ಆ 21-22 ವರ್ಷದ ಯುವಕ ಆ ಉದ್ಯಾನದ ಮೂಲೆಯಲ್ಲಿ ಇರುವ ಒಂಟಿಮರದ ಬುಡದಲ್ಲಿ ಅಳುತ್ತ ಕೂತಿದ್ದ (Story of a young man who lost in love). ಅವನ ಕೈಯಲ್ಲಿ ಆ ಹುಡುಗಿ ಬರೆದುಕೊಟ್ಟು ಹೋಗಿದ್ದ ಎರಡು ಸಾಲಿನ ಒಂದು ಚೀಟಿ ಇತ್ತು. ಅವನು ನಿಜವಾಗಿ ಅಪ್ಸೆಟ್ ಆಗಿದ್ದ. ಏನಿತ್ತು ಆ ಚೀಟಿಯಲ್ಲಿ?
‘ ಹುಡುಗ, ನನ್ನನ್ನು ಮರೆತುಬಿಡು. ನಿನ್ನ ಪ್ರೀತಿಗೆ ನಾನು ವರ್ಥ್ ಅಲ್ಲ. ನನ್ನನ್ನು ಕ್ಷಮಿಸು. ನಿನಗೆ ನನಗಿಂತ ಒಳ್ಳೆ ಹುಡುಗಿ ಸಿಗಲಿ!’
ನಾನು ಅವನ ಹೆಗಲ ಮೇಲೆ ಕೈ ಹಾಕಿ ಸಮಾಧಾನ ಹೇಳಿದೆ. ಅವನು ನಿಧಾನವಾಗಿ ಓಪನ್ ಆದ. ಆದರೆ ಅಳು ನಿಲ್ಲಲಿಲ್ಲ.
‘ಸರ್, ನಾನು ಆ ಹುಡುಗಿಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡಿದ್ದೆ. ನಾವಿಬ್ಬರೂ ಒಬ್ಬರನ್ನು ಒಬ್ಬರು ತುಂಬಾ ಇಷ್ಟ ಪಟ್ಟಿದ್ದೆವು. ಇಬ್ಬರೂ ಸೇರಿ ಪ್ರೊಪೋಸ್ ಮಾಡಿದ್ದೆವು. ಆದರೆ ಈಗ ಏಕಪಕ್ಷೀಯವಾಗಿ ಅವಳೊಬ್ಬಳೇ ತೀರ್ಮಾನ ತೆಗೆದುಕೊಂಡಿದ್ದಾಳೆ. ಅವಳು ನನಗೆ ವರ್ಥ್ ಅಲ್ಲ ಎಂದು ಹೇಳಲು ಅವಳು ಯಾರು ಸರ್? ನನ್ನನ್ನು ಪ್ರೊಪೋಸ್ ಮಾಡುವಾಗ ಗೊತ್ತಿರಲಿಲ್ಲವಾ?’
‘ನಾನು ಅವಳನ್ನು ನಂಬಿದ್ದೆ ಸರ್. ಅವಳಿಗಾಗಿ ತುಂಬಾ ಖರ್ಚು ಮಾಡಿದ್ದೆ. ನನ್ನ ಎಟಿಎಂ ಕಾರ್ಡ್ ಅವಳಿಗೆ ಕೊಟ್ಟು ಪಾಸ್‌ವಾರ್ಡ್ ಕೂಡ ಹೇಳಿದ್ದೆ. ನಾನು ಅವಳ ಜಾತಿಯನ್ನು ಕೇಳಲಿಲ್ಲ. ಅವಳನ್ನೇ ಮದುವೆಯಾಗಬೇಕು ಎಂದು ನಿರ್ಧಾರ ಮಾಡಿದ್ದೆ. ಮನೆಯವರನ್ನು ಒಪ್ಪಿಸುವ ಪ್ರಯತ್ನ ಆರಂಭ ಮಾಡಿದ್ದೆ.’
‘ನಾನು ಅವಳನ್ನು ಎಷ್ಟರ ಮಟ್ಟಿಗೆ ನಂಬಿದ್ದೆ ಸರ್. ಅವಳು ನನಗೆ ವಿಷವನ್ನು ಕೊಟ್ಟು ಅದು ಸಾಯುವ ವಿಷ ಕಣೋ, ಕುಡಿದುಬಿಡು ಅಂದರೂ ಕಣ್ಣು ಮುಚ್ಚಿ ಕುಡಿದುಬಿಡುತ್ತಿದ್ದೆ ಸರ್! ನಾನು ಅವಳಿಗಾಗಿ ತುಂಬಾ ಕಳೆದುಕೊಂಡೆ ಸರ್ ‘
‘ಸಾಲು ಸಾಲು ಕ್ಲಾಸ್ ಬಂಕ್ ಮಾಡಿದ್ದೇನೆ. ಡಿಗ್ರಿಯಲ್ಲಿ ನನ್ನ ಹಲವು ಸಬ್ಜೆಕ್ಟ್ ಪೆಂಡಿಂಗ್ ಇದೆ. ಎಲ್ಲೆಲ್ಲೋ ಕೈ ಸಾಲವನ್ನು ಮಾಡಿದ್ದೇನೆ. ಹಲವು ಗೆಳೆಯರನ್ನು ಕಳೆದುಕೊಂಡಿದ್ದೇನೆ. ಈಗ ನನ್ನ ಹೆತ್ತವರಿಗೆ ಮುಖ ತೋರಿಸಲು ಧೈರ್ಯ ಬರ್ತಾ ಇಲ್ಲ. ಅವಳು ಯಾಕ್ಸಾರ್ ಹೀಗೆ ಮಾಡಿದಳು? ಜಗತ್ತಿನ ಎಲ್ಲ ಹುಡುಗೀರು ಹೀಗೆಯಾ ಸರ್? ನಾನೇನು ತಪ್ಪು ಮಾಡಿದ್ದೇನೆ? ನಾನೆಲ್ಲವನ್ನೂ ಕಳೆದುಕೊಂಡೆ ಸರ್ ‘
ಅವನ ಅಳು ನಿಲ್ಲಲೇ ಇಲ್ಲ. ಅವನ ಭುಜವನ್ನು ಪ್ರೀತಿಯಿಂದ ಹಿಡಿದು ಧೈರ್ಯವನ್ನು ತುಂಬುವ ಕೆಲಸ ನಾನು ಮಾಡಿದೆ. ನನಗೆ ಆ ಹುಡುಗಿಯ ಪರಿಚಯ ಕೂಡ ಇತ್ತು.
‘ಪ್ರೀತಿ ಮಾಡಿದ್ದು ಖಂಡಿತ ತಪ್ಪಲ್ಲ. ನಿನ್ನ ನಂಬಿಕೆಯೂ ತಪ್ಪಲ್ಲ. ಆದರೆ ತಪ್ಪು ವ್ಯಕ್ತಿಯನ್ನು ನಂಬಿದ್ದು ತಪ್ಪು. ನಿನ್ನ ಪ್ರೀತಿಗೆ ಅವಳು ವರ್ಥ್ ಅಲ್ಲ ಅನ್ನೋದನ್ನು ಅವಳೇ ಸಾಬೀತು ಮಾಡಿಕೊಂಡು ಬಿಟ್ಟಳು. ಇನ್ನು ನಿನ್ನ ಸ್ಟಡೀಸ್ ಮೇಲೆ ಕಾನ್ಸಂಟ್ರೇಟ್ ಮಾಡು. ನೀನು ಕಳೆದುಕೊಂಡದ್ದು ಏನೂ ಇಲ್ಲ. ಬದುಕಿ ತೋರಿಸು’ ಎಂದು ಅವನನ್ನು ನನ್ನ ಬೈಕಲ್ಲಿ ಕೂರಿಸಿ ಅವನ ಮನೆಯತನಕ ಬಿಟ್ಟು ಬಂದೆ.
ದಾರಿಯಲ್ಲಿ ಅವನು ಹೇಳಿದ ಅದೇ ಹುಡುಗಿ ಬೇರೊಬ್ಬ ಹುಡುಗನ ಜೊತೆಗೆ ಕಾಫೀ ಡೇನಲ್ಲಿ ನಗು ನಗುತ್ತ ಕಾಫಿ ಸವಿಯುವುದನ್ನು ನಾನು ನೋಡಿದೆ. ಪುಣ್ಯಕ್ಕೆ ಅವನು ನೋಡಲಿಲ್ಲ!
ಭರತ ವಾಕ್ಯ
ಇಷ್ಟು ಹೇಳಿದಲ್ಲಿಗೆ ಎಲ್ಲ ಹುಡುಗರೂ ಮುಗ್ಧರು, ಹುಡುಗೀರು ಸ್ವಾರ್ಥಿಗಳು ಎಂದು ಅರ್ಥ ಅಲ್ಲ. ಇದೇ ರೀತಿ ಯಾರನ್ನೋ ಅತಿಯಾಗಿ ನಂಬಿ ತಮ್ಮ ಬದುಕನ್ನು ಕೆಡಿಸಿಕೊಂಡ ನೂರಾರು ಹುಡುಗಿಯರನ್ನು ನಾನು ನೋಡಿದ್ದೇನೆ.
ಪ್ರೀತಿ ಅನ್ನೋದು ಅದ್ಭುತವಾದ ಪ್ರೇರಣೆ. ಅದು ನಮ್ಮ ಬದುಕಿನಲ್ಲಿ ಭರವಸೆಯನ್ನು ಹುಟ್ಟಿಸಬೇಕು. ನಮ್ಮನ್ನು ಖಾಲಿ ಮಾಡೋದಲ್ಲ. ಯಾರನ್ನಾದರೂ ಪ್ರೊಪೋಸ್ ಮಾಡುವ ಮೊದಲು ಕೊನೆಯವರೆಗೂ ಜೊತೆಗೆ ಇರುತ್ತೇನೆ ಎಂದು ಪ್ರಾಮಿಸ್ ಕೊಡುವ ಹುಡುಗ, ಹುಡುಗಿಯರಿಗೆ ನಾನು ಹೇಳೋದು – ಪ್ರೀತಿ ಉಳಿಸಿಕೊಳ್ಳುವ ಬದ್ಧತೆ ಇಲ್ಲದವರು ಯಾಕ್ರೀ ಪ್ರೀತಿ ಮಾಡ್ತೀರಾ?
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ರೆಸ್ಲಿಂಗ್ ರಿಂಗ್‌ನಲ್ಲಿ ಎಷ್ಟೇ ಪೆಟ್ಟು ತಿಂದರೂ ಕ್ಯಾರೇ ಅನ್ನದ ಜಾನ್ ಸೀನಾ!