ಇಂದು ರಾಷ್ಟ್ರೀಯ ವೈದ್ಯರ ದಿನ. ಜಗತ್ತಿನಾದ್ಯಂತ ಇರುವ ಆರೋಗ್ಯ ಸೇನಾನಿಗಳಿಗೆ ಕೃತಜ್ಞತೆ ಸಲ್ಲಿಸುವ ದಿನ. ತಮ್ಮ ವೃತ್ತಿ ಧರ್ಮವನ್ನು ಕಾಪಾಡಿಕೊಂಡು ಬಂದಿರುವ ಸಾವಿರ ಸಾವಿರ ವೈದ್ಯರಿಗೆ ನಮ್ಮ ಗೌರವ ಅಭಿನಂದನೆ ಸಲ್ಲಿಸುವ ದಿನ (Doctors day). ಈ ದಿನಕ್ಕೆ ಕಾರಣವಾದ ಭಾರತದ ಶ್ರೇಷ್ಠ ವೈದ್ಯ, ರಾಜಕಾರಣಿ, ಶಿಕ್ಷಣ ತಜ್ಞ, ಸಮಾಜ ಸೇವಕ, ಸ್ವಾತಂತ್ರ್ಯ ಹೋರಾಟಗಾರ ಡಾಕ್ಟರ್ ಬಿದನ್ ಚಂದ್ರ ರಾಯ್ (Dr BC Roy) ಅವರನ್ನು ನೆನೆಯುವ (ರಾಜ ಮಾರ್ಗ ಅಂಕಣ) ದಿನ.
ಯಾರು ಈ ಡಾಕ್ಟರ್ ಬಿ.ಸಿ. ರಾಯ್?
ಡಾಕ್ಟರ್ ಬಿದನ್ ಚಂದ್ರ ರಾಯ್ ಅವರು 1882ರ ಜುಲೈ ಒಂದರಂದು ಬಿಹಾರದ ಪಟನಾದಲ್ಲಿ ಜನಿಸಿದವರು. ಕೋಲ್ಕೊತಾದಲ್ಲಿ MBBS ಪದವಿ ಮುಗಿಸಿ ಮುಂದೆ ಅಮೆರಿಕಕ್ಕೆ ಹೋಗಿ MRCP ಮತ್ತು FRCS ಪದವಿ ಮುಗಿಸಿ ಭಾರತಕ್ಕೆ ಬಂದರು. ಅವರು ಮನಸ್ಸು ಮಾಡಿದರೆ ಅಮೆರಿಕದಲ್ಲಿ ನೆಲೆಸಿ ತುಂಬಾ ದುಡ್ಡು ಮಾಡಬಹುದಿತ್ತು. ಅವರದ್ದು ಆಗರ್ಭ ಶ್ರೀಮಂತ ಮನೆತನ. ಅವರು ಇದ್ಯಾವುದೂ ಆಮಿಷಗಳಿಗೆ ಬಲಿಯಾಗದೆ ಭಾರತಕ್ಕೆ ಬಂದು ಬಡ ರೋಗಿಗಳ ನೆರವಿಗೆ ನಿಂತರು. ಕೊಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಮತ್ತು ಇನ್ನೆರಡು ಕಾಲೇಜುಗಳಲ್ಲಿ ವೈದ್ಯಕೀಯ ಪಾಠ ಮಾಡಿದರು. ಸಂಶೋಧನೆ ಮಾಡಿದರು. ಹಲವು ಸರಕಾರಿ ಆಸ್ಪತ್ರೆಗಳಲ್ಲಿ ವೇತನ ಪಡೆಯದೆ ದುಡಿದರು. ನೊಂದವರ ಪರವಾಗಿ ನಿಂತರು. ಮಹಾತ್ಮಾ ಗಾಂಧಿಯವರ ಆಪ್ತ ವಲಯದಲ್ಲಿ ಸ್ವಾತಂತ್ರ್ಯ ಹೋರಾಟ ಮಾಡಿದರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದರು. ಗಾಂಧೀಜಿ ಅವರ ಖಾಸಗಿ ವೈದ್ಯರಾಗಿ ಸೇವೆ ಮಾಡಿದರು.
ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ
ಸ್ವಾತಂತ್ರ್ಯ ದೊರಕಿದ ನಂತರ ಅವರು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಆಗಿ 14 ವರ್ಷ ಸೇವೆ ಸಲ್ಲಿಸಿದರು (1948-1962). ಆ ಅವಧಿಯು ಬಂಗಾಳದ ಸುವರ್ಣ ವರ್ಷಗಳು ಎಂದು ಕರೆಯಲ್ಪಟ್ಟಿವೆ. ವೈದ್ಯಕೀಯ ಶಿಕ್ಷಣ, ಆರೋಗ್ಯ ಸುರಕ್ಷತೆ, ಮೆಡಿಕಲ್ ಕಾಲೇಜು ಎಲ್ಲ ವಿಭಾಗಗಳಲ್ಲಿಯೂ ಬಂಗಾಳ ಅವರ ಅವಧಿಯಲ್ಲಿ ಭಾರೀ ಹೆಸರು ಮಾಡಿತು. ಅದಕ್ಕೆ ಪೂರಕವಾಗಿ ಅವರಿಗೆ 1961ರಲ್ಲಿ ಭಾರತ ಸರಕಾರವು ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಮುಖ್ಯಮಂತ್ರಿ ಆಗಿದ್ದಾಗಲೂ ಅವರು ಮೆಡಿಕಲ್ ಪ್ರಾಕ್ಟೀಸ್ ಮಾಡುತ್ತಾ ಇದ್ದರು. 1962 ಅವರ ಹುಟ್ಟು ಹಬ್ಬದಂದು (ಜುಲೈ ಒಂದು) ಅವರು ಈ ಜಗತ್ತಿನಿಂದ ನಿರ್ಗಮಿಸಿದರು. ಭಾರತ ಸರಕಾರವು ಮುಂದೆ ಅವರ ಹುಟ್ಟಿದ ಹಬ್ಬವನ್ನು ರಾಷ್ಟ್ರೀಯ ವೈದ್ಯರ ದಿನ ಆಗಿ ಆಚರಣೆ ಮಾಡಿಕೊಂಡು ಬಂದಿದೆ. ಅವರ ಹೆಸರಿನಲ್ಲಿ ಶ್ರೇಷ್ಠ ವೈದ್ಯರಿಗೆ ಡಾಕ್ಟರ್ ಬಿ.ಸಿ. ರಾಯ್ ಪ್ರಶಸ್ತಿ ಕೂಡ ದೊರೆಯುತ್ತಿದೆ. ಆ ಪ್ರಶಸ್ತಿಯು ವೈದ್ಯಕೀಯ ಸಮಾಜದಲ್ಲಿ ಅತ್ಯಂತ ತೂಕದ ಪ್ರಶಸ್ತಿ ಆಗಿದೆ.
ವೈದ್ಯರೆಂದರೆ ಆರೋಗ್ಯ ಸೇನಾನಿಗಳು
Meducines cure DISEASES. But Doctors cure PATIENTS- Carl Jung.
ಆರೋಗ್ಯಪೂರ್ಣ ಸಮಾಜದ ಮೇಲೆ ವೈದ್ಯರ ಪ್ರಭಾವ ಅದು ಅದ್ಭುತವೇ ಆಗಿದೆ. ಇಂದಿಗೂ ವೈದ್ಯರ ಮೇಲೆ ಸಮಾಜ ಇಟ್ಟಿರುವ ನಂಬಿಕೆ ಒಂದಿಷ್ಟೂ ಕಡಿಮೆ ಆಗಿಲ್ಲ. ವೈದ್ಯರು ಕೊಡುವ ಔಷಧಕ್ಕಿಂತ ಅವರು ಹೇಳುವ ಸಾಂತ್ವನದ ಮಾತುಗಳು, ತುಂಬಿಸುವ ಆತ್ಮ ವಿಶ್ವಾಸ ಹೆಚ್ಚು ಶಕ್ತಿಶಾಲಿ ಎಂದು ಸಾಬೀತು ಆಗಿದೆ. ಹಿಂದೆ ಸಾಂಕ್ರಾಮಿಕ ರೋಗಗಳು ಜಗತ್ತನ್ನು ಭಾಧಿಸಿದಾಗ ಅವುಗಳ ವಿರುದ್ಧ ಹೋರಾಡಿ ಅವುಗಳಿಗೆ ಲಸಿಕೆ ಕಂಡು ಹಿಡಿದು ಮೂಲೋತ್ಪಾಟನೆ ಮಾಡಿದವರು ಈ ಆರೋಗ್ಯ ಸೇನಾನಿಗಳೆ! ಇಂದು ಜಗತ್ತಿನಲ್ಲಿ ಪೋಲಿಯೋ, ಮಲೇರಿಯಾ,
ಟಿಟಾನಸ್, ಪ್ಲೇಗ್ ಮೊದಲಾದ ರೋಗಗಳಿಗೆ ಲಸಿಕೆ ಹುಡುಕಿದ್ದು ಇದೇ ಆರೋಗ್ಯ ಸೈನಿಕರು. ಎರಡು ವರ್ಷಗಳ ಹಿಂದೆ ಇಡೀ ಜಗತ್ತನ್ನು ನಡುಗಿಸಿದ್ದ ಕೋವಿಡ್ ಸಾಂಕ್ರಾಮಿಕ ಕಾಯಿಲೆಗೆ ಲಸಿಕೆ ಕಂಡು ಹಿಡಿದ ಕೀರ್ತಿಯು ಭಾರತೀಯ ವೈದ್ಯರಿಗೆ ಸಲ್ಲುತ್ತದೆ.
ವೈದ್ಯರು ಯಾಕೆ ಸೈನಿಕರು?
ಒಬ್ಬ ಸೈನಿಕ ಆಗಲು ಆತನು ಕನಿಷ್ಠ ಏಳು ವರ್ಷಗಳ ಕಾಲ ಶಿಕ್ಷಣ, ತರಬೇತು ಪಡೆಯಬೇಕು. ಆದರೆ ಒಬ್ಬರು ವೈದ್ಯನು ತನ್ನ ಪ್ರಾಕ್ಟೀಸ್ ಮಾಡಬೇಕಾದರೆ ಎಸೆಸೆಲ್ಸಿ ನಂತರ ಎರಡು ವರ್ಷಗಳ ಕಾಲ ಪಿಯುಸಿ ಮುಗಿಸಿ ನಂತರ ನೀಟ್ ಪರೀಕ್ಷೆಗೆ ಗಂಭೀರವಾದ ಕೋಚಿಂಗ್ ಪಡೆಯಬೇಕು. ಸೀಟ್ ದೊರಕಿದ ನಂತರ ನಾಲ್ಕೂವರೆ ವರ್ಷ MBBS ಕೋರ್ಸ್ ಮುಗಿಸಿ ಒಂದು ವರ್ಷ ಹೌಸ್ ಸರ್ಜನ್‌ಷಿಪ್ ಮುಗಿಸಬೇಕು. ಮುಂದೆ ಸ್ನಾತಕೋತ್ತರ ಅಧ್ಯಯನ ಎಂದು ಮತ್ತೆ ಮೂರರಿಂದ ನಾಲ್ಕು ವರ್ಷ ಮಣ್ಣು ಹೊರಬೇಕು. ಇನ್ನು ಆಯುರ್ವೇದ, ಯುನಾನಿ, ನ್ಯಾಚುರೋಪತಿ, ಫಾರ್ಮಾ ಸುಟಿಕಲ್, ಹೋಮಿಯೋಪತಿ, ಯೋಗಿಕ್ ವಿಜ್ಞಾನ……… ಹೀಗೆ ಯಾವ ವೈದ್ಯಕೀಯ ವಿಜ್ಞಾನವನ್ನು ಕಲಿಯಲೂ ಭಾರೀ ತಾಳ್ಮೆ ಬೇಕು. ವೈದ್ಯಕೀಯ ವಿಜ್ಞಾನ ಇಂದು ಭಾರಿ ವೇಗವಾಗಿ ಬೆಳೆಯುವ ಶಾಖೆ ಆಗಿದೆ ಮತ್ತು ಸಂಶೋಧನೆಗಳಿಗೆ ಹೆಚ್ಚು ಅವಕಾಶ ಇದೆ. ಇದನ್ನು ಗಮನಿಸಿದಾಗ ನಮಗೆ ವೈದ್ಯರ ಬಗ್ಗೆ ತುಂಬಾ ಗೌರವದ ಭಾವನೆ ಬಂದೇ ಬರುತ್ತದೆ.
ನಾವೆಲ್ಲರೂ ಒಂದಲ್ಲ ಒಂದು ಕಾರಣಕ್ಕೆ ವೈದ್ಯರ ಋಣದಲ್ಲಿ ಇದ್ದೇವೆ. ಆ ಋಣದ ಪ್ರತೀಕವೇ ಇಂದಿನ ವೈದ್ಯರ ದಿನ. ಈ ವೈದ್ಯ ಸಮುದಾಯಕ್ಕೆ ತಲೆ ಬಾಗಿ ವಂದಿಸೋಣ ಬನ್ನಿ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ: ಪತ್ನಿಯ ಪ್ರತಿಭೆಯೇ ಗಂಡನ ಉದ್ಯಮಕ್ಕೆ ಬಂಡವಾಳ; ರಂಗ್ ರೇಜ್ ಕಂಪನಿ ಹುಟ್ಟಿದ ಕಥೆ