ನಾವು ಪ್ರತಿ ಬಾರಿ ತುಂಬಾ ಬ್ಯುಸಿ ಎಂದು ಹೇಳುತ್ತಾ ಯಾವುದಕ್ಕೂ ಸಮಯ ಕೊಡದೇ ಓಡಾಡುತ್ತಿರುತ್ತೇವೆ. ಆದರೆ ಜಗತ್ತಿನ ಹಲವಾರು ಸೆಲೆಬ್ರಿಟಿ ವ್ಯಕ್ತಿಗಳು ತಾವೆಷ್ಟು ಬಿಝಿ ಆಗಿದ್ದರೂ ತಮ್ಮ ಆರೋಗ್ಯಪೂರ್ಣ ಹವ್ಯಾಸಗಳಿಗೆ ಸಮಯ ಹೊಂದಿಸಿಕೊಂಡು ಜೀವನದ ಪ್ರತೀ ಕ್ಷಣವನ್ನೂ ಆನಂದಿಸುತ್ತಾರೆ. ಇಲ್ಲಿವೆ ಕೆಲವು ಶ್ರೇಷ್ಠ ಉದಾಹರಣೆಗಳು (ರಾಜ ಮಾರ್ಗ ಅಂಕಣ).
1) ಜಗತ್ತಿನ ಎರಡನೇ ದೊಡ್ಡ ಶ್ರೀಮಂತ ವ್ಯಕ್ತಿ ವಾರೆನ್ ಬಫೆಟ್ (Warren buffet) ಹತ್ತಾರು ಬಂಡವಾಳ ಹೂಡಿಕೆಯ ಕಂಪೆನಿಗಳನ್ನು ಮುನ್ನಡೆಸುತ್ತಿದ್ದಾರೆ. ಅವರ ವಯಸ್ಸು ಈಗ 92 ವರ್ಷ. ಅವರ ಆಸ್ತಿಯ ಒಟ್ಟು ಮೌಲ್ಯ 11,690 ಕೋಟಿ ಅಮೆರಿಕನ್ ಡಾಲರಗಳು! ಈ ಮನುಷ್ಯ ಈಗಲೂ ತನ್ನ ದಿನದ 80% ಸಮಯವನ್ನು ಓದುವುದಕ್ಕೂ, ಚಿಂತನೆ ಮಾಡುವುದಕ್ಕೂ ಉಪಯೋಗ ಮಾಡುತ್ತಾರೆ ಅಂದರೆ ನಂಬಲು ಸಾಧ್ಯವೇ ಇಲ್ಲ!
2) ಜಗತ್ತಿನ ಇನ್ನೊಬ್ಬ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ (Bill gates) ತಾನು ಮೈಕ್ರೋ ಸಾಫ್ಟ್ ಕಂಪೆನಿಯನ್ನು ಮುನ್ನಡೆಸುವ ಹೊತ್ತಿನಲ್ಲಿಯೂ ವಾರಕ್ಕೊಂದು ಹೊಸ ಪುಸ್ತಕ ಕೊಂಡು ಬಿಡುವು ಮಾಡಿಕೊಂಡು ಓದುತ್ತಿದ್ದರು. ವರ್ಷಕ್ಕೆ ಎರಡು ವಾರ ಪೂರ್ತಿ ಬಿಡುವು ಮಾಡಿಕೊಂಡು ಯಾರ ಕೈಗೂ ಸಿಗದೇ ಒಬ್ಬಂಟಿಯಾಗಿ ಕುಳಿತು ಹದಿನಾಲ್ಕು ದಿನವೂ ಓದಿ ರಿಫ್ರೆಶ್ ಆಗಿ ಬರುತ್ತಿದ್ದರು!
3) ಅಮೆರಿಕದ ಶಕ್ತಿಶಾಲಿ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಎಷ್ಟು ಬ್ಯುಸಿ ಇದ್ದರೂ ದಿನಕ್ಕೆ ಒಂದು ಗಂಟೆ ಓದುವುದನ್ನು ತಪ್ಪಿಸುತ್ತಾ ಇರಲಿಲ್ಲ. ಹಾಗೆಯೇ ದಿನದ ಸ್ವಲ್ಪ ಹೊತ್ತು ತನ್ನ ಅಡುಗೆ ಕೋಣೆಗೆ ಬಂದು ದಿನಕ್ಕೊಂದು ರೆಸಿಪಿ ಸಿದ್ದಪಡಿಸುತ್ತಿದ್ದರು ಮತ್ತು ಕುಟುಂಬದ ಜೊತೆಗೆ ಊಟ ಮಾಡುತ್ತಿದ್ದರು.
4) ಲಿಂಕ್ಡ್ ಇನ್ ಸಂಸ್ಥೆಯ ಅಧ್ಯಕ್ಷರಾದ ಜೆಫ್ ವೈನರ್ ಜಾಗತಿಕ ಸಂಸ್ಥೆಯನ್ನು ಮುನ್ನಡೆಸುವ ಸಂದರ್ಭದಲ್ಲಿ ಕೂಡ ದಿನಕ್ಕೆ ಎರಡು ಗಂಟೆ ಏಕಾಂತದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರು.
5) ಭಾರತದ ಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ್ ರಾಮಾನುಜನ್ ಎಷ್ಟೇ ಬ್ಯುಸಿ ಇದ್ದರೂ ದಿನಕ್ಕೆ ಒಂದಿಷ್ಟು ಹೊತ್ತು ಮಾಯಾ ಚೌಕಗಳ (Magic Box) ಸಂಶೋಧನೆಗೆ ಮೀಸಲು ಇಟ್ಟಿದ್ದರು. ಅದು ನನ್ನ ಮಾನಸಿಕ ಒತ್ತಡ ನಿವಾರಣೆಗೆ ಸಹಕಾರಿ ಎಂದು ರಾಮಾನುಜನ್ ಹೇಳಿದ್ದಾರೆ.
6) ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಎಷ್ಟು ಬ್ಯುಸಿ ಇದ್ದರೂ ವಾರಕ್ಕೊಮ್ಮೆ ವೃದ್ಧಾಶ್ರಮ ಮತ್ತು ಅನಾಥ ಮಕ್ಕಳ ಆಶ್ರಮಕ್ಕೆ ಭೇಟಿ ಕೊಟ್ಟು ಅವರ ಜೊತೆ ಹೊತ್ತು ಕಳೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
7) ಖ್ಯಾತ ಉದ್ಯಮಿ ಆನಂದ ಮಹೀಂದ್ರ ತಾವು ಎಷ್ಟು ಬ್ಯುಸಿ ಇದ್ದರೂ ತಮ್ಮ ಟ್ವಿಟರ್ ಖಾತೆಯಲ್ಲಿ ಚಾರಿಟಿ ಸಂಸ್ಥೆಗಳ ಬಗ್ಗೆ, ಪ್ರವಾಸೀ ತಾಣಗಳ ಬಗ್ಗೆ, ಎಲೆಯ ಮರೆಯ ಪ್ರತಿಭೆಗಳ ಬಗ್ಗೆ ವಿಡಿಯೋಗಳನ್ನು ಸಿದ್ಧಪಡಿಸಿ ನಿರಂತರ ಅಪ್ಲೋಡ್ ಮಾಡುತ್ತಿದ್ದಾರೆ. ಅವೆಲ್ಲವೂ ವೈರಲ್ ಆಗುತ್ತಿರುವುದು ಅಷ್ಟೇ ಅದ್ಭುತ.
8) ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಎಷ್ಟೇ ಬ್ಯುಸಿ ಆಗಿದ್ದರೂ ಬರವಣಿಗೆ ನಿಲ್ಲಿಸಲಿಲ್ಲ. ಅವರು ನೈನಿತಾಲ್ ಸೆರೆಮನೆಯಲ್ಲಿ ಕೂತು ಕೂಡ ಡಿಸ್ಕವರಿ ಆಫ್ ಇಂಡಿಯಾ ಮತ್ತು ಲೆಟರ್ಸ್ ಟು ಪ್ರಿಯದರ್ಶಿನಿ ಎಂಬ ಶ್ರೇಷ್ಠ ಪುಸ್ತಕಗಳನ್ನು ಬರೆದರು.
9) ಖ್ಯಾತ ಸಿನೆಮಾ ನಟ ಚಾರ್ಲಿ ಚಾಪ್ಲಿನ್ ತನ್ನ ಬಿಡುವಿನ ಸಮಯದಲ್ಲಿ ಸುಡೊಕು ಮತ್ತು ಪದ ಬಂಧ ಬಿಡಿಸಲು ಬಿಡಿಸುವುದನ್ನು ಹವ್ಯಾಸ ಮಾಡಿಕೊಂಡಿದ್ದರು.
10) ಖ್ಯಾತ ಹೋಟೆಲು ಉದ್ಯಮಿ ಕಾಮತ್ ಗ್ರೂಪ್ ಆಫ್ ಹೋಟೆಲ್ಸ್ ಮಾಲಕ ವಿಠ್ಠಲ ಕಾಮತ್ ಅವರು ಗಣಪತಿಯ ಮೂರ್ತಿಗಳ ಒಂದು ದೊಡ್ಡದಾದ ಗ್ಯಾಲರಿಯನ್ನೇ ಸ್ಥಾಪನೆ ಮಾಡಿದ್ದಾರೆ. ಅವರ ಗ್ಯಾಲರಿಯಲ್ಲಿ ಸಾವಿರಾರು ಗಣೇಶನ ವಿಗ್ರಹಗಳಿದ್ದು ಒಂದರ ಹಾಗೆ ಇನ್ನೊಂದು ಇಲ್ಲ ಅನ್ನುವುದು ನಿಜವಾಗಿ ಅದ್ಭುತ!
11) ಭಾರತೀಯ ಲೆಜೆಂಡ್ ಉದ್ಯಮಿ ರತನ್ ನವಲ್ ಟಾಟಾ ಅವರು ಎಷ್ಟೇ ಬ್ಯುಸಿ ಆಗಿದ್ದರೂ ಬೀದಿ ನಾಯಿಗಳ ಲಾಲನೆ, ಪಾಲನೆಯಲ್ಲಿ ತುಂಬಾ ಸಮಯ ಕೊಡುತ್ತಾರೆ ಅನ್ನೋದು ನಿಜವಾಗಿ ಗ್ರೇಟ್.
12) ಭಾರತದ ಅತ್ಯಂತ ಪ್ರಭಾವೀ ಪ್ರಧಾನಿ ವಾಜಪೇಯಿ ಅವರು ಸಕ್ರಿಯ ರಾಜಕಾರಣದಲ್ಲಿ ಬಿಡುವು ಮಾಡಿಕೊಂಡು ಬರೆದ ನೂರಾರು ಕವಿತೆಗಳು ಬೆರಗು ಮೂಡಿಸುತ್ತವೆ.
ಭರತ ವಾಕ್ಯ
ರಕ್ತವು ಬಿಸಿ ಇದ್ದಾಗ 24×7 ದುಡಿಮೆ ಮಾಡಿ ತಮ್ಮೊಳಗಿನ ನೆಮ್ಮದಿ, ಅಂತಃಸತ್ವ, ಆರೋಗ್ಯ ಎಲ್ಲವನ್ನೂ ಖಾಲಿ ಮಾಡಿಕೊಳ್ಳುವ ಮಂದಿ ತುಂಬಾ ಜನರು ಇದ್ದಾರೆ. ಅವರು ವರ್ಕ್ ಹಾಲಿಕ್ ಆಗಿ ಒಂದು ದಿನ ಪೂರ್ತಿ ಖಾಲಿ ಆಗುತ್ತಾರೆ. ನಮ್ಮ ಕೆಲಸದ ಒತ್ತಡಗಳ ನಡುವೆ ಕೂಡ ಆರೋಗ್ಯಪೂರ್ಣ ಆದ ಹವ್ಯಾಸಗಳನ್ನು ಜೋಡಿಸಿಕೊಂಡು ಬದುಕನ್ನು ಸಿಂಗರಿಸಿಕೊಂಡರೆ ಎಷ್ಟೊಂದು ಉತ್ತಮ ಅಲ್ಲವೇ?
ಇದನ್ನೂ ಓದಿ: ರಾಜಮಾರ್ಗ ಅಂಕಣ: ಆತ್ಮಾಹುತಿ ದಾಳಿಗೆ ಎದೆಕೊಟ್ಟು ಆಕೆ ಬಂಡೆಯಂತೆ ನಿಂತಿದ್ದರು!