ಕೊಲ್ಲಬಹುದಾದವನೇ,
ಸುದ್ದಿ ಕೇಳಿದೆಯಾ? ಪ್ರೇಮಿಯನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದನಂತೆ ಒಬ್ಬ. ಅಂಕಿಅಂಶಗಳು ಇಂತಹ ನೂರಾರು ಪ್ರಕರಣಗಳನ್ನು ದಾಖಲಿಸುತ್ತವೆ. “ಜೋಡಿ ಜೋಡಿ ಕಂಗಳಿಗೆ ಪ್ರೀತಿ ಬಂತು ಪೂರ್ತಿ… ಪ್ರೀತಿ ಕೊಂದ ಕೊಲೆಗಾತಿ ನಾ ಹೇಳೋ ಕತೆಗೆ ಸ್ಪೂರ್ತಿ” ಅಂತ ಹಂಸಲೇಖಾ ಬರ್ದ ಹಾಡಿತ್ತಲ್ಲ? ಬಹುಶಃ ಪ್ರೇಮ ಮತ್ತು ಕೊಲೆ ಎರಡೂ ಪದ ಒಟ್ಟಿಗೇ ನನಗೆ ಕಂಡದ್ದು ಅದೇ ಮೊದಲು ಅನಿಸುತ್ತದೆ. ಆದರೆ ಅದು ಸ್ವಾರ್ಥದ ಕತೆ. ಹಾಗಾಗಿ, “ಪ್ರೇಮಿಯೇ ಪ್ರೇಮವಾ ಕೊಂದಳು” ಎಂಬ ಹಾಡಿನ ಸಾಲು ಸಿನೆಮಾದ ಕತೆ ಅರ್ಥಮಾಡಿಸಿತ್ತು ಅಷ್ಟೆ. ಮತ್ತು ಆಗ ಎಲ್ಲ ಸ್ಕೂಲು ಮಕ್ಕಳಿಗೆ ಅರ್ಥವಾಗಬಹುದಾದಷ್ಟೇ ನಂಗೂ ಆಗಿತ್ತು. “ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ, ಗಾಯಗೊಂಡಿರುವ ಹೃದಯವಿದು ಚೆಲ್ಲಾಟವಾಡಬೇಡ” ಅಂತ ಬಿಆರ್‌ಎಲ್ ಬರೆದ ಒಂದು ಪದ್ಯ. ಕಾಲೇಜಿನ ಭಾವಗೀತೆ ಸ್ಪರ್ಧೆಯಲ್ಲಿ ಯಾರಾದರೂ ಅದನ್ನು ಹಾಡಿದರೆ ನಾವು ಇನ್ನಿಲ್ಲದಂತೆ ಆಡಿಕೊಳ್ತಿದ್ದೆವು. ಎಲ್ರೂ ಸೇರಿ ಅದನ್ನು ಗುಂಪಾಗಿ ಗೋಳುಗರೆದು ಹಾಡುತ್ತಾ ಹೊಟ್ಟೆಹುಣ್ಣಾಗವಷ್ಟು ನಗುತ್ತಿದ್ದೆವು. ಮುಂಗಾರು ಮಳೆ ಪಿಚ್ಚರಿನಲ್ಲಿ “ಕೊಲ್ಲು ಹುಡುಗಿ ಒಮ್ಮೆ ನನ್ನಾ…” ಅಂತ ಹೀರೋ ಹಾಡಿದಾಗಲೂ ಅದು ನನಗೆ ಹಾಸ್ಯದ ತುಣುಕಿನಂತಾಗಿತ್ತು. ಆದರೆ ನಿನ್ನ ಸಹವಾಸಾನಂತರ ಈ ಎಲ್ಲ ಸಾಲುಗಳ ಒಳಗಿರಬಹುದಾದ ನಿಜದ ನೋವು ನಂಗರ್ಥವಾಗುತ್ತಿದೆ ನೋಡು.
ಅವ್ರೆಲ್ಲ ಹುಚ್ಚರು ಕಣೋ, ತಿಳುವಳಿಕೆ ಇಲ್ಲದವರು. ಅಥವಾ ಪ್ರೇಮಿಸಿಯೇ ಇಲ್ಲದವರು. ಪ್ರೇಮದಲ್ಲಿ ಕೊಲ್ಲುವುದಕ್ಕೆ ಹಲವು ದಾರಿಗಳಿರುವಾಗ ಚಾಕು ಚೂರಿಗಳನ್ನು ಯಾಕಾದರೂ ಬಳಸಬೇಕು ಹೇಳು? ಅವುಗಳಿಂದ ಕೊಲ್ಲಲು ಸಾಧ್ಯವಾಗುವುದು ಒಂದೇ ಬಾರಿ. ಆದರೆ ಪ್ರೇಮಿ ಮನಸ್ಸು ಮಾಡಿದರೆ ದಿನವೂ ಕೊಲ್ಲಬಹುದು ಬಗೆಬಗೆಯಾಗಿ.
ನೀನೇ ನನ್ನ ಜಗತ್ತು ಅನ್ನುವ ಪರಾಕಾಷ್ಠೆಯಲ್ಲಿ ಅವಳಿರುವಾಗ ನೀನು ನನ್ನ ಜಗತ್ತಿನ ಸಣ್ಣಾತಿಸಣ್ಣ ಭಾಗವಷ್ಟೆ ಎಂಬಂತೆ ನಡಕೊಂಡರೆ ಸಾಕು ಅವಳು ಅರ್ಧ ಸತ್ತಿರುತ್ತಾಳೆ. ಸಮಾನತೆಯನ್ನು ಬಯಸುವ ಪ್ರೀತಿ, ಪ್ರೀತಿಗಾಗಿ ಮಣಿಯುತ್ತದೆ. ಯಾರ ಜಪ್ತಿಗೂ ಸಿಗದ ನವಿಲಾಗಿದ್ದವಳೂ ಪ್ರೀತಿಗಾಗಿ ಎಷ್ಟು ಬಾಗಲಿಕ್ಕೂ ತಯಾರಾಗುತ್ತಾಳೆ. ಆದರೆ ಅವನು ನಿನ್ನ ಅಸ್ತಿತ್ವ ನನಗೆ ಲೆಕ್ಕಕ್ಕೇ ಇಲ್ಲ ಎಂಬಂತಿದ್ದರೂ ಸಾಕು. ಅವನು ಕೊಲ್ಲಲಿಕ್ಕೆ ಇವಳು ಸಾಯುವುದಕ್ಕೆ ಮತ್ತೇನು ಬೇಕು?
ನೀ ನನಗಿಂತ ಎರಡು ಸ್ಟೆಪ್ಪು ಕೆಳಗೆ ಎಂಬ ಭಾವ ದಾಟಿಸಿ ಕೊಲ್ಲಬಹುದು. ಅಸಡ್ಡೆ, ನಿರ್ಲಕ್ಷ್ಯಗಳಿಂದ ಕೊಲ್ಲಬಹುದು. ಒಮ್ಮೆಯೂ ಕ್ರಿಯೆಯಾಗದೇ ಕೇವಲ ಪ್ರತಿಕ್ರಿಯೆಯಾಗುತ್ತಾ ಕೊಲ್ಲಬಹುದು. ಅವಳ ಖುಷಿ-ಬೇಸರಗಳನ್ನೆಲ್ಲ ಯಾವ ಲೆಕ್ಕಕ್ಕೂ ಇಟ್ಟುಕೊಳ್ಳದೇ ಸ್ವಕೇಂದ್ರಿತವಾಗುತ್ತಾ ಕೊಲ್ಲಬಹುದು, ಕೊಟ್ಟ ಮಾತು ನೆನಪೂ ಇರದ ರಾಜಕಾರಣಿಯಂತಾಡಿದಾಗ, ಹಳೆಯದನೆಲ್ಲ ಬೇಗ್ಬೇಗ ಮರೆಯುವ ಪ್ರಜೆಯಂತಾಡಿದಾಗ, ನಮ್ಮ ನಡುವೆ ಆಗಿಹೋದ ಸವಿಮಾತು, ಗಳಿಗೆಗಳ ಭಾಗವಾಗಿದ್ದವನು, ನವಿರಾಗಿ ಮಾತಾಡಿದವನು ಇವನೇನಾ ಅನಿಸುವಷ್ಟು ಒರಟಾದಾಗ, ಅದೆಲ್ಲ ಆದದ್ದು ಹೌದೋ ಕೇವಲ ನನ್ನ ಭ್ರಮೆಯೋ ಎಂಬ ಅನುಮಾನ ಹುಟ್ಟುವಂತೆ ಮಾಡಿದಾಗೆಲ್ಲ ಸಾಯುತ್ತಾಳೆ ಅವಳು. ಇಂಚಿಂಚಾಗಿ. ಅನುಮಾನಿಸಿ ಕೊಲ್ಲಬಹುದು, ಅವಿಶ್ವಾಸದಿಂದ ಕೊಲ್ಲಬಹುದು, ಮಾತಿನಿಂದ ಕೊಲ್ಲಬಹುದು ಅವನು, ಬರಿಯ ಮೌನದಿಂದಲೂ…
ಪೂರಾ ಸಾಯುವುದಕ್ಕಿಂತಲೂ ಕೆಟ್ಟ ಕೊಲ್ಲುವಿಕೆ ಇವೆಲ್ಲ. ಇಂತಾ ಮಹಾಸ್ತ್ರಗಳಿರುವಾಗ ಚಾಕು ಯಾಕೆ? ಆ ಸಾವು ಒಂದೇ ಸಲ ಮುಗಿಸುತ್ತದೆ. ಈ ಸಾವುಗಳು ದಿನಾ ಒಂದಿಷ್ಟಿಷ್ಟು ಮುಗಿಸುತ್ತವೆ.
ಪ್ರೇಮದ ರೀತಿಯೇ ಹಾಗೆ ಕಣೋ, ನೀನು ಬಹಳ ವಿಶೇಷ ಅಂದರೆ ಸಾಕು ಪುಟಿದೆದ್ದು ಬದುಕುತ್ತದೆ ಜೀವ. ನೀನೊಂದು ನಿಕೃಷ್ಟ ವ್ಯಕ್ತಿ ಎಂಬ ಭಾವ ದಾಟಿಸಿದರೆ ಸಾಕು ಸತ್ತು ಮಲಗುತ್ತದೆ. ಉಸಿರಾಡುವುದೊಂದೇ ಬದುಕಿರುವುದಕ್ಕೆ ಸಾಕ್ಷಿಯಲ್ಲ. ಪ್ರೇಮದಲ್ಲಿ ಬಿದ್ದವರು ಒಳಗೇ ಸತ್ತಿರಲೂಬಹುದು. ಚಾಕುಚೂರಿಗಳಿಂದ ಒಳಗನ್ನು ಕೊಲ್ಲಲಾಗದು, ಬದುಕಿಯೂ ಸತ್ತಂತಿರುವಂತೆ ಮಾಡಲು ಭಾವಾಸ್ತ್ರಗಳಿಂದ ಮಾತ್ರ ಸಾದ್ಯ! ಭಾವವೂ ಬೇಡ ಮಾರಾಯ ನಿರ್ಭಾವುಕವಾಗಿದ್ದರೂ ಸಾಕು ಪ್ರೇಮಿಯನ್ನು ಕೊಲ್ಲಲಿಕ್ಕೆ. ಅದರಂತಾ ಮಾರಕಾಸ್ತ್ರ ಇನ್ನೊಂದಿಲ್ಲ.
ಇದೆಲ್ಲಕ್ಕೂ ಕಾರಣ ನಿರೀಕ್ಷೆಗಳೇ ಅನಿಸುತ್ತದೆ. ನಮಗೆ ಅಪ್ಪ, ಅಮ್ಮ, ಕುಟುಂಬ ಇರ್ತದಲ್ಲ? ಅಲ್ಲಿ ಎಲ್ಲರೂ ನಮಗೆ ಆಗುವ ಸ್ವಭಾದವರೇ ಇರಬೇಕೆಂದಿಲ್ಲ. ಆದರೆ ಏನೇ ಆದರೂ ಆ ಸಂಬಂಧದಿಂದ ನಮಗೆ ಮುಕ್ತಿ ಇಲ್ಲ. ಪ್ರೇಮಕ್ಕೆ ಸಂಬಂಧದಂತೆ ರಕ್ತದ ಅಂಟುವಿಕೆ ಇಲ್ಲ ನೋಡು, ಹಾಗಾಗಿ ಅದನ್ನು ಕತ್ತರಿಸಿಕೊಳ್ಳೋದು ಸುಲಭ. ರಕ್ತದ ಅಂಟಿಗಿಂತಲೂ ಆತ್ಮದ ಅಂಟು ಯಾಕೆ ಹೆಚ್ಚಿನದಲ್ಲ? ಏನೇ ಓರೆಕೋರೆ ಇದ್ದರೂ ಸಂಬಂಧಗಳನ್ನು ಅನಿವಾರ್ಯವಾಗಿ ನಾವು ಒಪ್ಪಿಕೊಳ್ಳುವಂತೆ ಪ್ರೇಮವನ್ನೇಕೆ ಅದಿರುವ ಹಾಗೇ ಒಪ್ಪಬಾರದು? ಅಲ್ಲೇಕೆ ಅಷ್ಟೊಂದು ಎಡಿಟೆಡ್ ವರ್ಷನ್ನು ಕೇಳುತ್ತೇವೆ? ನಮಗೆ ಬೇಕಾದ ವರ್ಶನ್! ಈ ಬದಿಯಲ್ಲೋ… ಪ್ರೇಮಕ್ಕಾಗಿ ತಾನು ಎಡಿಟ್ ಆಗಲೂ ಸಿದ್ಧ! ನಾವಲ್ಲದ ನಾವಾಗುವುದು ಬಲುಕಷ್ಟ ಗೆಳೆಯಾ! ಆದರೂ ಯತ್ನಿಸುತ್ತೇವಲ್ಲಾ ಪ್ರೇಮಕ್ಕಾಗಿ? ಅಲ್ಲೂ ಒಂದು ತರದ ಸಾವೇ ನಡೆದಿರುತ್ತದೆ. ಆದರೂ ಪರವಾಗಿಲ್ಲ ಅನ್ನುತ್ತದೆ ಪ್ರೇಮ. ಕೆಎಸ್ ನರಸಿಂಹಸ್ವಾಮಿಗಳು ಅಂದಂತೆ “ಪ್ರೇಮವೆನಲು ಹಾಸ್ಯವೇ?” ನೀನೇ ಹೇಳು?
ಇದನ್ನೂ ಓದಿ | ಪೋಸ್ಟ್ ಬಾಕ್ಸ್ 143 | ಪೋಷಾಕಿಲ್ಲದಿದ್ದರೂ ನೀನು ರಾಜ, ನಾನು ಬೆದರಿದ ಪ್ರಜೆ; ಭಾವದಲ್ಲೇ ಪಾತ್ರ ಬದಲಾಗುತ್ತದಲ್ಲಾ?
ಕರೆಕ್ಷನ್ನಿನಿಂದ ಉಂಟಾಗುವ ಪ್ರತಿಫಲ ಬೇಕಾಗಿಯೇ ಇಲ್ಲ ನನಗೆ. ನೀನು ಹೇಳಿದ್ದೀ, ನಿನಗಾಗಿ ನಾನದನ್ನು ಮಾಡುತ್ತಿದ್ದೇನೆ ಅಷ್ಟೆ ಅನ್ನುವ ಶುದ್ಧಪ್ರೇಮದ ಪರಮಶ್ರದ್ಧೆಯನ್ನು ಅವಮಾನಿಸಬಹುದೇ? ದೊಡ್ಡದ ಜನದ ಹಾಗಾಡುತ್ತಾ ಕೊಲ್ಲಬಹುದೇ ಹೇಳು ಪ್ರೇಮವನ್ನು? ಅಥವಾ ಹಾಗೆ ಕೊಲ್ಲಬಹುದಾದ ಅವಕಾಶ ಒಬ್ಬರಿಗೆ ಮಾತ್ರ ಇರುವುದಾ? ಇಬ್ಬರಿಗೂ ಇರುತ್ತದೆ ಅದು. ಆದರೂ ಪ್ರತಿಸಲವೂ ಯಾರೋ ಒಬ್ಬರು ಮಾತ್ರ ಕಾಯುತ್ತಾರೆ. ಮಣಿಯುತ್ತಾರೆ. ದಿನವೂ ಪ್ರೇಮದ ಹೂಬಾಡದಂತೆ ನೀರುಣಿಸುತ್ತಾರೆ ಭಾವದ ಗಿಡಕ್ಕೆ.
ಅವರಿವರ ಕತೆ ಬಿಡು, ನೀನದೆಷ್ಟು ಸಲ ಪುಟಿದೆದ್ದು ಬದುಕುವಂತೆ ಮಾಡಿದೆ? ಎಷ್ಟು ಸಲ ಕೊಂದೆ ಅಂತ ಲೆಕ್ಕ ಬೇಕಾ? ಮಾತಾಡು ಹೇಳುತ್ತೇನೆ. ಮೌನದಿಂದ ಕೊಲ್ಲಬೇಡ.
ಬಿಆರ್‌ಎಲ್ ಬರೆದಂತೆ ಕೊಲ್ಲುವುದಾದರೆ ಕೊಂದುಬಿಡು, ಹೀಗೆ ಕಾಡಬೇಡ.
“ನಮ್ಮೂರ ಮಂದಾರ ಹೂವೇ” ಸಿನೆಮಾಲಿ ನಾಯಕ ತನ್ನ ಪ್ರೀತಿಯನ್ನು ಮುರಿದುಕೊಳ್ಳೋ ಸಲುವಾಗಿ ಅವಳು ಸರಿಯಾಗಿ ಹಾಡಿದ್ದನ್ನೂ ತಪ್ಪೆನ್ನುತ್ತಾನೆ. ಅವಳನ್ನು ದೂರೀಕರಿಸಲು ಅದೊಂದು ನೆಪ. ಅವಳು ಮಳೆಯಲ್ಲಿ ನೆನಯುತ್ತಾ ಸೀದಾ ಗುರುಗಳ ಮನೆಗೆ ಹೋಗಿ ಹಾಡಿ ತೋರಿಸಿ, ಮಳೆಯಷ್ಟೇ ಭೋರ್ಗರೆದು ಅಳುತ್ತಾ “ಮೇಷ್ಟ್ರೇ ಇದು ತಪ್ಪಾ?” ಅಂತ ಕೇಳುತ್ತಾಳೆ. “ಇಲ್ಲ ಕೂಸೆ” ಅಂತ ಅಪ್ಪಿಕೊಳ್ತಾರೆ ಗುರುಗಳು. ಆ ಸಿನೆಮಾ ಬಂದಾಗಲೂ, ಕೀರಲು ದನಿ ಮಾಡಿ “ಮೇಷ್ಟ್ರೇ ಇದು ತಪ್ಪಾ?” ಅನ್ನುವ ಡೈಲಾಗನ್ನು ಹಾಸ್ಯವಾಗಿ ಮಾಡಿ ನಗ್ತಿದ್ದ ನನಗೆ, ಈಗ ತಿರಸ್ಕಾರದ ಆ ಯಾತನೆ ಅರ್ಥವಾಗುತ್ತಿದೆ.
ಇದನ್ನೂ ಓದಿ | ಪೋಸ್ಟ್ ಬಾಕ್ಸ್ 143 | ಪ್ರೇಮಲೋಕದ ಬಾಗಿಲು ಯಾವಾಗ ತೆಗೆಯುತ್ತೆ?
ನಂಗೂ ಯಾವಾಗಾದರೂ ಮಳೆಯಲ್ಲಿ ನಿಂತು ಅಳುತ್ತಾ “ಹೇಳೋ ನಂದೇನು ತಪ್ಪು?” ಅಂತ ಕೂಗಿ ನಿನ್ನನ್ನು ಕೇಳಬೇಕನಿಸುತ್ತದೆ. ಅಥವಾ ಕೇಳಬಹುದು “ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬ ಪ್ರೀತಿ, ಈಗ ಯಾಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ” ಅನ್ನುವ ಲಕ್ಷ್ಮಿನಾರಾಯಣ ಭಟ್ಟರ ಸಾಲನ್ನೂ. ಕಡೆಗೆ ಕವಿಯೇ ಪರಿಹಾರವನ್ನೂ ಹೇಳುತ್ತಾರೆ ನೋಡು-
ಹಮ್ಮು ಬೆಳೆದು ನಮ್ಮ ಬಾಳು
ಆಯ್ತು ಎರಡು ಹೋಳು
ಕೂಡಿಕೊಳಲಿ ಮತ್ತೆ ಪ್ರೀತಿ
ತಬ್ಬಿಕೊಳಲಿ ತೋಳು!
ಮತ್ತೆ? ಹೇಳು ಏನ್ಸಮಾಚಾರ? ಎಲ್ಲ ಆರಾಮಾ?