ಈ ಅಂಕಣವನ್ನು ಇಲ್ಲಿ ಕೇಳಿ:
ನಮ್ಮ ಪರಂಪರೆ ಸಂಸ್ಕೃತಿಗಳ ಸೊಗಸೇ ಸೊಗಸು. ಇಲ್ಲಿ ನಮಗೆ ಅಚ್ಚರಿಯೂ ಆಗುತ್ತದೆ, ಕೆಲವೊಮ್ಮೆ ದಿಗ್ಭ್ರಮೆಯೂ ಧುತ್ತೆಂದು ಎರಗುತ್ತದೆ. ಕ್ರಿಮಿಕೀಟಗಳಿಗೂ ಹಾನಿಯಾಗಬಾರದೆಂದು ಮುಖಗವಸು ಹಾಕಿಕೊಳ್ಳುವ ಜೈನಮುನಿಗಳನ್ನು ಈ ಕಡೆ ನೋಡಿ ಅತ್ತ ತಿರುಗಿದರೆ, ಉಜ್ಜಯಿನಿಯ ಕಾಲಭೈರವ ಮದ್ಯಾರ್ಪಣೆಕೇಳುತ್ತಾನೆ. ಕೋಲ್ಕತ್ತೆಯ ಉಗ್ರ ಕಾಳಿಯು ಕೇಳುವ ನೈವೇದ್ಯ ಬೆಚ್ಚಿಬೀಳಿಸಿದರೆ, ಅಹೋಮ್ ಪ್ರಾಂತದ ಗುವಾಹಾಟಿ ಬಳಿಯಿರುವ ಕಾಮಾಖ್ಯಾ ದೇವಾಲಯದ ತಂತ್ರ ಪೂಜೆ, ಆರಾಧನಾ ವಿಧಾನಗಳು ಆಘಾತವನ್ನೇ ಉಂಟುಮಾಡುತ್ತವೆ. ಅದಿರಲಿ, ಕೆಲವರ್ಷಗಳ ಹಿಂದೆ, ಗೆಳೆಯರೊಬ್ಬರ ಮನೆಯಲ್ಲಿ ಮದ್ಯ ಮಾಂಸಗಳನ್ನು ನೈವೇದ್ಯಕ್ಕೆ ಇಟ್ಟಿದ್ದು ನೋಡಿ, ಸಸ್ಯಾಹಾರ ಮೂಲದ ಹಿನ್ನೆಲೆಯ ನನಗೆ ಅಚ್ಚರಿಯ ಮಹಾಪೂರವೇ ಉಂಟಾಯಿತು.
ಮಧ್ಯಪ್ರದೇಶದ ಉಜ್ಜಯಿನಿಯು ಪೌರಾಣಿಕವಾಗಿ, ಐತಿಹಾಸಿಕವಾಗಿ, ಭೌಗೋಳಿಕವಾಗಿ ಮಹತ್ತ್ವ ಗಳಿಸಿರುವ ನಗರಿ. ಉಜ್ಜಯಿನಿಯ ಕಾಲಭೈರವ ದೇವಾಲಯವನ್ನು ನೋಡುವ ಕುತೂಹಲವಿತ್ತು. ಇತ್ತೀಚಿಗೆ ಭೇಟಿ ಸಾಧ್ಯವಾಯಿತು. ಕಾಲಭೈರವನು ಉಜ್ಜಯಿನಿ ನಗರದ ಕ್ಷೇತ್ರಪಾಲಕನೂ ಹೌದು. ಕಾಲಭೈರವನನ್ನು ಪೂಜಿಸುವುದರಿಂದ ಭಕ್ತಾದಿಗಳ ಭಯನಿವಾರಣೆ ಆಗುತ್ತದೆ, ಎಂಬ ಪ್ರತೀತಿಯಿದೆ. ಅವನ ವಾಹನ ನಾಯಿ.
ಉಜ್ಜಯಿನಿ ಭೇಟಿಗೆ ಮುಂಚೆ, ನಿಜವಾಗಿಯೂ ಇಲ್ಲಿ ಕಾಲಭೈರವನಿಗೆ ಮದ್ಯ-ಸಮರ್ಪಣೆ ಆಗುತ್ತದೆಯೇ ಅಥವಾ ಬರಿಯ ಉತ್ಪ್ರೇಕ್ಷೆಯೇ, ಎಂಬ ಪ್ರಶ್ನೆಗಳು ಸುತ್ತುತ್ತಿದ್ದವು. ನನ್ನ ಗೆಳೆಯರಲ್ಲಿ ಕಾಲಭೈರವನ ಆರಾಧಕರಿದ್ದಾರೆ. ಆದರೆ ಅವರು ಮದ್ಯ-ಮಾಂಸಗಳನ್ನು ಮುಟ್ಟುವವರೂ ಅಲ್ಲ. ಅಂತಹ ಕಾಲಭೈರವನ ಭಕ್ತಾಗ್ರಣಿ, ನಮ್ಮ ಸಹ-ಯಾತ್ರಿ ಶಂಕರ ಅಜ್ಜಂಪುರ ಅವರಿಗೆ, ಅವರ ಈ ಮನೆ ದೇವರು ನಿಜವಾಗಿಯೂ ಒಲಿಯಬೇಕಾದರೆ, ಕಾಲಭೈರವನ ಸಂಪ್ರೀತ್ಯರ್ಥವಾಗಿ ಜೊತೆಯಲ್ಲಿ ಯಾತ್ರೆ ಮಾಡುತ್ತಿರುವ ನಮ್ಮೆಲ್ಲರಿಗೂ ಮದ್ಯ-ಸಮಾರಾಧನೆ ಆಗಲೇಬೇಕೆಂದು ಎಲ್ಲ “ಸನ್ಮಿತ್ರರೂ” ದುಂಬಾಲು ಬಿದ್ದರೂ, ಅವರೇನೂ ಜಗ್ಗಲಿಲ್ಲ. ಮೋದಿ ಅವರ ಶೈಲಿಯಲ್ಲಿ “ನ ಪೀಯೂಂಗಾ, ನ ಪಿಲಾವೂಂಗಾ” ಎಂದು ಅವರು ಹಠ ಹಿಡಿದುದು ಎಲ್ಲರಲ್ಲಿ ನಿರಾಸೆಯ ಭಾವ ಮೂಡಿಸಿತು!
ಉಜ್ಜಯಿನಿಯ ಕಾಲಭೈರವನ ಕಥೆ ಚೆನ್ನಾಗಿದೆ. ಒಮ್ಮೆ ಬ್ರಹ್ಮ ಮತ್ತು ವಿಷ್ಣು ತಮ್ಮಲ್ಲಿ ಯಾರು ಶ್ರೇಷ್ಠ ಎಂಬ ಸ್ಪರ್ಧೆಗೆ ಬಿದ್ದರಂತೆ. ತೀರ್ಮಾನ ಸುಲಭವೇ! ಶಿವನ ಬಳಿ ಹೋದರಂತೆ. ಆಗ ಬ್ರಹ್ಮನಿಗೆ ಇದ್ದುದು ಐದು ಮುಖಗಳು. ಶಿವನ ಮಾತುಗಳು ಬ್ರಹ್ಮನಿಗೆ ಹಿಡಿಸಲಿಲ್ಲ. ಬ್ರಹ್ಮನ ಉದ್ಧಟತನ, ಅಹಂಕಾರ, ಉಡಾಫೆಯ ಮಾತುಗಳು ಶಿವನಲ್ಲಿ ಕ್ರೋಧವನ್ನು ಹುಟ್ಟಿಸಿದವು. ಶಿವನಿಂದ ಕಾಲಭೈರವ ಜನಿಸಿದ. ಕಾಲಭೈರವನು ಶಿವನ ಮಗನೂ ಹೌದು, ಶಿವನ ಅಂಶವೂ ಹೌದು. ಅವನು ಈ ದುರಹಂಕಾರಿ ಬ್ರಹ್ಮನ ಒಂದು ತಲೆಯನ್ನೇ ಕಿತ್ತುಬಿಟ್ಟ. ಬ್ರಹ್ಮನ ಶಾಪದಿಂದ, ಆ ತಲೆಯು ಕಾಲಭೈರವನ ಕೈಗೇ ಅಂಟಿಕೊಂಡುಬಿಟ್ಟಿತು. ಮುಂದೆ ಕಾಶಿ ಕ್ಷೇತ್ರಕ್ಕೆ ಹೋದಮೇಲೆಯೇ, ಆ ಕಪಾಲಕ್ಕೆ ವಿಮೋಚನೆ ದೊರೆತುದು.
ಈ ಕಥೆ ನಮಗೆಲ್ಲಾ ಗೊತ್ತಿರುವುದೇ ಆದರೂ, ಇಲ್ಲಿನ ಮದ್ಯಪಾನದ ಆಯಾಮ ಕುತೂಹಲ ಮೂಡಿಸುತ್ತದೆ. ಬ್ರಹ್ಮಹತ್ಯಾದೋಷ ಸುಲಭವಾಗಿ ಬಗೆ ಹರಿಯುವಂತಹುದೂ ಅಲ್ಲ. ಮುಂದೆ ತ್ರೇತಾಯುಗದಲ್ಲಿ, ರಾವಣನು ಬ್ರಾಹ್ಮಣನಾದುದರಿಂದ, ಅವನನ್ನು ವಧಿಸಿದ ಶ್ರೀರಾಮನು ಪ್ರಾಯಶ್ಚಿತ್ತ ಮಾಡಿಕೊಂಡನೆಂಬ ಕಥೆಯೂ ಇದೆ. ಉಜ್ಜಯಿನಿಯ ಕಾಲಭೈರವನಿಗೂ ಬ್ರಹ್ಮಹತ್ಯೆ ಮಾಡುವುದು ಸುಲಭದ ಅಥವಾ ಸರಳವಾದ ನಿರ್ಧಾರವಲ್ಲ. ಅವನು ಮದ್ಯಪಾನ ಮಾಡಿಯೇ ಬ್ರಹ್ಮಹತ್ಯೆಗೆ ಸಿದ್ಧನಾದ, ಎಂಬ ಸ್ಥಳೀಯ ಕಥಾನಕವು ಸ್ವಾರಸ್ಯಪೂರ್ಣವಾಗಿದೆ. ಹಾಗಾಗಿ ಮದ್ಯಪಾನಕ್ಕೆ ಇಲ್ಲಿ ವಿಶೇಷವಾದ ಪ್ರಾಶಸ್ತ್ಯ ಪ್ರಾಮುಖ್ಯಗಳೂ ದೊರೆತುಬಿಟ್ಟಿವೆ! ಹಾಗೆಂದೇ, ಇಂದಿಗೂ ಕಾಲಭೈರವನ ಭಕ್ತರು ಇಲ್ಲಿ ಬಂದು ಮದ್ಯಾರ್ಪಣೆ ಮಾಡುತ್ತಾರೆ. ದೇವಾಲಯದ ಬಳಿ ಮಾರಾಟವಾಗುವ ದೊಡ್ಡ ಪ್ರಮಾಣದ ಮದ್ಯದ ಬಾಟಲುಗಳು ಅಚ್ಚರಿ ಹುಟ್ಟಿಸುತ್ತವೆ. “ದೇವಾಲಯದ ಗರ್ಭಗುಡಿಯ ಒಳಗೆ ದೇವತಾ ವಿಗ್ರಹದಲ್ಲಿ ಯಾವುದೇ ರಂಧ್ರವಿಲ್ಲದಿದ್ದರೂ ಅರ್ಪಿಸಿದ ಮದ್ಯವೆಲ್ಲವೂ ಮಾಯವಾಗುತ್ತದೆ” ಎಂಬ ಪ್ರತೀತಿಯೂ ಇದೆ.
ಭಕ್ತಾದಿಗಳು ಅರ್ಪಿಸುವ ಮದ್ಯವನ್ನು ಅಲ್ಲಿನ ಅರ್ಚಕನು ದೇವತಾ ವಿಗ್ರಹದ ಬಾಯಿಯ ಬಳಿ ಕೊಂಡೊಯ್ಯುತ್ತಾನೆ. ಕಾಲಭೈರವನ ಬಾಯಿ ಸ್ವಲ್ಪ ತೆರೆದಿದೆ. ಮದ್ಯ ಸುರಿದ ತಟ್ಟೆಯನ್ನು ಬಗ್ಗಿಸಿದಾಗ ಮದ್ಯವು ಬಾಯಿಗೇ ಹೋಗುತ್ತದೆ. ಮುಕ್ಕಾಲು ಭಾಗ ಹೀಗೆ ಸುರಿದ ಮೇಲೆ ಬಾಟಲಿಯಲ್ಲಿ ಉಳಿದ ಮದ್ಯವನ್ನು ಭಕ್ತಾದಿಗಳಿಗೆ ಹಿಂದಿರುಗಿಸಲಾಗುತ್ತದೆ. ಅದೇ ಪ್ರಸಾದ. ನಮ್ಮ ಪುಣ್ಯಕ್ಕೆ ಭಕ್ತಾದಿಗಳು ಅಲ್ಲಿಯೇ ಕುಳಿತು ಈ ವಿಶೇಷ ಪ್ರಸಾದದ “ಸೇವನೆ” ಮಾಡುವುದಿಲ್ಲ.
ವಾರಾಣಸಿಯಲ್ಲಿಯೂ ಕಾಲಭೈರವನ ದೇವಾಲಯವಿದೆ. ಅಲ್ಲಿಯೂ ಅವನು ಕ್ಷೇತ್ರಪಾಲ. ನಮ್ಮ ಕರ್ನಾಟಕದ ಆದಿಚುಂಚನಗಿರಿಯಲ್ಲಿರುವ ಪ್ರಾಚೀನ ಕಾಲಭೈರವನ ದೇವಾಲಯವೂ ಪ್ರಖ್ಯಾತಿ ಗಳಿಸಿದೆ. ಉತ್ತರ ಪ್ರದೇಶದ ಗೋರಖನಾಥದಂತೆಯೇ ಇಲ್ಲಿನ ಮಠವು “ನಾಥ ಸಂಪ್ರದಾಯ”ಕ್ಕೆ ಸೇರುತ್ತದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ, ಒಡಿಶಾ ರಾಜ್ಯದಲ್ಲಿ, ರಾಜಸ್ಥಾನದ ಝುನ್ಝುನು ಜಿಲ್ಲೆಯಲ್ಲಿಯೂ ಕಾಲಭೈರವನ ದೇವಾಲಯಗಳಿವೆ. ಎಲ್ಲೆಡೆ ಪ್ರಸಾದ ಸಮರ್ಪಣೆಯಲ್ಲಿ ವೈವಿಧ್ಯವನ್ನು ಗಮನಿಸಬಹುದು. ವೈವಿಧ್ಯವೇ ನಮ್ಮ ಸಂಸ್ಕೃತಿಯ ಮೂಲಸ್ರೋತ ಅಲ್ಲವೇ!
ಉಜ್ಜಯಿನಿಯ ಮಹಾಕಾಲ ದೇವಾಲಯವು ಜ್ಯೋತಿರ್ಲಿಂಗವಾದುದರಿಂದ ಅಪಾರ ಪ್ರಖ್ಯಾತಿ ಗಳಿಸಿದೆ. ನಮ್ಮವರ ಕಾಲದ ಪರಿಕಲ್ಪನೆಯೇ ಅದ್ಭುತ. ನಮ್ಮ ಪೂರ್ವಿಕರು ಕಾಲಗಣನೆಯ ಬಗೆಗೆ, ಸೂರ್ಯ, ಚಂದ್ರ, ನಕ್ಷತ್ರ ಮತ್ತು ಇನ್ನಿತರ ಆಕಾಶಕಾಯಗಳ ಬಗೆಗೆ ಅಪಾರವಾದ ಅಧ್ಯಯನ ಮಾಡಿದುದರಿಂದಲೇ ನಮ್ಮಲ್ಲಿ ಜಯಪುರ, ದೆಹಲಿ ಮುಂತಾದೆಡೆ ವೇಧಶಾಲೆಗಳನ್ನು ಕಾಣಬಹುದು. ಹಾಗೆಂದೇ, ಉಜ್ಜಯಿನಿಯಲ್ಲಿ ಅದೆಷ್ಟೋ ಸಹಸ್ರ ವರ್ಷಗಳಿಂದ ಮಹಾಕಾಲ ನೆಲೆಸಿದ್ದಾನೆ. ಸಂಕ್ರಾಂತಿಯ ವೇಳೆ, ಉಜ್ಜಯಿನಿಯ ಕ್ಷಿಪ್ರಾ ನದಿಯಲ್ಲಿ ಭಕ್ತಾದಿಗಳು ಪುಣ್ಯಸ್ನಾನವನ್ನೂ ಮಾಡುತ್ತಾರೆ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ | ಎಲ್ಲಿಯ ರೂಸ್‌ವೆಲ್ಟ್, ಎಲ್ಲಿಯ ಭಾರತ ಸ್ವಾತಂತ್ರ್ಯ !
ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ಝಾರಖಂಡ, ಬಂಗಾಲ, ತ್ರಿಪುರ, ಮಿಜೋರಾಮ್ ಈ ಎಂಟು ರಾಜ್ಯಗಳಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತವು ಹಾದುಹೋಗುತ್ತದೆ. ಉಜ್ಜಯಿನಿಯ ಮಹಾಕಾಲ ದೇವಾಲಯದ ಬಿಂದುವನ್ನು ಭೂಮಿಯ ಕೇಂದ್ರವೆಂದೇ ಪ್ರಾಚೀನ ಕಾಲದಲ್ಲಿ ಪರಿಗಣಿಸಲಾಗುತ್ತಿತ್ತು. ಉಜ್ಜಯಿನಿಯನ್ನು ಅನೇಕ ಪ್ರಾಚೀನ ಕಾವ್ಯಗಳಲ್ಲಿ ಅವಂತಿ ನಗರವೆಂದು ಉಲ್ಲೇಖಿಸಲಾಗಿದೆ. ಯೂರೋಪಿನ ವಿಜ್ಞಾನಿಗಳು ಭೂಮಿಯೇ ಸೂರ್ಯನ ಸುತ್ತ ತಿರುಗುತ್ತದೆ, ಎಂದು ಪರಿಭಾವಿಸುವುದಕ್ಕೆ ಅನೇಕ ಶತಮಾನಗಳ ಹಿಂದೆಯೇ, ಸಾಮಾನ್ಯ ಯುಗದ 4ನೆಯ ಶತಮಾನದಲ್ಲಿಯೇ “ಸೂರ್ಯ ಸಿದ್ಧಾಂತ”ದ ಆವಿಷ್ಕರಣವಾಗಿತ್ತು. ಸಾಮಾನ್ಯ ಯುಗದ 570ರಲ್ಲಿ ಉಜ್ಜಯಿನಿಯಲ್ಲಿ ವರಾಹಮಿಹಿರನು ಸೂರ್ಯ ಸಿದ್ಧಾಂತ, ವಸಿಷ್ಠ ಸಿದ್ಧಾಂತ, ಪುಲಾಸ ಸಿದ್ಧಾಂತ, ರೋಮಕ ಸಿದ್ಧಾಂತ, ಪೈತಾಮಹ ಸಿದ್ಧಾಂತ ಇವೆಲ್ಲವೂ ಸೇರಿದ “ಪಂಚ ಸಿದ್ಧಾಂತ”ವನ್ನು ರೂಪಿಸಿದನು. ಸೂರ್ಯ, ಚಂದ್ರ, ಭೂಮಿ, ಮತ್ತಿತರ ಆಕಾಶಕಾಯಗಳ ಬಗೆಗಿನ ಗುರುತ್ವಾಕರ್ಷಣೆಯ ಬಗೆಗೆ ವೈಜ್ಞಾನಿಕ ವಿವರಣೆಯನ್ನು ನೀಡಿದವನೂ ವರಾಹಮಿಹಿರನೇ. ಈ ಹಿನ್ನೆಲೆಯಲ್ಲಿ, ಮಹಾಕಾಲ ದೇವಾಲಯದಲ್ಲಿ ಜ್ಯೋತಿರ್ಲಿಂಗದ ದರ್ಶನ ಮಾಡುವಾಗ ವಿಶೇಷ ಅನುಭೂತಿ ಎನಿಸುತ್ತದೆ. ಇತ್ತೀಚೆಗೆ ನರೇಂದ್ರ ಮೋದಿಯವರು ಉದ್ಘಾಟಿಸಿದ, ದೇವಾಲಯದ ಬಳಿಯೇ ಇರುವ “ಮಹಾಕಾಲ ಪರಿಸರ್” (ಮಹಾಕಾಲ ಕಾರಿಡಾರ್) ಬಹಳ ವಿಶೇಷವಾದ ನಿರ್ಮಾಣವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಕಾರಣದಿಂದ ಉಜ್ಜಯಿನಿಯ ಪ್ರಾಚೀನ ಖ್ಯಾತಿಯ ಪುನರುತ್ಥಾನವಾಗಿದೆ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ | ಭಾರತೀಯ ಇತಿಹಾಸದ ಧ್ರುವನಕ್ಷತ್ರ ಅಹಲ್ಯಾಬಾಯಿ ಹೋಳ್ಕರ್