ಸಾವಿರಾರು ಜನರು ಸೇರಿದ ಕಾರ್ಯಕ್ರಮ ಅದು. ಎತ್ತರವಾದ ವೇದಿಕೆಯಲ್ಲಿ ಜಗಮಗಿಸುವ ಬೆಳಕು. ಸುಂದರವಾದ ಹಿನ್ನೆಲೆಯ ಭಕ್ತಿಗೀತೆಗೆ ಒಂದು ವೃತ್ತಿಪರವಾದ ನೃತ್ಯ ತಂಡವು ನೃತ್ಯವನ್ನು ಆರಂಭ ಮಾಡಿತು. ಅದು ಸುಂದರವಾದ ನೃತ್ಯ ಪ್ರದರ್ಶನ. ಆದರೆ ಎಲ್ಲಾ ಜನರ ಗಮನವು ವೇದಿಕೆಯ ಎಡಭಾಗದಲ್ಲಿ ಇತ್ತು.
ಕಾರಣ ಏನೆಂದರೆ ಒಬ್ಬ ಅದ್ಭುತವಾದ ವರ್ಣಚಿತ್ರ ಕಲಾವಿದ ಒಂದು ಎತ್ತರದ ಕ್ಯಾನ್ವಾಸ್ ಇಟ್ಟುಕೊಂಡು ಆ ಗೀತೆಯ ಭಾವನೆಗಳಿಗೆ ಪೂರಕವಾದ ಒಂದು ಪೇಂಟಿಂಗ್ ರಚನೆಯಲ್ಲಿ ಮುಳುಗಿದ್ದರು. ಆ ಐದೂವರೆ ನಿಮಿಷದ ನೃತ್ಯ ಪೂರ್ತಿ ಆದಾಗ ಆ ಅದ್ಭುತ ಚಿತ್ರವೂ ಪೂರ್ತಿ ಆಗಿತ್ತು! ಜನರು ಎದ್ದುನಿಂತು ಚಪ್ಪಾಳೆ ಸುರಿದು ಆ ಕಲಾವಿದನನ್ನು ಅಭಿನಂದಿಸಿ ಆಗಿತ್ತು. ಅಂತಹ ಸಾವಿರಾರು ವೇದಿಕೆಗಳಲ್ಲಿ ಲೈವ್ ಆಗಿ ಪೇಂಟಿಂಗ್ ರಚನೆ ಮಾಡಿ ಎಲ್ಲಾ ಕಡೆಯಲ್ಲಿಯೂ ಗೆದ್ದಿದ್ದ ಚಿತ್ರಕಲಾವಿದ ಡಾಕ್ಟರ್ ಬಿ ಕೆ ಎಸ್ ವರ್ಮಾ! ಅವರು ಈ ಸೋಮವಾರ ನಮ್ಮನ್ನು ಆಗಲಿದ್ದಾರೆ. ಅವರಿಗೆ 72 ವರ್ಷ ತುಂಬಿತ್ತು.
ದೇವರ ಪೇಂಟಿಂಗ್ ಮತ್ತು ಪರಿಸರ ಚಿತ್ರ ಅವರದೇ ಬ್ರಾಂಡ್!
ವರ್ಮಾ ಅವರು ಎಲ್ಲಾ ರೀತಿಯ ಪೇಂಟಿಂಗ್ ಮಾಡಿದ್ದರೂ ದೇವರು ಮತ್ತು ಪರಿಸರ ಅವರ ಆಸಕ್ತಿಯ ವಿಷಯಗಳು. ಅದರಲ್ಲಿಯೂ ದೇವರ ಚಿತ್ರಗಳನ್ನು ಬಿಡಿಸುವುದರಲ್ಲಿ ಅವರಿಗೆ ಅವರೇ ಉಪಮೆ. ಒಮ್ಮೆ ಮಾಡಿದ ಚಿತ್ರವನ್ನು ಎರಡನೇ ಬಾರಿ ಅವರು ಮಾಡಿದ ಉದಾಹರಣೆಯೇ ಇಲ್ಲ! ಸಾವಿರಾರು ಜನರು ಸೇರಿದ ಸಭೆಯಲ್ಲಿ ಜನರು ಹೇಳಿದ ದೇವರ ಚಿತ್ರವನ್ನು ಅವರು ಬ್ರಷ್ ಅಥವಾ ನೂಲಿನ ಮೂಲಕ ಬಿಡಿಸುತ್ತಾ ಇದ್ದರೆ ಜನರು ಕಣ್ಣು ಮಿಟುಕಿಸದೆ ನೋಡುತ್ತಾರೆ. ತುಂಬಾ ತಾಳ್ಮೆ ಬಯಸುವ ಜಲವರ್ಣ ಕಲೆ, ಕಾವಿ ಕಲೆ, ಆಕ್ರಿಲಿಕ್, ಮರಳು ಶಿಲ್ಪ ಎಲ್ಲದರಲ್ಲಿಯೂ ಅವರ ಪಾರಮ್ಯ ಇತ್ತು. ಜಲವರ್ಣದಲ್ಲಿ ಅವರು ಬಿಡಿಸಿದ ಹೆಚ್ಚಿನ ಚಿತ್ರಗಳು ವಿಶ್ವವಿಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮನ ಚಿತ್ರಗಳನ್ನು ಹೋಲುವ ಕಾರಣ ಜನರು ಅವರನ್ನು ‘ಅಭಿನವ ರವಿವರ್ಮ’ ಎಂದೇ ಕರೆದರು.
ಅವರು ಬಂಗಾರದ ಜಿಂಕೆ, ನಿನಗಾಗಿ ನಾನು, ರಾಜೇಶ್ವರಿ, ಚದುರಿದ ಚಿತ್ರಗಳು ಮೊದಲಾದ ಕನ್ನಡ ಸಿನೆಮಾಗಳಿಗೆ ಕಲಾ ನಿರ್ದೇಶನ ಕೂಡ ಮಾಡಿದ್ದಾರೆ.
ಒಲಿಯಿತು ಜಾಗತಿಕ ಮಟ್ಟದ ಕೀರ್ತಿ!
ಅವರ ಕಲಾಕೃತಿಗಳು ಇಂಗ್ಲೆಂಡ್, ರಷ್ಯಾ, ಇಟೆಲಿ, ಫ್ರಾನ್ಸ್, ಅಬುಧಾಬಿ ಮೊದಲಾದ ರಾಷ್ಟ್ರಗಳಲ್ಲಿ ಪ್ರದರ್ಶನ ಕಂಡಿವೆ. ಅವರ ಉತ್ತಮ ಕಲಾಕೃತಿಗಳು ರಷ್ಯಾ ಉತ್ಸವದಲ್ಲಿ ಪ್ರದರ್ಶನ ಆಗಿವೆ. ಅವರ ನೂರಾರು ಕಲಾಕೃತಿಗಳು ವಿದೇಶಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಆಗಿವೆ. ಇಂಗ್ಲೆಂಡ್ ರಾಣಿ ಅವರ ಸ್ಟೇಜ್ ಶೋ ಕೂತು ನೋಡಿದ್ದಾರೆ. ನಮ್ಮ ರಾಷ್ಟ್ರಪತಿ ಭವನ ಮತ್ತು ತೀನ್ ಮೂರ್ತಿ ಭವನದಲ್ಲಿ ಅವರ ಅತ್ಯುತ್ತಮ ಕಲಾಕೃತಿಗಳು ಇವೆ. ರಾಘವೇಶ್ವರ ಸ್ವಾಮಿಗಳು ವರ್ಮಾ ಅವರನ್ನು ಆಸ್ಥಾನ ವಿದ್ವಾಂಸ ಎಂದು ಘೋಷಣೆ ಮಾಡಿ ಅವರನ್ನು ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿದ್ದಾರೆ. ಅವರ ಮೂಲಕ ನೂರಾರು ಕಲಾಕೃತಿಗಳನ್ನು ಪ್ರೇರಣೆ ನೀಡಿ ಬರೆಸಿದ್ದಾರೆ. ರಾಜ್ಯ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳ ಜೊತೆಗೆ ಸಾವಿರಾರು ಸನ್ಮಾನಗಳನ್ನು ಅವರು ದೇಶ ವಿದೇಶಗಳಲ್ಲಿ ಪಡೆದಿದ್ದಾರೆ.
ದಾಖಲೆ ಬರೆದ ಕಾವ್ಯ ಚಿತ್ರ!
ಶತಾವಧಾನಿ ಆರ್ ಗಣೇಶ ಅವರ ಕಾವ್ಯ ಚಿತ್ರ ಕಾರ್ಯಕ್ರಮಕ್ಕೆ ನಿರಂತರ 24 ಗಂಟೆ ನಿಂತು ಅವರು ಚಿತ್ರ ಬಿಡಿಸಿದ್ದು ರಾಷ್ಟ್ರೀಯ ದಾಖಲೆ. ನಾನು ಮಾಡಿದ್ದು ಏನೂ ಇಲ್ಲ, ಎಲ್ಲವನ್ನೂ ನನ್ನ ಕೈಯಿಂದ ದೇವರೇ ಮಾಡಿಸುತ್ತಾ ಇದ್ದಾರೆ ಎಂದವರು ಹೇಳಿದ್ದಾರೆ. ಅವರು ನಡೆಸಿದ ನೂರಾರು ಕಾವ್ಯ ಚಿತ್ರಗಳು ತುಂಬಾ ಸ್ಮರಣೀಯ ಆಗಿವೆ. ಅದರಲ್ಲಿ ಆರ್ ಗಣೇಶ್ ಜೊತೆಗಿನ ಕಾವ್ಯ ಚಿತ್ರವು ಹೆಚ್ಚು ಸ್ಮರಣೀಯ ಎಂದು ಅವರೇ ಹೇಳಿದ್ದಾರೆ. ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಎಲ್ಲವೂ ಅವರಿಗೆ ದೊರೆತಿವೆ!
ಅವರು ಬಿಡಿಸಿದ ದೇವರ ಚಿತ್ರಗಳನ್ನು ನಾವು ನಿಧಾನವಾಗಿ ನೋಡಿದಾಗ ಅವುಗಳಲ್ಲಿ ಅಡಕವಾಗಿರುವ ಮುಗ್ಧತೆ, ಪ್ರಬುದ್ಧತೆ, ಸೃಜನಶೀಲತೆ, ಬಣ್ಣಗಳ ಚಿತ್ತಾರ, ಉದ್ದ ಗೆರೆಗಳ ವೈಭವ… ಇವುಗಳು ಕಣ್ಣಿಗೆ ರಾಚುತ್ತವೆ.
ದೇವರ ಚಿತ್ರಗಳಿಗೆ ಪೂರಕವಾಗಿ ಅವರಿಗೆ ಸರಿಯಾದ ಪೌರಾಣಿಕ ಜ್ಞಾನ, ಸಾಂಸ್ಕೃತಿಕ ಜ್ಞಾನ ಮತ್ತು ದೇಶೀಯರ ನಂಬಿಕೆಗಳ ಬಗ್ಗೆ ಆಳವಾದ ಅಧ್ಯಯನ ಮತ್ತು ಆದರಗಳು ಇವೆ. ಆದ್ದರಿಂದ ಅವರ ಚಿತ್ರಗಳು ಎಲ್ಲ ಕಡೆಯಿಂದಲೂ ಮೆಚ್ಚುಗೆಯನ್ನು ಪಡೆದವು. ಅವರು ಬಿಡಿಸಿದ ರಾಘವೇಂದ್ರ ಸ್ವಾಮಿಗಳ ಜಲವರ್ಣದ ಚಿತ್ರಗಳು ನೋಡುಗರಲ್ಲಿ ಭಾರೀ ವಿದ್ಯುತ್ ಸಂಚಾರವನ್ನು ಉಂಟು ಮಾಡುತ್ತವೆ. ರಾಘವೇಂದ್ರ ಸ್ವಾಮಿಗಳ ಮುಗ್ಧತೆ, ದೈವಿಕ ಪ್ರಭಾವ, ಕಣ್ಣಲ್ಲಿ ಕಾಣುವ ಆಕರ್ಷಕವಾದ ತೇಜಸ್ಸು.. ಎಲ್ಲವೂ ಅವರ ವರ್ಣಚಿತ್ರಗಳಲ್ಲಿ ಎದ್ದು ಕಾಣುತ್ತವೆ.
ತಮ್ಮ ಎಲ್ಲ ಸಾಧನೆಗಳಿಗೆ ತನ್ನ ಚಿತ್ರಕಲೆಯ ಗುರುಗಳಾದ ಎ.ಎನ್. ಸುಬ್ಬರಾವ್ ಮತ್ತು ಎ.ಸಿ. ಆಚಾರ್ಯ ಅವರ ಆಶೀರ್ವಾದ ಕಾರಣ ಎಂದವರು ಹೇಳಿದ್ದಾರೆ. ಸ್ವತಃ ಚಿತ್ರ ಕಲಾವಿದೆಯಾಗಿದ್ದ ತನ್ನ ತಾಯಿ ಜಯಲಕ್ಷ್ಮಿ ಅವರ ಸ್ಫೂರ್ತಿ ಮತ್ತು ಮಾರ್ಗದರ್ಶನ ಕೂಡ ತನ್ನ ಯಶಸ್ಸಿಗೆ ಕಾರಣ ಎಂದವರು ಹೇಳಿದ್ದಾರೆ.
ಒಬ್ಬ ಅಂತಾರಾಷ್ಟ್ರೀಯ ಮಟ್ಟದ ಚಿತ್ರ ಕಲಾವಿದರು ಆಗಿದ್ದರೂ ಒಂದಿಷ್ಟು ಕೂಡ ದಣಿವೇ ಇಲ್ಲದೆ, ಒಂದಿಷ್ಟೂ ಇಗೋ ಇಲ್ಲದೆ ಅತ್ಯಂತ ಸರಳವಾಗಿ ಬದುಕಿದರು ಅವರು. ಕೆಲವು ಕಡೆ ಚಿತ್ರಕಲಾ ಪ್ರದರ್ಶನಕ್ಕೆ ಅವಕಾಶ, ದೊರೆಯದೆ ಹೋದಾಗ ಧರಣಿ ಕೂತು ಅವಕಾಶವನ್ನು ಪಡೆದವರು ಅವರು ಮತ್ತು ಬೇರೆಯವರಿಗೂ ಅವಕಾಶಗಳನ್ನು ಮಾಡಿಕೊಟ್ಟವರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪರಂಪರಾಗತ ವರ್ಚಸ್ಸು ಮತ್ತು ಪಾರಮ್ಯಗಳನ್ನು ಚಿತ್ರಕಲೆಯ ಮೂಲಕ ಎತ್ತರಿಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ. ಅವರಿಗೆ ನಮ್ಮ ಶ್ರದ್ಧಾಂಜಲಿ ಇರಲಿ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ವಾಣಿ ಜಯರಾಂ ಇನಿದನಿಯ ಮಹಾನ್ ಗಾಯಕಿ ಅಷ್ಟೇ ಅಲ್ಲ; ಕವಯಿತ್ರಿ, ಸಂಗೀತ ಚಿಕಿತ್ಸಕಿ ಕೂಡಾ ಆಗಿದ್ದರು!