Site icon Vistara News

ರಾಜ ಮಾರ್ಗ ಅಂಕಣ : ALL THAT BREATHS!; ಕಪ್ಪು ಹದ್ದುಗಳ ಉಳಿವಿನ ರೋಚಕ ಸಿನಿಮಾ, ಮುಸ್ಲಿಂ ಸೋದರರ ಯಶೋಗಾಥೆ

all that breaths

#image_title

ಎಂದಿನಂತೆಯೇ ನಾನು ಸುಮ್ಮನೆ ಜಾಲತಾಣಗಳನ್ನು ಜಾಲಾಡುತ್ತ ಹೋದಾಗ ಈ ಡಾಕ್ಯುಮೆಂಟರಿ ಫಿಲ್ಮ್ ಥಟ್ಟನೆ ನನ್ನ ಗಮನವನ್ನು ಸೆಳೆಯಿತು! ಈ ವರ್ಷದ ಆಸ್ಕರ್ ಪ್ರಶಸ್ತಿಯ ರೇಸಲ್ಲಿ ಈ ಸಿನಿಮಾ ಇತ್ತು ಮತ್ತು ಫೈನಲ್ಸ್ ವರೆಗೆ ತಲುಪಿತ್ತು ಎಂದು ತಿಳಿದುಬಂತು! ಕಳೆದ ವರ್ಷ ಬಿಡುಗಡೆ ಆದ ಈ ಸಿನಿಮಾ ಈಗಾಗಲೇ ಹತ್ತಾರು ದೇಶಗಳ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಸ್ಕ್ರೀನ್ ಆಗಿ ಪ್ರಶಸ್ತಿಗಳ ಸರಮಾಲೆಯನ್ನು ಗೆದ್ದಿದೆ ಅಂದಾಗ ಆ ಫಿಲ್ಮ್ ನೋಡದೆ ಇರಲು ಸಾಧ್ಯವೇ ಆಗಲಿಲ್ಲ! ಆ ಸಿನಿಮಾ ನೋಡಿದ ನಂತರ, ಅದರ ಹಿಂದಿರುವ ಆಶಯವನ್ನು ಗಮನಿಸಿದಾಗ ಅದರ ಬಗ್ಗೆ ಇಂದು ಬರೆಯಲೇ ಬೇಕು ಎಂದು ಮನಸು ರಚ್ಚೆ ಹಿಡಿಯಿತು!
ಆ ಮಹಾ ಅಚ್ಚರಿಯ ಸಿನಿಮಾ – ALL THAT BREATHS!

ಒಂದು ಗಂಟೆ 31 ನಿಮಿಷದ ಈ ಫಿಲ್ಮ್ ನಿರ್ದೇಶನ ಮಾಡಿದ್ದು ಪಶ್ಚಿಮ ಬಂಗಾಳದ ಮೂವತ್ತೈದು ವರ್ಷದ ಯುವ ನಿರ್ದೇಶಕ. ಆತನ ಹೆಸರು ಸೌನಕ್ ಸೇನ್. ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮತ್ತು ದೆಹಲಿಯ ಜವಾಹರ್ ಲಾಲ್ ನೆಹರೂ ವಿವಿಯಿಂದ ಡಾಕ್ಟರೇಟ್ ಪಡೆದಿರುವ ಪ್ರತಿಭಾವಂತ ಆತ. 2013ರಿಂದ ಸಿನೆಮಾರಂಗದಲ್ಲಿ ನಿರ್ದೇಶಕನಾಗಿ ಇರುವ ಸೌನಕ್ ಈವರೆಗೆ ನಿರ್ದೇಶನ ಮಾಡಿದ್ದು ಐದೇ ಸಿನಿಮಾಗಳನ್ನು!

2016ರಲ್ಲಿ ಆತನ CITY OF SLEEP ಸಿನಿಮಾ ಇಪ್ಪತ್ತಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ವೇದಿಕೆಗಳಲ್ಲಿ ಸ್ಕ್ರೀನ್ ಆಗಿತ್ತು ಮತ್ತು ಆರು ವಿಶ್ವ ಮಟ್ಟದ ಅವಾರ್ಡ್ಸ್ ಪಡೆದಿತ್ತು!

ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಒಂದೇ ಸಿನಿಮಾಕ್ಕೆ ಕತೆ ಬರೆದು, ಚಿತ್ರಕತೆ ಬರೆದು, ಶೂಟ್ ಮಾಡಿದ ಈ ಸಿನಿಮಾ ಅಲ್ ದಾಟ್ ಬ್ರೀತ್ಸ್! ಈ ಮೂರು ವರ್ಷಗಳ ಅವಧಿಯಲ್ಲಿ ನಾನು ಬೇರೆ ಏನೂ ಯೋಚನೆ ಮಾಡದೆ ಒಂದೇ ಸಿನಿಮಾದ ಹಿಂದೆ ಹೋಗಿದ್ದೆ, ಪ್ರತಿಯೊಂದು ದೃಶ್ಯವನ್ನು ತುಂಬಾ ತಾಳ್ಮೆಯಿಂದ ಸೆರೆ ಹಿಡಿಯಲಾಗಿದೆ ಎಂದು ಸೌನಕ್ ಹೇಳಿದ್ದಾರೆ. ಅವರ ತಪಸ್ಸು ಮತ್ತು ಶ್ರದ್ಧೆ ಈ ಸಿನಿಮಾದ ಪ್ರತೀ ಫ್ರೇಮಲ್ಲಿ ಅದ್ಭುತವಾಗಿ ಕಾಣುತ್ತದೆ! ನಿಮ್ಮನ್ನು ಪೂರ್ತಿಯಾಗಿ ಆವರಿಸುವ ಸಿನಿಮಾ ಇದು!

ಸೌನಕ್‌ ಸೇನ್

ಆ ಸಿನಿಮಾದ ಥೀಮ್ ಏನು?

ಇತ್ತೀಚಿನ ವರ್ಷಗಳಲ್ಲಿ ದೆಹಲಿಯು ಪರಿಸರ ಮಾಲಿನ್ಯದ ಕಾರಣಕ್ಕೆ ಅಪಕೀರ್ತಿಯನ್ನು ಪಡೆದಿದೆ. ವಿಶ್ವ ಆರೋಗ್ಯ ಸಂಸ್ಥೆಯು ರಾಜಧಾನಿ ದೆಹಲಿಯನ್ನು ಪರಿಸರದ ನಾಶಕ್ಕಾಗಿ ಕಪ್ಪುಪಟ್ಟಿಗೆ ಸೇರಿಸಿ ದಶಕಗಳೇ ಕಳೆದುಹೋಗಿವೆ! ಈ ಪರಿಸರ ಮಾಲಿನ್ಯವು ಮನುಷ್ಯನ ಬದುಕಿನ ಮೇಲೆ ಬೀರುತ್ತಿರುವ ಅಡ್ಡ ಪರಿಣಾಮಗಳು ಇದ್ದದ್ದೇ. ಆದರೆ ಕಪ್ಪು ಹದ್ದು ಎಂಬ ಅಪರೂಪದ ಸೆನ್ಸಿಟಿವ್ ಹಕ್ಕಿಗಳ ಬದುಕಿನ ಮೇಲೆ ಬೀರುವ ಅಡ್ಡ ಪರಿಣಾಮದ ಬಗ್ಗೆ ಈವರೆಗೆ ನಾವ್ಯಾರೂ ಯೋಚನೆ ಮಾಡಿದ್ದೇ ಇಲ್ಲ!

ಆದರೆ ದೆಹಲಿಯ ಸಮೀಪದ ವಜೀರಾಬಾದ್ ಎಂಬ ಗ್ರಾಮದಲ್ಲಿ ವಾಸವಾಗಿರುವ ಇಬ್ಬರು ಮುಸ್ಲಿಂ ಸಹೋದರರು ಈ ಹಕ್ಕಿಗಳ ಬಗ್ಗೆ ಕಳೆದ ಇಪ್ಪತ್ತು ವರ್ಷಗಳಿಂದ ಒಂದು ಅದ್ಭುತ ಮಾನವೀಯತೆಯ ಒಂದು ಯಶೋಗಾಥೆಯನ್ನೇ ನಿರ್ಮಾಣ ಮಾಡಿದ್ದಾರೆ! ಪರಿಸರದ ಉಸಿರುಗಟ್ಟುವ ವಾತಾವರಣದಲ್ಲಿ ಭೂಮಿಗೆ ಉರುಳುತ್ತಿರುವ ಈ ಕಪ್ಪು ಹದ್ದುಗಳ ಶುಶ್ರೂಷೆಗಾಗಿ ಅವರು ಒಂದು ದೊಡ್ಡ ಹಕ್ಕಿಯ ಆಸ್ಪತ್ರೆಯನ್ನು ತೆರೆದಿದ್ದಾರೆ! ಈವರೆಗೆ 20,000ಕ್ಕಿಂತ ಅಧಿಕ ಸಂತ್ರಸ್ತ ಕಪ್ಪು ಹದ್ದುಗಳಿಗೆ ಅವರು ಸರಿಯಾದ ಶುಶ್ರೂಷೆ ಮಾಡಿ ಪುನರ್ಜನ್ಮ ಕೊಟ್ಟಿದ್ದಾರೆ ಅಂದರೆ ನಿಮಗೆ, ನಮಗೆ ನಂಬಲು ಕಷ್ಟ ಆಗಬಹುದು. ಆದರೆ ಇದು ನಿಜ!

ಆ ಸೋದರರೇ ಮೊಹಮದ್ ಸೌದ್ ಮತ್ತು ನದೀಮ್ ಶಹಜಾದಾಸ್!

ಇಬ್ಬರೂ ಬಿಸಿರಕ್ತದ ಯುವಕರು. ಸಾಕಷ್ಟು ಓದಿದವರು. ಪರಿಸರ ನಾಶ, ಜಾಗತಿಕ ತಾಪಮಾನ ಏರಿಕೆ ಮತ್ತು ಉಸಿರುಕಟ್ಟುವ ಕಪ್ಪು ಹೊಗೆ ಇವುಗಳಿಂದ ದೆಹಲಿಯಲ್ಲಿ ಸಾಲು ಸಾಲಾಗಿ ಧರೆಗೆ ಉರುಳುತ್ತಿದ್ದ ಈ ಕಪ್ಪು ಹದ್ದುಗಳ ಬಗ್ಗೆ ಮರುಗಿದವರು. ಆ ಪಕ್ಷಿಗಳ ಆರ್ತನಾದಕ್ಕೆ ಕಿವಿ ಆದವರು. ಅದರ ಒಟ್ಟು ಪರಿಣಾಮವೇ ದೆಹಲಿಯ ಸಮೀಪದ ಒಂದು ಹಳ್ಳಿಯಲ್ಲಿ ಹುಟ್ಟಿದ ಈ ಹಕ್ಕಿಗಳ ಆಸ್ಪತ್ರೆ! ಈವರೆಗೆ 20,000 ಕಪ್ಪು ಹದ್ದುಗಳ ಆರೈಕೆ ಮಾಡಿ ಅವುಗಳಿಗೆ ಈ ಸೋದರರು ಪುನರ್ಜನ್ಮವನ್ನು ನೀಡಿದ್ದಾರೆ! ಯಾವುದೂ ಪ್ರಚಾರಕ್ಕೆ ಮಾಡಿದ ಕೆಲಸ ಅಲ್ಲ. ನಿಜವಾದ ಮಾನವೀಯ ಅಂತಃಕರಣದ ಸೇವೆ!

ಈ ಥೀಮ್ ಮೇಲೆ ರೂಪುಗೊಂಡ ಅದ್ಭುತ ಸಿನೆಮಾ!

ಈ ಸೋದರರ ಪಕ್ಷಿ ಪ್ರೇಮ, ಅವರು ತೋರಿದ ಕಾಳಜಿ ಇವೆಲ್ಲವನ್ನೂ ಕ್ಯಾನ್ವಾಸ್ ಆಗಿ ಇಟ್ಟುಕೊಂಡು ಈ ಸಿನಿಮಾ ರೂಪಿಸಲಾಗಿದೆ. ನಾನು ಮೊದಲೇ ಹೇಳಿದ ಹಾಗೆ ಮೂರು ವರ್ಷಗಳ ಕಾಲ ಯಾವ್ಯಾವುದೋ ಕೋನದಲ್ಲಿ ಕ್ಯಾಮೆರಾ ಇಟ್ಟು, ತಾಳ್ಮೆಯಿಂದ ಕಾದು ರೂಪಿಸಿದ ಸಿನಿಮಾ ಇದು! ಹವಾಮಾನದ ವೈಪರೀತ್ಯದ ಕಾರಣಕ್ಕೆ ಈ ಕಪ್ಪು ಹದ್ದುಗಳು ನರಳುವುದು, ನೋವು ಪಡುವುದು, ಅವುಗಳ ಚಿಕಿತ್ಸೆಗಾಗಿ ನದೀಮ್ ಮತ್ತು ಸೌದ್ ಸೋದರರು ತಮ್ಮ ಹಕ್ಕಿಗಳ ಆಸ್ಪತ್ರೆಯಲ್ಲಿ ತೆಗೆದುಕೊಳ್ಳುವ ಶ್ರಮ….. ಎಲ್ಲವೂ ಈ ಸಿನಿಮಾದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಹಕ್ಕಿಗಳಿಗೂ ಒಂದು ಭಾಷೆ ಇದೆ ಮತ್ತು ಒಂದು ಸ್ಟ್ರಾಂಗ್ ಆದ ಅಂತಃಕರಣ ಇದೆ ಎಂದು ನಮಗೆ ಈ ಸಿನಿಮಾ ನೋಡಿದಾಗ ಅರ್ಥ ಆಗುತ್ತದೆ. ಚಿಕಿತ್ಸೆ ಪಡೆದು ಆ ಹಕ್ಕಿಗಳು ಖುಷಿಯಿಂದ ಮತ್ತೆ ರೆಕ್ಕೆ ಬಡಿದು ಬಾನಿಗೆ ಹಾರುವ ಆ ಫೀಲಿಂಗ್ ಇದೆಯಲ್ಲ ಅದು ನಿಜಕ್ಕೂ ಚೇತೋಹಾರಿ! ನಾನು ಶಬ್ದಗಳ ತೋರಣ ಕಟ್ಟುವುದಕ್ಕಿಂತ ನೀವು ಆ ಸಿನಿಮಾ ನೋಡಿಯೇ ಆನಂದಿಸಬೇಕು. ನಗರದ ಜೀವನದ ಪರಿಸರ ಮಾಲಿನ್ಯದ ಹಲವು ನೋವುಗಳನ್ನು ಈ ಸಿನಿಮಾ ಬಹಳ ದೊಡ್ಡ ಮಟ್ಟದ ಕ್ಯಾನ್ವಾಸ್‌ನಲ್ಲಿ ತೋರಿದೆ!

ಈ ಸಿನಿಮಾದ ಯಶೋಯಾನ!

ಆಲ್ ದಾಟ್ ಬೀಟ್ಸ್ ಕೇವಲ ಒಂದು ಡಾಕ್ಯುಮೆಂಟರಿ ಎಂದು ನನಗೆ ಅನ್ನಿಸುವುದಿಲ್ಲ! ಅದು ಹಕ್ಕಿಗಳ ಪ್ರಪಂಚದ ರೋಚಕ ಚಿತ್ರಣ! ಇದು ಆಸ್ಕರ್ ಪ್ರಶಸ್ತಿಯ ಕಣದಲ್ಲಿ ನಾಮಿನೇಟ್ ಆಗಿತ್ತು. ಹಾಗೆಯೇ ಕಾನ್ ಚಿತ್ರೋತ್ಸವದಲ್ಲಿ ಇದು ಅತ್ಯುತ್ತಮ ಸಿನಿಮಾಕ್ಕಾಗಿ ನೀಡುವ ‘ ಗೋಲ್ಡನ್ ಐ ‘ ಪ್ರಶಸ್ತಿ ಪಡೆಯಿತು! ಸನ್ ಡಾನ್ಸ್ ಚಿತ್ರೋತ್ಸವದಲ್ಲಿ ಗ್ರಾಂಡ್ ಜ್ಯೂರಿ ಪ್ರಶಸ್ತಿ ಗೆದ್ದು ಬೀಗಿತು.

ಈ ಹೆಮ್ಮೆಯ ಸಿನೆಮಾ ನಿರ್ದೇಶಕ ಸೌನಕ್ ಸೇನ್ ಭಾರತೀಯ ಸಿನೆಮಾರಂಗದ ಉಜ್ವಲ ಭವಿಷ್ಯ ಎಂಬ ಭರವಸೆಯ ಜೊತೆಗೆ ಆ ಅಪರೂಪದ ಹಕ್ಕಿಗಳ ಬದುಕಿಗೆ ಊರುಗೋಲಾಗಿ ನಿಂತಿರುವ ನದೀಮ್ ಸೋದರನನ್ನು ಖಂಡಿತ ಅಭಿನಂದಿಸೋಣ ಅಲ್ಲವೇ!

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ನಮ್ಮೊಳಗಿನ ಸಂತಸ ಹೆಚ್ಚಿಸಲು ಇಲ್ಲಿವೆ ಮೂವತ್ತು ಸಿಂಪಲ್‌ ಸಲಹೆಗಳು!

Exit mobile version