Site icon Vistara News

ರಾಜ ಮಾರ್ಗ ಅಂಕಣ | ಕ್ರಿಕೆಟಿನ ಡಾನ್ ಬ್ರಾಡ್ಮನ್! ಕೊನೆಯ ಇನಿಂಗ್ಸ್‌ನಲ್ಲಿ 1 ಬೌಂಡರಿ ಬಾರಿಸಿದ್ದರೆ ಕಥೆಯೇ ಬೇರೆ ಆಗ್ತಿತ್ತು!

don bradman

ಆಗಸ್ಟ್ 14, 1948!
ಇಂಗ್ಲೆಂಡಿನ ಮಹೋನ್ನತ ಓವಲ್ ಕ್ರಿಕೆಟ್ ಗ್ರೌಂಡ್!
ಅದು ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ತಂಡಗಳ ಮುಖಾಮುಖಿ!
ಅದು ಆ್ಯಶಸ್‌ ಸರಣಿಯ ಕೊನೆಯ ಪಂದ್ಯ ಅನ್ನುವುದಕ್ಕಿಂತ ಆ ಲೆಜೆಂಡ್ ಕ್ರಿಕೆಟರ್‌ನ ಕೊನೆಯ ಪಂದ್ಯ ಅನ್ನುವುದು ಹೆಚ್ಚು ಸರಿ! ಆತ ಬ್ಯಾಟಿಂಗ್ ಮಾಡಲು ಬ್ಯಾಟ್ ಹಿಡಿದು ಬರುವಾಗ ಇನ್ನೊಂದು ಕುತೂಹಲ ಇತ್ತು. ಆತ ಅಂದು ಕೇವಲ ನಾಲ್ಕು ರನ್ ಮಾಡಿದ್ದರೆ ಆತನ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ಸರಾಸರಿ 100 ಆಗುತ್ತಿತ್ತು! ಅದು ಕ್ರಿಕೆಟ್ ದಾಖಲೆಯ ಮೌಂಟ್ ಎವರೆಸ್ಟ್ ದಾಖಲೆ ಆಗುತ್ತಿತ್ತು! ಅದಕ್ಕಾಗಿ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದರು.

ಬ್ಯಾಟಿಂಗ್ ಕ್ರೀಸಿಗೆ ಬಂದು ಇಂಗ್ಲಂಡ್‌ ಬೌಲರ್ ಎರಿಕ್ ಹೊಲ್ಲೀಸ್‌ನ ಎರಡನೇ ಬಾಲಿಗೆ ಔಟ್ ಆದಾಗ ಆತ ಖಾತೆಯನ್ನು ತೆರೆದಿರಲಿಲ್ಲ! ಅಲ್ಲಿಗೆ ಆತನ ಬ್ಯಾಟಿಂಗ್ ಅವರೇಜ್ 99.9೪ಕ್ಕೆ ನಿಂತು ಬಿಟ್ಟಿತು! ಎಲ್ಲರಿಗೂ ಒಮ್ಮೆಗೇ ನಿರಾಸೆ ಆದರೂ ಆ ಸರಾಸರಿಯು ಮುಂದೆ ಸಾವಿರಾರು ವರ್ಷ ಅಬಾಧಿತವಾಗಿ ಉಳಿಯುತ್ತದೆ ಎಂದು ಗೊತ್ತಿತ್ತು!

ಆತ ಆಸ್ಟ್ರೇಲಿಯಾದ ಲೆಜೆಂಡ್ ಕ್ರಿಕೆಟರ್ ಡಾನ್ ಬ್ರಾಡ್ಮನ್! ದಾಖಲೆಗಳ ಮಹಾರಾಜ ಅಂದರೆ ಅದು ಸರಿ! ಆತನಿಗೆ ಸರಿ ಸಮನಾದ ಇನ್ನೊಬ್ಬ ಕ್ರಿಕೆಟರ್ ಆನಂತರ ಹುಟ್ಟಿಲ್ಲ ಅಂದರೆ ಅದು ಕೂಡ ಸರಿ!
1928-1948ರ ಅವಧಿಯಲ್ಲಿ ಈ ಬಲಿಷ್ಠ ಬಲಗೈ ಆಟಗಾರ ಕ್ರಿಕೆಟ್ ಜಗತ್ತನ್ನು ವಸ್ತುಶಃ ಆಳಿದ್ದ!

ಒಟ್ಟು ಟೆಸ್ಟ್ ಪಂದ್ಯಗಳು- 52
ಇನ್ನಿಂಗ್ಸ್ ಸಂಖ್ಯೆ – 80
ಶತಕಗಳ ಸಂಖ್ಯೆ- 29
ದ್ವಿ ಶತಕಗಳ ಸಂಖ್ಯೆ -12
ತ್ರಿಶತಕಗಳ ಸಂಖ್ಯೆ- 2
ಒಟ್ಟು ರನ್‌-೬೯೯೬
ಬ್ಯಾಟಿಂಗ್ ಸರಾಸರಿ -99.94

ಅದರಲ್ಲಿ ಎರಡು ದಾಖಲೆಗಳು ಇಂದಿಗೂ ಅಬಾಧಿತ ಆಗಿವೆ. ಒಂದು ದ್ವಿಶತಕಗಳ ಸಂಖ್ಯೆ ಮತ್ತೊಂದು ಬ್ಯಾಟಿಂಗ್ ಸರಾಸರಿ. 99.94 ಸರಾಸರಿಯ ಹತ್ತಿರ ಯಾವ ಬ್ಯಾಟರ್‌ ಕೂಡ ಈವರೆಗೆ ಬಂದಿಲ್ಲ! ಮುಂದೆಯೂ ಬರುವ ಚಾನ್ಸ್ ಇಲ್ಲ! ಅವನದ್ದೇ ರಾಷ್ಟ್ರದ ಆಡಮ್ ವೋಗ್ಸ್ ಬ್ಯಾಟಿಂಗ್ ಸರಾಸರಿ ಈಗ ಎರಡನೆಯ ಸ್ಥಾನದಲ್ಲಿ ಇದೆ (61.87)!

ಕೇವಲ 5 ಅಡಿ 7 ಇಂಚು ಎತ್ತರದ ಈ ಬ್ಯಾಟಿಂಗ್ ಲೆಜೆಂಡ್ ಹೆಸರಲ್ಲಿ ಇನ್ನೂ ಮುರಿಯದ ಅಸಂಖ್ಯ ದಾಖಲೆಗಳು ಇವೆ. ಅವುಗಳಲ್ಲಿ ಕೆಲವನ್ನು ಉಲ್ಲೇಖ ಮಾಡಿದರೆ ನಿಮಗೆ ಆತನ ಸಾಧನೆಯ ಎತ್ತರ ವೇದ್ಯ ಆಗಬಹುದು. ಆಗಿನ ಕಾಲದಲ್ಲಿ ಟೆಸ್ಟ್ ಕ್ರಿಕೆಟ್ ಮಾತ್ರ ಇದ್ದ ಕಾರಣ ಆತನ ದಾಖಲೆಗಳು ಟೆಸ್ಟ್ ಕ್ರಿಕೆಟಿಗೆ ಮಾತ್ರ ಸೀಮಿತ ಆಗಿವೆ.

1) ಅತೀ ಎತ್ತರದ ಬ್ಯಾಟಿಂಗ್ ಸರಾಸರಿ 99.94!
2) ಕೇವಲ 52 ಟೆಸ್ಟ್ ಪಂದ್ಯಗಳಲ್ಲಿ 6996 ರನ್ ಪರ್ವತ! 29 ಶತಕಗಳು!
3) ಅತೀ ಹೆಚ್ಚು ದ್ವಿ ಶತಕಗಳು -12
4) ಅತೀ ಹೆಚ್ಚು ತ್ರಿಶತಕಗಳು – 2
(ಈಗ ಲಾರಾ, ಕ್ರಿಸ್ ಗೇಲ್ ಮತ್ತು ಸೆಹವಾಗ್ ಕೂಡ ಈ ದಾಖಲೆ ಹೊಂದಿದ್ದಾರೆ)
5) ಟೆಸ್ಟ್ ಸರಣಿಯ ಸರಾಸರಿ ಸ್ಕೋರ್ – 201.50
6) ಒಂದೇ ಟೆಸ್ಟ್ ಸರಣಿಯಲ್ಲಿ ಅತೀ ಹೆಚ್ಚು ಸ್ಕೋರ್ – 974! (ಆಗಿನ ಬಲಿಷ್ಠ ಟೀಮ್ ಇಂಗ್ಲೆಂಡಿನ ವಿರುದ್ಧ)
7) ಒಂದೇ ದಿನ 309 ರನ್ ಶಿಖರ!
8) ಒಂದೇ ರಾಷ್ಟ್ರದ ವಿರುದ್ಧ ಅತೀ ಹೆಚ್ಚು ರನ್ – 5028 ಅದು ಕೂಡ ಇಂಗ್ಲೆಂಡಿನ ವಿರುದ್ಧ!
9) ಕೇವಲ 45 ಟೆಸ್ಟ್ ಪಂದ್ಯಗಳಲ್ಲಿ 6000+ ರನ್!
10) ಪ್ರಥಮ ದರ್ಜೆ ಕ್ರಿಕೆಟಲ್ಲಿ ಯಾರೂ ಮುರಿಯಲು ಸಾಧ್ಯ ಆಗದ ದಾಖಲೆ – 669 ಇನ್ನಿಂಗ್ಸ್, 50,731 ರನ್, 211 ಶತಕಗಳು, 90.27 ಸರಾಸರಿ!

ಈ ದಾಖಲೆಗಳ ಹೊತ್ತಿಗೆ ಇಂಗ್ಲೆಂಡಿನ ಮತ್ತು ನ್ಯೂಜಿಲೆಂಡಿನ ತಂಡಗಳು ಬಾಡಿ ಲೈನ್ ಬೌಲಿಂಗ್ ಕಾರಣಕ್ಕೆ ಅಪಕೀರ್ತಿ ಹೊಂದಿದ್ದವು. ಅಂದರೆ ಬ್ಯಾಟ್ಸ್‌ಮನ್ ದೇಹಕ್ಕೆ ಗುರಿ ಇಟ್ಟು ಬೌಲಿಂಗ್ ಮಾಡುವ ಅಪಾಯಕಾರಿ ಬೌಲರ್‌ಗಳು ! ಅತ್ಯಂತ ವೇಗದ ಬೌಲರಗಳು ಕೂಡ ಇದ್ದರು. ಬ್ರಾಡ್ಮನ್ ಎತ್ತರ ತುಂಬ ಕಡಿಮೆ ಇತ್ತು. ಆದರೂ ಈ ದಾಖಲೆಗಳ ಪರ್ವತ ಆತನಿಗೆ ಸಾಧ್ಯ ಆಯ್ತು ಅಂದರೆ ಅದೇ ವಿಸ್ಮಯ!

ಇನ್ನೂ ಮೂರು ಅಂಶಗಳನ್ನು ನೀವು ಗಮನಿಸಬೇಕು
ಬ್ರಾಡ್ಮನ್ ಶತಕವನ್ನು ಪೂರ್ತಿ ಮಾಡುವ ಸಂದರ್ಭ 90-99ರ ಗಡಿಯಲ್ಲಿ ಒಮ್ಮೆಯೂ ಔಟ್ ಆಗಿಲ್ಲ! ದ್ವಿಶತಕ ಪೂರ್ತಿ ಮಾಡುವ ಹೊತ್ತಿನಲ್ಲಿ ಒಮ್ಮೆಯೂ 190-199ರ ನಡುವೆ ಔಟ್ ಆಗಿಲ್ಲ! ತ್ರಿಶತಕ ಪೂರ್ತಿ ಮಾಡುವ ದಾರಿಯಲ್ಲಿ ಒಮ್ಮೆಯೂ 290-299 ಗಡಿಯಲ್ಲಿ ಔಟ್ ಆಗಿಲ್ಲ! ಇದು ಡಾನ್ ಬ್ರಾಡ್ಮನ್ ನಿಖರತೆಯನ್ನು ತೋರಿಸುತ್ತದೆ!

ಸಚಿನ್‌-ಬ್ರಾಡ್ಮನ್ ಮುಖಾಮುಖಿ!
1998ರಲ್ಲಿ ಸಚಿನ್ ತನ್ನ ಕ್ರಿಕೆಟ್ ಕೆರಿಯರ್‌ನ ಶಿಖರದಲ್ಲಿ ಇದ್ದಾಗ ಬ್ರಾಡ್ಮನ್ ಆತನನ್ನು ಸ್ವತಃ ಕಾಲ್ ಮಾಡಿ ಆಸ್ಟ್ರೇಲಿಯಾಕ್ಕೆ ಕರೆಸುತ್ತಾನೆ. ಅದು ಲೆಜೆಂಡ್ ಆಟಗಾರನ 90ನೆಯ ಹುಟ್ಟುಹಬ್ಬ ಆಗಿತ್ತು!

ಅಂದು ಬ್ರಾಡ್ಮನ್ ಸಚಿನ್‌ಗೆ ತಾನು ಬಳಸಿದ ಒಂದು ಬ್ಯಾಟ್ ಸಹಿ ಮಾಡಿಕೊಡುತ್ತಾನೆ. ತನ್ನ ಹೆಂಡತಿಗೆ ‘ನೋಡೇ, ಇವನು ನನ್ನ ಹಾಗೆ ಬ್ಯಾಟಿಂಗ್ ಮಾಡ್ತಾ ಇದ್ದಾನೆ’ ಎಂದು ಪರಿಚಯ ಮಾಡುತ್ತಾನೆ!

ಡಾನ್‌ ಬ್ರಾಡ್ಮನ್‌ ಜತೆ ಸಚಿನ್‌

ಸಚಿನ್ ಆ ಭೇಟಿಯ ಬಗ್ಗೆ ಹೇಳಿರುವುದು ಇಷ್ಟು – ʻʻನಾನು ನರ್ವಸ್ ಆಗಿದ್ದೆ. ಮೌಂಟ್ ಎವರೆಸ್ಟ್ ಎದುರು ನಿಂತ ಹಾಗೆ ಫೀಲ್ ಆಗುತ್ತಿತ್ತು! ನಾನು ನಿಮ್ಮ ಯಶಸ್ಸಿನ ಗುಟ್ಟು ಏನು ಎಂದು ಅವರನ್ನು ಕೇಳಿದೆ. ಅದಕ್ಕೆ ಡಾನ್ ಹೇಳಿದ್ದು ಇಷ್ಟೇ! ನಾನು ಪ್ರತೀ ಬಾರಿ ಬ್ಯಾಟಿಂಗ್ ಮಾಡಲು ಹೋಗುವಾಗ ಅದು ನನ್ನ ಜೀವನದ ಮೊದಲ ಇನಿಂಗ್ಸ್‌ ಎಂದು ನಿರ್ಧರಿಸಿ ಆಡಲು ಹೋಗುವುದು! ಮತ್ತು ನಾನು ಎದುರಿಸುವ ಪ್ರತೀ ಎಸೆತ ಕೂಡ ನನ್ನ ಜೀವನದ ಮೊದಲ ಎಸೆತ ಎಂದು ನಿರ್ಧರಿಸಿ ಆಡುವುದು!”

ಅಂದ ಹಾಗೆ ಡಾನ್ ಬ್ರಾಡ್ಮನ್ 2001ರಲ್ಲಿ ನಿಧನರಾದಾಗ ಆತನಿಗೆ 92 ವರ್ಷ ಆಗಿತ್ತು. ಡಾನ್ ಬ್ರಾಡ್ಮನ್ ಕ್ರಿಕೆಟಿನ ‘ಸಹಸ್ರಮಾನದ ಲೆಜೆಂಡ್’ ಅನ್ನುವ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಆರ್ಕಿಮಿಡೀಸ್‌ನ ಸಾಧನೆ ಗೊತ್ತು, ಯುರೇಕಾದ ಕಥೆ ಗೊತ್ತು, ಜೀವನದ ಅಂತ್ಯ ಹೇಗಾಯ್ತು ಗೊತ್ತಾ?

Exit mobile version