| ಬಿ. ಸೋಮಶೇಖರ್, ಬೆಂಗಳೂರು
ನಾಗಾಲ್ಯಾಂಡ್ ಮುಖ್ಯಮಂತ್ರಿಯಾಗಿ ನೆಫಿಯು ರಿಯೊ ಪ್ರಮಾಣವಚನ ಸ್ವೀಕರಿಸಿದ್ದಾರೆ. ಒಂದೆರಡು ವರ್ಷ ಸಿಎಂ ಆಗಿ ಮುಂದುವರಿಯುವುದೇ ಕಷ್ಟವಾಗಿರುವ ಕಾಲಘಟ್ಟದಲ್ಲಿ ಅವರು ಐದನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಾಗೆಯೇ, ನ್ಯಾಗಾಲ್ಯಾಂಡ್ ಮುಖ್ಯಮಂತ್ರಿಯಾಗಿ ಸುದೀರ್ಘ ಅವಧಿಗೆ ಆಡಳಿತ ನಡೆಸಿದವರೂ ಎಂಬ ಖ್ಯಾತಿಗೂ ನೆಫಿಯು ರಿಯೊ ಪಾತ್ರರಾಗಿದ್ದಾರೆ. ಸರಳ ವ್ಯಕ್ತಿತ್ವದ, ಉತ್ತಮ ನಾಯಕತ್ವ ಗುಣ ಹೊಂದಿರುವ ನೆಫಿಯು ರಿಯೊ ಅವರ ರಾಜಕೀಯ ಏಳಿಗೆ ಹೇಗಿದೆ? ಅವರ ಹಿನ್ನೆಲೆ ಏನು? ಮಾಡಿರುವ ಸಾಧನೆ ಯಾವವು? ನಾಗಾಲ್ಯಾಂಡ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿರುವ ಹೊತ್ತಿನಲ್ಲೇ ಅವರ ಜೀವನದ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಬಾಲ್ಯದ ಜೀವನ, ವಿದ್ಯಾರ್ಥಿ ದಿಸೆಯಲ್ಲಿಯೇ ನಾಯಕತ್ವ ಗುಣ
ಕೊಹಿಮಾ ಜಿಲ್ಲೆ ಟೌಫೇಮ ಗ್ರಾಮದಲ್ಲಿ 1950ರ ನವೆಂಬರ್ 11ರಂದು ಜನಿಸಿದ ನೆಫಿಯು ರಿಯೊ ಅವರು ಅಂಗಾಮಿ ನಾಗಾ ಬುಡಕಟ್ಟು ಸಮುದಾಯಕ್ಕೆ ಸೇರಿದ್ದಾರೆ. ಕೊಹಿಮಾದ ಬ್ಯಾಪಿಸ್ಟ್ ಇಂಗ್ಲಿಷ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಅವರು, ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿರುವ ಸೈನಿಕ ಶಾಲೆಯಲ್ಲಿ ಪ್ರೌಢ ಶಿಕ್ಷಣ ಅಧ್ಯಯನ ಮಾಡಿದರು. ಕೊಹಿಮಾ ಆರ್ಟ್ಸ್ ಕಾಲೇಜ್‌ನಲ್ಲಿ ಪದವಿ ಮುಗಿಸಿದ ರಿಯೊ ಅವರು ವಿದ್ಯಾರ್ಥಿ ದಿಸೆಯಲ್ಲಿಯೇ ನಾಯಕತ್ವ ಗುಣಗಳನ್ನು ಹೊಂದಿದ್ದರು. ವಿದ್ಯಾರ್ಥಿ ನಾಯಕನಾಗಿ ಅವರು ಹೊರಹೊಮ್ಮಿದ್ದರು.
ರಾಜಕೀಯ ಪ್ರವೇಶ
ನೆಫಿಯು ರಿಯೊ ಅವರು 1974ರಲ್ಲಿ ರಾಜಕೀಯ ಪ್ರವೇಶಿಸಿದರು. ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ ಕೊಹಿಮಾ ಘಟಕದ ಅಧ್ಯಕ್ಷರಾದ ಅವರು ಕೆಲವೇ ದಿನಗಳಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು. 1987ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ರಿಯೊ ಸೋಲನುಭವಿಸಿದರು. ಇದಾದ ಬಳಿಕ ಕಾಂಗ್ರೆಸ್ ಸೇರ್ಪಡೆಯಾದ ಅವರು 1989ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಆಯ್ಕೆಯಾದರು. ಇಲ್ಲಿಂದ ಹಿಂತಿರುಗಿ ನೋಡದ ರಿಯೊ ರಾಜಕೀಯದಲ್ಲಿ 50ನೇ ವರ್ಷದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಸಚಿವ ಸ್ಥಾನದಿಂದ ಸಿಎಂ ಗಾದಿವರೆಗೆ
ಶಾಸಕರಾಗಿ ಆಯ್ಕೆಯಾದ ನೆಫಿಯು ರಿಯೊ, 1990ರಲ್ಲಿ ಸಂಪುಟ ಸಚಿವರೂ ಆದರು. ನಾಗಾಲ್ಯಾಂಡ್‌ನ ಆಗಿನ ಮುಖ್ಯಮಂತ್ರಿ ಎಸ್.ಸಿ. ಜಮೀರ್ ಅವರ ಆಪ್ತರಾಗಿದ್ದ ರಿಯೊ ಗೃಹ ಖಾತೆ ಸೇರಿ ಹಲವು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದರು. ಆದರೆ, ಸಿಎಂ ಜಮೀರ್ ಹಾಗೂ ರಿಯೊ ಮಧ್ಯೆ ಭಿನ್ನಾಭಿಪ್ರಾಯ ಮೂಡಿತು. ಹಾಗಾಗಿ, 2003ರಲ್ಲಿ ನಾಗಾ ಪೀಪಲ್ಸ್ ಫ್ರಂಟ್ ಸೇರ್ಪಡೆಯಾದ ರಿಯೊ, ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆದರೆ, ಸಿಎಂ ಆಗಿ ರಿಯೊ ಅವರು ಅವಧಿ ಪೂರ್ಣಗೊಳಿಸಲಿಲ್ಲ. 2008ರ ಜನವರಿ 3ರಂದು ರಾಷ್ಟ್ರಪತಿ ಆಡಳಿತ ಜಾರಿಯಾದ ಕಾರಣ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು.
2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಾಗಾ ಪೀಪಲ್ಸ್ ಫ್ರಂಟ್ ಗೆಲುವು ಸಾಧಿಸುವಲ್ಲಿ ರಿಯೊ ಪ್ರಮುಖ ಪಾತ್ರ ನಿರ್ವಹಿಸಿದರು. ಅವರೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಜತೆಗೆ ಐದು ವರ್ಷ ಪೂರ್ಣಗೊಳಿಸಿದರು. 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ ರಿಯೊ, 2018ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾರಣ ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಈಗ ಐದನೇ ಬಾರಿಗೆ ಅವರು ಸಿಎಂ ಆಗಿ ಆಯ್ಕೆಯಾಗಿದ್ದಾರೆ. 2017ರಲ್ಲಿ ನಾಗಾ ಪೀಪಲ್ಸ್ ಫ್ರಂಟ್ ತೊರೆದ ರಿಯೊ ನಾಷನಲ್ ಡೆಮಾಕ್ರಟಿಕ್ ಪೀಪಲ್ಸ್ ಪಾರ್ಟಿ ಸ್ಥಾಪಿಸಿ, 2018ರಲ್ಲಿ ಎನ್‌ಡಿಪಿಪಿಯೇ ಅಧಿಕಾರಕ್ಕೆ ಬರುವಂತೆ ಮಾಡಿದ ಕೀರ್ತಿ ರಿಯೊ ಅವರಿಗೆ ಸಲ್ಲುತ್ತದೆ.
ಮೈತ್ರಿ ಸರ್ಕಾರ ರಚಿಸಿದರೂ ಸ್ಥಿರ ಆಡಳಿತ
ಸಾಮಾನ್ಯವಾಗಿ ಯಾವುದೇ ರಾಜ್ಯದಲ್ಲಿ ಎರಡು ಅಥವಾ ಹೆಚ್ಚಿನ ಪಕ್ಷಗಳು ಒಗ್ಗೂಡಿ ಸರ್ಕಾರ ರಚಿಸಿದರೆ, ಆ ಸರ್ಕಾರ ತುಂಬ ದಿನ ಉಳಿಯುವುದಿಲ್ಲ. ಇಂತಹ ಸ್ಥಿತಿ ಇರುವಾಗ ನೆಫಿಯು ರಿಯೊ ಅವರು ಮೈತ್ರಿ ಸರ್ಕಾರಗಳನ್ನು ರಚಿಸಿದರೂ, ಸ್ಥಿರ ಆಡಳಿತ ನೀಡಿದ್ದಾರೆ. ಹಾಗೆಯೇ, ಅವರೇ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ. 2003ರಲ್ಲಿ ಕಾಂಗ್ರೆಸ್ ಬಗ್ಗುಬಡಿಯಲು ಎನ್‌ಪಿಎಫ್, ಬಿಜೆಪಿ, ಜೆಡಿಯು ಪಕ್ಷಗಳನ್ನು ಒಗ್ಗೂಡಿಸಿ ಅವರು ಮೈತ್ರಿ ಸರ್ಕಾರ ರಚಿಸಿದರು. ಡೆಮಾಕ್ರಟಿಕ್ ಅಲಯನ್ಸ್ ಆಫ್ ನಾಗಾಲ್ಯಾಂಡ್ (DAN) ರಚಿಸಿದರು. ಅಲ್ಲಿಂದ ಇಲ್ಲಿಯವರೆಗೆ ಅವರು ಮೈತ್ರಿ ಸರ್ಕಾರದಲ್ಲಿಯೇ ಸಿಎಂ ಆಗಿದ್ದಾರೆ.
ಇದನ್ನೂ ಓದಿ: ವಾರದ ವ್ಯಕ್ತಿಚಿತ್ರ: ಹಿಮಂತ್ ಬಿಸ್ವಾ ಶರ್ಮಾ, ಈಶಾನ್ಯ ಭಾರತದ ಬಿಜೆಪಿ ಕೋಟೆ ಕಾಯುತ್ತಿರುವ ಕೋತ್ವಾಲ್!
ಸರಳ ವ್ಯಕ್ತಿತ್ವ, ಉತ್ತಮ ಆಡಳಿತ
ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದೆ, ಸುಗಮವಾಗಿ ಆಡಳಿತ ನಡೆಸುವಲ್ಲಿ ರಿಯೊ ಅವರದ್ದು ಎತ್ತಿದ ಕೈ. ಹಾಗಾಗಿ, ಇದುವರೆಗೆ ಅವರು ಯಾವುದೇ ವಿವಾದಗಳಲ್ಲಿ ಸಿಲುಕಿಲ್ಲ. ಅದರಲ್ಲೂ, ದೇಶದಲ್ಲೇ ಮೊದಲ ಬಾರಿಗೆ ಮ್ಯೂಸಿಕ್ ಉದ್ಯಮ ಸ್ಥಾಪಿಸುವ ದಿಸೆಯಲ್ಲಿ ಮ್ಯುಸಿಕ್ ಟಾಸ್ಕ್‌ಫೊರ್ಸ್ ರಚಿಸುವಲ್ಲಿ ರಿಯೊ ಪಾತ್ರ ನಿರ್ಣಾಯಕವಾಗಿದೆ. ಕೋಲ್ಕೊತಾ ರಾಜಕೀಯಕ್ಕೆ ಮಹೋನ್ನತ ಕೊಡುಗೆ ಹಾಗೂ ನಾಯಕತ್ವ ಪರಿಗಣಿಸಿ ರಿಯೊ ಅವರಿಗೆ ಮದರ್ ತೆರೆಸಾ ಮಿಲೇನಿಯಂ ಅವಾರ್ಡ್ ದೊರೆತಿದೆ. ಪರಿಸರ ರಕ್ಷಣೆ, ಜೀವವೈವಿಧ್ಯದ ಕುರಿತು ಇವರು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ನಾಗಾಲ್ಯಾಂಡ್ ಕ್ರಿಕೆಟ್, ಒಲಿಂಪಿಕ್ಸ್ ಹಾಗೂ ಅರ್ಚರಿ ಅಸೋಸಿಯೇಷನ್ ಅಧ್ಯಕ್ಷರಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ. ಕೈಸಿನಾ ರಿಯೊ ಅವರನ್ನು ವರಿಸಿರುವ ನೆಫಿಯು ರಿಯೊ ಅವರಿಗೆ ಒಬ್ಬ ಪುತ್ರ ಹಾಗೂ ಐವರು ಪುತ್ರಿಯರಿದ್ದಾರೆ.