Site icon Vistara News

Raja Marga Column : ಗೊತ್ತಿರಲಿ, ಭಾರತೀಯ ಸಿನಿಮಾದ ಮೊದಲ ಸ್ಟುಡಿಯೋ ಕಟ್ಟಿದ್ದು ಒಬ್ಬ ಹೆಣ್ಣು!

Devika Rani Actress

ಭಾರತೀಯ ಸಿನಿಮಾ ರಂಗ ನೂರು ವರ್ಷ ಪೂರ್ತಿ ಮಾಡಿದಾಗ ಪರಿಣತರು ಒಂದು ಕಡೆ ಕೂತು ಭಾರತೀಯ ಸಿನೆಮಾ (Indian Cinema) ರಂಗದ ಜನಪ್ರಿಯತೆಗೆ ಕಾರಣರಾದವರ ಹೆಸರುಗಳನ್ನು ಪಟ್ಟಿ ಮಾಡಲು ತೊಡಗಿದರು. ಆಶ್ಚರ್ಯ ಏನೆಂದರೆ ಅವರೆಲ್ಲರು ಮಾಡಿದ ಪಟ್ಟಿಯಲ್ಲಿ ಒಂದು ಹೆಸರು ತುತ್ತತುದಿಯಲ್ಲಿ ಬಂದು ನಿಂತಿತು. ಆ ಹೆಸರು ಖಂಡಿತವಾಗಿ ದೇವಿಕಾ ರಾಣಿ (Actress Devikarani) ರೋರಿಕ್ ಆಗಿತ್ತು! ಆಕೆ ಭಾರತದ ಸಿನೆಮಾ ರಂಗವು ಕಂಡ ಮೊತ್ತ ಮೊದಲ ಆಧುನಿಕ ನಾಯಕಿ ಎಂಬ ಕೀರ್ತಿಯನ್ನು ಪಡೆದಿದ್ದಾರೆ (Raja Marga Column).

ದೇವಿಕಾ ರಾಣಿ ಜನಿಸಿದ್ದು ಆಂಧ್ರಪ್ರದೇಶದ ವಿಶಾಖಪಟ್ಟಣದ ವಾಲ್ಟೇರ್ ಎಂಬಲ್ಲಿ (1908 ಮಾರ್ಚ್ 30). ತಂದೆ ಬಹುಪ್ರಸಿದ್ಧ ಸರ್ಜನ್ ಆಗಿದ್ದವರು. ಆಕೆ ಮೂಲತಃ ಬೆಂಗಾಲಿ. ಸಂಬಂಧದಲ್ಲಿ ರವೀಂದ್ರನಾಥ್ ಠಾಗೋರ್ (Ravindranath tagore) ಅವರ ಮರಿ ಮೊಮ್ಮಗಳು. ಶ್ರೀಮಂತಿಕೆ ಅವರ ಮನೆಯ ಪಡಸಾಲೆಯಲ್ಲಿ ಕಾಲು ಮುರಿದು ಕೊಂಡು ಬಿದ್ದಿತ್ತು! ಅದರಿಂದಾಗಿ ಆಕೆ ತನ್ನ ಒಂಬತ್ತನೆಯ ವಯಸ್ಸಿಗೆ ಲಂಡನ್ನಿಗೆ ಹೋಗಿ ನಾಟಕ, ಸಂಗೀತ ಶಾಲೆಯನ್ನು ಸೇರಿದರು. ರಂಗಭೂಮಿ, ವಾಸ್ತು ಶಾಸ್ತ್ರ, ವಸ್ತ್ರ ವಿನ್ಯಾಸ, ರಂಗಸಜ್ಜಿಕೆ, ಪ್ರಸಾದನ ಕಲೆ ಎಲ್ಲವನ್ನೂ ಕಲಿತರು.

ಅದೇ ಹೊತ್ತಿಗೆ ಬ್ಯಾರಿಸ್ಟರ್ ಆಗುವ ಕನಸು ಹೊತ್ತು ಲಂಡನ್ನಿಗೆ ಬಂದಿದ್ದ ಹಿಮಾಂಶು ರಾಯ್ ಎಂಬ ತರುಣನ ಪ್ರೀತಿಯ ಬಲೆಗೆ ಬಿದ್ದರು. ಅವರ ಮದುವೆ ಕೂಡ ನಡೆದು ಹೋಯಿತು. ಆತ ದೇವಿಕಾ ಅವರಿಗಿಂತ 16 ವರ್ಷ ದೊಡ್ಡವನು ಮತ್ತು ಅವನಿಗೆ ಮೊದಲೇ ಮದುವೆ ಆಗಿ ಒಂದು ಮಗು ಕೂಡ ಇತ್ತು. ಗಂಡ, ಹೆಂಡತಿ ಇಬ್ಬರೂ ಜರ್ಮನಿಗೆ ಹೋಗಿ ಸಿನಿಮಾ ನಿರ್ಮಾಣದ ಕಲೆಯನ್ನು ಕಲಿತರು. ದೇವಿಕಾ ರಾಣಿ ಆಗ ಹಲವು ಅಮೇರಿಕನ್ ಮತ್ತು ಜರ್ಮನ್ ಭಾಷೆಯ ಸಿನೆಮಾಗಳಲ್ಲಿ ಅಭಿನಯ ಮಾಡಿದರು.

Devika Rani Biography In Hindi | First HEROINE Of Indian Cinema Bollywood | देविका रानी आत्मचरित्र |

A Throw Of Dice ಎಂಬ ಇಂಗ್ಲಿಷ್ – ಹಿಂದಿ ಭಾಷೆಯ ಸಿನಿಮಾದಲ್ಲಿ ಆಕೆ ಮೊದಲ ಬಾರಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಾರೆ. ಅದರ ಬೆನ್ನಿಗೆ ‘ಕರ್ಮಾ’ ಎಂಬ ಸಿನೆಮಾದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಜೊತೆಯಾಗಿ ಅಭಿನಯ ಮಾಡುತ್ತಾರೆ. ಆಕೆಯ ಸ್ಕ್ರೀನ್ ಅಪಿಯರೆನ್ಸ್ ಮತ್ತು ಸೌಂದರ್ಯ ನೋಡಿದ ಲಂಡನ್ನಿನ ಡೈಲಿ ಸರ್ಚ್ ಎಂಬ ಜನಪ್ರಿಯ ಪತ್ರಿಕೆಯು ‘ಸೌಂದರ್ಯದ ಸುನಾಮಿ’ ಎಂದು ಆಕೆಯನ್ನು ಬಣ್ಣಿಸಿತು. ‘ಬೆಳ್ಳಿ ಪರದೆ ಅಲಂಕರಿಸಿದ ಅತೀ ಸುಂದರ ಮಹಿಳೆ ಎಂದರೆ ದೇವಿಕಾ ರಾಣಿ ಮಾತ್ರ’ ಎಂದು ಲಂಡನ್ನಿನ ಪತ್ರಿಕೆಗಳು ಹೊಗಳಿ ಬರೆದವು. ವಿದೇಶದಲ್ಲಿ ಬಂಗಾರದಂತಹ ಅವಕಾಶಗಳು ಇದ್ದರೂ ಒನ್ ಫೈನ್ ಡೇ ಗಂಡ ಮತ್ತು ಹೆಂಡತಿ ಗಟ್ಟಿ ನಿರ್ಧಾರ ಮಾಡಿ ಭಾರತಕ್ಕೆ ಬರುತ್ತಾರೆ.

ಬಾಂಬೆ ಟಾಕೀಸ್ – ಭಾರತದ ಮೊದಲ ಸ್ಟುಡಿಯೋ ಸ್ಥಾಪನೆ

ಆಗ ಭಾರತೀಯ ಸಿನಿಮಾ ರಂಗವಿನ್ನೂ ಅಂಬೆಗಾಲು ಇಡುತಿತ್ತು. ಸಂಪ್ರದಾಯಸ್ಥ ಕುಟುಂಬದ ಹೆಣ್ಮಕ್ಕಳು ಸಿನಿಮಾದಲ್ಲಿ ಅಭಿನಯಿಸಲು ಹಿಂದೇಟು ಹಾಕುತ್ತಿದ್ದರು. ಸಿನೆಮಾ ನಟಿಯರನ್ನು ಜನರು ಬಹಳ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು. ತನ್ನ ಬಾಲ್ಯದಿಂದಲೂ ಆಧುನಿಕ ಮನೋಭಾವದಲ್ಲಿ ಬೆಳೆದಿದ್ದ ದೇವಿಕಾ ರಾಣಿ ಇದರಿಂದ ತುಂಬಾನೆ ನೊಂದು ಕೊಂಡರು.

Devika Rani Biography In Hindi | First HEROINE Of Indian Cinema Bollywood | देविका रानी आत्मचरित्र |

ಭಾರತದಲ್ಲಿ ಸುಸಜ್ಜಿತ ಫಿಲ್ಮ್ ಸ್ಟುಡಿಯೋ ಇರಲಿಲ್ಲ. ಅದನ್ನು ಮನಗಂಡು ಹಿಮಾಂಶು ಮತ್ತು ದೇವಿಕಾ ಜೊತೆಗೂಡಿ ಮುಂಬೈಯ ಮಲಾಡ್ ಎಂಬಲ್ಲಿ 18 ಎಕರೆ ಜಾಗ ಖರೀದಿಸಿ ಭಾರತದ ಮೊತ್ತ ಮೊದಲ ಸ್ಟುಡಿಯೋ ‘ಬಾಂಬೆ ಟಾಕೀಸ್’ ಸ್ಥಾಪನೆ ಮಾಡಿದರು. ಭಾರತದ ಮೊದಲ ಅತ್ಯಾಧುನಿಕ ಸ್ಟುಡಿಯೋ ಅದು. ಇದರಿಂದ ಭಾರತದಲ್ಲಿ ಸಿನಿಮಾ ನಿರ್ಮಾಣಕ್ಕೆ ಭಾರೀ ವೇಗ ದೊರೆಯಿತು.

ದೇವಿಕಾ ರಾಣಿ ಭಾರತಕ್ಕೆ ಹಿಂದಿರುಗಿ ಬಂದ ನಂತರ ‘ಅಚೂತ ಕನ್ಯಾ’ ಎಂಬ ಕ್ರಾಂತಿಕಾರಿಯಾದ ಸಿನಿಮಾದಲ್ಲಿ ಅಭಿನಯ ಮಾಡಿದರು. ಒಬ್ಬ ಅಸ್ಪೃಶ್ಯ ಹುಡುಗಿಯು ಮೇಲ್ಜಾತಿಯ ಹುಡುಗನನ್ನು ಪ್ರೀತಿ ಮಾಡುವ ಕಥೆ ಅದು. ಅಶೋಕ ಕುಮಾರ್ ಮೊದಲ ಬಾರಿ ಹೀರೋ ಆದ ಸಿನಿಮಾ ಅದು. ಆ ಸಿನೆಮಾವು ರಾಷ್ಟ್ರಪ್ರಶಸ್ತಿಯನ್ನು ಗೆದ್ದಿತು.‌

ಆಗಲೇ ಬೋಲ್ಡ್‌ ಪಾತ್ರಗಳಲ್ಲಿ ನಟಿಸಿದ್ದರು ದೇವಿಕಾ ರಾಣಿ

ದೇವಿಕಾ ರಾಣಿಯ ಸೌಂದರ್ಯ ಮತ್ತು ಅಭಿನಯಗಳು ದೇಶದಲ್ಲಿ ಮನೆ ಮಾತಾದವು. ಪಂಡಿತ್ ಜವಾಹರಲಾಲ್ ನೆಹರೂ ಅವರು ರಾಕ್ಸಿ ಚಿತ್ರಮಂದಿರದಲ್ಲಿ ಅಚೂತ್ ಕನ್ಯಾ ಸಿನಿಮಾವನ್ನು ನೋಡಿ ‘ನಾನು ದೇವಿಕಾ ರಾಣಿಯ ದೊಡ್ಡ ಅಭಿಮಾನಿ ‘ಎಂದು ಹೇಳಿದ್ದರು. ಅದೇ ಅಶೋಕ ಕುಮಾರ್ ದೇವಿಕಾ ರಾಣಿ ಜೋಡಿಯು ಮುಂದೆ 10 ಸಿನೆಮಾಗಳಲ್ಲಿ ಜೊತೆ ಆಗಿ ನಟಿಸಿತು.

ಮುಂದೆ ಬಾಂಬೆ ಟಾಕೀಸ್ ಬ್ಯಾನರಿನಲ್ಲಿ ಒಂದಷ್ಟು ಹಿಂದಿ, ಬೆಂಗಾಳಿ ಸೂಪರ್ ಹಿಟ್ ಸಿನಿಮಾಗಳು ತೆರೆಗೆ ಬಂದವು. ಜೀವನ್ ನಯ್ಯಾ, ಜವಾನಿ ಕಿ ಹವಾ, ನಿರ್ಮಲಾ, ಜನ್ಮಭೂಮಿ, ಪ್ರೇಮ ಸನ್ಯಾಸ, ಇಜ್ಜತ್, ದುರ್ಗಾ, ಸಾವಿತ್ರಿ, ಜೀವನ್ ಪ್ರಭಾತ್, ವಚನ್, ಅಂಜಾನ್, ಹಮಾರಿ ಬಾತ್ ……ಹೀಗೆ ಒಂದಕ್ಕಿಂತ ಒಂದು ವಿಭಿನ್ನವಾದ ಪಾತ್ರಗಳು. ಇಡೀ ಭಾರತವು ದೇವಿಕಾ ರಾಣಿಯ ಪ್ರತಿಭೆ ಮತ್ತು ಸೌಂದರ್ಯಕ್ಕೆ ಫಿದಾ ಆಗಿತ್ತು!

ಅಶೋಕ್ ಕುಮಾರ್, ದಿಲೀಪ್ ಕುಮಾರ್, ಲೀಲಾ ಚೆಟ್ನೀಸ್, ದುರ್ಗಾ ಕೋಟೆ ಮೊದಲಾದ ಪ್ರಸಿದ್ಧ ನಟ, ನಟಿಯರು ಬಾಂಬೆ ಟಾಕೀಸ್ ಬ್ಯಾನರಿನ ಸಿನೆಮಾದಲ್ಲಿ ಮೊದಲು ಅಭಿನಯಿಸಿದ್ದರು. ತನ್ನದೇ ಅಭಿನಯದ ಹಲವು ಸಿನೆಮಾಗಳಲ್ಲಿ ಆಕೆ ಹಲವು ಹಾಡುಗಳನ್ನು ಕೂಡ ಹಾಡಿದ್ದಾರೆ. ಬಾಂಬೆ ಟಾಕೀಸ್ ಬ್ಯಾನರಿನಲ್ಲಿ ಆಕೆ 15 ಅತೀ ಜನಪ್ರಿಯ ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿದ್ದರು.

ದೇವಿಕಾ ರಾಣಿ ರೋರಿಕ್ ಆದರು..

ಮುಂದೆ ಹಿಮಾಂಶು ರಾಯ್ ನಿಧನರಾದ ನಂತರ ಸಿನಿಮಾ ಚಟುವಟಿಕೆಗಳಿಗೆ ಬೆನ್ನು ಹಾಕಿದ ದೇವಿಕಾ ರಾಣಿ ಜನಪ್ರಿಯತೆಯ ತುತ್ತ ತುದಿಯಲ್ಲಿ ಇರುವಾಗಲೇ ನಿವೃತ್ತರಾದರು. ತನ್ನ ಇಳಿವಯಸ್ಸಿನಲ್ಲಿ ರಷ್ಯಾದ ಲೆಜೆಂಡ್ ಚಿತ್ರ ಕಲಾವಿದ ಸ್ವೆತೋಸ್ಲಾವ್ ರೋರಿಕ್ ಅವರನ್ನು ಮದುವೆಯಾದ ನಂತರ ಆಕೆ ದೇವಿಕಾ ರಾಣಿ ರೋರಿಕ್ ಎಂದು ಕರೆಸಿಕೊಂಡರು.

ಫಿರೋಜ್‌ ಗಾಂಧಿ, ಇಂದಿರಾ ಗಾಂಧಿ, ರೊರಿಕ್‌ ಜತೆ ದೇವಿಕಾ ರಾಣಿ

ಇದನ್ನೂ ಓದಿ: Raja Marga Column : ನಿಮ್ಮ ಮೇಲೆ ಯಾರೋ ಸವಾರಿ ಮಾಡ್ತಾ ಇದಾರಾ? ಅದಕ್ಕೆ ಹೀಗೆ ಮಾಡಿ…

1958ರ ಪದ್ಮಶ್ರೀ ಪ್ರಶಸ್ತಿ ಆಕೆಗೆ ಒಲಿದು ಬಂದಿತು. 1970ರಲ್ಲಿ ಸಿನಿಮಾ ರಂಗಕ್ಕೆ ಅತೀ ಮಹತ್ವದ ಕೊಡುಗೆ ನೀಡಿದ (ಕೇವಲ) ಒಬ್ಬರಿಗೆ ನೀಡಲಾಗುವ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯ ಸ್ಥಾಪನೆ ಆಯಿತು.

ದೇವಿಕಾ ರಾಣಿ ರೋರಿಕ್‌ ಎಸ್ಟೇಟ್

ಮೊದಲ ವರ್ಷದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಗೌರವವನ್ನು ಆಕೆ ಪಡೆದುಕೊಂಡು ಕೀರ್ತಿಯ ಶಿಖರ ಏರಿದರು. 1990ರಲ್ಲಿ ಆಕೆಗೆ ಸೋವಿಯೆತ್ ಲ್ಯಾಂಡ್ ನೆಹರೂ ಪುರಸ್ಕಾರ ಕೂಡ ದೊರೆಯಿತು. 1994 ಮಾರ್ಚ್ 9ರಂದು ದೇವಿಕಾ ರಾಣಿ ತನ್ನ ಇಹಲೋಕದ ವ್ಯಾಪಾರ ಮುಗಿಸಿದರು.

ಭರತ ವಾಕ್ಯ: ಭಾರತೀಯ ಸಿನಿಮಾ ರಂಗದ ಮೊದಲ ದಿನಗಳಲ್ಲಿ ಸಿನೆಮಾಗಳಿಗೆ ಆಧುನಿಕ ಸ್ಪರ್ಶ ನೀಡಿದ ಕೀರ್ತಿ ಪಡೆದು ದೇವಿಕಾ ರಾಣಿ ಐಕಾನ್ ಆದರು. ಅವರಿಗೆ ನಮ್ಮ ಶೃದ್ಧಾಂಜಲಿ.

Exit mobile version