್ಲ, ತಿಳಿವಳಿಕೆಯೂ ಇಲ್ಲ. ಸಭಾಂಗಣದಲ್ಲಿ ಆಗ ಗಲಾಟೆಯೇ ಆಗಿಹೋಯಿತು. ಸಭೆಯನ್ನೇ ಮುಗಿಸಬೇಕಾಯಿತು. ನಾನು ನೇರವಾಗಿ ಸಭಾಧ್ಯಕ್ಷರಾದ ನಿರಂಜನ ಅವರಲ್ಲಿಗೇ ಹೋಗಿ, ಪ್ರತ್ಯೇಕ ಉರ್ದು ಸ್ಟೇಷನ್ ಇರುವುದನ್ನು, ಸಂಸ್ಕೃತದಲ್ಲಿ ಕೇವಲ ಕೆಲವು ನಿಮಿಷಗಳ ವಾರ್ತೆ ಮಾತ್ರ ಬರುತ್ತಿದೆ, ಎಂಬಿತ್ಯಾದಿ ವಿವರ ಹೇಳಿದೆ. ಸಜ್ಜನರಾದ ಅವರು “You have a valid point” ಎಂದು ಒಪ್ಪಿಕೊಂಡರು.
ನವಕರ್ನಾಟಕ ಪ್ರಕಾಶನದ ಮಹತ್ತ್ವದ ಯೋಜನೆಗಳಲ್ಲೊಂದು ನಿರಂಜನ ಅವರು ಸಂಪಾದಕರಾಗಿದ್ದ 25 ಸಂಪುಟಗಳ “ವಿಶ್ವಕಥಾಕೋಶ” ಸರಣಿ. ಈ ಕಟ್ಟಿನಲ್ಲಿ ಧರಣಿ ಮಂಡಲ ಮಧ್ಯದೊಳಗೆ, ಆಫ್ರಿಕಾದ ಹಾಡು, ಕಾಡಿನಲ್ಲಿ ಬೆಳದಿಂಗಳು, ಚೆಲುವು, ಸುಭಾಷಿಣಿ, ವಿಚಿತ್ರ ಕಕ್ಷಿದಾರ, ಮಂಜು ಹೂವಿನ ಮದುವಣಿಗ, ಬೂದು ಬಣ್ಣದ ಕಾಂಗರೂ, ಹೆಜ್ಜೆಗುರುತು, ಅರಬಿ, ನೆತ್ತರು ದೆವ್ವ, ಬಾವಿ ಕಟ್ಟೆಯ ಬಳಿ, ಅದೃಷ್ಟ, ಸಜ್ಜನನ ಸಾವು, ಡೇಗೆ ಹಕ್ಕಿ, ಅವಸಾನ, ತಾತನ ಹುಟ್ಟುಹಬ್ಬ, ಬಾಲ ಮೇಧಾವಿ, ಇಬ್ಬರು ಗೆಳೆಯರು, ಅಬಿಂದಾ ಸಯೀದಾ, ನಿಗೂಢಸೌಧ, ಬೆಳಗಾಗುವ ಮುನ್ನ, ಮರಳುಗಾಡಿನ ಮದುವೆ, ಕಿವುಡು ವನದೇವತೆ, ಸಾವಿಲ್ಲದವರು ಸಂಪುಟಗಳಿವೆ.
ಜಗತ್ತಿನ ನೂರಾರು ದೇಶಗಳ ಹಲವು ನೂರು ಪ್ರಾತಿನಿಧಿಕ ಕಥೆಗಳು. ಅತ್ಯದ್ಭುತ ಸಂಚಯವದು. ನಿರಂಜನ ಅವರ ಸಂಪಾದಕತ್ವ ಎಂದರೆ, ಅಂತಹ ಯೋಜನೆಯ ಸತ್ತ್ವ ಏನು, ಪ್ರಾಮುಖ್ಯ ಏನು ಎಂದು ಅರಿಯಲು ಆ ಸಂಪುಟಗಳನ್ನೇ ಓದಬೇಕು, ಮುಖ್ಯವಾಗಿ ಆ ಎಲ್ಲ ಸಂಪುಟಗಳಿಗೆ ನಿರಂಜನ ಅವರು ಸಂಪಾದಕರಾಗಿ ಬರೆದ ಪ್ರಸ್ತಾವನೆಗಳನ್ನೂ ಓದಬೇಕು. ಆಯಾ ಸಂಕಲನದಲ್ಲಿ ಇರುವ ಕತೆಗಳು ಯಾವೆಲ್ಲ ದೇಶಗಳಿಗೆ ಸೇರಿವೆಯೋ, ಆ ದೇಶಗಳ ಪುಟ್ಟ ಸಾಂಸ್ಕೃತಿಕ ಇತಿಹಾಸವನ್ನೇ ಅವರು ನೀಡಿದ್ದಾರೆ. ಅದೊಂದು ದಾಖಲೆ, ಅದೊಂದು ಅದ್ಭುತ. ನಿರಂಜನ ಅವರು ಒಂದು ಚಿಕ್ಕ ಕಿಂಡಿಯಲ್ಲಿ ಜಗತ್ತಿನ ವಿಶ್ವರೂಪ ದರ್ಶನವನ್ನೇ ಮಾಡಿಸಿದ್ದರು, ಮಾಡಿಸಿದ್ದಾರೆ (ಮುಂದೆ ಪ್ರಕಾಶಕರು ಈ ಪ್ರಸ್ತಾವನೆಗಳನ್ನೇ ಪ್ರತ್ಯೇಕ ಸಂಪುಟವನ್ನಾಗಿ ಹೊರತಂದು ಮೆಚ್ಚುವಂತಹ ಕೆಲಸ ಮಾಡಿದರು).
ಈ “ವಿಶ್ವಕಥಾಕೋಶ” ಸಂಪುಟಗಳ ಒಂದು ಸರಣಿಯ ಲೋಕಾರ್ಪಣೆಗೆ, ನನ್ನ ನೆಚ್ಚಿನ ಅಂಕಣಕಾರರಾದ ಹಾ.ಮಾ.ನಾಯಕರು ಬಂದಿದ್ದರು. ಒಂದೇ ವೇದಿಕೆಯಲ್ಲಿ ಹಾ.ಮಾ.ನಾಯಕರನ್ನು, ನಿರಂಜನರನ್ನು ನೋಡುವ ಭಾಗ್ಯ ನಮ್ಮದು. ಲೋಕಾರ್ಪಣೆಯಾದ ಸರಣಿಗಳಲ್ಲಿ ರಷ್ಯನ್ ಕತೆಗಳೂ ಇದ್ದವು. ಲೋಕಾರ್ಪಣೆ ಮಾಡಿದ ಹಾ.ಮಾ.ನಾಯಕರು “ಈ ಸಂಕಲನಗಳಲ್ಲಿ ದಸ್ತಯೇವ್ ಸ್ಕಿ, ತೋಲ್ಸ್ ತೋಯ್ ಎಂಬ ಪ್ರಯೋಗಗಳಿವೆ, ನಮಗೆಲ್ಲಾ ಸುಪರಿಚಿತವಾಗಿರುವ ದಾಸ್ತೋವಸ್ಕಿ, ಟಾಲ್ ಸ್ಟಾಯ್ ಎಂಬ ಪದಗಳನ್ನೇ ಪ್ರಯೋಗಿಸಬಹುದಿತ್ತು” ಎಂದು ಅಭಿಪ್ರಾಯಪಟ್ಟರು. ಅದಕ್ಕೆ ಉತ್ತರವಾಗಿ ನಿರಂಜನರು “ನಾಯಕರೇ, ನಮಗೆ ಹೆಚ್ಚು ಪರಿಚಯವಿರುವ ಹೆಸರುಗಳು ಎರಡೋ ಮೂರೋ. ಆದರೆ, ಈ ಎಲ್ಲ ದೇಶಗಳ ಕತೆಗಳಲ್ಲಿ ಅಲ್ಲಿನ ನೂರಾರು ಹೆಸರುಗಳಿವೆ. ಅಲ್ಲಿನ ಸ್ಥಳೀಯವಾದ ಮತ್ತು ಅವರು ಬಳಸುವ ಮೂಲ-ಪ್ರಯೋಗಗಳನ್ನೇ ಬಳಸಿದ್ದೇವೆ. ನಮಗೆ ಪರಿಚಯವಿರುವ ಕೆಲವು (ಅಪಭ್ರಂಶವಾಗಿಹೋಗಿರುವ) ಪ್ರಯೋಗಗಳನ್ನು ಮಾತ್ರ ಉಳಿಸಿಕೊಳ್ಳಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.
ನನಗಂತೂ ನಿರಂಜನರ ಪರಿಕಲ್ಪನೆ ಅದ್ಭುತ ಎನಿಸಿತು.
ಕಾರಣಾಂತರಗಳಿಂದ ನಮ್ಮ ಮೇಲೆ ಮುಗಿಬಿದ್ದಿರುವ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳ ಅಧ್ವಾನದ ಕಾರಣಕ್ಕೆ ಮೂಲ ಉಚ್ಚಾರಣೆಗಳಿಗೂ, ನಾವು ಬಳಸುತ್ತಿರುವ ಉಚ್ಚಾರಣೆಗಳಿಗೂ ಅರ್ಥಾತ್ ಸಂಬಂಧವೇ ಇಲ್ಲ ಎನ್ನುವಂತಾಗಿದೆ. ಹತ್ತಾರು ವರ್ಷಗಳಿಂದ ಸೀತಾರಾಮ ಗೋಯಲ್ ಅವರ “ವಾಯ್ಸ್ ಆಫ್ ಇಂಡಿಯಾ” ಸರಣಿಯ ಸಂಪಾದಕನಾಗಿ, ಈ ಗ್ರಂಥಗಳಲ್ಲಿ ಬರುವ ಸಾವಿರಾರು ಹೆಸರುಗಳಿಗೆ, ಸ್ಥಳನಾಮಗಳಿಗೆ ಮೂಲ ಉಚ್ಚಾರಣೆಗಳನ್ನು ದೊರಕಿಸಿಕೊಳ್ಳಲು, ಪ್ರತಿಬಾರಿಯೂ ಅಪಾರ ಪರಿಶ್ರಮ ಹಾಕಬೇಕಾಗುತ್ತಿದೆ. ಪ್ರತಿಬಾರಿಯೂ ನಿರಂಜನರಂತಹ ಧೀಮಂತರು ನೆನಪಾಗುತ್ತಾರೆ, ಎಂದರೆ ಉತ್ಪ್ರೇಕ್ಷೆಯಲ್ಲ.
ಉದಾಹರಣೆಗೆ, ಉತ್ತರ ಪ್ರದೇಶದ “ಅಮೇಠಿ” (ಸರಿಯಾದ ಪ್ರಯೋಗ) ಕ್ಷೇತ್ರವು, ಸಂಜಯ ಗಾಂಧಿ ಅವರ ಕಾಲದಿಂದಲೂ “ಖ್ಯಾತಿ” ಪಡೆದಿದೆ. ರೋಮನ್ ಲಿಪಿಯ ಅದ್ವಾನದ ಕಾರಣದಿಂದ (ನಾಲ್ಕೈದು ದಶಕಗಳಿಂದಲೂ) ಕನ್ನಡದ ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಮತ್ತು ಪುಸ್ತಕಗಳಲ್ಲಿ ಬಹುಪಾಲು “ಅಮೇಥಿ” ಎಂದೇ ಬಳಸಲಾಗುತ್ತಿದೆ! ಅಂತೆಯೇ, ಚೀನಾ ದೇಶದ Sinkiang / Xinjiang ಅನ್ನು ಸಿಂಕಿಯಾಂಗ್ ಎಂದೇ ಅನೇಕ ಕಡೆ ಉಲ್ಲೇಖಿಸಲಾಗಿದೆಯಾದರೂ, ಸರಿಯಾದ ಪ್ರಯೋಗ “ಶಿಂಜಾಂಗ್” ಆಗಿದೆ.
ನಿರಂಜನ ಅವರು ಆ ಕಾಲದಲ್ಲಿ ಮೂಲ ಉಚ್ಚಾರಣೆಗಳಿಗಾಗಿ ಅದೆಷ್ಟು ಶ್ರಮ ಹಾಕಿದರೋ, ಏನೋ?! ಐವತ್ತು ವರ್ಷಗಳ ಹಿಂದೆಯೇ ನಿರಂಜನರು “ಕಿರಿಯರ ವಿಶ್ವಕೋಶ” ತಂದರು. ಇಂದಿನಂತೆ ಕಂಪ್ಯೂಟರ್, ಅಂತರಜಾಲ, ಫೋನ್, ಇತ್ಯಾದಿ ಇಲ್ಲದ ಆ ಕಾಲಘಟ್ಟದಲ್ಲಿ ನಿರಂಜನ ಅವರ ಸಂಗ್ರಹ, ಸಂಪಾದನೆ ಮತ್ತು ಪ್ರಸ್ತಾವನೆಗಳು ನಿಜವಾಗಿಯೂ ಸಾಹಸವೇ. ವಿವಿಧ ಪ್ರವರ್ಗಗಳ ಅವರ ಕೃತಿಗಳನ್ನು, ಸಂಪಾದಿತ ಕೃತಿಗಳನ್ನು ನೋಡುವಾಗ, ನಿರಂಜನರು ಅದೆಂತಹ ಅದ್ಭುತ ಸಾಧಕರು, ಎನಿಸಿ ಗೌರವ ಇನ್ನಷ್ಟು ಹೆಚ್ಚಾಗುತ್ತದೆ.
ಅಂದಿನ ಆ ಲೋಕಾರ್ಪಣೆ ಸಮಾರಂಭದಲ್ಲಿ, ನಿರಂಜನರು “ಇಡೀ ಜಗತ್ತಿನ ಇತಿಹಾಸವನ್ನು ಕನ್ನಡದಲ್ಲಿ ಬರೆಯಬೇಕು ಎನಿಸುತ್ತಿದೆ” ಎಂದು ಆಸೆಪಟ್ಟಿದ್ದರು. ವಿಲ್ ಡ್ಯೂರಾಂಟ್ ಅವರ “ದ ಸ್ಟೋರಿ ಆಫ್ ಸಿವಿಲೈಸೇಷನ್” ಬೃಹತ್ ಸಂಪುಟಗಳನ್ನು ನೋಡುವಾಗ, ನಿರಂಜನರದ್ದೇ ನೆನಪು. ಆರೋಗ್ಯ ಚೆನ್ನಾಗಿದ್ದಿದ್ದರೆ ಅಂತಹುದನ್ನು ಅವರು ಖಂಡಿತವಾಗಿಯೂ ಸಾಧಿಸುತ್ತಿದ್ದರು.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: “ನೀವು ಭಾರತೀಯರೋ, ರಾಷ್ಟ್ರೀಯರೋ?” ಎಮರ್ಜೆನ್ಸಿಯ ಕರಾಳ ನೆನಪು