Site icon Vistara News

Raja Magra Column : ಮಕ್ಕಳಿಗಾಗಿ ಅಮರ ಕಥಾ ಲೋಕ ಸೃಷ್ಟಿಸಿದ ಅಂಕಲ್‌ ಪೈಗೆ ಮಕ್ಕಳೇ ಇರಲಿಲ್ಲ!

Uncle Pai Raja Marga Column

ಪ್ರತಿಯೊಬ್ಬರೂ ತಮ್ಮ ಬಾಲ್ಯದಲ್ಲಿ ಖಂಡಿತವಾಗಿ ಓದಿರುವ ಹಾಗೂ ಇಂದಿಗೂ ಓದಲು ಇಚ್ಛೆ ಪಡುವ ಎರಡು ಕಾಮಿಕ್ಸ್ ಪುಸ್ತಕಗಳ ಸರಣಿಗಳೆಂದರೆ ‘ಅಮರ ಚಿತ್ರಕಥಾ’ (Amar chitra katha) ಮತ್ತು ‘ಟಿಂಕಲ್’ (TINKLE Magazine). ಅವೆರಡೂ ನಮ್ಮೆಲ್ಲರ ಮನಸ್ಸಿನಲ್ಲಿ ಅದ್ಭುತ ರಮ್ಯಲೋಕವನ್ನು (Raja Marga Column) ಸೃಷ್ಟಿಸಿದ ಸರಣಿ ಮ್ಯಾಗಜಿನ್‌ಗಳು! ಅನಂತ ಪೈ (Anant Pai) ಎಂಬ ಮೂಲ ಹೆಸರನ್ನು ಹೊಂದಿದ ಅಂಕಲ್‌ ಪೈ (Uncle Pai) ಇದರ ಮೂಲಪುರುಷರು. ಇವರು ನಿಜಕ್ಕೂ ಭಾರತದ ವಾಲ್ಟ್‌ ಡಿಸ್ನಿ (Walt Disney).

ಯಾರಿವರು ಅಂಕಲ್ ಪೈ?

ಅವರು ತಮ್ಮನ್ನು ತಾವೇ ‘ಅಂಕಲ್ ಪೈ’ ಎಂದು ಕರೆದುಕೊಂಡವರು. ಅವರು ನನ್ನೂರಾದ ಕಾರ್ಕಳದಲ್ಲಿ ಹುಟ್ಟಿದವರು ಮತ್ತು ತಮ್ಮ ಬಾಲ್ಯವನ್ನು ಕಳೆದವರು ಎನ್ನುವುದು ನನಗೆ ಹೆಮ್ಮೆ! ಅವರ ಮಾತೃಭಾಷೆಯು ಕೊಂಕಣಿ. ಹುಟ್ಟಿದ ಎರಡನೆಯ ವರ್ಷಕ್ಕೆ ತಂದೆ ಮತ್ತು ತಾಯಿ ಇಬ್ಬರ ಪ್ರೀತಿಯಿಂದಲೂ ವಂಚಿತರಾದರು. ಹಾಗೆ ಅವರ ಅಜ್ಜ ಅವರನ್ನು ಸಾಕುತ್ತಾರೆ. ಮುಂದೆ ಅವರು ಮುಂಬೈಗೆ ಬಂದು ಮಹೀಮ್ ನಗರದ ಓರಿಯೆಂಟ್ ಶಾಲೆಯಲ್ಲಿ ಓದುತ್ತಾರೆ. ಮುಂಬೈ ವಿವಿಯಿಂದ ವಿಜ್ಞಾನದಲ್ಲಿ ಎರಡು ಪದವಿಗಳನ್ನು ಪಡೆಯುತ್ತಾರೆ.

ಮುಂಬೈಯಲ್ಲಿ ಪತ್ರಿಕಾ ಪ್ರಪಂಚಕ್ಕೆ ಪ್ರವೇಶ!

ನಂತರ ಸ್ವಲ್ಪ ದಿನ ಮುಂಬೈಯಲ್ಲಿ ‘ಮಾನವ್’ ಹೆಸರಿನ ಒಂದು ಮ್ಯಾಗಜಿನ್ ಮಾಡಿ ಕೈ ಸುಟ್ಟುಕೊಳ್ಳುತ್ತಾರೆ. ಅದರ ನಂತರ ದೇಶದಲ್ಲಿ ಹೆಸರಾಂತ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ಅಧಿಕಾರಿಯಾಗಿ ನೇಮಕ ಪಡೆಯುತ್ತಾರೆ. ಆಗಲೇ ‘ಇಂದ್ರಜಾಲ ಕಾಮಿಕ್ಸ್ ಸರಣಿ’ಯ ಎರಡು ಪುಸ್ತಕಗಳನ್ನು ಅವರು ಮುದ್ರಿಸಿ ಹೊರತರುತ್ತಾರೆ. ಅವುಗಳೆಂದರೆ ಫ್ಯಾಂಟಮ್ ಮತ್ತು ಮಾಂಡ್ರೆಕ್! ಅವುಗಳು ಜನಪ್ರಿಯವಾಗಿ ಅಂಕಲ್ ಪೈ ಅವರಿಗೆ ತುಂಬಾನೆ ಹೆಸರು ಬಂದಿತು. ಆಗ ಅವರ ಬದುಕಿನಲ್ಲಿ ಒಂದು ಟರ್ನಿಂಗ್ ಪಾಯಿಂಟ್ ಬಂದೇ ಬಿಟ್ಟಿತು!

‘ಅಮರ ಚಿತ್ರಕಥಾ’ ಹುಟ್ಟಿದ್ದು ಹೀಗೆ!

1967ರ ಹೊತ್ತಿಗೆ ಒಂದು ದಿನ ಅವರು ದೂರದರ್ಶನದಲ್ಲಿ ಒಂದು ರಸಪ್ರಶ್ನೆ ಕಾರ್ಯಕ್ರಮವನ್ನು ಬಹಳ ಆಸಕ್ತಿಯಿಂದ ವೀಕ್ಷಣೆ ಮಾಡುತಿದ್ದರು. ವಿವಿಧ ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದ ಕಾರ್ಯಕ್ರಮ ಅದು.

ಆ ಮಕ್ಕಳು ಗ್ರೀಕ್ ಪುರಾಣಗಳ ಪ್ರಶ್ನೆಗಳು ಬಂದಾಗ ತಟ್ಟನೆ ಉತ್ತರಗಳನ್ನು ಕೊಡುತ್ತಿದ್ದರು. ಆದರೆ ನಮ್ಮದೇ ರಾಮಾಯಣ, ಮಹಾಭಾರತದ ಪ್ರಶ್ನೆಗಳು ಬಂದಾಗ ಬಹಳ ಕಷ್ಟ ಪಡುತ್ತಿದ್ದರು. “ರಾಮನ ತಾಯಿ ಯಾರು?” ಎಂಬ ಸುಲಭವಾದ ಪ್ರಶ್ನೆಗೆ ಆ ಮಕ್ಕಳಿಂದ ಉತ್ತರ ಬರಲೇ ಇಲ್ಲ! ಅಯೋಧ್ಯಾ ನಗರ ಯಾವ ನದಿಯ ದಡದಲ್ಲಿ ಇದೆ ಎಂಬ ಪ್ರಶ್ನೆಗೆ ಮಕ್ಕಳು ಮತ್ತೆ ದಡಬಡ ಆದರು!

ಅನಂತ ಪೈ ಅವರಿಗೆ ಇದರಿಂದ ತುಂಬಾ ನೋವಾಯಿತು. ತಾನು ಮುಂದೆ ಏನು ಮಾಡಬೇಕಾಗಿದೆ? ಎಂದು ತಕ್ಷಣ ಅವರಿಗೆ ಅರ್ಥವಾಯಿತು! ಅವರು ಟೈಮ್ಸ್ ನೌಕರಿಗೆ ರಾಜೀನಾಮೆ ಕೊಟ್ಟು ಹೊರಬಂದರು!

ಸಾಂಸ್ಕೃತಿಕವಾಗಿ ಶ್ರೀಮಂತವಾದ ಸಂಚಿಕೆಗಳು!

ಭಾರತದ ಅತ್ಯಂತ ಶ್ರೀಮಂತವಾದ ಪುರಾಣ, ಇತಿಹಾಸ, ಜಾನಪದ, ಸಾಂಸ್ಕೃತಿಕ ಕಥೆಗಳನ್ನು ಅಕ್ಷರಗಳ ಮೂಲಕ ಹೇಳುವುದಕ್ಕಿಂತ ಬಣ್ಣದ ಚಿತ್ರಗಳ ಮೂಲಕ ಹೇಳಿದರೆ ಮಕ್ಕಳಿಗೆ ಸುಲಭವಾಗಿ ಅರ್ಥ ಆಗುತ್ತದೆ ಎಂದು ಅವರಿಗೆ ಮನವರಿಕೆ ಆಗಿತ್ತು. ಅದನ್ನು ಆಧಾರವಾಗಿಟ್ಟುಕೊಂಡು ಅವರು ಆರಂಭ ಮಾಡಿದ ಕಥಾ ಸರಣಿಯೇ ‘ಅಮರ ಚಿತ್ರ ಕಥಾ’.

ಆರಂಭದಲ್ಲಿ ಎದುರಾಯ್ತು ನೂರಾರು ಸವಾಲುಗಳು!

ಐಡಿಯಾ ತುಂಬಾ ಚೆನ್ನಾಗಿತ್ತು. ಆದರೆ ಅದಕ್ಕೆ ಪ್ರಕಾಶಕರನ್ನು ಹುಡುಕುವುದು ಅವರಿಗೆ ಬಹಳ ಕಷ್ಟ ಆಯಿತು. ಯಾಕೆಂದರೆ ಭಾರತದಲ್ಲಿ ಅಂತಹ ಸರಣಿಯು ಅದುವರೆಗೆ ಜನಪ್ರಿಯ ಆಗಿರಲಿಲ್ಲ. (ಕನ್ನಡದಲ್ಲಿ 1965ರ ಹೊತ್ತಿಗೆ ಅನಂತರಾಮು ಎಂಬವರು ಹತ್ತು ಶೀರ್ಷಿಕೆಯ ಅಮರ ಚಿತ್ರಕಥಾ ಪುಸ್ತಕಗಳನ್ನು ಪ್ರಕಾಶನ ಮಾಡಿದ್ದರು ಎಂದು ದಾಖಲೆಗಳು ಹೇಳುತ್ತವೆ). ಅದನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಪೈಯವರು ಅದನ್ನು ಇನ್ನಷ್ಟು ಅದ್ಭುತವಾಗಿ ಮಾಡಲು ಹೊರಟರು.

ಕೊನೆಗೂ ಪ್ರಕಾಶಕರು ದೊರೆತರು!

ಜಿ. ಎಲ್. ಮೀರ್‌ ಚಾಂದಾನಿ ಎಂಬ ಪ್ರಕಾಶಕರು ಅವರಿಗೆ ನೆರವು ನೀಡಲು ಮುಂದೆ ಬಂದರು. ಆರಂಭದಲ್ಲಿ ಸ್ವತಃ ಪೈಯವರು ಕಥೆ ಮತ್ತು ಚಿತ್ರ ಎರಡನ್ನೂ ಬರೆದು ಮುದ್ರಿಸಬೇಕಾಯಿತು.

ಮುಂದೆ ಇತರ ಲೇಖಕರನ್ನು ಮತ್ತು ಚಿತ್ರ ಕಲಾವಿದರನ್ನು ಒಳಗೊಂಡು ‘ರಂಗ ರೇಲಾ’ ಎಂಬ ಸಿಂಡಿಕೇಟನ್ನು ಅವರು ಸ್ಥಾಪಿಸಿದರು. ಭಾರತದ ಅತೀ ಶ್ರೇಷ್ಠವಾದ ಸಾಂಸ್ಕೃತಿಕ ಅಸ್ಮಿತೆಗಳಾದ ರಾಮಾಯಣ, ಮಹಾಭಾರತ, ಭಾಗವತ, ಹನುಮಾನ್, ಕೃಷ್ಣನ ಬಾಲಲೀಲೆಗಳು, ತಾನಸೇನ್, ಅಕ್ಬರ್ ಮತ್ತು ಬೀರಬಲ್, ತೆನಾಲಿ ರಾಮನ ಕಥೆಗಳು, ಪಂಚತಂತ್ರದ ಕಥೆಗಳು, ಶಿವಾಜಿ, ರಾಣಾ ಪ್ರತಾಪ, ತುಳಸಿದಾಸ, ಮೀರಾಬಾಯಿ, ಕಾಳಿದಾಸ, ಏಸು ಕ್ರಿಸ್ತ, ಚಾಣಕ್ಯ, ಚಂದ್ರಗುಪ್ತ, ಅಶೋಕ……….. ಮೊದಲಾದವರ ಬದುಕಿನ ಕಥೆಗಳನ್ನು ಬಣ್ಣ ಬಣ್ಣದ ರೇಖಾ ಚಿತ್ರಗಳ ಮೂಲಕ ಹೇಳಿದರೆ ಮಕ್ಕಳ ಖುಷಿಯು ಎಷ್ಟು ಮತ್ತು ಹೇಗಿರಬಹುದು? ಊಹೆ ಮಾಡಿ.

ಭಾರತದಲ್ಲಿ ಆಯ್ತು ಕಾಮಿಕ್ಸ್ ಕ್ರಾಂತಿ!

‘ಅಮರ ಚಿತ್ರಕಥಾ’ ಸಂಚಿಕೆಗಳು ನಮ್ಮ ಭಾರತದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಮಾಡಿದವು. ತಿಂಗಳಿಗೆ ಒಂದು, ಕೆಲವೊಮ್ಮೆ ಎರಡು, ಕೆಲವೊಮ್ಮೆ ಮೂರು ‘ಅಮರ ಚಿತ್ರ ಕಥಾ’ ಪುಸ್ತಕಗಳು ಹೊರಬರುತ್ತಿದ್ದವು.

70-90ರ ದಶಕದಲ್ಲಿ ಪ್ರತೀ ತಿಂಗಳು ಸರಾಸರಿ 7,00,000 ಪುಸ್ತಕಗಳು ಮಾರಾಟ ಆಗುತ್ತಿದ್ದವು ಅಂದರೆ ನಮಗೆ ನಂಬಲು ಕಷ್ಟ ಆಗಬಹುದು. ಇದೊಂದು ಐತಿಹಾಸಿಕ ದಾಖಲೆ! ಇದುವರೆಗೆ 500ಕ್ಕೂ ಹೆಚ್ಚಿನ ವಿವಿಧ ಶೀರ್ಷಿಕೆಗಳ ಅಮರ ಚಿತ್ರ ಕಥಾ ಪುಸ್ತಕಗಳು ಮುದ್ರಿತವಾಗಿ ಹೊರಬಂದಿದ್ದು ಒಟ್ಟು ಎಂಬತ್ತಾರು ಮಿಲಿಯನ್ ಓದುಗ ವರ್ಗವನ್ನು ತಲುಪಿವೆ! ಅಮರ ಚಿತ್ರಕಥಾ ಸಂಚಿಕೆಗಳು ಇಂಗ್ಲಿಷ್, ಹಿಂದಿ ಮತ್ತು ಭಾರತದ ಎಲ್ಲ ಭಾಷೆಗಳಲ್ಲಿಯೂ ಬರುತ್ತಿದ್ದವು. ಅದರ ಲೇಖಕರು, ಸಂಪಾದಕರು ಮತ್ತು ಪ್ರಕಾಶಕರು ಎಲ್ಲವೂ ಆಗಿ ಅಂಕಲ್ ಪೈಯವರು ಭಾರೀ ಜನಪ್ರಿಯತೆ ಪಡೆದರು.

ಸೃಜನಶೀಲತೆಗೆ ಇನ್ನೊಂದು ಹೆಸರೇ ಅಂಕಲ್ ಪೈ!

ತುಂಬಾನೇ ಕ್ರಿಯಾಶೀಲರಾಗಿ ಮತ್ತು ಸೃಜನಶೀಲರಾಗಿ ಯೋಚನೆ ಮಾಡುವ ಅಂಕಲ್ ಪೈ ಅವರು ಸುಮ್ಮನೆ ಕೂರುವವರು ಅಲ್ಲವೇ ಅಲ್ಲ!

I am really astonished by his Creativity, Comic sense, Enthusiasm and Determination!

‘ಅಮರ ಚಿತ್ರ ಕಥಾ’ ಸರಣಿಯು ಒಂದು ಹಂತದ ಕೀರ್ತಿ ಹಾಗೂ ಜನಪ್ರಿಯತೆಯ ಉತ್ತುಂಗವನ್ನು ತಲುಪಿದ ಸಂದರ್ಭದಲ್ಲಿ ಅವರು ಇನ್ನೊಂದು ಭಾರೀ ಸಾಹಸಕ್ಕೆ ಕೈ ಹಾಕಿದರು.

‘ಟಿಂಕಲ್’ ಮ್ಯಾಗಜಿನ್ ಬಂತು, ದಾರಿ ಬಿಡಿ!

ಸಣ್ಣ ಸಣ್ಣ ಮಕ್ಕಳು ಮತ್ತು ಹದಿಹರೆಯದ ವಿದ್ಯಾರ್ಥಿಗಳ ಮನೋವಿಕಾಸಕ್ಕಾಗಿ ಟಿಂಕಲ್ (TINKLE) ಎಂಬ ಪಾಕ್ಷಿಕ ಪತ್ರಿಕೆಯನ್ನು ಅಂಕಲ್ ಪೈ ಅವರೇ ಮುಂದೆ ನಿಂತು ಆರಂಭ ಮಾಡಿದರು. ಮಕ್ಕಳಿಗೆ ಸಹಜವಾಗಿ ಇಷ್ಟವಾಗುವ ವಿಶೇಷ ಆಟಗಳ ಜೊತೆಗೆ ಪದಬಂಧ, ಸುಡೊಕು, ಕ್ವಿಜ್, ಕಾಲ್ಪನಿಕ ಕಥೆಗಳು, ಸಾಮಾನ್ಯ ಜ್ಞಾನ, ಕಾರ್ಟೂನ್, ರಂಜಕವಾದ ಮತ್ತು ಅತ್ಯಾಕರ್ಷಕವಾದ ಬಣ್ಣದ ಚಿತ್ರಗಳಿಂದ TINKLE ಸಂಚಿಕೆಗಳು ಅತ್ಯಂತ ಶ್ರೀಮಂತವಾಗಿ ಹೊರಬಂದು ಮಕ್ಕಳ ಕೈ ಸೇರಿದವು.

ನನ್ನ ಬಾಲ್ಯ ಮತ್ತು ಯೌವ್ವನದ ದಿನಗಳಲ್ಲಿ ಒಂದು ಸಂಚಿಕೆ ಕೂಡ ಬಿಡದೆ ನಾನು ಓದಿ ಮುಗಿಸಿದ ಪುಸ್ತಕಗಳು ಎಂದರೆ ಅದು TINKLE ! ಆ ಪುಸ್ತಕಗಳು ಈಗಲೂ ಜನಪ್ರಿಯ ಆಗಿದ್ದು ಮೂರು ಲಕ್ಷಕ್ಕಿಂತ ಅಧಿಕ ಸಂಖ್ಯೆಯ ಓದುಗರನ್ನು ತಲುಪುತ್ತಿವೆ! ಇದುವರೆಗೆ 700 ಸಂಚಿಕೆಗಳನ್ನು ಪೂರೈಸಿದೆ! ಇದು ಇನ್ನೊಂದು ಐತಿಹಾಸಿಕ ದಾಖಲೆ!

ಚಿಂಪು, ರಾಮು ಮತ್ತು ಶಾಮು, ಕಪೀಶ ಇತ್ಯಾದಿ!

ಮುಂದೆ ಭಾರತದ ಎಲ್ಲ ಭಾಷೆಗಳ ಪತ್ರಿಕೆಗಳಲ್ಲಿ ಚಿಂಪು ಕಾಮಿಕ್ಸ್, ರಾಮು ಮತ್ತು ಶಾಮು, ಕಪೀಶ, ಲಿಟಲ್ ರಾಜಿ, ಫ್ಯಾಕ್ಟ್ ಫ್ಯಾಕ್ಟರಿ……ಹೀಗೆ ನೂರಾರು ಕಾಮಿಕ್ ಸರಣಿಗಳನ್ನು ಅವರು ಕ್ರಿಯೇಟ್ ಮಾಡಿದರು. ಆಗ ಉದಯವಾಣಿ ಪತ್ರಿಕೆಯ ರವಿವಾರಗಳ ಆವೃತ್ತಿಯಲ್ಲಿ ವರ್ಷಾನುಗಟ್ಟಲೆ ಹರಿದು ಬರುತ್ತಿದ್ದ ‘ರಾಮು ಮತ್ತು ಶಾಮು’ ಕಾರ್ಟೂನಿನ ವಿಶೇಷ ಸಂಚಿಕೆಗಳಿಗೆ ನಾವೆಲ್ಲರೂ ಕಾಯುತ್ತಿದ್ದ ದಿನಗಳು ಇದ್ದವು! ಇವುಗಳ ಒಂದಲ್ಲ ಒಂದು ಸರಣಿಯನ್ನು ನೀವು ಖಂಡಿತ ಗಮನಿಸಿರುತ್ತೀರಿ ಎನ್ನುವುದು ನನ್ನ ನಂಬಿಕೆ.

ಅಂಕಲ್ ಪೈ ಅವರ ಬದುಕು ಮಕ್ಕಳಿಗೆ ಮತ್ತು ಮಕ್ಕಳಿಗಾಗಿ!

ಈ ಸಾಹಸಗಳ ಜೊತೆಗೆ ಹಲವು ವಿಕಸನದ ಪುಸ್ತಕಗಳು, ವಿಡಿಯೋ ಫಿಲಂಗಳು, ಅನಿಮೇಟೆಡ್ ಫಿಲಂಗಳು ಮತ್ತು ಆಡಿಯೋ ಪುಸ್ತಕಗಳನ್ನು ಅವರು ಹೊರತಂದು ಮಕ್ಕಳ ಮನೋವಿಕಾಸಕ್ಕೆ ಅದ್ಭುತ ಕೊಡುಗೆಯನ್ನು ನೀಡಿದರು!

82 ವರ್ಷ ಬದುಕಿದ್ದ ಅಂಕಲ್ ಪೈ ಅವರು ನಿಧನರಾದಾಗ (2011) ಗೂಗಲ್ ಸಂಸ್ಥೆಯು ಕಾಮಿಕ್ಸ್ ಡೂಡಲ್ ಮೂಲಕ ಅವರಿಗೆ ಶ್ರದ್ಧಾಂಜಲಿ ನೀಡಿತ್ತು.

ಇದನ್ನೂ ಓದಿ: Raja Marga Column : ಚೆನ್ನಾಗಿರೋ ಸಂಬಂಧಗಳು ಹಾಳಾಗೋದು ಹೇಗೆ? ಇಲ್ಲಿವೆ 12 ಕಾರಣ

ಭಾರತದ ವಾಲ್ಟ್ ಡಿಸ್ನಿ ಎಂಬ ಕೀರ್ತಿ!

ತಮ್ಮ ಜೀವಿತಾವಧಿಯಲ್ಲಿ ಇಷ್ಟೊಂದು ಶ್ರೇಷ್ಠ ಕೆಲಸಗಳನ್ನು ಮುಗಿಸಲು ಅವರಿಗೆ ಹೇಗೆ ಸಾಧ್ಯವಾಯಿತು ಎನ್ನುವುದು ನನಗೆ ಬಹಳ ಕುತೂಹಲದ ಸಂಗತಿ!

1997ರಲ್ಲಿ ಡಾಕ್ಟರ್ ಟಿಎಮ್ಎ ಪೈ ಅವರ ಸಂಸ್ಮರಣಾ ಪ್ರಶಸ್ತಿಯನ್ನು ಸ್ವೀಕರಿಸಲು ನಮ್ಮ ಅಂಕಲ್ ಪೈ ಅವರು ಮಣಿಪಾಲಕ್ಕೆ ಬಂದಿದ್ದರು. ಆ ದಿನ ‘ ಮಕ್ಕಳಿಗೆ ಇಷ್ಟೊಂದು ಪ್ರೀತಿಯನ್ನು ಕೊಡಲು ನಿಮಗೆ ಹೇಗೆ ಸರ್ ಸಾಧ್ಯವಾಯಿತು?’ ಎಂದು ಯಾರೋ ಅವರನ್ನು ಪ್ರಶ್ನೆ ಕೇಳಿದ್ದರು. ಆಗ ಅವರು ನೀಡಿದ ಉತ್ತರವು ಕೂಡ ಅತ್ಯಂತ ಮಾರ್ಮಿಕವಾಗಿತ್ತು.

‘ನನಗೆ ಮಕ್ಕಳಿರಲಿಲ್ಲ. ಆ ನೋವುಗಳೆ ನನ್ನಿಂದ ಇಷ್ಟೊಂದು ಕೆಲಸಗಳನ್ನು ಮಾಡಿಸಿದವು’ ಎಂದಿದ್ದರು!

ನಮ್ಮ ಕಾರ್ಕಳದ ಅಂಕಲ್ ಪೈ ಅವರು ಭಾರತದ ಕಾಮಿಕ್ಸ್ ಪ್ರಪಂಚದ ನಿಜವಾದ ಧ್ರುವ ತಾರೆ ಎಂದು ನನಗೆ ಖಂಡಿತ ಅನ್ನಿಸುತ್ತದೆ.

Exit mobile version