| ಗಿರೀಶ್ ಲಿಂಗಣ್ಣ
1962ರಲ್ಲಿ ಭಾರತ ಮತ್ತು ಚೀನಾಗಳ ಮಧ್ಯ ಯುದ್ಧ ತಲೆದೋರಿತು. ಆ ಯುದ್ಧವನ್ನು ಜಗತ್ತು ಇಂಡೊ – ಚೀನಾ ವಾರ್ ಎಂಬ ಹೆಸರಿನಿಂದ ಕರೆಯಿತು. ಈ ಯುದ್ಧವು ಕಾಶ್ಮೀರದ ಗಡಿಯ ವಿಚಾರಕ್ಕಾಗಿ, ಅಕ್ಟೋಬರ್ 20, 1962ರಂದು ಆರಂಭಗೊಂಡಿತು. ಭಾರತ ಚೀನಾ ಸೈನ್ಯಗಳು ಒಂದು ತಿಂಗಳ ಕಾಲ ಯುದ್ಧ ಮಾಡಿದ ಬಳಿಕ, ನವೆಂಬರ್ 21, 1962ರಂದು ಯುದ್ಧ ನಿಲುಗಡೆಗೆ ಬಂತು. ಯುದ್ಧದಲ್ಲಿ ಭಾರತ ಸೋಲನ್ನೊಪ್ಪಿಕೊಳ್ಳಬೇಕಾಯಿತು. ಭಾರತದ ಸಾಕಷ್ಟು ಸೈನಿಕರು ಚೀನಾದ ಸೆರೆಯಾಳುಗಳಾದರು. ಯುದ್ಧ ಕೊನೆಗೊಳ್ಳುವಾಗ ಚೀನಾ ಕಾಶ್ಮೀರದ ಒಂದಷ್ಟು ಪ್ರದೇಶಗಳನ್ನು ಆಕ್ರಮಿಸಿಕೊಂಡು, ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಇದನ್ನು ಸಿಓಕೆ – ಚೀನಾ ಆಕ್ಯುಪೈಡ್ ಕಾಶ್ಮೀರ ಅಥವಾ ಚೀನಾ ಆಕ್ರಮಿತ ಕಾಶ್ಮೀರ ಎಂದು ಕರೆಯಲಾಗುತ್ತದೆ. ಚೀನಾ ಮತ್ತು ಭಾರತ ಈ ಸಂದರ್ಭದಲ್ಲಿ ಒಂದು ಒಪ್ಪಂದಕ್ಕೆ ಸಹಿ ಹಾಕಿದವು. ಅದರ ಪ್ರಕಾರ, ಸಿಓಕೆ ಚೀನಾಗೆ ಸೇರಿದ ಪ್ರದೇಶವಾಗಿದ್ದು, ಭಾರತ ಇನ್ನು ಮುಂದೆ ಅಲ್ಲಿ ಹಸ್ತಕ್ಷೇಪ ಮಾಡುವಂತಿರಲಿಲ್ಲ. ಇದು 1962ರ ಯುದ್ಧದ ಒಂದು ಸಾರಾಂಶ(National Solidarity Day).
1966ರಲ್ಲಿ ಇಂದಿರಾ ಗಾಂಧಿಯವರು ಭಾರತದ ಪ್ರಧಾನಿಯಾಗಿದ್ದರು. ಪ್ರಧಾನಿಯವರನ್ನು ಒಳಗೊಂಡಂತೆ ನಿರ್ಮಿತವಾಗಿದ್ದ ಒಂದು ಸಮಿತಿ ಅಕ್ಟೋಬರ್ 20ನ್ನು ರಾಷ್ಟ್ರೀಯ ಒಗ್ಗಟ್ಟಿನ ದಿನವನ್ನಾಗಿ ಆಚರಿಸಲು ನಿರ್ಧಾರ ಕೈಗೊಂಡಿತು. ಈ ದಿನವನ್ನು ಭಾರತ ಚೀನಾ ಯುದ್ಧದಲ್ಲಿ ಭಾಗವಹಿಸಿದ ಭಾರತೀಯ ಸೈನಿಕರನ್ನು ಸ್ಮರಿಸಿ ಗೌರವಿಸಲು, ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕರ ಕುಟುಂಬಗಳನ್ನು ಸ್ಮರಿಸಲು ಈ ದಿನವನ್ನು ಆಚರಣೆಗೆ ತರಲಾಯಿತು. ಆ ಬಳಿಕ ಪ್ರತಿ ವರ್ಷವೂ ಈ ದಿನವನ್ನು ರಾಷ್ಟ್ರೀಯ ಒಗ್ಗಟ್ಟಿನ ದಿನವನ್ನಾಗಿ ಆಚರಿಸಿ, ಸೇನಾಪಡೆಗಳಿಗೆ ಗೌರವ ಸಲ್ಲಿಸುತ್ತಾ ಬರಲಾಯಿತು.
ಈ ದಿನವನ್ನು ಯುದ್ಧ ಪರಾಕ್ರಮದ ದಿನವನ್ನಾಗಿ ಸ್ಮರಿಸುತ್ತಾ, ಈ ಯುದ್ಧದಲ್ಲಿ ಪಾಲ್ಗೊಂಡಿದ್ದ ಸೈನಿಕರು ಮತ್ತು ಅವರ ಕುಟುಂಬಸ್ಥರನ್ನು ನೆನೆದು, ಇಂದಿಗೂ ನಮ್ಮ ಗಡಿಗಳನ್ನು ಸುರಕ್ಷಿತವಾಗಿ ಕಾಯುತ್ತಿರುವ ಭಾರತೀಯ ಭೂಸೇನೆ, ವಾಯುಪಡೆ ಮತ್ತು ನೌಕಾ ಸೇನೆಗಳಿಗೆ ಗೌರವ ಸಲ್ಲಿಸಲಾಗುತ್ತದೆ.
ಎಲ್ಲಾ ರಾಷ್ಟ್ರಗಳೂ ರಾಷ್ಟ್ರೀಯ ಒಗ್ಗಟ್ಟಿನ ದಿನವನ್ನು ಒಂದೇ ಕಾರಣಕ್ಕಾಗಿ ಆಚರಿಸದಿರಬಹುದು. ಕೆಲವು ರಾಷ್ಟ್ರಗಳು ಅವುಗಳ ಯಶಸ್ಸಿನ ದಿನವನ್ನು ಸಂಭ್ರಮಿಸಿದರೆ, ಇನ್ನು ಕೆಲವು ರಾಷ್ಟ್ರಗಳು ಅವುಗಳ ಪ್ರಮುಖ ರಾಜಕೀಯ ನಿರ್ಧಾರದ ದಿನವನ್ನು ಈ ರೀತಿ ಆಚರಿಸುತ್ತವೆ. ಕೆಲವು ರಾಷ್ಟ್ರಗಳು ಅವುಗಳ ಮಿಲಿಟರಿ ಯಶಸ್ಸಿನ ದಿನವನ್ನೋ, ಅಥವಾ ಯಾವುದೋ ಯುದ್ಧದಲ್ಲಿ ಅವರ ಸೈನಿಕರು ಪ್ರಾಣಾರ್ಪಣೆ ಮಾಡಿದ ದಿನವನ್ನೋ ರಾಷ್ಟ್ರೀಯ ಒಗ್ಗಟ್ಟಿನ ದಿನವನ್ನಾಗಿ ಆಚರಿಸುತ್ತಾರೆ. ರಾಷ್ಟ್ರಗಳು ರಾಷ್ಟ್ರೀಯ ಒಗ್ಗಟ್ಟಿನ ದಿನವನ್ನು ವಿವಿಧ ಕಾರಣಗಳಿಗಾಗಿ ಆಚರಿಸುತ್ತಾವಾದರೂ, ಭಾರತ ಮಿಲಿಟರಿ ಕಾರಣಗಳಿಗೆ ಇದನ್ನು ಆಚರಿಸುತ್ತದೆ.
ಹವಾಮಾನ ಬದಲಾವಣೆ ಎನ್ನುವುದು ಯಾವ ಗಡಿಗಳನ್ನೂ ಲೆಕ್ಕಿಸುವುದಿಲ್ಲ. ಅದಕ್ಕೆ ಬಡ ರಾಷ್ಟ್ರ, ಶ್ರೀಮಂತ ರಾಷ್ಟ್ರ, ದೊಡ್ಡ ರಾಷ್ಟ್ರ, ಸಣ್ಣ ರಾಷ್ಟ್ರ ಎಂಬ ಯಾವ ಭೇದವೂ ಇಲ್ಲ. ಆದ್ದರಿಂದ ಈ ಬೃಹತ್ ಸವಾಲನ್ನು ಎದುರಿಸುವುದಕ್ಕಾದರೂ ನಮಗೆ ಇಂದು ಜಾಗತಿಕ ಒಗ್ಗಟ್ಟಿನ ಅಗತ್ಯವಿದೆ.
ಇದನ್ನೂ ಓದಿ | Kargil Vijay Diwas 2022 | ಕಾರ್ಗಿಲ್ ಯುದ್ಧ ಗೆದ್ದ ಹೆಮ್ಮೆಯ ದಿನ; ಯೋಧರ ತ್ಯಾಗ, ಶೌರ್ಯಕ್ಕೆ ಗೌರವ