ಭಾರತದಲ್ಲಿ ಮಹಾ ಮಹಾ ಉದ್ಯಮಗಳನ್ನು ಹುಟ್ಟು ಹಾಕಿ ಬಹಳ ದೊಡ್ಡ ಮಟ್ಟದಲ್ಲಿ ಸಮಾಜ ಸೇವೆಯನ್ನು ಮಾಡುತ್ತಿರುವ ಕೀರ್ತಿ ಖಂಡಿತವಾಗಿ ಟಾಟಾ, ಬಿರ್ಲಾ, ನಾರಾಯಣ ಮೂರ್ತಿ ಮತ್ತು ಅಂಬಾನಿ ಅವರಿಗೆ ಸಲ್ಲಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಉದ್ಯಮಗಳ ಬೆಳವಣಿಗೆಯಲ್ಲಿ ಮತ್ತು ಚಾರಿಟಿಯಲ್ಲಿ ಇನ್ನೊಂದು ಹೆಸರು ಗಟ್ಟಿಯಾಗಿ ಕೇಳಿಬರುತ್ತಿದೆ. ಆ ಹೆಸರು ಖಂಡಿತವಾಗಿಯೂ ಆನಂದ್ ಮಹೀಂದ್ರಾ!
ಅಜ್ಜನ ಕಂಪೆನಿಯಲ್ಲಿಯೇ ಸಾಮಾನ್ಯ ಉದ್ಯೋಗಿ ಆಗಿ ದುಡಿಮೆ ಆರಂಭ!
ಆನಂದ ಮಹೀಂದ್ರ ಅವರು ಹುಟ್ಟಿದ್ದು ಮೇ ಒಂದು 1955ರಂದು. ಅವರ ಅಜ್ಜ ಬಹಳ ಹಿಂದೆ ಸ್ಥಾಪಿಸಿದ ಮಹೀಂದ್ರ ಕಂಪೆನಿ ಆಗಲೇ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಪಡೆದಿತ್ತು. ಆನಂದ ಅವರು ಹಾರ್ವರ್ಡ್ ವಿವಿಗೆ ಹೋಗಿ ಎಂಬಿಎ ಓದಿ ಬಂದವರು. 1981ರ ಹೊತ್ತಿಗೆ ಅವರು ತಮ್ಮ ಅಜ್ಜ ಸ್ಥಾಪನೆ ಮಾಡಿದ ‘ಮಹೀಂದ್ರ ಸ್ಟೀಲ್ಸ್ ಕಂಪೆನಿ’ಗೆ ಒಬ್ಬ ಸಾಮಾನ್ಯ ಉದ್ಯೋಗಿ ಆಗಿ ಕೆಲಸಕ್ಕೆ ಸೇರಿದರು. ಅವರದ್ದು ಬಹಳ ಕ್ಷಿಪ್ರವಾದ ಬೆಳವಣಿಗೆ. ಉದ್ಯಮ ಕಟ್ಟುವುದರಲ್ಲಿ ಅವರು ಮಹಾ ಬುದ್ಧಿವಂತ. 2012ರ ಹೊತ್ತಿಗೆ ಅವರು ಮಹೀಂದ್ರ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಹುದ್ದೆಗೆ ಏರಿ ಆಗಿತ್ತು.
ಮಹೀಂದ್ರ ದೈತ್ಯಾಕಾರವಾಗಿ ಬೆಳೆಯಲು ಸ್ಫೂರ್ತಿಯಾಗಿ ನಿಂತರು!
ಕೇವಲ ಟ್ರಕ್ ಮತ್ತು ವಾಹನಗಳನ್ನು ಉತ್ಪಾದನೆ ಮಾಡುತ್ತಿದ್ದ ಮಹೀಂದ್ರ ಕಂಪೆನಿಯು ಆನಂದ ಮಹೀಂದ್ರ ಅವರ ದೂರದೃಷ್ಟಿ ಮತ್ತು ನಾಯಕತ್ವದ ಗುಣಗಳಿಂದ ಐಟಿ, ಫೈನಾನ್ಸ್, ಇನ್ಸೂರೆನ್ಸ್, ರಿಯಲ್ ಎಸ್ಟೇಟ್, ಲಾಗಿಸ್ಟಿಕ್ಸ್, ಅಗ್ರಿ ಬಿಸಿನೆಸ್, ಮನೋರಂಜನೆ , ಕಟ್ಟಡ ನಿರ್ಮಾಣ.. ಹೀಗೆ ನೂರಾರು ರೆಕ್ಕೆಗಳನ್ನು ಚಾಚಿ ಮುನ್ನಡೆಯಿತು. ಕೋಟಕ್ ಮಹೀಂದ್ರ ಬ್ಯಾಂಕ್ ಅವರಿಂದ ಸ್ಥಾಪನೆ ಆಯಿತು. ಎಪಿಕ್ ಎಂಬ ಟಿವಿ ಚಾನೆಲ್ ಕೂಡ ಸ್ಥಾಪನೆ ಆಯಿತು. ತಮ್ಮ ಕಸಿನ್ ಚಾರು ಶರ್ಮಾ ಅವರ ಬೆನ್ನಿಗೆ ನಿಂತು ಪ್ರೊಕಬಡ್ಡಿ ಲಾಂಚ್ ಮಾಡಿದ್ದೇ ಅವರು!
ಕಂಪನಿಯ ವಿರಾಟ್ ಬೆಳವಣಿಗೆ!
ಆನಂದ ಮಹೀಂದ್ರ ಅವರ ವಿರಾಟ್ ಬೆಳವಣಿಗೆ ನೋಡುವಾಗ ನಿಜವಾಗಿಯೂ ನನಗೆ ವಿಸ್ಮಯವಾಗುತ್ತದೆ. ಇಂದು ಅವರ ಕಂಪನಿಗಳ ನೆಟ್ ವರ್ಥ್ 19 ಬಿಲಿಯನ್ ಯುಎಸ್ ಡಾಲರ್ ದಾಟಿದೆ! ಆನಂದ ಮಹೀಂದ್ರ ಇಂದು ಭಾರತದ ಟಾಪ್ 10 ಬಿಸಿನೆಸ್ ಲೀಡರ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ.
ಹಾರ್ವರ್ಡ್ ವಿವಿ ಅವರನ್ನು ತನ್ನ ‘ಅತೀ ಶ್ರೇಷ್ಠ ಪೂರ್ವ ವಿದ್ಯಾರ್ಥಿ’ ಆಗಿ ಗುರುತಿಸಿ ಸನ್ಮಾನಿಸಿದೆ. ಫಾರ್ಚೂನ್ ಮ್ಯಾಗಝಿನ್ ಅವರನ್ನು ಜಗತ್ತಿನ ಟಾಪ್ 50 ಬಿಸಿನೆಸ್ ನಾಯಕರಲ್ಲಿ ಒಬ್ಬರು ಎಂದೂ, ಏಷಿಯಾದ ಟಾಪ್ 25ರಲ್ಲಿ ಒಬ್ಬರು ಎಂದೂ ಗೌರವಿಸಿದೆ. ಬಿಸಿನೆಸ್ ಟುಡೇ ಪತ್ರಿಕೆಯು ಅವರಿಗೆ 2014ರಲ್ಲಿ ‘CEO OF THE YEAR’ ಪ್ರಶಸ್ತಿಯನ್ನು ನೀಡಿತು. ಭಾರತ ಸರಕಾರ ಅವರಿಗೆ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವ ನೀಡಿದೆ.
ತುಂಬಾ ಕ್ರಿಯೇಟಿವ್ ಆದ ಚಾರಿಟಿ ಪ್ರಾಜೆಕ್ಟ್‌ಗಳು!
ಇಷ್ಟೇ ಆಗಿದ್ದರೆ ಆನಂದ ಮಹೀಂದ್ರಾ ಅವರು ನಮಗೆ ಐಕಾನ್ ಆಗುತ್ತಿರಲಿಲ್ಲ! ಅವರ ಸೇವಾ ಮನೋಭಾವ, ಚಾರಿಟಿ ಕೆಲಸಗಳು, ಸಿಎಸ್ಆರ್ ಚಟುವಟಿಕೆಗಳನ್ನು ಗಮನಿಸಿದರೆ ನಮಗೆ ಅದ್ಭುತ ಅನ್ನಿಸುತ್ತದೆ.
೧) ಕೋವಿಡ್ ನಿಧಿಗೆ ಬಹಳ ದೊಡ್ಡ ಮೊತ್ತವನ್ನು ಅವರು ದಾನ ಮಾಡಿದ್ದಾರೆ.
೨) ‘ನನ್ಹೀ ಕಲೀ’ ಎಂಬ NGO ಸ್ಥಾಪನೆ ಮಾಡಿ ಈವರೆಗೆ ಅವಕಾಶ ವಂಚಿತ 1,30,000 ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ!
೩) ಹಾರ್ವರ್ಡ್ ವಿವಿಯಲ್ಲಿ ಹ್ಯುಮಾನಿಟಿ ಸೆಂಟರ್ ಸ್ಥಾಪನೆ ಮಾಡಲು 10 ಮಿಲಿಯನ್ ಡಾಲರ ಹಣವನ್ನು ದಾನ ಮಾಡಿದ್ದಾರೆ.
೪) ಪ್ರವಾಹದಿಂದ ತತ್ತರಿಸಿರುವ ರೈತರಿಗೆ ಅವರು ಬೆಂಬಲವಾಗಿ ನಿಂತಿದ್ದಾರೆ.
೫) ದುಡಿಯಲು ಮನಸ್ಸು ಇರುವ ರೈತರಿಗೆ ಟ್ರ್ಯಾಕ್ಟರ್ ಉಡುಗೊರೆ ನೀಡಿದ್ದಾರೆ.
೬) ವನ್ಯಜೀವಿಗಳ ಫೋಟೊಗ್ರಫಿ ಅವರ ತೀವ್ರ ಆಸಕ್ತಿಯ ವಿಷಯ. ಬಿಡುವು ದೊರೆತಾಗ ಯಾರಿಗೂ ಹೇಳದೆ ಕಾಡಿಗೆ ಹೋಗಿ ಅದ್ಭುತವಾದ ವನ್ಯಜೀವಿಗಳ ಫೋಡೊ ಸೆರೆ ಹಿಡಿದು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸುತ್ತಾರೆ.
೭) ಇಡೀ ಭಾರತವನ್ನು ಪ್ರವಾಸ ಮಾಡುತ್ತಾ ಯಾರಿಗೆ ಯಾವ ಸಹಾಯದ ಅಗತ್ಯವಿದೆ ಅವರನ್ನು ಗುರುತಿಸಿ ಟ್ವಿಟರ್ ಖಾತೆಯಲ್ಲಿ ಬರೆಯುತ್ತಾರೆ. ತಾವೂ ಸಹಾಯ ಮಾಡುತ್ತಾರೆ.
8) ತಮಿಳುನಾಡಿನಲ್ಲಿ ಒಂದು ರೂಪಾಯಿಗೆ ಇಡ್ಲಿ ಮಾರಿ ಭಾರೀ ಸುದ್ದಿ ಮಾಡಿದ್ದ ಕಮಲತಾಲ ಎಂಬ ಅಜ್ಜಿಗೆ ಗ್ಯಾಸ್ ಒಲೆ ಮುಂತಾದ ಎಲ್ಲಾ ಅನುಕೂಲಗಳನ್ನೂ ಮಾಡಿಕೊಟ್ಟದ್ದು ಭಾರೀ ಸುದ್ದಿಯಾಗಿತ್ತು.
9) ಇತ್ತೀಚೆಗೆ ಬಿಹಾರದ ಗಯಾ ಜಿಲ್ಲೆಯಲ್ಲಿ ಏಕಾಂಗಿಯಾಗಿ ಮೂವತ್ತು ವರ್ಷಗಳ ಕಾಲ ಕೆಲಸ ಮಾಡಿ ಮೂರು ಕಿಲೋಮೀಟರ್ ಉದ್ದವಾದ ಕಾಲುವೆ ನಿರ್ಮಿಸಿದ್ದ ರೈತನ ಬಗ್ಗೆ ಟ್ವೀಟ್ ಮಾಡಿದ್ದು ವೈರಲ್ ಆಗಿತ್ತು. ಆ ರೈತನಿಗೆ ಟ್ರ್ಯಾಕ್ಟರ್ ಉಡುಗೊರೆ ಕೊಟ್ಟು ಸನ್ಮಾನ ಮಾಡಿದ್ದರು ಆನಂದ್ ಮಹೀಂದ್ರ!
೧೦) ಮಂಗಳೂರಿನ ಶಿಲ್ಪಾ ಎಂಬವರು ರಸ್ತೆ ಬದಿ ರೋಟಿ ಮಾಡಿ ಮಾರುತ್ತಿದ್ದರು. ಅದನ್ನು ಗಮನಿಸಿದ ಆನಂದ ಅವರು ಶಿಲ್ಪಾ ಅವರ ಹಳ್ಳಿಮನೆ ಸಂಸ್ಥೆಗೆ ಮಹೀಂದ್ರ ವಾಹನವನ್ನು ಉಚಿತ ಉಡುಗೊರೆ ಆಗಿ ನೀಡಿದ್ದು ದೊಡ್ಡ ಸುದ್ದಿ ಆಗಿತ್ತು.
ಪ್ರತೀ ದಿನ ಎಂಬಂತೆ ಆನಂದ ಮಹೀಂದ್ರ ಅವರ ಟ್ವಿಟರ್ ಖಾತೆಯಲ್ಲಿ ಇಂತಹ ಶ್ರೇಷ್ಠವಾದ ಉಲ್ಲೇಖಗಳನ್ನು ನೋಡುವುದೇ ಚಂದ! ತಾನು ಸದ್ದಿಲ್ಲದೆ ಸೇವೆ ಮಾಡುತ್ತಾ, ಇತರ ದಾನಿಗಳಿಗೂ ಸೇವೆಯನ್ನು ಮಾಡಲು ಆಮಂತ್ರಿಸುವ ಆನಂದ ಮಹೀಂದ್ರ ಅವರು ನಮಗೆ ಇಂತಹ ನೂರು ಕಾರಣಕ್ಕೆ ಮಾದರಿ ಆಗುತ್ತಾರೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ದುಡ್ಡನ್ನು ನಾವು ರೂಲ್ ಮಾಡಬೇಕು, ದುಡ್ಡು ನಮ್ಮನ್ನು ರೂಲ್ ಮಾಡುವಂತೆ ಆಗಬಾರದು