ದೂರದಲ್ಲಿರೋನೇ,
ಡಿಸ್ಟೆನ್ಸ್ ಮ್ಯಾಟರ್ಸ್ ಅನ್ಸತ್ತೆ ಕಣೋ. ಹಿಂದೆ ಮುಂದೆ ಏನೂ ಹೇಳದೇ ಹೀಗಂದ್ರೆ ನಿನಗೆ ತಾನೇ ಏನರ್ಥವಾಗಬೇಕು ಹೇಳು? ಹೇಳ್ತೀನಿ. ನನಗೆ ನಿನ್ನನ್ನು ಭೇಟಿಯಾಗೋದಂದ್ರೆ ಆಗಲ್ಲ… ಯಾರಾದರೂ ಈ ಮಾತು ಕೇಳಿದರೆ ಖಂಡಿತಾ ಅಚ್ಚರಿಪಡ್ತಾರೆ. ಸಾಮಾನ್ಯವಾಗಿ ನೋಡ್ಬೇಕು, ನೋಡ್ತಾನೇ ಇರ್ಬೇಕು, ಮಾತಾಡ್ಬೇಕು, ಮಾತಾಡ್ತಾನೇ ಇರಬೇಕು ಅನ್ಸೋದು ತಾನೇ ಪ್ರೇಮದ ಒರಿಜಿನಲ್ ಸಿಮ್ಟಮ್ಮು? ನಂಗ್ಯಾಕೋ ಇದರ ಉಲ್ಟಾ ಅನಿಸತ್ತಪ್ಪ. ನಿನ್ನನ್ನು ನೋಡಬಾರದು, ಮಾತಾಡಬಾರದು, ದೂರ ಇರಬೇಕು. ಆದಷ್ಟೂ ದೂರ!
ಇದ್ಯಾಕೆ ಹೀಗೆ ಅಂತ ನಾನೂ ಯೋಚಿಸ್ತಾ ಇರ್ತೀನಿ. ಯೂಟ್ಯೂಬಲ್ಲಿ ಸಣ್ವಯಸಿನ, ಶಾಂತ, ಸೌಮ್ಯಮುಖದ, ಮಂದಸ್ಮಿತ ಬುದ್ಧಾನುಯಾಯಿ ಹುಡುಗನೊಬ್ಬನನ್ನು ನಾನು ಫಾಲೋ ಮಾಡೋದು ಗೊತ್ತಲ್ಲ ನಿನಗೆ? ಅವನು ಹೀಗೆ ಕೇಳಿದ್ದ. ಮನುಷ್ಯರು ಜಗಳ ಮಾಡುವಾಗ ಯಾಕ್ ಕೂಗಾಡ್ಕೊಂಡ್ ಕಿರುಚಾಡ್ಕೊಂಡ್ ಮಾತಾಡ್ತಾರೆ ಗೊತ್ತಾ? ಕೋಪ ಬಂದಿರತ್ತಲ್ಲ, ಉದ್ವೇಗದಲ್ಲಿರ್ತಾರಲ್ಲಾ ಅದಿಕ್ಕೆ ಅಂತ ಉತ್ತರ ಯೋಚಿಸ್ದೆ ನಾನು. ನಿನ್ನನ್ ಕೇಳಿದ್ರೂ ಇದೇ ಉತ್ರ ತಾನೇ ಕೊಡ್ತಿದ್ದೆ? ಆದರೆ ಅವನು ಬೇರೆಯೇ ಕಾರಣ ಹೇಳಿದ. ಇಂಟರೆಸ್ಟಿಂಗ್ ಆಗಿದೆ. ಕೇಳಿದ್ರೆ ಹೌದೇನೇ? ಅಂತೀಯಾ ನೀನೂ… ಕೋಪ ಬಂದಾಗ ಮನುಷ್ಯರ ಮನಸ್ಸುಗಳು ದೂರ ಆಗತ್ತಂತೆ. ಜಗಳ ಆಡ್ತಿರೋರಿಬ್ರೂ ಎದುರಿಗೇ ಇದ್ರೂ, ಹತ್ರದಲ್ಲೇ ಇದ್ರೂ ಮಾನಸಿಕವಾಗಿ ಭಾವನಾತ್ಮಕವಾಗಿ ಅವರ ಹೃದಯಗಳು ದೂರ ಹೋಗ್ತಾವಂತೆ. ಕೋಪ ಹೆಚ್ಚಾದಷ್ಟೂ ಇನ್ನಷ್ಟು ದೂರ ದೂರ ಹೋಗ್ತಾ ಹೋಗ್ತಾ ಆ ಎರಡೂ ಹೃದಯಗಳು ಅಷ್ಟೊಂದು ದೂರದಿಂದ ಒಬ್ರನ್ನೊಬ್ರು ರೀಚ್ ಮಾಡಕೋಸ್ಕರ ಹಾಗ್ ಕೂಗಾಡೋದಂತೆ ನೆನಪಿಸ್ಕೋ ನೀ ನಂಗ್ ತುಂಬಾ ಕೋಪ ತರಿಸಿದಾಗ್ ತಾನೇ ನಾನು “ಏ ಹೋಗೋ” ಅಂತ ಚೂರೇ ಚೂರ್ ಧ್ವನಿ ಜಾಸ್ತಿ ಮಾಡದು? “ಲವ್ ಯೂ ಕಣೆ” ಅಂದಾಗ ಧ್ವನಿ ಏರಿಸಿ ಉತ್ರ ಕೊಡಕ್ ಸಾಧ್ಯನಾ? ಹ್ಞಾಂ, ಸೇಮ್ ಲಾಜಿಕ್ ಇಲ್ಲೂ ಅಪ್ಲೈ ಆಗತ್ತಂತೆ. ಪ್ರೀತ್ಸೋರ ಹೃದಯಗಳು ಹತ್ರ ಇರೋದ್ರಿಂದ ಅವರ ಧ್ವನಿ ಕೂಡ ಕಡಿಮೆ ಇರತ್ತಂತೆ. ಇನ್ನೂ ಹತ್ರ ಆಗ್ತಾ ಆಗ್ತಾ ಮಾತು ಕೂಡ ಬೇಡ್ವಂತೆ. ಸುಮ್ನೆ ಮೌನವಾಗಿ ಕೂತ್ಕೊಂಡಿದ್ರೂ ಪರಸ್ಪರ ಮಾತಾಡಬಹುದಂತೆ.
ನಿನ್ ವಿಷಯದಲ್ಲಿ ಯಾವ ಲಾಜಿಕ್ ಕೆಲ್ಸ ಮಾಡ್ತಿದೆ ಅಂತ್ಲೇ ಅರ್ಥವಾಗ್ತಿಲ್ಲ ನೋಡು. ಮಾತು ಇಷ್ಟ ನಂಗೆ. ನೀನೂ ಇಷ್ಟ. ಆದರೆ ನಿಂಜೊತೆ ಮಾತಾಡಕಿಷ್ಟ ಇಲ್ಲ. ಯಾಕಿರಬಹುದು? ಈ ಬುದ್ಧಾನುಯಾಯಿ ಹೇಳಿದ ಮಾತನ್ನೆ ನಂಬೋದಾದರೆ ಮಾತೇ ಅಗತ್ಯವಿಲ್ಲದಷ್ಟು ಹತ್ರವಾಗಿರಬೇಕಪ್ಪ ಹೃದಯಗಳು. ಅದಾಗಿದೆಯ? ನೋ… ವೇ. ಹಾಗನಿಸಲ್ಲ ನನಗೆ. ಅಥವಾ ಹತ್ರ ದೂರಗಳನ್ನು ಲೆಕ್ಕಿಸದ, ಮಾತು ಮೌನಗಳನ್ನು ಮೀರಿದ ಸ್ಥಿತಿಯೊಂದನ್ನು ತಲುಪಿದ್ದೇವಾ ನಾವು? ಅಥವಾ ನಾನು? ನೋ…ನೋ ಖಂಡಿತಾ ಇಲ್ಲವೇ ಇಲ್ಲ. ಯಾಕಂದ್ರೆ ನೀನು ಭೌಗೋಳಿಕವಾಗಿ ನನ್ನಿಂದ ಎಷ್ಟು ಕಿಲೋಮೀಟರ್ ದೂರದಲ್ಲಿದ್ದೀ ಅನ್ನುವುದೇ ಎಷ್ಟೋ ವ್ಯತ್ಯಾಸ ಉಂಟುಮಾಡತ್ತೆ ನನ್ನೊಳಗೆ. ಹತ್ರದಲ್ಲಿದ್ದಾಗೊಂದು ನಿರಾಳ, ಕಿಲೋಮೀಟರುಗಳ ಅಂತರ ಹೆಚ್ಚಿದಷ್ಟೂ ವಿಚಿತ್ರ ತಳಮಳ. ಆದರೆ ಒಮ್ಮೊಮ್ಮೆ ನೀನು ಹತ್ರದಲ್ಲಿದ್ದಷ್ಟೂ ದೂರದಲ್ಲಿರುವ ಹಾಗೆ, ದೂರದಲ್ಲಿದ್ದಷ್ಟೂ ಹತ್ರದಲ್ಲಿರುವ ಹಾಗನಿಸತ್ತೆ ನನಗೆ. ಇದಕ್ಕೇನು ಕಾರಣ?
ಬಿಪಿ ಚೆಕ್ ಮಾಡುವ ಮಷೀನು ನೋಡಿದ್ದೀಯಲ್ಲಾ… ಅದರ ಮೀಟರು ಮೇಲೇರಿ, ಕೆಳಗೆ ಬಂದು, ಮತ್ತೆ ಮೇಲೆ ಕೆಳಗೆ ಆಗಿ ಒಂದು ನಂಬರು ತೋರಿಸ್ತದಲ್ಲಾ… ಹಾಗೆ ಪಿನ್ ಮಾಡದೇ ಬಿಟ್ಟ ನಿನ್ನ ಹೆಸರು ನನ್ನ ವಾಟ್ಸಪ್ ಲಿಸ್ಟಿನಲಿ ಏರಿಳಿಯುತ್ತಾ ದೂರ-ಅಂತರಗಳನ್ನು ಲೆಕ್ಕ ಮಾಡುತ್ತಾ ಇರುವ ಹಾಗೆ ಅನಿಸತ್ತೆ ನನಗೆ. ನಾನು ನಿನಗೆ ಮೆಸೇಜಿಗೊಂದು ನೆಪ ಹುಡುಕುತ್ತಾ ವಾಟ್ಸಪ್ನಲ್ಲಿ ನಿನ್ನ ಹೆಸರನ್ನು ಮೇಲೆ ತರುತ್ತಾ ಇರುವಷ್ಟು ಹತ್ತಿರ ಮತ್ತು ನೀನು ನನಗೆ, ಅಂತಾ ಸಣ್ ಸಂಗತಿಗಳನೆಲ್ಲ (?) ಗಮನಿಸದೇ ಹೆಸರು ಕೆಳಕ್ಕೆ ಕಳಿಸುತ್ತಲೇ ಇರುವಷ್ಟು ದೂರ!
ಇದನ್ನೂ ಓದಿ | ಪೋಸ್ಟ್ ಬಾಕ್ಸ್ 143 | ಭಗ್ನ ಕನಸಾಗದಿರು ನೀನು
ಮೊನ್ನೆ ಇದ್ದಕ್ಕಿದ್ದಂತೆ ಕೆನ್ನೆ ಮೇಲೊಂದು ಮೊಡವೆ. ಅದಕ್ಕೆ ಹುಡುಗಿಯರೊಂದು ಗುಟ್ಟಿನ ಕಾರಣ ಹೇಳುತ್ತಾರೆ. ಹಾಗೆ ಅವರು ಹೇಳಿದ್ದನ್ನು “ಹೌದೇನೋ?” ಅಂತ ನಿನ್ನ ಕೇಳಬೇಕನಿಸಿತು. ಮತ್ತೆ ಬೇಡವೆಂತಲೂ ಅನಿಸಿತು. ಹೀಗೆ, ಈ ಜಗತ್ತಿನಲ್ಲಿ ನಿನಗೆ ಮಾತ್ರವೇ ಹೇಳಬಹುದಾದ ವಿಷಯಗಳನ್ನು ಹೇಳಲು ನೀನು ಸಿಗದಿದ್ದಾಗ, ಸಿಕ್ಕರೂ ನಾನು ಹಿಂಜರಿದು ನಿಲ್ಲುವಾಗ, ಹೇಳಬಹುದೆಂಬ ಆಪ್ತಭಾವವನ್ನು ನೀನು ಉಂಟುಮಾಡದಿದ್ದಾಗ, ಅಥವಾ ತೀರಾ ಎದುರಾಎದುರೇ ಸಿಕ್ಕರೂ ಅದು ನೀನೇ ಅಲ್ಲ, ಬೇರೆ ಯಾರೋ ಅನಿಸುವಾಗೆಲ್ಲ ನೀನು ದೂರ, ಬಲುದೂರದಲ್ಲಿರುವ ಹಾಗನಿಸುತ್ತದೆ. ಬಹಳ ಸಲ ನನಗೂ ನೀನು ಹತ್ರದಲ್ಲಿದ್ದಾಗಲೂ ಜೋರಾಗಿ ಕೂಗಿ ಮಾತಾಡಬೇಕು ಅನಿಸತ್ತೆ. ಅದರರ್ಥವೇನು, ಕಾರಣವೇನು ಅಂತ ಹುಡುಕಲು ಹೊರಟರೆ ಮತ್ತೆ ಆ ಬುದ್ಧಾನುಯಾಯಿ ಮಂದಸ್ಮಿತನ ಮುಂದೆ ಹೋಗಿಯೇ ನಿಲ್ಲಬೇಕಾಗುತ್ತದೆ. ಅವನ ಲಾಜಿಕ್ಕು ಒಪ್ಪಬೇಕಾಗುತ್ತದೆ. ಅದು ಮನಸಿಗೆ ಕಷ್ಟವಾಗುತ್ತದೆ. ಆಗೆಲ್ಲ ಚೂರು ಜಾಣಳಾಗಿಬಿಡುತ್ತೇನೆ ಕಣೋ. ಕಾರಣ ಹುಡುಕುವ ದಾರಿಯನ್ನೆ ಮುಚ್ಚಿ ಕೂತುಬಿಡುತ್ತೇನೆ.
ಕವಿಗಳು ಅಂದಂತೆ ಹತ್ತಿರವಿದ್ದೂ ದೂರನಿಲ್ಲಲು ನಮ್ಮ ಅಹಮ್ಮಿನ ಕೋಟೆಯೇ ಆಗಬೇಕಿಲ್ಲ. ಹೃದಯಗಳ ನಡುವೆ ರವಷ್ಟು ಮಾತ್ರ ಅಂತರವಿದ್ದರೂ ಸಾಕು. ಅಷ್ಟ್ಯಾಕೆ, ನೀನು ಬಳಸುವ ಒಂದು ಶಬ್ದವೂ ಸಾಕು. ಒಂದೇ ಒಂದು ಶಬ್ದ! ಸಾಕೇ ಸಾಕು. ಹತ್ರಮಾಡಲಿಕ್ಕೂ, ದೂರ ಮಾಡಲಿಕ್ಕೂ, ಇಬ್ಬರಲ್ಲ ಒಬ್ಬರೇ ಅನಿಸಲಿಕ್ಕೂ
ದೂರ- ಅಂತರಗಳೆಂಬುದು ಮಾಯೆ ಕಣೋ!
ಇದನ್ನೂ ಓದಿ | ಪೋಸ್ಟ್ ಬಾಕ್ಸ್ 143 ಅಂಕಣ | ಹಾಡಿನ ಸಾಲು ಗುಂಗು ಹಿಡಿಸಿ ಮತ್ತಷ್ಟು ದಿನ ಓಡ್ತದೆ, ಮತ್ತೊಂದು ಸಿಗುವ ತನಕ