Site icon Vistara News

ಹೊಸ ಅಂಕಣ: ಪರಿಸರ ಪದ: ಮರಳಿ ಬರುವುದೆ ಊರಿನ ಉಲ್ಲಾಸ?

parisara pada

ಸುಮಾರು ಎರಡುವರೆ ದಶಕಗಳ ಹಿಂದಿನ ಮಾತು. ಒಬ್ಬ ಸಂಬಂಧಿಕರ ಮದುವೆ ನಿಶ್ಚಿತಾರ್ಥಕ್ಕೆ ಹೊಗಿದ್ದೆವು. ವೈವಿಧ್ಯಮಯತೆಯಿಂದ ತುಂಬಿರುವ ನಮ್ಮ ಕರ್ನಾಟಕದ ಒಂದು ಸುಂದರವಾದ ಊರದು. ನಡೆಯುತ್ತಿದ್ದದ್ದು ನಿಶ್ಚಿತಾರ್ಥವಾದರೂ ಜನ ಸೇರಿದ್ದನ್ನು ನೋಡಿದರೆ ಒಂದು ಔತಣಕ್ಕೆ ಸಮಾನ. ಮನೆಯ ಹಿರಿಯರು, ಕಿರಿಯರು, ಸಂಬಂಧಿಕರು, ಸ್ನೇಹಿತರು, ಪಕ್ಕದ ಊರಿನಿಂದ ಮುಂಜಾನೆಯ ಬಸ್ಸಿನಲ್ಲಿ ಬಂದು ತಲುಪಿದವರು ಹಾಗೂ ದೂರದ ಮೈಸೂರು ಹಾಗೂ ಬೆಂಗಳೂರಿನಿಂದ ಬಂದವರೂ ಇದ್ದರು. ಊರಿನ ಒಂದು ಭಾಗ ಈ ಕಾರ್ಯಕ್ರಮದಲ್ಲಿ ಸಂತೋಷದಿಂದ ಪಾಲುಗೊಂಡಿತ್ತು.

ಹಿರಿಯರು, ಪಕ್ಕದ ಪೇಟೆಗಳಲ್ಲಿ, ಬ್ಯಾಂಕಿನಲ್ಲಿ, ಅಕ್ಕಿ ಮಿಲ್ಲಿನಲ್ಲಿ, ಬಸ್ಸು ಕಂಪನಿಯಲ್ಲಿ ಉದ್ಯೊಗದಲ್ಲಿ ತೊಡಗಿದ್ದವರು. ಕೆಲವರು ಸಣ್ಣ ವ್ಯಾಪಾರ, ತಮ್ಮದೇ ಆದ ಕ್ಯಾಂಟೀನ್ ಮತ್ತು ತೋಟದಲ್ಲಿ ಕೆಲಸಗಳನ್ನು ಮಾಡುತ್ತಿದ್ದರು. ಇಬ್ಬರು ಮೂವರು ಮಾತ್ರ ಬೆಂಗಳೂರು ಹಾಗು ಮೈಸೂರಿನಲ್ಲಿ ದೊಡ್ಡ ಉದ್ಯೋಗದಲ್ಲಿದ್ದರು. ಯಾವ ಕಾರ್ಯಕ್ರಮವಿದ್ದರೂ, ಯಾವುದೇ ನೆಪಗಳನ್ನು ಹೇಳಿ, ಊರಿಗೆ ಬರದಿರುವ ಪ್ರಸಂಗವೇ ಇರಲಿಲ್ಲ. ಜನರು ಒಟ್ಟುಗೂಡುವುದು, ಕೆಲಸಗಳನ್ನು ಹಂಚಿಕೊಂಡು ಜವಾಬ್ದಾರಿಗಳನ್ನು ನಿಭಾಯಿಸುವುದು ಸಹಜವಾಗಿಯೇ ನಡೆದುಹೋಗುತ್ತಿತ್ತು. ಚಿಕ್ಕಪ್ಪಂದಿರು ಅಡುಗೆ ಕೆಲಸವನ್ನು ನೋಡಿಕೊಂಡರೆ, ಸೋದರಮಾವ ತರಕಾರಿ ಹಾಗು ತೋಟದಿಂದ ತೆಂಗನ್ನು ಕಿತ್ತು ತರುತ್ತಿದ್ದರು. ಮನೆಯ ಸ್ವಚ್ಛತೆ, ಅಲಂಕಾರ ಹಾಗು ಅಡುಗೆಯ ಸಾಮಾನಿನ ಪಟ್ಟಿ ಮನೆಯ ಹಿರಿಯ ಸ್ತ್ರೀಯರದ್ದಾಗಿತ್ತು. ಅಂಗಳವನ್ನು ಸಿದ್ಧಪಡಿಸಿ, ಕಾರ್ಯಕ್ರಮ ನಡೆಯಲು ಸ್ಥಳವನ್ನು ಸಜ್ಜಾಗಿಸುವುದು ಮನೆಯ ಹುಡುಗರು ಹಾಗು ಸ್ನೇಹಿತರು ನೋಡಿಕೊಳ್ಳುತ್ತಿದ್ದರು.

ಹೀಗೆ ನಡೆಯುತ್ತಿತ್ತು ನೋಡಿ ಊರಿನಲ್ಲಿ ಮನೆಯ ಕಾರ್ಯಕ್ರಮಗಳು. ತುಂಬಿದ ಮನೆ, ಮಕ್ಕಳ ಗಲಾಟೆ, ಪ್ರತಿಯೊಂದು ಮೂಲೆಯಲ್ಲೂ ಒಂದಲ್ಲ ಒಂದು ಚಟುವಟಿಕೆ, ಹಾಡು, ಹಾಸ್ಯ ತುಂಬಿದ ವಾತಾವರಣ. ಇದನ್ನು ಓದಿದ ನೀವು, ಕೆಲವು ಗಳಿಗೆ ಆ ಊರಿಗೇ ಹೋಗಿಬಿಟ್ಟಿರಾ? ಹೋಗಿದ್ರೇನು ತಪ್ಪಿಲ್ಲ. ನಮಗೆ ಸಂತಸ ತರುವ ವಿಚಾರವೆಂದರೆ ಹಾಗೆಯೇ, ಮೈ ಮರೆತು ಅಲ್ಲಿಯೇ ಹೋಗಿ ಬಿಡುತ್ತೇವೆ.

ಕಾಲಕ್ರಮೇಣ, ನಾವೆಲ್ಲಾ ವಿದ್ಯಾಭ್ಯಾಸದ ನಂತರ, ಉದ್ಯೋಗಗಳನ್ನೂ ಹುಡುಕುತ್ತಾ ಊರು ಬಿಟ್ಟು ರಾಜಧಾನಿಯಾದ ಬೆಂಗಳೂರಿನಲ್ಲಿಯೋ ಅಥವಾ ದೂರದ ಬಾಸ್ಟನ್‌ನಲ್ಲಿಯೋ ತಂಗಿಬಿಟ್ಟೆವು. ಊರಲ್ಲಿ ಉಳಿದಿರುವವರು ಹಿರಿಯರು ಮತ್ತು ಕೆಲ ಕಿರಿಯರು- ವಿದ್ಯಾಭ್ಯಾಸ ಮುಗಿಸಿ, ಅವರೂ ಊರಿಂದ ಹೊರಬೀಳುವರು, ಅವರ ಆಕಾಂಕ್ಷೆಗಳಿಗೆ ತಕ್ಕ ಹಾಗೆ. ಕಿಕ್ಕಿರಿಯುತ್ತಿದ್ದ ಮನೆ ಅಂಗಳಗಳು ಈಗ ಬಿಕೋ ಎನ್ನುತ್ತಿವೆ.

ಕೋವಿಡ್ ನಂತರ ಒಂದು ಅನುಕೂಲವಾದ ಬೆಳವಣಿಗೆ ಅಂದರೆ, ಮನೆಗಳಿಂದ ಕೆಲಸ ಮಾಡುವ ಸೌಕರ್ಯ. Work from home, ಈಗ ಒಂದು ರೂಢಿಯೇ ಆಗಿದೆ. ಹೀಗಿದ್ದಲ್ಲಿ, ಎಲ್ಲಿ ಕುಳಿತರೂ ಕೆಲಸಗಳು ಆಗುವುದೆಂಬ ಭರವಸೆ ಮೂಡಿದೆ. ಹೆಚ್ಚಿನವರು ಶಾಶ್ವತವಾಗಿ ಊರು ಹಳ್ಳಿಗಳನ್ನು ಸೇರಿಬಿಟ್ಟರು. ರಾಜ್ಯದ ಒಳನಾಡಲ್ಲಿ ಬೇಕಿರುವುದು ವಿರಾಮವಿಲ್ಲದ ವಿದ್ಯುತ್ ಹಾಗು ಬ್ರಾಡ್‌ಬ್ಯಾಂಡ್ ಸೌಲಭ್ಯ. ಜನರಿಗೆ ಇತರೆ ಸೌಲಭ್ಯಗಳಲ್ಲಿ ಅತ್ಯಗತ್ಯವಿರುವವು- ಶಾಲಾ ಕಾಲೇಜುಗಳು, ಕನ್ನಡ ಮಾದ್ಯಮದಲ್ಲಿ ಇಂಜಿನಿಯರಿಂಗ್ ಹಾಗು ಬೇರೆ ಪದವಿಧರ ಶಿಕ್ಷಣ, ವೈದ್ಯಕೀಯ ವ್ಯವಸ್ಥೆ ಹಾಗು social ecosystem- ಇದರ ಬೆಳವಣಿಗೆ. ಇದಕ್ಕೆ ಎಲ್ಲರ ಸಹಭಾಗಿತ್ವವೂ ಇರಬೇಕು. ಸರಕಾರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಟ್ಟರೆ, ಖಾಸಗಿ ವಲಯ (ಉದ್ಯಮಗಳು ಹಾಗು ಸಂಸ್ಥೆಗಳು) ಶಿಕ್ಷಣ, ಉದ್ಯೋಗ ಸೃಷ್ಟಿ ಕೆಲಸಗಳನ್ನು ಮಾಡಬೇಕು. ದೊಡ್ಡದೋ ಸಣ್ಣದೋ, ಉದ್ಯಮಗಳು ಬೆಳೆದರೆ, ಇತರೆ ಪೂರಕವಾದ ವ್ಯವಸ್ಥೆ ಕ್ರಮೇಣವಾಗಿ ಜಾರಿಗೆ ಬರುತ್ತವೆ. ಈ ನಿಟ್ಟಿನಲ್ಲಿ ಸಾಗಿದರೆ, ನಮ್ಮ ಹಳ್ಳಿ ಹಾಗು ಊರುಗಳಿಗೆ ಮರಳಿ ಬರುವವರ ಸಂಖ್ಯೆ ಹೆಚ್ಚೇ ಆಗುವುದು. ಮುಖ್ಯವಾಗಿ, ಯುವಕರು ಊರು ಬಿಟ್ಟು ಹೋಗುವ ಮುನ್ನ, ಸ್ಥಳೀಯವಾಗಿ ಇರುವ ಅವಕಾಶಗಳನ್ನು ಕೂಲಂಕುಷವಾಗಿ ಪರಿಗಣಿಸುವ ಪರಿಸ್ಥಿತಿ ನಿರ್ಮಾಣವಾಗುತ್ತವೆ.

ಕಂಪ್ಯೂಟರ್ ಪ್ರೋಗ್ರಾಮಿಂಗ್, ಪ್ರಾಡಕ್ಟ್ ಡಿಸೈನ್‌ನಂತಹ ಉತ್ತಮ ಗುಣಮಟ್ಟದ ಕೆಲಸಗಳು ಇಂಟರ್ನೆಟ್ ಮೂಲಕ ನಡೆಯಲಾರಂಭಿಸಿವೆ. ಬೆಂಗಳೂರಿನಲ್ಲೇ ಆಗಬೇಕೆಂಬುದು ಹಳೆಯ ಮಾತು. ಎಲ್ಲದಕ್ಕೂ Zoom, google meet ಇತ್ಯಾದಿ ಇದ್ದೇ ಇವೆ.

ಇದನ್ನೂ ಓದಿ: ದಶಮುಖ ಅಂಕಣ: ನಾಕು ತಂತಿಯ ರಾಗ ಹೊಮ್ಮಿಸುವ ಅನುರಾಗ…

Zoho ಎಂಬ ಸಂಸ್ಥೆಯ ಮಾಲೀಕರು ಶ್ರೀಧರ ವೆಂಬು ಮತ್ತು ಕುಟುಂಬದವರು. ಕಂಪನಿಯ ಚೆನ್ನೈ ಮತ್ತು ಟೆಕ್ಸಾಸ್‌ನಲ್ಲಿ ಇರುವ ಪ್ರಮುಖ ಶಾಖೆಗಳ ಜತೆ, ಬೇರೆ ದೇಶಗಳನ್ನು ಸೇರಿ, ತಮಿಳುನಾಡಿನ ತೆಂಕಾಶಿ, ಮಧುರೈ, ಆಂಧ್ರದ ರೇಣುಗುಂಟ ಹಾಗು ಇತ್ತೀಚಿಗೆ ಉತ್ತರಪ್ರದೇಶದಲ್ಲೂ ಸ್ಥಾಪಿಸಿದ್ದಾರೆ. ಇದು ಒಂದು ಉದಾಹರಣೆ. ಈ ಸಣ್ಣ ಪಟ್ಟಣಗಳಲ್ಲಿ ಸಂಸ್ಥೆಯು ಅಲ್ಲಿನ ಸಹಸ್ರಾರು ಎಂಜಿನಿಯರ್‌ಗಳಿಗೆ ಹಾಗೂ ಬೇರೆ ವಿದ್ಯಾಭ್ಯಾಸ ಮಾಡಿದವರಿಗೆ ಆಸರೆ ಮತ್ತು ಭವಿಷ್ಯವನ್ನು ರೂಪಿಸಲು ನಡೆಯುತ್ತಿರುವ ಬಹು ದೊಡ್ಡ ಸಾಧನೆ ಕೂಡ. ಇಷ್ಟೇ ಅಲ್ಲ, ಕೆಲಸಕ್ಕೆ ಬರುವವರು ಸೀರೆ, ಜುಬ್ಬಾ, ಪಂಚೆ ಹಾಗೂ ಇತರೆ ದೇಸೀ ವಸ್ತ್ರಗಳನ್ನು ಧರಿಸಿ ಬರುತ್ತಾರೆ. ಅಷ್ಟಕ್ಕೂ ಸಂಸ್ಥೆಯ ಆದಾಯ ಎಷ್ಟು ಗೊತ್ತಾ? ಸುಮಾರು ರೂ. 8,000 ಕೋಟಿ.

ಸಂಸ್ಥೆಗಳು ಕೇವಲ ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್ ಅಲ್ಲದೆ ಟೈರ್ 2 ಪಟ್ಟಣಗಳಲ್ಲಿಯೂ ಬೇರೂರಬಹುದು ಎಂದು ತೋರಿಸಿದ್ದಾರೆ. ದೊಡ್ಡ ಕಾರ್ಖಾನೆಗಳು, ದೊಡ್ಡ ಮಟ್ಟದ ಹೂಡಿಕೆ, ಸರ್ಕಾರದ ಆದೇಶಗಳು, ಇವ್ಯಾವುದನ್ನೂ ಆಧಾರವಾಗಿಟ್ಟುಕೊಳ್ಳದೆ ಉದ್ಯಮಗಳು ನಾವು ಬಯಸಿದ್ದನ್ನು ಹೇಗೆ ಸಾಧಿಸಬಹುದೆಂಬುದಕ್ಕೆ ಇದು ಒಂದು ಉದಾಹರಣೆ. ಸಮಾಜದ ಮೇಲೆ ಎಷ್ಟು ಒಳ್ಳೆಯ ಪ್ರಭಾವ ಬೀರಿದೆ ನೋಡಿ.
ಇವಲ್ಲದೆ, ತಾಂತ್ರಿಕ ತರಬೇತಿ, ಗ್ರಾಮೀಣ ಉದ್ಯೋಗ ನೀತಿ, ಉದ್ಯಮಶೀಲತೆಯತ್ತ ಸಾಗುವ ಯುವಕರಿಗೆ ಸಹಾಯವಾಗಿ ಅನೇಕ ಉದ್ಯಮಿಗಳು ಹಾಗು ಎನ್‌ಜಿಒಗಳು ನಮ್ಮಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ.

ಹೊರಹೋದವರನ್ನು ಹಿಂತರುವುದು ಮತ್ತು ಇರುವವರನ್ನು ಹೊರ ಹೋಗದ ಹಾಗೆ ವಾತಾವರಣ ಸೃಷ್ಟಿ ಮಾಡುವುದು ಅತ್ಯಂತ ಅಗತ್ಯವಿರುವ ಕ್ರಮಗಳು. ಮರಳಿ ಬಂದ ಹಾಗು ಬೆಳೆಯುತ್ತಿರುವ ಕುಟುಂಬಗಳಿಂದ ಊರುಗಳಲ್ಲಿ ನಾನಾ ವ್ಯವಸ್ಥೆಗಳಿಗೆ ಬೇಡಿಕೆ ಉಂಟಾಗುತ್ತವೆ. ಅಂದರೆ ಶಿಕ್ಷಣ, ಗ್ರಂಥಾಲಯಗಳು, ಚಿತ್ರಮಂದಿರಗಳು, ಮನರಂಜನೆ, ಉದ್ಯಾನವನಗಳು ಇತ್ಯಾದಿ. ಈ ಬೇಡಿಕೆಗಳ ಜೊತೆಗೆ ಮುಖ್ಯವಾಗಿ ಕಾನೂನು ಸುವ್ಯವಸ್ಥೆ ಎಲ್ಲವನ್ನೂ ಒದಗಿಸಿ ಕೊಡುವ ಕೆಲಸ ಸರ್ಕಾರದ್ದು ಹಾಗು ಹೂಡಿಕೆದಾರರದ್ದು ಸಹ. ಆಗಲಾರದ ಕೆಲಸಗಳಂತೂ ಇವಲ್ಲ!

ನಮ್ಮವರ ಮಧ್ಯದಲ್ಲೇ ಮತ್ತೆ ನಡೆಯುವುದು ನೋಡಿ ಮದುವೆ, ಮುಂಜಿ, ನಾಮಕರಣಗಳು. ಜನರನ್ನು ಸೇರಿಸುವುದಕ್ಕೆ ಅವಕಾಶಗಳು ಹಲವು. ಆ ಉಲ್ಲಾಸ, ಉತ್ಸಾಹ ಮತ್ತೆ ಮರಳಿಬರುವುದರಲ್ಲಿ ಯಾವ ಸಂದೇಹವೂ ಇಲ್ಲ. ಮುಂದಿನ ಪೀಳಿಗೆ, ಊರಿನ ಹೊಳೆ ಹಳ್ಳ ಕೆರೆಗಳಲ್ಲಿ ಬಿದ್ದು ಆಡುವ, ನೆಂಟರ ಮನೆಗೆ ನುಗ್ಗಿ ತಿಂಡಿಯನ್ನು ತಿಂದು ಮೈದಾನದಲ್ಲಿ ಆಟವಾಡುವ ದಿನಗಳು ಬಂದೇ ಬರುತ್ತವೆ. ಊರಿನ ಜೀವನಶೈಲಿ ಹಾಗು ಬೆಂಗಳೂರಿನ ಸಂಬಳ ಯಾರಿಗೆ ತಾನೇ ಬೇಡ ಹೇಳಿ?

ಇದನ್ನೂ ಓದಿ: ಗ್ಲೋಕಲ್‌ ಲೋಕ ಅಂಕಣ | ಮೆಟಾವರ್ಸ್ ಮುಂದಿರುವ ಸವಾಲುಗಳು

Exit mobile version