ದುಡ್ಡು ನನ್ನ ಜೀವನದಲ್ಲಿ ಮೊನ್ನೆಯವರೆಗೂ ಕೊನೆಯ ಆದ್ಯತೆ ಆಗಿತ್ತು. ನನ್ನ ತರಬೇತಿ ಕಾರ್ಯಕ್ರಮಗಳಲ್ಲಿ ನಾನು ಯಾವಾಗಲೂ ಹೇಳುತ್ತಿದ್ದೆ: ದುಡ್ಡಿನಿಂದ ಹಾಸಿಗೆ ಖರೀದಿ ಮಾಡಬಹುದು. ಆದರೆ ನಿದ್ದೆ ಖರೀದಿ ಮಾಡಲು ಸಾಧ್ಯವೇ? ದುಡ್ಡಿನಿಂದ ಔಷಧಿ ಖರೀದಿ ಮಾಡಬಹುದು. ಆದರೆ ಆರೋಗ್ಯ ಖರೀದಿ ಮಾಡಲು ಸಾಧ್ಯವೇ? ದುಡ್ಡಿನಿಂದ ಮನೆ ಖರೀದಿ ಮಾಡಬಹುದು. ನೆಮ್ಮದಿ ಖರೀದಿ ಮಾಡಲು ಸಾಧ್ಯವೇ?… ಇತ್ಯಾದಿ, ಇತ್ಯಾದಿ, ಇತ್ಯಾದಿ.
ದುಡ್ಡಿನಿಂದ ಎಲ್ಲವನ್ನೂ ಖರೀದಿ ಮಾಡಲು ಸಾಧ್ಯವೇ ಇಲ್ಲ ಎಂದು ನಾನೂ ನಿಮ್ಮ ಹಾಗೆ ವಾದವನ್ನು ಮಾಡುತ್ತಿದ್ದೆ (ರಾಜ ಮಾರ್ಗ ಅಂಕಣ). ಆದರೆ….!
ಆದರೆ… ಆದರೆ.. ಆದರೆ… ಆದರೆ…
-ಸಾಲ ಕೊಟ್ಟ ಬ್ಯಾಂಕಿನಿಂದ ಪದೇಪದೆ ನೋಟಿಸುಗಳು, ಕರೆಗಳು ಬಂದಾಗ…..!
-ಹೆಂಡತಿ ತರಲು ಹೇಳಿದ ಸಾಮಾನುಗಳ ಪಟ್ಟಿಯನ್ನು ಕಿಸೆಯಲ್ಲಿಯೆ ಇಟ್ಟು ಸಂಜೆ ಮನೆಗೆ ಬಂದು ಮರೆತು ಹೋಯ್ತು ಕಣೆ ಎಂದು ನಾಟಕ ಮಾಡುವ ಸನ್ನಿವೇಶ ಬಂದಾಗ….!
-ನನ್ನ ಹಸಿದ ಮಕ್ಕಳು ಸ್ವೀಟ್ ಅಂಗಡಿಯ ಮುಂದೆ ತುಂಬಾ ಹೊತ್ತು ಹಸಿದ ಕಣ್ಣಿಂದ ನೋಡುತ್ತಾ ನಿಂತಾಗ…..!
-ಹಬ್ಬಕ್ಕೆ ಪಕ್ಕದ ಮನೆಯವರು ಮನೆಯವರಿಗೆಲ್ಲ ಹೊಸ ಬಟ್ಟೆ ತಂದು ನಮ್ಮ ಮನೆಯ ಹೊರಗೆ ಮೆರೆದಾಗ….!
-ಗಣೇಶೋತ್ಸವ ಸಮಿತಿಯವರು ಮನೆ ಬಾಗಿಲಿಗೆ ಕಲೆಕ್ಷನಿಗೆ ಬಂದಾಗ ರಶೀದಿಯ ಪುಸ್ತಕವನ್ನು ತೆಗೆದುಕೊಂಡು ಆಚೆ ಮನೆಯವರು, ಈಚೆ ಮನೆಯವರು ಎಷ್ಟು ಕೊಟ್ಟಿದ್ದಾರೆ ನೋಡುವ ಎಂದು ದೃಷ್ಟಿ ಹಾಯಿಸುವಾಗ…..!
-ನನ್ನ ಮಕ್ಕಳಿಗೆ ಶಾಲೆಯ ಫೀಸ್ ಕಟ್ಟಲು ದುಡ್ಡು ಕಡಿಮೆ ಆಗಿ ಆರ್ಡಿನರಿ ಶಾಲೆಯಲ್ಲಿ ಓದು ಮಗಾ ಅಂದಾಗ….
-ಎರಡೆರಡು ಶಿಫ್ಟಲ್ಲಿ ದುಡಿದರೂ ಮನೆಗೆ ಬೇಕಾದ ಕನಿಷ್ಠ ಅಗತ್ಯಗಳನ್ನು ಪೂರೈಸಲು ಸೋತಾಗ…….!
ದುಡ್ಡು ಹೊಂದಿಸಲು ಕಷ್ಟ ಆದ ಕಾರಣಕ್ಕಾಗಿ ಮಗಳ ಮದುವೆಯು ಮುಂದೆ ಮುಂದೆ ಹೋದಾಗ……!
-ಸೀರೆ ಕೊಡಿಸಲು ಕಷ್ಟ ಆಯಿತು ಎಂಬ ಕಾರಣಕ್ಕೆ ಪ್ರೀತಿಯ ಹೆಂಡತಿಯ ಹತ್ತಿರ ಆನಿವರ್ಸರಿ ಮರೆತು ಹೋಯ್ತು ಕಣೆ ಎಂದು ಸುಳ್ಳು ಹೇಳುವ ಪ್ರಸಂಗ ಬಂದಾಗ……!
ನನಗೂ ದುಡ್ಡು ಎಷ್ಟು ಎಷ್ಟು ಅಗತ್ಯ ಎನ್ನುವುದು ಗೊತ್ತಾಗತೊಡಗಿತು..
-ಅಪರೂಪಕ್ಕೆ ಒಮ್ಮೆ ಫ್ರೆಂಡ್ಸ್ ಜೊತೆ ಹೋಟೆಲಿಗೆ ಹೋಗಿ ಅನಿವಾರ್ಯವಾಗಿ ಭರ್ಜರಿ ಪಾರ್ಟಿ ಮಾಡಿ ದುಡ್ಡು ಕೊಡುವ ಹೊತ್ತು ಬಂದಾಗ ಪರ್ಸ್ ಮರೆತು ಬಂದೆ ಕಣ್ರೋ ಎಂದು ಸುಳ್ಳು ಹೇಳುವ ಸನ್ನಿವೇಶ ಎದುರಾದಾಗ….
-ತಿಂಗಳ ಮೊದಲ ದಿನ ಈ ತಿಂಗಳು ಇಷ್ಟರಲ್ಲಿಯೇ ಹೊಂದಿಕೆ ಮಾಡಿಕೋ ಮಾರಾಯ್ತಿ ಎಂದು ಹೆಂಡತಿಯ ಮುಂದೆ ತಲೆತಗ್ಗಿಸುವ ಪ್ರಸಂಗ ಬಂದಾಗ…..!
-ನಾದಿನಿಯ ಮದುವೆಗೆ ಉಡುಗೊರೆ ಇದೆ ಎಂಬ ಕಾರಣಕ್ಕೆ ನನಗೆ ರಜೆ ಸಿಕ್ಕಿಲ್ಲ ಕಣೇ, ನೀನೇ ಹೋಗಿ ಬಾ ಎಂದು ಸುಳ್ಳು ಹೇಳುವಾಗ…!
–ಹೆಂಡತಿಯನ್ನು ವರ್ಷಕ್ಕೊಮ್ಮೆ ಸೀರೆಗಳ ಅಂಗಡಿಗೆ ಕರೆದುಕೊಂಡು ಹೋಗಿ ಆಕೆ ಉತ್ಸಾಹದಲ್ಲಿ ಸೀರೆಯನ್ನು ಖರೀದಿ ಮಾಡುವಾಗ ಕಿಸೆಯಲ್ಲಿ ಕೈ ಹಾಕಿ ಪದೇಪದೆ ಪರ್ಸ್ ತಡವುವ ಸಂದರ್ಭ ಬಂದಾಗ…….!
ನನಗೂ ದುಡ್ಡು ಎಷ್ಟು ನೆಮ್ಮದಿ ನೀಡಬಲ್ಲುದು ಎನ್ನುವುದು ಅರ್ಥವಾಗತೊಡಗಿತು..
-ಪ್ರಾಯಕ್ಕೆ ಬಂದ ಮಗ ನಡೆದುಕೊಂಡು ದೂರದ ಕಾಲೇಜಿಗೆ ಹೋಗೋದು ಕಷ್ಟ ಅಪ್ಪ, ಬೈಕ್ ಬೇಕೂ ಅಂದಾಗ ಈ ವರ್ಷ ನಡೆದು ಹೋಗು, ಮುಂದೆ ನೋಡುವ ಎಂದು ಪದೇಪದೆ ಪೋಸ್ಟಪೋನ್ ಮಾಡಿದಾಗ….!
-ಟಿವಿ ಮುಂದೆ ಮನೆಯವರೆಲ್ಲ ಕೂತು ಟಿವಿ ಕಾರ್ಯಕ್ರಮ ವಾಚ್ ಮಾಡುವ ಹೊತ್ತಲ್ಲಿ ನಡು ನಡುವೆ ಜಾಹೀರಾತುಗಳು ಬಂದಾಗ ಮಗಳ ಕೈಯಲ್ಲಿ ಇದ್ದ ರಿಮೋಟನ್ನು ಬೇಗನೆ ಕಿತ್ತುಕೊಂಡು ಮುಂದಿನ ಚಾನೆಲ್‌ಗೆ ಶಿಫ್ಟ್ ಮಾಡುವಾಗ….!
-ನೀನೇ ಚಿನ್ನ, ನಿನಗ್ಯಾಕೆ ಚಿನ್ನ? ಎಂದು ಹೆಂಡತಿಯನ್ನು ರಮಿಸುವ ಹೊತ್ತು ಆಕೆ ಸಿಡುಕಿದಾಗ….!
-ಶ್ರೀಮಂತ ಗೆಳೆಯರ ಸ್ನೇಹ ಮಾಡಬೇಡ ಮಗ. ಮುಂದೆ ನಮ್ಮ ಸ್ವಾಭಿಮಾನಕ್ಕೆ ತೊಂದರೆ ಆಗ್ತದೆ ಎಂದು ಮಗನಿಗೆ ಬಿಟ್ಟಿ ಉಪದೇಶ ಮಾಡುವ ಸಂದರ್ಭ ಬಂದಾಗ….!
ನನಗೂ ಹಣದ ಮೌಲ್ಯ ನಿಧಾನವಾಗಿ ಅರಿವಾಗತೊಡಗಿತ್ತು.
-ಸೋರುತ್ತಿರುವ ಬಾಡಿಗೆಯ ಮನೆಯನ್ನು ರಿಪೇರಿ ಮಾಡಿ ಕೊಡಲು ಮನಸ್ಸು ಮಾಡದ ಮನೆಯ ಓನರ್ ಪ್ರತೀ ತಿಂಗಳ ಒಂದನೇ ತಾರೀಕು ಮನೆಯ ಮುಂದೆ ಬಂದು ಬಾಡಿಗೆ ವಸೂಲಿಗೆ ಕೂತಾಗ….!
-ಎಟಿಎಂ ಮುಂದೆ ನಿಂತು ಪಾಸ್ ವರ್ಡ್ ಒತ್ತಿ ಅಮೌಂಟ್ ಒತ್ತಿದಾಗ ಸಾರಿ, ಅಷ್ಟು ದುಡ್ಡು ನಿಮ್ಮ ಖಾತೆಯಲ್ಲಿ ಇಲ್ಲ ಎಂಬ ಉತ್ತರ ಎಟಿಎಂ ಮೆಶಿನ್ ಕೊಟ್ಟಾಗ….!
ಆಗೆಲ್ಲ ನನಗೆ ಅನ್ನಿಸಿದ್ದು ದುಡ್ಡೇ ಒಂದು ಪವರ್! ದುಡ್ಡೇ ಒಂದು ಶಕ್ತಿ! ದುಡ್ಡು ಒಂದು ಭರವಸೆ! ದುಡ್ಡು ಮಾತ್ರ ದುಡ್ಡನ್ನು ಸಂಪಾದನೆ ಮಾಡುತ್ತದೆ ಎಂದು!
ನಾನೀಗ ದುಡ್ಡು ಎಲ್ಲವನ್ನೂ ಖರೀದಿ ಮಾಡುವುದಿಲ್ಲ ಎಂದು ವಾದ ಮಾಡುವುದನ್ನು ಬಿಟ್ಟೆ ಬಿಟ್ಟಿದ್ದೇನೆ! ಏಕೆಂದರೆ ನನಗೆ ಅರಿವಾಗಿದೆ ಏನೆಂದರೆ ದುಡ್ಡನ್ನು ಪ್ರೀತಿಸುವವರು ಮಾತ್ರ ದುಡ್ಡು ಮಾಡುತ್ತಾರೆ ಎಂದು!
ಏನಂತೀರಿ?
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಭನ್ವಾರಿ ದೇವಿ ಎಂಬ ಅನಕ್ಷರಸ್ಥೆ ಕೋಟ್ಯಂತರ ಮಹಿಳೆಯರ ಮಾನ ಕಾಪಾಡಿದ ಕಥೆ