Site icon Vistara News

ಪ್ರಣಾಮ್‌ ಭಾರತ್ ಅಂಕಣ:‌ ನೆನಪುಗಳ ಹಳೇ ಆಲ್ಬಂ!

old album

ಡಿಜಿಟಲ್ ತಂತ್ರಜ್ಞಾನ ಮುಂದುವರಿದ ಕಾರಣ ಈ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಫೋಟೋಗಳನ್ನು ಮೊಬೈಲಿನಿಂದ ಸಾವಿರಾರು ಬಾರಿ ಕ್ಲಿಕ್ಕಿಸಿಕೊಳ್ಳುತ್ತಾರೆ. ತಮಗೆ ಅಮೂಲ್ಯವೆನಿಸುವ ಕೆಲವೇ ಕೆಲವು ಭಾವಚಿತ್ರಗಳನ್ನು ಮಾತ್ರ ಪ್ರಿಂಟ್ ಹಾಕಿಸಿಕೊಳ್ಳುವ ಕಾಲಮಾನದಲ್ಲಿ ನಾವುಗಳು ಇದ್ದೇವೆ. ಹೆಚ್ಚಿನವರು ಫೋಟೊಗಳನ್ನು ಕ್ಲಿಕ್ಕಿಸುವುದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಕಾರಣಕ್ಕಾಗಿದೆ. ನಮ್ಮ ಫೋಟೊ ಕ್ಲಿಕ್ಕಿಸುವ ಶೋಕಿ ಎಷ್ಟು ಹೆಚ್ಚಾಗಿದೆಯೆಂದರೆ ಕೆಲವೊಮ್ಮ ನಾವುಗಳು ಪ್ರವಾಸದಲ್ಲಿ ಮತ್ತು ಸಭೆ ಸಮಾರಂಭಗಳಲ್ಲಿ ಆ ಗಳಿಗೆಯ ಸವಿಯನ್ನು ಸವಿದು ಆ ಕ್ಷಣಗಳನ್ನು ನೆನಪಿನಂಗಳದಲ್ಲಿ ಕಾಪಿಟ್ಟುಕೊಳ್ಳುವ ಬದಲಿಗೆ ಫೋಟೊದಲ್ಲಿ ಸೆರೆಹಿಡಿಯುವ ಬಗ್ಗೆಯೆ ಹೆಚ್ಚು ಮುತುವರ್ಜಿ ವಹಿಸುತ್ತೇವೆ. ಇನ್ನು ಗಣ್ಯರ ಜೊತೆಯಲ್ಲಿ ಅವರ ಫೋಟೊಗಳನ್ನು ಕ್ಲಿಕ್ಕಿಸಲೆಂದೇ ಒಂದೆರಡು ಜನ ಹಿಂಬಾಲಕರು ಸದಾ ಇರುತ್ತಾರೆ. ಆದರೆ ದಶಕಗಳ ಹಿಂದಿನ ಪರಿಸ್ಥಿತಿ ಬಹಳಷ್ಟು ಭಿನ್ನವಾಗಿತ್ತು!

ನನ್ನ ತಂದೆತಾಯಿಯವರ ತಲೆಮಾರಿನವರಿಂದ ಹಿಡಿದು ನನ್ನ ಶಾಲಾ ದಿನಗಳ ತನಕ ರೀಲು ಕ್ಯಾಮರಾಗಳದ್ದೇ ಕಾರುಬಾರು. ರೀಲು ಖಾಲಿಯಾಗುವ ತನಕ ಫೋಟೋ ಕ್ಲಿಕ್ಕಿಸಿ ನಂತರ ನೆಗೆಟಿವ್‌ಗಳಿಂದ ಭಾವಚಿತ್ರಗಳನ್ನು ತಯಾರು ಮಾಡಿ ನಮ್ಮ ಕೈಗೆ ನೀಡುತ್ತಿದ್ದ ದೀರ್ಘ ಪ್ರಕ್ರಿಯೆಗೆ ಮತ್ತು ಆ ಕಾಯುವಿಕೆಗೆ ಅದರದೇ ಆದ ಸೊಗಸಿತ್ತು. ಆ ಭಾವಚಿತ್ರಗಳನ್ನು ಕುಳಿತು ನೋಡಲು ಆಲ್ಬಂಗಳನ್ನು ಮಾಡಿಸಿ ಮನೆಯಲ್ಲಿಡುತ್ತಿದ್ದ ಕಾರಣದಿಂದ ನೆಂಟರಿಷ್ಟರು ಬಂದಾಗ ಕುಟುಂಬದವರೆಲ್ಲ ಕುಳಿತು ಆಲ್ಬಂ ತಿರುವುವುದು ಮತ್ತು ಭಾವಚಿತ್ರಗಳ ಬಗ್ಗೆ ಚರ್ಚಿಸುವುದು ಹೆಚ್ಚಿನ ಮನೆಗಳಲ್ಲಿ ನಡೆಯುತ್ತಿತ್ತು. ಫೋಟೋ ಕ್ಲಿಕ್ಕಿಸುವಾಗ ಯಾರದಾದರು ಕಣ್ಣು ಮುಚ್ಚಿದ್ದರೆ ಅಥವಾ ಬೇರೆಡೆಗೆ ನೋಡುತ್ತಿದ್ದರೆ ಡಿಲೀಟ್ ಮಾಡುವ ಅವಕಾಶಗಳು ಇಲ್ಲದ ಕಾರಣ ಅಂತಹಾ ಎಡವಟ್ಟಾದ ಫೋಟೋಗಳು ನಮ್ಮ ತಪ್ಪಿನ ಸಾಕ್ಷಿ ಹೇಳಲು ಆಲ್ಬಂನ ಒಳಗೆ ಕಾದು ಕುಳಿತಿರುತ್ತಿದ್ದವು.

ಶಾಲಾ ಕಾಲೇಜಿನ ಸಮಾರಂಭಗಳಲ್ಲಿ ಕೂಡ ಕ್ಯಾಮರಾ ಹೆಗಲಿಗೇರಿಸಿ ಗತ್ತಿನಿಂದ ಓಡಾಡುತ್ತಿದ್ದ ಕ್ಯಾಮೆರಾದವರು ಆಗಿನ ಕಾಲದಲ್ಲಿ ಸ್ವಲ್ಪ ಹೆಚ್ಚು ಹವಾ ತಿನ್ನುತ್ತಿದ್ದರು. ಈಗಿನ ಡಿಜಿಟಲ್ ದಿನಗಳಲ್ಲಿ ಕೈಯಲ್ಲಿ ಫೋನು ಹಿಡಿದ ಎಲ್ಲರೂ ಫೋಟೋಗ್ರಾಫರುಗಳೇ! ಗರಿಗರಿಯಾದ ಫೋಟೋಗಳು ಮನೆಗೆ ಬಂದ ದಿನ ಅದನ್ನು ಹೊಸಾ ಎರಡುಸಾವಿರ ರುಪಾಯಿ ನೋಟಿಗಿಂತ ಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳಬೇಕಾಗುತ್ತಿತ್ತು. ಒದ್ದೆ ಕೈಯಿಂದ ಮುಟ್ಟಲು ಆತುರ ಪಡುತ್ತಿದ್ದ ನನ್ನಂತಹಾ ಹುಡುಗರು ಹಿರಿಯರ ಕೈಯಿಂದ ತಲೆಗೆ ಮೊಟಕಿಸಿಕೊಳ್ಳುವುದು ಸರ್ವೇಸಾಮಾನ್ಯವಾಗಿತ್ತು. ಆ ಭಾವಚಿತ್ರಗಳನ್ನು ಆಲ್ಬಂನೊಳಗೆ ಅಚ್ಚುಕಟ್ಟಾಗಿ ಕೂರಿಸುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದ ನಂತರ ಆಲ್ಬಂಗಳನ್ನು ಬೀರುವಿನೊಳಗೆ ಭದ್ರವಾಗಿಡುತ್ತಿದ್ದರು. ಅಮ್ಮ ಅಪ್ಪನ ಮದುವೆ ಆಲ್ಬಮ್ಮನ್ನು ತಿರುವುವುದು ಮತ್ತು ಅದರಲ್ಲಿ ನಾವಿಲ್ಲವೆಂದು ನಿರಾಶೆಗೊಳ್ಳುವುದು ಹೆಚ್ಚಿನ ಪ್ರಾಥಮಿಕ ಶಾಲಾ ಮಕ್ಕಳ ಬೇಸಿಗೆ ರಜೆಗಳ ಕಾಯಂ ಕಾಯಕವಾಗಿತ್ತು.

ನನ್ನ ಅಮ್ಮನಿಗೆ ನಾನು ಬೆಳೆಯುತ್ತಿದ್ದ ದಿನಗಳನ್ನು ಮತ್ತು ನನ್ನ ಜೀವನದ ಪ್ರಮುಖ ದಿನಗಳ ನೆನಪುಗಳನ್ನು ಶಾಶ್ವತಗೊಳಿಸುವ ಆಸೆಯಿದ್ದ ಕಾರಣಕ್ಕೆ ಅವರು ಕನಿಷ್ಠ ಎರಡು ವರ್ಷಗಳಿಗೊಮ್ಮೆಯಾದರೂ ತಮ್ಮ ಬಳಿಯಿದ್ದ ಹಳೇ ಕೋಡಕ್ ಕ್ಯಾಮರಾದಲ್ಲಿ ಒಂದು ರೀಲು ಫೋಟೊಗಳನ್ನು ಕ್ಲಿಕ್ಕಿಸಿಬಿಡುತ್ತಿದ್ದರು‌. ಅಮ್ಮನಿಗೆ ಹೂವಿನ ಗಿಡಗಳ ಮೇಲೂ ನನ್ನಷ್ಟೆ ಪ್ರೀತಿಯಿದ್ದ ಕಾರಣ ನನ್ನ ಹೆಚ್ಚಿನ ಫೋಟೊಗಳು ಹೂವಿನ ಗಿಡಗಳ ಅಕ್ಕಪಕ್ಕ ತೆಗೆದದ್ದು.

ಕಳೆದ ಕೆಲವು ವರ್ಷಗಳಲ್ಲಿ ಎಲ್ಲರ ಕೈಯಲ್ಲಿ ಮೊಬೈಲುಗಳು ಬಂದ ನಂತರ ಆಲ್ಬಂಗಳನ್ನು ನಾವೆಲ್ಲರೂ ಮರೆತುಬಿಟ್ಟೆವು. ಕನಿಷ್ಠ ಪಕ್ಷ ಒಂದೆರಡು ವರ್ಷಗಳಿಗೆ ಒಮ್ಮೆಯಾದರೂ ಅವರನ್ನು ತಿರುವುತ್ತಾ ತೀಡುತ್ತಾ ಸಮಯ ಕೊಡಲು ಯಾರ ಬಳಿ ಈ ದಿನಗಳಲ್ಲಿ ಸಮಯವಿದೆ?! ಫಂಗಸ್ ಮತ್ತು ಶೀತ ಹವಾಮಾನವಿರುವ ಕಡೆ ಭಾವಚಿತ್ರಗಳಿಗೆ ಉಷ್ಣವಲಯಗಳ ಪ್ರದೇಶಗಳಲ್ಲಿ ಇರುವಷ್ಟು ಆಯುಷ್ಯವಿರುವುದಿಲ್ಲ. ನಾವು ಸ್ವಲ್ಪ ಮೈ ಮರೆತೆವೆಂದರೆ ಭಾವಚಿತ್ರಗಳನ್ನು ಮತ್ತು ಅದರೊಳಗಿನ ಬೆಚ್ಚಗಿನ ನೆನಪುಗಳಿಗೆ ಫಂಗಸ್ ಗುಂಡಿ ತೋಡುತ್ತದೆ. ನಾನು ಹಳೇ ಅಲ್ಬಮ್ಮಗಳ ಅಮೂಲ್ಯವಾದ ಭಾವಚಿತ್ರವನ್ನು ಡಿಜಿಟಲ್ ರೂಪಕ್ಕೆ ತರಲು ತಡಮಾಡುತ್ತಾ ಬಂದರೂ ಫಂಗಸ್ ತನ್ನ ಕೆಲಸ ಕಾರ್ಯದಲ್ಲಿ ಕೊಂಚವೂ ತಡಮಾಡದ ಕಾರಣ ಕೆಲವು ಅಮೂಲ್ಯವಾದ ಫೋಟೊಗಳನ್ನು ನನ್ನ ಮನಸ್ಸಿನಲ್ಲಿ ಮಾತ್ರ ಫ್ರೇಮ್ ಹಾಕಿ ಇಟ್ಟುಕೊಳ್ಳಬೇಕಷ್ಟೆ! ಜಾರ್ಜ್‌ ಫರ್ನಾಂಡೀಸ್ ಕೈಯಿಂದ ನಾನು ಬಹುಮಾನ ಸ್ವೀಕರಿಸುತ್ತಿರುವ ಫೋಟೊವನ್ನು ನಾನು ಬಹಳ ಕಷ್ಟಪಟ್ಟು ಹುಡುಕಿದರೂ ಅದು ಈಗಾಗಲೇ ಫಂಗಸ್ ಪಾಲಾಗಿ ಚಿಂತಾಜನಕ ಪರಿಸ್ಥಿತಿಯಲ್ಲಿದೆ. ಅಪ್ಪ ಅಮ್ಮನ ಮದುವೆಯ ಕೆಲವು ಭಾವಚಿತ್ರಗಳ ಜೊತೆಗೆ ನನ್ನ ಬಾಲ್ಯದ ಕೆಲವು ಭಾವಚಿತ್ರಗಳು ಫಂಗಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಜೀವಂತವಿದ್ದವು. ಅಂತಹಾ ಭಾವಚಿತ್ರಗಳಿಗೆ ಈ ವಾರ ಡಿಜಿಟಲ್ ರೂಪ ಕೊಡುತ್ತಿದ್ದಂತೆ ನೆನಪುಗಳು ಅಲೆಗಳು ಒಂದೊಂದಾಗಿ ಬಂದು ಹೃದಯಕ್ಕೆ ಅಪ್ಪಳಿಸತೊಡಗಿದವು.

ಮೊದಲ ಬಾರಿ ವೇದಿಕೆಯೇರಿದ ಫೋಟೋ.. ಮೊದಲ ಬಾರಿ ಬಹುಮಾನ ಸ್ವೀಕರಿಸಿದ ಪೋಟೋ.. ಹೀಗೆ ಜೀವನದಲ್ಲಿ ಅಂಬಾಗಲಿಟ್ಟು ಸಾಗಿ ಬಂದ ಕ್ಷಣಗಳ ಸವಿನೆನಪುಗಳನ್ನು ಮತ್ತೆ ಸವಿಯತೊಡಗಿದೆ. ಹಳೇ ಪೋಟೊದಲ್ಲಿರುವವರ ಪೈಕಿ ಕೆಲವು ಜನರು ಕಾಲವಾದ ಕಾರಣ ಆಲ್ಬಂ ತಿರುಗಿಸುತ್ತಿದ್ದಂತೆ ಕಣ್ಣಂಚು ಒದ್ದೆಯಾಗತೊಡಗಿತು. ಒಂದು ಭಾವಚಿತ್ರ ಸಾವಿರ ಶಬ್ದಗಳನ್ನು ಹೇಳಬಲ್ಲದು ಎಂಬ ಮಾತು ಅಕ್ಷರಶಃ ಸತ್ಯವೆಂದು ಅನಿಸತೊಡಗಿತು. ಡಿಜಿಟಲ್ ಪ್ರಿಂಟ್ ತೆಗೆದು ನನ್ನ ಜೀವನ ಒಂದಷ್ಟು ಪ್ರಮುಖ ಘಟ್ಟಗಳ ಭಾವಚಿತ್ರಗಳನ್ನು ಗೋಡೆಗೆ ತೂಗುಹಾಕಿದ್ದೇನೆ. ಅವುಗಳನ್ನು ನೋಡುತ್ತಾ ನಡೆಯುತ್ತಿದ್ದರೆ ನಾನು ಸಾಗಿ ಬಂದ ಹಾದಿಯ ಏಳುಬೀಳುಗಳು ಮತ್ತೆ ಮತ್ತೆ ನೆನಪಾಗುತ್ತದೆ!

ಇದನ್ನೂ ಓದಿ: ಪ್ರಣಾಮ್‌ ಭಾರತ್‌ ಅಂಕಣ | “ತೋಡಾ ದೇಖ್ ಲೇನಾ ಸಾಬ್”

Exit mobile version