Site icon Vistara News

ಪ್ರಣಾಮ್‌ ಭಾರತ್‌ ಅಂಕಣ | ಫ್ಯಾಮಿಲಿ ಮೆಕ್ಯಾನಿಕ್‌ ಕಥೆ

pranam1

ಕಳೆದ ವಾರ ಮುಂಜಾನೆ ಹೊತ್ತಲ್ಲದ ಹೊತ್ತಿಗೆ ಮೆಕ್ಯಾನಿಕ್ ವೆಂಕಟರಮಣನವರಿಂದ ಕರೆ ಬಂತು. ಇಷ್ಟು ವರ್ಷಗಳ ಕಾಲ ನನ್ನ ಗಾಡಿ ರಿಪೇರಿಯಾದಾಗಲೆಲ್ಲ ಹೊತ್ತಲ್ಲದ ಹೊತ್ತಿಗೆ ನಾನು ಅವರಿಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದ ನೆನಪುಗಳು ಹಸಿರಿದ್ದ ಕಾರಣ ಅವರ ಕರೆಯನ್ನು ತಕ್ಷಣ ಸ್ವೀಕರಿಸಿ ವಿಚಾರಿಸಿದೆ. “ಗಾಡಿಯಲ್ಲಿ ಏನೋ ಪ್ರಾಬ್ಲಮ್ ಇದೆ ಸಾರ್.. ಎಲ್ಲೋ ಸ್ವಲ್ಪ ನಟ್ಟು ಬೋಲ್ಟು ಲೂಸಾಗಿರಬೇಕು” ಎಂದು ತಮ್ಮ ಪಕ್ಕಾ ಮೆಕ್ಯಾನಿಕ್‌ ಶೈಲಿಯಲ್ಲಿ ತಮಗೆ ನಿನ್ನೆ ರಾತ್ರಿಯಿಂದ ಹೊಟ್ಟೆಯಲ್ಲಿ ಆಗುತ್ತಿರುವ ಸಂಕಟದ ಬಗ್ಗೆ ಹೇಳತೊಡಗಿದರು. “ನಾನಿನ್ನೂ ರನ್ನಿಂಗಲ್ಲಿ ಇದ್ದೇನೆ.. ಇನ್ನೂ ಬ್ರೇಕ್ ಡೌನ್ ಆಗಿಲ್ಲ.. ನೀವು ಎಷ್ಟು ಗಂಟೆಗೆ ಸಿಗುತ್ತೀರಿ.. ಒಂದು ಸರ್ವೀಸ್ ಮಾಡಿಬಿಡಿ” ಎಂದು ನನ್ನನ್ನು ಆತಂಕದಿಂದಲೇ ವಿನಂತಿಸಿಕೊಂಡರು. “ಎಂಟು ಗಂಟೆಗೆ ಕ್ಲಿನಿಕ್ಕಿಗೆ ಬನ್ನಿ” ಎಂದು ನಾನು ಫೋನಿಟ್ಟಾಗ ಮೆಕ್ಯಾನಿಕ್ ವೆಂಕಟರಮಣರವರ ಜೊತೆಗಿನ ನನ್ನ ಒಡನಾಟದ ನೆನಪುಗಳ ರೀಲುಗಳು ಮನಸ್ಸಿನಲ್ಲಿ ಓಡತೊಡಗಿದವು.

ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿರುವ ನನ್ನ ಅಪ್ಪನ ಮಹೀಂದ್ರಾ ಜೀಪನ್ನು ಒಂದು ರೌಂಡು ಓಡಿಸಿ, ಅಲುಗಾಡಿಸಿ ರೋಗ ಪತ್ತೆ ಹಚ್ಚುವ, ಜೀಪುಗಳ ಚಿಕಿತ್ಸೆಯಲ್ಲಿ ಸ್ಪೆಶಲಿಸ್ಟ್ ಆಗಿರುವ ವೆಂಕಟರಮಣರನ್ನು ಕಾವೇರಿ ಹಾಲ್ ಮುಂದಿರುವ ಅವರ ವೆಂಕಟರಮಣ ಮೋಟಾರ್ ವರ್ಕ್ಸ್ ಆವರಣದಲ್ಲಿ ಕೆಲಸ ಮಾಡುವುದನ್ನು ನಾನು ಬಾಲ್ಯದ ದಿನಗಳಿಂದ ನೋಡುತ್ತಾ ಬಂದಿದ್ದೇನೆ. ಕೆಲವು ಹಳೆಯ ರೋಗಿಗಳಿಗೆ ತಮ್ಮ ಫ್ಯಾಮಿಲಿ ಡಾಕ್ಟರನ್ನು ನಿಯಮಿತವಾಗಿ ನೋಡದಿದ್ದರೆ ಹೇಗೆ ಆಹಾರ ರುಚಿಸುವುದಿಲ್ಲವೋ ಹಾಗೆಯೆ ನನ್ನ ಅಪ್ಪನಿಗೆ ಮೆಕ್ಯಾನಿಕ್ ವೆಂಕಟರಮಣ ತಮ್ಮ ಜೀಪಿನ ಇಂಜಿನ್ ಮೇಲೆ ಸ್ಪ್ಯಾನರ್ ಇಟ್ಟು ಅದರ ಹೈದಯ ಬಡಿತವನ್ನು ಆಲಿಸದಿದ್ದರೆ ಸಮಾಧಾನವಾಗುವುದಿಲ್ಲ. ರೋಗಿಯು ಕೇವಲ ಶೀತ ಜ್ವರದ ಕಾರಣದಿಂದ ಬಂದಿದ್ದರೂ ಒಳ್ಳೆಯ ವೈದ್ಯರು ರೋಗಿಯ ಬಿಪಿ ಮತ್ತು ನಾಡಿ ಮಿಡಿತದ ಜೊತೆಗೆ ಸಂಪೂರ್ಣ ಆರೋಗ್ಯವನ್ನು ಗಮನಿಸುವಂತೆ ಮೆಕ್ಯಾನಿಕ್ ವೆಂಕಟರಮಣನವರ ಬಳಿಗೆ ಬ್ರೇಕ್ ಸಮಸ್ಯೆಯೆಂದು ಗಾಡಿಯನ್ನು ಬಿಟ್ಟರೂ ಅವರು ಕ್ಲಚ್ಚು, ಇಂಜಿನ್ ಎಂದು ಇಡೀ ಗಾಡಿಯ ಮೇಲೆ ಕೈಯಾಡಿಸದೆ ಬಿಡುವುದಿಲ್ಲ. ಹಿಂದಿನ ಕಾಲದಲ್ಲಿ ವಿದೇಶಕ್ಕೆ ಹಾರುವವರು ದೇಶ ಬಿಡುವ ಮುಂದೆ ಸ್ಥಳೀಯ ವೈದ್ಯರಿಂದ ತಮ್ಮ ಆರೋಗ್ಯ ತಪಾಸಣೆ ನಡೆಸಿ ಅಲ್ಲಿ ಅಗತ್ಯ ಬೀಳುವ ಲಸಿಕೆಗಳನ್ನು ಮುಂಚಿತವಾಗಿ ಹಾಕಿಸಿಕೊಳ್ಳುತ್ತಿದ್ದಂತೆ ಹಳೇ ಜೀಪಿನಲ್ಲಿ ಲಾಂಗ್ ರೈಡ್ ಹೋಗುವ ಶೋಕಿಯಿರುವವರು ಮೆಕಾನಿಕ್ ವೆಂಕಟರಮಣನವರಿಗೆ ಜೀಪು ತೋರಿಸಿದ ನಂತರವಷ್ಟೇ ಮಡಿಕೇರಿ ಬಿಡುತ್ತಿದ್ದರು.

ಇದನ್ನೂ ಓದಿ: ಪ್ರಣಾಮ್ ಭಾರತ್ ಅಂಕಣ: ಸ್ಟೆತಾಸ್ಕೋಪಿನ ಆತ್ಮಕಥೆ

ಈಗ ಕೊಡಗಿನ ಹೆಚ್ಚಿನ ಗ್ರಾಮದೊಳಗಿನ ರಸ್ತೆಗಳ ಆರೋಗ್ಯ ಸುಧಾರಿಸಿದ ಕಾರಣ ಕಾರುಗಳೂ ಓಡಾಡುವುದನ್ನು ನಾವು ನೋಡಬಹುದು. ಎರಡು ದಶಕದ ಹಿಂದೆ ಗ್ರಾಮಗಳ ಕೆಸರು ರಸ್ತೆಗಳ ಮೇಲೆ ಜೀಪುಗಳದ್ದೇ ರಾಜ್ಯಭಾರವಿತ್ತು. ಫೋರ್ ವೀಲ್ ಡ್ರೈವ್ ಹೊಂದಿದ್ದ ಜೀಪುಗಳು ದಿಬ್ಬಣ ಹೋಗುವುದರಿಂದ ಹಿಡಿದು ಆಂಬ್ಯುಲೆನ್ಸ್ ಸೇವೆಯನ್ನೂ ಒದಗಿಸುತ್ತಿದ್ದವು. ಓದಿರುವುದು ಕೇವಲ ಮೂರನೇ ಕ್ಲಾಸಾದರೂ ವೆಂಕಟರಮಣನವರು ಜೀಪುಗಳ ರಿಪೇರಿಯ ಎಲ್ಲಾ ಪರೀಕ್ಷೆಗಳನ್ನು ತಮ್ಮ ಶ್ರಮ ಮತ್ತು ಆಸಕ್ತಿಯ ಆಧಾರದಿಂದಾಗಿ ಫಸ್ಟ್ ಕ್ಲಾಸಿನಲ್ಲಿ ಪಾಸು ಮಾಡಿದವರು. ಮೆಕ್ಯಾನಿಕ್ ಕೆಲಸದ ತರಬೇತಿಗಾಗಿ ಯಾವ ಔಪಚಾರಿಕ ಶಿಕ್ಷಣವನ್ನು ಪಡೆಯದ ಮತ್ತು ಯಾವ ಐಟಿಐ ಸಂಸ್ಥೆಯ ಮೆಟ್ಟಿಲನ್ನೂ ಹತ್ತದಿರುವ ವೆಂಕಟರಮಣನವರು ತಮ್ಮ ಬಾಲ್ಯದ ದಿನಗಳಲ್ಲಿ ಮಹದೇವಪೇಟೆಯಲ್ಲಿದ್ದ ಹಿರಿಯ ಮೆಕ್ಯಾನಿಕ್ ಮುತ್ತಣ್ಣನವರ ಗರಡಿಮನೆಯಲ್ಲಿ ಪಳಗಿದವರು. ಗ್ರೀಸು ಉಜ್ಜುವುದರಿಂದ ಪ್ರಾರಂಭಿಸಿ ಇಂಜಿನ್ ಬಿಚ್ಚಿ ಜೋಡಿಸುವುದನ್ನೂ ಹಂತ ಹಂತವಾಗಿ ಕಲಿತವರು‌‌. ಹೆಚ್ಚಿನ ವೈದ್ಯರಿಗೆ ತಮ್ಮ ಸ್ಪೆಶಾಲಿಟಿ ಪರಿಣತಿಯಿದ್ದಂತೆ ವೆಂಕಟರಮಣನವರು ಸ್ವಾತಂತ್ರ್ಯದ ನಂತರ ಭಾರತಕ್ಕೆ ಕಾಲಿಟ್ಟು ಬೆಟ್ಟಗುಡ್ಡಗಳಿರುವ ಮಲೆನಾಡಿನ ಪರಿಸರದಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದ ವಿಲ್ಲೀಸ್ ಜೀಪಿನ ರೀಪೇರಿಯಲ್ಲಿ ನಿಷ್ಣಾತರಾದವರು. ದಕ್ಷಿಣ ಕೊಡಗಿನಲ್ಲಿ ಇನ್ನೂ ವಿಲ್ಲೀಸ್ ಜೀಪಿನ ಮೋಹ ಬಿಡದವರು ಚಿಕ್ಕ ಪುಟ್ಟ ಸಮಸ್ಯೆಗಳಿಗೂ ತಮ್ಮ ವಿಲ್ಲೀಸ್ ಜೀಪಿನಲ್ಲಿ ವೆಂಕಟರಮಣನವರನ್ನು ಮಡಿಕೇರಿಗೆ ಹುಡುಕಿಕೊಂಡು ಬರುವಷ್ಟು ಜನಪ್ರಿಯತೆಯನ್ನು ಇವರು ಹೊಂದಿದವರು.

ಕೊಡಗಿನ ಜನರು ಕಾಲಕ್ರಮೇಣ ವಿಲ್ಲೀಸ್ ಜೀಪಿನಿಂದ ಮಹೇಂದ್ರ ಡಿಐ ಜೀಪಿಗೆ ಮತ್ತು ಇತ್ತೀಚಿನ ದಿನಗಳಲ್ಲಿ ಮಹೇಂದ್ರ ಥಾರ್ ಗಾಡಿಗೆ ಬಡ್ತಿ ಪಡೆದು ಬದಲಾಗುತ್ತಿರುವ ಆಟೋಮೊಬೈಲ್ ಕ್ಷೇತ್ರಕ್ಕೆ ಹೊಂದಿಕೊಂಡಂತೆ ವೆಂಕಟರಮಣನವರು ಕೂಡ ಎಲ್ಲಾ ಜೀಪುಗಳ ಕಷ್ಟ ಸುಖಗಳನ್ನು ಆಲಿಸಿ ಅದರ ಸಮಸ್ಯೆಗಳನ್ನು ಬಗೆಹರಿಸುವ ಕಲೆಯನ್ನು ಕಲಿತುಕೊಂಡವರು. ಕೆಲವು ಫ್ಯಾಮಿಲಿಗಳಿಗೆ ತಮ್ಮ ಫ್ಯಾಮಿಲಿ ಡಾಕ್ಟರ್ ಮೇಲೆ ಎಷ್ಟು ವಿಶ್ವಾಸವಿದೆಯೆಂದರೆ ತಮ್ಮ ಕುಟುಂಬದವರ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ಅವರ ಬಳಿಗೆ ತರುತ್ತಾರೆ. ವೆಂಕಟರಮಣನವರ ವಿಶ್ವಾಸಾರ್ಹತೆಯ ಕಾರಣದಿಂದಾಗಿ ಹಳೆಯ ತಲೆಮಾರಿನ ಜೀಪು ಮಾಲಿಕರ ಮಕ್ಕಳ ಕಾರುಗಳು ಕೂಡ ವೆಂಕಟರಮಣನವರ ಗ್ಯಾರೇಜಿನ ಬಳಿ ನಿಂತಿರುತ್ತವೆ. ಆ ಅರ್ಥದಲ್ಲಿ ನೋಡಿದರೆ ಒಂದು ಕುಟುಂಬದವರ ಎಲ್ಲಾ ವಾಹನಗಳನ್ನು ರಿಪೇರಿ ಮಾಡಬಲ್ಲ ಮೆಕ್ಯಾನಿಕ್ ಆಗಿರುವ ವೆಂಕಟರಮಣನವರನ್ನು ನಾವು ಫ್ಯಾಮಿಲಿ ಮೆಕ್ಯಾನಿಕ್ ಎಂದು ಕರೆದರೆ ಕೊಡಗಿನಲ್ಲಿ ಆಕ್ಷೇಪಿಸುವವರು ಯಾರೂ ಇರಲಿಕ್ಕಿಲ್ಲ.

ಕಾರಿನ ರಿಪೇರಿಯಲ್ಲಿ ಕೌಶಲ್ಯವನ್ನು ಪಡೆದಿರುವ ನವಯುಗದ ಮೆಕ್ಯಾನಿಕ್‌ಗಳಷ್ಟು ವೆಂಕಟರಮಣನವರಿಗೆ ಆಧುನಿಕತೆಯ ಪರಿಚಯವಿಲ್ಲದಿದ್ದರೂ ಅನಗತ್ಯವಾಗಿ ಸ್ಪೇರ್ ಪಾರ್ಟುಗಳನ್ನು ಬದಲಾವಣೆ ಮಾಡುವುದಿಲ್ಲವೆಂಬ ನಂಬಿಕೆಯ ಕಾರಣದಿಂದ ಮತ್ತು ಶ್ರದ್ಧೆಯಿಂದ ಪ್ರತಿಯೊಂದು ವಿಭಾಗವನ್ನು ಗಮನಿಸುತ್ತಾರೆಂಬ ವಿಶ್ವಾಸದಿಂದಾಗಿ ಅವರ ಬಳಿಗೆ ಹೆಚ್ಚಿನವರು ತಮ್ಮ ಕಾರುಗಳನ್ನೂ ಕೊಂಡೊಯ್ಯುತ್ತಾರೆ. ಅನಗತ್ಯ ಪರೀಕ್ಷೆಗಳನ್ನು ಮತ್ತು ಔಷಧಿಗಳನ್ನು ಬರೆದು ತಮ್ಮ ಚಿಕಿತ್ಸಾ ವೆಚ್ಚವನ್ನು ಹೆಚ್ಚು ಮಾಡದ ವೈದ್ಯರ ಮೇಲೆ ವಿಶ್ವಾಸವಿಡುವ ಜನಸಾಮಾನ್ಯರಂತೆ ವೆಂಕಟರಮಣ ಮೆಕ್ಯಾನಿಕ್ ಅವರ ವೃತ್ತಿಪರತೆಯ ಮೇಲೆ ವಿಶ್ವಾಸವಿಡುವ ವರ್ಗವೊಂದು ನಮ್ಮ ಜಿಲ್ಲೆಯಲ್ಲಿದೆ‌. ಕೊರೊನಾ ಸಮಯದಲ್ಲಿದ್ದ ಲಾಕ್‌ಡೌನ್ ಕಾರಣದಿಂದಾಗಿ ಎಲ್ಲಾ ವರ್ಕ್‌ಶಾಪುಗಳು ಮುಚ್ಚಿದ್ದರೂ ಕೆಲವು ಹಳೆಯ ಗಿರಾಕಿಗಳು ವೆಂಕಟರಮಣನವರನ್ನು ಅವರ ಮನೆಯ ತನಕ ಹುಡುಕಿಕೊಂಡು ಹೋಗಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದರು.

ಇದನ್ನೂ ಓದಿ: ಧೀಮಹಿ ಅಂಕಣ | ಕಾಲದೇಶದ ಸ್ಮರಣೆಯ ಮಹಾಸಂಕಲ್ಪ

ನನ್ನ ಕ್ಲಿನಿಕ್ಕಿಗೆ ಬಂದಿದ್ದ ವೆಂಕಟರಮಣನವರ ಬಾಡಿಯನ್ನು ಅವರು ನಮ್ಮ ಗಾಡಿಗಳನ್ನು ಗಮನಿಸುವಂತೆ ನಾನು ತದೇಕಚಿತ್ತದಿಂದ ಪರೀಕ್ಷಿಸಿದೆ. ಅವರ ಹೊಟ್ಟೆಯ ನೋವಿನ ಕಥೆಯನ್ನು ಅವರು ಎಳೆ ಎಳೆಯಾಗಿ ಬಿಚ್ಚಿಟ್ಟಾಗ ಅದು ಬಹುಶಃ ಮೂತ್ರಕೋಶದಲ್ಲಿ ಹುಟ್ಟಿದ ಕಲ್ಲಿನಿಂದ ಉಂಟಾಗಿರಬಹುದೆಂಬ ಅನುಮಾನ ವ್ಯಕ್ತವಾಯಿತು. ಅಂದು ಭಾನುವಾರವಾದುದರಿಂದ ಹೊಟ್ಟೆಯ ಸ್ಕ್ಯಾನಿಂಗ್ ಮಾಡುವವರು ಮಡಿಕೇರಿಯಲ್ಲಿ ಲಭ್ಯವಿಲ್ಲದ ಕಾರಣ ನೋವು ನಿವಾರಕ ಔಷಧಿಗಳ ಜೊತೆಗೆ ಹೆಚ್ಚಿನ ನೀರು ಕುಡಿದರೆ ಐದು ಮಿಲಿಮೀಟರುಗಳಿಗಿಂತ ಸಣ್ಣ ಗಾತ್ರದ ಕಲ್ಲುಗಳು ಮೂತ್ರದಲ್ಲಿ ಕರಗುತ್ತವೆಯೆಂಬ ಸಲಹೆಯನ್ನೂ ಅವರಿಗೆ ನೀಡಿದೆ. ಗಾಡಿ ಒಂದಷ್ಟು ಸಾವಿರ ಕಿಲೋಮೀಟರ್ ಓಡಿದ ನಂತರ ಅದರ ಇಂಜಿನಾಯಿಲ್, ಚಕ್ರಗಳು, ಬ್ರೇಕಿನ ದ್ರಾವಣಗಳನ್ನು ಬದಲಾವಣೆ ಮಾಡಬೇಕಾಗಿ ಬರುವುದು ಸಹಜ ಮತ್ತು ರಿಪೇರಿಯಾಗುವ ಸಂಭವವೂ ಅಧಿಕವಾಗುತ್ತದೆ. ಹಾಗೆಯೆ ಐವತ್ತಾರು ವರ್ಷಗಳನ್ನು ಸವೆಸಿರುವ ನನ್ನ ಫ್ಯಾಮಿಲಿ ಮೆಕ್ಯಾನಿಕ್ ವೆಂಕಟರಮಣನವರ ಬಿಪಿ ಶುಗರ್ ನಿಯಂತ್ರಣದಲ್ಲಿದ್ದರೂ ಬಾಡಿ ಹಳೆಯದಾಗುತ್ತಿರುವ ಕಾರಣದಿಂದ ಅರೋಗ್ಯದ ವಿಚಾರದಲ್ಲಿ ಹಿಂದಿಗಿಂತ ಹೆಚ್ಚು ಎಚ್ಚರವಾಗಿರಬೇಕೆಂಬ ಸೂಚನೆಯೊಂದಿಗೆ ಅವರ ದೇಹದ ಸರ್ವೀಸ್ ಮುಗಿಸಿ ಬೀಳ್ಕೊಟ್ಟೆ.

ನಂತರದ ದಿನಗಳಲ್ಲಿ ಅವರು ಹೊಟ್ಟೆ ನೋವಿನ ಬಗ್ಗೆ ಪ್ರಸ್ತಾಪ ಮಾಡಲು ಕರೆ ಮಾಡದ ಕಾರಣದಿಂದಾಗಿ ಹೆಚ್ಚಿನ ಪರೀಕ್ಷೆ ಮತ್ತು ಔಷಧಿಗಳಿಲ್ಲದೆ ಈ ಫ್ಯಾಮಿಲಿ ಮೆಕ್ಯಾನಿಕರನ್ನು ಗುಣಪಡಿಸಿ “ಐ ಹ್ಯಾವ್ ರಿಟರ್ನ್ಡ್ ದ ಫೇವರ್‌ʼ ಎಂಬ ಭಾವವು ನನ್ನ ಮನಸ್ಸಿನಲ್ಲಿ ಮೂಡಿದೆ.

(ಲೇಖಕ ಮೇಜರ್‌ ಡಾ.ಕುಶ್ವಂತ್‌ ಕೋಳಿಬೈಲು ಅವರು ಕೊಡಗಿನ ವೈದ್ಯ, ಯೋಧ ಮತ್ತು ಕತೆಗಾರ. ಸೇನೆಯಿಂದ ನಿವೃತ್ತರು, ವೈದ್ಯಕೀಯದಲ್ಲಿ ಪ್ರವೃತ್ತರು. ಕೊಡಗಿನ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳ ತಜ್ಞ, ಕಾಫಿ ಕೃಷಿಕ. ʻಕಾವೇರಿ ತೀರದಿಂದʼ ಮತ್ತು ʻಕೂರ್ಗ್‌ ರೆಜಿಮೆಂಟ್ʼ ಇವರ ಕತಾಸಂಕಲನಗಳು. ʼಮುತ್ತಿನ ಹಾರʼ ಹನಿಕವಿತೆಗಳ ಸಂಕಲನ. ವೈದ್ಯಕೀಯ ಹಾಗೂ ಸೇನೆಗೆ ಸಂಬಂಧಿಸಿದ ಅಂಕಣಗಳನ್ನು ಬರೆದಿದ್ದಾರೆ. ಕೊಡಗಿನ ಹಾಗೂ ದೇಶದ ಆಗುಹೋಗುಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಕುಶ್ವಂತ್‌ ಸಮಾಜಸೇವೆಯಲ್ಲೂ ಸಕ್ರಿಯರು.)

Exit mobile version