Site icon Vistara News

ರಾಜ ಮಾರ್ಗ ಅಂಕಣ : ದೇಶದ ಪ್ರಪ್ರಥಮ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್‌ ಷಾ ಬಯೋಪಿಕ್‌ ಬರ್ತಿದೆ!

Raja Marga column: Biopic in made on First field marshal Sam Manek shah

Raja Marga column: Biopic in made on First field marshal Sam Manek shah

ಭಾರತದ ಮೊತ್ತಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್‌ ಮಾನೆಕ್‌ ಷಾ ಬಗ್ಗೆ ಒಂದು ಪುಸ್ತಕ ಬರೆಯುವಷ್ಟು ವಿಷಯಗಳನ್ನು ಹರವಿಕೊಂಡು ಇಂದು ನಿಮ್ಮ ಮುಂದೆ ಬಂದಿದ್ದೇನೆ. ಅವರ ಮಿಲಿಟರಿ ಸಾಹಸಗಳ ಬಗ್ಗೆ, ರಾಷ್ಟ್ರಪ್ರೇಮದ ಬಗ್ಗೆ ಎಷ್ಟು ನಾನು ಬರೆದರೂ ಅದು ಮುಗಿದು ಹೋಗುವುದಿಲ್ಲ!

ಹದಿನೆಂಟನೇ ವಯಸ್ಸಿಗೇ ಸೈನಿಕರಾದರು ಮಾನೆಕ್‌ ಷಾ!

1914 ಏಪ್ರಿಲ್ 3ರಂದು ಪಂಜಾಬಿನ ಅಮೃತಸರದಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದ ಸ್ಯಾಮ್ ಮಾನೆಕ್‌ ಷಾ ಅವರ ತಂದೆ ವೈದ್ಯರಾಗಿದ್ದರು. ಅಪ್ಪನ ಹಾಗೆ ವೈದ್ಯನಾಗುವ ಕನಸು ಮಗನಿಗೆ. ಲಂಡನ್‌ಗೆ ಕಳುಹಿಸಿಕೊಡಿ ಎಂದು ಅಪ್ಪನಿಗೆ ಹೇಳಿದಾಗ ವಯಸ್ಸು ಕಡಿಮೆ ಎಂಬ ಕಾರಣಕ್ಕೆ ಅಪ್ಪ ನಿರಾಕರಿಸಿದರು. ಅದಕ್ಕಾಗಿ ಸಿಟ್ಟು ಮಾಡಿಕೊಂಡ ಮಗ ಮಿಲಿಟರಿ ಪರೀಕ್ಷೆ ಬರೆದು 1932ರಲ್ಲಿ ಸೈನ್ಯಕ್ಕೆ ಆಯ್ಕೆಯಾದರು. ಆಗ ಅವರಿಗೆ ಬರೇ 18 ವರ್ಷ. ಮುಂದೆ
ಮಾನೆಕ್‌ ಷಾ 40 ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ವಿವಿಧ ಸ್ತರಗಳಲ್ಲಿ ದುಡಿದರು. ಐದು ಯುದ್ಧಗಳಲ್ಲಿ ಪ್ರತ್ಯಕ್ಷ ಭಾಗವಹಿಸಿದರು! ಭಾರತವನ್ನು ಗೆಲ್ಲಿಸುತ್ತಾ ಹೋದರು.

ಬ್ರಿಟಿಷ್ ಇಂಡಿಯಾ ಸೇನೆಯಲ್ಲಿ ಸಾಮ್ ಯುದ್ಧ

ಅವರ ಮೊದಲ ಯುದ್ಧವು ಬ್ರಿಟಿಷ್ ಇಂಡಿಯಾ ಸೈನ್ಯದ ಪರವಾಗಿತ್ತು. ಅದು ಎರಡನೇ ವಿಶ್ವಯುದ್ಧ! ಪಾಗೊಡ ಗುಡ್ಡವನ್ನು ರಕ್ಷಿಸಲು ಜೀವದ ಹಂಗು ತೊರೆದು ಹೋರಾಡುತ್ತಿರುವ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡರು. ಬದುಕುವ ಅವಕಾಶ ಇಲ್ಲ ಎಂದು ವೈದ್ಯರು ಭರವಸೆ ಬಿಟ್ಟು ಕೂತಾಗ ಸಾಮ್ ಮಾನೆಕ್‌ ಷಾ ಮತ್ತೆ ಬದುಕಿ ಬಂದರು! ಅವರಿಗೆ ಸೈನ್ಯವು ಮಿಲಿಟರಿ ಕ್ರಾಸ್ ಎಂಬ ಗೌರವ ಪ್ರದಾನ ಮಾಡಿತು.

ಮಿಂಚು ಹರಿಸಿದ ಕಾಶ್ಮೀರ ವಿಮೋಚನಾ ಯುದ್ದ!

ಮಾನೆಕ್‌ ಷಾ ಅವರ ಎರಡನೇ ಯುದ್ಧವು ಭಾರತವು ಸ್ವಾತಂತ್ರ್ಯ ಪಡೆದಾಗ ನಡೆದ ಕಾಶ್ಮೀರ ವಿಮೋಚನಾ ಯುದ್ಧ. ಪಾಕ್ ಆಕ್ರಮಿತ ಕಾಶ್ಮೀರ ಬಿಡುಗಡೆಗಳಿಸಲು ಸೈನ್ಯ ಮುಂದುವರಿದಾಗ ಮಾನೆಕ್‌ ಷಾ ಮತ್ತೆ ದಿಟ್ಟವಾಗಿ ಹೋರಾಡಿದರು. ಹೈದರಾಬಾದ್ ವಿಮೋಚನಾ ಯುದ್ಧದಲ್ಲೂ ಅವರು ಭಾಗವಹಿಸಿದ್ದರು.

ನೆಹರೂ ವಿರುದ್ಧ ಸಿಟ್ಟಾದರು ಮಾನೆಕ್‌ ಷಾ!

ಮೂರನೇ ಬಾರಿ ಸಾಮ್ ಅವರು ಹೋರಾಡಿದ್ದು ಭಾರತ ಚೀನಾ ಯುದ್ಧದಲ್ಲಿ. ಇಡೀ ಸೇನೆಯು ವೀರತೆಯಿಂದ ಹೋರಾಡಿದರೂ ಭಾರತವು ರಾಜಕೀಯದ ಕಾರಣಕ್ಕೆ ಆ ಯುದ್ಧವನ್ನು ಸೋತಿತು! ಆಗ ಮಾನೆಕ್‌ ಷಾ ಸಿಟ್ಟಿನಿಂದ ಕುದಿದು ಹೋದರು. ರಾಜಕೀಯ ವ್ಯಕ್ತಿಗಳು ಸೈನ್ಯದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ನೇರವಾಗಿ ಹೇಳಿದರು. ನೆಹರೂ ಮೇಲೂ ಸಿಟ್ಟಾದರು! ಆಗಿನ ರಕ್ಷಣಾಮಂತ್ರಿ ಮೆನನ್ ಜೊತೆಗೆ ಖಾರವಾಗಿ ಮಾತನಾಡಿದರು.

ಎರಡು ಪಾಕ್ ಯುದ್ಧಗಳನ್ನು ಶಾ ಭಾರತಕ್ಕೆ ಗೆಲ್ಲಿಸಿಕೊಟ್ಟರು!

1965 ಮತ್ತು 1971ರ ಭಾರತ ಪಾಕಿಸ್ತಾನ ಯುದ್ಧಗಳಲ್ಲಿ ಭಾರತವನ್ನು ಗೆಲ್ಲಿಸಿ ಕೊಡುವುದರಲ್ಲಿ ಅತೀ ಮಹತ್ವದ ಪಾತ್ರ ವಹಿಸಿದವರು ಮಾನೆಕ್‌ ಷಾ ಅವರು. ಅದರಲ್ಲೂ 1971ರ ಯುದ್ಧವನ್ನು ಭಾರತವು ಮರೆಯಲು ಸಾಧ್ಯವೇ ಇಲ್ಲ. ಏಕೆಂದರೆ ಅದರಲ್ಲಿ ಮಾನೆಕ್‌ ಷಾ ಅವರು ಆರ್ಮಿ ಮುಖ್ಯಸ್ಥರಾಗಿ ಭಾರತವನ್ನು ಗೆಲ್ಲಿಸಿದ್ದು ಮಾತ್ರವಲ್ಲ ಬಾಂಗ್ಲಾ ಎಂಬ ರಾಷ್ಟ್ರದ ಸ್ಥಾಪನೆಗೆ ಕಾರಣರಾದರು. ಇದನ್ನೆಲ್ಲ ನಾವು ಮರೆಯುವುದು ಹೇಗೆ?

ಕೇವಲ 18 ದಿನಗಳ ಅವಧಿಯಲ್ಲಿ ಪಾಕಿಸ್ತಾನದ ಸೈನ್ಯವನ್ನು ಭಾರತೀಯ ಸೈನಿಕರು ಹೆಡೆಮುರಿ ಕಟ್ಟಿದ್ದರು! ಆ ಗೆಲುವಿನಲ್ಲಿ ಮಾನೆಕ್‌ ಷಾ ಪಾತ್ರವು ಬಹಳ ದೊಡ್ಡದು!

ನೇರ ನಡೆ, ದಿಟ್ಟ ನುಡಿ..ಅದು ಸಾಮ್ ಸ್ಟೈಲ್!

ಅವರ ದಿಟ್ಟತನ, ನೇರ ನಡೆ ನುಡಿ ಮತ್ತು ಹಾಸ್ಯ ಪ್ರವೃತ್ತಿಗಳ ಬಗ್ಗೆ ನೂರಾರು ಕಥೆಗಳು ನಮಗೆ ದೊರೆಯುತ್ತವೆ.

ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು 1971ರ ಮಾರ್ಚಿನಲ್ಲಿ ಪಾಕ್ ವಿರುದ್ಧ ಯುದ್ಧ ಶುರು ಮಾಡಲು ಹೇಳಿದಾಗ ಆರ್ಮಿ ಚೀಫಾಗಿ ಅವರು, “ಇಲ್ಲ, ನನ್ನ ಸೈನ್ಯ ಸಿದ್ಧವಾಗಿಲ್ಲ. ಆರು ತಿಂಗಳು ಸಮಯ ಕೊಡಿ. ಭಾರತವನ್ನು ಗೆಲ್ಲಿಸಿಕೊಡುತ್ತೇನೆ” ಎಂದು ನೇರವಾಗಿ ಹೇಳುವಷ್ಟು ಧೈರ್ಯ ತೋರಿದ್ದರು! ಇನ್ನೊಮ್ಮೆ ಹೇಡಿತನ ತೋರುತ್ತಿದ್ದ ಮಿಜೋರಾಂ ಬೆಟಾಲಿಯನ್ ಸೈನಿಕರಿಗೆ ‘ಬಳೆ ತೊಟ್ಟು ಕೊಳ್ಳಿ’ ಎಂದು ಬಳೆಗಳನ್ನು ಪೋಸ್ಟ್ ಮಾಡಿ ಸುದ್ದಿಯಾಗಿದ್ದರು!
ತನಗೆ ಅನ್ನಿಸಿದನ್ನು ನೇರವಾಗಿ, ದಿಟ್ಟವಾಗಿ ಹೇಳುವ ಗಟ್ಸ್ ಅವರು ಕೊನೆಯವರೆಗೆ ಹೊಂದಿದ್ದರು.

ಭಾರತದ ಮೊಟ್ಟಮೊದಲ ಫೀಲ್ಡ್ ಮಾರ್ಷಲ್

1973ರಲ್ಲಿ ಅವರನ್ನು ಭಾರತದ ಮೊದಲ ಫೀಲ್ಡ್ ಮಾರ್ಷಲ್ ಆಗಿ ಸರಕಾರ ನೇಮಕ ಮಾಡಿತು. ಅದು ಭಾರತೀಯ ಸೇನೆಯ ಅತೀ ಉನ್ನತವಾದ ಗೌರವ ಆಗಿತ್ತು. ಫೀಲ್ಡ್ ಮಾರ್ಷಲ್ ಆದವರು ಜೀವನಪೂರ್ತಿ ನಿವೃತ್ತಿ ಆಗುವುದೇ ಇಲ್ಲ! ಅವರು ಕೊನೆಯವರೆಗೆ ಆರ್ಮಿಯ ಸಮವಸ್ತ್ರವನ್ನು ಧರಿಸಬಹುದು. ಅವರ ವಾಹನದಲ್ಲಿ ಐದು ನಕ್ಷತ್ರಗಳು ಇರುತ್ತವೆ ಮತ್ತು ಅವರಿಗೆ ಆರ್ಮಿ ಯಾವಾಗಲೂ ಗೌರವ ರಕ್ಷೆ ನೀಡುತ್ತದೆ! ಈ ಗೌರವವನ್ನು ಪಡೆದ ಮೊದಲ ಭಾರತೀಯ ಸೈನಿಕ ಅಂದರೆ ಅದು ಮಾನೆಕ್‌ ಷಾ! ಅವರಿಗೆ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ಕೂಡ ದೊರೆತಿವೆ. 2008ರಲ್ಲಿ ನಿಧನರಾದಾಗ ಅವರಿಗೆ 94 ವರ್ಷ ಆಗಿತ್ತು.

ಅವರ ಬಯೋಪಿಕ್ ಬರ್ತಾ ಇದೆ!

ಅಂದ ಹಾಗೆ ಫೀಲ್ಡ್ ಮಾರ್ಷಲ್ ಅವರ ಜೀವನ ಆಧಾರಿತ ಹಿಂದಿ ಸಿನಿಮಾ ತಯಾರಾಗುತ್ತಿದ್ದು ವಿಕ್ಕಿ ಕೌಶಲ್ ಅವರು ಪ್ರಧಾನ ಭೂಮಿಕೆಯಲ್ಲಿದ್ದಾರೆ. ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಈ ಸಿನೆಮಾ ಬಿಡುಗಡೆ ಆಗ್ತಾ ಇದೆ. ನಾನು ಆ ಸಿನಿಮಾಕ್ಕಾಗಿ ತುದಿಗಾಲಲ್ಲಿ ಕಾಯುತ್ತಿದ್ದೇನೆ. ಜೈ ಹಿಂದ್!

ಇದನ್ನೂ ಓದಿ : ರಾಜ ಮಾರ್ಗ ಅಂಕಣ: The Kerala Story ಎಂಬ ಅದ್ಭುತ ಸಿನಿಮಾ ಮತ್ತು ಅದಾ ಶರ್ಮಾ ಎಂಬ ಪ್ರತಿಭಾವಂತ ನಟಿ

Exit mobile version