Site icon Vistara News

ರಾಜ ಮಾರ್ಗ ಅಂಕಣ | ಜಾಗತಿಕ ಕ್ರಿಕೆಟ್‌ ತಿರುಗಿ ನೋಡುವಂತೆ ಮಾಡಿದ ಹೀರೊ ಬಾಬರ್‌ ಅಜಂ

babar azam kohli

ಕಲಾವಿದರನ್ನು, ಆಟಗಾರನನ್ನು ಹೋಲಿಕೆ ಮಾಡಬಾರದು ಎಂದು ನಂಬಿದವನು ನಾನು! ಆದರೆ ಜಾಗತಿಕ ಕ್ರಿಕೆಟ್ ಪಂಡಿತರು ಹೋಲಿಕೆ ಮಾಡುವುದನ್ನು ಬಿಡುವುದಿಲ್ಲ. ಪಾಕಿಸ್ತಾನ ಕ್ರಿಕೆಟಿನ ಎಲ್ಲ ಫಾರ್ಮಾಟ್‌ನ ಕ್ಯಾಪ್ಟನ್ ಆಗಿರುವ ಬಾಬರ್ ಅಜಂ ಮತ್ತು ವಿರಾಟ್ ಕೊಹ್ಲಿ ನಡುವಿನ ಹೋಲಿಕೆಯು ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಚಾರ ಪಡೆಯುತ್ತಿದೆ. ಈ ಹೋಲಿಕೆಯ ಫಲಿತಾಂಶ ಏನೆಂದರೆ 2021-22 ಸೀಸನ್‌ನ ಯಾವ ದಾಖಲೆಯನ್ನು ಪರಿಗಣನೆ ಮಾಡಿದರೂ ಬಾಬರ್ ಅಜಂ ಅವರು ವಿರಾಟ್ ಕೋಹ್ಲಿ ಅವರಿಗಿಂತ ಭಾರೀ ಮುಂದೆ ಇದ್ದಾರೆ!

ವಿಶ್ವ ಕ್ರಿಕೆಟ್ ರ‍್ಯಾಂಕಿಂಗ್ ಪ್ರಕಾರ ಬಾಬರ್ ಇಂದು ODI ಮತ್ತು T20 ಫಾರ್ಮಾಟ್‌ಗಳಲ್ಲಿ ಮೊದಲ ರ‍್ಯಾಂಕಿಗೆ ಜಿಗಿದು ಬಿಟ್ಟಿದ್ದಾರೆ! ಟೆಸ್ಟ್ ರ‍್ಯಾಂಕಿಂಗಲ್ಲಿ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ವಿರಾಟ್ ಒಂದು ಶತಕಕ್ಕಾಗಿ ಎರಡೂವರೆ ವರ್ಷಗಳಿಂದ ಕಾಯುತ್ತ ಕೂತಿರುವಾಗ ಇದೇ ಬಾಬರ್ ಅಜಂ 2022ರಲ್ಲಿ ಏಳು ಶತಕ ಸಿಡಿಸಿ ಮೆರೆದಿದ್ದಾರೆ! ಏಕದಿನದ ಪಂದ್ಯಗಳಲ್ಲಿ 90 ಇನ್ನಿಂಗ್ಸ್‌ಗಳ ಮೂಲಕ 4664 ರನ್ ಪರ್ವತ ಪೇರಿಸಿ ಆಗಿದೆ! ಅದರಲ್ಲಿ 17 ಶತಕಗಳು ಇವೆ. ಸರಾಸರಿ 59.79! ವಿರಾಟ್ ಕೊಹ್ಲಿ ಅವರ ಸರಾಸರಿಗಿಂತ ಅವರು ಮುಂದೆ ಇದ್ದಾರೆ. ಅತ್ಯಂತ ವೇಗದ 5000 ರನ್ ಕಲೆ ಹಾಕುವ ರೇಸಲ್ಲಿ ಅಜಂ ಈಗ ಜಗತ್ತಿನ ಇತರ ಆಟಗಾರರಿಗಿಂತ ಭಾರೀ ಮುಂದೆ ಇದ್ದಾರೆ!

ಒಂದೇ ರಾಷ್ಟ್ರದಲ್ಲಿ (UAE) ಸತತ ಐದು ಶತಕಗಳ ವಿಶ್ವದಾಖಲೆಯು ಆತನ ಹೆಸರಲ್ಲಿ ಇದೆ! ಸತತ ಮೂರು ಶತಕಗಳ ಗೊಂಚಲು ಆತ ಎರಡು ಬಾರಿ ಗೆದ್ದಾಗಿದೆ! ವೆಸ್ಟ್ಇಂಡೀಸ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆತ ಮೂರು ಸತತ ಶತಕಗಳ ಜೊತೆ ದಾಖಲೆ ಸ್ಕೋರ್ ಮಾಡಿ ಆಗಿದೆ!

ಆತನ ಸಾಧನೆಯು ಗ್ರೇಟ್ ಎಂದು ಪರಿಗಣಿಸಲು ಖಂಡಿತ ನೂರಾರು ಕಾರಣಗಳು ಇವೆ. ಮೊದಲನೆಯದಾಗಿ ಪಾಕ್ ಆಟಗಾರರಿಗೆ ಯಾವ ಪ್ರಾಯೋಜಕರೂ ಇಲ್ಲ! ಶಾಶ್ವತ ಕೋಚ್ ಇಲ್ಲ! ಭಾರತೀಯ ಆಟಗಾರರು ಪಡೆಯುವ ಸಂಭಾವನೆಯ ಹತ್ತನೇ ಒಂದರಷ್ಟು ವೇತನವು ಕೂಡ ಅವರಿಗೆ ದೊರೆಯುತ್ತಿಲ್ಲ. ಜಾಹೀರಾತು ಮೂಲಕ ಅವರಿಗೆ ದುಡ್ಡು ಬರುವುದಿಲ್ಲ!

ಅತ್ಯಂತ ಶ್ರೀಮಂತ ಕೂಟವಾದ ಐಪಿಎಲ್ ಪಂದ್ಯಗಳಲ್ಲಿ ಯಾವ ಪಾಕ್ ಆಟಗಾರ ಕೂಡ ಆಯ್ಕೆ ಪಡೆಯುತ್ತಿಲ್ಲ. ಪಾಕ್ ಕ್ರಿಕೆಟ್ ಕಂಟ್ರೋಲ್ ಬೋರ್ಡ್ ನಷ್ಟದಲ್ಲಿ ಮುಳುಗಿದೆ. ಪಾಕಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಟೇಡಿಯಂ ಇಲ್ಲ. ಪಾಕ್ ಭಯೋತ್ಪಾದಕ ರಾಷ್ಟ್ರ ಎಂಬ ಹಣೆಪಟ್ಟಿಯು ಇರುವ ಕಾರಣ ಜಗತ್ತಿನ ಮೇರುರಾಷ್ಟ್ರಗಳು ಅಲ್ಲಿ ಕ್ರಿಕೆಟ್ ಪ್ರವಾಸ ಕೈಗೊಳ್ಳಲು ಆಸಕ್ತಿ ತೋರಿಸುತ್ತಿಲ್ಲ. ಅಲ್ಲಿನ ಟಾಪ್ ಕ್ರಿಕೆಟ್ ಆಟಗಾರರು ಕೂಡ ಕ್ರಿಕೆಟನ್ನು ಪೂರ್ಣಕಾಲಿಕ ಉದ್ಯೋಗವಾಗಿ ತೆಗೆದುಕೊಳ್ಳಲು ಇನ್ನೂ ಹಿಂಜರಿಯುವ ವಾತಾವರಣ ಇದೆ!

ಈ ಹಿನ್ನೆಲೆಯಿಂದ ನೋಡಿದಾಗ ಬಾಬರ್ ಅಜಂ ಸಾಧನೆ ಖಂಡಿತ ಗ್ರೇಟ್ ಎಂದು ನನಗೆ ಅನ್ನಿಸುತ್ತ ಇದೆ. ಅದರಲ್ಲಿ ಕೂಡ ಆತ ಪಾಕ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಅದ ನಂತರ ಆತನ ಬ್ಯಾಟ್ ಹೆಚ್ಚು ಬೆಂಕಿ ಉಗುಳುತ್ತಾ ಇದೆ! ಒತ್ತಡ ಎಂದರೇನು ಎಂದು ಆತನಿಗೆ ಗೊತ್ತೇ ಇಲ್ಲ. ಬ್ಯಾಟ್ ಹಿಡಿದು ಕ್ರೀಸಿಗೆ ಬಂದರೆ ಸ್ಕೋರ್ ಬೋರ್ಡ್ ಚಲಿಸುತ್ತ ಇರಬೇಕು ಎನ್ನುವ ಸಿದ್ಧಾಂತ ಆತನದ್ದು. ದಾಖಲೆಗಳ ಬಗ್ಗೆ ತಾನು ಗಮನ ಕೊಡುವುದೇ ಇಲ್ಲ ಎಂದು ಆತ ಹೇಳಿದ್ದಾರೆ.

ಗಡ್ಡಾಫಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಾಲ್ ಬಾಯ್ ಆಗಿ ಕ್ರಿಕೆಟ್ ಜರ್ನಿ ಆರಂಭ ಮಾಡಿದ ಬಾಬರ್ ಅಜಂಗೆ ಈಗ 27 ವರ್ಷ. ಮುಂದೆ ಆತ ವಿರಾಟ್ ಕೊಹ್ಲಿಯ ದಾಖಲೆ ಮುರಿಯುತ್ತಾರೋ ಇಲ್ಲವೋ ಈಗಲೆ ಹೇಳಲಾಗದು. ಆದರೆ ಕನ್ಸಿಸ್ಟೆನ್ಸಿ, ಟೆಕ್ನಿಕ್, ಆಕ್ರಮಣ ಶೀಲತೆ ಮತ್ತು ಸದ್ಯದ ಹಲವು ದಾಖಲೆ ಗಮನಿಸಿದಾಗ ಬಾಬರ್ ಜಾಗತಿಕ ಕ್ರಿಕೆಟಿನ ವರ್ತಮಾನದ ನವೋದಿತ ತಾರೆ ಎಂದು ಹೇಳಲು ಏನೂ ಅಡ್ಡಿ ಇಲ್ಲ!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಚೆಸ್ ವಿಶ್ವಚಾಂಪಿಯನನ್ನೆ ಮಣಿಸಿದ 17ರ ಬಾಲಕನಿಗೆ ಅಮ್ಮನೇ ಸ್ಫೂರ್ತಿ!

Exit mobile version