Site icon Vistara News

ಪೋಸ್ಟ್‌ ಬಾಕ್ಸ್‌ 143 ಅಂಕಣ | ಪ್ರತಿಕ್ರಿಯೆಯಲ್ಲ, ಕ್ರಿಯೆಯಾಗು ಒಂದು ದಿನ

kusuma

ಪ್ರತಿಕ್ರಿಯೆಯೇ,

OK ಅಂದರೆ ಏನರ್ಥ? OK ಅಂದರೆ OK ಅಂತಷ್ಟೆ ಅರ್ಥ. ʻಸರಿ’ ʻಆಯ್ತು’ ʻಆಗಬಹುದು’ ಅಥವಾ ಇಂಗ್ಲಿಷಿನದೇ ‘yes’ ‘right’ಗಳಿಗೆ ಪರ್ಯಾಯ. ಆದರೆ ಮೆಸೇಜಿನಲ್ಲಿ ನೀನು OK ಅನ್ನುವ ಉತ್ತರ ಕೊಟ್ಟಾಗೆಲ್ಲ ಪ್ರತಿಸಲವೂ ಅದಕ್ಕೆ ಬೇರೆ ಬೇರೆ ಅರ್ಥ. ಭಿನ್ನ ಭಿನ್ನ ಭಾವ. ಒಮ್ಮೆ ಕೆಲಸದ ಒತ್ತಡದ ನಡುವಿನ ಉತ್ತರಶಾಸ್ತ್ರದ ಭಾವ. Dryness. ಮತ್ತೊಮ್ಮೆ ಅದಕ್ಕೆ ಆರ್ದ್ರತೆ. ಭಾವಪೂರ್ಣತೆ. ಒಮ್ಮೆ ಕಿರಿಕಿರಿಗೆ ಪ್ರತಿಕ್ರಿಯೆಯಂತೆ. ಇನ್ನೊಮ್ಮೆ ಸಮಾಧಾನ. ಕೆಲವೊಮ್ಮೆ ಅತ್ಯಂತ ಯಾಂತ್ರಿಕ. ಮತ್ಯಾವಾಗಲೋ ಓಹ್ಹೋ ಅನ್ನುವ ಧಾಟಿಯ ಲಾಲಿತ್ಯ. OK ಎಂಬ ಎರಡಕ್ಷರದ ಶಬ್ದ ಬದಲೇನೂ ಆಗುವುದಿಲ್ಲ ಪ್ರತಿಸಲ. ಅದು ಅದೇ ಎರಡಕ್ಷರದ ಅದೇ ಶಬ್ದ. ಆದರೆ ಭಾವ ಮಾತ್ರ ಬದಲಾಗುತ್ತದೆ.

ಆ ಬದಲಾದ ಭಾವ ನಿನಗ್ ಹೇಗ್ ಗೊತ್ತಾಗ್ತದೆ? ಅಂತ ಕೇಳಬೇಡ. ನಂಗೆ ಮಾತ್ರ ಅಲ್ಲ ನಿನಗೂ ಎಲ್ರಿಗೂ ಗೊತ್ತಾಗತ್ತೆ. ಯಾಕಂದ್ರೆ ಶಬ್ದಗಳು ಬರಿಯ ಶಬ್ದಗಳಲ್ಲ ಅವು ಒಂತರಾ ಭಾವವಾಹಕಗಳು. ನೀನು ಯಾವ ಭಾವದಲ್ಲಿ ಕಳಿಸಿರ್ತೀಯೋ ಅದೇ ಭಾವದಲ್ಲಿ ಅವು ಬಂದು ತಲುಪ್ತವೆ. ಕತೆಗಳು ಬರೆದವರ ಹೃದಯದಿಂದ ಓದುವವರ ಹೃದಯ ತಲುಪುವ ಹಾಗೆ. ಶಬ್ದದ ಹಿಂದಿನ ಟೋನ್ ಭಾವಗಳನ್ನು ದಾಟಿಸುತ್ತದೆ. ಆ ಟೋನ್ ಹೇಗೆ ಶಬ್ದದಲ್ಲಿ ಅಡಕವಾಗಿ ನಿನ್ನಿಂದ ಹೊರಟು ನನ್ನನ್ನು ತಲುಪುತ್ತದೆ ಎಂಬುದು ಯಾರ ಯಾವ ಮೀಟರಿಗೂ ಸಿಗದ ಸಂಗತಿ. ಕೆಲವು ಸಲ ಶಬ್ದಗಳ ಹಂಗು ಕೂಡ ಬೇಕಿಲ್ಲ ಕಣೋ. ಮಾತು ಕೂಡ ಇಲ್ಲದೇ ಭಾವ ದಾಟಬಲ್ಲದು. ಅದೊಂದು vibration. ಎಷ್ಟೇ ದೂರದಲ್ಲಿದ್ದರೂ ನಿನ್ನ ಮನಸಲ್ಲೇಳುವ ಸಿಹಿ, ಕಹಿ, ಸಿಟ್ಟು, ಮುದ್ದು, ಬೇಸರ ಪ್ರತೀ ಭಾವನೆಯೂ ನನಗೆ ತಕ್ಷಣ ಗೊತ್ತಾಗುತ್ತದೆ. ಟವರ್, ನೆಟ್ವರ್ಕ್ ಯಾವುದೂ ಬೇಕಿಲ್ಲ. ಭಾವತರಂಗವಾಗಿ ತಾನೇ ತಲುಪುತ್ತದೆ ಹೃದಯದಿಂದ ಹೃದಯಕ್ಕೆ ಸೀದಾ. ಇದು ನನಗೂ ದೊಡ್ಡ ಅಚ್ಚರಿ! ಟೆಲಿಪತಿ ಕೇಳಿದ್ದೀಯಲ್ವ? ಯಾರೋ ಯಾರನ್ನೋ ಇಲ್ಲಿ ಕೂತು ನೆ‌ನಪಿಸಿಕೊಂಡರೆ ಅಲ್ಲೆಲ್ಲೋ ಇರುವ ಅವರಿಗೆ ಅದು ತಾಕುವುದು. ಇವರಿಗೊಂದು ಫೋನು ಮಾಡಣ ಅನ್ಕೊಳೋಷ್ಟರಲ್ಲಿ ಅವರದೇ ಫೋನು ರಿಂಗಾಗಿ ಫೋನು ಇತ್ತಿಂದ ಹೋಯ್ತ ಅತ್ತಿಂದ ಬಂತಾ ಅಂತ ತಬ್ಬಿಬ್ಬಾಗುವಂತೆ ಮಾಡೋದು. ಒಂದ್ರೂಪಾಯೂ ಬಂಡವಾಳ ಬೇಕಿಲ್ಲ ನೋಡು ಈ ಭಾವಗಳ ನೆಟ್ವರ್ಕಿಗೆ. ಡಾಟಾ ಅಗತ್ಯ ಮೊದಲೇ ಇಲ್ಲ.

ಹಳೇ ಪೌರಾಣಿಕ ಪಿಚ್ಚರುಗಳನ್ನ ನೋಡಿದೀಯಾ ನೀನು? ಅದರಲ್ಲಿ ವಿಷ್ಣುವಿನ ಬಳಿ ಹೋಗಬೇಕಾದರೆ ಎಷ್ಟೊಂದು ಬಾಗಿಲುಗಳಿರ್ತವಲ್ಲ, ಒಂದೊಂದೇ ತೆರೆದುಕೊಳ್ತವಲ್ಲಾ ಕಮಲದಳದ ಹಾಗೆ. ನಾವು ಪ್ರತಿ ಮನುಷ್ಯರೂ ಹಾಗೇ, ಹಳೆಪಿಚ್ಚರಿನ ವಿಷ್ಣುವಿನ ವಾಸಸ್ಥಾನದಂತೆ ನಮ್ಮ‌ ಮನಸಿನ ಒಳಮನೆಗೂ ಹಲವು ಬಾಗಿಲುಗಳು. ಅದಕ್ಕೆ ಕಾವಲುಗಾರರಿಲ್ಲ ಜಯವಿಜಯರಿಲ್ಲ. ಯಾರೋ ನಿಂತು ಬಾಗಿಲು ಹಾಕುವುದು ತೆರೆಯುವುದು ಎಂಬ ಸೀನಿಲ್ಲ. ಆದರೆ ಗೆಳೆಯಾ… ಎಷ್ಟನೇ ಬಾಗಿಲವರೆಗೆ ನನಗೆ ಪ್ರವೇಶ ಅಂತ ನಿನ್ನ ಮನಸು ನಿರ್ಧರಿದ ಕೂಡಲೇ ಅದು ನನಗೂ ಗೊತ್ತಾಗುತ್ತದೆ. ಬಾಗಿಲೇ ಇಲ್ಲದಿದ್ದರೂ ಕಾಣುತ್ತದೆ. ಯಾವಾಗಾದರೂ ಅರ್ಜೆಂಟಿಗೆ ಬಿದ್ದು ಬಾಗಿಲು ದಾಟಲು ಹೋಗಿ ಗುದ್ದಿಕೊಂಡದ್ದೂ ಇದೆ. ಮನಸಿನ ಬಾಗಿಲುಗಳು ಕೆಲವೊಮ್ಮೆ ಗಾಜಿನಂತಿರ್ತವೆ ಮತ್ತು ನಿಂಗೆ ಗೊತ್ತಲ್ಲ ಪ್ರೇಮಕ್ಕೆ ಕಣ್ಣಿಲ್ಲ. ಆದರೆ ಎಚ್ಚರವಿರಬೇಕು. ಇಲ್ಲದಿದ್ದರೆ ಗಾಜಿನ ಬಾಗಿಲಿಗೆ ಡಿಕ್ಕಿ. ಪೆಟ್ಟು ಪಕ್ಕಾ! ತಂತ್ರಜ್ಞಾನದ ಎಡವಟ್ಟಿಗೆ ಸಿಲುಕಬಾರದು. ವಿನ್ಯಾಸ ಬದಲಾದರೂ ಬಾಗಿಲು ಎಂದಿದ್ದರೂ ಬಾಗಿಲೇ.

ಬಾಗಿಲುಗಳೇ ಇಲ್ಲದ ಬಯಲಾಗಬೇಕು ಕಣೋ. ಎಂದಾದರೂ ತಲುಪಿಕೊಳ್ಳೋಣ ಆ ಸ್ಟೇಜಿಗೆ. ಅಷ್ಟು ಸುಲಭವಲ್ಲ ಅದು. ಕಷ್ಟ ಕೂಡ ಅಲ್ಲ.

ಆದರೆ ಯೋಚಿಸು ನಾವು ಮನಸಲ್ಲೆ ಇನ್ನೊಬ್ಬರ ಕುರಿತು ಎಳೆಯುವ ದಾಟಬಾರದ ಗೆರೆ ಅವರಿಗೆ ಗೊತ್ತಾಗುವ ಬಗೆ ಎಷ್ಟು ವಿಸ್ಮಯ ಅಲ್ವ? ಹೀಗೆ ಅದೃಶ್ಯ ಗೆರೆಗಳನ್ನು ಸ್ಪಷ್ಟವಾಗಿ ಕಾಣಬಲ್ಲ, ನಿನ್ನ ಸುತ್ತಲ ಹಲವು ವೃತ್ತದಲ್ಲಿ ನನ್ನ ಬಿಂದು ಯಾವುದೆಂದು ಅರಿಯಬಲ್ಲ ದೃಷ್ಟಿಗೇ ಸಂಬಂಧ ಅಂತ ಹೆಸರೇನೋ! ಅದರಲ್ಲೂ ಪ್ರೇಮಕ್ಕೆ ತುಸು ಹೆಚ್ಚೇ ಸೂಕ್ಷ್ಮತೆ. ಅದು ಜೋಕೇ ಇಲ್ಲದೇ ನಗಿಸಬಲ್ಲದು. ಪಿನ್ನಿರದೇ ಸಾವಿರ ಮುಳ್ಳಂತೆ ಚುಚ್ಚಬಲ್ಲದು, ಅಳಿಸಬಲ್ಲದು ಕಾರಣವೇ ಇರದೇ. ಬತ್ತಿದ ಕಣ್ಣಲ್ಲಿ ಉಕ್ಕಿಸಬಲ್ಲದು ಗಂಗೆ ಕಾವೇರಿಯರ. ತಳ್ಳಬಲ್ಲದು ಪಕ್ಕದಲ್ಲೆ ಇದ್ದರೂ ಕಿಲೋಮೀಟರುಗಟ್ಟೆಲೆ ದೂರ. ಅಥವಾ ದೂರದಲ್ಲಿದ್ದರೂ ಹತ್ತಿರ. ಮೌನವನ್ನು‌ ಮಾತಾಗಿಸಬಲ್ಲದು‌. ಮಾತನ್ನು ಮೌನವಾಗಿಸಬಲ್ಲದು. ಟೀಚರಾಗಿಸಬಲ್ಲದು. ವಿದೇಯ ವಿಧ್ಯಾರ್ಥಿಯಾಗಿಯೂ. ಹೃದಯಾಘಾತ ಮಾಡಿಸಬಲ್ಲದು. ಕೊಲ್ಲಬಲ್ಲದು. ಬದುಕಿಸಬಲ್ಲದು ಸತ್ತಂತ ಜೀವಗಳ. ಬೆಟ್ಟವನ್ನು ಕೆಡವಬಲ್ಲದು. ಹೂವನ್ನು ಕಲ್ಲಾಗಿಸಬಲ್ಲದು, ಕಲ್ಲು ಮಾಡಬಲ್ಲದು ಹೂವನ್ನು. ಪ್ರೇಮದ ಕರುಣೆ ಅಪಾರ ಕಣೋ! ಅದು ನವಿಲಾಗಿಸುತ್ತದೆ. ಜಿಂಕೆಯಾಗಿಸುತ್ತದೆ. ಹಾವಿನ ಹೆಡೆಗೂ ಬೆಚ್ಚದಂತೆ ಮಾಡುತ್ತದೆ. ಬೆದರಿದ ಗುಬ್ಬಿಮರಿಯಾಗಿಸುತ್ತದೆ. ಇದೆಲ್ಲವೂ ಆಗಲು ತೆರೆದ ಮನಸೊಂದಿರಬೇಕು ನೋಡು. ತರ್ಕಕ್ಕೆ, ಬುದ್ಧಿಗೆ ಪ್ರೇಮ ಒಲಿಯುವುದಿಲ್ಲ. ಅದಕ್ಕೆ ಒಂದಿಷ್ಟಾದರೂ ಮುಗ್ದತೆ ಬೇಕು. ಅದನ್ನೆಲ್ಲಿಂದ ಸಾಲ ತರೋಣ ಹೇಳು?‌

ಇದನ್ನೂ ಓದಿ | ಪೋಸ್ಟ್‌ ಬಾಕ್ಸ್‌ 143 | ಕಣ್ಣಲ್ಲೇ ಇದೆ ಎಲ್ಲಾ ಕಾಗದ

ಯಾಕಿಷ್ಟು ಸೀರಿಯಸ್ಸು ಹುಡುಗೀ ಅಂತ ಕೇಳಬೇಡ. ಅಥವಾ ನಿನಗೆ ಗೊತ್ತು. ಒಮ್ಮೊಮ್ಮೆ ಪ್ರೇಮ ನಮ್ಮ ವ್ಯಕ್ತಿತ್ವಗಳನ್ನೂ ಬದಲಿಸಿಬಿಡುತ್ತದೆ. ಅದಕ್ಕೆ ಗೆರೆ ಎಳೆಯುವಷ್ಟೇ ನಮ್ಮ ಟೊಳ್ಳುಗಳನ್ನು ಗಟ್ಟಿಯಾಗಿಸಲಿಕ್ಕೂ ಸಾಧ್ಯ. ಹಾಗೆ ಆಗಿಸುವವರು ಸಿಗುವುದೂ ಒಂದು ಅದೃಷ್ಟ. ನೀನು ನನಗೆ ಸಿಕ್ಕಂತೆ.

ನೀನು ಬೈತಾ ಇದ್ರೆ ನನಗೆ ಖುಷಿ. ಅಧಿಕಾರ ಚಲಾಯಿಸುವುದು ಸಂಬಂಧ ಜೀವಂತವಿರೋದಕ್ಕೆ ಸಾಕ್ಷಿ. ಬೈಯುವುದೂ ಬೇಡ, ಏನೂ ಹೇಳುವುದೇ ಬೇಡ ಅನಿಸಿದ ದಿನ ಮನಸಿನ ಕೋಟೆಯ ಹೊರ ಬಾಗಿಲಿಗೇ ಜಡಿದಂತೆ ಬೀಗ! ಪ್ರೀತಿಯಲ್ಲಿ ಬೈಗಳು ಕೂಡ ಅಧಿಕಾರ ಚಲಾಯಿಸುತ್ತಲೇ ಕಾಳಜಿಯ ಬಾಗಿಲು ತೆರೆವ ಕೀಲಿಕೈ ಕಣೋ. ಹಾಗಂತ ಯಾವಾಗಲೂ ಅಂತಾ ಸಂದರ್ಭಾನೇ ಸೃಷ್ಟಿಸ್ತಾ ಹೋದ್ರೆ ಅದ್ಯಾವ ಕ್ಷಣದಲ್ಲಿ ತೆರೆದ ಕೀಲಿ ಬೀಗ ಜಡೀತದೆ ಅಂತ ಹೇಳಕ್ ಬರಲ್ಲ. ಆಗಾಗಷ್ಟೇ ಚೂರೇ ಚೂರು ಬೈಬಹುದಾದ ಅವಕಾಶ ಕೊಡುವೆ. ಹೆಚ್ಚು ಬೈಬೇಡ. ಅತ್ತುಬಿಡುವೆ! ನೀನು ಬೈದರೆ ನನಗೇನೇನೂ ತಾಕುವುದಿಲ್ಲ. ಆದರೆ ನಂಬದಿದ್ದರೆ ಮಾತ್ರ ನೋವಾಗುತ್ತದೆ. ಸಾವಿರ ಪಿನ್ ಚುಚ್ಚುವಿಕೆ ಅದು.

ಯಾಕೋ ಇದು ಎಲ್ಲೋ ಶುರುಮಾಡಿ ಮತ್ತೆಲ್ಲೋ ಹೋಯ್ತು ನೋಡು. “ಪ್ರತಿಕ್ರಿಯೆಯೇ” ಅಂತ ಶುರುಮಾಡಿದ್ ಯಾಕೆ ಅಂತ ಯೋಚಿಸ್ತಿದೀಯ? ನೀನು ಅದೇ ಅಲ್ವ?

ಒಂದು ದಿನವೂ ನಿನಗೆ Good night ಹೇಳೋದನ್ನ ತಪ್ಪಿಸಲ್ಲ ನಾನು‌. ನೀನೂ ಪ್ರತಿಕ್ರಿಯಿಸುತ್ತೀ ಖರೇ. ಆದರೆ ಸದಾ ನೀನು ಪ್ರತಿಕ್ರಿಯೆಯೇ ಯಾಕಾಗಬೇಕು? ಒಂದು ದಿನವಾದರೂ ಕ್ರಿಯೆಯಾಗಲಿ ಅನಿಸುತ್ತದೆ. ನಾನು ಕ್ರಿಯೆಯಾಗದೇ ಇದ್ದು ನೋಡೋಣ ಒಮ್ಮೆ ಅನಿಸುತ್ತದೆ. ಅಷ್ಟು ಧೈರ್ಯವಿಲ್ಲ. ನಿನ್ನ ಪ್ರತಿಕ್ರಿಯೆ ಮತ್ತು ಬಿಟ್ಟರೆ ನೀನೂ ಕ್ರಿಯೆಯಾಗಬಲ್ಲೆ ಎಂಬ ನಂಬಿಕೆಯೊಂದು ನನ್ನನ್ನು ಕಾಯುತ್ತದೆ. ಆದರೆ ಪ್ರಯೋಗದ ಫಲಿತಾಂಶ ಹೀಗೇ ಇರುತ್ತದೆ ಎಂದು ಹೇಗೆ ಹೇಳುವುದು? ಯಾವ ಫಲಿತಾಂಶವಾದರೂ ತಡೆದೇನು ಅನ್ನುವಷ್ಟು ಗುಂಡಿಗೆ ಗಟ್ಟಿ ಇರದ ಮೇಲೆ ಪ್ರಯೋಗ ಮಾಡಲಿಕ್ಕೇ ಹೋಗಬಾರದು. ಎಂದಿದ್ದರೂ ಭ್ರಮೆ ಕೊಡುವ ಖುಷಿಯನ್ನು ವಾಸ್ತವ ಕೊಡಲಾರದು. ಆದರೆ ಗೆಳೆಯ…ಪ್ರೇಮದ ಮಾತು ಒಮ್ಮೆ ಆಡಿಕೊಂಡ ಮೇಲೆ ರಬ್ಬರಿನ ದಾರದ ಎರಡು ತುದಿಗಳನು ಹಿಡಿದು ನಿಂತವರು ನಾವೆಂಬ ಎಚ್ಚರವೊಂದಿರಲೇಬೇಕು. ಯಾರು ಕೈ ಬಿಟ್ಟರೂ ಇನ್ನೊಂದು ಕೈ ಚುರ್ ಅಂತದೆ.

ನೀನು ಜಾಣ. ತುಂಬಾ ಮುದ್ದು. ನಿನ್ನಲ್ಲಿ ಸಿಗಲಿ ನನ್ನೆಲ್ಲ ಗಾಯಕೂ ಮದ್ದು. Good night. Love u. Ok?

ಇದನ್ನೂ ಓದಿ | ಪೋಸ್ಟ್‌ ಬಾಕ್ಸ್‌ 143 | ಕಣ್ಣೀರಿಗೆ ಸ್ಪಂದಿಸುವಾಗ ಮನುಷ್ಯ ದೇವರಾಗ್ತಾನೆ!

Exit mobile version