Site icon Vistara News

ರಾಜ ಮಾರ್ಗ | ನಮ್ಮ ಬಾಲ್ಯಕ್ಕೆ ಕಲ್ಪನೆಗಳ ರೆಕ್ಕೆ ಕಟ್ಟಿ ಎಲ್ಲೆಲ್ಲೋ ಹಾರಾಡಿಸಿದ ಬಣ್ಣ ಬಣ್ಣದ ಚಂದಮಾಮ!

Chandamama

ಈಗಾಗಲೇ ಮಧ್ಯವಯಸ್ಸನ್ನು ಸಮೀಪಿಸಿದ ಅಥವಾ ದಾಟಿದ ನಮ್ಮಂಥವರ ಭಾವಕೋಶದಲ್ಲಿ ಶ್ರೀಮಂತವಾದ ಕಲ್ಪನಾ ಶಕ್ತಿ, ನಮ್ಮ ಹೆಮ್ಮೆಯ ಪುರಾಣಗಳ ಜ್ಞಾನ ಮತ್ತು ನಮ್ಮ ಸಂಸ್ಕೃತಿಯ ಪ್ರೀತಿಗಳನ್ನು ಬಿತ್ತಿದ ಒಂದು ಪತ್ರಿಕೆ ಇದ್ದರೆ ಅದು ಖಂಡಿತವಾಗಿಯೂ ‘ಚಂದಮಾಮ’! ಆ ಮಕ್ಕಳ ಮಾಸಪತ್ರಿಕೆಯನ್ನು ಬಾಲ್ಯದಲ್ಲಿ ಓದದವರು ಇಲ್ಲವೇ ಇಲ್ಲ ಎನ್ನಬಹುದು!

ಪ್ರತೀ ತಿಂಗಳು ಒಂದನೇ ತಾರೀಕಿಗೆ ಮಕ್ಕಳ ಕೈ ಸೇರುತ್ತಿದ್ದ, ಬಣ್ಣ ಬಣ್ಣದ ಚಿತ್ರಗಳ ಜೊತೆಗೆ ಆಕರ್ಷಕವಾದ ಕಥೆಗಳನ್ನು ಹೊಂದಿದ್ದ ಚಂದಮಾಮ ಪತ್ರಿಕೆಯನ್ನು ತಾನು ಮೊದಲು, ತಾನು ಮೊದಲು ಓದಬೇಕೆಂದು ಮಕ್ಕಳು ಜಗಳ ಮಾಡುತ್ತಿದ್ದ ಉದಾಹರಣೆಗಳು ಪ್ರತೀ ಮನೆಯಲ್ಲಿ ಇದ್ದವು!

ಪುರಾಣದ ಕಥೆ, ಜಾನಪದ ಕಥೆ, ಕಾಲ್ಪನಿಕ ಕಥೆ, ಪ್ರಾಣಿಪಕ್ಷಿಗಳ ಕಥೆಗಳು, ಪಂಚತಂತ್ರದ ಕಥೆಗಳು, ಸಾಹಸದ ಕಥೆ… ಇವೆಲ್ಲವನ್ನೂ ಒಳಗೊಂಡು ಸಿಂಗರಿಸಿಕೊಂಡು ಬರುತ್ತಿದ್ದ ಆ ಪತ್ರಿಕೆಯ ದಟ್ಟವಾದ ಪ್ರಭಾವವನ್ನು ಮರೆಯುವುದು ಸಾಧ್ಯವೇ ಇರಲಿಲ್ಲ. ರಾಮಾಯಣ, ಮಹಾಭಾರತ, ಕೃಷ್ಣನ ಬಾಲಲೀಲೆ, ವಿಕ್ರಮ ಬೇತಾಳ, ದಶಾವತಾರದ ಕಥೆಗಳು, ಧ್ರುವನ ಕಥೆ, ಅಶೋಕನ ಕಥೆ, ನಚಿಕೇತನ ಕಥೆ, ಪಂಚತಂತ್ರದ ಪ್ರಾಣಿ ಪಕ್ಷಿಗಳ ನೂರಾರು ಕಥೆ, ಬೆರಗು ಮೂಡಿಸುವ ಅಲ್ಲಾವುದ್ದೀನನ ಅದ್ಭುತ ದೀಪ, ತೆನಾಲಿ ರಾಮಕೃಷ್ಣನ ಕಥೆಗಳು, ಅರೇಬಿಯನ್ ನೈಟ್ಸ್ ಕಥೆಗಳು, ಕಿಂದರಿ ಜೋಗಿಯ ಕಥೆಗಳು, ಸಿಂಡ್ರೆಲಾ ಕಥೆ, ಸಿಂದಾಬಾದನ ಸಾಹಸ, ಅಕಬರ- ಬೀರಬಲ್ಲರ ಕಥೆ ಮೊದಲಾದವುಗಳನ್ನು ಬಣ್ಣ ಬಣ್ಣದ ಚಿತ್ರಗಳೊಂದಿಗೆ ನಾವು ಮೊದಲು ಓದಿದ್ದೇ ಚಂದಮಾಮ ಪತ್ರಿಕೆಯಲ್ಲಿ!

1947ರ ಹೊತ್ತಿಗೆ ಈ ಪತ್ರಿಕೆಯು ಮೊದಲು ತೆಲುಗು ಮತ್ತು ತಮಿಳು ಭಾಷೆಯಲ್ಲಿ ಆರಂಭವಾಯಿತು. ಅದನ್ನು ಸ್ಥಾಪನೆ ಮಾಡಿದವರು ಖ್ಯಾತ ತೆಲುಗು ಸಿನೆಮಾಗಳ ನಿರ್ಮಾಪಕರಾದ ನಾಗಿ ರೆಡ್ಡಿ ಮತ್ತು ಚಕ್ರಪಾಣಿ ಅವರು. 1948ರಿಂದ ಚಂದಮಾಮ ಪತ್ರಿಕೆಯು ಕನ್ನಡದಲ್ಲಿ ಕೂಡ ಪ್ರಸಾರ ಆರಂಭಿಸಿತು. ನಂತರ ಮರಾಠಿ, ಸಿಂಧಿ, ಹಿಂದಿ, ಮಲಯಾಳಂ, ಬೆಂಗಾಳಿ, ಇಂಗ್ಲಿಷ್, ಸಂಸ್ಕೃತ, ಸಿಂಹಲೀ, ಒಡಿಯಾ, ಅಸ್ಸಾಮಿ, ಸಂಥಾಲಿ ಭಾಷೆಗಳಲ್ಲಿ ಕೂಡ ಪ್ರಕಟಣೆ ಆರಂಭವಾಯಿತು.

1974ರ ಹೊತ್ತಿಗೆ ಕೇವಲ ಒಂದು ರೂಪಾಯಿ ಮುಖಬೆಲೆಯ ಈ ಪತ್ರಿಕೆಯ ಎರಡು ಲಕ್ಷಕ್ಕೂ ಅಧಿಕ ಪ್ರತಿಗಳು ಭಾರತದಲ್ಲಿ ಮಾರಾಟ ಆಗುತ್ತಿದ್ದವು! ಹಡಗಿನ ಮೂಲಕ ವಿದೇಶಗಳಿಗೆ ಹೋದ ಮೊದಲ ಪತ್ರಿಕೆ ಚಂದಮಾಮ! ಆ ಕಾಲದ ಬೇರೆ ಯಾವ ಮಾಸಪತ್ರಿಕೆ ಕೂಡ ಅಷ್ಟೊಂದು ಜನಪ್ರಿಯತೆಯನ್ನು ಪಡೆದ ಉದಾಹರಣೆ ಇಲ್ಲ! ಚಂದಮಾಮ ಪತ್ರಿಕೆಯ ಕೀರ್ತಿ ಅಷ್ಟಿತ್ತು. ಆಗ ಚಂದಮಾಮ ಎಂದರೆ ಮಕ್ಕಳ ಬೆರಗಿನ ಪ್ರಪಂಚವೇ ಆಗಿಹೋಗಿತ್ತು!

‘ಚಂದಮಾಮ’ ಪತ್ರಿಕೆಯ ಕನ್ನಡ ಆವೃತ್ತಿಯ ಪ್ರಧಾನ ಸಂಪಾದಕ ಆಗಿ ದೀರ್ಘ ಅವಧಿಗೆ ದುಡಿದ ಲೇಖಕರು ಮತ್ತು ಚಿತ್ರ ಕಲಾವಿದರು ಎಂಟಿವಿ ಆಚಾರ್ಯರು. ಅವರ ಬಗ್ಗೆ ವಿಸ್ತಾರವಾಗಿ ಇನ್ನೊಮ್ಮೆ ಬರೆಯುವೆ.

ರಾಷ್ಟ್ರಮಟ್ಟದ ಚಿತ್ರ ಕಲಾವಿದರಾದ ಆಚಾರ್ಯರು ಚಂದಮಾಮ ಪತ್ರಿಕೆಯ ಸಂಪಾದಕರಾಗಿ ಆಯ್ಕೆ ಆಗುವ ಮೊದಲು ಶ್ರೇಷ್ಟವಾದ ಹೆಚ್.ಎ ಎಲ್ ಕಂಪೆನಿಯಲ್ಲಿ ಅಧಿಕಾರಿಯ ಹುದ್ದೆಯಲ್ಲಿ ಇದ್ದರು. ಕೇವಲ ಕಲೆಯ ಮೇಲಿನ ಪ್ರೀತಿಯಿಂದ ಅವರು ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಚಂದಮಾಮ ಪತ್ರಿಕೆಯಲ್ಲಿ ಮೊದಲು ಚಿತ್ರ ಕಲಾವಿದರಾಗಿ ಸೇರಿದರು. ಮುಂದೆ ಅವರ ಸಾವಿರಾರು ಬಣ್ಣ ಬಣ್ಣದ ಚಿತ್ರಗಳಿಂದ ಚಂದಮಾಮ ಪತ್ರಿಕೆಯು ಸಿಂಗಾರಗೊಂಡಿತು. ಮುಂದೆ ಅದೇ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಅವರು ದೀರ್ಘ ಅವಧಿಗೆ ಕೆಲಸ ಮಾಡಿದರು. ಕನ್ನಡದಲ್ಲಿ ಕೂಡ ಚಂದಮಾಮ ಭಾರೀ ಜನಪ್ರಿಯ ಆಗಲು ಅವರ ಚಿತ್ರಗಳೇ ಕಾರಣ ಆಗಿದ್ದವು.

ಎಂ.ಟಿ.ವಿ ಆಚಾರ್ಯ ದಂಪತಿ

ಚಂದಮಾಮ ಪತ್ರಿಕೆಯ ಮೂಲಕ ಹೊಸ ಹೊಸ ಕಥೆಗಳನ್ನು ಅವರು ಪರಿಚಯ ಮಾಡಿದರು. ಸಣ್ಣ ಮಕ್ಕಳ ಮನೋವಿಕಾಸಕ್ಕೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಧಾರೆ ಎರೆದರು. ಸಮಗ್ರ ಮಹಾಭಾರತ ಧಾರಾವಾಹಿಗೆ ಸಾವಿರಾರು ಚಿತ್ರಗಳನ್ನು ಒಬ್ಬರೇ ಬರೆದದ್ದು ಒಂದು ವಿಶಿಷ್ಟ ದಾಖಲೆ! ಬಹು ದೀರ್ಘ ಅವಧಿಗೆ ಅವರು ಚಂದಮಾಮ ಪತ್ರಿಕೆಯನ್ನು ಬಹು ಸಮರ್ಥವಾಗಿ ಮುನ್ನಡೆಸಿದರು.

ತಮ್ಮ ಕಲಾಕೃತಿಗಳ ಜೊತೆಗೆ ಆಚಾರ್ಯರು ದೇಶ, ವಿದೇಶಗಳನ್ನು ಸುತ್ತಿದರು. ಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ, ತರಬೇತಿ ನೀಡಿದರು. ರಷ್ಯಾದ ಅವರ ಚಿತ್ರಕಲಾ ಪ್ರದರ್ಶನವನ್ನು ದಾಖಲೆ ಸಂಖ್ಯೆಯ ಜನರು ವೀಕ್ಷಣೆ ಮಾಡಿದ್ದರು. ತಮ್ಮ ಹುಟ್ಟೂರಾದ ಮೈಸೂರಿನಲ್ಲಿ ಎಳೆಯರಿಗೆ ಚಿತ್ರಕಲೆಯನ್ನು ಕಲಿಸಲು ‘ಆಚಾರ್ಯ ಕಲಾಭವನ’ ಎಂಬ ಶಾಲೆಯನ್ನು ಅವರು ತೆರೆದರು. ಅದರಲ್ಲಿ ದೂರದ ಊರುಗಳ ವಿದ್ಯಾರ್ಥಿಗಳಿಗೆ ಅಂಚೆಯ ಮೂಲಕ ಚಿತ್ರಕಲೆ ಕಲಿಯುವ ವ್ಯವಸ್ಥೆ ಮಾಡಿದರು. ಇದಕ್ಕೆಲ್ಲಾ ಹಣದ ಕೊರತೆಯು ತೀವ್ರವಾಗಿ ಕಾಡಿದಾಗ ಅವರು ತಮ್ಮ ಸ್ವಂತ ಮನೆಯನ್ನು ಮಾರಿದರು!

ಇಂದು ಅವರಿಂದ ಉಚಿತವಾಗಿ ಚಿತ್ರಕಲೆಯನ್ನು ಕಲಿತಿರುವ ಸಾವಿರಾರು ವಿದ್ಯಾರ್ಥಿಗಳು ದೇಶದ ಎಲ್ಲೆಡೆ ಸಿಗುತ್ತಾರೆ. ತಮ್ಮ ಗುರುವನ್ನು ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ. 1992ರಲ್ಲಿ ಮರಣ ಹೊಂದುವವರೆಗೂ ಅವರ ಕಲಾ ಸೇವೆಯು ಹಾಗೆಯೇ ಮುಂದುವರೆಯಿತು.

ಇನ್ನು ಮಕ್ಕಳ ಚಂದದ ‘ಚಂದಮಾಮ’ ಪತ್ರಿಕೆಯು ಜನಪ್ರಿಯತೆಯ ಶಿಖರದಲ್ಲಿ ಇರುವಾಗಲೇ ತಾಂತ್ರಿಕ ಕಾರಣಕ್ಕೆ 2013ರಲ್ಲಿ ತನ್ನ ಪ್ರಸಾರವನ್ನು ನಿಲ್ಲಿಸಿತು! ಒಟ್ಟು 65 ವರ್ಷಗಳ ಕಾಲ ನಿರಂತರ ಪ್ರಕಟಣೆ ಆದ ಒಂದು ಸುಂದರವಾದ ಕನ್ನಡದ ಮಕ್ಕಳ ಪತ್ರಿಕೆಯು ನಿಂತು ಹೋದದ್ದು ನಿಜಕ್ಕೂ ದೊಡ್ಡ ದುರಂತ ಎಂದೇ ಹೇಳಬಹುದು. ಒಂದು ಸುಂದರವಾದ ಅಧ್ಯಾಯವು ಅಲ್ಲಿಗೆ ಮುಗಿದು ಹೋಯಿತು. ಅಂತಹ ಒಂದು ಮಕ್ಕಳ ಪತ್ರಿಕೆಯು ಕನ್ನಡದಲ್ಲಿ ಇಂದಿಗೂ ಅಗತ್ಯವೇ ಆಗಿದ್ದು ಅದು ಮತ್ತೆ ಮೂಡಿಬರಲಿ ಎನ್ನುವುದೇ ನಮ್ಮೆಲ್ಲರ ಆಶಯ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಜಾಗತಿಕ ಕ್ರಿಕೆಟ್‌ ತಿರುಗಿ ನೋಡುವಂತೆ ಮಾಡಿದ ಹೀರೊ ಬಾಬರ್‌ ಅಜಂ

Exit mobile version