Site icon Vistara News

ಮನ ಸಾಂತ್ವನ ಅಂಕಣ | ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್: ನಿಮ್ಮ ಸಂತಸವನ್ನು ಕಸಿದುಕೊಳ್ಳುವ ಲೂಟಿಕೋರ!

obsessive compulsive disorder

ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ ಸಮಸ್ಯೆ ಹೊಂದಿರುವ ಜನರಿಗೆ ಒಂದು ವೇಳೆ ಅದು ಪ್ರಚೋದಿಸುತ್ತಿರುವ ಗೀಳನ್ನು ತಾನು ಮಾಡದೆ ಹೋದರೆ ಏನಾಗಬಹುದು ಎಂಬ ಕಲ್ಪನೆಯೇ ಭಯ ಮೂಡಿಸಿಬಿಡಬಲ್ಲದು.

ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ ಎನ್ನುವುದು ಒಂದು ಕಾಯಿಲೆಯೇ ಹೊರತು ಜೀವನ ವಿಧಾನದ ಆಯ್ಕೆಯಾಗಲಿ ಅಥವಾ ಇತರರಿಗೆ ತೊಂದರೆ ಕೊಡುವಂತಹ ಹವ್ಯಾಸವಾಗಲಿ ಅಲ್ಲ. ಒಸಿಡಿ ಎಂಬ ಪದವನ್ನು ತೀರಾ ಜಾಳು ಜಾಳಾಗಿ ಬಳಸಲಾಗುತ್ತಿದೆ. “ನನಗೆ ಸ್ವಲ್ಪ ಪ್ರಮಾಣದಲ್ಲಿ ಒಸಿಡಿ ಇದೆ. ಏಕೆಂದರೆ, ನನಗೆ ದಿನಚರಿಯಾಗಲಿ, ಕೆಲಸಗಳಾಗಲಿ ಯಾವತ್ತೂ ಶಿಸ್ತಿನಿಂದ ನಡೆಯಬೇಕು” ಎಂದು ಕಂಪನಿಯೊಂದರ ಸಿಇಓ ಹೇಳಿಕೆ ನೀಡುತ್ತಾರೆ ಅಂದರೆ, ಇದರ ಹಿಂದೆ ಒಸಿಡಿಯ ಪ್ರಭಾವ ಇದೆ ಎಂದೇ ಅರ್ಥ.

ಒಂದು ಕಾಯಿಲೆಯಾಗಿ ಇದು ಅಪಾರ ಒತ್ತಡ ಉಂಟುಮಾಡುವ, ನಾವು ಅಂದುಕೊಂಡದ್ದಕ್ಕಿಂತಲೂ ಹೆಚ್ಚು ವ್ಯಾಪಿಸಿರುವ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಶುಚಿತ್ವದ ಕುರಿತಾದ ಗೀಳನ್ನೇ ಹೊಂದಿದ್ದು, ಪ್ರತಿದಿನವೂ ಗಂಟೆಗಟ್ಟಲೆ ಸಮಯವನ್ನು ಅವರ ಮನೆಗಳನ್ನು ಸ್ವಚ್ಛಗೊಳಿಸುತ್ತಾ ಕಳೆದು ಬಿಡಬಹುದು. ಅಥವಾ ಕೆಲವರು ಖರೀದಿ ಮಾಡುವ ಗೀಳು ಹೊಂದಿದ್ದು, ಅವರು ಅಗತ್ಯವಿಲ್ಲದಿರುವ ವಸ್ತುಗಳನ್ನೂ ಖರೀದಿಸದಿಸುತ್ತ ಹೋಗುತ್ತಾರೆ.

ಒಸಿಡಿ ಎಷ್ಟು ಸಾಮಾನ್ಯವಾಗಿದೆ? ಅದು ಯಾರಲ್ಲಿ ಕಾಣಿಸಿಕೊಳ್ಳುತ್ತದೆ?

ಆ್ಯಂಕ್ಸೈಟಿ ಆ್ಯಂಡ್ ಡಿಪ್ರೆಶನ್ ಅಸೋಸಿಯೇಷನ್ ಆಫ್ ಅಮೆರಿಕಾದ ಪ್ರಕಾರ, ಒಸಿಡಿ ಅಮೆರಿಕಾದ ವಯಸ್ಕರ ಜನಸಂಖ್ಯೆಯ 1.2% ಜನರನ್ನು ಬಾಧಿಸುತ್ತದೆ. ಚೀನಾದಲ್ಲಿ ಈ ಸಂಖ್ಯೆ ಅಂದಾಜು 1.63% ಇದೆ ಎಂದು ಅಂದಾಜಿಸಲಾಗಿದೆ. ಆದರೆ ಭಾರತದಲ್ಲಿ 4% ಜನಸಂಖ್ಯೆ ಇದರಿಂದ ಬಳಲುತ್ತಿದ್ದು, ತಲಾ ಇಪ್ಪತ್ತೈದು ಜನರಲ್ಲಿ ಒಬ್ಬರಿಗೆ ಒಸಿಡಿ ಕಾಡುತ್ತದೆ!

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ ಒಸಿಡಿ ಜಗತ್ತಿನಲ್ಲಿ ಅಸಾಮರ್ಥ್ಯ ಉಂಟುಮಾಡುವ ಹತ್ತು ಪ್ರಮುಖ ಸಮಸ್ಯೆಗಳಲ್ಲಿ ಒಸಿಡಿಯೂ ಒಂದು. ಮಹಿಳೆಯರಲ್ಲಿ ಒಸಿಡಿ ಕಾಣಿಸಿಕೊಳ್ಳುವ ಸಾಧ್ಯತೆ ಪುರುಷರಿಂದ ಮೂರು ಪಟ್ಟು ಹೆಚ್ಚಾಗಿರುತ್ತದೆ. ಅದರಲ್ಲೂ ಬಹುತೇಕ ಜನರಲ್ಲಿ ಇದು 15ರಿಂದ 45ರ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಇದರಿಂದ ಬಳಲುವವರಲ್ಲಿ ಬಹುತೇಕ ಜನರು ಒಸಿಡಿಯ ಲಕ್ಷಣಗಳನ್ನು ಬಾಲ್ಯದಲ್ಲಿಯೇ ತೋರಿಸಿರುತ್ತಾರೆ.

ಒಸಿಡಿ ಎಂದರೇನು?

ಮನಸ್ಸಿನಲ್ಲಿ ಅನಗತ್ಯವಾದ ಯೋಚನೆಗಳು ಸತತವಾಗಿ ಮೂಡುವಂತೆ ಮಾಡಿ, ಆತನಲ್ಲಿ ಏನೂ ಮಾಡಲಾಗದಂತಹ ಭಯ, ವೇದನೆ, ಮತ್ತು ಆತಂಕಗಳನ್ನು ಇದು ಉಂಟುಮಾಡುತ್ತದೆ.

ಈ ಪ್ರಚೋದನೆಗಳಿಗೆ ಪ್ರತಿಕ್ರಿಯೆಯಾಗಿ ರೋಗಿಗಳು ಗೀಳುಗಳನ್ನು ಪ್ರದರ್ಶಿಸಿ, ತಾತ್ಕಾಲಿಕವಾಗಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತಾರೆ.

ಈ ಗೀಳುಗಳು ವಿಪರೀತವಾಗಿ ಕೈ ತೊಳೆದುಕೊಳ್ಳುವಿಕೆ, ಕರೆಂಟ್ ಸ್ವಿಚ್‌ಗಳನ್ನು ಆರಿಸಲಾಗಿದೆಯೇ ಎಂದು ಪದೇ ಪದೇ ಪರಿಶೀಲಿಸುವುದು, ಬಾಗಿಲಿನ ಬೀಗ ಹಾಕಲಾಗಿದೆಯೇ ಎಂದು ಆಗಾಗ ಪರೀಕ್ಷಿಸುವುದು, ಅಥವಾ ಮನೆಯನ್ನು ಮತ್ತೆ ಮತ್ತೆ ಸ್ವಚ್ಛಗೊಳಿಸುವ ರೂಪದಲ್ಲಿ ಪ್ರಕಟಗೊಳ್ಳಬಹುದು.

ಒಸಿಡಿ ತೀವ್ರ ಪ್ರಮಾಣದಲ್ಲಿ ಅಸಮಾಧಾನ ಉಂಟುಮಾಡುವುದು ಮಾತ್ರವಲ್ಲದೆ, ಅನಾಹುತಕಾರಿಯೂ ಹೌದು. ಈ ಗೀಳು ಎಷ್ಟೊಂದು ಮಾನಸಿಕ ಪ್ರಯತ್ನ, ಸಮಯವನ್ನು ಕಸಿಯುತ್ತದೆಂದರೆ ಒಸಿಡಿ ಹೊಂದಿರುವವರಿಗೆ ಕೆಲಸ, ಸಂಬಂಧ ಮತ್ತು ಸಾಮಾಜಿಕ ಜೀವನದಲ್ಲಿ ತೊಡಗಿಸಿಕೊಳ್ಳುವುದು ಅಸಾಧ್ಯ ಎನಿಸುವಂತೆ ಮಾಡುತ್ತದೆ. ಇಂತಹ ಯೋಚನೆಗಳು ತೀರಾ ಕ್ಷುಲ್ಲಕ ಎಂದು ಅರಿವಾದರೂ, ಅವುಗಳನ್ನು ನಿರ್ಲಕ್ಷಿಸಿ ಮುಂದುವರಿಯಲು ಸಾಧ್ಯವಾಗುವುದಿಲ್ಲ.

ಈ ರೀತಿ ನಿಯಂತ್ರಿಸಲು ಅಸಾಧ್ಯವಾದ ಯೋಚನೆಗಳು ಎಷ್ಟೊಂದು ಒತ್ತಡ ಉಂಟು ಮಾಡುತ್ತವೆಂದರೆ, ಒಸಿಡಿ ರೋಗಿಗಳಿಗೆ ಅವರ ಕುಟುಂಬದವರೊಡನೆ ಮಾತನಾಡುವುದೂ ಕಷ್ಟಕರ ಎನಿಸುತ್ತದೆ. ಕುಟುಂಬದ ಸದಸ್ಯರು ಅವರಿಗೆ ತಲೆ ಕೆಟ್ಟಿದೆ ಎಂದು ಬಿಡುವ ಸಾಧ್ಯತೆಗಳೂ ಇರುತ್ತವೆ. ಇಂತಹ ಯೋಚನೆಗಳನ್ನು ಸ್ವತಃ ಅನುಭವಿಸದ ಹೊರತು ಅರ್ಥ ಮಾಡಿಕೊಳ್ಳುವುದು ಅತ್ಯಂತ ಕಷ್ಟಕರ.

ಈ ಸಮಸ್ಯೆಯನ್ನು ಹೇಗೆ ವಿವರಿಸಬಹುದು?

ಒಸಿಡಿ ಸಾಕಷ್ಟು ಭಯ ಉಂಟುಮಾಡುವ ಯೋಚನೆಗಳನ್ನು ಮನಸ್ಸಿನಲ್ಲಿ ತುಂಬಿ, ನಾನೇನಾದರೂ ಈ ಗೀಳುಗಳನ್ನು ಮಾಡದೇ ಹೋದರೆ ತುಂಬಾ ಕೆಟ್ಟ ಪರಿಣಾಮ ಉಂಟಾಗಬಹುದು ಎಂದು ಭ್ರಮಿಸುವಂತೆ ಮಾಡಿಬಿಡುತ್ತದೆ.

ಒಸಿಡಿ ಒಂದು ರೀತಿಯಲ್ಲಿ ಕರುಣೆಯಿಲ್ಲದ ರಾಕ್ಷಸನಂತೆ. ಅದರ ಕೋರಿಕೆಗೆ ಮಣಿದಂತೆ ಅದರ ಬೇಡಿಕೆಗಳು ಇನ್ನಷ್ಟು ಹೆಚ್ಚಾಗುತ್ತಾ ಹೋಗುತ್ತದೆ. ಈ ಗೀಳುಗಳ ಪುನರಾವರ್ತನೆ ಇನ್ನಷ್ಟು ಹೆಚ್ಚಾಗುವಂತೆ, ಪದೇಪದೇ ನಡೆಯುವಂತೆ, ಹೆಚ್ಚು ದೀರ್ಘಕಾಲ ಮಾಡುವಂತೆ ಮಾಡುತ್ತದೆ. ಹಾಗೆ ಮಾಡಿದರೆ ಮಾತ್ರ ತಾನು ಸುರಕ್ಷಿತ ಎಂಬ ಭಾವನೆಯನ್ನೂ ಮೂಡಿಸುತ್ತದೆ.

ಇದನ್ನೂ ಓದಿ | ವೈದ್ಯ ದರ್ಪಣ ಅಂಕಣ | ರೊಬೊಟ್ ಇಲಿಗಳು, ಕೃತಕ ಕಣ್ಣು, ಸಿಂಗ್ಯುಲಾರಿಟಿ ಇತ್ಯಾದಿ…

ಒಸಿಡಿಗೆ ಕಾರಣಗಳೇನು?

ಒಸಿಡಿ ಉಂಟಾಗಲು ಕಾರಣ ಏನು ಎನ್ನುವುದರ ಕುರಿತು ತಜ್ಞರಿಗೂ ಇನ್ನೂ ಸ್ಪಷ್ಟವಾದ ಕಾರಣಗಳು ಲಭ್ಯವಾಗಿಲ್ಲ. ಇದು ಆನುವಂಶಿಕವಾಗಿ ಕಂಡುಬರುತ್ತದೆಯೇ ಅಥವಾ ಮೆದುಳಿನ ವೈಪರೀತ್ಯಗಳ ಕಾರಣದಿಂದಲೇ ಅಥವಾ ಸುತ್ತಲಿನ ವಾತಾವರಣ, ಜೀವನದಲ್ಲಿ ನಡೆಯುವ ಘಟನೆಗಳಿಂದಲೇ ಎಂಬ ಕುರಿತು ಇನ್ನೂ ಸ್ಪಷ್ಟತೆ ಲಭಿಸಿಲ್ಲ. ಆದರೆ ಇದು ಇನ್ನಷ್ಟು ಹೆಚ್ಚಾಗುವಂತೆ ಮಾಡುವಲ್ಲಿ ಒತ್ತಡ ಬಹುದೊಡ್ಡ ಪಾತ್ರ ನಿರ್ವಹಿಸುತ್ತದೆ. ಕೆಲವರಿಗೆ ಹೆಚ್ಚು ಸುಸ್ತಾದಾಗ ಒಸಿಡಿ ಹೆಚ್ಚಾಗುತ್ತದೆ.

ಸಹಜವಾಗಿಯೇ ಒಸಿಡಿ ಎನ್ನುವುದು ಮನಸ್ಸಿನಲ್ಲಿ ಮೂಡುವ ಓರೆಕೋರೆಯಾದ ಯೋಚನೆಗಳು ಎಂಬುದನ್ನು ತಜ್ಞರೂ ಒಪ್ಪಿಕೊಳ್ಳುತ್ತಾರೆ. ಅಮೆರಿಕಾದ ಸಂಶೋಧಕರ ತಂಡವಾದ ದ ಅಬ್ಸೆಸಿವ್ ಕಂಪಲ್ಸಿವ್ ಕಾಗ್ನಿಷನ್ ವರ್ಕಿಂಗ್ ಗ್ರೂಪ್ ಒಸಿಡಿಯನ್ನು ಪ್ರೇರೇಪಿಸುವಂತಹ ವಿಚಿತ್ರ ಯೋಚನೆಗಳನ್ನು ಪಟ್ಟಿ ಮಾಡುತ್ತಾರೆ. ಅವು ಹೀಗಿವೆ:

ಹಾಗಾದರೆ ಒಸಿಡಿಗೆ ಚಿಕಿತ್ಸೆ ಹೇಗೆ?

ಒಸಿಡಿಗೆ ಚಿಕಿತ್ಸೆ ನೀಡುವ ಪ್ರಮುಖ ಹಂತವೆಂದರೆ, ಅದರಿಂದ ಬಳಲುವವರ ಯೋಚನಾ ವಿಧಾನಗಳನ್ನು ಬದಲಿಸಲು ಸಹಾಯ ಮಾಡುವುದು. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (ಸಿಬಿಟಿ) ಮತ್ತು ಎಕ್ಸ್‌ಪೋಶರ್ ಆ್ಯಂಡ್ ರೆಸ್ಪಾನ್ಸ್ ಪ್ರಿವೆನ್ಷನ್ (ಇಆರ್‌ಪಿ) ಥೆರಪಿಗಳನ್ನೂ ತಜ್ಞರು ಒಸಿಡಿ ಚಿಕಿತ್ಸೆಯಲ್ಲಿ ಬಳಸುತ್ತಾರೆ.

ಇದನ್ನೂ ಓದಿ | ಗ್ಲೋಕಲ್‌ ಲೋಕ ಅಂಕಣ | ಮೆಟಾವರ್ಸ್ ಮಾಯಾಲೋಕದಲ್ಲಿ ಏನಿದೆ, ಏನಿಲ್ಲ?

ಇಆರ್‌ಪಿ ಚಿಕಿತ್ಸಾ ವಿಧಾನದಲ್ಲಿ ಕೇವಲ ಎಂಟು ವಾರಗಳ ಅವಧಿಯಲ್ಲಿ 80% ಫಲಿತಾಂಶ ಲಭ್ಯವಾಗುತ್ತದೆ. ಇಆರ್‌ಪಿ ಒಂದು ವರ್ತನೆಯ ಚಿಕಿತ್ಸೆಯಾಗಿದ್ದು, ಇದರಲ್ಲಿ ಸಮಸ್ಯೆಯಿಂದ ಬಳಲುವವರ ಗೀಳನ್ನು ಪ್ರಚೋದಿಸುವ ಸನ್ನಿವೇಶವನ್ನು ಸೃಷ್ಟಿಸಿ, ಅವರು ಆ ಗೀಳನ್ನು ಅನುಸರಿಸದಂತೆ ತಡೆಯಲು ಸಹಾಯ ಮಾಡಲಾಗುತ್ತದೆ.

ಸಿಬಿಟಿ ಒಂದು ಮಾತಿನ ಚಿಕಿತ್ಸೆಯಾಗಿದ್ದು, ಇದರಲ್ಲಿ ವ್ಯಕ್ತಿಯ ಯೋಚನೆಗಳು ಮತ್ತು ವರ್ತನೆಗಳನ್ನು ಬದಲಾಯಿಸಿ, ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡಲಾಗುತ್ತದೆ.

ಹಲವು ಸಲ ಆತಂಕ ಮತ್ತು ಖಿನ್ನತೆಗಳೂ ಇರುವ ಒಸಿಡಿ ರೋಗಿಗಳಿಗೆ ಧ್ಯಾನವೂ ಅತ್ಯಂತ ಸಹಾಯಕವಾಗಿ ಕಂಡುಬರುತ್ತದೆ.

(ಲೇಖಕರು ಹಿರಿಯ ಮನೋವೈದ್ಯಶಾಸ್ತ್ರಜ್ಞರು, ಸ್ಪಂದನಾ ಆಸ್ಪತ್ರೆ ಮತ್ತು ರಿಹ್ಯಾಬಿಲಿಟೇಷನ್ ಸೆಂಟರ್)

Exit mobile version