Site icon Vistara News

ರಾಜ ಮಾರ್ಗ ಅಂಕಣ : ಡಾಕ್ಟರ್ ಕೊಟ್ನಿಸ್ ಕೀ ಅಮರ್ ಕಹಾನಿ; ಇವತ್ತಿಗೂ ಇಡೀ ಚೀನಾ ಎದ್ದು ನಿಂತು ಗೌರವಿಸುವ ಭಾರತೀಯ ವೈದ್ಯನ ಕಥೆ!

Dr Kotnis

#image_title

ಭಾರತ ಮತ್ತು ಚೀನಾಗಳ ಸಂಬಂಧವು ಇವತ್ತಿಗೂ ಮಧುರವಾಗಿ ಇಲ್ಲ. ಆ ಕಮ್ಯುನಿಸ್ಟ್ ಸರ್ಕಾರ ಭಾರತದ ವಿರುದ್ಧ ಸಂಚು ಹೂಡಿದ್ದೇ ಹೆಚ್ಚು. ಅಂತಹ ರಾಷ್ಟ್ರವು ಭಾರತದ ಒಬ್ಬ ವೈದ್ಯರಿಗೆ ಸ್ಮಾರಕ ನಿರ್ಮಾಣ ಮಾಡಿ ರಾಷ್ಟ್ರೀಯ ಗೌರವ ಕೊಟ್ಟಿತು ಎಂದರೆ ನಮಗೆ ನಿಮಗೆ ನಂಬುವುದು ಭಾರೀ ಕಷ್ಟ ಆಗಬಹುದು! ಚೀನಾದಲ್ಲಿ ಪ್ರತಿಯೊಬ್ಬ ವೈದ್ಯನೂ ತನ್ನ ಪದವಿಯನ್ನು ಪಡೆಯುವ ಮೊದಲು ಆ ಸ್ಮಾರಕಕ್ಕೆ ವಂದಿಸಿ ಬರುತ್ತಾರೆ ಅಂದರೆ ನಮಗೆ ಇನ್ನೂ ಆಶ್ಚರ್ಯ ಆಗಬಹುದು. ಚೀನಾದ ಅಧ್ಯಕ್ಷರು ಅಥವಾ ಯಾರೇ ರಾಜತಾಂತ್ರಿಕ ಪ್ರಮುಖರು ಭಾರತಕ್ಕೆ ಭೇಟಿ ಕೊಡುವ ಸಂದರ್ಭದಲ್ಲಿ ಮಹಾರಾಷ್ಟ್ರದ ಸೋಲಾಪುರದಲ್ಲಿ ಇರುವ ಅವರ ಕುಟುಂಬವನ್ನು ಈಗಲೂ ಭೇಟಿ ಮಾಡಿ ಗೌರವ ಸಲ್ಲಿಸುತ್ತಾರೆ ಎಂದರೆ ಆ ವೈದ್ಯರ ಪ್ರಭಾವ ಎಷ್ಟಿರಬಹುದು ಹೇಳಿ!

ಅವರೇ ವೈದ್ಯ ಡಾಕ್ಟರ್ ದ್ವಾರಕಾನಾಥ್ ಕೊಟ್ನೀಸ್!

ಭಾರತ ಮತ್ತು ಚೀನಾ ನಡುವಿನ ಸಂಬಂಧಗಳ ಕುರಿತು ಪ್ರಸ್ತಾವ ಮಾಡುವಾಗಲೆಲ್ಲ ಅವರ ಹೆಸರನ್ನು ಉಲ್ಲೇಖ ಮಾಡದೇ ಮುಂದೆ ಹೋಗಲು ಸಾಧ್ಯವೇ ಇಲ್ಲ. ಕೇವಲ 32 ವರ್ಷ ಬದುಕಿದ್ದ ಹಾಗೂ ತನ್ನ ಬದುಕಿನ ಪ್ರತಿ ಕ್ಷಣವನ್ನೂ ರೋಗಿಗಳ ಸೇವೆಗೆ ಮೀಸಲಿಟ್ಟ ಡಾಕ್ಟರ್ ಕೊಟ್ನೀಸ್ ಅಜರಾಮರ. ಅವರ ಬದುಕೇ ಒಂದು ಅದ್ಭುತ ಯಶೋಗಾಥೆ!

ಡಾ. ಕೋಟ್ನಿಸ್‌ ಅವರಿಗೆ ಚೀನಾ ನೀಡುತ್ತಿರುವ ಗೌರವ ಇದು.

ಮಹಾರಾಷ್ಟ್ರದ ಸೋಲಾಪುರ ಎಂಬ ನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಅವರು ಸ್ವಂತ ಪರಿಶ್ರಮದಿಂದ ವೈದ್ಯಕೀಯ ಪದವಿಯನ್ನು ಪಡೆದವರು. ಸ್ನಾತಕೋತ್ತರ ಪದವಿಗೆ ಅವರ ಸಿದ್ಧತೆಯು ನಡೆದಿತ್ತು. ಅದೇ ಹೊತ್ತಿಗೆ(1938) ಚೀನಾ ಮತ್ತು ಜಪಾನ್ ನಡುವೆ ಯುದ್ಧವು ಆರಂಭವಾಯಿತು. ಇಡೀ ವರ್ಷ ಯುದ್ಧವು ಮುಂದುವರಿದಾಗ ಚೀನಾದಲ್ಲಿ ಯುದ್ಧದ ಗಾಯಾಳುಗಳ ಚಿಕಿತ್ಸೆ ತುಂಬಾನೇ ಕಷ್ಟವಾಯಿತು. ಚೀನಾದಲ್ಲಿ ಆಧುನಿಕ ಮೆಡಿಕಲ್ ಕಾಲೇಜು ಇರಲಿಲ್ಲ. ವೃತ್ತಿಪರ ವೈದ್ಯರ ಕೊರತೆಯಿಂದ ಚೀನಾ ಸಂತ್ರಸ್ತವಾಯಿತು. ಆಗ ಅನಿವಾರ್ಯವಾಗಿ ಚೀನಾ ಭಾರತದ ಮೊರೆ ಹೋಯಿತು. ಸ್ವಯಂಸೇವಾ ಮನೋಭಾವದ ವೈದ್ಯರು ಬಂದು ಯುದ್ಧ ಸಂತ್ರಸ್ತರಿಗೆ ಚಿಕಿತ್ಸೆ ಒದಗಿಸಬೇಕೆಂದು ಕರೆಕೊಟ್ಟಿತು.

ನೇತಾಜಿ ಸುಭಾಸ್ ಚಂದ್ರರು ಭಾರತದ ವೈದ್ಯರಿಗೆ ಕರೆ ನೀಡಿದರು!

ಆಗ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ನೇತಾಜಿ ಸುಭಾಶ್ಚಂದ್ರ ಬೋಸರು ಈ ಬಗ್ಗೆ ಒಂದು ಪತ್ರಿಕಾಗೋಷ್ಠಿ ನಡೆಸಿದರು. ಭಾರತೀಯ ವೈದ್ಯರಿಗೆ ಚೀನಾಕ್ಕೆ ಹೋಗಿ ಸೇವೆ ಸಲ್ಲಿಸಲು ಕರೆ ನೀಡಿದರು. ಅವರ ವಿನಂತಿಗೆ ಸ್ಪಂದನೆ ನೀಡಿದ ಐದು ಮಂದಿ ಭಾರತೀಯ ವೈದ್ಯರು ಚೀನಾಕ್ಕೆ ಹೊರಟರು. ಅವರಲ್ಲೊಬ್ಬರು ಡಾಕ್ಟರ್ ದ್ವಾರಕಾನಾಥ್ ಕೋಟ್ನೀಸ್!

ಸೇವೆ ಎಂಬ ಯಜ್ಞಕ್ಕೆ ಹವಿಸ್ಸಾಗಲು ಚೀನಾಕ್ಕೆ ಹೊರಟರು!

ಡಾಕ್ಟರ್ ಕೋಟ್ನೀಸ್ ಅವರಿಗೆ ಮದುವೆ ಆಗಿರಲಿಲ್ಲ. ಮನೆಯವರು ಹುಡುಗಿ ಹುಡುಕುತ್ತಿದ್ದರು. ಆತ ಸ್ಫುರದ್ರೂಪಿ ತರುಣ. ಅವರಿಗೆ ಹತ್ತಾರು ಪ್ರಪೋಸಲ್‌ಗಳು ಆಗಲೇ ಬಂದಿದ್ದವು. ಆದರೆ ಚೀನಾಕ್ಕೆ ಹೋಗಲೇಬೇಕು ಎಂದು ನಿರ್ಧಾರ ಮಾಡಿದ ವೈದ್ಯರಿಗೆ ತನ್ನ ಮನೆಯವರನ್ನು ಒಪ್ಪಿಸುವುದು ತುಂಬಾ ಕಷ್ಟದ ಕೆಲಸವಾಗಿತ್ತು. ಹೆತ್ತವರ ಆತಂಕವೂ ಸಹಜವಾಗಿತ್ತು. ಆದರೆ ಕೊಟ್ನೀಸ್ ಅವರ ನಿರ್ಧಾರ ಅಚಲವಾಗಿತ್ತು.

ಚೀನಾದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು!

ಚೀನಾಕ್ಕೆ ಬಂದ ವೈದ್ಯರ ತಂಡವು ತಕ್ಷಣ ರೋಗಿಗಳ ಸೇವೆಗೆ ನಿಲ್ಲಬೇಕಾಯಿತು. ಅಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ಆಸ್ಪತ್ರೆಗಳು ಮಾರಕವಾಗಿ ಗಾಯಗೊಂಡ ಸೈನಿಕರಿಂದ ತುಂಬಿ ತುಳುಕುತ್ತಿದ್ದವು. ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿದ್ದವು.

ಆ ವೈದ್ಯರ ತಂಡವು ಸಂಚಾರಿ ಕ್ಲಿನಿಕ್ ಮೂಲಕ ಗುಡ್ಡಗಾಡು ಪ್ರದೇಶಗಳಲ್ಲಿ ಸಂಚರಿಸಿ ಚಿಕಿತ್ಸೆ ನೀಡಲು ತೊಡಗಿತು. ಆದರೆ ಒಂದು ವರ್ಷ ಆದರೂ ಯುದ್ಧ ನಿಲ್ಲಲಿಲ್ಲ. ಔಷಧಗಳ ಸಂಗ್ರಹ ಬರಿದಾಯಿತು. ನಿದ್ದೆ, ವಿಶ್ರಾಂತಿ ಪಡೆಯಲು ಅವರಿಗೆ ಪುರುಸೊತ್ತೇ ಇಲ್ಲ! ಒಮ್ಮೆಯಂತೂ 72 ಗಂಟೆ ನಿದ್ದೆ ಮಾಡದೆ ಸರಣಿ ಆಪರೇಷನ್ ಮಾಡಬೇಕಾಯಿತು. ಒತ್ತಡಗಳ ನಡುವೆ ಕೂಡ ಅವರು ಮನೆಗೆ ವಾರಕ್ಕೊಮ್ಮೆ ಪತ್ರ ಬರೆಯುವುದನ್ನು ಮರೆಯಲಿಲ್ಲ. ಉಳಿದ ನಾಲ್ಕು ವೈದ್ಯರು ಸೋತು ಸುಣ್ಣವಾಗಿ ಒಂದೇ ವರ್ಷದಲ್ಲಿ ಭಾರತಕ್ಕೆ ಹಿಂದಿರುಗುತ್ತಾರೆ. ಆದರೆ ಕೋಟ್ನೀಸ್ ಚೀನಾದಲ್ಲಿಯೇ ಉಳಿದುಬಿಡುತ್ತಾರೆ ಮತ್ತು ತನ್ನ ಹೆಸರನ್ನು ಕೆ ದಿಹುವಾ ಎಂದು ಬದಲಿಸುತ್ತಾರೆ. ತಮ್ಮೊಂದಿಗೆ ನರ್ಸ್ ಆಗಿದ್ದ ಗುವೋ ಕಿಂಗ್ಲಾನ್ ಎಂಬ ಸುಂದರ ಹುಡುಗಿಯನ್ನು ಪ್ರೀತಿಸಿ ಅವರು ಮದುವೆಯಾಗುತ್ತಾರೆ. ಭಾರತ ಚೀನಾ ನಡುವಿನ ಮೊದಲ ಅತ್ಯಂತ ಸುಂದರ ಪ್ರೇಮಕತೆ ಅದು!

ಆ ದಂಪತಿಗಳಿಗೆ ಗಂಡು ಮಗು ಹುಟ್ಟಿತು. ಮಗುವಿಗೆ ‘ಯಿನ್ ಹುವಾ’ ಎಂದು ಹೆಸರಿಡುತ್ತಾರೆ. ಯಿನ್ ಎಂದರೆ ಚೀನಾ ಭಾಷೆಯಲ್ಲಿ ಭಾರತ, ಹುವಾ ಎಂದರೆ ಚೀನಾ ಎಂದರ್ಥ!

ಡಾಕ್ಟರ್ ಕೊಟ್ನೀಸ್ ಆರೋಗ್ಯ ಕೈ ಕೊಟ್ಟಿತು.

ಮುಂದೆ ಅವಿಶ್ರಾಂತವಾದ ದುಡಿಮೆಯಿಂದ ಅವರ ಆರೋಗ್ಯ ಹಾಳಾಯಿತು. ಚೀನಾ ಸರಕಾರ ಕೊಟ್ಟ ಒಂದು ಹಳೆಯ ಜೀಪಿನಲ್ಲಿ ಅವರು ದಿನವೂ ಮೈಲುಗಟ್ಟಲೆ ದೂರ ಪ್ರಯಾಣ ಮಾಡಿ ರೋಗಿಗಳ ಚಿಕಿತ್ಸೆ ನೀಡುತ್ತಿದ್ದರು. ಔಷಧಗಳ ಕೊರತೆ ಇದ್ದರೂ ಗೊಣಗದೆ ವೈದ್ಯಕೀಯ ಸೇವೆ ನೀಡುತ್ತಾ ಮುಂದುವರಿದರು. ತನ್ನ ಆರೋಗ್ಯದ ಬಗ್ಗೆ ಯೋಚನೆಯನ್ನೇ ಮಾಡಲಿಲ್ಲ. ಮಗು ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ತೀವ್ರವಾದ ಅಪಸ್ಮಾರದಿಂದ ಅವರು ತನ್ನ ಅಸುನೀಗಿದರು. ಆಗ ಅವರಿಗೆ ಕೇವಲ 32 ವರ್ಷ ಪ್ರಾಯ ಆಗಿತ್ತು!

ಚೀನಾ ಸರಕಾರ ಅವರಿಗೆ ಕಂಬನಿ ಮಿಡಿಯಿತು!

ಒಟ್ಟು ನಾಲ್ಕು ವರ್ಷಗಳ ಅವಧಿಯಲ್ಲಿ ಅವರು ಚೀನಾದ ಸಾವಿರಾರು ಸೈನಿಕರ ಪ್ರಾಣ ಉಳಿಸಿದ್ದನ್ನು ಚೀನಾ ಸರ್ಕಾರ ಮರೆಯಲಿಲ್ಲ. ಚೀನಾದ ಆಗಿನ ಮುಖ್ಯಸ್ಥ ಮಾವೋ ಕಣ್ಣೀರು ಸುರಿಸುತ್ತ ಹೇಳಿದ ಮಾತು ತುಂಬಾ ಸ್ಮರಣೀಯ.

‘The army has lost a helping hand. The nation has lost a friend. Let’s always bear in mind his internationalist spirit!’ ಎಂದು ಶ್ರದ್ಧಾಂಜಲಿ ಅರ್ಪಿಸುತ್ತಾರೆ. ಶಿಜಿಯಾಝವಂಗ್ ಎಂಬಲ್ಲಿ ಚೀನಾ ಸರ್ಕಾರ ಅವರಿಗೆ ಸ್ಮಾರಕ ನಿರ್ಮಿಸಿತು. ಈ ಕಡೆ ಭಾರತ ಸರ್ಕಾರ ಅವರ ಹುಟ್ಟೂರು ಸೋಲಾಪುರದಲ್ಲಿ ಅವರ ಪ್ರತಿಮೆ ನಿರ್ಮಿಸಿತು. ಎರಡೂ ರಾಷ್ಟ್ರಗಳು ಅವರ ಸ್ಮಾರಕ ಅಂಚೆ ಚೀಟಿಗಳನ್ನು ಹೊರತಂದವು. ಮುಂದೆ ಚೀನಾದ ಮುಖ್ಯಸ್ಥರು ಭಾರತಕ್ಕೆ ಬಂದಾಗಲೆಲ್ಲ ಅವರ ಹುಟ್ಟೂರಿಗೆ ಹೋಗಿ ಅವರ ಕುಟುಂಬವನ್ನು ಭೇಟಿ ಮಾಡುವ ಸಂಪ್ರದಾಯ ಆರಂಭವಾಯಿತು.

ಚೀನಾದಲ್ಲಿರುವ ಡಾ. ಕೋಟ್ನಿಸ್‌ ಪ್ರತಿಮೆ

ಅವರ ಯಶೋಗಾಥೆ ಜನಪ್ರಿಯ ಸಿನೆಮಾ ಆಯಿತು!

ಮುಂದೆ ಖ್ಯಾತ ನಿರ್ದೇಶಕ ಶಾಂತಾರಾಮ್ ಅವರು ಅದೇ ವೈದ್ಯರ ಬದುಕನ್ನು ಆಧರಿಸಿ ಡಾ. ಕೋಟ್ನಿ‌ಸ್ ಕೀ ಅಮರ್ ಕಹಾನಿ ಎಂಬ ಹಿಂದಿ ಸಿನಿಮಾ ಹೊರತಂದು ಅದೂ ಜನಪ್ರಿಯ ಆಯಿತು. ಅವರ ಬಗ್ಗೆ ಹಲವು ಪುಸ್ತಕಗಳು ಭಾರತದ ಎಲ್ಲ ಭಾಷೆಯಲ್ಲಿಯೂ ಹೊರಬಂದವು. ಅವರು ನಿಜವಾದ ಅರ್ಥದಲ್ಲಿ ವಿಶ್ವ ಮಾನವ ಆದರು. ಕೊಟ್ನೀಸ್ ಮರಣದ ನಂತರ ಅವರ ಚೀನಾದ ಪತ್ನಿಯು ತನ್ನ ಮಗುವಿನ ಜೊತೆಗೆ ಭಾರತಕ್ಕೆ ಬಂದು ಅವರ ಸೋಲಾಪುರದ ಮನೆಯವರನ್ನು ಭೇಟಿ ಮಾಡಿ ಕಣ್ಣೀರು ಹಾಕಿದ್ದು, ಅವರನ್ನು ವೈದ್ಯರ ಮನೆಯವರು ಮನೆಯ ಸೊಸೆಯಾಗಿ ಸ್ವೀಕಾರ ಮಾಡಿದ್ದು ಮರೆಯುವ ದೃಶ್ಯವೇ ಅಲ್ಲ!

ಭರತ ವಾಕ್ಯ

ಮಾನವ ಸೋದರತೆಯು ರಾಷ್ಟ್ರಗಳ ಎಲ್ಲೆಗಳನ್ನು ಮೀರಿ ನಿಲ್ಲುವ ಅದ್ಭುತವಾದ ವ್ಯಕ್ತಿತ್ವವು ಅವರದ್ದು. ಡಾಕ್ಟರ್ ದ್ವಾರಕಾನಾಥ ಕೊಟ್ನೀಸ್ ಸೇವೆ, ಅವರ ದಣಿವರಿಯದ ಜೀವನೋತ್ಸಾಹ ಅಜರಾಮರ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಶ್ರೀರಾಮನ ಹಾಗೆ ಬದುಕುವುದು ಕಷ್ಟ; ನಿಜ ಅಂದ್ರೆ ರಾವಣ ಆಗುವುದು ಕೂಡಾ ಅಷ್ಟೇ ಕಷ್ಟ!

Exit mobile version