Site icon Vistara News

ಪೋಸ್ಟ್‌ ಬಾಕ್ಸ್‌ 143 | ತುಂಟ ಕೋತಿಗೂ ಗಂಭೀರ ಗಜಕ್ಕೂ ಪ್ರೇಮ ಅಂದ್ರೆ..

love letter

ಮಿಸ್ಟರ್ ಪರ್ಫೆಕ್ಟ್,

ಭಾಳ ಇಷ್ಟ ಅಲ್ವಾ? ಹೀಗನಿಸ್ಕೊಳಕೆ? ನಂಗಂತೂ ಈ ಪರ್ಫೆಕ್ಷನಲ್ಲಿ ಯಾವ ನಂಬಿಕೆಯೂ ಇಲ್ಲಪ್ಪ. ಮೊನ್ನೆ ನಂ ವಸುಧೇಂದ್ರ ಸಖತ್ತಾಗ್ ಒಂದ್ ವಿಷ್ಯ ಹೇಳಿದ್ರು ಈ ಪರ್ಫೆಕ್ಷನ್ ಬಗ್ಗೆ. ನಿನಗೂ ಗೊತ್ತಿರೋದೇ ಇದು. ಕೇಳು. ಆಚಾರ್ಯರು ಕುರುವಂಶದೋರಿಗೆ ಬಿಲ್ವಿದ್ಯೆ ಕಲಿಸ್ತಾ ಇದ್ದಾಗ ಅದರ ಪರೀಕ್ಷೆಗೆ ಅಂತ ಎಲ್ರನ್ನೂ ಕರೀತಾರಂತೆ. ಕೌರವ ಪಾಂಡವರೆಲ್ಲ ಬರ್ತಾರೆ. ಒಬ್ಬೊಬ್ರನ್ನೇ ಕರ್ದು ಆಚಾರ್ಯರು ಕೇಳಿದ್ರು. “ಏನಯ್ಯಾ ಕಾಣ್ತಿದೆ ನಿನಗೆ? ನಾ ಕಾಣ್ತಿದೀನಾ?”

ಹೌದು ಗುರುಗಳೆ
ನನ್ ಸುತ್ತ ಇರೋ ಶಿಷ್ಯರು?
ಕಾಣ್ತಿದಾರೆ ಗುರುಗಳೆ.
ನಿನ್ ಅಣ್ತಮ್ಮಂದ್ರು?
ಓ ಯೆಸ್, ಕಾಣ್ತಿದಾರೆ ಗುರುಗಳೆ.
ಈ ಮರ?
ಪರ್ಫೆಕ್ಟಾಗ್ ಕಾಣ್ತಿದೆ ಗುರುಗಳೆ.
ಮರದ ಮೇಲಿನ ಹಕ್ಕಿ?
ಅದ್ದೂ ಚೆನ್ನಾಗೇ ಕಾಣ್ತಿದ್ಯಲ್ಲ ಗುರುಗಳೆ..
ʻಸರೀ ಓಯ್ತಾ ಇರು ನೀನು ಆಕಡೆ” ಅಂದ್ರು.

ಹೀಗೇ ಎಲ್ಲಾ ಶಿಷ್ಯರನ್ನೂ ಕರ್ದೂ ಕರ್ದೂ ಕೇಳಿ, ಕಡೆಗೆ ಅರ್ಜುನ ಬಂದ. ಅದೇ ಪ್ರಶ್ನೆಗಳು. ಆದ್ರೆ ಉತ್ತರ ಬೇರೆ.
ಏನಯ್ಯಾ ಅರ್ಜುನ, ನಾ ಕಾಣ್ತಿದೀನೇನಯ್ಯ?
ಇಲ್ಲ ಗುರುಗಳೆ.
ನನ್ ಸುತ್ತ ಇರೋರು?
ಕಾಣ್ತಿಲ್ಲ ಗುರುಗಳೆ.
ಮರ, ಹಕ್ಕಿ?
ಊಹ್ಞೂಂ.
ಮತ್ತೇನಯ್ಯ ಕಾಣ್ತಿದೆ ನಿಂಗೆ?
ಆ ಹಕ್ಕಿಯ ಕಣ್ಣು ಗುರುಗಳೆ.
ಸೂಪರ್ ಸಿಸ್ಯಾ ಅಂದ್ರೆ ನೀನೇ ಕಣ್ಲಾ, ಹೊಡಿ ಬಾಣ ಅಂದ್ರು.

ಗೊತ್ ಬಿಡೋ, ನೀ ಮನಸಲ್ಲೆ ವಾವ್ ವಾವ್, ಅದ್ದೂ ಅದ್ದೂ ಅರ್ಜುನ ಅಂದ್ರೆ ಅನ್ಕೋತಾ ಚಪ್ಪಾಳೆ ತಟ್ತಾ ಇರ್ತೀಯ. ಎಷ್ಟೇ ಆದ್ರೂ ಚೂರು ಅದೇ ಕೆಟಗರಿ ತಾನೆ ನೀನು? ಗುರಿ ಹಿಡಿದು ಹೋಗಬೇಕು. ಶ್ರದ್ಧೆಯಿಂದ ಒಂದೇ ಕಡೆ ಗುಂಡಿ ತೆಗೆದು ನೀರುಕ್ಕಿಸಬೇಕು ಅನ್ನೋ ಕೆಟಗರಿ. ಕೆಲ್ಸ ಆಗಬೇಕು. ಗುರಿ ಮುಟ್ಬೇಕು ಅಂದ್ರೆ ನಿನ್ ಹಾಗೇ ಇರಬೇಕು. ಆದ್ರೆ ಏನ್ ಗೊತ್ತಾ ಕಂದಾ…. ಅರ್ಜುನನ್ಗೆ ಜನ್ಮದಲ್ಲಿ ಕತೆಗಿತೆ ಬರಿಯೋಕಾಗಲ್ವಂತೆ. ಹಾಗಂತ ನಾನಲ್ವೋ, ನಮ್ ಯು.ಆರ್ ಅನಂತಮೂರ್ತಿ ಹೇಳಿದ್ದಂತೆ. ಅದನ್ನ ವಸುಧೇಂದ್ರ ಹೇಳಿದ್ರು. ನಾ ನಿನಗ್ ಏನ್ ಹೇಳಕ್ ಹೊರಟೆ ಅಂದ್ರೆ ಪರ್ಪೆಕ್ಷನಿಸ್ಟ್ ಆಗೋದ್ರಲ್ಲಿ ಅಂತಾ ಮಜ ಏನೂ ಇಲ್ಲ. ದಿಕ್ಕಾಪಾಲಾಗಿರೋದ್ರಲ್ಲಿ ಗುರಿ ತಪ್ಪಬಹುದು. ಆದ್ರೆ ಎಷ್ಟೊಂದು ಹೊಸನೋಟ ಸಿಗತ್ತೆ, ಅನುಭವ ಸಿಗತ್ತೆ. “ಉಪಯೋಗ ಏನ್ ಹೇಳಮ್ಮ” ಅಂದ್ಯಾ? ಏನೂ ಇಲ್ಲ. ಅಥವಾ ಎಲ್ಲಾ ಇದೆ.

ಅಥವಾ ಈ ಜಗತ್ತಿಗೆ ಎಲ್ಲಾ ತರದ ಜನರೂ ಬೇಕಲ್ಲೋ. ನಿನ್ ತರದವ್ರೇ ಇದ್ರೆ ಜಗತ್ತು ಘನಗಂಬೀರವಾದ ಜನರಿಂದ್ಲೇ ತುಂಬಿಹೋಗಿ ಭೂಮಿಭಾರವೂ ಜಾಸ್ತಿಯಾಗ್ಬಿಡೋದೇನೋಪಾ… ನನ್ ತರದವ್ರಿದ್ರೆ ಯಾವ್ದೂ ನೆಟ್ಟಗಾಗ್ದೇ ಒಂದ್ ಸರಿಯಾದ್ ಪ್ಲಾನಿಲ್ದೆ, ಗುರಿ ಇಲ್ದೆ ಸಿಕ್ ಸಿಕ್ದಂಗ್ ಇರ್ತಾ ಎಲ್ಲಾನೂ ದಿಕ್ ತಪ್ಪೋಗಿ ಎಡವಟ್ ಆಗ್ಬಿಡಬಹುದು. ಒಂದ್ ದಿಕ್ಕು ದೆಸೆ ಇಲ್ದ ನನ್ನಂತೋರಿಂದ ಸಮಾಜ ದೇಶ ನಡ್ಯೋದೆಂಗೇಳು? ಬ್ಯಾಲೆನ್ಸ್ ಆಗ್ಬೇಕು ಅಂದ್ರೆ ಎಲ್ಲಾ ತರದ ಜನ್ರೂ ಬೇಕು. ಸರೀನೇ. ಆದ್ರೆ ಈ ಎರಡು ಕೆಟಗರಿಗಳ ಮಧ್ಯೆ ಪ್ರೀತಿ ಆಗ್ಬಿಟ್ರೆ ಗತಿ ಏನಪ್ಪಾ? ಹೇಳು ನೀನೇ. ಸ್ಕೇಲ್ ತಗೊಂಡ್ ನೇರವಾಗಿ ಎಳೆದ ಗೆರೆ ಜೊತೆ ಚಿತ್ತ ಹರಿದತ್ತ ಗೀಚಿದ ಗೀಚಿಗೆ ಲವ್ವಾದ್ರೆ ಸಂಭಾಳಿಸೋದೇ ಬಲುಕಷ್ಟ ಕಣಾ. ಗೆರೆಗೆ ತಾನು ನೇರ ನಿಷ್ಟುರ ಸ್ಪಷ್ಟ ಅಂತೆಲ್ಲ ಕಾಲರ್ ಎತ್ಕೊಳೋಕೆ ಕಾರಣ ಇರಬಹುದು. ಆದರೆ ಗೋಜಲಿಗೂ ತಾನು ಪ್ರತೀಸಲ ನೋಡಿದಾಗ್ಲೂ ಹೊಸ ಅರ್ಥ ಕೊಡಬಲ್ಲೆ ಅನ್ನೋ ಹೆಮ್ಮೆ ಇರತ್ತಲ್ವ? ನಿಜವಾಗಿ ಎಡವಟ್ಟಾಗೋದು ಯಾವಾಗ್ ಗೊತ್ತಾ? ತಾನು ನೇರ ಮತ್ತು ಸರಿ, ಈ ಗೋಜಲು ಎರಡನೆ ಕೆಟಗರಿ ಅಂತ ಗೆರೆ ಅನ್ಕೊಂಡಾಗ. ಗೋಜಲು ಕೂಡ ಈ ಗೆರೆಗಿನ್ಯಾವ ಸೀಮೆ ಕ್ರಿಯೇಟಿವಿಟಿ ಇರತ್ತೆ? ಕಲೆ ಅರಳಿಸಬಲ್ಲ ನಾನೇ ಗ್ರೇಟು ಅನ್ಕೊಂಡಾಗ. ಹಾಗಿಲ್ದೆ ಗೆರೆ ಮತ್ತು ಗೋಜಲುಗಳ ಮಧ್ಯೆ ಪರಸ್ಪರ ಗೌರವ, ಹೆಮ್ಮೆ ಇದ್ರೆ ಎಲ್ಲಾ ಸಲೀಸು. ಆಗ ಇಬ್ರೂ ಸೇರಿ ಸಂಬಂಧದ ಸುಂದರ ರಂಗೋಲಿ ಬಿಡಿಸಬಹುದು.

ಹೋಯ್ ಏನ್ ತೂಕಡಿಸ್ತಾ ಇದೀಯ? ಕತೆ ಹೇಳ್ತಿದೀನಾ ನಾ ನಿಂಗೆ? ಆದ್ರೂ ಒಂದೊಂದ್ಸಲ ಹಿಂಗ್ಯಾಕಪ್ಪ ಮಾಡ್ದೆ ದೇವ್ರೆ ಅಂತಾನೂ ಕೇಳ್ಬೇಕನ್ಸತ್ ಕಣೋ. ನಿನ್ ಕಂಡ್ರೆ ಜೀವ ಬೀಡೋಷ್ಟು ಪ್ರೀತಿ ಇದ್ರೂ ಈ ವೈರುಧ್ಯ ಯಾವಾಗೇನ್ ಎಡವಟ್ ಮಾಡತ್ತೋ ಅಂತ ಭಯಾನೂ ಆಗತ್ತೆ. ಅಲ್ವೋ ಹೀಗೆ,

ನಿನ್ನಂತಾ ಸ್ಪಷ್ಟಕ್ಕೆ ನನ್ನಂತಾ ಗೋಜಲನ್ನ
ವ್ಯಕ್ತಕ್ಕೆ ಅವ್ಯಕ್ತಾನ
ನಿಶ್ಯಬ್ದಕ್ಕೆ ಶಬ್ದಾನ
ಶಿಸ್ತಿಗೆ ಅಶಿಸ್ತನ್ನ
ನಿಧಾನಕ್ಕೆ ಆತುರಾನ
ಕಡುಸಮಾಧಾನಿಗೆ ನಿಲ್ಲದ ಚಡಪಡಿಕೇನ
ತುಂಟಕೋತಿಯಂತೋಳಿಗೆ ಗಜಗಂಭೀರದಂತೋನ್ನ ಗಂಟಾಕಿ ತಂದಿಟ್ ತಮಾಷೆ ನೋಡ್ತಿಲ್ವಾ ವಿಧಿ?

ಕೋಲಿಗೂ ಚಿಟ್ಟೆಗೂ ಪ್ರೀತಿಯಾಗೋದಂದ್ರೆ ಸುಮ್ಮನೇ ಏನೋ? ಭಿನ್ನ ಆಸಕ್ತಿ, ಸ್ವಭಾವ ಇವುಗಳನ್ ಬೇಕಾದ್ರೂ ಹೇಗೋ ಒಂದ್ ಲೆಕ್ಕಕ್ ಸಂಭಾಳಿಸಬೋದು ಅಂತಿಟ್ಕೋ. ಆದ್ರೆ ಭಿನ್ನ ಸ್ತರಗಳಲ್ಲಿರ್ತಾರಲ್ಲ ಅವ್ರ ಮಧ್ಯೆ ಪ್ರೀತಿಯಾದ್ರಂತೂ ಇನ್ನೂ ಕಷ್ಟವೋ ಕಷ್ಟ ಮಾರಾಯ. ಒಬ್ರ ಮೆಟ್ಟಿಲಿನ್ ನಂಬರ್ ಒಂಬತ್ತೋ ಹತ್ತೋ. ಇನ್ನೊಬ್ರದು ಮೂರೋ ನಾಕೋ. “ನಡುವೆ ಅಂತರವಿರಲಿ” ಅಂತ ಬೋರ್ಡಾಕೋಕೆ ಇದೇನ್ ಆಟೋ ಲಾರಿ ಹಿಂಭಾಗನ ಹೇಳು? ಪ್ರೀತಿ ಕಣ್ಲಾ. ಮತ್ಮತ್ತೆ ಅದೇ ಹಳೇ ಉದಾಹರಣೆ ರೈಲ್ವೇ ಹಳಿ ನೆನಪಾಗತ್ ನೋಡು. ಕಟ್ಕಳಂಗೂ ಇಲ್ಲಾ… ಹಾಗಂತ ಬಿಡಂಗೂ ಇಲ್ಲ. ಜೊತೆಲಿರ್ಬೇಕು. ಇರ್ಬಾರ್ದು. ಕೈಚಾಚೋಷ್ಟು ದೂರದಲ್ಲಿರ್ಬೇಕು. ಕೈಗ್ ಸಿಗಬಾರ್ದು. ಏ ಹೋಗಾ…ಒಂಚೂರೂ ಸರಿ ಇಲ್ಲ ಇದೆಲ್ಲ.

ನೆಕ್ಸ್ಟ್ ಟೈಂ ಸಿಕ್ದಾಗ ಎಲ್ಲಾ ತರ್ಕಾನೂ ಭತ್ತದ್ ಹೊಟ್ಟಿನ ತರ ಉಫ್ ಅಂತ ಗಾಳಿಗ್ ತೂರಿ ಒಂದ್ ಹಗ್ ಕೊಡ್ತೀನಿ ನಿಂಗೆ. ಆಗಾದ್ರೂ ಬಾಯ್ತುಂಬಾ ನಗೋ ಮಾರಾಯ. ಈಗ್ಲೂ ಒಂದ್ಸಲ ನಗಬಹುದು. ಅದಕ್ಕಿನ್ನೂ ಜಿಎಸ್ಟಿ ಹಾಕಿಲ್ಲ. ಸ್ಲೈಲ್ ಪ್ಲೀಸ್.

(ಪ್ರೇಮಪತ್ರ ಬರೆದವರು ಕತೆಗಾರ್ತಿ, ಅಂಕಣಕಾರ್ತಿ, ರೇಡಿಯೋ ಜಾಕಿ, ಕವಿ ಇತ್ಯಾದಿ. ʻಯೋಳ್ತೀನ್‌ ಕೇಳಿʼ ಇವರ ಅಂಕಣ ಬರಹ ಸಂಕಲನ)

Exit mobile version