ಕಡಲಿನಂತವನೇ….
ಅಂತ ಸಖತ್ತಾಗಿ ನಿನಗೆ ಲೆಟರ್ ಬರಿಯಕ್ ಶುರು ಮಾಡೋಣ ಅಂತಲೇ ಅನ್ಕೊಂಡೆ ಕಣ್ಲಾ… ಆದ್ರೆ ಈ ಕಡಲಿನ ಮುಂದೇನೇ ಕೂತ್ ಯೋಚ್ಸಿದ್ರೆ ಯಾಕೋ ಅದಷ್ಟು interesting ಅನಿಸ್ತಿಲ್ಲ. ಈ ಕಡಲನ್ ನೋಡಿದ್ರೆ ಒಂದ್ ಲೆಕ್ಕದಲ್ಲಿ ಅಯ್ಯೋ ಪಾಪ ಅನಿಸ್ತಿದೆ ನಂಗೆ. ಸಾಮಾನ್ಯವಾಗಿ ನದಿ ಹೆಣ್ಣು ಕಡಲು ಗಂಡು ಅನ್ನೋ ಅರ್ಥದಲ್ಲಿ ಬಳಸ್ತಾರಲ್ವ? ನದಿ ಕಡಲು ಸೇರೋದರ ಬಗ್ಗೆ ಎಷ್ಟೊಂದ್ ಪದ್ಯಗಳು. ಸಿನೆಮಾ ಹಾಡ್ಗಳು ಏನ್ಕತೆ? ಆದ್ರೆ ಈ ಕಡಲಿಗೆ ಒಂದು ಸ್ವಂತಿಕೆಯೇ ಇಲ್ಲ ಅನಿಸಲ್ವ ನಿನಗೆ? ನದಿ ಬಂದು ಸೇರದ ಹೊರತು ಈ ಕಡಲಿನದು ಅದದೇ ನೀರಿನ ಪುನರಾವರ್ತನೆ. ಅದದೇ ಅಲೆಗಳ ಮರಳಿಸುವಿಕೆ. ಮತ್ಮತ್ತೆ ಮರಳುವ ಏಕತಾನತೆ. ಕಡಲಿನ ಸ್ಥಳಪುರಾಣ ಕೂಡ ಒಂದೇ. ನದಿ ಹಾಗಲ್ಲ ನೋಡು. ಸಣ್ದೋ ದೊಡ್ದೋ ಗಾತ್ರ. ಹರಿವೇ ಅದರ ಸೂತ್ರ. ತಾನು ಹುಟ್ಟಿದ್ ಜಾಗದಿಂದ ಹೊರಟು ಎಲ್ಲೆಲ್ಲೋ ಹಾಯ್ದು, ಯಾರ‍್ದೋ ಹೊಟ್ಟೆಗೆ, ಬಟ್ಟೆಗೆ, ಹೊಲದ ಕಟ್ಟೆಗೆ, ಊರಿನೊಟ್ಟಿಗೆ ಹರೀತಾ ಇರ‍್ತಾಳೆ.
ನದಿಯ ಊರಿನ ಹೆಸರು ಹೇಳಪ್ಪ ನೋಡಣ. ನದಿ ಹುಟ್ಟೋ ಜಾಗದ ಹೆಸರಲ್ಲ ಮತ್ತೆ. ಅದು ಈಗ ಇರೋ ಊರಿನ ಹೆಸ್ರು ಹೇಳ್ ನೋಡಣ. ಹೇಳಕೇ ಆಗಲ್ಲ. ಯಾಕಂದ್ರೆ ಹುಟ್ಟಿದ ಊರ್ ಬಿಟ್ಟ ನದಿ ಹರಿದಲ್ಲೆಲ್ಲ ಅದ್ರದೇ ಹವಾ. ದಾರಿ ತುಂಬ ನೆಂಟರಿಷ್ಟರು. ಆದ್ರೆ ಕಡಲಿಗೆ? ಎಷ್ಟು ಅಗಾಧತೆ ಇದ್ರೂ ಅದಕ್ಕೆ ಅದರದ್ದೇ ಮಿತಿ ಕೂಡ ಇದೆ ಅನ್ಸಲ್ವ? ನದಿಗೆ ಗೊತ್ತಿದ್ದಷ್ಟು ಊರುಗಳು, ಭಾಷೆಗಳು, ಮಣ್ಣ ಗುಣಗಳು ಕಡಲಿಗ್ ಗೊತ್ತಿರಕ್ ಸಾಧ್ಯವಾ? ಯಾವ ಊರೂ ನೋಡ್ದೆ ಒಂದೇ ಊರಲ್ಲಿರೋ ಕಡಲಿಗೆ ಅದೆಲ್ಲ ಹೇಗೆ ಗೊತ್ತಿರತ್ ಹೇಳು? ಅಲೆಗಳು ಹೊಮ್ಮುತ್ತವೆ ಅನ್ನೋದ್ ಬಿಟ್ರೆ ಕಡಲಿಗೂ ಬೆಟ್ಟದ ಹಾಗೆ ಒಂತರಾ ಸ್ಥಿರತೆಯೇ ಇದೆ ಅನಿಸಲ್ವ ನಿಂಗೆ? ನದಿಯ ಪ್ರತಿ ಹೊಸ ಹರಿವು ಬಂದಾಗಲೂ ಬಹುಶಃ ಕಡಲಿಗೆ ಇನ್ನಿಲ್ಲದ ಉತ್ಸಾಹ ಅನಿಸತ್ತೆ. ಹೇಳು, ಆ ಊರಲ್ಲೇನಾಯ್ತು ಈ ಊರಲ್ಲೇನಾಯ್ತು ಅಂತೆಲ್ಲ ನದಿ ಹೇಳೋ ಹೊಸ ಸಮಾಚಾರಾನ ಕಣ್ಣೂ ಬಾಯಿ ಬಿಟ್ಕೊಂಡ್ ಕೇಳ್ಬಹುದೋ ಏನೋ ಕಡಲು.
ಅಲ್ಲಾ, ನೀ ಬಿಟ್ರೆ ಹೀಗೂ ವಾದ ಮಾಡ್ತೀಯಾಲ್ವ? ನದಿಗಾದ್ರೆ ಅದು ಹರಿದು ಬಂದ ದಾರಿಯ ಸಂಗತಿ ಮಾತ್ರ ಗೊತ್ತಿರತ್ತೆ ಕಣೇ. ಕಡಲಿಗೆ ನೋಡು, ಊರ್ ಸುದ್ದಿ ಎಲ್ಲ ಗೊತ್ತಿರತ್ತೆ. ಎಲ್ಲಾ ನದಿಗಳೂ ಬಂದು ಸೇರಿ, ಎಲ್ಲಾ ಊರ್ ಸುದ್ದೀನೂ ಸುರ‍್ದು, ಕಡಲು ಒಂತರಾ ನ್ಯೂಸ್ ಚಾನೆಲ್ ಡೆಸ್ಕಾಗೋಗಿರತ್ತೆ ಅಂತ? ಅದೂ ಒಂತರಾ ಸರೀನೇ ಬಿಡು.
ಇದನ್ನೂ ಓದಿ | ಸವಿಸ್ತಾರ ಅಂಕಣ | ನೆಹರೂ, ಗಾಂಧಿ, ಸಾವರ್ಕರ್ ಇತ್ಯಾದಿ: ನಡೆಯಲಿ ʼಸೀಮೋಲ್ಲಂಘನೆʼ, ನಿಲ್ಲಲಿ ʼಮೂರ್ತಿ ಭಂಜನೆʼ
ಸಾಮಾನ್ಯವಾಗಿ ಹೆಣ್ಮಕ್ಕಳು ಯಾವಾಗ್ಲೂ ವಟವಟ ಮಾತಾಡೋದ್ಯಾಕೆ, ಗಂಡಸರು ಸಾಮಾನ್ಯವಾಗಿ ಮಾತು ಕಡಿಮೆ ಯಾಕೇಂತ್ಲೂ ಈಗ್ ಹೊಳೀತಿದೆ ನೋಡು. ಹೆಣ್ಣು ನದಿ. ಊರೂರ್ ಸುದ್ದಿ ಗೊತ್ತಿರತ್ತೆ. ಮಾತಾಡಕ್ ವಿಷ್ಯಗಳಿರತ್ತೆ ಮಾತಾಡ್ತಾಳೆ. ಇದ್ದ ಜಾಗದಲ್ಲೆ ಇರೋ ಕಡಲಿಗೆ ವಿಷ್ಯ ಏನಿರತ್ತಪ್ಪ ಮಾತಾಡಕೆ? ಹೋಗ್ಲಿ ಬಿಡು, ಈ ಕಡಲಲ್ಲಿ ಅಲೆಗಳು ಯಾಕುಂಟಾಗತ್ತೆ ಅದ್ ಹೇಳು ನೋಡಣ. ನೋ ನೋ... ಸೈನ್ಸ್ ಪ್ರಕಾರ ಅಲ್ಲ. ಎಮೋಷನ್ಸ್ ಪ್ರಕಾರ ಹೇಳು ನೋಡಣ. “ಅದಕ್ಕಿನ್ನೆಂತಾ ಎಮೋಷನ್ಸಿರತ್ತೆ ಹೋಗೇ” ಅಂತ್ ಬೈಬೇಡ್ವೋ ಮುದ್ದಾ… ನಾ ಹೇಳ್ತೀನ್ ಕೇಳು. ಅಲೆಗಳು ಯಾಕಾಗತ್ತೆ ಅಂದ್ರೆ ನದಿ ಬಂತಾ ಬಂತಾ ಅಂತ ಕಡಲು ಕಾತರದಲ್ಲಿ ಇಣುಕಿ ಇಣುಕಿ ನೋಡೋದದು. ಬಂದ ಮೇಲೆ ಖುಷಿಗೆ ಕುಣಿಯೋದದು. ಅಥವಾ ಅವಳ ವಟವಟ ಕೇಳಿ ಸಾಕಾಗಿ “ಸಾಕ್ ಬಿಡೇ….” ಅಂತ ಚೂರ್ ಚೂರೇ ಆಚೆ ಕಡೆ ತಲೆ ಹಾಕಿ ಹಾಕಿ ವಾಪಸ್ ಬರೋದದು… ನಗ್ತಿದ್ಯಾಲ್ವ? ಆಯ್ತ್ ಬಿಡು. ಆದ್ರೆ ಏನೇ ಆದ್ರೂ ನದಿ is greater than ಕಡಲು ಕಣೋ. ಅಷ್ಟೆ.
ನಾನೀಗ ಗೋವೆಯ ಕಡಲ ಮುಂದೆ ಕೂತು ಇದೆಲ್ಲ ಬರ್ದೆ. ಇದ್ ಬರಿಯಕ್ ಬಂದಿದ್ದಲ್ವೋ ಈ ಬೀಚ್ ಹತ್ರ ಇರೋ ಒಂದ್ ಅರಳೀಮರ ಹುಡುಕ್ಕೊಂಡ್ ಬಂದೆ. ಈ ಅರಳೀಮರದ ಕೆಳಗೆ ರಷ್ಯನ್ನರು ಧ್ಯಾನ ಮಾಡ್ತಾರೆ. ಗಯಾದಿಂದ ಗೋವಾವರೆಗೂ ಅರಳಿಮರ ಹುಡುಕ್ಕೊಂಡ್ ಅಲೀತಾ ಇದೀನಿ. “ನಿಮ್ಮೂರ್ ದಾರೀಲಿ ಹೆಜ್ ಹೆಜ್ಜೇಗೂ ಸಿಗತ್ತಲ್ಲೆ ತಾಯಿ. ಅರಳೀಮರ ನೋಡಕ್ ದೇಶ ಸುತ್ಬೇಕೇನೇ” ಅಂತ ಕೇಳ್ಬೇಡ್ವೋ. ಬೋಧಿವೃಕ್ಷದ ಕತೆ ಭಾಳ ಇದೆ. ಮತ್ಯಾವಾಗಾದ್ರೂ ಹೇಳ್ತೀನಿ ನಿನಗೆ. ಈಗ ನೀ ಎಲ್ಲಿದ್ಯ? ಕೆಲ್ಸ ಕೆಲ್ಸ ಅಂತ ಒದ್ದಾಡ್ಬೇಡ. ಹೊತ್ತೊತ್ತಿಗ್ ಸರಿಯಾಗಿ ಊಟ ಮಾಡು. ಆಯ್ತ? ಬೈ.
ಇದನ್ನೂ ಓದಿ | ಪೋಸ್ಟ್ ಬಾಕ್ಸ್ 143 | ತುಂಟ ಕೋತಿಗೂ ಗಂಭೀರ ಗಜಕ್ಕೂ ಪ್ರೇಮ ಅಂದ್ರೆ..