ನನ್ನ ತರಬೇತಿಯಲ್ಲಿ ಹೆಚ್ಚು ಬಾರಿ ಉಲ್ಲೇಖಿಸಿದ ಒಬ್ಬ ಭಿಕ್ಷುಕನ ಕತೆ ಇಂದು ತಮ್ಮ ಮುಂದೆ..
ಆ ಭಿಕ್ಷುಕ ಊರಿನ ನಡುವೆ ಇರುವ ಒಂದು ದೇವಸ್ಥಾನದ ಮುಂದೆ ಕುಳಿತು ಭಿಕ್ಷೆ ಬೇಡುತ್ತಿದ್ದ. ದಿನವೂ ದೇವರ ಕಡೆಗೆ ಕೈಜೋಡಿಸಿ ‘ದೇವರೇ, ನನಗ್ಯಾಕೆ ಈ ಬಡತನ ಕೊಟ್ಟಿದ್ದೀ? ನನಗ್ಯಾಕೆ ಈ ಕಷ್ಟ?’ ಎಂದು ಬೇಡುತ್ತಿದ್ದ. ಇದನ್ನು ಕೇಳಿ ಕೇಳಿ ದೇವರಿಗೆ ಬೇಜಾರಾಯ್ತು. ದೇವರು ಅವನಿಗೆ ಸಹಾಯ ಮಾಡಲು ಮುಂದಾಗುತ್ತಾರೆ.
ಒಂದು ದಿನ ಅವನು ತನ್ನ ಹಾಸಿಗೆಯಿಂದ ಏಳುವಾಗ ದೇವರು ಅವನ ತಲೆದಿಂಬಿನ ಪಕ್ಕದಲ್ಲಿ ಒಂದು ಲಕ್ಷ ರೂಪಾಯಿಯ ಕಟ್ಟು ಇಟ್ಟು ಕಣ್ಮರೆ ಆಗುತ್ತಾರೆ. ಬೆಳಿಗ್ಗೆ ಎದ್ದು ಆ ದುಡ್ಡನ್ನು ನೋಡಿ ಭಿಕ್ಷುಕನಿಗೆ ಭಾರಿ ಸಂತೋಷವಾಯಿತು. ತಕ್ಷಣ ಅಂಗಡಿಗೆ ಹೋಗಿ ಒಂದು ಬೆಳ್ಳಿಯ ಬಟ್ಟಲು ಖರೀದಿ ಮಾಡಿ ಮತ್ತೆ ಅದೇ ಜಾಗದಲ್ಲಿ ಭಿಕ್ಷೆ ಬೇಡುತ್ತಾನೆ!
ಮತ್ತೆ ಅದೇ ಮಾತು ಮುಂದುವರಿಯುತ್ತದೆ.
ʻದೇವರೇ, ನನಗ್ಯಾಕೆ ಈ ಬಡತನ ಕೊಟ್ಟಿದ್ದೀ? ನನಗ್ಯಾಕೆ ಈ ಕಷ್ಟ?’
ದೇವರಿಗೆ ಆ ಭಿಕ್ಷುಕನನ್ನು ಇನ್ನಷ್ಟು ಪರೀಕ್ಷೆ ಮಾಡಬೇಕು ಅನ್ನಿಸ್ತು. ಮರುದಿನ ಅದೇ ಭಿಕ್ಷುಕನ ತಲೆದಿಂಬಿನ ಪಕ್ಕದಲ್ಲಿ ಹತ್ತು ಲಕ್ಷ ರೂಪಾಯಿಯ ನೋಟಿನ ಕಟ್ಟು ಇಟ್ಟು ಕಣ್ಮರೆ ಆಗುತ್ತಾರೆ. ಬೆಳಿಗ್ಗೆ ಎದ್ದ ಆ ಭಿಕ್ಷುಕನು ಆ ದುಡ್ಡು ನೋಡಿ ಖುಷಿ ಪಡುತ್ತಾನೆ. ಮತ್ತೆ ಪೇಟೆಗೆ ಹೋಗಿ ಒಂದು ಚಿನ್ನದ ಬಟ್ಟಲು ಖರೀದಿ ಮಾಡಿ ಮತ್ತೆ ಅದೇ ಜಾಗದಲ್ಲಿ ಭಿಕ್ಷಾಟನೆ ಮುಂದುವರೆಸುತ್ತಾನೆ!
ಮತ್ತೆ ಅದೇ ಅಳಲು: ‘ದೇವರೇ, ನನಗ್ಯಾಕೆ ಈ ಕಷ್ಟ?’
ಈ ಬಾರಿ ದೇವರು ಇನ್ನಷ್ಟು ಉದಾರ ಆಗುತ್ತಾರೆ. ರಾತ್ರಿ ಅವನ ಹಾಸಿಗೆಯ ಪಕ್ಕದಲ್ಲಿ ಒಂದು ಕೋಟಿ ದುಡ್ಡು ಇಟ್ಟು ಕಣ್ಮರೆ ಆಗುತ್ತಾರೆ. ಇನ್ನು ಮುಂದೆ ಅವನು ಆ ಸಂಭಾಷಣೆ ಹೇಳೋದಿಲ್ಲ ಎಂದು ದೇವರು ಭಾವಿಸಿದ್ದರು.
ಆದರೆ ಆ ಭಿಕ್ಷುಕ ಆ ದುಡ್ಡಲ್ಲಿ ಒಂದು ಹೊಸ ದೇವಸ್ಥಾನವನ್ನೇ ಕಟ್ಟಿ ,ಅದೇ ಚಿನ್ನದ ಬಟ್ಟಲು ಹಿಡಿದು ಮತ್ತೆ ಭಿಕ್ಷಾಟನೆ ಮುಂದುವರೆಸುತ್ತಾನೆ!
ಮತ್ತೆ ಅದೇ ಸಂಭಾಷಣೆ – ದೇವರೇ, ನನಗೆ ಯಾಕೆ ಈ ಕಷ್ಟ ಕೊಟ್ಟೆ?
ಈ ಮನಸ್ಥಿತಿಗೆ ಮಾನಸಿಕ ದಾರಿದ್ರ್ಯ ಎನ್ನಬಹುದು!
ಬಡತನದಲ್ಲಿ ಎರಡು ವಿಧವಾದ ಬಡತನ ಇದೆ. ಒಂದು ಆರ್ಥಿಕ ಬಡತನ. ಇನ್ನೊಂದು ಮಾನಸಿಕ ದಾರಿದ್ರ್ಯ! ಆರ್ಥಿಕ ಬಡತನಕ್ಕೆ ಪರಿಹಾರ ಇದೆ. ಆದರೆ ಮಾನಸಿಕ ದಾರಿದ್ರ್ಯಕ್ಕೆ ಮದ್ದೇ ಇಲ್ಲ. ತಮ್ಮ ಕಷ್ಟ ಹೇಳಿಕೊಂಡು ಇನ್ನೊಬ್ಬರ ಮುಂದೆ ಕೈ ಚಾಚುವುದರಲ್ಲಿ ಅವರಿಗೆ ನಾಚಿಕೆಯೇ ಇರುವುದಿಲ್ಲ! ಸ್ವಾಭಿಮಾನದ ಲವಲೇಶವೂ ಇರುವುದಿಲ್ಲ. ಯಾರು ಎಷ್ಟೇ ಕೊಟ್ಟರೂ ಅವರಿಗೆ ಖುಷಿ ಆಗುವುದಿಲ್ಲ. ಈ ಅತೃಪ್ತ ಆತ್ಮಗಳನ್ನು ಖುಷಿ ಮಾಡಲು ಸಾಧ್ಯವೇ ಇಲ್ಲ!
ಅವರ ಎಲ್ಲ ಮಾತುಗಳೂ ನಾಸ್ತಿಯಿಂದಲೆ ಆರಂಭ ಆಗುತ್ತದೆ!
ಅವರು ಪದೇಪದೆ ಹೇಳುವ ಮಾತುಗಳು ಈ ರೀತಿ ಇವೆ.
೧) ದೇವರು ನಮಗೇ ಕಷ್ಟ ಕೊಡುವುದು!
೨) ನಮ್ಮಂತವರಿಗೆ ಯಾರೂ ಸಹಾಯ ಮಾಡುವುದಿಲ್ಲ!
೩) ಹಾಸಿಗೆ ಇದ್ದಷ್ಟೇ ಕಾಲು ಚಾಚುವುದನ್ನು ಕಲಿಯಬೇಕು. ದೊಡ್ಡ ದೊಡ್ಡ ಕನಸು ನಮ್ಮಂತವರಿಗೆ ಅಲ್ಲ! (ಈ ಡೈಲಾಗ್ ಅವರು ತಮ್ಮ ಮಕ್ಕಳಿಗೆ ಪದೇಪದೆ ಹೇಳುವುದು!) ಅಂದರೆ ಅವರ ಪ್ರಕಾರ ಮಕ್ಕಳು ಕನಸು ಕಾಣುವುದೇ ತಪ್ಪು!
೪) ನಮ್ಮ ಹಣೆಯ ಬರಹವೇ ಸರಿಯಿಲ್ಲ!
೫) ದೇವರು ಕೊಡುವವರಿಗೇ ಜಾಸ್ತಿ ಕೊಡುತ್ತಾನೆ!
೬) ನಮ್ಮ ತಲೆಯ ಮೇಲೆ ನಮ್ಮದೇ ಕೈ!
೭) ನಾವು ಯಾವ ಜನ್ಮದಲ್ಲಿ ಯಾವುದೋ ತಪ್ಪು ಮಾಡಿದ್ದೇವೆ. ಅದಕ್ಕಾಗಿ ನಮಗೆ ಈ ಕಷ್ಟ!
ಭರತ ವಾಕ್ಯ
ನಾನು ಮೊದಲೇ ಹೇಳಿದ ಹಾಗೆ ಅವರನ್ನು ಖುಷಿ ಮಾಡಲು ಸಾಧ್ಯವೇ ಇಲ್ಲ. ಅವರು ಅತೃಪ್ತ ಆತ್ಮಗಳು, ಮಾನಸಿಕವಾಗಿ ದರಿದ್ರರು. ಎಷ್ಟು ಕೊಟ್ಟರೂ ಅವರು ಖುಷಿ ಆಗುವುದಿಲ್ಲ. ಅಂಥವರಿಂದ ದೂರ ಇದ್ದಷ್ಟು ಒಳ್ಳೆಯದು.
ಭಾರಿ ದೊಡ್ಡ ಬಂಗಲೆಯಲ್ಲಿ ವಾಸವಾಗಿರುವ ವ್ಯಕ್ತಿಗಿಂತ ಎಷ್ಟೋ ಬಾರಿ ಗುಡಿಸಲಲ್ಲಿ ವಾಸವಾಗಿರುವ ವ್ಯಕ್ತಿ ಹೆಚ್ಚು ಖುಷಿ ಆಗಿರುತ್ತಾನೆ. ಏಕೆಂದರೆ ಸಂತೋಷ ಅನ್ನುವುದು ಒಂದು ಅದ್ಭುತ ಮೈಂಡ್ ಸೆಟ್! ಅದು ನಾವು ಹೊಂದಿರುವ ವಸ್ತುಗಳಿಂದ ದೊರೆಯುವುದೇ ಇಲ್ಲ!
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಒಂದಕ್ಷರ ಓದಲು, ಬರೆಯಲು ಬಾರದ ಸುಕ್ರಜ್ಜಿ ನಡೆದಾಡುವ ದಂತ ಕಥೆ ಆಗಿದ್ದು ಹೇಗೆ?