ಹೋಯ್ ಸೀಮೆಗಿಲ್ದೋನೇ,
ಐ ಲವ್ ಉಮಂಗ್!
ನಂಗ್ ಹೇಳೋದ್ನ ಇನ್ಯಾರ್ಗೋ ಹೇಳ್ತಿದಾಳಲ್ಲಾ, First of all who is this umang? ಅಂತ ಯೋಚಿಸ್ತಾ ಇದ್ಯಾ? ಹೇಳ್ತೀನ್ ತಾಳು, ತಾಳ್ಮೆಯಿಂದಲಿ ಕೇಳು. ಅವಳು ಉಮಂಗ್ ಇವಳು ಸಮಾರಾ. ಇವ್ರಿಬ್ರೂ “ಫೋರ್ ಮೋರ್ ಶಾಟ್ಸ್ ಪ್ಲೀಸ್” ಅನ್ನೋ ವೆಬ್ ಸೀರೀಸಿನ ಪಾತ್ರಗಳು. ಈ ಸಮಾರ ಸಿಕ್ಕಾಪಟ್ಟೆ ದೊಡ್ಡ ನಟಿ. ಉಮಂಗ್ ಅವಳ ಫಿಸಿಕಲ್ ಟ್ರೇನರ್. ಇಬ್ಬರಿಗೂ ಪ್ರೀತಿಯಾಗ್ಬಿಡತ್ತೆ. ಹೌದ್ ಕಣೋ. ಇಬ್ರೂ ಹುಡುಗೀರೇ. ಲೆಸ್ಬಿಯನ್ಸ್. ಸೋ ವಾಟ್? ಪ್ರೀತಿ is ಪ್ರೀತಿ ಅಷ್ಟೆ. ಲಿಂಗಬೇಧ ಏನಿಲ್ಲ ಅದಕ್ಕೆ. ಮತ್ತೆ ಅವ್ರಿಬ್ರ ರೊಮ್ಯಾಂಟಿಕ್ ದೃಶ್ಯಗಳನ್ನು ನೋಡುವಾಗ ಹುಡುಗಿ ಹುಡುಗಿ ಅನ್ನೋದ್ ಮರ್ತೇ ಹೋಗತ್ತೆ. ಹುಡುಗ ಹುಡುಗಿ ಪ್ರೀತಿಯಷ್ಟೇ ಸಹಜವಾಗಿದೆ ಅದು. ಅದ್ ಬಿಡು, ಕತೆ ಕೇಳು.
ಈ ಸಮಾರಗೆ ತಾನು ಲೆಸ್ಬಿಯನ್ ಅಂತ ತೋರಿಸಿಕೊಳ್ಳೋದು ಇಷ್ಟವಿಲ್ಲ. ಉಮಂಗ್‌ಗೆ ಸಮಾರ ಅಂದ್ರೆ ಜೀವ. ಅದೆಂಗೋ ಗೊತ್ತಾಗಿ, ಮೀಡಿಯಾಲಿ ಗಾಸಿಪ್ಪಾಗಿ, ಸಮಾರ ಇಮೇಜು ಮುರ್ದುಬಿದ್ದು, ಇಬ್ರೂ ಕಳ್ದ ಸೀಸನ್ನಲ್ಲಿ ದೂರ ಆಗಿದ್ರು. ಈ ಸೀಸನ್ನಲ್ಲಿ ಸಮಾರಗೆ ಡಿಪ್ರೆಶನ್ನಿರೋದು ಗೊತ್ತಾಗಿ ಉಮಂಗ್ ಸಮಾರ ಮನೆಯ ಬಾಗಿಲು ಬಡೀತಾಳೆ. ಅವಳು ಬಾಗಿಲು ತೆಗೆಯಲ್ಲ, ಇವಳು ಹಗಲುರಾತ್ರಿ ಬಾಗಿಲು ಕಾಯ್ತಾಳೆ. ಒಂದಿನ ಬಾಗಿಲು ತೆರೆಯತ್ತೆ, ಅದು ಪ್ರೇಮಲೋಕದ ಬಾಗಿಲು. yesss… ಅವ್ರಿಬ್ರೂ ಮತ್ತೆ ಒಂದಾಗ್ತಾರೆ. ಟ್ರೀಟ್ಮೆಂಟಿಗೆ ಸ್ಪಂದಿಸದ ಸಮಾರಳನ್ನು ಉಮಂಗ್, ತನ್ನೆಲ್ಲ ಕೆಲ್ಸ ಬಿಟ್ಟು ಅಮ್ಮನಂತೆ ನೋಡಿಕೊಳ್ತಾಳೆ. ಸಮಾರ ಮತ್ತೆ ಮೊದಲಿನಂತಾಗ್ತಾಳೆ. ಫಿಲ್ಮ್ ಫೆಸ್ಟಿವಲ್‌ಗೆ ಹೋಗುವಾಗ ಉಮಂಗ್‌ಳನ್ನು ಜೊತೆಯಲ್ಲೆ ಕರ್ಕೊಂಡು ಹೋಗಿ ಮೀಡಿಯಾ ಮೈಕುಗಳ ಮುಂದೆ “yes I am lesbian & umang is my girl friend” ಅಂತ ಮೂರು ಲೋಕಕ್ಕೂ ಕೇಳುವಂತೆ ಚೀರಿಹೇಳ್ತಾಳೆ.
ಅಬ್ಬಾ. ಅಂತೂ ಎಲ್ಲ ಸರಿಯಾಯ್ತು ಅಂತೀಯ? ನೋ. ಇವ್ರಿಬ್ಬರ ಪ್ರೀತಿಗೆ ಬೇಜಾನು ಪ್ರಚಾರ ಸಿಕ್ತದೆ. ಆ ಪ್ರಚಾರ ಉಮಂಗ್‌ಗೆ ಆಗದು. ಆದರೆ ಸಮಾರಾಗೆ? ಪ್ರಚಾರವೂ ಅಥವಾ ಪ್ರಚಾರವೇ ವ್ಯಾಪಾರ. ಕೊನೆಗೆ ಮದುವೆಯೂ ನಿರ್ಧಾರವಾಗುತ್ತದೆ. ಉದಯಪುರದ ಅತ್ಯಂತ ದುಬಾರಿ ಬಂಗಲೆ. ಸಮಾರ ಮದುವೆ ಅಂದ್ರೆ ಸುಮ್ಸುಮ್ನೆಯಾ? ಅಂತ ಸಮಾರ ಭಾವಿಸಿರ್ತಾಳೆ. ಮದುವೆಯ ತಯಾರಿಯ ಪ್ರತಿಹೆಜ್ಜೆಯೂ ಕೆಮರಾದಲ್ಲಿ ದಾಖಲು. ಉಮಂಗ್‌ಗೆ ಕಿರಿಕಿರಿ. ಪ್ರತಿಸಲವೂ ಉಮಂಗ್ ಇದರ ಬಗ್ಗೆ ತಗಾದೆ ತೆಗೆವುದು, ಸಮಾರ “ಪ್ಲೀಸ್ ಬೇಬಿ” ಅಂದಾಗ “ಇಟ್ಸ್ ಒಕೆ” ಅಂತ ಕರಗಿಹೋಗೋದು. ಮದುವೆಗೆ ಹಾಕಿಕೊಳ್ಳೋ ಅವಳ ಬಟ್ಟೆ, ಮಣ್ಣುಮಸಿ ಎಲ್ಲವೂ ಇವಳದೇ ಆಯ್ಕೆ. ಮೀಡಿಯಾ ಮುಂದೆ ಏನು ಮಾತಾಡಬೇಕು ಎಷ್ಟು ಮಾತಾಡಬೇಕು, ಯಾವುದನ್ನು ನೇರಾನೇರ ಆಡಬಾರದು ಎಲ್ಲವೂ ಸಮಾರಳ ಕಂಟ್ರೋಲಿನಲ್ಲೆ.
ಅವತ್ತು ಮದುವೆ. ಭರ್ಜರಿ ತಯಾರಿ. ಈ ತಯಾರಿಯ ನಡುವೆಯೇ ಸಮಾರಾಗೆ ಫೋನು ಬರುತ್ತದೆ. ಅಮೆರಿಕದಲ್ಲಿ ಎಷ್ಟೋ ತಿಂಗಳುಗಳು ಅವಳ ಮುಂದಿನ ಸಿನೆಮಾ ಶೂಟಿಂಗ್. ಮದುವೆ ಮಂಟಪಕ್ಕೆ ಹೋಗ್ತಾ ನಾನು ಇಂತಾ ದೊಡ್ಡ ಸಿನೆಮಾಗೆ ಆಯ್ಕೆಯಾಗಿದ್ದೇನೆ. ನಾವಿಬ್ರೂ ಅಲ್ಲಿ ಹೋಗ್ತಿದ್ದೇವೆ ಅಂತಾಳೆ ಸಮಾರ. ನಾನಲ್ಲಿ ಬಂದು ಏನು ಮಾಡಲಿ? ಕೇಳುವ ಉಮಂಗ್‌ಗೆ ಅಲ್ಲಿಯೂ ದೊಡ್ ದೊಡ್ ಸ್ಟಾರ್‌ಗಳಿಗೆ ಟ್ರೇನ್ ಮಾಡು ಅನ್ನುತ್ತಾಳೆ. ನನ್ನ ಊರು, ನನ್ನ ಫ್ರೆಂಡ್ಸ್? ಅನ್ನುವ ಉಮಂಗ್ ಭಾವುಕ ಮಾತು ಸಮಾರಾಗೆ ಲೆಕ್ಕಕ್ಕಿಲ್ಲ. “ಅವತ್ತು ಎಲ್ಲೋ ಹೋಗ್ತೀನೆಂದು ಹೇಳಿ ನೀನು ಹೋಗಿದ್ದು ಆಡಿಷನ್ನಿಗಾ? ಸುಳ್ಯಾಕೆ ಹೇಳಿದೆ?” ಉಮಂಗ್ ಕಣ್ಣು ತುಂಬಿಕೊಂಡು ಕೇಳಿದರೆ “I am sorry baby, ಇದು ನಮ್ಮಿಬ್ಬರಿಗಾಗಿ. ಶೂಟಿಂಗ್ ಮುಗಿಸಿ ಹನಿಮೂನಿಗೆ ಯಾವ ದೇಶಕ್ಕೆ ಹೋಗೋಣ ಹೇಳು” ಅನ್ನುತ್ತಾಳೆ. ಮದುವೆಯ ಮಂಟಪದಲ್ಲಿ ಕೈಲಿ ಹಾರ ಹಿಡಿದ ಸಮಾರ, ಉಮಂಗ್‌ಗೆ “ನೀ ಸಿಗುವತನಕ ನನಗೆ ಪ್ರೀತಿಯೆಂದರೇನೆಂದೇ ಗೊತ್ತಿರಲಿಲ್ಲ. ಮುರಿದುಬಿದ್ದ ಬದುಕನ್ನು ಕಟ್ಟಿಕೊಟ್ಟವಳು ನೀನು, ನೀನೇ ನನಗೆಲ್ಲ… I love you umang, be my wife” ಅನ್ನುತ್ತಾಳೆ. ಆದರೆ ಉಮಂಗ್? ಬದಲಿಸಿಕೊಳ್ಳಲು ಕೊಟ್ಟ ಹಾರಕ್ಕೆ ಕೈ ಹಚ್ಚದೇ ನಿಲ್ಲುತ್ತಾಳೆ. ಮತ್ತು ಹೇಳುತ್ತಾಳೆ: “ಬಹುಶಃ ಜಗತ್ತಲ್ಲಿ ಅತಿಹೆಚ್ಚು ಬಳಸಲ್ಪಟ್ಟ ಪದ ಅಂದರೆ ಅದು ಲವ್. ಆದರೆ ನೀನು ನನಗೆ ಅದಕ್ಕಿಂತ ಹೆಚ್ಚು. ಸಮಾನ ಗೌರವ ಇಲ್ಲದ ಕಡೆ ಪ್ರೀತಿ ಇರಲ್ಲ ಸಮಾರ. ಈ ಸಂಬಂಧದಲ್ಲಿ ನೀನು ಮಾತ್ರ ಇದ್ದೀಯ. ನನಗೆ ಅಸ್ತಿತ್ವವೇ ಇಲ್ಲ. ಐ ಯಾಮ್ ಸಾರಿ” ಅಂದು ಮಂಟಪದಿಂದ ಹೊರನಡೆಯುತ್ತಾಳೆ. ಅಬ್ಬಾ ಎಂತಾ ಕಷ್ಟದ ನಿರ್ಧಾರ ಅದು! ಕುತ್ತಿಗೆಯವರೆಗೂ ಸಂಕಟ ತುಂಬಿತುಳುಕಿಸುವಂತದು. ಬಹಳ ಬಹಳ ಕಷ್ಟ.
ಇಲ್ಲಿ ಯಾರದು ಸರಿ? ಯಾವುದು ತಪ್ಪು? ಅಷ್ಟೆಲ್ಲ ತನ್ನ ಬಗ್ಗೆಯೇ ಮಾತ್ರ ಯೋಚಿಸೋದಾದರೆ ಆ ಸಮಾರ ತನ್ನ ಕಿರೀಟಗಳ ಹರಳು ಲೆಕ್ಕ ಹಾಕೊಂಡು, ನಿರ್ಭಾವುಕ ಪ್ರಶಸ್ತಿಗಳ ಫ್ರೇಂ ನೋಡಿಕೊಂಡು ಕೂರಬೇಕಿತ್ತು. ಬಹುಶಃ ತನ್ನನ್ನು ತನ್ನ ಮೆಟ್ಟಿಲುಗಳನ್ನು, ತನ್ನ ಗೆಲುವನ್ನು ಮಾತ್ರ ಪ್ರೀತಿಸೋರಿಗೆ ಬೇರೆಯವರನ್ನು ಪ್ರೀತಿಸಲು, ಅದರಲ್ಲೂ ಗೌರವಯುತವಾಗಿ ಪ್ರೀತಿಸಲು ಸಾಧ್ಯವೇ ಇಲ್ಲವೇನೋ. ಅಂತವರು ತನ್ನ ಪ್ರೇಮಿಯ ಒಳಗಿರುವ ತನ್ನ ಬಿಂಬವನ್ನೇ ಮತ್ತೆ ಪ್ರೀತಿಸಿಕೊಳ್ತಾರೆ, ನಾನು ಇಂತಾ ಒಂದು ಸೀಮೇಗಿಲ್ಲದ ಪರ್ಸನಾಲಿಟಿ ಆದ್ದರಿಂದ ನಾನಂದರೆ ಬಿದ್ದು ಸಾಯ್ತಾಳೆ ಅಂದುಕೊಳ್ತಾರೇನೋ. ಹಾಗಿಲ್ಲ ಅದು. ಪ್ರೀತಿ ಒಲಿಯುವುದು, ಕರಗುವುದು ಒಂದು ಹಿಡಿ ಪ್ರೀತಿಗೆ ಮಾತ್ರ. ಬಯಸುವುದು ಕೂಡ ಅಷ್ಟನ್ನೆ. NOTHING ELSE. ಹಾಗಲ್ಲದಿದ್ದರೆ ಅಮೃತಮತಿ ಯಾಕೆ ಅಷ್ಟಾವಕ್ರನನ್ನು ಬಯಸುತ್ತಿದ್ದಳು? ರಾಜನೇಕೆ ಬಡವಿಗೆ ಒಲಿಯಬೇಕು? ಪ್ರೀತಿ ಮೊದಲು ಉದಾರತೆಯನ್ನು ಕಲಿಸುತ್ತದೆ. ಅಮ್ಮನಂತಾಗುವುದನ್ನೂ… ಅದಿಲ್ಲದಿದ್ದರೆ ಅದು ನಿಜದ ಪ್ರೀತಿಯಲ್ಲ. ಭಯ, ಜಂಬ, ಸ್ವಪ್ರತಿಷ್ಟೆ, ಸ್ವಕೇಂದ್ರಿತ ಮನಸ್ಥಿತಿ ಇದೆಲ್ಲ ಇದ್ದಲ್ಲಿ ಪ್ರೀತಿಗೆ ಇಷ್ಟಿಷ್ಟೇ ಉಸಿರುಗಟ್ಟುತ್ತಾ ಹೋಗ್ತದೆ. ಕಡೆಗೆ ಯಾವುದೋ ಅನಿರೀಕ್ಷಿತ ಗಳಿಗೆಯಲ್ಲಿ ಧುತ್ತಂತ ಸತ್ತು ಬೀಳುತ್ತದೆ!
ಇದನ್ನೂ ಓದಿ | ಪೋಸ್ಟ್ ಬಾಕ್ಸ್ 143 | ದೂರ- ಅಂತರಗಳೆಂಬ ಮಾಯೆ!
ಹಿಡಿಪ್ರೀತಿಯನ್ನು ಮಾತ್ರ ಬಯಸುವ ಪ್ರೀತಿಗೆ ಸ್ವಾಭಿಮಾನ ಕೂಡ ಅದು ಮುಷ್ಟಿ ಹೆಚ್ಚೇ ಇರುತ್ತದೆ. ಅಷ್ಟಾಗಿಯೂ ಅದು ಮತ್ತೆ ಮತ್ತೆ ಸೋಲುತ್ತದೆ. ಮುಂದಿನ ಸೀಸನ್ ನೋಡಿಲ್ಲ ನಾನು. ಅದರಲ್ಲಿ ಮತ್ತೆ ಈ ಉಮಂಗ್ ಸಮಾರಾಳ ಬಳಿ ಹೋಗಿ ಅಂಗಲಾಚುತ್ತಾಳೆ ಅಂತ ಬಲವಾದ ಡೌಟಿದೆ ನನಗೆ. ನಿಜದ ಪ್ರೀತಿ ಅಂದರೇ ಹಾಗೆ ಕಣೋ. ಅದು ನೋಯುತ್ತದೆ. ಎಷ್ಟೇ ನೊಂದರೂ ಮತ್ತೆ ಮತ್ತೆ ಸೋತು ಕರಗುತ್ತದೆ. ಅದೊಂದು ಅದೃಷ್ಟ!
ಅದೃಷ್ಟವೆಂದರೆ ಗೊತ್ತಾ ನಿನಗೆ? ಅದು ಜ್ಯೋತಿಷಿಗಳ ಜಾತಕವಲ್ಲ, ರಾಶಿಗೆ ಹೊಂದುವ ಕೈಬೆರಳ ಉಂಗುರವಲ್ಲ. ಯಾರೋ ನಮ್ಮನ್ನು ತಮ್ಮ ಜೀವದಕ್ಕಿಂತಲೂ ಮುಖ್ಯ ಅಂತ ಭಾವಿಸುವ, ಎಷ್ಟು ಹಣಕೂ ಕೊಳ್ಳಲು ಬಾರದ ಪ್ರೇಮ. ಆ ಲೆಕ್ಕದಲ್ಲಿ ನೀನಂತೂ ಅದೃಷ್ಟವಂತ ಕಣೋ.
ನೀನು ಸೀಮೆಗಿಲ್ದೋನು ಅಂತ ನನಗೇ ಗೊತ್ತಿದೆ. ನೀನೇ ಪೋಸೆಲ್ಲ ಕೊಡಬೇಡ. ಸಿಟ್ಟು ಬರತ್ತೆ. ಅರಮನೆಯ ಕಿಟಕಿಯಾದರೂ ಗುಡಿಸಲಿನ ಕಿಟಕಿಯಾದರೂ ಬೆಳಕಿಗೆ ಭೇದವಿರುವುದಿಲ್ಲ. ನಮಗೆ ಕಿಟಕಿಯನ್ನು ತೆರೆದಿಡುವ ಗುಣವಿರಬೇಕು ಅಷ್ಟೆ. ಬಾಗಿಲು ಮುಚ್ಚಿಕೊಂಡಲ್ಲಿ ಬೆಳಕೂ ಇಲ್ಲ. ಪ್ರೀತಿಯೂ ಇಲ್ಲ. ಉಮಂಗ್ ಪಾತ್ರವನ್ನೆ ನೋಡಿದೆಯಲ್ಲ, ಬದುಕಿಡೀ ಬಯಸಿದ್ದು, ಕನಸಿದ್ದು ಸಿಕ್ಕ ಗಳಿಗೆ ಪಟ್ ಅಂತ ಒಂದು ಕ್ಷಣದಲ್ಲಿ ಕೊಡವಿಕೊಂಡು ಹೋಗಿಬಿಟ್ಟಳಲ್ಲಾ! ಉಮಂಗ್ ನಿರ್ಧಾರ ಆ ಕ್ಷಣದ್ದಿರಬಹುದು. ಅದರ ಹಿಂದಿನ ಕಾರಣಗಳು ಹಳೆಯ ನೋವುಗಳೆಲ್ಲದರ ಸಂಕಲಿತ ಮೊತ್ತವೇ. ಅಲ್ವಾ? ಸಮಾರ ಅತ್ತು ಬೇಡಿಕೊಂಡರೂ, ಸ್ವತಃ ಉಮಂಗ್‌ಗೂ ತನ್ನ ಪ್ರೀತಿಯನ್ನು ತೊರೆದುಹೋಗಲು ಇಷ್ಟವಿಲ್ಲದಿದ್ದರೂ, ಹೊಟ್ಟೆಯೊಳಗೆ ಸಂಕಟ ತುಂಬಿಕೊಂಡೂ ತನ್ನ ನಿರ್ಧಾರಕ್ಕೆ ಬದ್ಧಳಾಗಿಬಿಟ್ಟಳು. ಎಂತಾ ಕ್ಯಾರೆಕ್ಟರ್! ಪಾಪ ಅನಿಸಲಿಲ್ಲ ನನಗೆ. ಉಮಂಗ್ ಮೇಲೆ ಗೌರವ ಬಂತು.
ಕೆಲವು ನಿರ್ಧಾರಗಳೇ ಹಾಗೆ ಕಣೋ. ಸರಿಯಾಗಿರುತ್ತವೆ ಮತ್ತು ಅತ್ಯಂತ ಸಂಕಟಮಯವಾಗಿಯೂ. ಆ ಸಂಕಟವನ್ನು ಎದುರಾಗುವ ಶಕ್ತಿ ನನಗಂತೂ ಇಲ್ಲ ಗುರುವೇ. ಅದಕ್ಕಿಂತ ನಿನ್ ಮುಂದೆ ಸಣ್ಣಪುಟ್ಟದಕ್ಕೆ ಸೋಲೋದೇ ವಾಸಿ.
ಸರಿ ಇರು. ಉಮಂಗ್ ಮುಂದಿನ ಸೀಸನ್‌ನಲ್ಲಿ ಏನು ಮಾಡ್ತಾಳೋ ನೋಡಿ ಹೇಳ್ತೀನಿ ನಿನಗೆ. ಬೈ.
ಇದನ್ನೂ ಓದಿ | ಪೋಸ್ಟ್ ಬಾಕ್ಸ್ 143 | ಭಗ್ನ ಕನಸಾಗದಿರು ನೀನುದನ್ನೂ ಓದಿ |