ಹೋಯ್ ಮುದ್ದು ಬೆಕ್ಕೇ,
ನಮ್ ಲಾ ಕಾಲೇಜಲ್ಲೊಬ್ಬ ಹುಡುಗ ಇದ್ದ ಕಣೋ. ಮಂಡ್ಯದ ಕಡೆ ಹಳ್ಳಿಯವನು. ಕಾಲೇಜು ಶುರುವಾಗಿ ವಾರವಾಗಿತ್ತು. ಅವತ್ ನಮ್ ಹಳ್ಳಿ ಬಸ್ಸೂ ಮಿಸ್ಸಾಗಿ ಮೊದಲ ಪೀರಿಯಡ್ ತಪ್ಪಿ ನಾನು ಪಾರ್ಕು ಹಾದು ಹೋಗುವಾಗ ಇವನು ಅಲ್ಲಿ ಕೂತಿದ್ದ. ವಿದೇಶೀಯರು, ಕೇರಳಿಗರು, ಕನ್ನಡಿಗರಲ್ಲೂ ಸಿರಿವಂತರು ಇದ್ದ ಆ ಕಾಲೇಜಿನಲ್ಲಿ ಹಳ್ಳಿಯವರು ನಾವಿಬ್ಬರೇ ಬಹುಶಃ. “ಇದ್ಯಾಕೋ ಮಾರಾಯ ಇಲ್ ಕುಂತಿದೀಯ” ಅಂದ್ರೆ “ಇಂಗ್ಲಿಷು ಅರ್ಥವಾಗ್ತಿಲ್ಲ” ಅಂದ. ನಂಗೂ ಅರ್ಥವಾಗಲ್ಲ, ಬಾ ನೋಡೋಣ ಅಂದಿದ್ದೆ. ಅವತ್ತು ಹಾಗೆ ಬೆಚ್ಚಿ ಕೂತಿದ್ದ ಆ ಹುಡುಗ ನಿಧಾನಕ್ಕೆ ಕಾಲೇಜಿನ ವಾತಾವರಣಕ್ಕೆ ಹೊಂದಿಕೊಂಡ. ಚಟ್ಪಟಾಂತ ಮಾತಾಡ್ತಾ, ಎಲ್ಲರನ್ನೂ ಮೀರಿಸ್ತಾ, ಎಲ್ಲ ಇವೆಂಟ್‌ಗಳಿಗೂ ನಿರೂಪಣೆ ಮಾಡ್ತಾ, ಒಂತರಾ ಕಾಲೇಜಿನಲ್ಲಿ ಸ್ಟಾರ್ ಆಗಿದ್ದ. ಹೈಕೋರ್ಟಿನ ಪ್ರಸಿದ್ಧ ವಕೀಲನಾಗಿರಬಹುದು ಅಂತಲೇ ಭಾವಿಸಿದ್ದೆ ನಾನು.
ಮೊನ್ನೆ ಮೊನ್ನೆ ಗೆಳತಿಯೊಬ್ಬಳು ಸಿಕ್ಕು ಕ್ಲಾಸ್ಮೇಟ್‌ಗಳ ಬಗ್ಗೆ ಮಾತಾಡ್ತಾ ಇವನು ಇನ್ನೂ ಯಾರದೋ ಅಸಿಸ್ಟಂಟ್ ಆಗಿದಾನೆ, ಸ್ವಂತ ಆಫೀಸು, ಕೇಸು ಇಲ್ಲ. ಸಣ್ಣಪುಟ್ಟ ಕೇಸುಗಳನ್ನು ಕೊಡ್ತಾರೆ ಅಂದಳು. ಈಗ ನಿಮ್ಮಾಫೀಸು ಪಕ್ಕವೇ. ಸಿಗಬಹುದು ಅಂದಳು. ಆದರೆ ನಂಗ್ಯಾಕೋ ಅವನನ್ನು ಭೇಟಿಯಾಗಬೇಕು ಅನಿಸಲಿಲ್ಲ. ಇವಳು ಸಿಕ್ಕು ಇದನ್ನು ಹೇಳಲೇಬಾರದಿತ್ತು ಅಂತ ಕೂಡ ಅನಿಸಿತು. ಅವನು ವೃತ್ತಿಯಲ್ಲಿ ಯಶಸ್ಸಾಗದ್ದಕ್ಕೆ ಪಾಪ ಏನು ಕಾರಣಗಳೋ, ಆದರೆ ಅವನನ್ನು ಭೇಟಿಯಾಗಿ, ಆಗ ಮಿಂಚುತ್ತಿದ್ದ ಕಣ್ಣುಗಳು ಈಗ ಬದುಕಿನ ಭಾರಕ್ಕೆ ಹತಾಶವಾಗಿರುವುದನ್ನು ಹೇಗೆ ನೋಡುವುದು? ನಮ್ ಜೋಗಿ ಸರ್ ಗೊತ್ತಲ್ಲ ನಿಂಗೆ? ಅವ್ರು ಯಾವಾಗಲೋ ತಮ್ಮ ಹೈಸ್ಕೂಲು ಗೆಳತಿಯರನ್ನು ಯಾಕೆ ಭೇಟಿಯಾಗಬಾರದೆಂದು ಹೇಳಿದ ಅಥವಾ ಬರೆದ ನೆನಪು. ಅದಕ್ಕೂ ಇಂತಹದೇ ಕಾರಣ. ಆಗ ನಂಗೆ ಸರಿಯಾಗಿ ಅರ್ಥವಾಗಿರಲಿಲ್ಲ. ಈಗ ಅರ್ಥವಾಗ್ತಿದೆ. ಹಳೆಯ ಕನಸುಗಳನ್ನು ಎಂದೂ ಮರುಭೇಟಿಯಾಗಬಾರದು ಕಣೋ. ಅದು ಸುಂದರ ಮಿಂಚಿನ ಹಾಗೆ. ಅದರ ವಿರೂಪ ರೂಪವನ್ನು ನಾವು ನೋಡಬಾರದು.
ಒಮ್ಮೊಮ್ಮೆ ಪ್ರೇಮದ ಸ್ವರೂಪ ಕೂಡ ಇದೇನಾ ಅನಿಸುತ್ತದೆ. ಅದು ಕನಸಿನಂತದು. ಕನಸಿನ ಹಾಗೇ ಇರಬೇಕು. ಕೈಗೆ ಸಿಗಬಾರದು. ಧಾರಾವಾಹಿಗಳ ಸಿದ್ಧಸೂತ್ರದ ಹಾಗೆ ಅದು. ಅಲ್ಲಿ ಬರೀ ಕನಸುಗಳ ಮಾರಾಟ. ಅಲ್ಲೆಲ್ಲೋ ಏನೋ ಇರ್ತದೆ, ಸಿಕ್ಕಲ್ಲ. ಕಾಣ್ತದೆ ದಕ್ಕಲ್ಲ. ಸಿಗಬಹುದು, ದಕ್ಕಬಹುದು ಎಂಬ ಆಶಯದಲ್ಲೆ ಸಾವಿರಗಟ್ಟಲೆ ಎಪಿಸೋಡು. ಪ್ರೇಮವೂ ಹೀಗೆಯೇ ಥೇಟ್. ಇರ್ತದೆ, ಸಿಗಲ್ಲ. ಕಾಣ್ತದೆ, ದಕ್ಕಲ್ಲ. ಬಹುಶಃ ಪ್ರೇಮವೆಂಬುದು ಗುರಿಯೇ ಅಲ್ಲ, ಬರೀ ದಾರಿ ಏನೋ ಅನಿಸುತ್ತದೆ.
ಓಹ್, ದಾರಿ ಮಾತ್ರ ಅಲ್ಲ ಮಾರಾಯ, ಪ್ರೇಮ ದಾರಿ ತಪ್ಸತ್ತೆ ಕೂಡ! ಯಾಕೆ ಕೇಳು, ಕನಸು ಗಿನಸು ಅಂತ ಯೋಚಿಸ್ತಾ ನಾನೀಗ ಹೋಗಬೇಕಾದ ದಾರಿಯ ವಿರುದ್ಧ ದಿಕ್ಕಿನ ಮೆಟ್ರೋ ಹತ್ತಿ ಕೂತುಬಿಟ್ಟಿದ್ದೆ. ಎಲ್ಲಾ ನಿನ್ನಿಂದಾನೇ ಆಗಿದ್ದು. ಎಸ್ಕಲೇಟರು ಬೇರೆ ಕೆಟ್ಟು ನಿಂತು, ಮೆಟ್ಲತ್ತಿ, ಇಳಿದು ಉಫ್… ನೋಡಿದರೆ ಇದಲ್ಲ ಎದುರು ಪ್ಲಾಟ್‌ಫಾರ್ಮ್ ಅಂತೆ. ಮತ್ತೆ ಇಳಿದು ಹತ್ತು. ಛೇ… ಏನಾಗಿದೆ ಈ ಹಾಳುತಲೆಗೆ? ಮತ್ತೆ ಹತ್ತಿಳಿದೆ. ಅಬ್ಬಾ! ಏದುಸಿರು. ಉಫ್. ರಾತ್ರಿ ಎಂಟೂಮುಕ್ಕಾಲು. ಪ್ಲಾಟ್‌ಫಾರ್ಮು ಬಹುತೇಕ ಖಾಲಿ! ಆದರೆ ಎದುರುಬದುರು ನಿಂತ ಇಬ್ಬರು ಸೆಕ್ಯೂರಿಟಿಯವರು ಮಾತಾಡುತ್ತಲೇ ಇದ್ದಾರೆ. ನಡುನಡುವೆ ರೈಲು ಬಂದು ಅಡ್ಡ ನಿಂತಾಗಷ್ಟೆ ಅವರ ಮಾತಿಗೆ ಬ್ರೇಕು. ಉಳಿದಂತೆ ಅವರ ಮಾತು ಸಾಗುತ್ತಿತ್ತು. ಯಾಕೋ ಕ್ಷಣ ಅವರಿಬ್ಬರೂ ಮಾಯವಾಗಿ ನಾನೂ ನೀನೂ ಅಲ್ಲಿ ನಿಂತಂತೆ ಭಾಸವಾಗೋಯ್ತು! ನಿಜ್ಜಾ ಸರಿ ಇಲ್ಲಪ್ಪ ಈ ಕಲ್ಪನೆ. ಅಷ್ಟೆಲ್ಲ ಕಷ್ಟಪಡಲ್ವೋ ನಾನು. ಇಳಿದು ಹತ್ತಿ ನೀ ಕೂತ ಬದಿಗೇ ಬಂದು ಪಕ್ಕದಲಿ ಕೂತು ಮಾತಾಡುವೆ ಆಯ್ತ? ಆದರೆ ಮೆಟ್ರೋ ಪ್ಲಾಟ್‌ಫಾರ್ಮುಗಳನ್ನು ದಾಟಿ ಬರುವುದಕ್ಕೂ ಬದುಕಿನ ಪ್ಲಾಟ್‌ಫಾರ್ಮುಗಳನ್ನು ದಾಟುವುದಕ್ಕೂ ಕಾಲದ ವ್ಯತ್ಯಾಸ ಬಹಳ. ಪರವಾಗಿಲ್ಲ. ನಾನು ದಾಟುವೆ. ನೀನು ಎದ್ದು ಹೋಗದೇ ಕಾಯಬೇಕಷ್ಟೆ. ಅಥವಾ ಹೀಗೇ ಚೆನ್ನಾಗಿದೆ ಅಂದರೂ ಒಕೆ. ಆಚೆಬದೀಲಿ ನೀನು ಈಚೆಬದೀಲಿ ನಾನು ನಡುವೆ ಬಂದು ಹೋಗುವ ರೈಲುಗಳು!
ಇದನ್ನೂ ಓದಿ | ಪೋಸ್ಟ್ ಬಾಕ್ಸ್ 143 ಅಂಕಣ | ಪ್ರತಿಕ್ರಿಯೆಯಲ್ಲ, ಕ್ರಿಯೆಯಾಗು ಒಂದು ದಿನ
ಎಫ್ಎಂನಲ್ಲಿ ಹಾಡು ಬರ್ತಿದೆ ನೋಡು. ಆಹಾ ಎಂತ ಮಧುರಾ ಯಾತನೆ ಅಂತೆ. ಕರ್ಮ ಮಾರಾಯ. ನೋವಂದ್ರೆ ನೋವಷ್ಟೆ ಅಲ್ವೇನೋ. ಅದು ಹಿತವಾಗಿ ಮಧುರವಾಗಿರಲು ಹೇಗೆ ಸಾಧ್ಯ? ಕವಿತೆ ಗಿವಿತೆ ಬರೆಯೋರ ಹುಚ್ಚು ಕಲ್ಪನೆ ಇದು. ಅಲ್ವೋ ಯಾತನೆ ಮಾಧುರ್ಯ ಎರಡೂ ಹೆಂಗಪ್ಪಾ ಒಟ್ಟಿಗಿರದು? ಹೀಗೆಲ್ಲ ಅನಿಸ್ತಿತ್ತು ಮುಂಚೆ. ಆದರೆ ನಿನ್ ಸಾವಾಸಕ್ಕೆ ಬಿದ್ದ ಮೇಲೆ ಗೊತ್ತಾಯ್ತು ಇದು ಕಲ್ಪನೆಯೇನಲ್ಲ, ಲೋಕದಲ್ಲಿ ಹೀಗೂ ಒಂದು ಐಟಂ ಉಂಟು ಅಂತ. ಈ ಹಿತವಾದ ನೋವು ಅನುಭವಕ್ಕೆ ಬರಬೇಕಾದ್ರೆ ಪ್ರೀತಿಸಬೇಕು ನೋಡು. ಚಿಕ್ಕಂದಿನಿಂದ ಅನುಭವ ಮತ್ತು ಅನುಭಾವ ಎರಡರ ವ್ಯತ್ಯಾಸ ಹೇಳುವ ಪ್ರವಚನಗಳನ್ನು ಕೇಳಿ ಬೆಳೆದಿದೀನಿ ನಾನು. ಅನುಭಾವ ಅನುಭವಕ್ಕೆ ಬರಲು ಬೇಕಾದಂತದೇ ಅದೃಷ್ಟ ಹಿತವಾದ ನೋವು ಅನುಭವಿಸಲೂ ಬೇಕು. ಅನುಭಾವಕ್ಕೆ ಆಧ್ಯಾತ್ಮ, ಮಧುರ ಯಾತನೆಯ ಭಾವಕ್ಕೆ ಪ್ರೀತಿಯೆಂಬ ತಾದಾತ್ಮ್ಯ.
ಈ ಕ್ಷಣ, ರವಿ ಬೆಳಗೆರೆ ತೀರಿಕೊಂಡಾಗ ಜೋಗಿ ಬರೆದ ಸಾಲುಗಳು ನೆನಪಾಗ್ತಿವೆ ಯಾಕೋ. “ಸೆಲೆಬ್ರಿಟಿಗಳ ಜೊತೆಗಿನ ಸ್ನೇಹಕ್ಕೂ ದ್ವೇಷಕ್ಕೂ ವಿಶೇಷವಾದ ಅರ್ಥವಿಲ್ಲ. ತುಂಬ ಪ್ರಸಿದ್ಧರಾದವರ ಬಳಿ ಮತ್ತೆ ಮತ್ತೆ ಸುಳಿಯಬಾರದು. ನಾವು ಅವರಿಗೆ ಆತ್ಮೀಯರೆಂದೂ ಭಾವಿಸಬಾರದು. ಆತ್ಮೀಯರಲ್ಲ ಎಂದು ಕೂಡ ತಿಳಿದುಕೊಳ್ಳಬಾರದು. ಕೃಷ್ಣ ಕುಚೇಲರ ಸ್ನೇಹದಂತೆ ಇದ್ದಷ್ಟೂ ಒಳ್ಳೆಯದು. ನಮ್ಮ ಅವಲಕ್ಕಿಯನ್ನು ಅವರಿಗೆ ದಿನವೂ ಕೊಡುತ್ತಿರಬಾರದು. ಅವರ ಆತಿಥ್ಯವನ್ನು ನಾವೂ ಸ್ವೀಕರಿಸಬಾರದು. ಅಲ್ಲಿಗೆ ಸಂಪನ್ನ.” ವ್ಯಕ್ತಿಗಳು ಮಾತ್ರವಲ್ಲ, ಕೆಲವರ ಜೊತೆಗಿನ ಕೆಲವು ಭಾವಗಳಿಗೂ ಸೆಲೆಬ್ರಿಟಿತನ ಇರ್ತದೆ. ಪ್ರೇಮವಂತೂ ಒಂದು ಸೆಲೆಬ್ರೇಷನ್. ಸ್ವತಃ ಆ ಭಾವವೇ ಒಂದು ಸೆಲೆಬ್ರಿಟಿ ಇದ್ದ ಹಾಗೆ. ಹಾಗಾದರೆ ಆ ಭಾವಕ್ಕೂ ಕೃಷ್ಣ ಕುಚೇಲರ ಈ ಕತೆ ಅನ್ವಯಿಸಬೇಕಾ? ಇಲ್ಲದಿದ್ರೆ ಮಧುರಯಾತನೆ ಪಕ್ಕಾವಾ? ಛೇ. ಸಾವಾಸ ಅಲ್ಲ ಮಾರಾಯ ನಿಂದು.
ಬ್ಯಾಡಪ್ಪ ಹಾಗಾದ್ರೆ. ಈ ನೆಕ್ಸ್ಟ್ ಲೆವೆಲ್ ಜನರ ಮಾತು, ಉದಾಹರಣೆಗಳ ತಂಟೆಗೇ ಹೋಗದ್ ಬ್ಯಾಡ ಆಯ್ತ? ಎಂತದಾದ್ರೂ ಆಗ್ಲಿ. ಸುಮ್ಮನೆ ಮುದ್ದು ಬೆಕ್ಕಿನ ಹಾಗಿರು ನೀನು. ಆಗಾಗ ಸೊಕ್ಕು ತೋರಿಸ್ತಾ. ಮತ್ತೆ ಮುದ್ದುಗರೀತಾ. ಧಾರಾವಾಹಿಯ ಎದುರಿಗಿದ್ದೂ ಸಿಕ್ಕದ ಗುರಿಯಾದರೂ ಸೈ, ಭಗ್ನಕನಸಿನ ಹಾಗೆ ಎಂದೆಂದೂ ಎದುರಾಗಬೇಡ. ರಾಶಿ ಲವ್ ಯೂ ಆಯ್ತ?
ಇದನ್ನೂ ಓದಿ | ಪೋಸ್ಟ್ ಬಾಕ್ಸ್ 143 ಅಂಕಣ | ಹಾಡಿನ ಸಾಲು ಗುಂಗು ಹಿಡಿಸಿ ಮತ್ತಷ್ಟು ದಿನ ಓಡ್ತದೆ, ಮತ್ತೊಂದು ಸಿಗುವ ತನಕ