ಮಾನಭಂಗವನ್ನು ಯಾವ ನಾಗರಿಕ ಸಮಾಜವೂ ಸಮರ್ಥನೆ ಮಾಡಬಾರದು. ಮಾನಭಂಗ ಪ್ರಕರಣಗಳು ಒಮ್ಮೆ ನಡೆದು ಸ್ಫೋಟಕ ಪ್ರಚಾರ ಪಡೆಯುವುದು, ರಾಜಕಾರಣಿಗಳು ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವುದು, ಆರೋಪಿಗಳು ಅರೆಸ್ಟ್ ಆಗುವುದು, ಅಲ್ಲಿಗೆ ಎಲ್ಲವೂ ತಣ್ಣಗಾಗುವುದು..! ಇದು ದಿನವೂ ನಡೆಯುವ ಘಟನೆಗಳು. ಮುಂದೆ ಏನಾಯಿತು? ವಿಚಾರಣೆ ಮುಗಿದು ಆರೋಪಿಗಳಿಗೆ ಶಿಕ್ಷೆ ಆಯಿತಾ? ಆ ಹುಡುಗಿ ಕತೆ ಏನಾಯಿತು? ಇದನ್ನು ಯಾರೂ ಗಮನಿಸುವುದಿಲ್ಲ.
ಇಂಥಹಾ ಪ್ರಕರಣಗಳು ಆಗುವಾಗ ಒಮ್ಮೆ ಸಮಾಜ, ಸರಕಾರ, ಮಾಧ್ಯಮಗಳು ಅಲರ್ಟ್ ಆಗುತ್ತವೆ. ಮತ್ತೆ ಕೆಲವೇ ದಿನಗಳಲ್ಲಿ ಮರೆತೇ ಬಿಡುತ್ತವೆ. ಇದು ಈವರೆಗೆ ಆಗಿರುವುದು!
ಅತ್ಯಾಚಾರಕ್ಕೆ ಒಳಗಾದ ಹುಡುಗಿ ತನ್ನ ಜೀವನ ಪೂರ್ತಿಯಾಗಿ ಮಾನಸಿಕವಾಗಿ ಜರ್ಜರಿತವಾಗಿ ಬದುಕುವಾಗ ಅದಕ್ಕೆ ಕಾರಣರಾದವರು 5-7 ವರ್ಷ ಮಾತ್ರ ಜೈಲುವಾಸವನ್ನು ಅನುಭವಿಸುವುದು, ಮತ್ತೆ ಹೊರಬಂದು ತಮ್ಮ ಹಳೆಯ ಚಾಳಿಗಳನ್ನು ಮುಂದುವರಿಸುವುದು ಖಂಡಿತವಾಗಿಯೂ ಅನ್ಯಾಯ. ಅತ್ಯಾಚಾರದ ಪ್ರಕರಣಗಳನ್ನು ನ್ಯಾಯಾಲಯವು ಸಾಮಾನ್ಯ ಪ್ರಕರಣಗಳ ಹಾಗೆ ವಿಚಾರಣೆ ಮಾಡಬಾರದು. ತ್ವರಿತ ವಿಚಾರಣೆ ಆಗಬೇಕು ಮತ್ತು ಆಪರಾಧಿಗಳಿಗೆ ಅತ್ಯಂತ ಕಠಿಣವಾದ ಶಿಕ್ಷೆ ಆಗಬೇಕು ಎನ್ನುವುದು ನಮ್ಮೆಲ್ಲರ ಆಶಯ ಆಗಬೇಕು. ಅತ್ಯಾಚಾರ ಮಾಡಿದವರು ಎಷ್ಟೇ ಪ್ರಭಾವಶಾಲಿ ಆದರೂ ತಪ್ಪಿಸಿಕೊಳ್ಳಲು ಅವಕಾಶ ಇರಬಾರದು.
ಅವರನ್ನು ಎನ್ಕೌಂಟರ್ ಮಾಡಿ ಸಾಯಿಸಿಬಿಡಿ ಹೀಗೆಲ್ಲ ಹೇಳಿಕೆ ಕೊಡುವವರು ಇದ್ದಾರೆ. ದೇಶದ ಕಾನೂನನ್ನು ಗೌರವಿಸುವವರು ಹಾಗೆ ಹೇಳುವುದಿಲ್ಲ!
ಅತ್ಯಾಚಾರಗಳು ಸಮಾಜದ ಪುರುಷ ಪ್ರಧಾನವಾದ ಮಾನಸಿಕತೆಯ ಪ್ರತೀಕ ಎನ್ನುವವರು ಕೂಡಾ ಇದ್ದಾರೆ. ಅದನ್ನು ಕೂಡ ನಾನು ಒಪ್ಪುವುದಿಲ್ಲ. ಅವುಗಳು ಕೇವಲ ವಿಕೃತ ಮನಸ್ಸಿನ ಪ್ರತೀಕಗಳು. ಕುಡಿತ, ಡ್ರಗ್ಸ್ ಮೊದಲಾದ ವ್ಯಸನಗಳು, ಜಾಲತಾಣಗಳು ಹರಡುವ ವಿಕೃತ ಮನಸ್ಥಿತಿ, ಸ್ವೇಚ್ಛೆಯ ಹೆಸರಿನಲ್ಲಿ ದಾರಿತಪ್ಪುವ ಯುವಜನತೆ, ದಾರಿ ತಪ್ಪಿಸುವ ಸಾಮಾಜಿಕ ಜಾಲತಾಣಗಳು, ಮಕ್ಕಳು ಮಾಡಿದ್ದನ್ನೆಲ್ಲ ಸಮರ್ಥನೆ ಮಾಡಲು ಹೊರಡುವ ಪೋಷಕರು ಇವರೆಲ್ಲರೂ ಅತ್ಯಾಚಾರದ ಪ್ರಕರಣಗಳಿಗೆ ಪರೋಕ್ಷವಾಗಿ ಕಾರಣರಾಗುತ್ತಾರೆ.
ಕ್ಯಾರೆಕ್ಟರ್ ಅನ್ನುವುದು ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಅದು ಗಂಡು ಮಕ್ಕಳಿಗೆ ಕೂಡ ಅನ್ವಯ ಆಗುತ್ತದೆ. ಹೆಣ್ಣುಮಕ್ಕಳಿಗೆ ಬಿಗಿ ಬಂಧನಗಳನ್ನು ಹಾಕಿ ಗಂಡು ಮಕ್ಕಳಿಗೆ ಹೆಚ್ಚು ಸ್ವಾತಂತ್ರ್ಯ ಕೊಡುವ ಪೋಷಕರನ್ನು ನಾನು ನೋಡಿದ್ದೇನೆ. ಅದು ಖಂಡಿತ ತಪ್ಪು. ತುಂಬಾ ತಡವಾಗಿ ಮನೆಗೆ ಬರುವ ಮಗಳನ್ನು ನೂರು ಕಾರಣ ಕೇಳುವ ಅಪ್ಪ ಅಮ್ಮಂದಿರು ಗಂಡು ಮಕ್ಕಳಿಗೆ ಕೂಡ ಕಾರಣ ಕೇಳಬೇಕು ಅಲ್ವಾ?
ಗೆಳೆಯ, ಗೆಳತಿಯರಾಗಲಿ, ಪ್ರೇಮಿಗಳಾಗಲಿ ರಾತ್ರಿ ಕತ್ತಲಾದ ನಂತರ ನಿರ್ಜನ ಪ್ರದೇಶ ಹುಡುಕಿಕೊಂಡು ಹೋಗುವ ಅಗತ್ಯ ಇದೆಯಾ? ಇಡೀ ಜಗತ್ತಿಗೆ ಸಿಸಿ ಕ್ಯಾಮೆರಾ ಹಾಕಿಕೊಂಡು ಪೊಲೀಸರು ಕಾವಲು ಕಾಯಲು ಸಾಧ್ಯ ಇದೆಯಾ? ಎಲ್ಲವನ್ನೂ ಪೊಲೀಸರ ತಲೆಗೆ ಕಟ್ಟಿ, ಬೇಕಾಬಿಟ್ಟಿ ಹೇಳಿಕೆಗಳನ್ನು ಕೊಡುವ ನಮ್ಮ ರಾಜಕೀಯ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಜಗತ್ತಿನ ಎಲ್ಲಿ ಅತ್ಯಾಚಾರಗಳು ನಡೆದರೂ ಅದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಸಂತ್ರಸ್ತೆಗೆ ಸಿಗಬೇಕಾದ ನ್ಯಾಯವನ್ನು ಕೊಡಿಸುತ್ತೇವೆ ಎಂದು ಮಂತ್ರಿಗಳು, ಶಾಸಕರು ತುಂಬಾ ಗಟ್ಟಿಯಾಗಿ ಹೇಳಬೇಕು. ಅದನ್ನು ಬಿಟ್ಟು ಸಮಾಜವನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಬಾರದು. ರೇಪ್ ನಡೆದಾಗ ಅದರಲ್ಲಿ ತಮ್ಮ ರಾಜಕೀಯ ಲಾಭ ಪಡೆಯಲು ಪ್ರಯತ್ನ ಮಾಡುವರು ಕೂಡ ಅಪರಾಧಿಗಳು ಅಲ್ಲವೇ?
ಇನ್ನು ಒಂದು ಸ್ಟ್ರಾಂಗ್ ಮಾತನ್ನು ಹದಿಹರೆಯದ ಮಕ್ಕಳ ಅಪ್ಪನಾಗಿ ನಾನು ಹೇಳಬೇಕು. ಸ್ವಾತಂತ್ರ್ಯ ಮತ್ತು ಸ್ವೇಚ್ಛೆಗಳ ನಡುವೆ ತುಂಬಾ ದೊಡ್ಡ ವ್ಯತ್ಯಾಸ ಇದೆ.
ಇನ್ನೂ ಕೆಲವು ಮಾಡರ್ನ್ ಪೋಷಕರು ಇದ್ದಾರೆ. ನಮ್ಮ ಮಕ್ಕಳ ಮೇಲೆ ನಮಗೆ ನಂಬಿಕೆ ಇದೆ, ಅವರು ಎಲ್ಲಿ ಬೇಕಾದರೂ ಹೋಗಬಹುದು, ಎಷ್ಟು ಲೇಟ್ ಆದರೂ ಮನೆಗೆ ಬರಬಹುದು, ನನ್ನ ಮಕ್ಕಳ ನಿಜವಾದ ಅಗತ್ಯಕ್ಕಿಂತ ಹೆಚ್ಚು ಪಾಕೆಟ್ ಮನಿ ಕೊಡ್ತೇವೆ, ನನ್ನ ಮಗ, ಮಗಳು ಮಧ್ಯರಾತ್ರಿ ಕಳೆದು ಎಷ್ಟು ಲೇಟ್ ಆದ್ರೂ ಆನ್ಲೈನ್ ಇರುತ್ತಾರೆ, ಅದನ್ನು ಪ್ರಶ್ನೆ ಮಾಡಲು ನೀವ್ಯಾರು? ತನ್ನ ಇಷ್ಟಪಡುವ ಗೆಳೆಯ,ಗೆಳತಿಯರ ಜೊತೆಗೆ ಬಾರ್, ಪಬ್, ರೆಸಾರ್ಟ್ಸ್, ಡ್ಯಾನ್ಸಿಂಗ್ ಬಾರ್, ಹುಕ್ಕಾ ಬಾರಗಳಿಗೆ ಹೋದರೆ ಏನು ತಪ್ಪು? ಅವರು ನಮ್ಮ ಕಾಲದವರ ಹಾಗೆ ಮನೆಯ ಮೂಲೆಯಲ್ಲಿ ಕಳೆದುಹೋಗಬೇಕೆ? ಹೀಗೆಲ್ಲ ಪ್ರಶ್ನೆ ಮಾಡುವ ಪೋಷಕರು ಸ್ವತಃ ತಮ್ಮ ಮಕ್ಕಳನ್ನು ಗುಂಡಿಗೆ ನೂಕುತ್ತಾರೆ. ಅಂತವರು ಎಲ್ಲಾ ಕಾಲ ಮಿಂಚಿದ ನಂತರ ಅಯ್ಯೋ! ಎಂದು ಕಣ್ಣೀರನ್ನು ಸುರಿಸುತ್ತಾ ಸರಕಾರವನ್ನು, ಪೊಲೀಸರನ್ನು ಬಯ್ಯಬಾರದು ಅಲ್ಲವೇ? ನಮ್ಮ ಮಾಧ್ಯಮಗಳಿಗೂ ಅತ್ಯಾಚಾರವು ಒಂದು ಪ್ರಮುಖ TRP ಸರಕು ಆಗಬಾರದು.
ನನ್ನ ಟಿವಿ ಕಾರ್ಯಕ್ರಮಕ್ಕೆ ಬಂದಿದ್ದ ಕಾಲೇಜು ಹುಡುಗಿ ಒಬ್ಬಳು ‘ವಿಚ್ಛೇದನ ಅನ್ನುವುದು ಸ್ತ್ರೀ ಸ್ವಾತಂತ್ರ್ಯದ ಪ್ರತೀಕ’ ಅಂದಿದ್ದಳು. ಅದನ್ನಾದರೂ ಒಪ್ಪೋಣ.
ಸಿನೆಮಾ ನಟಿ ಒಬ್ಬಳು ಮೂರು ಮದುವೆಯಾದಳು ಅಂದಾಗ ಇನ್ನೊಬ್ಬಳು ಮಾಡರ್ನ್ ಹುಡುಗಿ ‘ಅದು ಅವಳ ಪರ್ಸನಲ್ ಲೈಫ್ ಅಲ್ವಾ? ಅವಳದ್ದು ಏನೂ ತಪ್ಪಿಲ್ಲ’ ಅಂದಿದ್ದಳು! ಅದನ್ನು ಕೂಡ ಸ್ವಲ್ಪ ಮಟ್ಟಿಗೆ ಒಪ್ಪಬಹುದು.
ಮೂರು ಮದುವೆಯಾಗಿ ಸುಖವನ್ನು ಅನುಭವಿಸಿದ ದಕ್ಷಿಣ ಭಾರತದ ಒಬ್ಬ ಖ್ಯಾತ ನಟ ಮುಂದೆ ನಾಲ್ಕನೇ ಹೆಂಗಸಿನ ಸೆರಗನ್ನು ಹಿಡಿದು ಲಿವಿಂಗ್ ಟುಗೆದರ್ ರಿಲೇಶನ್ ಹೊಂದುತ್ತಾನೆ. ಅವನ ಮಗಳು (ಅವಳು ಕೂಡ ಸಿನೆಮಾ ನಟಿ) ನನಗೆ ಅಪ್ಪನ ಹಾಗೆ ಮದುವೆಗಳಲ್ಲಿ ನಂಬಿಕೆಯೇ ಇಲ್ಲ ಎಂದು ಹೇಳುತ್ತಾಳೆ! ಅವರೆಲ್ಲರೂ ಸೆಲೆಬ್ರಿಟಿಗಳು, ಅವರನ್ನು ಫಾಲೋ ಮಾಡುವ ಬಹುದೊಡ್ಡ ಯುವಪಡೆ ಇದೆ ಅನ್ನುವುದನ್ನು ನಾವೆಲ್ಲರೂ ಮರೆಯಬಾರದು. ಇಂಥವರ ನಡೆ, ನುಡಿಗಳನ್ನು ಸಮರ್ಥನೆ ಮಾಡುವ ಯುವಕ ಯುವತಿಯರು ನಮಗೆ ಎಲ್ಲಾ ಕಾಲೇಜುಗಳಲ್ಲಿ ಸಿಗುತ್ತಾರೆ!
ಇನ್ನೂ ಒಬ್ಬ ಕಾಲೇಜು ಹುಡುಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಕಾಲೇಜು ವೇದಿಕೆಯಲ್ಲಿ ಹೀಗೆ ಹೇಳಿ ಚಪ್ಪಾಳೆ ಗಿಟ್ಟಿಸಿದ್ದ- ನನ್ನ ಅಪ್ಪ ನನ್ನ ಅಮ್ಮ ಮೂವತ್ತು ವರ್ಷಗಳ ಕಾಲ ಅದು ಹೇಗೆ ಜೊತೆಯಾಗಿ ಬದುಕಿದರೋ? ನನಗೆ ಅವರ ಬಗ್ಗೆ ಅಯ್ಯೋ ಪಾಪ ಅನ್ನಿಸುತ್ತದೆ ಎಂದು ಹೇಳಿದ್ದ.
ಮದುವೆಯಾದ ಗಂಡ, ಹೆಂಡತಿಯರು ಪರಸ್ಪರ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಮೆಟ್ಟಿನಿಂತು 30-40 ವರ್ಷ ಜೊತೆಯಾಗಿ ಬದುಕಿದ ನೂರಾರು ಉದಾಹರಣೆಗಳು ಇವೆ ಒಂದೆಡೆ!
ಅದ್ದೂರಿಯಾಗಿ ಮದುವೆ ಮಾಡಿಕೊಟ್ಟ ಅಪ್ಪ ಅಮ್ಮನ ಮುಂದೆ ಬಂದು (ಮದುವೆಯಾದ ಕೇವಲ ಒಂದೆರಡು ತಿಂಗಳಲ್ಲಿ) ಅವನ ಬಗ್ಗೆ ಇಷ್ಟುದ್ದ ಚಾಡಿ ಹೇಳಿ ಮದುವೆ ಮುರಿಯಲು ಸಿದ್ದರಾಗುವ ಹೆಣ್ಮಕ್ಕಳು ಇನ್ನೊಂದೆಡೆ!
ಇಷ್ಟವಾಗದ ಗಂಡನ ಜೊತೆಗೆ ಜೀವನ ಪೂರ್ತಿಯಾಗಿ ಬದುಕಲು ನಾನು ನನ್ನ ಅಮ್ಮ ಅಲ್ಲ ಎಂದು ಧಿಮಾಕು ತೋರುವ ಮಗಳು ಮತ್ತೊಂದು ಕಡೆ!
ಐವತ್ತು ವರ್ಷಗಳ ದಾಂಪತ್ಯವನ್ನು ಯಶಸ್ವೀ ಆಗಿ ಪೂರೈಸಿದ ಹೆಂಡತಿ ತೀರಿಹೋದಾಗ ಪುಟ್ಟ ಮಗುವಿನ ಹಾಗೆ ಜೋರಾಗಿ ಕಣ್ಣೀರು ಸುರಿಸಿದ ಗಂಡ ಇನ್ನೊಂದು ಕಡೆ!
ಮದುವೆಯ ಮೊದಲ ರಾತ್ರಿಯೇ ನನ್ನ ಮೈ ಮುಟ್ಟಿದರೆ ಜಾಗ್ರತೆ, ನಾನು ಬೇರೆ ಒಬ್ಬನನ್ನು ಪ್ರೀತಿ ಮಾಡ್ತಾ ಇದ್ದೇನೆ. ಹೆತ್ತವರ ಒತ್ತಾಯಕ್ಕೆ ನಾನು ಈ ಮದುವೆ ಆಗಬೇಕಾಯಿತು. ನನಗೆ ಡೈವೋರ್ಸ್ ಬೇಕು ಎಂದು ಕೇಳುವ ಹುಡುಗಿ ಇನ್ನೊಂದೆಡೆ!
ಸಮಾಜ ಯಾವ ಕಡೆ ಹೋಗ್ತಾ ಇದೆ ಹೇಳಿ?
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ವೈರಿ ಕೋಟೆಯನ್ನು ಪುಡಿಗಟ್ಟುತ್ತಿದ್ದ ಹಾಕಿ ಆಟದ ವಿಶ್ವವಿಜೇತ ಧ್ಯಾನ್‌ಚಂದ್‌ಗೆ Happy Birthday!