Site icon Vistara News

ರಾಜ ಮಾರ್ಗ ಅಂಕಣ : ಜಗತ್ತಿನಲ್ಲಿ ಭರವಸೆ ಸೃಷ್ಟಿಸಿ ; ರೋಟರಿಯ ಈ ವರ್ಷದ ಘೋಷ ವಾಕ್ಯ

rotary international paul harris

1905ರಲ್ಲಿ ಪೌಲ್ ಹ್ಯಾರಿಸ್ ಎಂಬ ಪುಣ್ಯಾತ್ಮನಿಂದ ಆರಂಭವಾದ ರೋಟರಿ ಸಂಸ್ಥೆಯು (Rotary International) ಮುಂದೆ ಜಾಗತಿಕ ಸಂಘಟನೆಯಾಗಿ ಬೆಳೆಯಿತು. Sevice above SELF (ಸ್ವಾರ್ಥ ಮೀರಿದ ಸೇವೆ) ಅನ್ನುವುದು ಈ ಸಂಸ್ಥೆಯ ಧ್ಯೇಯ ವಾಕ್ಯ. ಅದರ ಮೇಲೆ ನಂಬಿಕೆ ಇರಿಸಿ ಈಗಾಗಲೇ ಜಗತ್ತಿನ 170ಕ್ಕಿಂತ ಹೆಚ್ಚು ದೇಶಗಳ 1.4 ಮಿಲಿಯನ್ ರೋಟರಿ ಸದಸ್ಯರು ವಿವಿಧ ಆಯಾಮಗಳ ಸಮಾಜಸೇವಾ ಕಾರ್ಯಗಳಲ್ಲಿ (Social service) ತೊಡಗಿಕೊಂಡಿದ್ದಾರೆ. ಜಗತ್ತಿನಾದ್ಯಂತ ರೋಟರಿ ಚಾರಿಟಿ ಆಸ್ಪತ್ರೆಗಳು, ಕಣ್ಣಿನ ಆಸ್ಪತ್ರೆಗಳು, ವೃದ್ಧಾಶ್ರಮಗಳು, ಅನಾಥ ಮಕ್ಕಳ ಶಾಲೆಗಳು, ರಕ್ತ ನಿಧಿ ಬ್ಯಾಂಕುಗಳು, ರೋಟರಿ ಶಾಲೆಗಳು ಇಂದು ಸ್ಥಾಪನೆ ಆಗಿವೆ (ರಾಜ ಮಾರ್ಗ ಅಂಕಣ).

ಜಗತ್ತಿನ ಅತೀ ದೊಡ್ಡ ಸಮಾಜ ಸೇವಾ ಸಂಸ್ಥೆ ಎಂದು ವಿಶ್ವಸಂಸ್ಥೆಯಿಂದ ರೋಟರಿ ಸಂಸ್ಥೆ ಮಾನ್ಯತೆ ಪಡೆದಿದೆ. ಸಾಕ್ಷರತೆ, ಹಸಿವು ನಿರ್ಮೂಲನ, ದೃಷ್ಟಿ ದಾನ, ಶಿಕ್ಷಣ, ಆರೋಗ್ಯ, ಬಡತನ ನಿರ್ಮೂಲನ ಮೊದಲಾದ ಶೀರ್ಷಿಕೆಗಳಲ್ಲಿ ರೋಟರಿ ಸಂಸ್ಥೆಯು ಒಂದು ಸರಕಾರವೇ ಮಾಡುವಷ್ಟು ಕಾರ್ಯಗಳನ್ನು ಮಾಡಿದೆ!

ಕೀರ್ತಿ ಪಡೆದ ರೋಟರಿ ಫೌಂಡೇಶನ್ ಮತ್ತು ಪ್ರಾಜೆಕ್ಟ್‌ಗಳು!

ರೋಟರಿ ಸದಸ್ಯರ ದೇಣಿಗೆಗಳಿಂದ ಸ್ಥಾಪನೆ ಆಗಿರುವ ರೋಟರಿ ಫೌಂಡೇಶನ್ ಇಂದು ಜಗತ್ತಿನ ಅತೀ ದೊಡ್ಡ ಚಾರಿಟಿ ಸಂಸ್ಥೆ. ಅದು ನೀಡುವ ಮ್ಯಾಚಿಂಗ್ ಗ್ರಾಂಟುಗಳ ಕೊಡುಗೆಯಿಂದ ಜಗತ್ತಿನಾದ್ಯಂತ ಬಹಳ ದೊಡ್ಡ ಸೇವಾ ಕಾರ್ಯಗಳು ನಡೆಯುತ್ತಿವೆ. ಭಾರತದಲ್ಲಿ ಭಾರೀ ಯಶಸ್ವೀ ಆದ ‘ಪಲ್ಸ್ ಪೋಲಿಯೋ’ ಪ್ರೊಜೆಕ್ಟ್ ಪ್ರಾಯೋಜನೆ ಮಾಡಿದ್ದು ಇದೇ ರೋಟರಿ ಸಂಸ್ಥೆ.

ಇದೇ ರೀತಿ ರೋಟರಿಯ ‘ಹ್ಯಾಪಿ ಸ್ಕೂಲ್’ ಶೀರ್ಷಿಕೆಯ ಪ್ರಾಜೆಕ್ಟ್ ಭಾರತದಲ್ಲಿರುವ ಸಾವಿರಾರು ಸರಕಾರಿ ಶಾಲೆಗಳನ್ನು ಸರ್ವಾಂಗ ಸುಂದರವಾಗಿ ಮಾಡಿದೆ. ರೋಟರಿ ಫೌಂಡೇಶನ್ನಿನ ಸಾವಿರಾರು ಯಶೋಗಾಥೆಗಳನ್ನು ಅಧ್ಯಯನ ಮಾಡಿ ನಾನು ರೋಮಾಂಚನ ಪಟ್ಟಿದ್ದೇನೆ. ಇದು ನಿಜವಾದ ಅರ್ಥದಲ್ಲಿ ಸ್ವಾರ್ಥ ಮೀರಿದ ಸೇವೆಯ ದೃಷ್ಟಾಂತಗಳೇ ಆಗಿವೆ. ರೋಟರಿ ಸಂಸ್ಥೆಯು ಹದಿಹರೆಯದ ವಿದ್ಯಾರ್ಥಿಗಳಿಗೆ ಏರ್ಪಡಿಸುವ ರೈಲಾ (RYLA) ಎಂಬ ನಾಯಕತ್ವದ ತರಬೇತಿ ಶಿಬಿರವು ತುಂಬಾ ಯಶಸ್ವೀ ಆಗುತ್ತಿದೆ.

ರೋಟರಿ ಜಾಗತಿಕ ಅಧ್ಯಕ್ಷರ ಘೋಷ ವಾಕ್ಯ

ಪ್ರತೀ ವರ್ಷವೂ ರೋಟರಿ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಆಯ್ಕೆ ಆಗುವ ಅಂತಾರಾಷ್ಟ್ರೀಯ ಅಧ್ಯಕ್ಷರು ಒಂದು ವರ್ಷ ಪೂರ್ತಿ ರೋಟರಿ ಸಂಸ್ಥೆಯ ರಾಯಭಾರಿ ಆಗಿರುತ್ತಾರೆ. ಅವರು ಕೊಡುವ ಸ್ಲೋಗನ್ ಆಧಾರವಾಗಿ ಇಟ್ಟುಕೊಂಡು ರೋಟರಿ ಸಂಸ್ಥೆಗಳು ತಮ್ಮ ಇಡೀ ವರ್ಷದ ಕಾರ್ಯಕ್ರಮಗಳನ್ನು ರೂಪಿಸುತ್ತವೆ. ಅದೇ ರೀತಿ 2023-24ರ ರೋಟರಿ ಅಧ್ಯಕ್ಷ ಗೋರ್ಡನ್ ಆರ್ ಮೆಕ್ನಲ್ಲಿ (Gordan R McNally) ಅವರು ತಮ್ಮ ರೋಟರಿ ಸದಸ್ಯರಿಗೆ ನೀಡಿದ ಈ ವರ್ಷದ ಸ್ಲೋಗನ್ ನನಗೆ ಅತ್ಯಂತ ಅರ್ಥಪೂರ್ಣ ಎಂದು ಅನ್ನಿಸಿತ್ತು.

ಗೋರ್ಡನ್ ಆರ್ ಮೆಕ್ನಲ್ಲಿ

CREATE HOPE IN THE WORLD.

‘ಜಗತ್ತಿನಲ್ಲಿ ಭರವಸೆಯನ್ನು ಸೃಷ್ಟಿಸಿ’ ಅನ್ನುವುದು ಅವರ ಸ್ಲೋಗನ್. ಜಗತ್ತು ನಿಂತಿರುವುದೇ ಭರವಸೆಗಳ ಮೇಲೆ. ತುಂಬಾ ಸಂಕಷ್ಟಗಳ ನಡುವೆ ಬದುಕುತ್ತಿರುವ ಜನರೂ ಕೂಡ ಇಂದಲ್ಲ ನಾಳೆ ನಮ್ಮ ಬದುಕು ಸುಂದರವಾಗುತ್ತದೆ ಎಂಬ ಭರವಸೆಯ ಮೇಲೆ ಬದುಕುತ್ತಿದ್ದಾರೆ. ಸಂಕಷ್ಟಗಳು ಎದುರಾದಾಗ ಎಲ್ಲರೂ ಡಿಪ್ರೆಸ್ ಆದರೆ, ಆತ್ಮಹತ್ಯೆ ಪ್ರಯತ್ನ ಮಾಡಿದರೆ ಈ ಜಗತ್ತು ಭಾರೀ ಭಯಾನಕ ಆಗಿರುತ್ತಿತ್ತು. ಪ್ರತಿಯೊಬ್ಬನೂ ತನ್ನ ಮಿತಿಯಲ್ಲಿ ತನ್ನ ಸುತ್ತಲಿನ ಜಗತ್ತಿನಲ್ಲಿ ಒಂದಿಷ್ಟು ಭರವಸೆಯನ್ನು ಉದ್ದೀಪನ ಮಾಡಬೇಕು ಎನ್ನುವುದು ಆ ಸ್ಲೋಗನಿನ ಆಶಯವಾಗಿದೆ. ಜಗತ್ತಿನಾದ್ಯಂತ ಸಂಶೋಧನಾ ನಿರತರಾದ ವಿಜ್ಞಾನಿಗಳು, ವಿವಿಧ ಸಾಂಕ್ರಾಮಿಕ ಕಾಯಿಲೆಗಳಿಗೆ ಲಸಿಕೆ ಹುಡುಕುತ್ತಿರುವ ವೈದ್ಯರು, ತಮ್ಮ ಸಂಪತ್ತಿನ ಬಹು ದೊಡ್ಡ ಭಾಗವನ್ನು ನೊಂದವರಿಗಾಗಿ ವಿನಿಯೋಗ ಮಾಡುವ ಉದ್ಯಮಿಗಳು, ಶಾಲಾ ಕಾಲೇಜುಗಳಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣವನ್ನು ನೀಡುತ್ತಿರುವ ಶಿಕ್ಷಕರು, ತಮಗೆ ದೊರೆತ ಅಧಿಕಾರವನ್ನು ಉಪಯೋಗಿಸಿ ನೊಂದವರ ನೆರವಿಗೆ ನಿಲ್ಲುವ ರಾಜಕೀಯ ನೇತಾರರು, ರಾಷ್ಟ್ರ ರಕ್ಷಣೆಯ ಹೊಣೆ ಹೊತ್ತ ಸೈನಿಕರು, ಶ್ರಮಿಕರು, ಹಸಿದ ಮಂದಿಗಾಗಿ ಆಹಾರ ಬೆಳೆಯುವ ಕೃಷಿಕರು, ತಂತ್ರಜ್ಞರು, …………..ಇಂತವರು ಖಂಡಿತವಾಗಿಯೂ ವಿಶ್ವದಲ್ಲಿ ಭರವಸೆಯ ಕಿಂಡಿಗಳಾಗಿ ನಿಲ್ಲುವ ಅರ್ಹತೆ ಹೊಂದಿರುತ್ತಾರೆ.

Rotary International social activites

ದೀಪವಾರಿದ ಕಂಗಳಲ್ಲಿ ಬೆಳಕು ತುಂಬುವ ಕಾರ್ಯ!

ಜಗತ್ತಿನ 10% ಜನಸಂಖ್ಯೆಯನ್ನು ಖಾಲಿ ಮಾಡುವ ಸಿಡುಬು ರೋಗಕ್ಕೆ ಲಸಿಕೆ ಕಂಡುಹಿಡಿದ ಇಂಗ್ಲೆಂಡಿನ ಡಾಕ್ಟರ್ ಎಡ್ವರ್ಡ್ ಜೆನ್ನರ್, ಅತ್ಯಂತ ಮಾರಣಾಂತಿಕವಾದ ರೇಬಿಸ್( ಹುಚ್ಚುನಾಯಿ ಕಡಿತ) ಲಸಿಕೆ ಕಂಡು ಹಿಡಿದ ಲೂಯಿ ಪ್ಯಾಶ್ಚರ್‌, ಪ್ಲೇಗ್ ಜ್ವರಕ್ಕೆ ಲಸಿಕೆ ಕಂಡು ಹಿಡಿದ ಹಾಪ್ಕೀನ್, ಜಗತ್ತಿನ ಮೊಟ್ಟಮೊದಲ ಬದಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿ ಗೆದ್ದ ದಕ್ಷಿಣ ಆಫ್ರಿಕಾದ ವೈದ್ಯ ಡಾಕ್ಟರ್ ಕ್ರಿಶ್ಚಿಯನ್ ಬರ್ನಾರ್ಡ್, ತನ್ನ ಇಡೀ ಬದುಕನ್ನು ರೋಗಿಗಳ ಸೇವೆಗೆ ಮುಡಿಪು ಆಗಿಟ್ಟ ದೀಪಧಾರಿ ನರ್ಸ್ ಫ್ಲಾರೆನ್ಸ್ ನೈಟಿಂಗೇಲ್, ಅಂಧರು ಓದುವ, ಬರೆಯುವ ಲಿಪಿಯನ್ನು ಕಂಡುಹಿಡಿದು ಮಹದುಪಕಾರ ಮಾಡಿದ ಲೂಯಿಸ್ ಬ್ರೈಲ್…. ಹೀಗೆ ಕತ್ತಲೆಯ ದಾರಿಯಲ್ಲಿ ಬೆಳಕಿನ ಕಿಂಡಿಗಳಾಗಿ ನಿಂತ ದಾರ್ಶನಿಕ ವ್ಯಕ್ತಿಗಳ ಪಟ್ಟಿ ತುಂಬಾ ದೀರ್ಘವಾಗಿದೆ. ಇವರೆಲ್ಲರೂ ಜಗತ್ತಿನಲ್ಲಿ ಭರವಸೆಯನ್ನು ಹರಡಿದ ಲೆಜೆಂಡ್ ವ್ಯಕ್ತಿಗಳು ಆಗಿದ್ದಾರೆ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಜನರ ಪ್ರೀತಿಗಾಗಿ ಏಳು ಗುಡ್ಡ ಅಗೆದು ರಸ್ತೆ ಮಾಡಿದ ಭಾಪ್ಕರ್ ಮೇಷ್ಟ್ರು

ಸೂರ್ಯನೇ ಆಗಬೇಕಾಗಿಲ್ಲ, ಹಣತೆ ಆದರೂ ಸಾಕು

ರೋಟರಿ ಸದಸ್ಯರು ಮಾತ್ರವಲ್ಲ, ಪ್ರತಿಯೊಬ್ಬರೂ ಈ ದಿಸೆಯಲ್ಲಿ ಯೋಚಿಸಬೇಕು. ನಾನು ಲೆಜೆಂಡ್ ಅಲ್ಲ, ಸಾಮಾನ್ಯ ವ್ಯಕ್ತಿ ಎಂದು ಭಾವಿಸಿಕೊಂಡ ವ್ಯಕ್ತಿಗಳೂ ಈ ಕಾರ್ಯವನ್ನು ಅದ್ಭುತವಾಗಿ ಮಾಡಬಹುದು. ಅದಕ್ಕೆ ಪೂರಕವಾಗಿ ರವೀಂದ್ರನಾಥ್ ಠಾಗೋರ್ ಹೇಳಿದ ಕಥೆ ಹೀಗಿದೆ.

ಸಂಜೆ ಸೂರ್ಯ ಮುಳುಗಿ ಕತ್ತಲೆ ಆವರಿಸುವಾಗ ನಕ್ಷತ್ರಗಳು ‘ಅಯ್ಯೋ, ಸೂರ್ಯ ಮುಳುಗಿ ಬಿಟ್ಟ. ಇನ್ನು ಯಾರು ಬೆಳಕು ತುಂಬಿಸುತ್ತಾರೆ?’ ಎಂದು ಕಣ್ಣೀರು ಸುರಿದವಂತೆ.

ಆಗ ಕೋಣೆಯ ಮೂಲೆಯಲ್ಲಿ ಹಚ್ಚಿಟ್ಟ ಪುಟ್ಟ ಹಣತೆ ಹೇಳಿತಂತೆ: ‘ನಕ್ಷತ್ರಗಳೇ, ಅಳಬೇಡಿ. ಸೂರ್ಯ ಕೊಡುವಷ್ಟು ಬೆಳಕನ್ನು ಕೊಡುವ ಶಕ್ತಿ ನನಗಿಲ್ಲ. ಆದರೆ ನನ್ನ ಸುತ್ತ ಬೆಳಕನ್ನು ನಾನು ಹರಡಬಲ್ಲೆ. ನನಗೆ ಅಷ್ಟೇ ಸಾಕು!’

Exit mobile version