Site icon Vistara News

ರಾಜ ಮಾರ್ಗ ಅಂಕಣ : ನಮ್ಮೊಳಗಿನ ಸಂತಸ ಹೆಚ್ಚಿಸಲು ಇಲ್ಲಿವೆ ಮೂವತ್ತು ಸಿಂಪಲ್‌ ಸಲಹೆಗಳು!

Happiness

#image_title

1) ನಾವು ಕಲಿತ ಪ್ರೈಮರಿ ಶಾಲೆಯ ಜಗಲಿಯ ಮೇಲೆ ವಾರಕ್ಕೊಮ್ಮೆ ಹೋಗಿ ಒಂದಷ್ಟು ಹೊತ್ತು ಮೌನವಾಗಿ ಕುಳಿತು ಬರುವುದು.
2) ನಮ್ಮೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಯಾವುದಾದರೂ ಐದು ಜನರಿಗೆ ವಾರಕ್ಕೊಮ್ಮೆ ಕಾಲ್ ಮಾಡಿ ಕ್ಯಾಶುವಲ್ ಆಗಿ ಸ್ವಲ್ಪ ಹೊತ್ತು ಪ್ರೀತಿಯಿಂದ ಮಾತನಾಡುವುದು.
3) ದಿನಕ್ಕೊಂದು ಹದಿನೈದು ನಿಮಿಷ ಬಿಡುವು ಮಾಡಿಕೊಂಡು ಕಿವಿಗೆ ಇಯರ್ ಫೋನ್ ಚುಚ್ಚಿಕೊಂಡು ಮಾಧುರ್ಯದ ಹಾಡುಗಳನ್ನು ಕೇಳುವುದು.
4) ಹಸಿರು ಪರಿಸರದ ನಡುವೆ ಮೌನ ಆಗಿರುವ ಒಂದು ಆಪ್ತವಾದ ಸ್ಥಳವನ್ನು ಆಯ್ದುಕೊಂಡು ಅಲ್ಲಿ ಹೋಗಿ ಕೂತು ಬಿಡುವುದು ಮತ್ತು ಏಕಾಂತವನ್ನು ಫೀಲ್ ಮಾಡಿಕೊಳ್ಳುವುದು.
5) ವಾರಕ್ಕೊಮ್ಮೆ ಯಾವುದಾದರೂ ಅನಾಥಾಶ್ರಮದ ಮಕ್ಕಳೊಂದಿಗೆ ಅಥವಾ ವೃದ್ಧಾಶ್ರಮದ ಹಿರಿಯರೊಂದಿಗೆ ಸ್ವಲ್ಪ ಹೊತ್ತು ಕಳೆಯುವುದು. ಅವರೊಂದಿಗೆ ಸಾಧ್ಯವಾದರೆ ಊಟ ಮಾಡಿ ಬರುವುದು.

6) ತಾನು ಶಾಲೆ ಅಥವಾ ಕಾಲೇಜಿನಲ್ಲಿ ಮೊದಲು ಪ್ರೀತಿ ಮಾಡಿದ ಹುಡುಗಿಗೆ/ ಹುಡುಗನಿಗೆ ನವಿರಾದ ಭಾಷೆಯಲ್ಲಿ ಒಂದು ಪ್ರೇಮ ಪತ್ರ ಬರೆಯುವುದು ಮತ್ತು ಅದನ್ನು ಪೋಸ್ಟ್ ಮಾಡದೇ ಹರಿದು ಎಸೆಯುವುದು.
7) ಸಮುದ್ರದ ದಡಕ್ಕೆ ಹೋಗಿ ಮರಳ ಮೇಲೆ ಸೊಗಸಾದ ಚಿತ್ತಾರಗಳನ್ನು ಬರೆಯುವುದು ಮತ್ತು ಅಲೆಗಳಿಗೆ ಕಾಯುತ್ತಾ ಇರುವುದು.
8) ದಿನಕ್ಕೊಂದು ಪುಟ ಆದರೂ ದಿನಚರಿಯನ್ನು ಬರೆಯುವುದು.
9) ರಾತ್ರಿ ಮಲಗುವ ಮೊದಲು ತನಗೆ ಆ ದಿನದ ಅವಧಿಯಲ್ಲಿ ಹ್ಯಾಪಿನೆಸ್ ಕೊಟ್ಟಿರುವ ವ್ಯಕ್ತಿಗಳನ್ನು ಕೌಂಟ್ ಮಾಡಿ ಮನಸ್ಸಿನಲ್ಲಿಯೇ ಥ್ಯಾಂಕ್ಸ್ ಹೇಳುವುದು.
10) ನಮ್ಮ ಭೂತಕಾಲದ ಬಗ್ಗೆ ಯಾವುದೇ ವಿಷಾದ ಇಟ್ಟುಕೊಳ್ಳದೆ ಇರುವುದು ಮತ್ತು ಭವಿಷ್ಯದ ಬಗ್ಗೆ ಹೆಚ್ಚು ಆತಂಕ ಮಾಡದೇ ಇರುವುದು.

11) ಬತ್ತದ ಹಸಿರು ಗದ್ದೆಗಳ ನಡುವೆ ನಿಂತು ಅದರ ಬದುಗಳ ಮೇಲೆ ಖುಷಿಯಿಂದ ಜಿಗಿಯುತ್ತಾ ವೇಗವಾಗಿ ನಡೆಯುವುದು.
12) ತುಂಬಾ ಪಾಸಿಟಿವ್ ಎನರ್ಜಿ ಇರುವ ಒಂದು ಫಿಲ್ಮನ್ನು ಕಾಲೇಜು ವಿದ್ಯಾರ್ಥಿಗಳ ವಿಸಿಲ್ ಮತ್ತು ಕಾಮೆಂಟ್‌ಗಳ ನಡುವೆ ಕೂತು ನೋಡುವುದು.
13) ಯಾರನ್ನು ಕೂಡ ತಿದ್ದಲು ಹೋಗದೆ ಅವರು ಹೇಗೆ ಇರುತ್ತಾರೋ ಹಾಗೇ ಸ್ವೀಕರಿಸುವುದು.
14) ನಾವು ಇಷ್ಟ ಪಡುವ ವ್ಯಕ್ತಿಗಳಿಗೆ ದಿನದ ಒಂದಿಷ್ಟು ಹೊತ್ತು ಮೀಸಲು ಇಡುವುದು.
15) ಸಣ್ಣ ಮಕ್ಕಳನ್ನು ಮುಂದೆ ಕೂರಿಸಿ ಅವರಿಗೆ ಚಂದ ಚಂದದ ಕಾಲ್ಪನಿಕ ಕಥೆ ಹೇಳುವುದು.

16) ಯಾವ ಇಗೋ ಕೂಡ ಇಟ್ಟುಕೊಳ್ಳದೆ ತನ್ನ ಮೇಲೆಯೇ ಜೋಕುಗಳನ್ನು ಪ್ರಯೋಗ ಮಾಡಿ ಗಟ್ಟಿಯಾಗಿ ನಗುವುದು.
17) ತನಗೆ ಅದನ್ನು ಕೊಡು, ಇದನ್ನು ಕೊಡು ದೇವರೇ ಎಂದು ದೇವರನ್ನು ಬೇಡಿಕೊಳ್ಳದೆ ಇರುವುದು.
18) ತಾನೊಂದು ಸೆಲೆಬ್ರಿಟಿ ಎಂಬ ಕಿರೀಟವನ್ನು ಕಳಚಿ ಎಲ್ಲರ ಜೊತೆಗೂ ಚಂದವಾಗಿ ಬೆರೆಯುವುದು.
19) ಸಾಲವೆಂದು ಯಾರಿಗೂ ಹಣ ಕೊಡದೆ ಇರುವುದು. ಕೊಟ್ಟರೆ ಹಿಂದೆ ಕೇಳದೇ ಇರುವುದು.
20) ಜೀವನದ ಸಣ್ಣ ಸಣ್ಣ ಸಾಧನೆಗಳನ್ನು ಸೆಲೆಬ್ರೇಟ್ ಮಾಡುವುದು. ಉದಾಹರಣೆಗೆ ಹೊಸ ಗೆಳೆಯ/ ಗೆಳತಿಯ ಸಂಪಾದನೆ ಮಾಡಿದ್ದು, ಮೊದಲ ಬಾರಿ ಬೈಕ್ ಓಡಿಸಿದ್ದು, ಎಷ್ಟೋ ವರ್ಷ ನಂತರ ಸಿಕ್ಕಿದ ವ್ಯಕ್ತಿಯ ಗುರುತು ಹಿಡಿದು ಮಾತಾಡಿಸಿದ್ದು ………….ಹೀಗೆ!

21) ಯಾರ ಜೊತೆಗೂ ಸ್ಪರ್ಧೆಯನ್ನು ಮಾಡದೇ ಇರುವುದು. ಸ್ವತಃ ನಿಮ್ಮೊಂದಿಗೆ ಕೂಡ!
22) ತಾನು ಮಾಡಿದ್ದು ಎಲ್ಲವೂ ಸರಿ. ಬೇರೆಯವರು ಮಾಡಿದ್ದು ಸರಿಯಲ್ಲ ಎಂಬ ಭ್ರಮೆಗಳಿಂದ ಹೊರಬರುವುದು!
23) ಹೆಂಡತಿ ಅಥವಾ ಗಂಡ ಹೇಳಿದ್ದನ್ನು ಪೂರ್ತಿ ನಂಬುವುದು ಅಥವಾ ನಂಬಿದ ಹಾಗೆ ಅಭಿನಯ ಮಾಡುವುದು!
24) ಎಲ್ಲರ ಕಾಮೆಂಟ್‌ಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವುದು ಮತ್ತು ಯಾರ ಜೊತೆಗೂ ವಾದವನ್ನು ಮಾಡದಿರುವುದು!
25) ಯಾವುದೇ ಸಂಬಂಧವನ್ನು ಕಳೆದುಕೊಳ್ಳುವ ಮೊದಲು ನೂರು ಬಾರಿ ಯೋಚನೆ ಮಾಡುವುದು. ಕಳಚಿಕೊಂಡ ನಂತರ ಅವುಗಳ ಬಗ್ಗೆ ಒಂದಿನಿತೂ ಯೋಚನೆ ಮಾಡದೆ ಇರುವುದು.

26) ಯಾರ ಬಗ್ಗೆಯೂ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಇರುವುದು.
27) ಮುಜುಗರ ಪಟ್ಟುಕೊಳ್ಳದೆ ರಸ್ತೆ ಬದಿಯ ಪಾನಿಪುರಿ ಸ್ಟಾಲಿನಲ್ಲಿ ಪಾನಿಪುರಿ ತೆಗೆದುಕೊಂಡು ಚಪ್ಪರಿಸಿ ಚಪ್ಪರಿಸಿ ತಿನ್ನುವುದು.
28) ದಿನಕ್ಕೆ ಹದಿನೈದು ನಿಮಿಷ ಬಿಡುವು ಮಾಡಿಕೊಂಡು ಅಮ್ಮನ ಮಡಿಲಲ್ಲಿ ಮಗುವಾಗಿ ಮಲಗಿ ಬಿಡುವುದು.
29) ಬಟ್ಟೆ ಅಂಗಡಿಯಲ್ಲಿ ಸೀರೆ ಇತ್ಯಾದಿಯನ್ನು ಆಯ್ಕೆ ಮಾಡಲು ಹೋದಾಗ ಆ ಕೆಲಸವನ್ನು ಹೆಂಡತಿಗೇ ಬಿಟ್ಟು ಪಕ್ಕದಲ್ಲಿ ಎಟಿಎಂ ಯಂತ್ರದ ಹಾಗೆ ನಿಂತು ಬಿಡುವುದು.
30) ಪ್ರೀತಿಪಾತ್ರರು ವಾದಕ್ಕೆ ಇಳಿದಾಗ ಆದಷ್ಟು ಬೇಗ ಸೋತು ಬಿಡುವುದು.

ಇವುಗಳು ನನ್ನ ಕೆಲವು ಸಲಹೆಗಳು ಮಾತ್ರ. ಜೀವನದ ಸಣ್ಣ ಸಣ್ಣ ಸಂಗತಿಗಳಲ್ಲಿ ಹ್ಯಾಪಿನೆಸ್ ಹುಡುಕುವುದು ನನಗೆ ಅಭ್ಯಾಸ ಆಗಿದೆ. ನಿಮಗೆ ತುಂಬಾ ಹ್ಯಾಪಿನೆಸ್ ದೊರೆಯಲಿ ಎನ್ನುವುದೇ ನನ್ನ ಪ್ರಾರ್ಥನೆ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಜ. ಕೆ.ಎಸ್‌ ಹೆಗ್ಡೆ; ಇವರು ಸುಪ್ರೀಂ ಜಡ್ಜ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಯ ಬೆಸ್ಟ್‌ ಸ್ಪೀಕರ್‌ ಆಗಿದ್ದರು!

ಇಲ್ಲಿನ ಕೆಲವು ಚಿತ್ರಗಳು: ರಾಮ್‌ ಅಜೆಕಾರ್

Exit mobile version