Site icon Vistara News

NDA-NA Exam | ಸೇನೆ ಸೇರಿ ಅಧಿಕಾರಿಯಾಗಬೇಕೇ? ನೀವು ಪಿಯು ಓದುವಾಗಲೇ ಈ ಪರೀಕ್ಷೆ ಬರೆಯಿರಿ!

NDA-NA Exam

ಭಾರತದ ರಕ್ಷಣಾಪಡೆಯ ವಿಭಾಗಗಳಾದ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಅಧಿಕಾರಿಗಳಾಗಿ ಅಯ್ಕೆಯಾಗಲು ಸುಮಾರು 20ಕ್ಕೂ ಹೆಚ್ಚು ನೇಮಕಾತಿ ಯೋಜನೆಗಳಿವೆ. ಇವುಗಳಲ್ಲಿ ಪ್ರಮುಖವಾಗಿರುವ ವಿಧಾನವೆಂದರೆ ಎನ್‌ಡಿಎ ಮತ್ತು ಎನ್ಎ ಪರೀಕ್ಷೆ (NDA-NA Exam). ಎನ್‌ಡಿಎ ಎಂದರೆ ನ್ಯಾಷನಲ್ ಡಿಫೆನ್ಸ್ ಆಕಾಡೆಮಿ ಎಂದು ಮತ್ತು ಎನ್‌ಎ ಎಂದರೆ ನೇವಲ್ ಆಕಾಡೆಮಿ ಎಂದು. ಈ ಪರೀಕ್ಷೆಯನ್ನು ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನಡೆಸುತ್ತದೆ.

ಪ್ರತಿ ವರ್ಷ ನಿಯಮಿತವಾಗಿ ಎರಡು ಬಾರಿ ಏಪ್ರಿಲ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಈ ಪರೀಕ್ಷೆ ನಡೆಸಿಕೊಂಡು ಬರಲಾಗುತ್ತದೆ. ಇದರ ವೇಳಾಪಟ್ಟಿಯನ್ನು ಯುಪಿಎಸ್‌ಸಿಯು ಬಹಳ ಮೊದಲೇ ಪ್ರಕಟಿಸಿರುತ್ತದೆ. ಪ್ರತಿ ಪರೀಕ್ಷೆ ನಡೆಯುವ ಮೂರು ತಿಂಗಳು ಮುಂಚಿತವಾಗಿಯೇ ಈ ಕುರಿತು ಜಾಹೀರಾತನ್ನು ನೀಡಿ, ಅಧಿಸೂಚನೆ ಹೊರಡಿಸಲಾಗುತ್ತದೆ.

ಈ ಪರೀಕ್ಷೆಯನ್ನು ದೇಶದ ಎಲ್ಲೆಡೆ ಸುಮಾರು 77 ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ನಮ್ಮ ರಾಜ್ಯದಲ್ಲಿ ಬೆಂಗಳೂರು, ಮೈಸೂರು ಮತ್ತು ಧಾರವಾಡಗಳಲ್ಲಿ ಪರೀಕ್ಷೆ ನಡೆಯುತ್ತಾ ಬಂದಿದೆ. ಈ ಪರೀಕ್ಷೆಯನ್ನು ತೆಗೆದುಕೊಂಡು ಆಯ್ಕೆಯಾದವರು ರಕ್ಷಣಾದಳದಲ್ಲಿನ ತಮ್ಮ ಆಯ್ಕೆಯ ವಿಭಾಗಗಳಲ್ಲಿ ನಿಯೋಜಿತ ಅಧಿಕಾರಿಯಾಗಿ ಶಾಶ್ವತ ಸೇವೆ ಸಲ್ಲಿಸಲು ಅರ್ಹತೆ ಗಳಿಸುತ್ತಾರೆ. ಯುಪಿಎಸ್‌ಸಿಯ ವೆಬ್‌ನಲ್ಲಿ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕಿರುತ್ತದೆ. ಅಧಿಸೂಚನೆಯನ್ನೂ ವೆಬ್‌ನಲ್ಲಿಯೇ ಪ್ರಕಟಿಸಲಾಗುತ್ತದೆ. ವೆಬ್‌ ವಿಳಾಸ ಇಂತಿದೆ; https://www.upsc.gov.in/

ಪರೀಕ್ಷೆಯ ವಿಧಾನ

ಎನ್.ಡಿ.ಎ. ಮತ್ತು ಎನ್.ಎ. ಪರೀಕ್ಷೆಯು ಲಿಖಿತ ಪರೀಕ್ಷೆ , ಬುದ್ಧಿಶಕ್ತಿ ಮತ್ತು ವ್ಯಕ್ತಿತ್ವ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಿದೆ. ಇದರಲ್ಲಿ ಲಿಖಿತ ಪರೀಕ್ಷೆಯನ್ನು ಯುಪಿಎಸ್ಸಿ ನಡೆಸಿದರೆ, ಉಳಿದ ಎರಡು ಪರೀಕ್ಷೆಗಳನ್ನು ಸರ್ವೀಸಸ್ ಎಸ್ಎಸ್‌ಬಿ ನಡೆಸುತ್ತದೆ.

NDA-NA Exam

ಲಿಖಿತ ಪರೀಕ್ಷೆಯು ವಸ್ತುನಿಷ್ಠ (ಆಬ್ಜೆಕ್ಟಿವ್ ಟೈಪ್)ರೂಪದ್ದಾಗಿರುತ್ತದೆ. ಈ ಪರೀಕ್ಷೆಯಲ್ಲಿ ಎರಡು ಪೇಪರುಗಳಿರುತ್ತವೆ. ಪೇಪರ್ 1- ಗಣಿತ : ಈ ಪರೀಕ್ಷೆ ಎರಡೂವರೆ ಗಂಟೆ ಅವಧಿಯದ್ದಾಗಿರುತ್ತದೆ. ಇದರಲ್ಲಿ ಒಟ್ಟು 120 ಪ್ರಶ್ನೆಗಳು ಇರುತ್ತವೆ ಮತ್ತು ಒಟ್ಟು ಅಂಕ 300. 
ಪೇಪರ್ 2- ಸಾಮಾನ್ಯ ಸಾಮರ್ಥ್ಯದ ಪರೀಕ್ಷೆ: ಈ ಪರೀಕ್ಷೆಯು ಎರಡೂವರೆ ಗಂಟೆಯದ್ದಾಗಿರುತ್ತದೆ. ಇದರ ಒಟ್ಟು ಅಂಕ 600. ಸಾಮಾನ್ಯ ಸಾಮರ್ಥ್ಯದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ‘ಎ’ ಮತ್ತು ‘ಬಿ’ ಎಂಬ ಎರಡು ವಿಭಾಗಗಳಿರುತ್ತವೆ. ‘ಎ’ ವಿಭಾಗವು ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಇದ್ದು , ಇದರಲ್ಲಿ ಒಟ್ಟು 50 ಪ್ರಶ್ನೆಗಳಿರುತ್ತವೆ ಮತ್ತು ಇದರ ಒಟ್ಟು ಅಂಕಗಳು 200. ‘ಬಿ’ ಭಾಗವು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿ ಇರುತ್ತದೆ. ಈ ಭಾಗದಲ್ಲಿ ಒಟ್ಟು 100 ಪ್ರಶ್ನೆಗಳಿದ್ದು, ಅದರ ಒಟ್ಟು ಅಂಕಗಳು 400.

ಈ ಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಮಾನ್ಯ ಜ್ಞಾನ, ಚರಿತ್ರೆ, ರಾಜನೀತಿ, ಭಾರತದ ಸ್ವಾತಂತ್ರ ಚಳುವಳಿ, ಸಂವಿಧಾನ ಮತ್ತು ಆರ್ಥಶಾಸ್ತ್ರ, ಭೂಗೋಳ, ಮತ್ತು ಪ್ರಚಲಿತ ಘಟನೆಗಳು ಎಂಬ 5 ಭಾಗಗಳಿರುತ್ತವೆ. ಕ್ರಮವಾಗಿ ಈ ಐದು ಭಾಗಗಳಿಗೆ, 25%, 15%, 10%, 20%, 20% ಮತ್ತು 10% ಪ್ರಮಾಣದಲ್ಲಿ ಪ್ರಾಶಸ್ತ್ಯ ನೀಡಲಾಗುತ್ತದೆ. ಈ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ನಡೆಸಲಾಗುತ್ತದೆ.

ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ದ್ವಿತೀಯ ಹಂತದ ಬುದ್ಧಿಶಕ್ತಿ ಮತ್ತು ವ್ಯಕ್ತಿತ್ವ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹತೆ ಪಡೆಯುತ್ತಾರೆ. ಇದರಲ್ಲಿ ಭಾಷಣ, ಗುಂಪು ಚರ್ಚೆ, ಗುಂಪು ಯೋಜನೆಗಳು, ಹೊರಾಂಗಣ ಪಂಗಡ ಕೆಲಸಗಳು ಮುಂತಾದ ವಿಷಯಗಳು ಇರುತ್ತವೆ. ಈ ಪರೀಕ್ಷೆಯ ಮುಖ್ಯ ಉದ್ದೇಶ ಅಭ್ಯರ್ಥಿಯ ನಾಯಕತ್ವ ಹಾಗೂ ಮನೋಭಾವ, ವಿವಿಧ ವಿಷಯಗಳಲ್ಲಿನ ಅಸಕ್ತಿ, ನಿರ್ಧಾರ ತೆಗೆದುಕೊಳ್ಳುವ ಗುಣ ಮತ್ತು ಸಾಮರ್ಥ್ಯ ಇತ್ಯಾದಿಗಳನ್ನು ಪರೀಕ್ಷಿಸುವುದು ಆಗಿರುತ್ತದೆ.

ಮೂರನೇ ಹಂತದಲ್ಲಿ ವೈದ್ಯಕೀಯ ಪರೀಕ್ಷೆ ಇರುತ್ತದೆ. ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು, ಅಂಗವಿಕಲತೆ, ವಿವಿಧ ರೀತಿಯ ಭೀತಿಗಳು, ಭಾವುಕ ಸ್ವಭಾವದವರನ್ನು ಇಲ್ಲಿ ಅನರ್ಹಗೊಳಿಸಲಾಗುತ್ತದೆ. ಆನೇಕ ಸಲ ಮೊದಲ ಎರಡು ಪರೀಕ್ಷೆಗಳಲ್ಲಿ ಉತ್ತಮ ಮಟ್ಟದಲ್ಲಿ ಉತ್ತೀರ್ಣರಾದವರು ಈ ಹಂತದಲ್ಲಿ ಅನರ್ಹರಾಗುವುದೇ ಹೆಚ್ಚು. ಆದುದರಿಂದ ಎನ್.ಡಿ.ಎ. ಅಥವಾ ರಕ್ಷಣಾದಳದ ಯಾವುದೇ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳಲು ಬಯಸುವವರು ಮೊದಲನೆಯದಾಗಿ ದೈಹಿಕ ಮತ್ತು ವೈದ್ಯಕೀಯ ಅರ್ಹತಾ ಪರೀಕ್ಷೆಯನ್ನು ಪೂರ್ಣಗೊಳಿಸಿ, ಸೈ ಎನಿಸಿಕೊಂಡರೆ ಮಾತ್ರ ಈ ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಅಧಿಸೂಚನೆ ಹೀಗಿರುತ್ತದೆ

ಭೂದಳ, ನೌಕದಳ ಮತ್ತು ವಾಯುದಳದಲ್ಲಿ ಸೇವೆಸಲ್ಲಿಸಲು ಬಯಸುವವರಿಗೆ ಮಹಾರಾಷ್ಟ್ರದ ಪುಣೆಯ ಹತ್ತಿರವಿರುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ3 ವರ್ಷ ಅವಧಿಯ ಶೈಕ್ಷಣಿಕ ಮತ್ತು ದೈಹಿಕ ತರಬೇತಿಯನ್ನು ನೀಡಲಾಗುತ್ತದೆ. ಮೊದಲ ಎರಡೂವರೆ ವರ್ಷದ ತರಬೇತಿಯು ಮೂರು ವಿಭಾಗದವರಿಗೆ ಸಮಾನವಾಗಿರುತ್ತದೆ. ಈ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ದೆಹಲಿಯ ಪ್ರಸಿದ್ಧ ಜವಾಹರಲಾಲ್ ನೆಹರೂ ವಿಶ್ವದ್ಯಾನಿಲಯದಿಂದ ಭೂದಳದವರಿಗೆ ಬಿ.ಎ. / ಬಿಎಸ್ಸಿ/ ಬಿಟೆಕ್ ಪದವಿಯನ್ನೂ, ನೌಕದಳ ಮತ್ತು ವಾಯುದಳದವರಿಗೆ ಬಿ.ಟೆಕ್ ಪದವಿಯನ್ನು ನೀಡಲಾಗುತ್ತದೆ.

ಎನ್.ಎ. ಪರೀಕ್ಷೆಯನ್ನು ತೆಗೆದುಕೊಂಡು ಆಯ್ಕೆಯಾದವರು ಕೇರಳದ ಎಜಿಮಾಳದಲ್ಲಿರುವ ಇಂಡಿಯನ್ ನೇವಲ್ ಅಕಾಡೆಮಿಯಲ್ಲಿ 4 ವರ್ಷದ ತರಬೇತಿಯನ್ನು ಪಡೆದು ಬಿಟೆಕ್ ಪದವಿ ಪಡೆಯುತ್ತಾರೆ.

ಎನ್‌ಡಿಎ ತರಬೇತಿ ಮುಗಿದ ನಂತರ ಭೂದಳ ಆಯ್ಕೆ ಮಾಡಿದವರು ಡೆಹ್ರಾಡೂನ್‌ನಲ್ಲಿರುವ ಇಂಡಿಯನ್‌ ಮಿಲಟರಿ ಅಕಾಡೆಮಿ ಒಂದು ವರ್ಷ ಹೆಚ್ಚಿನ ತರಬೇತಿ ಪಡೆಯಬೇಕಾಗುತ್ತದೆ. ಈ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರನ್ನು ಭೂದಳದಲ್ಲಿ ಸೆಕೆಂಡ್‌ ಲೆಫ್ಟಿನೆಂಟ್‌ ನಿಯೋಜಿತ ಅಧಿಕಾರಿಯಾಗಿ ಶಾಶ್ವತ ಸೇವೆಗೆ ನೇಮಕಾತಿ ಮಾಡಲಾಗುತ್ತದೆ.

ನೌಕದಳ ಆಯ್ಕೆಮಾಡಿದವರಿಗೆ ಇಂಡಿಯನ್ ನೇವಲ್ ಆಕಾಡೆಮಿ, ಎಜಿಮಾಳ ಇಲ್ಲಿ ಪ್ರಾಯೋಗಿಕ ತರಬೇತಿಗೆ ಕಳುಸುತ್ತಾರೆ. ಅಲ್ಲಿ ಒಂದು ವರ್ಷದ ತರಬೇತಿ ನೀಡಿದ ನಂತರ ನೌಕದಳದಲ್ಲಿ ಸಬ್ಲೆ ಪ್ಟಿನೆಂಟ್ ನಿಯೋಜಿತ ಆಕಾರಿಯಾಗಿ ಶಾಶ್ವತ ಸೇವೆಗೆ ನೇಮಕಾತಿ ನೀಡುತ್ತಾರೆ.

ವಾಯುದಳದವರಿಗೆ ಹೈದರಾಬಾದ್‌ನಲ್ಲಿನ ಏರ್‌ಫೋರ್ಸ್‌ ಅಕಾಡೆಮಿಯಲ್ಲಿ ಹೆಚ್ಚಿನ ತರಬೇತಿ ನೀಡಲಾಗುತ್ತದೆ. ಅವರನ್ನು ಪೈಲಟ್‌ ಆಫೀಸರ್‌ ಆಗಿ ನೇಮಿಸಲಾಗುತ್ತದೆ. ತರಬೇತಿಯ ಸಮಯದಲ್ಲಿ ಎಲ್ಲಾ ಕೆಡೆಟ್ ಗಳಿಗೆ ಸುಮಾರು31 ಕ್ಕೂ ಮಿಗಿಲಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವಿದೆ.

ಅರ್ಹತೆಗಳೇನಿರಬೇಕು?

ಎನ್.ಡಿ.ಎ. ಮತ್ತು ಎನ್.ಎ. ಪರೀಕ್ಷೆಯನ್ನು ಅವಿವಾಹಿತ ಯುವಕರು ಮಾತ್ರ ತೆಗೆದುಕೊಳ್ಳಬಹುದು.
ವಯೋಮಿತಿ: ಕೋರ್ಸ್ ಪ್ರಾರಂಭವಾಗುವ ದಿನಾಂಕವನ್ನು ಆಧರಿಸಿ 16 ವರೆ ವರ್ಷದಿಂದ 19 ವರ್ಷ.
ವಿದ್ಯಾರ್ಹತೆ: ಎನ್.ಡಿ.ಎ. ಪರೀಕ್ಷೆಯ ಮೂಲಕ ಭೂಸೇನೆಗೆ ಸೇರಲು ಇಚ್ಛಿಸುವವರು ಯಾವುದೇ ವಿಷಯದಲ್ಲಿ ಪಿ.ಯು.ಸಿ. ಶಿಕ್ಷಣ ಪಡೆದಿರಬೇಕು. ನೌಕದಳ ಮತ್ತು ವಾಯುದಳ ಸೇರಲು ಮತ್ತು ಎನ್.ಎ. ಪರೀಕ್ಷೆ ಮುಖಾಂತರ ಇಂಡಿಯನ್ ನೇವಲ್ ಅಕಾಡೆಮಿ ಸೇರಲು ಬಯಸುವವರು ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದೊಂದಿಗೆ ಪಿಯುಸಿ ಶಿಕ್ಷಣ ಪಡೆದಿರಬೇಕು. ದ್ವಿತೀಯ ಪಿಯುಸಿಯಲ್ಲಿ ಅಧ್ಯಯನ ಮಾಡುತ್ತಿರುವವರು ಸಹ ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಮೇಲೆ ತಿಳಿಸಿದ ಶೈಕ್ಷಣಿಕ ಅರ್ಹತೆಯೊಂದಿಗೆ ಅಭ್ಯರ್ಥಿಗಳು ಕನಿಷ್ಠ  157 ಸೆಂ.ಮಿ. ಎತ್ತರ ಮತ್ತು ಎತ್ತರ ಹಾಗೂ ವಯಸ್ಸಿಗೆ ತಕ್ಕಂತೆ ದೇಹದ ತೂಕ ಮತ್ತು ಎದೆಯ ಸುತ್ತಳತೆಯನ್ನು ಹೊಂದಿರಬೇಕು. ಇದರ ಜೊತೆಗೆ ವಾಯುದಳಕ್ಕೆ ಸೇರಲು ಬಯಸುವವರಿಗೆ ಅವರ ಕಾಲಿನ ಉದ್ದವು ಕನಿಷ್ಟ 99 ಸೆಂ.ಮೀ. ಮತ್ತು ಗರಿಷ್ಠ 120 ಸೆಂ.ಮೀ.ನ ಒಳಗೆ ಇರಬೇಕು. ಹಾಗೂ ನೇರವಾಗಿ ಕುಳಿತುಕೊಳ್ಳುವಾಗ ದೇಹದ ಎತ್ತರ 81.5 ಸೆಂ.ಮೀ.ನಿಂದ 96 ಸೆಂ.ಮಿ.ನ ಒಳಗೆ ಇರಬೇಕು.

ಅರ್ಜಿ ಶುಲ್ಕ ಎಷ್ಟು?

ಎಸ್‌ಸಿ/ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿರುವುದಿಲ್ಲ. ಉಳಿದ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಗೆ ಅವಕಾಶ ನೀಡಲಾಗಿರುತ್ತದೆ.

ಸೇನೆಯಲ್ಲಿ ಅಧಿಕಾರಿಯಾಗಬೇಕು ಎಂದು ಕನಸು ಕಾಣುವವರು ದ್ವಿತೀಯ ಪಿಯುಸಿ ಓದುವಾಗಲೇ ಈ ಪರೀಕ್ಷೆಯನ್ನು ತೆಗೆದುಕೊಂಡು, ಸೇನಾ ತರಬೇತಿಯನ್ನು ಪಡೆಯಬಹುದು ಜತೆಜತೆಗೆ ಉನ್ನತ ಶಿಕ್ಷಣವನ್ನೂ ಪಡೆದುಕೊಳ್ಳಬಹುದು. ಈ ಪರೀಕ್ಷೆಯನ್ನು ಬರೆಯುವ ರಾಜ್ಯದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಬೇಕು. ಈ ಪರೀಕ್ಷೆಯ ವಿಷಯ ಎಲ್ಲ ವಿದ್ಯಾರ್ಥಿಗಳಿಗೂ ತಿಳಿಯಬೇಕಿದೆ.

ಲೇಖಕರ ಪರಿಚಯ
ಡಾ. ಕೆ.ಎನ್‌. ಲೋಬೋ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಅಸೋಸಿಯೇಟ್‌ ಪ್ರೊಫೆಸರ್‌ ಆಗಿದ್ದಾರೆ. ಮಂಗಳೂರು ವಿವಿಯಿಂದ ಡಾಕ್ಟರೇಟ್‌ ಪಡೆದಿರುವ ಇವರು, ಇಂಡಿಯನ್‌ ಎಕನಾಮಿಕ್‌ ಅಸೋಸಿಯೇಷನ್‌, ಇಂಡಿಯನ್‌ ಸೋಸಿಯಲ್‌ ಸೈನ್ಸ್‌ ಅಸೋಸಿಯೇಷನ್‌ನ ಸದಸ್ಯರಾಗಿದ್ದಾರೆ. 17 ಕೃತಿಗಳನ್ನು ಬರೆದಿರುವ ಇವರು ನಾಡಿನ ಹೆಸರಾಂತ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದಾರೆ. ಈಗಾಗಲೇ ಮೂವರು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್‌ ಪಡೆದಿದ್ದಾರೆ. ವಿಷಯ ಬೋಧನೆಯ ಜತೆಜತೆಗೆ ಸ್ವ ಆಸಕ್ತಿಯಿಂದ ವಿದ್ಯಾರ್ಥಿಗಳಿಗೆ ಕರಿಯರ್‌ ಮಾರ್ಗದರ್ಶನ ನೀಡುತ್ತಿರುವ ಇವರು ಇದಕ್ಕೆ ಸಂಬಂಧಿಸಿದ ಹತ್ತಾರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದಾರೆ. ಹಲವಾರು ಲೇಖನಗಳನ್ನು ಬರೆದಿದ್ದಾರೆ.

ಇದನ್ನೂ ಓದಿ | Job Career | ಸರ್ಕಾರಿ ಉದ್ಯೋಗ ಪಡೆಯಲು ಈ ಎಲ್ಲ ಸಿದ್ಧತೆಗಳೂ ಬೇಕು!

Exit mobile version