Site icon Vistara News

ರಾಜ ಮಾರ್ಗ ಅಂಕಣ : ಚಿತ್ರರಂಗದ ಮಹಾಗುರು‌, ಹಿಟ್‌ ಚಿತ್ರಗಳ ಫ್ಯಾಕ್ಟರಿ ಕೆ. ಬಾಲಚಂದರ್

K Balachander birthday july 9

-ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಕಮರ್ಷಿಯಲ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದವರು ಯಾರು?
-ಅತೀ ಹೆಚ್ಚು ರಾಷ್ಟ್ರಪ್ರಶಸ್ತಿಗಳನ್ನು ಪಡೆದ ಸಿನಿಮಾ ನಿರ್ದೇಶಕ ಯಾರು? (ರಾಜ ಮಾರ್ಗ ಅಂಕಣ)
-ಕಮಲ್ ಹಾಸನ್, ರಜನೀಕಾಂತ್, ಶ್ರೀದೇವಿ, ಜಯಪ್ರದಾ, ನಾಸೇರ್ ಜಯಸುಧಾ, ರಮೇಶ್ ಅರವಿಂದ್, ಸರಿತಾ, ಚಿರಂಜೀವಿ, ಪ್ರಕಾಶ್ ರಾಜ್, ಸುಜಾತ ಮೊದಲಾದ ದಿಗ್ಗಜ ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯ ಮಾಡಿದ ನಿರ್ದೇಶಕ ಯಾರು?
-ಕನ್ನಡದಲ್ಲಿ ಎರಡು ರೇಖೆಗಳು, ಬೆಂಕಿಯಲ್ಲಿ ಅರಳಿದ ಹೂವು, ಸುಂದರ ಸ್ವಪ್ನಗಳು ಮೊದಲಾದ ಐದು ಮಹಾನ್ ಚಿತ್ರಗಳನ್ನು ನೀಡಿದ ಸ್ಟಾರ್ ನಿರ್ದೇಶಕರು ಯಾರು?
-ಕೇವಲ ಕಮಲಹಾಸನ್ ಎಂಬ ಮಹಾ ಕಲಾವಿದನ 37 ಶ್ರೇಷ್ಠ ಸಿನೆಮಾಗಳನ್ನು ನಿರ್ದೇಶನ ಮಾಡಿದವರು ಯಾರು?
-ಹಿಂದಿಯಲ್ಲಿ ಆಲ್ ಟೈಮ್ ಹಿಟ್ ಆದ ಏಕ್ ದೂಜೇ ಕೆಲಿಯೆ, ಏಕ್ ನಯಿ ಪಹೇಲಿ, ಆಯಿನಾ ಮೊದಲಾದ ಸಿನಿಮಾಗಳನ್ನು ಸಮರ್ಪಣೆ ಮಾಡಿದ ನಿರ್ದೇಶಕ ಯಾರು?

ಈ ಎಲ್ಲ ಪ್ರಶ್ನೆಗಳಿಗೆ ಒಂದೇ ಉತ್ತರ. ಅದು ಕೆ. ಬಾಲಚಂದರ್!
ದಕ್ಷಿಣ ಭಾರತದ ಚಿತ್ರರಂಗವು ಅವರನ್ನು ‘ಮಹಾಗುರು’ ಎಂದು ಗೌರವದಿಂದ ಕರೆಯಿತು.

ಅಕೌಂಟೆಂಟ್ ಜನರಲ್ ಆಫೀಸಿನ ಒಬ್ಬ ಸಾಮಾನ್ಯ ಗುಮಾಸ್ತ

ವಿಜ್ಞಾನದಲ್ಲಿ ಪದವಿಯನ್ನು ಮುಗಿಸಿ ಚೆನ್ನೈಯ ಅಕೌಂಟೆಂಟ್ ಜನರಲ್ ಆಫೀಸಿನ ಒಬ್ಬ ಸಾಮಾನ್ಯ ಗುಮಾಸ್ತನಾಗಿ ಫೈಲುಗಳ ಧೂಳಿನ ನಡುವೆ ಕಳೆದುಹೋಗುತ್ತಿದ್ದ ಈ ಪ್ರತಿಭೆಯು ಬಾಲ್ಯದಿಂದಲೂ ನಾಟಕ, ಸಿನೆಮಾ ಹುಚ್ಚು ಅಂಟಿಸಿಕೊಂಡು ಬೆಳೆದಿತ್ತು. ಆಗಲೇ ತಮಿಳು ನಾಟಕ ಕಂಪನಿ ಕಟ್ಟಿಕೊಂಡು ನಾಟಕ ರಚನೆ, ನಿರ್ದೇಶನಕ್ಕೆ ಇಳಿದವರು ಅವರು. ಅವರ ತಂಡದಲ್ಲಿ ಸಾಹುಕಾರ್ ಜಾನಕಿ ಅಂತಹ ಮಹಾ ನಟ, ನಟಿಯರು ಇದ್ದರು. ಮುಂದೆ ಅವರು ಬರೆದ ಕತೆಗಳು ಬೇಡಿಕೆ ಪಡೆದಂತೆ ಅವರು ಸ್ವತಃ ತಮಿಳು ಸಿನಿಮಾ ರಂಗಕ್ಕೆ ಅನಿವಾರ್ಯ ಕತೆಗಾರ, ಸ್ಕ್ರಿಪ್ಟ್ ರೈಟರ್, ನಿರ್ದೇಶಕ ಎಲ್ಲವೂ ಆದರು. ಮುಂದೆ ಐವತ್ತು ವರ್ಷಗಳ ಕಾಲ ತನ್ನ ಸಿನಿಮಾಗಳ ಮೂಲಕ ದಕ್ಷಿಣ ಭಾರತ ಚಿತ್ರರಂಗದ ಚಿತ್ರಣವನ್ನೇ ಬದಲಾಯಿಸಿದರು. ತಮ್ಮದೇ ‘ಕವಿತಾಲಯ’ ಎಂಬ ಚಿತ್ರ ಸಂಸ್ಥೆ ಸ್ಥಾಪನೆ ಮಾಡಿ ಸಿನಿಮಾ ನಿರ್ಮಾಣ ಕೂಡ ಮಾಡಿದರು.

ಭರ್ತಿ ನೂರು ಸಿನೆಮಾಗಳು – ಎಲ್ಲವೂ ಕ್ಲಾಸಿಕ್!

1965ರಲ್ಲಿ ನೀರ್ ಕುಮಿಳಿ ಎಂಬ ತಮಿಳು ಚಿತ್ರ ನಿರ್ದೇಶನ ಮಾಡುವುದರ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ಕೆ ಬಾಲಚಂದರ್ ಮುಂದಿನ ಐವತ್ತು ವರ್ಷಗಳ ಮುಟ್ಟಿದ್ದೆಲ್ಲ ಚಿನ್ನ ಆಯಿತು. ಇರು ಕೊಡುಗಲ್, ಮೂನ್ರು ಮುಡಿಚ್ಚು, ಕಲ್ಕಿ, ಮರೊ ಚರಿತ್ರ, ಅವಳ್ ಒರು ತೊಡರ್ ಕತೈ, ಭಾಮಾ ವಿಜಯಮ್, ತಣ್ಣೀರ್ ತಣ್ಣೀರ್, ಅಪೂರ್ವ ರಾಗಂಗಳ್, ಮನ್ಮಥ ಲೀಲೈ, 47 ನಾಟ್ಗಲ್……ಈ ಸಿನೆಮಾಗಳು ಸೂಪರ್ ಹಿಟ್ ಸಿನಿಮಾಗಳು. ಅವುಗಳು ಗೆದ್ದಿರುವುದು ಅದ್ಭುತವಾದ ಕಥೆ, ಚಿತ್ರಕಥೆ, ನಿರೂಪಣೆ, ಪಾತ್ರ ಪೋಷಣೆ ಮತ್ತು ಹಿನ್ನೆಲೆ ಸಂಗೀತದ ಬಲದಿಂದ!

ಎಲ್ಲವೂ ಮಧ್ಯಮ ವರ್ಗದ ನವಿರು ಕಥೆಗಳು

ಬಾಲಚಂದರ್ ಆರಿಸುತ್ತ ಇದ್ದದ್ದು ಮದ್ಯಮ ವರ್ಗದ ಕೌಟುಂಬಿಕ ಕಥೆಗಳನ್ನು. ಅವರ ಸಿನಿಮಾಗಳು ಕೌಟುಂಬಿಕ ಜೀವನ, ಸೂಕ್ಷ್ಮ ಭಾವನೆಗಳು, ಕ್ರಾಂತಿಕಾರಿ ಆದ ವಿಚಾರಗಳು, ಸಾಮಾಜಿಕ ಕಳಕಳಿ ಮತ್ತು ಸರಳವಾದ ನಿರೂಪಣೆಗಳಿಂದ ಗೆಲ್ಲುತ್ತಾ ಹೋದವು. ಎಂ.ಎಸ್ ವಿಶ್ವನಾಥನ್, ಇಳಯರಾಜ, ಎ ಆರ್ ರೆಹಮಾನ್ ಮೊದಲಾದ ಸಂಗೀತ ನಿರ್ದೇಶಕರು ಅವರ ಸಿನೆಮಾಗಳಲ್ಲಿ ಕ್ಲಾಸಿಕ್ ಹಾಡುಗಳನ್ನು ಕೊಟ್ಟಿದ್ದಾರೆ. ಬಾಲಚಂದರ್ ಸಿನಿಮಾಗಳು ಅಂದರೆ ಅದು ಅದ್ಭುತ ಹಾಡುಗಳ ಮೆರವಣಿಗೆ ಅನ್ನುವುದು ಎಲ್ಲ ಕಾಲಕ್ಕೂ ಸಾಬೀತು ಆಗಿದೆ. ಅವರ ಅಷ್ಟೂ ಸಿನಿಮಾಗಳು ಆ ಕಾಲಕ್ಕೆ ‘ಅಹೆಡ್ ಆಫ್ ಟೈಮ್ ‘ ಎಂದು ವಿಮರ್ಶಕರಿಂದ ಕರೆಸಿಕೊಂಡಿವೆ.

ಹಾಲಿವುಡ್ ರಂಗದಲ್ಲಿ ಧಮಾಕಾ

ತಮಿಳುರಂಗದಲ್ಲಿ ಹಿಟ್ ಆಗಿದ್ದ ಆರಂಗ್ರೆಟಮ್ ಸಿನಿಮಾವನ್ನು ಹಿಂದಿಯಲ್ಲಿ ಆಯಿನಾ ಎಂದವರು ತೆರೆಗೆ ತಂದರು. ಅದು ವೇಶ್ಯಾವಾಟಿಕೆಯ ಕತೆ. ಆ ಕಾಲಕ್ಕೆ ಅಸ್ಪೃಶ್ಯ ಎಂದು ಕರೆದುಕೊಂಡ ವಿಷಯ ಅದು. ಮುಂದೆ ತಮ್ಮ ತೆಲುಗಿನ ಸೂಪರ್ ಹಿಟ್ ಮರೋ ಚರಿತ್ರಮ್ ಸಿನಿಮಾವನ್ನು ಹಿಂದಿಗೆ ‘ಏಕ್ ದೂಜೆ ಕೆಲಿಯೇ’ ಎಂದು ತೆರೆಗೆ ತಂದರು. ಆ ಸಿನೆಮಾ ಸೂಪರ್ ಹಿಟ್ ಆಯ್ತು. ಕಮಲ್ ಹಾಸನ್, ರತಿ ಅಗ್ನಿಹೋತ್ರಿ, ಮಾಧವಿ ಮೊದಲಾದವರಿಗೆ ಅದು ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿತು. ಮುಂದೆ ಏಕ್ ನಯಿ ಪಹೇಲಿ ಮೊದಲಾದ ಹಿಂದೀ ಸಿನಿಮಾ ಮಾಡಿದರು. ಆದರೆ ಬಾಲಿವುಡ್ ಮಂದಿ ದಕ್ಷಿಣ ಭಾರತದ ಕಲಾವಿದರನ್ನು ನೋಡುತ್ತಿದ್ದ ತಾರತಮ್ಯ ಧೋರಣೆಯು ಅವರಿಗೆ ಇಷ್ಟ ಆಗಲಿಲ್ಲ. ಇನ್ನು ಹಿಂದೀ ಸಿನಿಮಾ ಮಾಡುವುದಿಲ್ಲ ಎಂದು ಗಟ್ಟಿಯಾಗಿ ಹೇಳಿ ಮತ್ತೆ ದಕ್ಷಿಣಕ್ಕೆ ಹಿಂದೆ ಬಂದರು.

ಏಕ್ ದೂಜೇ ಕೇಲೀಯೇ ಮತ್ತು ಎಸ್ ಪಿ ಬಾಲಸುಬ್ರಮಣ್ಯಂ

1981ರಲ್ಲಿ ತನ್ನ ಹಿಟ್ ಸಿನಿಮಾ ಮರೋ ಚರಿತ್ರಂ ಅನ್ನು ಹಿಂದಿಯಲ್ಲಿ ಏಕ್ ದೂಜೇ ಕೆಲಿಯೇ ಎಂದು ಬಾಲಚಂದರ್ ನಿರ್ದೇಶನ ಮಾಡಲು ಹೊರಟರು. ಆ ಹೊತ್ತಿಗೆ ಆ ಸಿನಿಮಾದ ನಿರ್ಮಾಪಕರಾದ ಎಲ್. ವಿ. ಪ್ರಸಾದ್ ಅವರು ಬಾಲಚಂದರ್ ಅವರನ್ನು ಮುಂದೆ ಕೂರಿಸಿ ಕಮಲಹಾಸನ್ ಬದಲು ಅವರನ್ನು ರಾಜೇಶ್ ಖನ್ನಾ ಹಾಕೋಣ ಅಂದರು. ಸಂಗೀತ ನಿರ್ದೇಶಕ ಜೋಡಿ ಲಕ್ಷ್ಮೀಕಾಂತ್ ಪ್ಯಾರೆಲಾಲ್ ಅವರು ಹಾಡುಗಳನ್ನು ಎಸ್. ಪಿ ಬಾಲಸುಬ್ರಹ್ಮಣ್ಯಂ ಅವರ ಬದಲಾಗಿ ಹಿಂದೀ ಗಾಯಕರಿಂದ ಹಾಡಿಸೋಣ ಅಂದರು. ಬಾಲಚಂದರ್ ಅವರಿಗೆ ಸಿಟ್ಟು ನೆತ್ತಿಗೇರಿತು. ನಾನು ಈ ಸಿನಿಮಾ ಮಾಡುವುದಿಲ್ಲ ಎಂದು ಎದ್ದರು!

ಕೊನೆಗೆ ಅವರ ಹಠವೇ ಗೆದ್ದಿತು. ಸಿನಿಮಾ ಸೂಪರ್ ಹಿಟ್ ಆಯ್ತು. ಕಮಲಹಾಸನ್ ಅವರಿಗೆ ಅತ್ಯುತ್ತಮ ನಟ ಫಿಲ್ಮ್ ಫೇರ್ ಪ್ರಶಸ್ತಿ ದೊರೆಯಿತು. ಬಾಲಸುಬ್ರಹ್ಮಣ್ಯಮ್ ಅವರು ‘ತೇರೆ ಮೇರೆ ಬೀಚ್ ಮೇ’ ಹಾಡಿಗಾಗಿ ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು!

ಕೆ ಬಾಲಚಂದರ್ ಅವರು ತಮ್ಮ ಹಠವನ್ನು ಮತ್ತು ತಮ್ಮ ಕಲಾವಿದರನ್ನು ಬಿಟ್ಟುಕೊಟ್ಟ ಯಾವ ಪ್ರಸಂಗವೂ ದೊರೆಯುವುದಿಲ್ಲ.

ಕಮಲಹಾಸನ್‌, ರಜನೀಕಾಂತ್‌ ಅವರ ಮಹಾಗುರು ಇವರು ಕೆ. ಬಾಲಚಂದರ್

ನೂರಾರು ಹೊಸ ಮುಖಗಳ ಪರಿಚಯ. ಮುಂದೆ ಅವರೆಲ್ಲರೂ ಸ್ಟಾರ್ ಆದರು!

ಹೊಸ ಮುಖಗಳನ್ನು ಪರಿಚಯ ಮಾಡುವುದರಲ್ಲಿ ಬಾಲಚಂದರ್ ಅವರಿಗೆ ಅವರೇ ಉಪಮೆ
ಅನ್ನಬಹುದು. ರಜನೀಕಾಂತ್ ಮತ್ತು ಕಮಲಹಾಸನ್ ಅವರನ್ನು ಅಪೂರ್ವ ರಾಗಂಗಳ್ ಎಂಬ ಸಿನಿಮಾದ ಮೂಲಕ ಮಹಾನ್ ಸ್ಟಾರ್ ಆಗಿ ಪರಿಚಯ ಮಾಡಿದ್ದು ಇದೇ ಬಾಲಚಂದರ್. ಮುಂದೆ ಕಮಲಹಾಸನ್ ಅವರ 37 ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದರು. ಬಾಲನಟಿಯಾಗಿ ಮಿಂಚಿದ್ದ ಶ್ರೀದೇವಿಯನ್ನು ಮೂನ್ರು ಮುಡಿಚ್ಚು ಸಿನಿಮಾದ ಮೂಲಕ ಸ್ಟಾರ್ ಮಾಡಿದ್ದು ಅವರೇ. ಅದೇ ರೀತಿ ಜಯಪ್ರದಾ, ಜಯಸುಧಾ, ಚಿರಂಜೀವಿ, ಸರಿತಾ, ರೇಣುಕಾ, ನಾಸೇರ್, ಪ್ರಕಾಶ್ ರಾಜ್, ರಮೇಶ್ ಅರವಿಂದ್, ವಿವೇಕ್, ಸುಜಾತ ಮೊದಲಾದವರನ್ನು ತೆರೆಗೆ ಮೊದಲು ಪರಿಚಯ ಮಾಡಿ ಮುಂದೆ ಸ್ಟಾರ್ ಪಟ್ಟಕ್ಕೆ ಏರಿದಿದ್ದು ಇದೇ ಮಹಾಗುರು! ಅದರಲ್ಲಿಯೂ ಕಮಲ್ ಮತ್ತು ಸರಿತಾ ಅವರ ಕವಿತಾಲಯ ಸಂಸ್ಥೆಯ ಆಸ್ಥಾನ ಕಲಾವಿದರೇ ಆಗಿಹೋದರು!

ಮುಂದೆ ಬಾಲಚಂದರ್ ಅವರ ಎಂಬತ್ತನೇ ವರ್ಷದ ಸಂದರ್ಭದಲ್ಲಿ ಕಮಲ್ ಮತ್ತು ರಜನಿ ಸೇರಿ ತಮ್ಮ ಮಹಾಗುರುವಿಗೆ ಸುವರ್ಣ ಅಭಿಷೇಕ ಮಾಡಿ ಸನ್ಮಾನ ಮಾಡಿದ್ದು ಇದೇ ಕಾರಣಕ್ಕೆ!

ಕನ್ನಡದಲ್ಲಿ ಕೆ ಬಾಲಚಂದರ್ ಅವರ ಸಿನಿಮಾಗಳು

ಅವರ ಹತ್ತಾರು ಕತೆಗಳು ಕನ್ನಡದಲ್ಲಿ ಸಿನೆಮಾ ಆಗಿವೆ. ಆದರೆ ಅವರು ನಿರ್ದೇಶನ ಮಾಡಿದ್ದು ಕನ್ನಡದಲ್ಲಿ ಐದು ಮುತ್ತಿನಂತಹ ಸಿನಿಮಾಗಳನ್ನು. ಸರಿತಾ ಮತ್ತು ರಜನೀಕಾಂತ್ ಅಭಿನಯ ಮಾಡಿದ ತಪ್ಪಿದ ತಾಳ, ಸುಹಾಸಿನಿ ಅವರಿಗೆ ಭಾರೀ ಕೀರ್ತಿ ತಂದು ಕೊಟ್ಟ ಬೆಂಕಿಯಲ್ಲಿ ಅರಳಿದ ಹೂವು, ಸರಿತಾ, ಗೀತಾ ಅವರ ಅಭಿನಯಕ್ಕೆ ಸಾಣೆ ಹಿಡಿದ ಎರಡು ರೇಖೆಗಳು, ರಮೇಶ್ ಅರವಿಂದ್ ಮತ್ತು ಕಮಲಹಾಸನ್ ಅಭಿನಯದ ಸುಂದರ ಸ್ವಪ್ನಗಳು ಇವುಗಳು ಭಾರಿ ಜನಪ್ರಿಯತೆ ಗಳಿಸಿದ ಸಿನೆಮಾಗಳು. ಮುಗಿಲ ಮಲ್ಲಿಗೆ ಅವರ ಐದನೇ ಕನ್ನಡ ಸಿನೆಮಾ.

ಸಾಲು ಸಾಲು ಪ್ರಶಸ್ತಿಗಳು ಮಹಾ ಗುರುವಿಗೆ

ಒಟ್ಟು ನೂರು ಸಿನಿಮಾಗಳಲ್ಲಿ ಕೆ. ಬಾಲಚಂದರ್ ನಿರ್ದೇಶನ ಮಾಡಿದ್ದು ಎಂಬತ್ತು ಸಿನಿಮಾಗಳನ್ನು. ಅದರಲ್ಲಿ 9 ರಾಷ್ಟ್ರ ಪ್ರಶಸ್ತಿ, 13 ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಕೆ. ಬಾಲಚಂದರ್ ಪಡೆದಿದ್ದಾರೆ. ಇಷ್ಟೊಂದು ಪ್ರಶಸ್ತಿಗಳನ್ನು ಪಡೆದ ಇನ್ನೊಬ್ಬ ನಿರ್ದೇಶಕ ನಮಗೆ ಭಾರತದಲ್ಲಿಯೇ ಸಿಗುವುದಿಲ್ಲ! ಅವರ ಸಿನಿಮಾಗಳ ಸಕ್ಸಸ್ ರೇಟ್ ಕೂಡ 90% ಇದೆ ಅನ್ನುವುದು ಮಹಾಗುರುವಿನ ಹೆಗ್ಗಳಿಕೆ!

ಅವರಿಗೆ ಸಿನೆಮಾರಂಗದ ಮಹಾ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, 1987ರ ಪದ್ಮಶ್ರೀ ಪ್ರಶಸ್ತಿ ಇವುಗಳೆಲ್ಲವೂ ದೊರೆತಿವೆ. 2014ರ ಡಿಸೆಂಬರ್ 23ರಂದು ಅವರು ನಮ್ಮನ್ನು ಆಗಲಿದರೂ ತಮ್ಮ ನೂರಾರು ಅತ್ಯುತ್ತಮ ಸಿನಿಮಾಗಳ ಮೂಲಕ ಮಹಾ ಗುರು ನಮ್ಮೊಳಗೆ ಜೀವಂತ ಆಗಿದ್ದಾರೆ. ಇಂದವರ ಹುಟ್ಟುಹಬ್ಬ ಅನ್ನುವುದು ನಾವು ಅವರನ್ನು ನೆನೆಯಲು ಒಂದು ನೆಪ ಮಾತ್ರ!

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಪಕ್ಷದ ನಿಷ್ಠೆಗಾಗಿ ನಾಲ್ಕು ಬಾರಿ ಪ್ರಧಾನಿ ಪಟ್ಟ ತಿರಸ್ಕರಿಸಿದ ಧೀಮಂತ ನಾಯಕ

Exit mobile version