1914ರಲ್ಲಿ ಬ್ರಿಟಿಷ್ ಸರಕಾರದಿಂದ ನಿರ್ಮಾಣಗೊಂಡ ತಮಿಳುನಾಡಿನ ಪಾಂಬನ್ ಸೇತುವೆಯ ಹಿಂದೆ ಹಲವು ದುರಂತಗಳು ಇವೆ. ಜೊತೆಗೆ ಹಲವು ಯಶೋಗಾಥೆಗಳು ಇವೆ! ಸಮುದ್ರದ ಮೇಲಿನ ಭಾರತದ ಮೊದಲ ಸೇತುವೆ ಆಗಿತ್ತು ಅದು!
ಬ್ರಿಟಿಷರ ಕಾಲದ ಆ ಸೇತುವೆಯ ನಿರ್ಮಾಣಕ್ಕೆ ತಗುಲಿದ ಅವಧಿ ಬರೋಬ್ಬರಿ 25 ವರ್ಷಗಳು! ಸಮುದ್ರದ ಮೇಲೆ ನಿರ್ಮಾಣವಾದ ಭಾರತದ ಮೇಲಿನ ಮೊದಲನೇ ಸೇತುವೆ ಅದು!
ತಮಿಳುನಾಡಿನ ಕಡೆಯಿಂದ ಸಮುದ್ರದ ಮಧ್ಯೆ ಇರುವ ರಾಮೇಶ್ವರಂ ದ್ವೀಪ (ಅದನ್ನು ಪಾಂಬನ್ ಎಂದು ಕೂಡ ಕರೆಯುತ್ತಾರೆ)ವನ್ನು ಸಂಪರ್ಕಿಸುವ ರೈಲ್ವೆ ಸೇತುವೆ ಅದು. 2.3 ಕಿಲೋಮೀಟರ್ ಉದ್ದವಾದ, ಸಮುದ್ರ ಮಟ್ಟದಿಂದ 12.5 ಮೀ. ಎತ್ತರ ಇರುವ ಈ ಸೇತುವೆಯ ಕೆಳಭಾಗದಲ್ಲಿ ನಾಡ ದೋಣಿಗಳು ಹಾದುಹೋಗಲು ವ್ಯವಸ್ಥೆ ಮಾಡಲಾಗಿತ್ತು. ಕೇವಲ ಒಂದು ಮೀಟರ್ ಅಗಲ ಇರುವ ಈ ರೈಲು ಸೇತುವೆಯ ಮೇಲ್ಭಾಗದಲ್ಲಿ ರೈಲು ಹಳಿಗಳನ್ನು ಬಿಟ್ಟು ಒಂದಿಂಚು ಹೆಚ್ಚು ಇಲ್ಲ. ಈ ಸೇತುವೆಯ ಮೇಲೆ ಪ್ರತಿ ನಿತ್ಯ ಸಾವಿರಾರು ಜನ ಸಂಚರಿಸುವ ಮತ್ತು ಭಾರವಾದ ಸರಕು ಸಾಗಿಸುವ ರೈಲು ಅತ್ಯಂತ ಅಪಾಯಕಾರಿ ಟ್ರ್ಯಾಕ್ ನಲ್ಲಿ ಹಾದು ಹೋಗುವುದು ಭಾರಿ ಆತಂಕಕ್ಕೆ ಕಾರಣ ಆಗಿತ್ತು.
1964 ಡಿಸೆಂಬರ್ 22 – ದುರಂತ ನಡೆದೇ ಹೋಯಿತು!
ಅಂದು ಇದೇ ರೈಲುಹಳಿಗಳ ಮೇಲೆ ವೇಗವಾಗಿ ಹೋಗುತ್ತಿದ್ದ ರೈಲಿನಲ್ಲಿ ಇದ್ದವರಿಗೆ ಮುಂದೆ ಆಗುವ ಅಪಾಯದ ಅರಿವು ಇರಲೇ ಇಲ್ಲ. ಮಧ್ಯರಾತ್ರಿ ಆದ ಕಾರಣ ಜನರು ಸುಖವಾಗಿ ನಿದ್ರೆ ಮಾಡುತ್ತಿದ್ದರು. ಆಗ ಭೀಕರವಾಗಿ ಎರಗಿದ ಚಂಡಮಾರುತದ ದೊಡ್ಡ ದೊಡ್ಡ ಅಲೆಗಳು ಈ ಸೇತುವೆಯನ್ನು ಸೀಳಿ ಹಾಕಿದವು. ರೈಲು ಕೆಲವೇ ಹೊತ್ತಿನಲ್ಲಿ ಸಂಪೂರ್ಣವಾಗಿ ಸಂಪರ್ಕವನ್ನು ಕಳೆದುಕೊಂಡು ಬಿಟ್ಟಿತ್ತು. ಮುಂದಿನ ಮೂರು ದಿನಗಳ ಕಾಲ ಆ ರೈಲು ಏನಾಯಿತು? ಜನರಿಗೆ ಏನಾಯ್ತು ಎಂದು ಗೊತ್ತೇ ಆಗಲಿಲ್ಲ. ಗಂಟೆಗೆ 240 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿದ ಚಂಡಮಾರುತವು ರೈಲ್ವೆ ಹಳಿಗಳನ್ನು ಮತ್ತು ರೈಲನ್ನು ಎಳೆದುಕೊಂಡು ಹೋಗಿತ್ತು. ಮೂರು ದಿನಗಳ ನಂತರ ಪಾಂಬನ್ ನಿಲ್ದಾಣದ ಹೊರವಲಯದಲ್ಲಿ 1000ಕ್ಕೂ ಅಧಿಕ ಹೆಣಗಳ ರಾಶಿ ಕೊಳೆತು ಹೋದ ಸ್ಥಿತಿಯಲ್ಲಿ ಕಂಡು ಬಂದಿತು. ಅದನ್ನು ಶತಮಾನದ ದುರಂತ ಎಂದು ಕರೆಯಲಾಯಿತು. ಈ ಚಂಡಮಾರುತದಿಂದ ನೂರಾರು ಹಳ್ಳಿಗಳ ಸಂಪರ್ಕ ಕಡಿದು ಹೋಯಿತು.
ಸೇತುವೆಯನ್ನು ಮತ್ತೆ ಕಟ್ಟಿ ನಿಲ್ಲಿಸುವ ಅನಿವಾರ್ಯತೆ!
ರಾಮೇಶ್ವರಂ ದ್ವೀಪ ಮತ್ತು ತಮಿಳುನಾಡಿನ ಇತರ ಭೂಭಾಗಗಳ ಸಂಪರ್ಕ ಕಲ್ಪಿಸುವ ಏಕೈಕ ಕೊಂಡಿ ಆಗಿದ್ದ ಈ ಪಾಂಬನ್ ಸೇತುವೆಯನ್ನು ತುರ್ತಾಗಿ ಕಟ್ಟುವ ಅನಿವಾರ್ಯತೆ ಇತ್ತು. ಅದಕ್ಕೆ ಕೇಂದ್ರ ಸರಕಾರವು ಹಿರಿಯ ಎಂಜಿನಿಯರ್ ಮತ್ತು ಅಧಿಕಾರಿಗಳ ಸಭೆಯನ್ನು ಕರೆಯಿತು. ಕೇವಲ ಆರು ತಿಂಗಳ ಒಳಗೆ ಬಲಿಷ್ಠವಾದ ಸೇತುವೆಯನ್ನು ಸಮುದ್ರದ ಮೇಲೆ ಮತ್ತೆ ಕಟ್ಟುವ ಗಡುವನ್ನು ರೈಲ್ವೆ ಅಧಿಕಾರಿಗಳಿಗೆ ನೀಡಲಾಯಿತು. ಅದಕ್ಕೆ ಬೇಕಾದ ನಿಧಿಯನ್ನು ಕೂಡ ಬಿಡುಗಡೆ ಮಾಡಲಾಯಿತು. ಇದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಇಡೀ ದೇಶವೇ ಈ ಸೇತುವೆಯ ನಿರ್ಮಾಣವನ್ನು ಎದುರು ನೋಡುತ್ತಿತ್ತು!
ಮೂವತ್ತರ ಯುವಕನ ಹೆಗಲ ಮೇಲೆ ಭಾರೀ ದೊಡ್ಡ ಹೊಣೆ!
ಆ ಯುವಕನ ಹೆಸರು ಶ್ರೀಧರನ್! ಇನ್ನೂ ವಿಸ್ತಾರವಾಗಿ ಹೇಳಬೇಕೆಂದರೆ ಎಲಟ್ಟುವಲಪ್ಪಿಲ್ ಶ್ರೀಧರನ್! ವಯಸ್ಸು ಕೇವಲ ಮೂವತ್ತು!
ಆಗ ಕೇರಳದ ಯಂಗ್ ಎಂಜಿನಿಯರ್ ಆಗಿದ್ದರು ಅವರು. ಅವರಿಗೆ ಈ ಪಾಂಬನ್ ಪ್ರಾಜೆಕ್ಟನ ಪ್ರಾಮುಖ್ಯತೆ ಗೊತ್ತಿತ್ತು. ಆದರೆ ಅದು ದುರ್ಗಮ ಪ್ರದೇಶ ಆಗಿತ್ತು! ಅದರ ಜೊತೆಗೆ ಸಮುದ್ರದ ಅಲೆಗಳ ಹೊಡೆತ! ಶ್ರೀಧರನ್ ದೊಡ್ಡ ತಂತ್ರಜ್ಞರ ಮತ್ತು ಕಾರ್ಮಿಕರ ತಂಡವನ್ನು ಕಟ್ಟಿಕೊಂಡು ಆ ಸೇತುವೆಯ ಕೆಲಸ ಆರಂಭ ಮಾಡಿಬಿಟ್ಟರು. ಆರು ತಿಂಗಳ ಲಕ್ಷ್ಯ ಕಣ್ಣ ಮುಂದೆ ಇತ್ತು. ಹಳೆಯ ಪಿಲ್ಲರ್‌ಗಳನ್ನು ಎದ್ದು ನಿಲ್ಲಿಸುವ ಸವಾಲು ದೊಡ್ಡದೇ ಆಗಿತ್ತು. ಏನು ಮಾಡುವುದಿದ್ದರೂ ಆರು ತಿಂಗಳ ಒಳಗೆ ಮಾಡಿ ಮುಗಿಸಬೇಕಿತ್ತು!
ಸಮರೋಪಾದಿಯಲ್ಲಿ ನಡೆಯಿತು ಹೊಸ ಸೇತುವೆಯ ಕೆಲಸ!
ಹೊಸ ಸೇತುವೆಯ ನಿರ್ಮಾಣ ಕಾರ್ಯ ಆರಂಭ ಆದ ಕೂಡಲೇ ಅವರು ತಮ್ಮ ತಂಡದ ಎಂಜಿನಿಯರ್, ಸೂಪರ್ ವೈಸರ್ ಮತ್ತು ಕಾರ್ಮಿಕರ ಸಭೆ ಕರೆದು ಅವರನ್ನೆಲ್ಲ ಚಾರ್ಜ್ ಮಾಡಿದರು. ಎಲ್ಲರಿಗೂ ಆ ಸೇತುವೆಯ ಪ್ರಾಮುಖ್ಯತೆ ಅರ್ಥ ಮಾಡಿಸಿದರು.
‘ನಾವು ಸೇತುವೆ ಮಾತ್ರ ಕಟ್ಟುತ್ತಿಲ್ಲ. ನಾವು ಸಾವಿರಾರು ಜನರ ಭವಿಷ್ಯವನ್ನು ಕಟ್ಟುತ್ತಿದ್ದೇವೆ. ನಾವು ಈ ಮಿಷನ್ ಪೂರ್ತಿ ಮಾಡಿದರೆ ಹೊಸ ಇತಿಹಾಸವನ್ನು ನಿರ್ಮಾಣ ಮಾಡಲಿದ್ದೇವೆ. ಈ ಸೇತುವೆ ಪೂರ್ತಿ ಆಗದಿದ್ದರೆ ನಾವ್ಯಾರೂ ಸರಕಾರಕ್ಕೆ ಮುಖ ತೋರಿಸುವ ಹಾಗಿಲ್ಲ!’ ಎಂದುಬಿಟ್ಟರು. ಇಡೀ ತಂಡಕ್ಕೆ ಊಟ, ತಿಂಡಿ, ನಿದ್ರೆ, ವಿಶ್ರಾಂತಿ ಎಲ್ಲವೂ ಮರೆತು ಹೋಯಿತು. ಕ್ರೇನುಗಳು ಹಗಲು ರಾತ್ರಿ ಬಂಡೆಗಳನ್ನು ಹೊತ್ತು ತಂದವು.
ಆರು ತಿಂಗಳ ಅವಧಿಯಲ್ಲಿ ಆಗಬೇಕಾದ ಪ್ರಾಜೆಕ್ಟ್ ಕೇವಲ 46 ದಿನಗಳಲ್ಲಿ ಪೂರ್ತಿ ಆಗಿತ್ತು! ಅದು ಎಂಜಿನಿಯರಿಂಗ್ ವಿಸ್ಮಯವೇ ಆಗಿ ಹೋಯಿತು. ಇದನ್ನು ಶ್ರೀಧರನ್ ಡೆಲ್ಲಿಯಲ್ಲಿ ಇರುವ ತನ್ನ ಮೇಲಧಿಕಾರಿಗೆ ವರದಿ ಮಾಡಿದರು. ಆದರೆ ಯಾರೂ ಇದನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಸಮುದ್ರದ ಮೇಲೆ ಅಂತಹ ಸೇತುವೆ ಕೇವಲ 46 ದಿನಗಳಲ್ಲಿ ಮುಗಿದು ಹೋಯಿತು ಅಂದರೆ ನಂಬುವವರು ಯಾರು? ಕೊನೆಗೆ ದೆಹಲಿಯಿಂದ ಒಂದು ನಿಯೋಗ ಅಲ್ಲಿಗೆ ಬಂದು ಆ ಸೇತುವೆಯ ಗುಣಮಟ್ಟ ವೀಕ್ಷಣೆ ಮಾಡಿದ ಮೇಲೆ ಮೂಗಿನ ಮೇಲೆ ಬೆರಳು ಇಟ್ಟು ಶ್ರೀಧರನ್ ಅವರನ್ನು ಪ್ರಶಂಸೆ ಮಾಡಿತು.
ಶ್ರೀಧರನ್ ಆದರು ಮೆಟ್ರೋ ಮ್ಯಾನ್ ಆಫ್ ಇಂಡಿಯಾ!
ಮುಂದೆ ಅದೇ ಶ್ರೀಧರನ್ ಚೀಫ್ ಎಂಜಿನಿಯರ್ ಆಗಿ ದುಡಿದು ಕೊಂಕಣ್ ರೈಲ್ವೆ ಯೋಜನೆಯನ್ನು ದಾಖಲೆ ಅವಧಿಯಲ್ಲಿ ಪೂರ್ತಿ ಮಾಡಿದರು. ಇಂದು ಮಂಗಳೂರಿನಿಂದ ಮುಂಬೈಗೆ ರೈಲಿನ ಮೂಲಕ ಹೋಗುವವರು ಜಾರ್ಜ್ ಫರ್ನಾಂಡಿಸ್ ಅವರ ಜೊತೆಗೆ ನೆನಪಿಡಬೇಕಾದ ವ್ಯಕ್ತಿತ್ವ ಇದೇ ಶ್ರೀಧರನ್ ! ಮುಂದೆ ಬೆಂಗಳೂರು ಮೆಟ್ರೋ ಸೇರಿದಂತೆ ಭಾರತದ ವಿವಿಧ ಮೆಟ್ರೋಗಳ ನಿರ್ಮಾಣಕ್ಕೆ ಮಾರ್ಗದರ್ಶಕರಾಗಿ ದುಡಿದ ಕಾರಣ ಅವರನ್ನು ‘ಭಾರತದ ಮೆಟ್ರೋ ಮ್ಯಾನ್’ ಎಂದು ದೇಶವು ಎಂದು ಕರೆಯಿತು.
ಈಗ ಅವರಿಗೆ 90 ವರ್ಷ. ಈಗಲೂ ಒಂದಲ್ಲ ಒಂದು ಪ್ರಾಜೆಕ್ಟ್ ಕೈಗೆತ್ತಿಕೊಂಡು ಓಡಾಡುತ್ತಿರುವ ಶ್ರೀಧರನ್ ಈಗಾಗಲೇ ಪದ್ಮ ವಿಭೂಷಣ ಪ್ರಶಸ್ತಿ ಪಡೆದಿದ್ದಾರೆ ಮತ್ತು ಭಾರತ ರತ್ನ ಪ್ರಶಸ್ತಿಗೆ ಅತ್ಯಂತ ಅರ್ಹರಾಗಿದ್ದಾರೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಪುರುಷರಿಗಿಂತ ಹತ್ತಾರು ಪಟ್ಟು ಹೆಚ್ಚು ಸಾಮರ್ಥ್ಯದ ಪವರ್ ಬ್ಯಾಂಕ್ ಇವರು: ಸ್ತ್ರೀ ಎಂದರೆ ಅಷ್ಟೇ ಸಾಕೆ?