ಪ್ರತಿಯೊಬ್ಬರ ಭಾವಕೋಶದಲ್ಲಿ ಕೊನೆಯ ತನಕವೂ ನಿಕ್ಷೇಪ ಆಗಿರುವುದು ತನ್ನ ತಾಯಿಯ ಮಧುರ ಸ್ಮರಣೆ ಅನ್ನುವುದು ಅಮೃತ ವಾಕ್ಯ! ತಾಯಿಯು ನಮಗೆ ಕೊಟ್ಟ ಪ್ರಭಾವವನ್ನು ಮತ್ತು ನಿರಂತರ ಪ್ರೇರಣೆಯನ್ನು ಬೇರೆ ಯಾರೂ ಕೊಡಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬ ಯಶಸ್ವೀ ವ್ಯಕ್ತಿಯ ಬದುಕನ್ನು ಇಣುಕಿ ನೋಡಿದಾಗ ಅದರಲ್ಲಿ ಅವರ ತಾಯಿಯ ಪ್ರೇರಣೆ, ತ್ಯಾಗ ಮತ್ತು ಪ್ರೀತಿಯ ಉಲ್ಲೇಖಗಳು ಮಾತ್ರ ದೊರೆಯುತ್ತವೆ.
ಅದೇ ರೀತಿ ಇಲ್ಲೊಂದು ಮಹಾತಾಯಿಯ ಕತೆ ಇದೆ! ವಿವರವಾಗಿ ಕೇಳಿ.
1894ರ ಒಂದು ಸುಂದರ ಸಂಜೆ. ಲಂಡನ್ನಿನ ಒಂದು ದೊಡ್ಡ ನಾಟಕ ಮಂದಿರದಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಅವರೆಲ್ಲರೂ ಒಬ್ಬ ಗಾಯಕಿಯ ಹಾಡನ್ನು ಕೇಳಲು ಟಿಕೆಟ್ ತೆಗೆದುಕೊಂಡು ಬಂದಿದ್ದರು.
ಕಾರ್ಯಕ್ರಮ ಆರಂಭವಾಗಿ ಆಗಲೇ ಅರ್ಧ ಗಂಟೆ ಆಗಿತ್ತು. ಗಾಯಕಿಯು ಮೈಮರೆತು ಹಾಡುತ್ತಿದ್ದರು. ಸೇರಿದ ಜನರು ತನ್ಮಯರಾಗಿ ಆಕೆಯ ಹಾಡಿಗೆ ರಾಶಿ ರಾಶಿ ಚಪ್ಪಾಳೆಯನ್ನು ಸುರಿಯುತ್ತಿದ್ದರು. ಆಗ ಒಂದು ಘಟನೆಯು ನಡೆದುಹೋಯಿತು.
ಇದಕ್ಕಿದ್ದಂತೆ ಗಾಯಕಿಯ ಕಂಠವು ಒಡೆದು ಹೋಗಿ ಹಾಡು ನಿಂತಿತು! ಟಿಕೆಟ್ ತೆಗೆದುಕೊಂಡು ಬಂದಿದ್ದ ಜನರು ರೊಚ್ಚಿಗೆದ್ದರು. ಕಲ್ಲುಗಳು, ಚಪ್ಪಲಿಗಳು ಸ್ಟೇಜ್ ಮೇಲೆ ತೂರಿಕೊಂಡು ಬಂದವು. ಥಿಯೇಟರ್ ಮ್ಯಾನೇಜರ್ ಸ್ಟೇಜ್ ಮೇಲೆ ಬಂದು ವಿಧವಿಧವಾಗಿ ಬೇಡಿಕೊಂಡರೂ ಜನರ ಆಕ್ರೋಶ ಕಡಿಮೆ ಆಗಲಿಲ್ಲ. ಮ್ಯಾನೇಜರ್‌ಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ.
ಆತ ಸುತ್ತ ನೋಡಿದಾಗ ಒಬ್ಬ ಐದು ವರ್ಷದ ಪುಟ್ಟ ಹುಡುಗನು ಪರದೆಯ ಹಿಂದೆ ನಿಂತು ದೊಡ್ಡ ಕಣ್ಣು ಮಾಡಿ ವೇದಿಕೆಯನ್ನು ನೋಡುತ್ತಿದ್ದ. ಅವನ ಕಣ್ಣಲ್ಲಿ ಭಾರಿ ಹೊಳಪಿತ್ತು. ಅವನು ಅದೇ ಗಾಯಕಿಯ ಮಗ. ದಿನವೂ ಅಮ್ಮನ ಸೆರಗು ಹಿಡಿದು ನಾಟಕ ಮಂದಿರಕ್ಕೆ ಬರುತ್ತಿದ್ದ. ಅಮ್ಮನ ಹಾಡು, ನೃತ್ಯ ಮತ್ತು ಮಿಮಿಕ್ರಿ ಅವನಿಗೆ ತುಂಬಾ ಖುಷಿ ಕೊಡುತ್ತಿದ್ದವು. ಅವನಿಗೆ ಅಮ್ಮ ಎಂದರೆ ಭಾರಿ ಪ್ರೀತಿ.
ಮ್ಯಾನೇಜರ್‌ಗೆ ಈಗ ಮುಖ ಉಳಿಸಲು ಬೇರೆ ಯಾವ ದಾರಿಯೂ ಉಳಿದಿರಲಿಲ್ಲ. ಅವನು ಹುಡುಗನ ರಟ್ಟೆ ಹಿಡಿದು ಸ್ಟೇಜಗೆ ದೂಡಿದ. ‘ಏನಾದ್ರೂ ಮಾಡಿ ಮರ್ಯಾದೆ ಉಳಿಸೋ ಹುಡುಗ’ ಎಂದವನ ಕಿವಿಯಲ್ಲಿ ಉಸುರಿದ.
ಹುಡುಗನಿಗೆ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ತುಂಬಾ ಪ್ರೀತಿ ಮಾಡುವ ಅಮ್ಮನಿಗೆ ಏನೋ ಆಗಿದೆ ಎಂಬ ಆತಂಕ ಒಂದೆಡೆ ಇತ್ತು. ಅವನಿಗೆ ಅಮ್ಮನನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ.
ಅವನು ಅಂತಹ ಆತಂಕದ ಸಂದರ್ಭದಲ್ಲಿ ಕೂಡ ತನ್ನ ತಲೆ ಓಡಿಸಿದ. ತನಗೆ ತಾನೇ ಸ್ಫೂರ್ತಿ ತುಂಬಿಸಿಕೊಂಡ. ವೇದಿಕೆಯ ಮೇಲೆ ಓರೆಕೋರೆಯಾಗಿ ಓಡಿದ! ಪಲ್ಟಿ ಹೊಡೆದ! ಮಿಮಿಕ್ರಿ ಮಾಡಿದ! ತನ್ನ ದೇಹವನ್ನು ಬಾಗಿಸಿ ಅಡ್ಡಾದಿಡ್ಡಿ ನಡೆದ. ಜೋರು ಸದ್ದು ಮಾಡುತ್ತ ನಕ್ಕ! ಮೈಕ್ ಹಿಡಿದು ಏನೇನೋ ಚಿತ್ರ ವಿಚಿತ್ರ ಡೈಲಾಗ್ ಹೊಡೆದ!
ಸಭೆಯು ಒಮ್ಮೆಗೆ ಸ್ತಬ್ಧವಾಯಿತು. ಜನರು ಈ ಹುಡುಗನ ಹೊಸ ಅವತಾರ ನೋಡಿ ಸಿಟ್ಟು ಮರೆತರು. ಕಲ್ಲನ್ನು ಕೆಳಗೆ ಹಾಕಿ 10 ನಿಮಿಷಗಳ ಕಾಲ ಅವನ ಕಾಮಿಡಿಯ ಅಭಿನಯವನ್ನು ಚಪ್ಪಾಳೆ ಹೊಡೆದು ಖುಷಿ ಪಟ್ಟರು. ನಕ್ಕು ನಕ್ಕು ಸುಸ್ತಾದರು.
ಆ ದಿನವೇ ಆ ಸ್ಟೇಜ್ ಮೇಲೆ ಜಗತ್ತಿನ ಒಬ್ಬ ಮಹಾ ಕಾಮಿಡಿ ಸ್ಟಾರ್ ಹುಟ್ಟಿದ್ದ! ಅವನಿಗೆ ತನ್ನ ಸಾಮರ್ಥ್ಯವು ಏನೆಂದು ಆ ದಿನವೇ ಗೊತ್ತಾಗಿ ಹೋಗಿತ್ತು. ಅವನು ಮುಂದೆ ಇಡೀ ಜಗತ್ತನ್ನು ನಗಿಸಲು ಹೊರಟ.
ಅವನೇ ಚಾರ್ಲಿ ಚಾಪ್ಲಿನ್!
ಇನ್ನು ಆ ಮಹಾತಾಯಿಯ ಬಗ್ಗೆ ನಾನು ಹೇಳಬೇಕು. ಆಕೆ ಹನ್ನಾ ಹಾಲ್ ಚಾಪ್ಲಿನ್. ಆಕೆ ನಟಿ, ಗಾಯಕಿ, ನೃತ್ಯ ಪಟು, ಪಿಯಾನೋ ವಾದಕಿ ಮತ್ತು ಅದ್ಭುತ ಮಿಮಿಕ್ರಿ ಕಲಾವಿದೆ. ಮಹಾ ಪ್ರತಿಭಾವಂತೆ. ತನ್ನ ಹದಿನಾರನೇ ವಯಸ್ಸಿಗೇ ಸೂಪರ್ ಸ್ಟಾರ್ ಆದವಳು! ಆದರೆ ಆಕೆಯ ಗಂಡ (ಅಂದರೆ ಚಾರ್ಲಿಯ ತಂದೆ) ವಿಪರೀತ ಕುಡಿತದ ಚಟದಿಂದಾಗಿ ಆರ್ಥಿಕವಾಗಿ ಸೋತಿದ್ದ ಮತ್ತು ಆಕೆಗೆ ವಿಚ್ಛೇದನ ಕೊಟ್ಟು ಹೊರಟು ಹೋಗಿದ್ದ.
ಆ ಮಹಾತಾಯಿಯು ಚಾಪ್ಲಿನ್ ಮತ್ತು ತನ್ನ ಪಾಲಿಗೆ ಬಂದಿದ್ದ ಇನ್ನೊಬ್ಬ ಮಲಮಗ ಸಿಡ್ನಿ ಇವರಿಬ್ಬರನ್ನು ಸಾಕಲು ತುಂಬಾ ಪಾಡುಪಟ್ಟಳು. ಎಲ್ಲಾ ಉದ್ಯೋಗವನ್ನು ಮಾಡಿದರೂ ಯಾವುದು ಕೂಡ ಕೈ ಹಿಡಿಯಲಿಲ್ಲ. ಕೊನೆಗೆ ನೃತ್ಯ ಮತ್ತು ಮ್ಯೂಸಿಕ್ ಮಾತ್ರ ಆಸರೆ ಕೊಟ್ಟವು.
ಆದರೆ ಮುಂದೆ ಜೀವನದ ಸತತ ಸೋಲುಗಳು ಆಕೆಯ ಧೈರ್ಯವನ್ನು ಖಾಲಿ ಮಾಡಿದ್ದವು. ಆಕೆ ಬಹು ಸಣ್ಣ ಪ್ರಾಯದಲ್ಲಿ ಮಾನಸಿಕ ರೋಗಿಯಾದಳು. ಆಗ ಚಾರ್ಲಿ ಮತ್ತು ಅವನ ಮಲ ಸಹೋದರ ಸಿಡ್ನಿ ಇಬ್ಬರೂ ಶಾಲೆಗೆ ಹೋಗದೆ ಅನಾಥಾಶ್ರಮವನ್ನು ಸೇರಬೇಕಾಯಿತು. ಊಟ, ತಿಂಡಿಗೆ ಮತ್ತು ಅಮ್ಮನ ಔಷಧಿಗೆ ಹಣ ಹೊಂದಿಸಲು ಅವರಿಬ್ಬರೂ ಪಟ್ಟ ಕಷ್ಟವನ್ನು ಮರೆಯಲು ಸಾಧ್ಯವೇ ಇಲ್ಲ.
ಚಾಪ್ಲಿನ್ ತನ್ನ ತಾಯಿ ಹನ್ನಾ ಬಗ್ಗೆ ತನ್ನ ಆತ್ಮಚರಿತ್ರೆಯ ಪುಸ್ತಕದಲ್ಲಿ ಬರೆದಿರುವ ಕೆಲವು ವಾಕ್ಯಗಳು ತುಂಬಾ ಭಾವುಕವಾಗಿವೆ. ಅವುಗಳನ್ನು ಓದುತ್ತಾ ಹೋಗೋಣ.
‘ನಾನು ಜೀವನದಲ್ಲಿ ಕಲಿತದ್ದು ಎಲ್ಲವೂ ಅಮ್ಮನಿಂದ. ಅವಳ ಮಿಮಿಕ್ರಿ ಸಾಮರ್ಥ್ಯ ಅದ್ಭುತ ಆಗಿತ್ತು. ಅವಳು ಕಿಟಕಿ ಪಕ್ಕ ನಿಂತು ರಸ್ತೆಯಲ್ಲಿ ಹೋಗುತ್ತಿದ್ದ ಪ್ರತೀ ಒಬ್ಬರ ಹಾವ ಭಾವಗಳನ್ನು ತುಂಬಾ ಚಂದವಾಗಿ ಅನುಕರಣೆ ಮಾಡುತ್ತಿದ್ದಳು. ನಾನು ಮುಂದಕ್ಕೆ ಮಹಾ ನಟ ಆಗಬೇಕು ಎಂದು ಅವಳ ಕನಸಾಗಿತ್ತು’
‘ಅಮ್ಮ ತನ್ನ ಸಂಗೀತ ಮತ್ತು ನೃತ್ಯ ಪ್ರತಿಭೆಗಳಿಂದ ತನ್ನ ಹದಿನಾರನೇ ವರ್ಷಕ್ಕೇ ಸೂಪರ್ ಸ್ಟಾರ್ ಆದವಳು. ಆದರೆ ಮುಂದೆ ಜೀವನವಿಡೀ ಆಕೆ ಪಟ್ಟ ಕಷ್ಟ, ನೋವುಗಳು ಮತ್ತು ಅಪಮಾನದಿಂದ ಅವಳು ಪಟ್ಟ ನೋವು ಅಪಾರ. ಇವೆಲ್ಲವೂ ಕೊನೆಯ ದಿನಗಳಲ್ಲಿ ಆಕೆಯನ್ನು ಡಿಮೆನ್ಶಿಯಾ(ಮರೆವು) ಕಾಯಿಲೆಗೆ ದೂಡಿದವು. ನನ್ನನ್ನು ಗುರುತು ಹಿಡಿಯುವುದು ಕೂಡ ಆಕೆಗೆ ಕಷ್ಟ ಆಗ್ತಿತ್ತು’
‘ನಾನು ಆಕೆಯನ್ನು ನಗಿಸಲು ಒಂದರ ಹಿಂದೆ ಒಂದರಂತೆ ಅದ್ಭುತ ಕಾಮಿಡಿ ಸಿನೆಮಾಗಳನ್ನು ಮಾಡಿದೆ. ಆದರೆ ನನ್ನ ಒಂದು ಸಿನೆಮಾ ಕೂಡ ಆಕೆ ನೋಡಲೇ ಇಲ್ಲ ಅನ್ನುವುದು ನನ್ನ ಜೀವನದ ಕೊರತೆ. ಇದು ನನಗೆ ಜೀವನ ಪೂರ್ತಿಯಾಗಿ ಕಾಡುತ್ತಿತ್ತು’
ಅಂತಹ ಮಹಾನಟನನ್ನು ಜಗತ್ತಿಗೆ ಸಮರ್ಪಣೆ ಮಾಡಿದ ಆ ಮಹಾತಾಯಿಯು ಒಟ್ಟು 63 ವರ್ಷ ಬದುಕಿದ್ದರು. ‘ನನ್ನ ಜೀವನದ ಎಲ್ಲ ಸಾಧನೆಗಳು ನನ್ನ ತಾಯಿಗೆ ಸಮರ್ಪಿತ’ ಎಂದು ಚಾರ್ಲಿ ಚಾಪ್ಲಿನ್ ತನ್ನ ಆತ್ಮ ಚರಿತ್ರೆಯ ಪುಸ್ತಕದಲ್ಲಿ ಬರೆದಿದ್ದಾನೆ. ಅಂತಹ ಮಹಾತಾಯಿಗೆ ನನ್ನ ನಮನಗಳು.
ಇದನ್ನೂ ಓದಿ | ರಾಜ ಮಾರ್ಗ | ಹೆಣ್ಮಕ್ಕಳಿಗೆ ಶಾಲೆಯೇ ಕನಸಾಗಿದ್ದ ಕಾಲದಲ್ಲಿ ಆಕೆ ಎರಡು ನೊಬೆಲ್ ಗೆದ್ದರು!: ಇದು ಮೇರಿ ಕ್ಯೂರಿಯ ಕಥೆ