ಅರಬ್ ದೇಶದಲ್ಲಿ ಒಬ್ಬ ಒಂಟೆಗಳ ವ್ಯಾಪಾರಿ ಇದ್ದನು. ಅವನಿಗೆ ಮೂರು ಜನ ಗಂಡು ಮಕ್ಕಳು ಇದ್ದರು. ಅವರು ಬೆಳೆಯುತ್ತ ಹೋದಂತೆ ವ್ಯಾಪಾರಿಗೆ ಭಾರಿ ಆತಂಕ ಸೃಷ್ಟಿಯಾಯಿತು. ಯಾಕೆಂದರೆ ಅವರಲ್ಲಿ ಒಗ್ಗಟ್ಟು ಇರಲಿಲ್ಲ. ಪ್ರತೀ ದಿನ ಅವರು ಒಂದಲ್ಲ ಒಂದು ಕಾರಣಕ್ಕೆ ಜಗಳ ಮಾಡಿಕೊಂಡು ಇರುತ್ತಿದ್ದರು. ಆ ಜಗಳ ಬಿಡಿಸುವುದೇ ಅಪ್ಪನಿಗೆ ಬಹಳ ದೊಡ್ಡ ಸಮಸ್ಯೆ ಆಯಿತು.
ವ್ಯಾಪಾರಿ ಸಾಯುವ ಹೊತ್ತಲ್ಲಿ ಚಂದವಾದ ವೀಲುನಾಮೆ ಬರೆದ!
ಅವರ ಒಗ್ಗಟ್ಟು ಜಾಸ್ತಿ ಮಾಡಲು ಅರಬ್ ವ್ಯಾಪಾರಿ ಬೇರೆ ದಾರಿ ಇಲ್ಲದೆ ಒಂದು ಉಪಾಯ ಮಾಡಿದ. ಅವನ ಹತ್ತಿರ 17 ಮಾರಾಟದ ಒಂಟೆಗಳು ಇದ್ದವು. ಅದರಲ್ಲಿ ದೊಡ್ಡ ಮಗನಿಗೆ ಅರ್ಧ ಪಾಲು, ಎರಡನೆಯವನಿಗೆ 1/3 ಭಾಗ, ಮೂರನೆಯ ಮಗನಿಗೆ 1/9 ಭಾಗ ಎಂದು ವೀಲುನಾಮೆ ಮಾಡಿದ. ಯಾವುದೇ ಕಾರಣಕ್ಕೆ ಎಲ್ಲ ಒಂಟೆಗಳನ್ನು ಹಂಚಬೇಕು ಮತ್ತು ಯಾವುದನ್ನೂ ಸಾಯಿಸಬಾರದು ಎಂದು ಕೂಡ ಸೇರಿಸಿದ. ಒಂದು ದಿನ ವ್ಯಾಪಾರಿಯು ಸತ್ತು ಹೋದನು. ಆ ಕ್ಷಣದಲ್ಲಿ ಮಕ್ಕಳ ನಡುವೆ ಮತ್ತೆ ಜಗಳ ಆರಂಭ ಆಯಿತು!
ಜಿಗುಟಾದ ಗಣಿತ ಬಿಡಿಸುವುದು ಹೇಗೆ?
ದೊಡ್ಡ ಮಗನಿಗೆ 17 ಒಂಟೆಗಳ ಅರ್ಧ ಪಾಲು ಅಂದರೆ ಎಂಟೂವರೆ ಆಗುತ್ತದೆ! ಎರಡನೆಯ ಮಗನಿಗೆ ಮೂರನೇ ಒಂದು ಅಂದರೆ 5.6 ಆಗುತ್ತದೆ. ಮೂರನೇ ಮಗನಿಗೆ ಒಂಬತ್ತನೇ ಒಂದು ಅಂದರೆ 1.9 ಆಗುತ್ತದೆ. ಅಂದರೆ ಒಂಟೆಗಳನ್ನು ಪಾಲು ಮಾಡುವುದು ಹೇಗೆ? ಅದಲ್ಲದೆ ಎಲ್ಲ ಒಂಟೆಗಳನ್ನು ಪಾಲು ಮಾಡಲೇಬೇಕು ಮತ್ತು ಯಾವುದನ್ನೂ ಸಾಯಿಸಬಾರದು ಎಂದು ಬೇರೆ ಕಂಡೀಷನ್ ಅಪ್ಪ ಹಾಕಿದ್ದಾನೆ! ಮಕ್ಕಳು ಹತಾಶೆಯಿಂದ ತಲೆಯ ಮೇಲೆ ಕೈ ಹೊತ್ತು ಕೂತರು. ಒಂದು ಒಂಟೆ ಕೂಡ ಮಾರಲು ಆಗಲಿಲ್ಲ. ಹಲವಾರು ತಿಂಗಳು ಉಪವಾಸ ಕೂತರು. ಸಮಸ್ಯೆ ಪರಿಹಾರ ಆಗಲೇ ಇಲ್ಲ. ದೇವರೇ ನೀನೇ ಕಾಪಾಡು ಎಂದು ಕೇಳಿಕೊಂಡರು.
ಒಂಟೆಯನ್ನೇರಿ ಒಬ್ಬ ಸಂತನು ಅಲ್ಲಿಗೆ ಬಂದ!
ಸ್ವಲ್ಪ ದಿನ ಆದ ನಂತರ ದೇವರೇ ಕಳುಹಿಸಿದ ಹಾಗೆ ಒಬ್ಬ ಸಂತನು ಒಂದು ಚಂದದ ಒಂಟೆಯನ್ನು ಏರಿ ಆ ದಾರಿಯಿಂದ ಬಂದನು. ಆಗ ಆ ಮೂರೂ ಜನ ಯುವಕರು ಅವನಿಗೆ ನಮಸ್ಕಾರ ಮಾಡಿ ತಮ್ಮ ಸಮಸ್ಯೆಯನ್ನು ಅವನ ಮುಂದಿಟ್ಟರು. ಆ ಸಂತನು ತಾಳ್ಮೆಯಿಂದ ಅವರ ಮಾತುಗಳನ್ನು ಕೇಳಿ ಸಣ್ಣದಾಗಿ ನಕ್ಕನು. ಆ ಅರಬ್ ವ್ಯಾಪಾರಿಯು ಆ ರೀತಿ ವೀಲು ಬರೆದಿರುವ ಕಾರಣ ಅವನಿಗೆ ಗೊತ್ತಾಯಿತು.
ಅವರ ಒಂಟೆಯ ಪಾಲಿನ ಸಮಸ್ಯೆ ಪರಿಹಾರ ಆಯ್ತು!
ಆ ಸಂತನು ತನ್ನ ಒಂಟೆಯನ್ನು ಅವರ ಒಂಟೆಯ ಜೊತೆ ಸೇರಿಸಿದನು ಮತ್ತು ಪಾಲು ಆರಂಭ ಮಾಡಿದನು. ಆಗ ಒಟ್ಟು 18 ಒಂಟೆ ಆದವು. ಅದರ ಅರ್ಧ ಭಾಗ ದೊಡ್ಡ ಮಗನಿಗೆ ಅಂದರೆ ಒಂಬತ್ತು ಒಂಟೆಗಳು ದೊರೆತವು! ಎರಡನೆಯ ಮಗನಿಗೆ ಮೂರನೇ ಭಾಗ ಎಂದರೆ ಆರು ಒಂಟೆ, ಮೂರನೇ ಮಗನಿಗೆ ಒಂಬತ್ತನೇ ಒಂದು ಅಂದರೆ ಎರಡು ಒಂಟೆ ದೊರೆತವು!
ಈ ರೀತಿ ಪಾಲು ಮಾಡಿದ ನಂತರವೂ ( 9+6+2) ಸಂತನ ಒಂಟೆಯು ಹಾಗೇ ಉಳಿಯಿತು! ಅದನ್ನೇರಿ ಹೊರಡುವ ಮೊದಲು ಆ ಸಂತನು ಆ ಮೂರೂ ಯುವಕರನ್ನು ಕೂರಿಸಿ ಒಂದೆರಡು ಅದ್ಭುತ ಮಾತುಗಳನ್ನು ಹೇಳಿದನು.
ಅಪ್ಪನ ಸಂಪಾದನೆಗೆ ನಿಮ್ಮದು ಸೇರಿಸದೇ ಪಾಲು ಮಾಡುವುದು ಹೇಗೆ?
“ನಿಮ್ಮಪ್ಪ ಅವರ ಜೀವನದ ಉದ್ದಕ್ಕೂ ಕಷ್ಟಪಟ್ಟು ದುಡಿದು 17 ಒಂಟೆಗಳನ್ನು ಸಂಪಾದನೆ ಮಾಡಿದರು. ನೀವು ಅಪ್ಪನ ವ್ಯಾಪಾರಕ್ಕೆ ಏನೂ ಸಹಾಯ ಮಾಡಲಿಲ್ಲ. ಕಷ್ಟಪಟ್ಟು ದುಡಿಯಲು ಹೋಗಲಿಲ್ಲ. ಕೂತು ಉಣ್ಣುವುದು ನಿಮ್ಮ ಕೆಲಸ ಆಗಿತ್ತು. ನೀವು ಒಂದೇ ಒಂದು ಒಂಟೆ ಈವರೆಗೆ ಸಂಪಾದನೆ ಮಾಡದೇ ಪಾಲು ಹೇಗೆ ಕೇಳುತ್ತೀರಿ? ನೀವು ಸಂಪಾದನೆ ಮಾಡಿ ದುಡಿದು ಅಪ್ಪನ ಆಸ್ತಿಗೆ ಸೇರಿಸಿ ಮತ್ತೆ ತಾನೇ ಪಾಲು ಮಾಡಬೇಕಾದದ್ದು? ಇನ್ನು ಮುಂದಕ್ಕೆ ಅಪ್ಪನ ಆಶಯದಂತೆ ಬದುಕಿ” ಎಂದು ಆಶೀರ್ವಾದ ಮಾಡಿ ತನ್ನ ಒಂಟೆಯ ಮೇಲೆ ಕುಳಿತು ಹೊರಟೇಹೋದನು.
ಮುಂದೆ ಆ ಯುವಕರು ತಮ್ಮ ಜಗಳಗಳನ್ನು ಬಿಟ್ಟು ದುಡಿಯಲು ತೊಡಗಿದರು ಎಂದು ಬೇರೆ ಹೇಳಬೇಕಿಲ್ಲ ಅಲ್ಲವೇ?
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಪುಣ್ಯಕೋಟಿ ಎಂಬ ಗೋವು, ಹುಲಿ ಮತ್ತು ಮುಗ್ಧತೆ! ಆ ಹಸಿದ ಹೆಬ್ಬುಲಿ ಬೆಟ್ಟದಿಂದ ಹಾರಿ ಸತ್ತಿದ್ದು ಸರೀನಾ?