Site icon Vistara News

ರಾಜ ಮಾರ್ಗ ಅಂಕಣ | ರಾಮಾನುಜನ್‌ ಗಣಿತದಲ್ಲಿ ನೂರಕ್ಕೆ ನೂರು, ಇಂಗ್ಲಿಷಲ್ಲಿ ಫೇಲು! ಆರ್‌.ಕೆ. ನಾರಾಯಣನ್‌ ಉಲ್ಟಾ!

questions

ಡಾಕ್ಟರ್ ಶಂಕರ ದಯಾಳ್ ಶರ್ಮಾ ಅವರು ರಾಷ್ಟಪತಿ ಆಗಿದ್ದಾಗ ಶಿಕ್ಷಣ ತಜ್ಞರಾದ ಯಶಪಾಲ್ ಅವರು ರಾಷ್ಟ್ರಪತಿಗಳ ಜೊತೆ ವೇದಿಕೆಯಲ್ಲಿ ಇದ್ದರು. ಅವರು ತಮ್ಮ ಭಾಷಣದಲ್ಲಿ ರಾಷ್ಟ್ರಪತಿಗಳಿಗೆ ಮೂರು ಪ್ರಶ್ನೆಗಳನ್ನು ಕೇಳಿದರು.

೧) ಅಶೋಕ ಚಕ್ರವರ್ತಿಯು ಯಾವ ವರ್ಷದಲ್ಲಿ ಚಕ್ರವರ್ತಿ ಆದನು?
೨) ಮಹಾವೀರರು ತಮ್ಮ ಎಷ್ಟನೇ ವಯಸ್ಸಿನಲ್ಲಿ ತೀರ್ಥಂಕರ ಪದವಿ ಪಡೆದರು?
೩) ಭಾಸ ಕವಿಯು ಬರೆದ ನಾಟಕಗಳಲ್ಲಿ ಕೊನೆಯ ನಾಟಕ ಯಾವುದು?

ಈ ಯಾವ ಪ್ರಶ್ನೆಗೆ ಕೂಡ ಉತ್ತರ ಕೊಡಲು ರಾಷ್ಟ್ರಪತಿಗೆ ಆಗಲಿಲ್ಲ!
ಆಗ ಶಿಕ್ಷಣ ತಜ್ಞರಾದ ಯಶಪಾಲ್ ಮಾರ್ಮಿಕವಾಗಿ ಒಂದೇ ಪ್ರಶ್ನೆ ಕೇಳಿದರು: “ರಾಷ್ಟ್ರಪತಿಗಳೇ, ಇಂತಹ ಸಿಂಪಲ್ ಪ್ರಶ್ನೆಗಳಿಗೆ ಉತ್ತರಿಸಲು ನಿಮ್ಮಿಂದ ಆಗಲಿಲ್ಲ. ಆದರೂ ನೀವು ರಾಷ್ಟ್ರಪತಿ ಆಗಿದ್ದೀರಿ. ಇಂಥ ಶುಷ್ಕ ಮಾಹಿತಿಗಳನ್ನು ನಮ್ಮ ಶಾಲೆಯ ಮಕ್ಕಳು ಯಾಕೆ ಓದಬೇಕು?”
ರಾಷ್ಟ್ರಪತಿಗಳಿಗೆ ಉತ್ತರ ಕೊಡಲು ತುಂಬಾ ಕಷ್ಟ ಆಯಿತು!

ಒಮ್ಮೆ ಯೋಚನೆ ಮಾಡಿ. ನಮ್ಮ ಪಠ್ಯಪುಸ್ತಕದ ಒಳಗಿನ ಶುಷ್ಕವಾದ ಅನೇಕ ಮಾಹಿತಿಗಳನ್ನು ನಾವು ನಮ್ಮ ಮಕ್ಕಳ ತಲೆಗೆ ತುಂಬುತ್ತ ಇದ್ದೇವಲ್ಲ! ಮಕ್ಕಳು ಶಾಲೆಯಲ್ಲಿ ಓದುವ ಎಷ್ಟು ಮಾಹಿತಿಗಳು ಮುಂದೆ ಅವರ ಜೀವನಕ್ಕೆ ಬೇಕು? ನಾವು ಮಕ್ಕಳಿಗೆ ಕಲಿಸುವ ಬೀಜಗಣಿತ, ರಸಾಯನ ಶಾಸ್ತ್ರ, ತ್ರಿಕೋನಮಿತಿ, ಇಂಗ್ಲಿಷ್ ಕಠಿಣವಾದ ವ್ಯಾಕರಣ ಅವರ ಜೀವನಕ್ಕೆ ಮುಂದೆ ಎಷ್ಟು ಸಹಾಯ ಮಾಡಬಹುದು? ಸಂಶೋಧನಾ ಕ್ಷೇತ್ರಕ್ಕೆ ಹೋಗುವ ಮಕ್ಕಳಿಗೆ ಇವೆಲ್ಲವೂ ಬೇಕಾಗಬಹುದು. ಆದರೆ ನಮ್ಮಲ್ಲಿ ಎಷ್ಟು ಶೇಕಡಾ ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರಕ್ಕೆ ಹೋಗುತ್ತಾರೆ? ಎಷ್ಟು ಮಂದಿ ಇಂಗ್ಲಿಷ್ ಭಾಷೆಯ ಉನ್ನತ ಅಧ್ಯಯನಕ್ಕೆ ಹೋಗುತ್ತಾರೆ? ಯೋಚನೆ ಮಾಡಿ.

ನಮ್ಮ ವಿದ್ಯಾರ್ಥಿಗಳಿಗೆ ಆಯ್ಕೆಯೇ ಇಲ್ಲ!
ನಮ್ಮಲ್ಲಿ ಗಣಿತದ ಮೇರು ಪ್ರತಿಭೆಯಾದ ರಾಮಾನುಜನ್ ಪಿಯುಸಿ ಪ್ರವೇಶ ಪರೀಕ್ಷೆಯಲ್ಲಿ ಫೇಲ್ ಆದರು. ಏಕೆಂದರೆ ಅವರಿಗೆ ಗಣಿತದಲ್ಲಿ ನೂರಕ್ಕೆ ನೂರು ಬಂತು. ಫೇಲ್ ಆದದ್ದು ಇಂಗ್ಲಿಷ್‌ನಲ್ಲಿ! ಯಾಕೆಂದರೆ ಅವರಿಗೆ ಇಂಗ್ಲಿಷ್ ಭಾಷೆಯಲ್ಲಿ ಆಸಕ್ತಿ ಇರಲಿಲ್ಲ. ಅವರ ಆಸಕ್ತಿ ಇದ್ದದ್ದು ಗಣಿತದಲ್ಲಿ ಮಾತ್ರ!

ಪ್ರಸಿದ್ಧ ಸಾಹಿತಿ ಆರ್.ಕೆ. ನಾರಾಯಣನ್ ಅವರು ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಫೇಲ್ ಆದರು. ಅವರು ಇಂಗ್ಲಿಷ್ ಭಾಷೆಯಲ್ಲಿ ಪೂರ್ಣ ಅಂಕ ಪಡೆದವರು. ಫೇಲ್ ಆದದ್ದು ಗಣಿತದಲ್ಲಿ! ಯಾಕೆಂದರೆ ಅವರ ಆಸಕ್ತಿ ಇದ್ದದ್ದು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ!

ನಮ್ಮ ಶಿಕ್ಷಣ ಪದ್ಧತಿ ಹೇಗಿದೆ ಅಂದರೆ ಮೀನುಗಳಿಗೆ ಮರ ಹತ್ತುವ ಸ್ಪರ್ಧೆ ಏರ್ಪಡಿಸಿದರೆ ಹೇಗಿರಬಹುದು? ಹಾರುವ ಹಕ್ಕಿಗಳಿಗೆ ಈಜುವ ಸ್ಪರ್ಧೆ ಮಾಡಿದರೂ ಅದೇ ಫಲಿತಾಂಶ ಖಂಡಿತ!

ನಾವು ಪೆಟ್ರೋಲ್ ಗಾಡಿಗೆ ಡೀಸೆಲ್ ಹಾಕ್ತಾ ಇದ್ದೇವೆ!
ಮಕ್ಕಳ ಆಸಕ್ತಿಯನ್ನು ಅರ್ಥ ಮಾಡಿಕೊಳ್ಳದೆ ಅನಾವಶ್ಯಕವಾಗಿ ಒಂದಿಷ್ಟು ಶುಷ್ಕ ಮಾಹಿತಿಗಳನ್ನು ಮಕ್ಕಳ ತಲೆಗೆ ತುರುಕುವುದು ನಿಮಗೆ ತಪ್ಪು ಅಂತ ಅನ್ನಿಸುವುದಿಲ್ಲವೇ? ಪೋಷಕರು ಮತ್ತು ಶಿಕ್ಷಕರು ಯೋಚನೆ ಮಾಡಬೇಕಾದ ಮಿಲಿಯನ್ ಡಾಲರ್ ಪ್ರಶ್ನೆ ಇದು. ತನಗೆ ಆಸಕ್ತಿ ಇಲ್ಲದ ವಿಷಯಗಳನ್ನು ಮಗು ಒತ್ತಡದಿಂದ ಕಲಿಯಬೇಕಾದಾಗ ಸಹಜ ಆಸಕ್ತಿ ಕಳೆದುಕೊಳ್ಳುತ್ತದೆ. ಬಾಯಿಪಾಠ ಮಾಡಲು ಹೋಗಿ ಸ್ವಂತಿಕೆ ಕಳೆದುಕೊಳ್ಳುತ್ತದೆ! ನಮ್ಮ ತರಗತಿಯಲ್ಲಿ ಒಬ್ಬ ಒಳ್ಳೆಯ ಸಂಗೀತ ಕಲಾವಿದ, ನಾಟಕಕಾರ, ಲೇಖಕ, ಸಂಶೋಧಕ, ನಟ /ನಟಿ ರೂಪುಗೊಳ್ಳುವುದು ಬೇಡವೇ? ಒತ್ತಡವನ್ನು ನಿಯಂತ್ರಿಸಲು ಆಗದೆ ಎಷ್ಟೋ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಪ್ರಯತ್ನ ಮಾಡಿದ ನೂರಾರು ಘಟನೆಗಳು ಇವೆ.

ಬಾಯಿಪಾಠ ಮಾಡೋದು ಕೂಡ ಒಂದು ಕಲೆ. ಅದು ನನ್ನಂತವರಿಗೆ ಸಾಧ್ಯ ಇಲ್ಲವೇ ಇಲ್ಲ! ಆದರೆ ಪರೀಕ್ಷೆಗೆ ಬೇಕಾದ ಜ್ಞಾನವನ್ನು ಬಾಯಿಪಾಠ ಮಾಡಿಕೊಂಡು ಪರೀಕ್ಷೆ ಬರೆದರೆ ಮುಂದಿನ ಅರ್ಧ ಗಂಟೆಯಲ್ಲಿ ಅದು ಮರೆತೇ ಹೋಗುತ್ತದೆ. ಅದು ಮುಂದಿನ ಜೀವನಕ್ಕೆ ಒದಗುವುದು ಹೇಗೆ? ಒಗ್ಗದ್ದನ್ನು ಜೀರ್ಣ ಮಾಡುವುದು ಹೇಗೆ? ಪ್ರೀತಿ ಮಾಡದವರ ಜೊತೆ ಬದುಕುವುದು ಹೇಗೆ? ಇವೆಲ್ಲವೂ ಒಂದೇ ರೀತಿಯ ಸೂಕ್ಷ್ಮ ಪ್ರಶ್ನೆಗಳು.

ಹಾಗೆಯೇ ಮಗುವಿಗೆ ಆಸಕ್ತಿದಾಯಕ ಅಲ್ಲದ ಮತ್ತು ಮುಂದಿನ ಬದುಕಿಗೆ ಯಾವ ಕಾರಣಕ್ಕೂ ಅಗತ್ಯ ಇಲ್ಲದ ಜ್ಞಾನ ಆಧಾರಿತ ಮಾಹಿತಿಗಳನ್ನು ಒತ್ತಾಯ ಮಾಡಿ ಉಣ್ಣಿಸುವುದು ಬಲವಂತದ ಮಾಘಸ್ನಾನ ಆಗಲಾರದೆ?

ಪ್ರಶ್ನೆಗಳು ಬಹಳ ಶಕ್ತಿಶಾಲಿ ಆಗುವುದು ಯಾವಾಗ?
ಯಾರು, ಏನು, ಯಾವುದು, ಎಲ್ಲಿ, ಯಾವಾಗ, ಎಷ್ಟು? ಮೊದಲಾದ ಪ್ರಶ್ನೆಗಳು ಜ್ಞಾನವನ್ನು ಉದ್ದೀಪನ ಮಾಡುವ ಪ್ರಶ್ನೆಗಳು. ಉತ್ತಮ ಬದುಕನ್ನು ಬದುಕಲು ಕನಿಷ್ಠ ಜ್ಞಾನವು ಬೇಕೇಬೇಕು.

ಆದರೆ ಯಾಕೆ, ಹೇಗೆ? ಮೊದಲಾದ ಪ್ರಶ್ನೆಗಳು ಕುತೂಹಲವನ್ನು ಕೆರಳಿಸುತ್ತವೆ. ಮಕ್ಕಳಲ್ಲಿ ಇನ್ನಷ್ಟು ಕಲಿಕೆಯ ಉತ್ಸಾಹವನ್ನು ತುಂಬುತ್ತದೆ. ಸೃಜನಶೀಲತೆಯ ಕಿಡಿಯನ್ನು ಹಚ್ಚುತ್ತದೆ.

ಥಾಮಸ್ ಆಲ್ವಾ ಎಡಿಸನ್ ಬಲ್ಬ್ ಯಾವಾಗ ಕಂಡು ಹಿಡಿದನು? ಅನ್ನುವುದಕ್ಕಿಂತ ಯಾಕೆ ಕಂಡು ಹಿಡಿದನು? ಹೇಗೆ ಕಂಡುಹಿಡಿದನು? ಅನ್ನುವುದು ಹೆಚ್ಚು ತೂಕದ ಪ್ರಶ್ನೆ ಆಗಿರುತ್ತದೆ. ಮಕ್ಕಳು ಅಂತಹ ಪ್ರಶ್ನೆಗಳನ್ನು ಹೆಚ್ಚು ಪ್ರೀತಿ ಮಾಡುತ್ತಾರೆ. ಆಳವಾದ ಬಾವಿ ಕೊರೆದಾಗ ಸಿಹಿನೀರಿನ ಬುಗ್ಗೆ ಚಿಮ್ಮುವ ಹಾಗೆ ಆ ರೀತಿಯ ಪ್ರಶ್ನೆಗಳು ಮಕ್ಕಳನ್ನು ಜೀನಿಯಸ್ ಆಗಿ ಮಾಡುತ್ತವೆ.
ನಮ್ಮ ಮಕ್ಕಳು ಕೇವಲ ಜ್ಞಾನವಂತರು ಮಾತ್ರ ಆದರೆ ಸಾಲದು. ಬುದ್ಧಿವಂತರೂ ಆಗಬೇಕು ಅಲ್ಲವೇ?

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ರಾಮಾನುಜನ್ ಎಂಬ ಗಣಿತದ ದಂತ ಕಥೆಯ ಕಡೇ ದಿನಗಳು! ಕುಂಭಕೋಣಂನ ಆ ಮನೆ ಮುಂದೆ ನಾನೇ ಕಣ್ಣೀರಾಗಿದ್ದೆ!

Exit mobile version