ಅಭಿಲಾಷ್ ಬಿ ಸಿ ಬೆಂಗಳೂರು
ಅದು 1984. ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಕ್ರೀಡಾ ಲೋಕದ ಅತೀ ದೊಡ್ಡ ಕೂಟ, ಒಲಿಂಪಿಕ್ಸ್ ನಡೆಯುತ್ತಿತ್ತು. ಅಥ್ಲೆಟಿಕ್ಸ್‌ನಲ್ಲಿ ಅದುವರೆಗೆ ಯಾವುದೇ ಪದಕಗಳನ್ನು ನೋಡದ ಭಾರತೀಯರಿಗೆ, ಆ ಬಾರಿ ಏನೋ ಒಂದು ವಿಶ್ವಾಸ. ಯಾಕೆಂದರೆ ಟ್ರ್ಯಾಕ್‌ನಲ್ಲಿ ಇದ್ದದ್ದು ಭಾರತದ ಚಿನ್ನದ ಹುಡುಗಿ ಪಿ ಟಿ ಉಷಾ(P. T. Usha). 400 ಮೀಟರ್ ಹರ್ಡಲ್ಸ್ ಆರಂಭವಾಗಿತ್ತು. 20 ವರ್ಷದ ತರುಣೀ ಉಷಾ ಚಿರತೆಯಂತೆ ಓಡಿದ್ದರು. ಒಬ್ಬೊಬ್ಬರನ್ನೇ ಹಿಂದುಕ್ಕುತ್ತಾ ಓಡಿದ ಉಷಾರ ಮುಂದೆ ಇದ್ದಿದ್ದು ಕೇವಲ ಇಬ್ಬರು ಮಾತ್ರ. ಉಷಾ ಗುರಿ ಮುಟ್ಟಿದರು. ಕಂಚಿನ ಪದಕ ಖಾತರಿ, ಲಾಸ್ ಏಂಜಲೀಸ್‌ನಲ್ಲಿ ಭಾರತದ ಧ್ವಜ ರಾರಾಜಿಸಿತು ಎನ್ನುವಷ್ಟರಲ್ಲಿ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಉಂಟಾಯಿತು. ಕೇವಲ 1/100 ಸೆಕೆಂಡ್ ಕೂದಲೆಳೆ ಅಂತರದಲ್ಲಿ ಪಿ.ಟಿ. ಉಷಾ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಕಂಚಿನ ಪದಕವೂ ತಪ್ಪಿತ್ತು. ಜತೆಗೆ ಐತಿಹಾಸಿಕ ಒಲಿಂಪಿಕ್ಸ್ ಪದಕ ಗೆಲ್ಲುವ ಅವಕಾಶದಿಂದ ಪಿ.ಟಿ. ಉಷಾ ವಂಚಿತರಾಗಿದ್ದರು. ಇದು ನಿರಾಸೆಯ ಪ್ರಸಂಗವಾದರೂ ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಇದೊಂದು ಅವಿಸ್ಮರಣೀಯ ಸಂದರ್ಭ. ಅದುವರೆಗೆ ಅಥ್ಲಿಕ್ಸ್ ಕಡೆಗೆ ನಿರಾಸೆಯ ಭಾವ ಹೊಂದಿದ್ದ ಮಂದಿಯೆಲ್ಲ ಕಣ್ಣರಳಿ ನೋಡಿದ ಗಳಿಗೆಯದು. ಉಷಾ ಪದಕ ಗೆಲ್ಲಲಿಲ್ಲ. ಆದರೆ, ಕೋಟ್ಯಂತರ ಭಾರತೀಯರ ಮನ ಗೆದ್ದರು. ಸಾವಿರಾರು ಮಕ್ಕಳು ಅಥ್ಲೆಟಿಕ್ಸ್‌ನತ್ತ ಚಿತ್ತ ಹರಿಸಲು ಕಾರಣರಾದರು.
‘ಚಿನ್ನದ ರಾಣಿ’ ಜತೆಗೆ ‘ಪಯ್ಯೋಳಿ ಎಕ್ಸ್‌ಪ್ರೆಸ್’ ಎಂದು ಪ್ರೀತಿಯಿಂದ ಕರೆಯಲ್ಪಡುವ ಪಿ.ಟಿ. ಉಷಾ ಭಾರತ ಕಂಡ ಅತ್ಯಂತ ಯಶಸ್ವಿ ಕ್ರೀಡಾಪಟುಗಳಲ್ಲಿ ಒಬ್ಬರು. ಸುಮಾರು ಎರಡು ದಶಕಗಳ ಕಾಲ ರನ್ನಿಂಗ್ ಟ್ರ್ಯಾಕ್ ಆಳಿದ ಕೀರ್ತಿ ಇವರದ್ದು. ಪಿ.ಟಿ. ಉಷಾ ಸಾಧನೆ ಇಂದಿಗೂ ಸಾಧನೆ ಮಾಡಬಯಸುವ ಮಹಿಳೆಯರಿಗೆ ಸ್ಫೂರ್ತಿ. ಭಾರತೀಯ ಅಥ್ಲೀಟ್ಗಳಿಗೆ ಐಕಾನ್ ಆಗಿರುವ ಪಿ.ಟಿ. ಉಷಾ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ.
ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಪಿ.ಟಿ. ಉಷಾ ಎಂದಿಗೂ ಮರೆಯಲಾಗದ ಹೆಸರು. ಭಾರತದ ಕ್ರೀಡೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಡಿಮೆ ಇದ್ದ ಸಮಯದಲ್ಲಿ ಇವರು ಮಾಡಿದ ಸಾಧನೆ ಅಮೋಘ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಪಿ.ಟಿ. ಉಷಾ ಮುಡಿಗೆ ಇದೀಗ ಮತ್ತೊಂದು ಗರಿಮೆಯಂತೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಸ್ಥಾನ ಒದಗಿ ಬಂದಿದೆ. ಈ ಸ್ಥಾನಕ್ಕೆ ಪಿ.ಟಿ. ಉಷಾ ಅವರ ಅವಿರೋಧ ಆಯ್ಕೆ ಖಚಿತವಾಗಿದ್ದು, ಡಿಸೆಂಬರ್ 10ರಂದು ಅಧಿಕೃತ ಘೋಷಣೆ ಹೊರಬೀಳಲಿದೆ.
ಬಡತನದಲ್ಲಿ ಅರಳಿದ ಪ್ರತಿಭೆ
ಪಿಲವುಲ್ಲಕಂಡಿ ತೆಕ್ಕಪರಂಬಿಲ್ ಉಷಾ ಉರುಫ್ ಪಿ.ಟಿ. ಉಷಾ ಜನಿಸಿದ್ದು 1964 ಜೂನ್ 27ರಂದು ಕೇರಳದಲ್ಲಿ. ಕೋಯಿಕ್ಕೋಡ್ ಜಿಲ್ಲೆಯ ಕೂತಲಿ ಗ್ರಾಮದ ಇಪಿಎಂ ಪೈತಲ್ ಮತ್ತು ಟಿ.ವಿ ಲಕ್ಷ್ಮಿ ದಂಪತಿಗಳ ಪುತ್ರಿಯಾದ ಪಿ.ಟಿ. ಉಷಾ ಬಾಲ್ಯದ ದಿನಗಳನ್ನು ಕಳೆದದ್ದು ತ್ರಿಕೊಟ್ಟೂರು ಮತ್ತು ಪಯ್ಯೋಳಿಯಲ್ಲಿ. ಬಾಲ್ಯದಲ್ಲಿ ಪಿ.ಟಿ. ಉಷಾ ತುಂಬಾ ಕಷ್ಟದ ದಿನಗಳನ್ನು ಕಂಡಿದ್ದರು. ಬಡತನದಿಂದ ಬಾಲ್ಯದಲ್ಲಿ ಪೌಷ್ಟಿಕ ಆಹಾರದ ಕೊರತೆಯಿಂದ ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು ಪಿ.ಟಿ. ಉಷಾ ಆದರೂ ಈ ಎಲ್ಲ ಕಷ್ಟವನ್ನು ಮೀರಿ ಅವರು ಮಾಡಿದ ಸಾಧನೆ ಎಲ್ಲರಿಗೂ ಸ್ಫೂರ್ತಿ.
ಪಿ.ಟಿ. ಉಷಾ ಅವರ ಜೀವನ ಕೇವಲ ಬಡತನದಿಂದ ಮಾತ್ರ ಕೂಡಿರಲಿಲ್ಲ. ಮಹಿಳೆಯರಿಗೆ ಪ್ರಾತಿನಿಧ್ಯ ಕಡಿಮೆ ಇದ್ದ ಕಾಲವದು ಮತ್ತು ಜಾತಿ ವ್ಯವಸ್ಥೆಯಿಂದಲೂ ಹಲವು ನಿಂದನೆಯನ್ನು ಅನುಭವಿಸಿದ ಅವರು ಬೆಂಕಿಯಲ್ಲಿ ಅರಳಿದ ಹೂವು ಎಂದರೂ ತಪ್ಪಾಗಲಾರದು.
ಗಂಜಿ ಕುಡಿದು ಫೈನಲ್ ಓಡಿದ ಉಷಾ
1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಪಿ.ಟಿ ಉಷಾರ ಮೇಲೆ ಇಡೀ ದೇಶವೇ ಭರವಸೆ ಇಟ್ಟುಕೊಂಡಿತ್ತು. ಆದರೆ ಅತ್ಯಂತ ಸಣ್ಣ ಅಂತರದಲ್ಲಿ ಪಿ.ಟಿ. ಉಷಾ ಕಂಚಿನ ಪದಕದಿಂದ ವಂಚಿತರಾದರು. ಇದಕ್ಕೆ ಕಾರಣ ಏನೆಂಬುವುದನ್ನು ಪಿ.ಟಿ. ಉಷಾ ಇತ್ತೀಚಿನ ಒಂದು ಸಂದರ್ಶನಲ್ಲಿ ಹೇಳಿಕೊಂಡಿದ್ದರು. ಆ ಸಮಯದಲ್ಲಿ ಸರಿಯಾದ ಆಹಾರವೇ ಸಿಕ್ಕಿರಲಿಲ್ಲ. ನಾನು ಸ್ಪರ್ಧೆಯ ದಿನ ಗಂಜಿ ಸೇವಿಸಿ ಹೋಗಿದ್ದೆ. ಹೀಗಾಗಿ ಓಟದ ಅಂತ್ಯದಲ್ಲಿ ಸುಸ್ತಾಗಿತ್ತು ಹೇಳಿಕೊಂಡಿದ್ದರು.
1988ರ ಸಿಯೋಲ್ ಒಲಿಂಪಿಕ್ಸ್ ವೇಳೆ ಗಾಯಗೊಂಡ ಉಷಾ ಪದಕ ಗೆಲ್ಲಲಾಗಲಿಲ್ಲ. ನಂತರ 1990ರ ಬೀಜಿಂಗ್ ಏಷ್ಯನ್ ಗೇಮ್ಸ್‌ನಲ್ಲಿ ಮೂರು ಪದಕ ಗೆದ್ದ ಪಿ.ಟಿ ಉಷಾ ಅದೇ ವರ್ಷ ವಿದಾಯ ಹೇಳಿದರು. 1991ರಲ್ಲಿ ವಿ ಶ್ರೀನಿವಾಸ್ ಎಂಬವರನ್ನು ಉಷಾ ವಿವಾಹವಾದರು. 1998ರ ಏಷ್ಯನ್ ಗೇಮ್ಸ್‌ನಲ್ಲಿ ಮತ್ತೆ ಟ್ರ್ಯಾಕ್ಗೆ ಮರಳಿದ ಪಯ್ಯೋಲಿ ಎಕ್ಸ್‌ಪ್ರೆಸ್ ಉಷಾ 200 ಮೀಟರ್ ಓಟದಲ್ಲಿ ಹೊಸ ರಾಷ್ಟ್ರೀಯ ದಾಖಲೆ ಬರೆದಿದ್ದರು.
ಪಿ.ಟಿ ಉಷಾ 1983ರಿಂದ 1998ರ ಅವಧಿಯಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 23 ಪದಕಗಳನ್ನು ಜಯಿಸಿದ್ದರು. ಇದರಲ್ಲಿ 14 ಚಿನ್ನ ಹಾಗೂ 6 ಬೆಳ್ಳಿ ಪದಕಗಳು ಸೇರಿವೆ. ಇನ್ನು 1985ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಿ.ಟಿ ಉಷಾ 5 ಚಿನ್ನ ಹಾಗೂ ಒಂದು ಕಂಚಿನ ಪದಕ ಜಯಿಸಿದ್ದು, ಇಂದಿಗೂ ಆ ದಾಖಲೆ ಅಚ್ಚಳಿಯದೇ ಉಳಿದಿದೆ. ಇದಾದ ಮರು ವರ್ಷವೇ ಸಿಯೋಲ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 4 ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಜಯಿಸಿ ಭಾರತದ ಪಾಲಿಗೆ ಅಥ್ಲೆಟಿಕ್ಸ್‌ನಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ತಮ್ಮ ವೃತ್ತಿ ಜೀವನದ ಬಳಿಕ ಯುವ ಅಥ್ಲಿಟ್‌ಗಳಿಗೆ ತರಬೇತಿ ನೀಡಲು ಮುಂದಾದ ಪಿ.ಟಿ.ಉಷಾ ಕೇರಳದ ಕೊಯಿಲಾಂಡಿಯಲ್ಲಿ ಅಥ್ಲೆಟಿಕ್ ಶಾಲೆಯನ್ನು ಪ್ರಾರಂಭಿಸಿದ್ದಾರೆ. 10-12 ವಯೋಮಾನದ ಮಕ್ಕಳನ್ನು ಆಯ್ಕೆ ಮಾಡಿ ಅವರನ್ನು ದೇಶದ ಅಥ್ಲಿಟ್ ಕ್ಷೇತ್ರಕ್ಕೆ ಪರಿಚಯಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಭಾರತದ ಅಥ್ಲೆಟಿಕ್ಸ್ ಲೋಕದಲ್ಲಿ ಹೊಸ ಶಕೆ
ರೇಸ್ ಟ್ರ್ಯಾಕ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದದಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದ ಮಹಾನ್ ಸಾಧಕಿ ಪಿಟಿ ಉಷಾ ಇದೀಗ ವೃತ್ತಿ ಜೀವನದಲ್ಲಿ ಹೊಸ ಸಾಧನೆ ಮಾಡಲಿದ್ದಾರೆ. ಅವರು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆಯಾಗಿ ಆಯ್ಕೆಯಾಗಲಿದ್ದಾರೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಖಚಿತವಾಗಿದ್ದು, ಡಿಸೆಂಬರ್ 10ರಂದು ಅಧಿಕೃತ ಘೋಷಣೆ ಹೊರಬೀಳಲಿದೆ. ಇದರೊಂದಿಗೆ ಐಒಎಯ 95 ವರ್ಷಗಳ ಇತಿಹಾಸದಲ್ಲಿ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಲಿರುವ ಮೊದಲ ಒಲಿಂಪಿಯನ್ ಮತ್ತು ಅಂತಾರಾಷ್ಟ್ರೀಯ ಪದಕ ವಿಜೇತೆ ಎಂಬ ಗೌರವ ಉಷಾ ಅವರ ಪಾಲಾಗಲಿದೆ.
ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಪಿಟಿ ಉಷಾ ಈ ಹುದ್ದೆಗೇರಿದ ಮೊದಲ ಮಹಿಳಾ ಅಭ್ಯರ್ಥಿ ಎನಿಸಿಕೊಳ್ಳಲಿದ್ದಾರೆ. ಡಿ.10ರಂದು ನಡೆಯಲಿರುವ ಈ ಚುನಾವಣೆಗೆ ಪಿ.ಟಿ.ಉಷಾ ಅವರೊಬ್ಬರೇ ಅಭ್ಯರ್ಥಿಯಾಗಿದ್ದು, ನಾಮಪತ್ರ ಸಲ್ಲಿಸುವ ಗಡುವು ನವೆಂಬರ್ 27ಕ್ಕೆ ಮುಕ್ತಾಯವಾಗಿದೆ. ಹೀಗಾಗಿ ಪಿ.ಟಿ.ಉಷಾ ಅಧ್ಯಕ್ಷರಾಗುವುದು ಖಚಿತವಾಗಿದೆ. ಇದರೊಂದಿಗೆ ಕ್ರೀಡಾ ಸಂಘಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಮಾಜಿ ಆಟಗಾರ್ತಿಯರ ಪಟ್ಟಿಗೆ ಪಿಟಿ ಉಷಾ ಅವರ ಹೆಸರೂ ಸೇರ್ಪಡೆಯಾಗಲಿದೆ.
ಹಲವು ನಿರೀಕ್ಷೆ ಮತ್ತು ಸವಾಲು
ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಟಿ. ಉಷಾ ಅವರ ಅಧಿಕಾರಾವಧಿಯಲ್ಲಿ ಭಾರಿ ನಿರೀಕ್ಷೆ ಇರಿಸಲಾಗಿದೆ. ತಾನು ಕೂಡ ಬಡತನದಲ್ಲಿ ಬೆಳೆದು ಬಂದ ಕಾರಣ ಅವರಿಗೆ ಅಥ್ಲಿಟ್‌ಗಳ ಕಷ್ಟವನ್ನು ಅರ್ಥಮಾಡಿಕೊಳ್ಳಲು ಇನ್ನೊಬ್ಬರ ನೆರವು ಬೇಕಾಗಿಲ್ಲ.ಆದ್ದರಿಂದ ಇವರ ಅವಧಿಯಲ್ಲಿ ಭಾರತದ ಅಥ್ಲೆಟಿಕ್ ಕ್ಷೇತ್ರ ಪ್ರಗತಿ ಕಾಣುವ ನಂಬಿಕೆಯೊಂದನ್ನು ಇರಿಸಬಹುದಾಗಿದೆ. ಜತೆಗೆ 2024ರಲ್ಲಿ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೆ ಬಲಿಷ್ಠ ಕ್ರೀಡಾ ಪಟುಗಳನ್ನು ಸಿದ್ಧಪಡಿಸಿ ಇಲ್ಲಿ ಅಮೋಘ ಪ್ರದರ್ಶನ ತೋರುವಂತೆ ಮಾಡುವ ಬಲು ದೊಡ್ಡ ಸವಾಲು ಕೂಡ ಅವರ ಮುಂದಿದೆ.
ಒ. ಎಂ. ನಂಬಿಯಾರ್ ಗರಡಿಯಲ್ಲಿ ಬೆಳೆದ ಪ್ರತಿಭೆ
ದೇಶದ ಅತ್ಯಂತ ಪ್ರಖ್ಯಾತ ಅಥ್ಲೆಟಿಕ್ಸ್ ಕೋಚ್‌ಗಳಲ್ಲಿ ಅಗ್ರಗಣ್ಯರೆನಿಸಿಕೊಂಡಿದ್ದ ನಂಬಿಯಾರ್, ಚಿಕ್ಕ ವಯಸ್ಸಿನಲ್ಲೇ ಪಿ.ಟಿ. ಉಷಾ ಅವರ ಪ್ರತಿಭೆಯನ್ನು ಗುರುತಿಸಿದ್ದರು. ಹಳ್ಳಿ ಹುಡುಗಿಯಾಗಿದ್ದ ಪಿ.ಟಿ. ಉಷಾ ಅವರಲ್ಲಿ ಸಾಧಿಸುವ ಛಲ ಇದೆ ಎಂದು ಅರಿತ ನಂಬಿಯಾರ್ ಅವರು ಉತ್ತಮ ಮಾರ್ಗದರ್ಶನ ನೀಡಿದರು. ಅದರಂತೆ 1976ರಲ್ಲಿ ಕಣ್ಣೂರು ಸ್ಪೋರ್ಟ್ಸ್ ಡಿವಿಷನ್‌ನಲ್ಲಿ ಉಷಾ ಅವರಿಗೆ ಕೋಚಿಂಗ್ ನೀಡಲಾರಂಭಿಸಿದ್ದರು. ನಂಬಿಯಾರ್ ಮಾರ್ಗದರ್ಶನದಲ್ಲಿ ಓಟದ ಸ್ಪರ್ಧೆಯಲ್ಲಿ ಪಿ.ಟಿ. ಉಷಾ ಏಷ್ಯನ್ ಗೇಮ್ಸ್‌ಗಳಲ್ಲಿ ಪದಕದ ಬೇಟೆಯಾಡಿದ್ದರು. ಇಲ್ಲಿಂದ ಪಿ.ಟಿ. ಉಷಾ ಅವರ ಅದೃಷ್ಟವೇ ಬದಲಾಯಿತು. ಒಂದೊಂದೆ ಯಶಸ್ಸಿನ ಮಟ್ಟಿಲನ್ನು ಏರಲು ಆರಂಭಿಸಿ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದರು. ಪಿ.ಟಿ. ಉಷಾ ಏಷ್ಯಾದಲ್ಲಿ ಮನೆಮಾತಾಗಿರುವ ಅಥ್ಲೀಟ್ ಎನಿಸಿಕೊಳ್ಳುವಲ್ಲಿ ನಂಬಿಯಾರ್ ಪಾತ್ರ ಅನನ್ಯ.
ಪ್ರಶಸ್ತಿಗಳು
1983ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ಪಿ ಟಿ ಉಷಾ, 1985ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತನ್ನ ಓಟದ ಜೀವನದಲ್ಲಿ ಒಟ್ಟು 101 ಪದಕಗಳಿಗೆ ಕೊರಳೊಡ್ಡಿದ್ದ ಉಷಾ, ಶತಮಾನದ ಕ್ರೀಡಾಪಟು ಎಂಬ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ. ಜತೆಗೆ ರಾಜ್ಯಸಭಾ ಸದಸ್ಯರು ಆಗಿದ್ದಾರೆ.
ಇದನ್ನೂ ಓದಿ | ವಾರದ ವ್ಯಕ್ತಿ ಚಿತ್ರ | ರಾಮ್- ಅನಿಲ್ ಸುತಾರ್ ಶಿಲ್ಪಿಗಳ ಖ್ಯಾತಿ ಜಗದಗಲ