Site icon Vistara News

ರಾಜ ಮಾರ್ಗ ಅಂಕಣ: ಯಲ್ಲೋ ಆರ್ಮಿ ಮತ್ತು ಧೋನಿ ಎಂಬ ಲೆಜೆಂಡ್‌, ಐಪಿಎಲ್‌ ಶಿಖರದಲ್ಲಿ ಸಿಎಸ್‌ಕೆ

MS Dhoni IPL 2023

2023ರ ಐಪಿಎಲ್ ಕೂಟವು ಈಗ ರೋಮಾಂಚನದ ಶಿಖರ ಮುಟ್ಟಿದ್ದು ಸೋಮವಾರದ ಪಂದ್ಯ ಮುಗಿದಾಗ ಚೆನ್ನೈ ಸೂಪರ್ ಕಿಂಗ್ಸ್( CSK) ತಂಡವು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಪ್ಲೇಸಲ್ಲಿ ಬಂದು ಕೂತಿದೆ! ಒಟ್ಟು ಏಳು ಪಂದ್ಯಗಳಲ್ಲಿ ಐದು ಪಂದ್ಯ ಗೆದ್ದಿರುವ ‘ವಿಸಿಲ್ ಪೋಡು’ ತಂಡವು ಹತ್ತು ಅಂಕಗಳ ಜೊತೆಗೆ ಪಾಯಿಂಟ್ ಟೇಬಲಿನ ಟಾಪ್‌ನಲ್ಲಿದೆ.

ಯಾವ ತಂಡವನ್ನು ಅಂಕಲ್‌ಗಳ ತಂಡ ಎಂದು ಕ್ರಿಕೆಟ್ ಪಂಡಿತರು ಟೀಕೆ ಮಾಡಿದ್ದರೋ ಆ ತಂಡದಲ್ಲಿ ಈಗ ವಿದ್ಯುತ್ಸಂಚಾರ ಆರಂಭವಾದ ಹಾಗೆ ಕಾಣುತ್ತಿದೆ. ಅದಕ್ಕೆ ಕಾರಣ ಲೆಜೆಂಡ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ!

ಚೆನ್ನೈ ತಂಡದಲ್ಲಿ ಯಾವ ಸ್ಟಾರ್ ಆಟಗಾರ ಕೂಡ ಇಲ್ಲ!

2008ರಿಂದಲೂ ಐಪಿಎಲ್ ಆಡುತ್ತ ಬಂದಿರುವ ಧೋನಿ ಇಂದು ಕ್ರಿಕೆಟಿನ ಆರಾಧ್ಯ ದೇವರಾಗಿ ರೂಪುಗೊಂಡಿದ್ದಾರೆ. ಯಾವುದೇ ದೊಡ್ಡ ಸ್ಟಾರ್ ಆಟಗಾರರು ಇಲ್ಲದ ಕೇವಲ ಸಾಮಾನ್ಯ ಆಟಗಾರರನ್ನು ಹೊಂದಿರುವ CSK ತಂಡವನ್ನು ಧೋನಿ ತನ್ನ ಮಾಂತ್ರಿಕ ಸ್ಪರ್ಶದ ಮೂಲಕ ಕಟ್ಟಿ ನಿಲ್ಲಿಸಿದ್ದು ಸಾಮಾನ್ಯ ಸಂಗತಿ ಅಲ್ಲ! ಇವತ್ತಿಗೂ ಆ ತಂಡಕ್ಕೆ ಧೋನಿಯೇ ಪ್ರೇರಣೆ ಮತ್ತು ಸ್ಫೂರ್ತಿ!

41 ವರ್ಷದ ಧೋನಿ ಇಂದಿಗೂ ಉಳಿಸಿಕೊಂಡಿರುವ ಕ್ರಿಯಾಶೀಲತೆ, ಚರಿಷ್ಮಾ, ಖದರು ಮತ್ತು ಫಿಟ್ನೆಸ್ ಯಾರಿಗೂ ಸಾಧ್ಯವಾಗದ ಮಾತು. ಧೋನಿಗೆ ಅದು ಸಾಧ್ಯವಾಗಿದೆ ಎಂದರೆ ಅದು ಕ್ರಿಕೆಟ್ ಬಗ್ಗೆ ಅವರಿಗೆ ಇರುವ ಪ್ಯಾಶನ್ ಮತ್ತು ಬದ್ಧತೆಗಳ ಮೊತ್ತ ಎಂದು ನನ್ನ ಭಾವನೆ. ವಿಕೆಟಿನ ಹಿಂದೆ ತಾಳ್ಮೆಯ ಪರ್ವತವಾಗಿ ಧೋನಿ ನಿಂತಿದ್ದಾರೆ ಅಂದರೆ ಇಡೀ CSK ತಂಡದ ಪ್ರತಿಯೊಬ್ಬ ಆಟಗಾರನೂ ತನ್ನ ತಂಡಕ್ಕಾಗಿ 200% ಕೊಡಲು ಸಿದ್ಧವಾಗುತ್ತಾರೆ!

ಸಿಎಸ್‌ಕೆ ತಂಡದ ಸ್ನೇಹಪರತೆ

ಐಪಿಎಲ್ ಇತಿಹಾಸದ ಲೆಜೆಂಡ್ ಆಟಗಾರ!

ಇಷ್ಟೊಂದು ಪ್ರೀತಿ ಮತ್ತು ಗೌರವ ಪಡೆದುಕೊಂಡ ಇನ್ನೊಬ್ಬ ಕ್ರಿಕೆಟರ್ ನಿಮಗೆ, ನಮಗೆ ಸಿಗಲು ಸಾಧ್ಯವೇ ಇಲ್ಲ! ಭಾರತದ ಯಾವ ಸ್ಟೇಡಿಯಮ್‌ನಲ್ಲಿ CSK ಆಡುತ್ತಿದೆ ಅಂತಾದರೂ ಇಡೀ ಸ್ಟೇಡಿಯಂ ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಚೆನ್ನೈ ತಂಡದ ಬೆಂಬಲಕ್ಕೆ ನಿಲ್ಲುತ್ತದೆ. ಕೋಲ್ಕೊತಾದಲ್ಲಿ ಮೊನ್ನೆ ನಡೆದ ಪಂದ್ಯದಲ್ಲಿ ಸೇರಿದ ಬಹುಪಾಲು ಜನರು ತಮ್ಮದೇ KKR ತಂಡವನ್ನು ಮರೆತು CSK ತಂಡದ ಬೆಂಬಲಕ್ಕೆ ನಿಂತಿದ್ದರು! ಇದಕ್ಕೆ ಕಾರಣ ಧೋನಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ!

ಧೋನಿಯ ಈ ರೀತಿಯ ಜನಪ್ರಿಯತೆಗೆ ಕಾರಣವೇನು?

ಈ ಪ್ರಶ್ನೆಗೆ ನಾವು ನೂರಾರು ಕಾರಣಗಳನ್ನು ಪಟ್ಟಿ ಮಾಡಬಹುದು. ಭಾರತಕ್ಕಾಗಿ 2004ರಿಂದ 2019ರವರೆಗೆ ಧೋನಿ ಆಡಿದ ವೀರೋಚಿತವಾದ ಇನ್ನಿಂಗ್ಸ್‌ಗಳನ್ನು ಭಾರತೀಯರು ಮರೆಯಲು ಸಾಧ್ಯವೇ ಇಲ್ಲ. ಭಾರತ ಕಂಡ ಅತ್ಯಂತ ಯಶಸ್ವೀ ಕ್ಯಾಪ್ಟನ್ ಅಂದರೆ ಅದು ಧೋನಿ ಮತ್ತು ಧೋನಿ ಮಾತ್ರ! ಭಾರತಕ್ಕೆ ಮೂರು ವಿಶ್ವಮಟ್ಟದ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ಏಕೈಕ ಕ್ಯಾಪ್ಟನ್ ಆತ. 2007ರ T20 ವಿಶ್ವ ಕಪ್, 2011ರ ಸ್ಮರಣೀಯ ODI ವಿಶ್ವಕಪ್, 2013ರ ಚಾಂಪಿಯನ್ ಟ್ರೋಫಿ ಇವುಗಳನ್ನು ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ಧೋನಿ!

ಒಬ್ಬ ಕ್ಯಾಪ್ಟನ್ ಆಗಿ ಆತನು ತನ್ನ ತಂಡದಲ್ಲಿ ಟೀಮ್ ಸ್ಪಿರಿಟ್ ತುಂಬಿಸುವುದು, ಒತ್ತಡ ನಿರ್ವಹಣೆ ಮಾಡುವುದು, ಎಳೆಯರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು, ಗೆಲ್ಲುವ ತಂತ್ರಗಾರಿಕೆ ರೂಪಿಸುವುದು, ಕೊನೆಯ ಚೆಂಡಿನವರೆಗೆ ಸೋಲನ್ನು ಒಪ್ಪಿಕೊಳ್ಳದೆ ಇರುವುದು, ಗ್ರೌಂಡಿನಲ್ಲಿ ಒಂದಿಷ್ಟೂ ತಾಳ್ಮೆ ಕೆಡದೆ ಪರ್ವತವಾಗಿ ನಿಲ್ಲುವುದು, ಎದುರಾಳಿ ಆಟಗಾರರನ್ನು ಕೂಡ ಗೌರವದಿಂದ ಕಾಣುವುದು… ಹೀಗೆ ಧೋನಿ ಬೇರೆ ಕ್ಯಾಪ್ಟನ್‌ಗಳಿಗಿಂತ ಭಾರಿ ಎತ್ತರದಲ್ಲಿ ನಿಲ್ಲುತ್ತಾರೆ.

41ನೆಯ ವಯಸ್ಸಿನಲ್ಲಿ ಆತನ ಫಿಟ್ನೆಸ್ ಅದು ನಿಜಕ್ಕೂ ಅದ್ಭುತ! ವಿಕೇಟಿನ ಹಿಂದೆ ಚಿರತೆಯ ಚುರುಕುತನ ತೋರುವ ಧೋನಿ ರನ್ನಿಗಾಗಿ ವಿಕೆಟ್ ನಡುವೆ ಓಡುವಾಗ ಹದಿಹರೆಯದ ಆಟಗಾರರನ್ನು ನಾಚಿಸುತ್ತಾರೆ! ಅದು ಧೋನಿಯ ಸ್ಪೆಷಾಲಿಟಿ.

ಅವನ ದೃಷ್ಟಿ ಇರುವುದು ಟ್ರೋಫಿ ಮೇಲೆ

DSR ಸಕ್ಸಸ್ ರೇಟ್‌ನಲ್ಲಿ CSK ತಂಡವು ( 85.15%) ಹೊಂದಿದೆ ಅಂದರೆ ಅದಕ್ಕೆ ಕಾರಣ ಧೋನಿಯೇ! ಯಾವ ಗ್ರೌಂಡಿನಲ್ಲಾದರೂ ಧೋನಿ ಒಂದೆರಡು ಬಾಲ್ ಆದರೂ ಆಡಲಿ, ಒಂದಾದರೂ ಹೆಲಿಕಾಪ್ಟರ್ ಶಾಟ್ ಹೊಡೆಯಲಿ ಎಂದು ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಾರೆ ಅಂದರೆ ಧೋನಿಯ ಜನಪ್ರಿಯತೆ ಯಾರಿಗಾದರೂ ಅರ್ಥ ಆಗುತ್ತದೆ. ಚೆನ್ನೈ ಆಡುವ ಪ್ರತೀ ಐಪಿಎಲ್ ಪಂದ್ಯದ ಆರಂಭದಿಂದ ಅಂತ್ಯದವರೆಗೆ ಸ್ಟೇಡಿಯಮ್‌ನಲ್ಲಿ ಸಮುದ್ರದ ಘೋಷದ ಹಾಗೆ ಕೇಳಿ ಬರುವ ಉದ್ಘೋಷ ಅದೊಂದೇ ಧೋನಿ, ಧೋನಿ, ಧೋನಿ!

CSK ತಂಡದ ಕ್ರಿಕೆಟ್ ಯೋಧರು!

ಧೋನಿ 2008ರಿಂದಲೂ ಕ್ಯಾಪ್ಟನ್ ಆಗಿರುವ CSK ತಂಡದ (ಎರಡು ವರ್ಷ ಧೋನಿ ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ತಂಡದ ಪರವಾಗಿ ಆಡಬೇಕಾಯಿತು) ಆತ್ಮಬಲವನ್ನು ಹೆಚ್ಚಿಸುತ್ತ ಬಂದಿದ್ದಾರೆ. 2010, 2011, 2018, 2021ರಲ್ಲಿ ಹೀಗೆ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ತಂಡ ಅದು.

2023ರಲ್ಲಿ CSK ತಂಡದ ಸಾಮಾನ್ಯರಲ್ಲಿ ಸಾಮಾನ್ಯ ಆಟಗಾರರೂ ಮಿಂಚುತ್ತಿದ್ದಾರೆ. ಕೇವಲ 50 ಲಕ್ಷಕ್ಕೆ ಖರೀದಿ ಆಗಿದ್ದ ಅಜಿಂಕ್ಯ ರಹಾನೆ ರನ್ ಮಳೆಯನ್ನೇ ಸುರಿಸುತ್ತಿದ್ದಾರೆ! ಕ್ರಿಕೆಟಿನ ಮೂರೂ ಫಾರ್ಮ್ಯಾಟ್‌ಗಳಲ್ಲಿ ವಿಫಲ ಆಟಗಾರ ಎಂದೇ ಬಿಂಬಿತವಾಗಿದ್ದ ರಹಾನೆ ಈ ಬಾರಿ ಕಿಚ್ಚು ಹಚ್ಚುವ ಆಟಗಾರ ಆಗಿದ್ದಾರೆ! ಧೋನಿಯ ನಂಬಿಕೆಯ ಓಪನರ್ ಋತುರಾಜ್ ಡ್ರೀಮ್ ಓಪನಿಂಗ್ ಕೊಡುತ್ತಿದ್ದಾರೆ. ಬೇರೆ ಫ್ರಾಂಚೈಸಿ ಟೀಮಗಳಲ್ಲಿ ವಿಫಲರಾಗುತ್ತಿದ್ದ ಶಿವಂ ದುಬೇ, ಅಂಬಾಟಿ ರಾಯುಡು ವಸ್ತುಶಃ ಸುಂಟರಗಾಳಿ ಇನಿಂಗ್ಸ್ ಕಟ್ಟುತ್ತಿದ್ದಾರೆ. ಮೊಯಿನ್ ಆಲಿ, ರವೀಂದ್ರ ಜಡೇಜಾ, ಡೆವೊನ್ ಕಾನ್ವೆ, ದೀಪಕ್ ಚಹರ್, ಪ್ರೀಟೋರಿಯಸ್, ಸ್ಯಾಂಟ್ನರ್‌, ಮಹೇಶ ತೀಕ್ಷಣ ಎಲ್ಲರೂ ಗೆಲ್ಲುವ ಇನ್ನಿಂಗ್ಸ್ ಆಡುತ್ತಿದ್ದಾರೆ. ತುಷಾರ್ ದೇಶಪಾಂಡೆ, ಪತಿರಾಣಾ ಮೊದಲಾದ ಹೊಸ ಮುಖಗಳು ಧೋನಿ ಕೊಟ್ಟ ಪ್ರತೀ ಒಂದು ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಯೆಲ್ಲೋ ಆರ್ಮಿಯ ಪ್ರತಿಯೊಬ್ಬ ಆಟಗಾರನೂ ಈ ಬಾರಿ ಐಪಿಎಲ್ ಟ್ರೋಫಿಯನ್ನು ಗೆಲ್ಲುವುದರ ಮೂಲಕ ಧೋನಿಗೆ ಗೆಲುವಿನ ವಿದಾಯ ಕೊಡಬೇಕು ಎನ್ನುವ ಸಂಕಲ್ಪದ ಜೊತೆಗೆ ಆಡುತ್ತಿದ್ದಾರೆ. ಹಾಗೆ ಈ ಬಾರಿಯ ಅದ್ಭುತ ಫಲಿತಾಂಶಗಳು ನಮ್ಮ ಕಣ್ಣ ಮುಂದಿವೆ.

ಮುಂದೆ ಎಷ್ಟು ವರ್ಷ ಐಪಿಎಲ್ ಕೂಟ ಇರುತ್ತದೆಯೋ ಅಲ್ಲಿಯವರೆಗೆ ಮಹೇಂದ್ರ ಸಿಂಗ್ ಧೋನಿ ಹೆಸರು ಶಾಶ್ವತ ಆಗಿರುತ್ತದೆ ಅನ್ನೋದೇ ಭರತ ವಾಕ್ಯ!

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಡಾ. ರಾಜ್‌; ಅವರು ತೆರೆ ಮೇಲೆ ಮಾತ್ರ ಅಲ್ಲ, ಆಫ್‌ ಸ್ಕೀನ್‌ ಕೂಡಾ ಹೀರೊನೆ… ಯಾಕೆಂದರೆ..

Exit mobile version