Site icon Vistara News

Brand story : ಫ್ಲಿಪ್‌ ಕಾರ್ಟ್‌ನ ಮಾಜಿ ಉದ್ಯೋಗಿ ಸಮೀರ್ ಆರಂಭಿಸಿದ ಫೋನ್‌ ಪೇ, 99,000 ಕೋಟಿ ರೂ. ಕಂಪನಿಯಾಗಿದ್ದು ಹೇಗೆ?

phonepe

phonepe

ಫೋನ್‌ಪೇ! (PhonePe) ಭಾರತದ ಈ ಪ್ರಮುಖ ಮೊಬೈಲ್‌ ಪೇಮೆಂಟ್‌ ಆ್ಯಪ್‌ನ ಹೆಸರು ಈಗ ಮನೆಮಾತಾಗಿದೆ. ‌(Brand story) 35 ಕೋಟಿ ಬಳಕೆದಾರರನ್ನು ಇದು ಹೊಂದಿದೆ ಎಂದರೆ ಕಳೆದ 8 ವರ್ಷಗಳಲ್ಲಿ ಇದು ಗಳಿಸಿರುವ ಜನಪ್ರಿಯತೆಯನ್ನು ಊಹಿಸಿ.

ಬೆಂಗಳೂರು ಮೂಲದ ಫೋನ್‌ಪೇ, ಇದೀಗ ತನ್ನ ಹೈಪರ್‌ ಲೋಕಲ್‌ ಆ್ಯಪ್‌ ಪಿನ್‌ಕೋಡ್‌ (Pincode) ಅನ್ನು ಬಿಡುಗಡೆಗೊಳಿಸಿದೆ. ಇದರೊಂದಿಗೆ ಇ-ಕಾಮರ್ಸ್‌ ವಹಿವಾಟನ್ನು ಆರಂಭಿಸಿದೆ. ಪಿನ್‌ಕೋಡ್‌ ಆ್ಯಪ್‌ ಸ್ಥಳೀಯ ಅಂಗಡಿಗಳ ಜತೆಗೆ ಕಾರ್ಯನಿರ್ವಹಿಸಲಿದೆ. ಭವಿಷ್ಯದಲ್ಲಿ ಬ್ಯಾಂಕೇತರ ಹಣಕಾಸು ಸಂಸ್ಥೆ ಆರಂಭಿಸಲೂ ಫೋನ್‌ ಪೇ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ. ಗಮನಾರ್ಹ ಅಂಶವೆಂದರೆ, ವಾಲ್‌ ಮಾರ್ಟ್‌, ಜನರಲ್‌ ಅಟ್ಲಾಂಟಿಕ್‌, ಮೈಕ್ರೊಸಾಫ್ಟ್‌, ಕತಾರ್‌ ಇನ್ವೆಸ್ಟ್‌ಮೆಂಟ್‌ ಅಥಾರಿಟಿ, ಟೈಗರ್‌ ಗ್ಲೋಬಲ್‌ ಮುಂತಾದ ಜಾಗತಿಕ ಮಟ್ಟದ ಹೂಡಿಕೆದಾರ ಕಂಪನಿಗಳು ಫೋನ್‌ ಪೇಯಲ್ಲಿ ಹೂಡಿಕೆ ಮಾಡಿವೆ. 2023ರ ಆರಂಭದಲ್ಲಿಯೇ ಫೋನ್‌ ಪೇ 250 ಕೋಟಿ ರೂ. ಹೂಡಿಕೆಯನ್ನು ಗಳಿಸಿದೆ. ಇದರ ಪರಿಣಾಮ ಇವತ್ತು ಕಂಪನಿಯ ಮಾರುಕಟ್ಟೆ ಮೌಲ್ಯ 99,000 ಕೋಟಿ ರೂ.ಗೆ ಏರಿದೆ!

ಕ್ರಮೇಣ ನಾನಾ ನಗರ ಮತ್ತು ಪಟ್ಟಣಗಳಿಗೆ ಪಿನ್‌ಕೋಡ್‌ ವಿಸ್ತರಣೆಯಾಗಲಿದೆ ಎಂದು ಫೋನ್‌ಪೇ ತಿಳಿಸಿದೆ. ಪಿನ್‌ಕೋಡ್‌ ಸದ್ಯಕ್ಕೆ ದಿನಸಿ, ಔಷಧ, ಆಹಾರ, ಎಲೆಕ್ಟ್ರಾನಿಕ್ಸ್‌, ಗೃಹಾಲಂಕಾರ ವಲಯದ ವಹಿವಾಟಿಗೆ ಆದ್ಯತೆ ನೀಡಿದೆ. 2020-21ರಲ್ಲಿ 690 ಕೋಟಿ ರೂ. ವಹಿವಾಟು ನಡೆಸಿದೆ.

ಮಾಜಿ ಉದ್ಯೋಗಿ ಸ್ಥಾಪಿಸಿದ ಫೋನ್‌ಪೇಯನ್ನು ತಾನೇ ಖರೀದಿಸಿದ ಫ್ಲಿಪ್‌ಕಾರ್ಟ್!

ಫೋನ್‌ ಪೇ ಸ್ಥಾಪಕ ಸಮೀರ್‌ ನಿಗಮ್

ಫ್ಲಿಪ್‌ಕಾರ್ಟ್‌ ಬಿಟ್ಟಿದ್ದ ಸಮೀರ್‌ ನಿಗಮ್‌ (Sameer Nigam) ಅವರು 2015ರ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಫೋನ್‌ಪೇಯನ್ನು ಸ್ಥಾಪಿಸಿದರು. ಇದಾಗಿ ಕೇವಲ ನಾಲ್ಕೇ ತಿಂಗಳಿನಲ್ಲಿ ಸ್ವತಃ ಫ್ಲಿಪ್‌ ಕಾರ್ಟ್‌ ಫೋನ್‌ಪೇಯನ್ನು ಖರೀದಿಸಿತ್ತು. ಕೆಲ ವರದಿಗಳ ಪ್ರಕಾರ ಫ್ಲಿಪ್‌ ಕಾರ್ಟ್‌ 20 ದಶಲಕ್ಷ ಡಾಲರ್‌ ಕೊಟ್ಟಿತ್ತು. (164 ಕೋಟಿ ರೂ.) ಬಳಿಕ ಫೋನ್‌ ಪೇಯನ್ನು ಫ್ಲಿಪ್‌ ಕಾರ್ಟ್‌ನಿಂದ (Flipkart) ಬೇರ್ಪಡಿಸಿ ಸ್ವತಂತ್ರ ಸಂಸ್ಥೆಯಾಗಿಸಲಾಯಿತು. ನಂತರ ಅಮೆರಿಕದ ವಾಲ್‌ ಮಾರ್ಟ್‌ಗೆ ಫೋನ್‌ ಪೇಯ ಷೇರುಗಳನ್ನು ಮಾರಾಟ ಮಾಡಲಾಯಿತು.

ಸಮೀರ್‌ ಅವರಿಗೆ ಫೋನ್‌ ಪೇ ಸ್ಥಾಪನೆಯಲ್ಲಿ ಸಹ ಸಂಸ್ಥಾಪಕರಾಗಿ ಕೈ ಜೋಡಿಸಿದವರು ರಾಹುಲ್‌ ಚಾರಿ ಮತ್ತು ಬರ್ಜಿನ್‌ ಎಂಜಿನಿಯರ್.‌ ಇದಕ್ಕೂ ಮುನ್ನ ಸಮೀರ್‌ ನಿಗಮ್‌ ಅವರು ಇ-ಕಾಮರ್ಸ್‌ ವಲಯದ ಫ್ಲಿಪ್‌ಕಾರ್ಟ್‌ಗೆ 2011ರಲ್ಲಿ ಸೇರಿದ್ದರು. ಬಳಿಕ ಎಂಜಿನಿಯರಿಂಗ್‌ ಎಸ್‌ವಿಪಿ ಹಾಗೂ ಮಾರ್ಕೆಟಿಂಗ್‌ ವಿಪಿ ಆಗಿದ್ದರು. ಫ್ಲಿಪ್‌ ಕಾರ್ಟ್‌ Mime360 ಎಂಬ ಸ್ಟಾರ್ಟಪ್‌ ಅನ್ನು ಖರೀದಿಸಿದಾಗ ಅದರ ಪ್ರಾಡಕ್ಟ್‌ ಡೈರೆಕ್ಟರ್‌ ಆದರು. ವಾರ್ಟನ್‌ ಬಿಸಿನೆಸ್‌ ಸ್ಕೂಲ್‌ನಿಂದ ವಾರ್ಟನ್‌ ವೆಂಚರ್‌ ಅವಾರ್ಡ್‌ ಅನ್ನೂ ಸಮೀರ್‌ ಗಳಿಸಿದ್ದಾರೆ. ಅಮೆರಿಕದ ಯೂನಿವರ್ಸಿಟಿ ಆಫ್‌ ಅರಿಜೋನಾದಿಂದ ಕಂಪ್ಯೂಟರ್‌ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನೂ ಗಳಿಸಿದ್ದಾರೆ.

ಫೋನ್‌ಪೇ ಬ್ರಾಂಡ್‌ನ ಯಶಸ್ಸಿನ ರೂವಾರಿ ಸಮೀರ್‌ ನಿಗಮ್‌, ನವ ದೆಹಲಿಯಲ್ಲಿ 1978ರಲ್ಲಿ ಜನಿಸಿದರು. ಬಳಿಕ ಕುಟುಂಬ ಮುಂಬಯಿಗೆ ತೆರಳಿತು. ಮುಂಬಯಿನಿಂದ ಬೆಂಗಳೂರಿಗೆ ಅವರ ಜರ್ನಿ ನಡೆಯಿತು. ಬಳಿಕ ಬೆಂಗಳೂರೇ ಅವರ ಕರ್ಮಭೂಮಿಯಾಯಿತು. ಮೂಲತಃ ನೋಯ್ಡಾದ ಸಮೀರ್‌ ಅಲ್ಲಿನ ದಿಲ್ಲಿ ಪಬ್ಲಿಕ ಸ್ಕೂಲ್‌ನಲ್ಲಿ ಓದಿದರು. ಬಳಿಕ ಮುಂಬಯಿ ವಿವಿಯಲ್ಲಿ ಕಂಪ್ಯೂಟರ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಮುಗಿಸಿದರು. ವಾರ್ಟನ್‌ ಸ್ಕೂಲ್‌ನಲ್ಲಿ ಎಂಬಿಎ ಅನ್ನೂ ಪೂರ್ಣಗೊಳಿಸಿದ್ದಾರೆ.

ಫೋನ್‌ ಪೇ ಅತ್ಯಲ್ಪ ಅವಧಿಯಲ್ಲಿ ಒಂದಾದರೊಂದರಂತೆ ಸಾಧನೆಯ ಮೈಲಿಗಲ್ಲುಗಳನ್ನು ದಾಖಲಿಸುತ್ತಾ ಹೋಯಿತು. ಫೋನ್‌ಪೇ 11 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಫೋನ್‌ ಪೇ ಬಳಸಿ ಹಳ ಕಳಿಸುವುದು, ಪಡೆಯುವುದು, ಮೊಬೈಲ್‌ , ಡಿಟಿಎಚ್‌, ಡೇಟಾ ಕಾರ್ಡ್‌ ರಿಚಾರ್ಜ್‌, ಯುಟಿಪಿಲಿ ಪೇಮೆಂಟ್‌ ಮಾಡಬಹುದು. ಟ್ಯಾಕ್ಸ್‌ ಸೇವಿಂಗ್‌ ಫಂಡ್‌, ಲಿಕ್ವಿಡ್‌ ಫಂಡ್‌, ವಿಮೆ, ಮ್ಯೂಚುವಲ್‌ ಫಂಡ್‌ ಖರೀದಿಸಬಹುದು. ಡಿಜಿಟಲ್‌ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 5 ಕೋಟಿ ಡೌನ್‌ ಲೋಡ್‌ ಆದ ಮೊದಲ ಪೇಮೆಂಟ್‌ ಅಪ್ಲಿಕೇಶನ್‌ ಫೋನ್‌ ಪೇ ಆಗಿದೆ. 2021ರಲ್ಲಿ ಮಾಸಿಕ 100 ಕೋಟಿ ಟ್ರಾನ್ಸಕ್ಷನ್ಸ್‌ ನಡೆಸಿದ ಮೊದಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ ಕೂಡ ಫೋನ್‌ ಪೇ ಆಗಿತ್ತು.

ಸಂಶೋಧನೆ ಮತ್ತು ವೇಗ:

ಫೋನ್‌ ಪೇ ಬಿಸಿನೆಸ್ ಕಾರ್ಯತಂತ್ರವೇನು?

ಬಳಕೆದಾರರ ಹಲವಾರು ಅಗತ್ಯಗಳನ್ನು ತಂತ್ರಜ್ಞಾನದ ಆವಿಷ್ಕಾರದಿಂದ ಪೂರೈಸುವುದು ಹಾಗೂ ಆ ಮೂಲಕ ವೇಗವಾಗಿ ಮಾರುಕಟ್ಟೆಯಲ್ಲಿ ಬೆಳೆಯುವುದು ಫೋನ್‌ಪೇಯ ಬ್ರಾಂಡ್‌ ಯಶಸ್ಸಿಗೆ ಕಾರಣ. ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ಫೋನ್‌ಪೇ ಶರವೇಗದಲ್ಲಿ ಪ್ರಗತಿ ದಾಖಲಿಸಿತು. 2021ರ ಡಿಸೆಂಬರ್‌ ವೇಳೆಗೆ ಫೋನ್‌ಪೇ 2.5 ಕೋಟಿ ಕಿರಾಣಾ ಅಂಗಡಿಗಳನ್ನು ಡಿಜಿಟಲೀಕರಣಗೊಳಿಸಿರುವುದಾಗಿ ಘೋಷಿಸಿತು. ಅಂದರೆ ಅಷ್ಟು ಅಂಗಡಿಗಳಲ್ಲಿ ಫೋನ್‌ಪೇ ಲಭಿಸುವಂಥಾಗಿತ್ತು. ದೇಶದ 15,700 ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಂಪನಿಯ ಮರ್ಚೆಂಟ್‌ ನೆಟ್‌ ವರ್ಕ್‌ ಇದೆ. 2022ರ ಮೊದಲ 9 ತಿಂಗಳುಗಳಲ್ಲಿ ಕಂಪನಿ 1913 ಕೋಟಿ ರೂ. ಆದಾಯ ಗಳಿಸಿತ್ತು. ಹೀಗಿದ್ದರೂ, ಈಗಲೂ ಫೋನ್‌ಪೇ ಲಾಭದಲ್ಲಿಲ್ಲ, ಆದರೆ ವರ್ಷದಿಂದ ವರ್ಷಕ್ಕೆ ನಷ್ಟ ಕಡಿಮೆಯಾಗುತ್ತಿದೆ. ಆಡಿಟ್‌ ಕಂಪನಿ ಕೆಪಿಎಂಜಿ ಪ್ರಕಾರ ಫೋನ್‌ಪೇ 2025ರ ವೇಳೆಗೆ 1797 ಕೋಟಿ ರೂ. ಲಾಭ ಪಡೆಯಬಹುದು. ಆಗ ಫೋನ್‌ ಪೇ 9,139 ಕೋಟಿ ರೂ. ಆದಾಯ ಗಳಿಸಬಹುದು ಎಂಬ ಲೆಕ್ಕಾಚಾರ ಕಂಪನಿಯದ್ದಾಗಿದೆ. ಫೋನ್‌ಪೇ ಲಾಭದ ಹಳಿಗೆ ಬಂದ ಬಳಿಕ ಐಪಿಒ ಮಾಡುವುದಾಗಿ ಸಮೀರ್‌ ನಿಗಮ್‌ ಹೇಳುತ್ತಾರೆ.

ಇಂಥ ಡಿಜಿಟಲ್‌ ಪೇಮೆಂಟ್‌ ಸ್ಟಾರ್ಟಪ್‌ಗಳು ಮಾರುಕಟ್ಟೆ ಅಭಿಯಾನಕ್ಕೆ ಕೋಟ್ಯಂತರ ರೂ.ಗಳನ್ನು ವ್ಯಯಿಸಬೇಕಾಗುತ್ತದೆ. 2021-22ರಲ್ಲಿ ಫೋನ್‌ಪೇಗೆ ಒಟ್ಟು ಮಾರುಕಟ್ಟೆ ವೆಚ್ಚ 866 ಕೋಟಿ ರೂ.ಗಳಾಗಿತ್ತು. 2021ರಲ್ಲಿ ಐಸಿಸಿ ಕ್ರಿಕೆಟ್‌ ವರ್ಲ್ಡ್‌ ಕಪ್‌ ವೇಳೆ ವಿಮೆ ವಿತರಣೆ ಬಿಸಿನೆಸ್‌ ಸಲುವಾಗಿ ಮಾರ್ಕೆಂಟಿಂಗ್‌ ಕ್ಯಾಂಪೇನ್‌ ನಡೆಸಿತ್ತು. 2022ರ ಐಪಿಎಲ್‌ ವೇಳೆಯೂ ಜಾಹೀರಾತು ನೀಡಿತ್ತು. 2021-22ರಲ್ಲಿ ಉದ್ಯೋಗಿಗಳ ವೇತನ, ಭತ್ಯೆ ಸಲುವಾಗಿ 162 ಕೋಟಿ ರೂ. ವ್ಯಯಿಸಿತ್ತು. ಆದರೆ ವೇಗವಾಗಿ ಮಾರುಕಟ್ಟೆಯಲ್ಲಿ ಬೆಳೆದಿರುವುದರಿಂದ ಅದರದ್ದೇ ಅನುಕೂಲವನ್ನು ಫೋನ್‌ಪೇ ಗಳಿಸಿದೆ. ಪ್ರತಿಸ್ಪರ್ಧಿಗಳಿಗಿಂತ ಮುಂಚೂಣಿಯಲ್ಲಿರಲು ಸಹಕಾರಿಯಾಗಿದೆ. ಆದರೆ ಅದೇ ಸಂದರ್ಭ ಸ್ಪರ್ಧಾತ್ಮಕತೆಯನ್ನು ಉಳಿಸಿಕೊಳ್ಳಬೇಕಾದರೆ ಆವಿಷ್ಕಾರ ಜೀವ ದ್ರವ್ಯ. ಆದ್ದರಿಂದಲೇ ಇದೀಗ ಇ-ಕಾಮರ್ಸ್‌ ಸೇರಿದಂತೆ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ.

ಫೋನ್‌ ಪೇ ಆದಾಯದ ಮೂಲ ಯಾವುದು?

ಫೋನ್‌ ಪೇ ತನ್ನದೇ ಪೇಮೆಂಟ್‌ ಬ್ಯಾಂಕ್‌ ಹೊಂದಿಲ್ಲ. ನೀವು ಇದರ ಮೂಲಕ ವರ್ಗಾವಣೆ ನಡೆಸಿದಾಗ ನಾನಾ ಕ್ಯಾಶ್‌ ಬ್ಯಾಕ್‌ ಆಫರ್‌ಗಳೂ ಸಿಗಬಹುದು. ಹಾಗಾದರೆ ಫೋನ್‌ ಪೇ ಹೇಗೆ ದುಡ್ಡು ಗಳಿಸುತ್ತದೆ? ಕಂಪನಿಗೆ ಮುಖ್ಯವಾಗಿ ರಿಚಾರ್ಜ್‌ ಮತ್ತು ಬಿಲ್‌ ಪೇಮೆಂಟ್‌ ವಿಭಾಗದಲ್ಲಿ ಆದಾಯ ಸಿಗುತ್ತದೆ. ಸಾಂಪ್ರದಾಯಿಕ ಪೇಮೆಂಟ್‌ ಪದ್ಧತಿಗಳಿಗೆ ಪರ್ಯಾಯವಾಗಿ ಫೋನ್‌ ಪೇ ಡಿಜಿಟಲ್‌ ಪೇಮೆಂಟ್‌ ಸೇವೆ ಒದಗಿಸಿ ಗ್ರಾಹಕರನ್ನು ಆಕರ್ಷಿಸುತ್ತದೆ. ಇದಕ್ಕೆ ಪ್ರತಿಯಾಗಿ ಕಮೀಶನ್‌ ಪಡೆಯುತ್ತದೆ. ಉದಾಹರಣೆಗೆ ಫೋನ್‌ ಪೇ ಹಲವಾರು ವೆಬ್‌ ಸೈಟ್‌ಗಳ ಜತೆಗೆ ಪಾಲುದಾರಿಕೆ ವಹಿಸುತ್ತದೆ. ಅದು ಟಿಕೆಟ್‌ ಬುಕಿಂಗ್‌, ಟ್ರಾವೆಲ್‌, ಇ-ಕಾಮರ್ಸ್‌ ವೆಬ್‌ ತಾಣಗಳಿರಬಹುದು. ಅವುಗಳಿಗೆ ನೀಡುವ ಸೇವೆಗೆ ಪ್ರತಿಯಾಗಿ ಕಮೀಶನ್‌ ಅನ್ನು ಫೋನ್‌ ಪೇ ಪಡೆಯುತ್ತದೆ.

ವಿದೇಶದಲ್ಲೂ ಫೋನ್‌ ಪೇ ಬಳಕೆ:

ಫೋನ್‌ಪೇ ( PhonePe) ಬಳಕೆದಾರರು ಯುಪಿಐ ಮೂಲಕ ವಿದೇಶಗಳಲ್ಲಿ ಕೂಡ ಹಣ ಪಾವತಿ ಮಾಡಬಹುದು. ನೀವು ವಿದೇಶಗಳಿಗೆ ಪ್ರಯಾಣ ಮಾಡುವಾಗ ಇದರಿಂದ ಅನುಕೂಲವಾಗಲಿದೆ. ವಿದೇಶಿ ವ್ಯಾಪಾರಿಗಳಿಗೆ ಫೋನ್‌ಪೇನಲ್ಲಿ ಯುಪಿಐ ಮೂಲಕ ಹಣ ಪಾವತಿ ಮಾಡಬಹುದು. ಗ್ರಾಹಕರು ಸಿಂಗಾಪುರ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ), ಮಾರಿಷಸ್‌, ಭೂತಾನ್‌ ಮತ್ತು ನೇಪಾಳದಲ್ಲಿ ಯುಪಿಐ ಮೂಲಕ ಪೇಮೆಂಟ್‌ ಮಾಡಬಹುದು. ಆದರೆ ಅವರು ಸ್ಥಳೀಯ ಕ್ಯೂಆರ್‌ ಕೋಡ್‌ ಹೊಂದಿರಬೇಕು ಎಂದು ಫೋನ್‌ಪೇ ತಿಳಿಸಿದೆ.

ಎನ್‌ಐಪಿಎಲ್‌ (ಎನ್‌ಪಿಸಿಐ ಇಂಟರ್‌ನ್ಯಾಶನಲ್‌ ಪೇಮೆಂಟ್ಸ್‌ ಲಿಮಿಟೆಡ್)‌ ಸಹಯೋಗದಲ್ಲಿ ಫೋನ್‌ ಪೇ ತನ್ನ ಯುಪಿಐ ಇಂಟರ್‌ನ್ಯಾಶನಲ್‌ ಸೇವೆಯನ್ನು ಆರಂಭಿಸಿದ್ದು, ಶೀಘ್ರದಲ್ಲಿ ಮತ್ತಷ್ಟು ದೇಶಗಳಿಗೆ ವಿಸ್ತರಿಸಲಿದೆ. ನ್ಯಾಶನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (NCPI) ಈ ಹಿಂದೆ ಅಂತಾರಾಷ್ಟ್ರೀಯ ಯುಪಿಐ ಪೇಮೆಂಟ್‌ಗಳಿಗೆ ಬೆಂಬಲ ಸೂಚಿಸಿತ್ತು.

ಕಳೆದ ಆರು ವರ್ಷಗಳಲ್ಲಿ ನಾವು ಯುಪಿಐ ಪೇಮೆಂಟ್‌ಗಳ ಕ್ರಾಂತಿಯಲ್ಲಿ ತೊಡಗಿಸಿಕೊಂಡಿದ್ದೆವು. ಜನರ ದೈನಂದಿನ ಪಾವತಿಗೆ ಇದರಿಂದ ಅನುಕೂಲವಾಗಿದೆ. ಯುಪಿಐ ಇಂಟರ್‌ನ್ಯಾಶನಲ್ ಇತರ ಜಗತ್ತಿಗೂ ಯುಪಿಐ ವಿಸ್ತರಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಸೌಲಭ್ಯ ಕ್ರಾಂತಿಕಾರಕವಾಗಿ ಸಹಕರಿಸಲಿದೆ. ವಿದೇಶಗಳಿಗೆ ತೆರಳುವ ಭಾರತೀಯರಿಗೆ ಅಲ್ಲಿನ ಅಂಗಡಿಗಳಲ್ಲಿ, ಮಾಲ್‌ಗಳಲ್ಲಿ ಪೇಮೆಂಟ್‌ಗೆ ಅನುಕೂಲವಾಗಲಿದೆ. ಈ ಬದಲಾವಣೆಯಲ್ಲಿ ಫೋನ್‌ಪೇ ಮುಂಚೂಣಿಯಲ್ಲಿರುವುದಕ್ಕೆ ಹೆಮ್ಮೆ ಎನ್ನಿಸುತ್ತಿದೆ ಎಂದು ಫೋನ್‌ಪೇಯ ಸಹ ಸಂಸ್ಥಾಪಕ ರಾಹುಲ್‌ ಚಾರಿ. ಜಾಗತಿಕ ಹೂಡಿಕೆದಾರರಿಂದ ಗಳಿಸಿದ ಹಣವನ್ನು ಫೋನ್‌ ಪೇ ತನ್ನ ಮೂಲಸೌಕರ್ಯ ಅಭಿವೃದ್ಧಿಗೆ, ಬಿಸಿನೆಸ್‌ ವಿಸ್ತರಣೆಗೆ, ಮಾರುಕಟ್ಟೆ ಪ್ರಚಾರ ಅಭಿಯಾನಕ್ಕೆ, ಸಂಶೋಧನೆಗೆ ಬಳಸುತ್ತದೆ. ಒಟ್ಟಿನಲ್ಲಿ ಫೋನ್‌ ಪೇ ಬೆಳೆದ ರೀತಿ ಒಂದು ಅಚ್ಚರಿ.

Exit mobile version