ಐದು ವರ್ಷಗಳ ಅವಧಿಯಲ್ಲಿ ಕರ್ನಾಟಕದ ಲೋಕಾಯುಕ್ತ ಹುದ್ದೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಜಸ್ಟೀಸ್ ಸಂತೋಷ್ ಹೆಗ್ಡೆ ಅವರು ಶನಿವಾರ (ನವೆಂಬರ್ ೧೨) ದ.ಕ. ಜಿಲ್ಲೆಯ ಅಂತಾರಾಷ್ಟ್ರೀಯ ಸಂಸ್ಥೆಯಾದ ಜೇಸಿಐ ಪಂಜ ಪಂಚಶ್ರೀಯ ರಜತ ಮಹೋತ್ಸವದ ಮೆಗಾ ಕಾರ್ಯಕ್ರಮದಲ್ಲಿ ಮಾಡಿದ ಪ್ರಧಾನ ಭಾಷಣವು ಸೇರಿದ ಸಾವಿರಾರು ಜನರಲ್ಲಿ ವಿದ್ಯುತ್ಸಂಚಾರ ಉಂಟುಮಾಡಿತ್ತು! ಅವರು ಹೇಳಿದ ಪ್ರಮುಖ ಅಂಶಗಳು ಎಲ್ಲರಿಗೂ ಸಂಗತ ಆಗಿರುವ ಕಾರಣ ಅದನ್ನು ಈ ಅಂಕಣದ ಭಾಗವಾಗಿ ನೀಡುತ್ತಿದ್ದೇನೆ.
ಭ್ರಷ್ಟರಿಗೆ ರಾಜಮರ್ಯಾದೆ ಸಲ್ಲ
ನಾವು ಸಣ್ಣವರಾಗಿದ್ದಾಗ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ಆಪಾದನೆ ಹೊತ್ತು ಸೆರೆಮನೆಗೆ ಹೋದರೆ ಅವರಿಗೆ ಸಮಾಜವು ಬಹಿಷ್ಕಾರ ಹಾಕುತ್ತಿತ್ತು. ಅವರ ಮನೆಯವರಿಗೂ ಸಾಮಾಜಿಕ ಬಹಿಷ್ಕಾರ ಹಾಕಲಾಗುತ್ತಿತ್ತು. ಆದರೆ ಈಗ ಅತೀ ಭ್ರಷ್ಟರು ಸೆರೆಮನೆಗೆ ಹೋಗುವಾಗ ಮತ್ತು ಜಾಮೀನು ಪಡೆದು ಹಿಂದೆ ಬರುವಾಗ ಅವರಿಗೆ ರಾಜಮರ್ಯಾದೆ ಕೊಡುವ, ಮೆರವಣಿಗೆ ನಡೆಸುವ ದೃಶ್ಯ ನಾವು ನೋಡುತ್ತಾ ಇದ್ದೇವೆ. ಇದು ಖಂಡನೀಯ. ಅಂತವರಿಗೆ ಸಮಾಜ ಬಹಿಷ್ಕಾರ ಹಾಕದೆ ಭ್ರಷ್ಟಾಚಾರ ತಡೆಯಲು ಸಾಧ್ಯವೇ ಇಲ್ಲ.
ಭ್ರಷ್ಟರಿಗೆ ಶಿಕ್ಷೆಯ ಹೆದರಿಕೆ ಇಲ್ಲ!
ಇಂದು ಭ್ರಷ್ಟಾಚಾರದಲ್ಲಿ ಚೀನಾ ಎಲ್ಲಕ್ಕಿಂತ ಮುಂದೆ ಇದೆ. ಆದರೆ ಆಶ್ಚರ್ಯ ಅಂದರೆ ಅಲ್ಲಿ ಭ್ರಷ್ಟರಿಗೆ ಗಲ್ಲು ಶಿಕ್ಷೆ ಇದೆ. ಆದರೂ ಅಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದೇ ಇಲ್ಲ. ಭಾರತದಲ್ಲಿ ದೊಡ್ಡ ಭ್ರಷ್ಟಾಚಾರಕ್ಕೆ ಏಳು ವರ್ಷಗಳ ಸೆರೆಮನೆ ವಾಸದ ಶಿಕ್ಷೆ. ಮಹಾ ಭ್ರಷ್ಟರಿಗೆ ಈ ಶಿಕ್ಷೆಯ ಬಗ್ಗೆ ಭಯವೇ ಇಲ್ಲ. ಏಕೆಂದರೆ ಅವರಿಗೆ ಜಾಮೀನು ಮಂಜೂರು ಮಾಡಿಸುವ ವ್ಯವಸ್ಥೆಯು ಬೇಗ ಆಗುತ್ತದೆ. ಸೆರೆಮನೆಯಿಂದ ಹೊರಬಂದ ಕೂಡಲೇ ಯಾವುದಾದರೂ ಒಂದು ಪಕ್ಷ ಚುನಾವಣೆಯ ಟಿಕೆಟ್ ಕೊಟ್ಟು ದುಡ್ಡಿನ ಬಲದಲ್ಲಿ ಅವರನ್ನು ಗೆಲ್ಲಿಸುತ್ತಾರೆ. ಒಮ್ಮೆ ಚುನಾವಣೆ ಗೆದ್ದ ನಂತರ ಅವರನ್ನು ಹಿಡಿಯುವವರು ಯಾರು? ರಾಜಕೀಯ ಕ್ಷೇತ್ರವು ಇಂದು ಭ್ರಷ್ಟರಿಗೆ ಅತೀ ದೊಡ್ಡ ಗಂಗೋತ್ರಿ ಆಗಿರುವುದು ದುರಂತ. ಒಂದು ಭ್ರಷ್ಟಾಚಾರದ ಕೇಸ್ ಇದ್ದರೂ ಅಂತಹ ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಣೆ ಮಾಡುವ ಗಟ್ಸ್ ರಾಜಕೀಯ ಪಕ್ಷಗಳಿಗೆ ಇದೆಯಾ?
ಒಂದು ರೂಪಾಯಿ ಯೋಜನೆ ರೂಪಿಸಿದರೆ..
1985ರ ಹೊತ್ತಿಗೆ ಪ್ರಧಾನಿ ಆಗಿದ್ದ ರಾಜೀವ್ ಗಾಂಧಿ ಅವರು ಒಂದು ವಾಸ್ತವ ಸಂಗತಿ ದೇಶದ ಮುಂದೆ ಇಟ್ಟರು. ನಮ್ಮ ದೇಶದಲ್ಲಿ ಕೇಂದ್ರ ಸರಕಾರವು ಒಂದು ರೂಪಾಯಿ ಯೋಜನೆ ರೂಪಿಸಿದರೆ ಅದು ಫಲಾನುಭವಿಗಳಿಗೆ ತಲುಪುವಾಗ ಕೇವಲ 15 ಪೈಸೆ ದೊರೆಯುತ್ತದೆ! ಅಂದರೆ ಒಂದು ರೂಪಾಯಿ ಯೋಜನೆಯಲ್ಲಿ 85 ಪೈಸೆ ಬೇರೆ ಬೇರೆ ಹಂತಗಳಲ್ಲಿ ಸೋರಿ ಹೋಗುತ್ತಿದೆ. ಪರಿಸ್ಥಿತಿ ಇಂದಿಗೂ ಹೆಚ್ಚು ಬದಲಾಗಿಲ್ಲ. ಅಂದರೆ ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ದೇಶದ ಸಂಪನ್ಮೂಲವು ಬೇರೆ ಬೇರೆ ಹಂತಗಳಲ್ಲಿ ನಷ್ಟ ಆಗುತ್ತಾ ಇದೆ. ಅದನ್ನು ತಡೆಗಟ್ಟಲು ದೇಶದ ನಾಯಕರಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ. ಅದರಿಂದಾಗಿ ಸ್ಥಳೀಯ ಸರಕಾರಗಳಿಗೆ ಸಂಪನ್ಮೂಲದ ಕೊರತೆ ಕಾಡುತ್ತಿದೆ. 1955ರ ಹೊತ್ತಿಗೆ ದೇಶದಲ್ಲಿ ಮೊದಲ ಭ್ರಷ್ಟಾಚಾರದ ಹಗರಣ ದಾಖಲು ಆದಾಗ ಅದರ ಮೌಲ್ಯ 55 ಲಕ್ಷ ರೂ. ಆಗಿತ್ತು. ಆದರೆ ಮುಂದೆ ನಡೆಯುತ್ತ ಇರುವ ಹಗರಣಗಳು ಒಂದು ಲಕ್ಷ ಕೋಟಿ, ಒಂದೂವರೆ ಲಕ್ಷ ಕೋಟಿ ದುಡ್ಡನ್ನು ಹೊಂದಿದೆ!
ಘೋಷಣೆ ಆಗ್ತಾ ಇದೆ ಸುಳ್ಳು ಆಸ್ತಿ
ನಾನು ಲೋಕಾಯುಕ್ತ ಆದ ಕೂಡಲೇ ನನ್ನ ಪೂರ್ಣ ಆಸ್ತಿಯನ್ನು, ಸ್ಥಿರ ಮತ್ತು ಚರ ವಸ್ತುಗಳನ್ನು ಮೌಲ್ಯ ಸಹಿತ ನನ್ನ ಲೋಕಾಯುಕ್ತದ ವೆಬ್‌ನಲ್ಲಿ ಪ್ರಕಟ ಮಾಡಿದೆ. ನನ್ನ ಹತ್ತಿರ ಸಂಬಳ ಮತ್ತು ಪೆನ್ಶನ್ ಹಣ ಬಿಟ್ಟರೆ ನನ್ನ ಅಧಿಕೃತ ಬ್ಯಾಂಕ್ ಖಾತೆಯಲ್ಲಿ ಒಂದು ಬಿಡಿಗಾಸು ಕೂಡ ಇರಲಿಲ್ಲ.
ಆದರೆ ಇಂದಿನ ಚುನಾವಣಾ ಪೂರ್ವದಲ್ಲಿ ರಾಜಕೀಯ ವ್ಯಕ್ತಿಗಳು ಚುನಾವಣಾ ಆಯೋಗಕ್ಕೆ ಕೊಡುವ ಅಫಿದವಿತ್ ಸುಳ್ಳಿನ ದಾಖಲೆಯನ್ನು ಒಳಗೊಂಡಿರುತ್ತದೆ. ಚುನಾವಣೆಗಳು ತುಂಬಾ ದುಬಾರಿ ಆಗ್ತಾ ಇದೆ. ಒಬ್ಬ ಶಾಸಕರು ಆಯ್ಕೆ ಆಗಬೇಕು ಅಂತಾದರೆ ಜಾತಿಯ ಬೆಂಬಲ ಮತ್ತು ದುಡ್ಡು ಎರಡೂ ಬೇಕಾಗುತ್ತದೆ. ಇದು ರಾಜಕೀಯದ ಮೇಲಾಟ. ಇದರಿಂದಾಗಿ ನಾವು ನಂಬಿದ ಮೌಲ್ಯಗಳು ಸಾಯುತ್ತವೆ.
ದುರಾಸೆಗೆ ವ್ಯಾಕ್ಸಿನ್ ಇಲ್ಲ!
ಜಗತ್ತಿನ ಎಲ್ಲ ಕಾಯಿಲೆಗೂ ಔಷಧ, ಲಸಿಕೆ ಇದೆ. ಆದರೆ ದುರಾಸೆಗೆ ಔಷಧಿ ಇಲ್ಲ! ನ್ಯಾಯವಾದ ಮಾರ್ಗದಲ್ಲಿ ಎಷ್ಟು ಬೇಕಾದರೂ ದುಡ್ಡು ಸಂಪಾದನೆ ಮಾಡಿ. ಏನೂ ತೊಂದರೆ ಇಲ್ಲ. ಆದರೆ ಏನು ಮಾಡಿದರೂ ಕಾನೂನು ಚೌಕಟ್ಟಿನಲ್ಲಿ ಮಾಡಿ. ಸರಕಾರಕ್ಕೆ ತೆರಿಗೆ ಕಟ್ಟಿ ಮಾಡಿ. ಬೇರೆಯವರ ಕಿಸೆಗೆ ಕೈಹಾಕಿ ದುಡ್ಡು ಮಾಡಬೇಡಿ. ನಿಮ್ಮ ಪ್ರತಿಭೆ, ಪರಿಶ್ರಮ ಹಾಕಿ ಯಾವ ಉದ್ಯೋಗವನ್ನಾದರೂ ಮಾಡಿ. ಆದರೆ ದೇಶದ ಕಾನೂನಿಗೆ ಅನುಗುಣವಾಗಿ ಮಾಡಿ.
ಮಕ್ಕಳಲ್ಲಿ ತೃಪ್ತಿಯನ್ನು ಮತ್ತು ಮಾನವೀಯತೆಯನ್ನು ಬೆಳೆಸಿ
ಹೆತ್ತವರು ಮಕ್ಕಳನ್ನು ನೈತಿಕ ಮೌಲ್ಯಗಳ ಬೆಳಕಿನಲ್ಲಿ ತಿದ್ದುವ ಕೆಲಸ ಮಾಡಬೇಕು. ವಿಶೇಷವಾಗಿ ತೃಪ್ತಿ ಮತ್ತು ಮಾನವೀಯತೆಯ ಗುಣಗಳನ್ನು ಬೆಳೆಸಿದರೆ ಭ್ರಷ್ಟಾಚಾರವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಣ ಮಾಡುತ್ತದೆ. ಆದರೆ
ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವೇ ಇಲ್ಲ.
ಆ ಮಗುವಿಗೆ ಗುದದ್ವಾರವೆ ಇರಲಿಲ್ಲ!
ನಾನು ಲೋಕಾಯುಕ್ತ ಮುಖ್ಯಸ್ಥ ಆಗಿರುವಾಗ ಒಬ್ಬರು ತನ್ನ ಸಣ್ಣ ಮಗುವನ್ನು ಕರೆದುಕೊಂಡು ನನ್ನ ಆಫೀಸ್‌ಗೆ ಬಂದಿದ್ದರು. ಆ ಮಗುವಿಗೆ ಗುದದ್ವಾರವೇ ಇರಲಿಲ್ಲ! ಆ ಮಗು ತಿಂದ ಅಷ್ಟೂ ಆಹಾರ ಜೀರ್ಣವಾಗಿ ಮಲವಾಗಿ ಬಾಯಿಂದಲೇ ಹೊರಬರುತ್ತಿತ್ತು. ಅವರು ಸರಕಾರಿ ಆಸ್ಪತ್ರಗೆ ಹೋದಾಗ ಅಲ್ಲಿನ ವೈದ್ಯರು ಅತ್ಯಂತ ಸರಳ ಶಸ್ತ್ರಚಿಕಿತ್ಸೆಗೆ ಕೂಡ ದುಡ್ಡು ಡಿಮಾಂಡ್ ಮಾಡುತ್ತಾರೆ ಎಂದಾಗ ನನಗೆ ನೋವಾಗಿತ್ತು. ನಾನು ಆ ಸರಕಾರಿ ವೈದ್ಯರನ್ನು ಮಾತನಾಡಿಸಿದಾಗ ಉದ್ಧಟ ಉತ್ತರ ಬರುತ್ತಿತ್ತು. ಕೊನೆಗೆ ನಾನು ಆ ಮಗುವನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಿ ಆ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸಿದಾಗ ಆ ಮಗುವಿನ ಪ್ರಾಣ ಉಳಿಯಿತು. ಇವತ್ತು ಎಲ್ಲ ಸಾಮಾಜಿಕ ಕ್ಷೇತ್ರಗಳಲ್ಲಿ ಕೂಡ ಈ ರೀತಿಯ ಭ್ರಷ್ಟಾಚಾರ ಹರಡಿ ಹೋಗಿದೆ.
250 ರೂಪಾಯಿ ನುಂಗುತ್ತಿದ್ದ ಪೋಸ್ಟ್ ಮ್ಯಾನ್!
ಒಬ್ಬ ಮುದುಕರು ಹಳ್ಳಿಯಲ್ಲಿ ವಾಸ ಆಗಿದ್ದರು. ಅವರಿಗೆ ಅವರ ಮಗ ಪ್ರತೀ ತಿಂಗಳು 2500/ ಮನಿ ಆರ್ಡರ್ ಮೂಲಕ ಕಳುಹಿಸಿಕೊಡುತ್ತಿದ್ದರು. ಅದರಲ್ಲಿ ಆ ಗ್ರಾಮದ ಪೋಸ್ಟ್ ಮ್ಯಾನ್ 250/ ಕಟ್ ಮಾಡಿ ಕೊಡುತ್ತಿದ್ದನು. ಅದನ್ನು ಆ ಮುದುಕರು ಪ್ರಶ್ನೆ ಮಾಡಿದಾಗ ಆ ಪೋಸ್ಟ್ ಮ್ಯಾನ್ ನಿಮ್ಮ ಎಲ್ಲ ಮೊತ್ತವನ್ನು ಹಿಂದೆ ಕಳುಹಿಸಿಕೊಡುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಅಂಚೆ ಇಲಾಖೆಯು ಕೇಂದ್ರ ಸರಕಾರದ ಅಧೀನ ಬರುವ ಕಾರಣ ನಾವು ಏನೂ ಮಾಡುವ ಹಾಗಿರಲಿಲ್ಲ. ಪೊಲೀಸ್ ದೂರು ಕೊಟ್ಟಾಗ ಆ ಪೊಲೀಸ್ ಅಧಿಕಾರಿ ‘ ಏನ್ಸಾರ್, ಜುಜುಬಿ 250 ರೂಪಾಯಿಯ ಕೇಸ್ ನಾವು ಹ್ಯಾಂಡಲ್ ಮಾಡುವುದೇ? ಅದು ನಮಗೆ ಶೇಮ್ ‘ ಅಂದರು. ಕೊನೆಗೆ ತುಂಬಾ ಕನ್ವಿನ್ಸ್ ಮಾಡಿದ ಮೇಲೆ ಆ ಪೋಸ್ಟ್ ಮ್ಯಾನನ್ನು ಪೊಲೀಸ್ ಸ್ಟೇಷನ್‌ಗೆ ಕರೆದು ಮಾತುಕತೆ ಮಾಡಿದ ನಂತರ ಆ ಸಮಸ್ಯೆಯೂ ಪರಿಹಾರ ಆಯಿತು.
ಭ್ರಷ್ಟಾಚಾರವನ್ನು ತಡೆಯುವ ಶಕ್ತಿ ಯುವಜನತೆಗೆ ಇದೆ!
ನನಗೀಗ 85 ವರ್ಷ. ನನಗೆ ಭ್ರಷ್ಟಾಚಾರದ ನರನಾಡಿಗಳ ಪರಿಚಯ ಇದೆ. ಆದರೆ ನಾನು ಈಗ ಹೋರಾಟ ಮಾಡುವ ಶಕ್ತಿಯನ್ನು ಕಳೆದುಕೊಂಡಿದ್ದೇನೆ. ಅದಕ್ಕಾಗಿ ನಾನು ಈಗ ಬೇರೆ ಬೇರೆ ಶಾಲೆ, ಕಾಲೇಜುಗಳಿಗೆ ಹೋಗಿ ಯುವಕ, ಯುವತಿಯರನ್ನು ಅಡ್ರೆಸ್ ಮಾಡ್ತಾ ಇದ್ದೇನೆ. ಸಂವಾದ ನಡೆಸುತ್ತಿದ್ದೇನೆ. ಈಗಾಗಲೇ 1300 ಕಾಲೇಜು ಪೂರ್ತಿ ಮಾಡಿದ್ದೇನೆ. ವಿದ್ಯಾರ್ಥಿಗಳ ಸ್ಪಂದನೆ ತುಂಬಾ ಅದ್ಭುತ ಇದೆ. ನನಗೆ ಒಂದು ಸಂಸ್ಥೆಯು ಪ್ರಶಸ್ತಿಯನ್ನು ಕೊಟ್ಟು ಗೌರವಧನವಾಗಿ ಒಂದು ಕೋಟಿ ರೂಪಾಯಿ ನೀಡಿದ್ದರು. ನಾನು ಅದನ್ನು ನೇರವಾಗಿ ಭಾರತೀಯ ಸೇನೆಗೆ ದಾನ ಮಾಡಿದ್ದೇನೆ. ನನ್ನ ಖಾತೆಯಲ್ಲಿ ನನ್ನ ಪಿಂಚಣಿ ದುಡ್ಡು ಬಿಟ್ಟರೆ ಬೇರೆ ಯಾವ ದುಡ್ಡೂ ಇಲ್ಲ. ಪ್ರತಿ ನಾಗರಿಕರು ದುರಾಸೆಯನ್ನು ಬಿಟ್ಟು ತೃಪ್ತಿ ಮತ್ತು ಮಾನವೀಯತೆಯನ್ನು ಹೊಂದಿದರೆ ನಮ್ಮ ಭಾರತವನ್ನು ಖಂಡಿತ ಉಳಿಸಬಹುದು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಅವಕಾಶಗಳು ಇವರ‍್ಯಾರ ಮನೆ ಬಾಗಿಲನ್ನೂ ಬಡಿದಿರಲಿಲ್ಲ! ಅವರೇ ಹೊಸ ಬಾಗಿಲು ತೆರೆದರು!