ಸಿದ್ದರಾಮಯ್ಯ ಸರ್ಕಾರಕ್ಕೆ ಒಂದು ತಿಂಗಳು ತುಂಬಿದೆ. ವಿಧಾನಸೌಧ ಗಿಜಿಗಿಡುತ್ತಿದೆ. ಗ್ಯಾರಂಟಿ ಜಾರಿಯಲ್ಲಿ ಸಿಎಂ ಸೇರಿದಂತೆ ಸಚಿವರು ಬ್ಯುಸಿಯಾಗಿದ್ದಾರೆ. ಇತ್ತ ಹೆಚ್ಚುವರಿ ಅಕ್ಕಿ ಕೊಡಲಾಗುವುದಿಲ್ಲ ಅಂತ ಹೇಳಿದ ಕೇಂದ್ರದ ನಿರ್ಧಾರದ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಅಂದು ಘೋಷಣೆ ಮಾಡುವಾಗ ಇವರು ಕೇಂದ್ರ ಸರ್ಕಾರದ ಅನುಮತಿ ಪಡೆದಿದ್ರಾ ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಈ ನಡುವೆ ಬಿಜೆಪಿಯ ಆಂತರಿಕ ಕಚ್ಚಾಟ ವಿಧಾನಸೌಧ ರೌಂಡ್ಸ್‌ನಲ್ಲಿ ಗಮನ ಸೆಳೆದಿದೆ.
ಸಿದ್ದರಾಮಯ್ಯ ಸರ್ಕಾರಕ್ಕೆ ಒಂದು ತಿಂಗಳು
ಮಾರ್ಚ್ 13ರಂದು 135 ಸ್ಥಾನ ಗೆದ್ದು ರಾಜ್ಯಪಾಲರ ಮುಂದೆ ಸರ್ಕಾರ ರಚನೆ ಮಾಡಲು ಸಿದ್ದರಾಮಯ್ಯ ಹಕ್ಕೊತ್ತಾಯ ಮಾಡಿ ಪ್ರಮಾಣವಚನ ಸ್ವೀಕರಿಸಿ ಒಂದು ತಿಂಗಳು ಮುಗಿದು ಹೋಯಿತು. ಕಳೆದ 31 ದಿನಗಳಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಗ್ಯಾರಂಟಿ ಈಡೇರಿಸುವುದೇ ದೊಡ್ಡ ಸವಾಲಾಗಿದೆ. ಈಗಾಗಲೇ ಅದ್ಧೂರಿಯಾಗಿ ಶಕ್ತಿ ಯೋಜನೆ ಜಾರಿಗೊಳಿಸಿದರೂ ಅರ್ಥಿಕ ಸಂಪನ್ಮೂಲ ಹೊಂದಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ ಅನ್ನೋದು ಮನವರಿಕೆ ಆಗಿದೆ. ಆದರೆ ನಮ್ಮ ಮಹಿಳಾಮಣಿಗಳು ಟೂರ್ ಹೋಗೋದು ಜಾಸ್ತಿ ಆಗಿ ಪ್ರವಾಸೋದ್ಯಮ ಚೇತರಿಕೆ ಕಂಡು ಅಲ್ಲಿಂದ ನಮಗೆ ಆದಾಯ ಬರುತ್ತೆ ಅನ್ನುತ್ತಾರೆ ಕೆಲವು ಅಧಿಕಾರಿಗಳು. ಈ ಲಾಜಿಕ್ ಬಗ್ಗೆ ವಿಧಾನಸೌಧ ಪಡಸಾಲೆಯಲ್ಲಿ ಹೋಗುತ್ತಿದ್ದ ಮಹಿಳೆಯರನ್ನು ನಾವು ಮಾತನಾಡಿಸಿದಾಗ “”ನಾವು ಉಚಿತ ಬಸ್ ಸೇವೆ ಸಿಗುವ ಮೊದಲೂ ಟೂರ್ ಹೋಗ್ತಿದ್ವಿ. ಆಗಲೂ ದುಡ್ಡು ಖರ್ಚು ಮಾಡ್ತಿದ್ವಿ. ಈಗ ಇನ್ನೂ ಸ್ವಲ್ಪ ಜಾಸ್ತಿ ಖರ್ಚು ಮಾಡಬಹುದುʼʼ ಎಂದರು.
ಶಿವರಾತ್ರಿ ಆಚರಿಸಿದ ಕೆ.ಎಚ್ ಮುನಿಯಪ್ಪ
ಭಾರತೀಯ ಆಹಾರ ನಿಗಮದ ಅಧಿಕಾರಿಗಳು ಹೆಚ್ಚುವರಿ ಅಕ್ಕಿ ಕೊಡಲು ಸಾಧ್ಯವಿಲ್ಲ ಅಂತ ಪತ್ರ ಬರೆದಾಗ ಇಡೀ ದಿನ ಮುನಿಯಪ್ಪ ನಿದ್ದೆ ಮಾಡಿರಲಿಲ್ಲವಂತೆ. ಸಿದ್ದರಾಮಯ್ಯ ಅವರು, ಏನೇ ಆದರೂ ಯೋಜನೆ ಜಾರಿ ಮಾಡಲೇಬೇಕು. ಹೇಳಿದ ಸಮಯ, ದಿನಾಂಕದಲ್ಲಿಯೇ ಜಾರಿ ಮಾಡಬೇಕು ಎಂದು ಹೇಳಿದರಂತೆ. ಇದಕ್ಕೆ ಸ್ವತಃ ಸಿದ್ದರಾಮಯ್ಯ ತೆಲಂಗಾಣ ಸಿಎಂ ಜತೆ ಮಾತನಾಡಿದ್ರಂತೆ. ಛತ್ತೀಸ್‌ಗಢ, ಒಡಿಶಾ, ಆಂಧ್ರಪ್ರದೇಶ ರಾಜ್ಯ ಸರ್ಕಾರಗಳನ್ನ ಸಂಪರ್ಕ ಮಾಡಿದ ಬಳಿಕ ಮುನಿಯಪ್ಪ ಅವರನ್ನ ಸಿಎಂ ಕರೆದು, ಅಕ್ಕಿ ಕೊಡುವವರೆಗೂ ನಿದ್ದೆ ಮಾಡಬಾರದು ಅಂದ್ರಂತೆ! ಹೆಬ್ಬಾಳ ಬಳಿ ಇರೋ ಮನೆಗೆ ತೆರಳಿದ ಮುನಿಯಪ್ಪ ಟೆರೆಸ್ ಮೇಲೆ ಅತ್ತಲಿಂದ ಇತ್ತ ಇತ್ತಲಿಂದ ಅತ್ತ ಓಡಾಡುತ್ತಿದ್ರಂತೆ. ಮಧ್ಯರಾತ್ರಿ ಒಂದು ಫೋನ್ ಕರೆ ಬಂದಾಗ ಮುಖದಲ್ಲಿ ಸ್ವಲ್ಪ ನಿರಾಳ ಆಯಿತು ಎಂದರಂತೆ.
ಸಚಿವರಿಗಿಲ್ಲ ಮನೆ ಭಾಗ್ಯ; ಕೆ. ಆರ್ ಮಾರ್ಕೆಟ್ ಆದ ವಿಧಾನಸೌಧ
ಹೊಸ ಸರ್ಕಾರ ಬಂದು ಒಂದು ತಿಂಗಳಾದ್ರೂ ಸಚಿವರಿಗೆ ಇನ್ನೂ ಮನೆ ಭಾಗ್ಯ ಸಿಕ್ಕಿಲ್ಲ. ಬಿಜೆಪಿ ಸರ್ಕಾರದ ಪತನದ ಬಳಿಕ ಮಾಜಿಗಳು ಹಾಲಿಗಳಿಗೆ ಮನೆ ಬಿಟ್ಟು ಕೊಡಲು ಸ್ವಲ್ಪ ಸಮಯ ತೆಗೆದುಕೊಂಡ ಪರಿಣಾಮ ಮನೆಗಳು ಇನ್ನೂ ರೆಡಿ ಆಗುತ್ತಿದೆ. ಹೀಗಾಗಿ ಕ್ಷೇತ್ರದ ಜನ ಮತ್ತು ರಾಜ್ಯದ ಜನ ಇವರನ್ನ ನೋಡಲು ಸೀದಾ ವಿಧಾನಸೌಧಕ್ಕೇ ಬರುತ್ತಿದ್ದಾರೆ. ಹಾಗಾಗಿ ವಿಧಾನಸೌಧ ಈಗ ಕೆ. ಆರ್ ಮಾರುಕಟ್ಟೆಯಂತೆ ಕಾಣಿಸುತ್ತಿದೆ. ಗದ್ದಲವೋ ಗದ್ದಲ. ಈ ನಡುವೆ, ಈ ಬಾರಿಯೂ ತಮಗೆ ಸರ್ಕಾರಿ ಮನೆ ಬೇಡ ಎನ್ನುವ ಮೂಲಕ ರಾಮಲಿಂಗರೆಡ್ಡಿ ಇತರ ಸಚಿವರಿಗೆ ಮಾದರಿಯಾಗಿದ್ದಾರೆ.
ಹಾಲಿ ಸಿಎಂ ನಡೆ ಪ್ರವಾಸದ ಬಗ್ಗೆ ಚರ್ಚೆ
ಫಲಿತಾಂಶಕ್ಕೂ ಮೊದಲೇ ಸಿಂಗಾಪುರಕ್ಕೆ ಹಾರಿದ್ದ ಕುಮಾರಸ್ವಾಮಿ ಈಗ ಮತ್ತೊಂದು ರೌಂಡ್ ಹೋಗಿದ್ದಾರೆ. ಪದೇಪದೇ ಕುಮಾರಸ್ವಾಮಿ ಸಿಂಗಾಪುರ ಪ್ರವಾಸ ಏಕೆ ಹೋಗ್ತಾರೆ? ಅಲ್ಲಿ ಅಂಥದ್ದು ಏನಿದೆ ಗುರು ಅಂತ ಕೆಲವರು ಕೇಳ್ತಿದ್ದಾರೆ. ಇನ್ನು, ನಲವತ್ತು ವರ್ಷಗಳ ಕಾಲ ಸುದೀರ್ಘ ರಾಜ್ಯ ರಾಜಕಾರಣದಲ್ಲಿದ್ದ ಯಡಿಯೂರಪ್ಪ ಅವರ ಅನುಪಸ್ಥಿತಿ ವಿಧಾನಸೌಧದಲ್ಲಿ ಎದ್ದು ಕಾಣಿಸುತ್ತಿದೆ. ಅವರ ಬಿಳಿ ಬಟ್ಟೆ, ಅವರ ನಡಿಗೆ, ನಡೆಯುತ್ತಲೇ ಜೇಬಿಗೆ ಕೈ ಹಾಕಿ ಡ್ರೈ ಫ್ರುಟ್ಸ್ ಬಾಯಿಗೆ ಹಾಕಿಕೊಳ್ಳುತ್ತಿದ್ದ ಯಡಿಯೂರಪ್ಪ ಅವರು ಅಷ್ಟೇ ಗಂಭೀರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅವರನ್ನು ಈ ಬಾರಿಯ ಬಜೆಟ್‌ನಲ್ಲಿ ನಾವು ಮಿಸ್ ಮಾಡಿಕೊಳ್ತೇವಲ್ಲ ಅನ್ನೋ ಮಾತು ವಿಧಾನಸೌಧದಲ್ಲಿ ಸಾಮಾನ್ಯವಾಗಿವೆ.
ಇದನ್ನೂ ಓದಿ: ವಿಧಾನಸೌಧ ರೌಂಡ್ಸ್: ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು, ಬಿಜೆಪಿ ನಾಯಕರಿಗಿಲ್ಲ ಚೇತರಿಕೆಯ ಮನಸ್ಸು
ಸತತ ಎರಡು ಸೋಲಿನ ಬಳಿಕವೂ ಕುಗ್ಗದ ನಿಖಿಲ್
2019ರ ಲೋಕಸಭೆ ಚುನಾವಣೆ ಮತ್ತು 2023ರ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸತತವಾಗಿ ಸೋತಿದ್ದಾರೆ. ಒಂದು ಚುನಾವಣೆಯನ್ನು ಅಪ್ಪನ ಓವರ್ ಕಾನ್ಫಿಡೆನ್ಸ್‌ನಿಂದ ಸೋತರು. ಮತ್ತೊಂದು ಚುನಾವಣೆಯನ್ನು ಕ್ಷೇತ್ರದಲ್ಲಿ ತಾಯಿಯ ನಿರ್ಲಕ್ಷ್ಯದಿಂದ ಸೋತರು ಎಂದು ರಾಮನಗರದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ರಾಜಕೀಯದ ಜೀವನದಲ್ಲಿ ಬಹುದೊಡ್ಡ ಕನಸು ಕಾಣುತ್ತಿರುವ ನಿಖಿಲ್‌ಗೆ ಈ ಸೋಲುಗಳು ಅರಗಿಸಿಕೊಳ್ಳುವುದು ಕಷ್ಟವೇ ಆದರೂ, ಮೂರನೇ ಬಾರಿ ಚುನಾವಣೆಗೆ ನಿಲ್ಲಲು ಅವರು ರೆಡಿ ಆಗುತ್ತಿದ್ದಾರೆ. ಈ ನಡುವೆ ಅವರು ಉತ್ತರ ಪ್ರದೇಶ ಮಾಜಿ ಸಿಎಂ ಅಖೀಲೇಶ್ ಯಾದವ್ ಜತೆ ಮಾತುಕತೆ ನಡೆಸಿ ಬಂದಿದ್ದಾರೆ. Defeat is first step of success ಅಂತ ಅವರು ಹೇಳಿ ಕಳಿಸಿದ್ದಾರಂತೆ! ಹೀಗಾಗಿ ಹುಮ್ಮಸ್ಸಿನಿಂದ ಹಿಂತಿರುಗಿರುವ ನಿಖಿಲ್ ಮತ್ತೆ ಮಂಡ್ಯದ ಕಡೆ ಮುಖ ಮಾಡಿದ್ದಾರೆ.