Site icon Vistara News

ರಾಜ ಮಾರ್ಗ ಅಂಕಣ : ಅಪ್ಪನ ಪ್ರೀತಿಯ ಆ ಮಗಳು ಒಂದು ವರ್ಷದಿಂದ ಬಾರಿ ಬಾರಿಗೆ ಹುಡುಕಿದ್ದು ಅದೊಂದೇ ಸಬ್ಜೆಕ್ಟ್!

Father and daughter

ನಾನು ನಿಮಗೆ ಒಂದು ಕೌನ್ಸೆಲಿಂಗ್ ಕತೆ ಹೇಳಬೇಕು. ಇದು ನಿಜವಾಗಿ ನಡೆದ ಕಥೆ ಮತ್ತು ಯಾವ ಮನೆಯಲ್ಲಾದರೂ ನಡೆಯಬಹುದಾದ ಕಥೆ.
ಅವಳು ಅತ್ಯಂತ ಜಾಣೆ ಹುಡುಗಿ ಹಾಗೂ ಸೌಂದರ್ಯದ ರಾಶಿ. ಅಪ್ಪನ ಒಬ್ಬಳೇ ಮುದ್ದಿನ ಮಗಳು. ಅಪ್ಪನೇ ಅವಳ ಬೆಸ್ಟ್ ಫ್ರೆಂಡ್. ಹೈಸ್ಕೂಲ್ ಹಂತ ದಾಟುವತನಕ ಅಪ್ಪನೇ ಬೈಕಲ್ಲಿ ಶಾಲೆಗೆ ಬಿಡಬೇಕು. ಸಂಜೆ ಶಾಲೆ ಬಿಡುವಾಗ ಅಪ್ಪ ಮತ್ತೆ ಬೈಕಲ್ಲಿ ಹಾಜರು. ಅಪ್ಪನ ಬೈಕಲ್ಲಿ ಕೂತಾಗ ಅವಳಿಗೆ ಭಾರಿ ಪ್ರೌಡ್ ಫೀಲಿಂಗ್.

ಕಲಿಯುವುದರಲ್ಲಿ ಕೂಡ ತುಂಬಾ ಬುದ್ಧಿವಂತೆ. ಹತ್ತನೇ ತರಗತಿಗೆ ಅವಳೇ ಫಸ್ಟ್ ಬಂದಾಗ ಅಪ್ಪ ಇಡೀ ವಠಾರಕ್ಕೇ ಸ್ವೀಟ್ ಹಂಚಿದ್ದರು. ಮಗಳಿಗೂ ಭಾರೀ ಅನ್ನುವ ಹೆಮ್ಮೆ. ಆಕೆಗೆ ಮುಗ್ಧತೆಯೇ ಆಸ್ತಿ. ಎಲ್ಲರ ಅಚ್ಚುಮೆಚ್ಚಿನ ಹುಡುಗಿ ಅವಳು.

ಮುಂದೆ ಅವಳು ಪಿಯುಸಿಗೆ ಸೇರುವಾಗ ವಿಜ್ಞಾನವನ್ನು ತೆಗೆದುಕೊಳ್ಳಲು ಅಪ್ಪ ಭಾರಿ ಒತ್ತಾಯ ಮಾಡಿದರು. ಅದು ಅವಳಿಗೂ ಇಷ್ಟ ಹೌದು. ಆದರೆ ಅವಳಿಗೆ ಮುಂದಕ್ಕೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಇ ಮಾಡಬೇಕು ಅಂತ ಆಸೆ. ಅಪ್ಪನಿಗೆ ಅವಳು ಮೆಡಿಕಲ್ ಮಾಡಲೇ ಬೇಕು ಅಂತ ಹಟ. ಬಯಾಲಜಿ ಅವಳ ಆಸಕ್ತಿಯ ವಿಷಯ ಆಗಿರಲಿಲ್ಲ. ಆದರೆ ಅಪ್ಪ ಹಠ ಬಿಡಬೇಕಲ್ಲ. ‘ನಮ್ಮ ಇಡೀ ಕುಟುಂಬದಲ್ಲಿ ಬೇರೆ ಯಾರೂ ಮೆಡಿಕಲ್ ಮಾಡಿಲ್ಲ. ನೀನು ಡಾಕ್ಟರ್ ಆಗುವುದೇ ನನ್ನ ಕನಸು’ ಎಂದು ಬಿಟ್ಟ ಅಪ್ಪ. ಅಪ್ಪನ ಸಿಟ್ಟು ಗೊತ್ತಿದ್ದ ಅಮ್ಮ ಕೂಡ ಮಗಳ ನೆರವಿಗೆ ಬರಲಿಲ್ಲ.

ಅಪ್ಪನ ಒತ್ತಾಯಕ್ಕೆ ಕಟ್ಟು ಬಿದ್ದು ಮಗಳು ಪಿಸಿಎಂಬಿ ಆರಿಸಿಕೊಂಡಳು. ಅಪ್ಪ ಅವಳಿಗಾಗಿ ಏನು ಬೇಕಾದರೂ ಮಾಡಲು ರೆಡಿ ಇದ್ದ. ಆದರೆ ಈ ಒಂದು ವಿಷಯಕ್ಕೆ ಅವನು ಯಾರ ಮಾತೂ ಕೇಳಲಿಲ್ಲ. ಮಗಳು ಮತ್ತೆ ಅಪ್ಪನ ಬೈಕನ್ನು ಏರಿ ಕಾಲೇಜಿಗೆ ಹೊರಟಳು. ಇಷ್ಟ ಇಲ್ಲದ ಬಯಾಲಜಿ ಕ್ಲಾಸ್ ಅವಳಿಗೆ ಭಾರಿ ಒತ್ತಡ ತಂದಿತು.

ಅವಳ ಅಪ್ಪ ಆಗಲೇ ಅವಳ ಹೆಸರಲ್ಲಿ ನೀಟ್ ಕೋಚಿಂಗ್ ಕ್ಲಾಸಿಗೆ ಫೀಸ್ ಕಟ್ಟಿ ಆಗಿತ್ತು. ‘ಪೇಮೆಂಟ್ ಸೀಟ್ ನಮ್ಮಿಂದ ಆಗೋದಿಲ್ಲ ಮಗಳೇ. ನೀನು ಮೆರಿಟ್ ಮೆಡಿಕಲ್ ಸೀಟ್ ಪಡೆಯಲೇ ಬೇಕು’ ಅಂತ ದಿನವೂ ಹೇಳುತ್ತಿದ್ದ. ಮಗಳು ಓದಲು ಕೂತಾಗ ಅಪ್ಪ ಹತ್ತಿರ ಬಂದು ಕೂರುತ್ತಿದ್ದ. ಬೆಳಗ್ಗೆ ನಾಕು ಗಂಟೆಗೆ ಎಬ್ಬಿಸುತ್ತಿದ್ದ. ಮಗಳು ಅಪ್ಪನ ಪ್ರೀತಿಗೆ ಏನೂ ಹೇಳಲು ಆಗದೆ ನಗುವಿನ ಮುಖವಾಡ ಹಾಕಿ ಓದುತ್ತಿದ್ದಳು.

ಮಗಳ ಓದಿಗೆ ಅಪ್ಪನೇ ಜತೆಗಾರ

ಸೆಕೆಂಡ್ ಪಿಯುಸಿ ಕೋರ್ಸ್ ಜೊತೆಗೆ ನೀಟ್ ಕೋಚಿಂಗ್ ಸ್ಟಾರ್ಟ್ ಆಯಿತು. ಅವಳಿಗೆ ಪುರುಸೊತ್ತು ಇರಲಿಲ್ಲ. ಆ ವರ್ಷದ ಅವಳ ಬರ್ತ್ ಡೇ ಕೂಡ ಅವಳಿಗೆ ಮರೆತು ಹೋಯಿತು. ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೆ ನಿರಂತರ ಕ್ಲಾಸ್. ಮನೆಗೆ ಬಂದು ಮತ್ತೆ ನಾಲ್ಕೈದು ಗಂಟೆ ಓದಲೇಬೇಕು. ಹುಡುಗಿ ಒಳಗೊಳಗೆ ಒತ್ತಡ ಫೀಲ್ ಮಾಡುತ್ತಿದ್ದಳು.

ಸೆಕೆಂಡ್ ಪಿಯುಸಿ ರಿಸಲ್ಟ್ ಬಂದಾಗ ಬೇರೆ ಎಲ್ಲ ಸಬ್ಜೆಕ್ಟ್‌ನಲ್ಲಿ ಅವಳು ಉತ್ತಮ ಮಾರ್ಕ್ಸ್ ಪಡೆದಳು. ಬಯಾಲಜಿಯ ಮಾರ್ಕ್ ಕಡಿಮೆ ಆಗಿತ್ತು. ಈಗಲೂ ಅವಳು ‘ಮೆಡಿಕಲ್ ಬೇಡಪ್ಪಾ. ನಾನು ಬಿಎಸ್ಸಿ ಆದರೂ ಮಾಡುತ್ತೇನೆ. ನನ್ನಿಂದ ಆಗ್ತಾ ಇಲ್ಲ’ ಎಂದು ಕಣ್ಣೀರು ಹಾಕಿದಳು.

ಅಪ್ಪನ ಮನಸ್ಸು ಕರಗಲೇ ಇಲ್ಲ. ನೀಟ್ ಕೋಚಿಂಗ್ ಫೀಸ್ ಕಟ್ಟಿ ಆಗಿದೆ. ಸಾಲ ಮಾಡಿ ಲಕ್ಷ ಲಕ್ಷ ಖರ್ಚು ಮಾಡಿದ್ದೇನೆ. ನೀಟ್ ಪರೀಕ್ಷೆಯನ್ನು ಬರೆಯಲೇ ಬೇಕು ಎಂದು ಜಿದ್ದಿಗೆ ಬಿದ್ದ. ಮಗಳು ಮನಸ್ಸಿಲ್ಲದ ಮನಸ್ಸಿನಿಂದ ನೀಟ್ ಪರೀಕ್ಷೆ ಕೂತಳು. ರಿಸಲ್ಟ್ ಬಂದಾಗ ಒಳ್ಳೆಯ ರ‍್ಯಾಂಕ್ ಬರಲಿಲ್ಲ. ಅಪ್ಪ ಭಾರಿ ಸಿಟ್ಟು ಮಾಡಿಕೊಂಡು ಬಿಟ್ಟ. ಮಗಳ ಹತ್ತಿರ ಮಾತಾಡುವುದನ್ನು ಬಿಟ್ಟ. ಮಗಳು ಮೌನವಾಗಿ ಬಿಟ್ಟಳು. ಅವಳ ಕ್ಲಾಸಿನ ಹುಡುಗಿಯರು ಎಂಜಿನಿಯರಿಂಗ್ ಕಾಲೇಜಿಗೆ ಸೇರಿದಾಗ ಅವಳು ಮನಸ್ಸಿನಲ್ಲಿಯೇ ಮರುಗಿದಳು.

ಅಪ್ಪ ಮತ್ತೆ ಎರಡನೇ ಬಾರಿ ನೀಟ್ ಪರೀಕ್ಷೆ ಬರೆಯಲು ಒತ್ತಾಯ ಮಾಡಿದ. ಅವನ ತಲೆಯಲ್ಲಿ ಮಗಳನ್ನು ಹೇಗಾದರೂ ಮೆಡಿಕಲ್ ಕಾಲೇಜು ಸೇರಿಸಬೇಕು ಅನ್ನುವ ಭೂತ ಹೊಕ್ಕಿತ್ತು. ಈ ಬಾರಿ ಮಗಳು ಹಠಕ್ಕೆ ಬಿದ್ದಳು. ಆಗೋದಿಲ್ಲ ಅಪ್ಪ ಎಂದು ಗಟ್ಟಿ ದನಿಯಲ್ಲಿ ಹೇಳಿದಳು. ಊಟ ತಿಂಡಿ ಬಿಟ್ಟು ಧರಣಿ ಕೂತಳು. ಆದರೆ ಅವಳ ಮಾತನ್ನು ಮನೆಯಲ್ಲಿ ಯಾರೂ ಕೇಳುವವರು ಇರಲಿಲ್ಲ. ಮತ್ತೆ ಒಂದು ವರ್ಷ ಚಿತ್ರಹಿಂಸೆ ಪಟ್ಟಳು. ಮತ್ತೆ ನೀಟ್ ಬರೆದಳು. ಈ ಬಾರಿ ಮೊದಲ ಸಲಕ್ಕಿಂತ ಇನ್ನೂ ಕಡಿಮೆ ರ‍್ಯಾಂಕ್ ಬಂತು.

ಈ ಬಾರಿ ಅಪ್ಪ ರೌದ್ರಾವತಾರವನ್ನೇ ತಾಳಿದರು. ‘ನೀನು ನಿನ್ನ ಪೂರ್ಣ ಪ್ರಮಾಣದ ಸಾಮರ್ಥ್ಯ ಹಾಕಿ ಓದುತ್ತಿಲ್ಲ. ನಮ್ಮ ವಂಶದ ಮರ್ಯಾದೆ ಹೋಯಿತು. ನಿನ್ನ ಮೇಲೆ ಭರವಸೆ ಇಟ್ಟು ಲಕ್ಷ ಲಕ್ಷ ಸಾಲ ಮಾಡಿದೆ. ಇನ್ನು ನಾನು ಕುಟುಂಬದವರಿಗೆ ಹೇಗೆ ಮುಖವನ್ನು ತೋರಿಸುವುದು?’ ಎಂದೆಲ್ಲ ಹಾರಾಡಿದ. ಮಗಳು ಕೋಣೆ ಸೇರಿ ಬಾಗಿಲು ಹಾಕಿಕೊಂಡಳು. ಊಟ ತಿಂಡಿ ಮರೆತುಹೋಯಿತು. ಯಾರ ಹತ್ತಿರವೂ ಮಾತಿಲ್ಲ. ಯಾರು ನೆಂಟರು, ಗೆಳೆಯರು ಬಂದರೂ ಕೋಣೆಯಿಂದ ಹೊರಬರಲಿಲ್ಲ. ಅಪ್ಪ- ಮಗಳ ನಡುವೆ ಮಾತು ನಿಂತು ಹೋಯಿತು. ಅಮ್ಮನ ಕಣ್ಣೀರು ಕೂಡ ಅಪ್ಪನನ್ನು ಕರಗಿಸಲಿಲ್ಲ.

ಒಂದು ಮಧ್ಯಾಹ್ನ ಅವಳು ಚೂಡಿದಾರ್ ಶಾಲನ್ನು ಫ್ಯಾನಿಗೆ ಸಿಕ್ಕಿಸಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಳು. ಅಮ್ಮ ಬೊಬ್ಬೆ ಹೊಡೆದು ಜನ ಸೇರಿಸಿ ಮಗಳ ಪ್ರಾಣವನ್ನು ಉಳಿಸಿದಳು. ಅವಳನ್ನು ಕಾಯುವುದೇ ಬಹಳ ದೊಡ್ಡ ಕೆಲಸ ಆಯಿತು. ಮೊಬೈಲ್ ಹಿಡಿದು ಕೂತರೆ ಅವಳಿಗೆ ಬೇರೆ ಯಾರೂ ಬೇಡ. ಊಟ, ತಿಂಡಿ, ಸ್ನಾನ ಎಲ್ಲವೂ ಗತಿ ತಪ್ಪಿತು.

ಅವಳು ಎರಡನೇ ಬಾರಿಗೆ ಆತ್ಮಹತ್ಯೆಗೆ ಪ್ರಯತ್ನ ಪಟ್ಟಾಗ ಅಪ್ಪನಿಗೆ ನಿಜವಾದ ಹೆದರಿಕೆ ಆರಂಭ ಆಯಿತು. ನೆಂಟರು, ನೆರೆಯವರು ಬಂದು ಬುದ್ಧಿ ಹೇಳಿದರು. ಕೊನೆಗೆ ಅಪ್ಪ ಬೇರೆ ದಾರಿ ಇಲ್ಲದೆ ಅವಳನ್ನು ಕೌನ್ಸೆಲಿಂಗ್‌ಗಾಗಿ ಮನೋವೈದ್ಯರ ಬಳಿ ಕರೆದುಕೊಂಡು ಬಂದರು.

ಐದಾರು ಕೌನ್ಸೆಲಿಂಗ್ ಸಿಟ್ಟಿಂಗ್ ಆದಾಗಲೂ ಅವಳು ಮಾತನ್ನೇ ಆಡಲಿಲ್ಲ. ವೈದ್ಯರು ಆಕೆಯ ಬಾಯಿ ಬಿಡಿಸುವ ಪ್ರಯತ್ನ ಮಾಡಿದರೂ ಮೌನದ ಮೊರೆ ಹೋದಳು. ಆದರೆ ವೈದ್ಯರು ಆಕೆಯ ಮುಗ್ಧತನ ಮತ್ತು ಬುದ್ಧಿವಂತಿಕೆಯನ್ನು ನೋಡಿ ಬೆರಗಾದರು. ಆಕೆಗೆ ಧೈರ್ಯ ಹೇಳಿ ಆಪ್ತವಾದ ಮಾತುಕತೆಗೆ ಇಳಿದರು. ಅಪ್ಪನನ್ನು ಹೊರಗೆ ಕೂರಿಸಿ ಆಕೆಯ ಬಾಯಿ ಬಿಡಿಸಿದರು.

ಅವಳು ಎಲ್ಲವನ್ನೂ ಹೇಳಿ ಭಾರಿ ಜೋರಾಗಿ ಅಳಲು ತೊಡಗಿದಳು. ಮೂರು ವರ್ಷಗಳಿಂದ ಹೆಪ್ಪುಗಟ್ಟಿದ್ದ ಆಕೆಯ ಕಣ್ಣೀರು ಧಾರೆಯಾಗಿ ಸುರಿಯಿತು. ವೈದ್ಯರು ಆಕೆಗೆ ಸಮಾಧಾನವನ್ನು ಹೇಳಿ ಭಾವನೆಗಳನ್ನು ನಿಯಂತ್ರಣ ಮಾಡುವುದನ್ನು ಹೇಳಿಕೊಟ್ಟರು. ಒಂದಿಷ್ಟು ಮಾತ್ರೆ ಕೊಟ್ಟು ಅವಳನ್ನು ಪ್ರೀತಿಯಿಂದ ಮೈದಡವಿ ಅಪ್ಪನ ಜೊತೆಗೆ ಮನೆಗೆ ಕಳುಹಿಸಿದರು. ಅಪ್ಪನಿಗೂ ಖಾಸಗಿಯಾಗಿ ಬುದ್ಧಿ ಹೇಳುವುದನ್ನು ಮರೆಯಲಿಲ್ಲ.

ಮೊಬೈಲ್‌ನಲ್ಲಿ ಹುಡುಕಾಟ

ಸ್ವಲ್ಪ ಹೊತ್ತಿನ ನಂತರ ವೈದ್ಯರು ನೋಡುವಾಗ ಆಕೆ ತನ್ನ ಮೊಬೈಲ್ ಫೋನನ್ನು ಟೇಬಲಿನ ಮೇಲೆ ಬಿಟ್ಟು ಹೋದದ್ದನ್ನು ಗಮನಿಸಿದರು. ಆಕೆಯ ಕೌನ್ಸೆಲಿಂಗ್ ಕೆಲಸಕ್ಕೆ ಅನುಕೂಲವಾಗಲಿ ಎಂದು ತೆಗೆದು ಒಳಗೆ ಇಟ್ಟರು. ಸಂಜೆ ಮನೆಗೆ ಹೋದ ನಂತರ ಆಕೆಯ ಗೂಗಲ್ ಅಕೌಂಟ್ ಓಪನ್ ಮಾಡಿದರು. ಆಕೆ ಯಾವ ಸೈಟನ್ನು ತುಂಬಾ ಸಲ ಸರ್ಚ್ ಮಾಡುತ್ತಿದ್ದಳು ಎಂದು ನೋಡಲು ಆರಂಭ ಮಾಡಿದರು. ಅವರಿಗೆ ಈಗ ನಿಜವಾದ ಶಾಕ್ ಕಾದಿತ್ತು.

ಆಕೆ ಒಂದು ವರ್ಷದಿಂದ ಒಂದೇ ವಿಷಯವನ್ನು ನೂರಾರು ಬಾರಿ ಸರ್ಚ್ ಮಾಡಿದ್ದಳು. ಅದು ಸಾಕ್ಷಿಯೇ ಇಲ್ಲದೆ ಅಪ್ಪನನ್ನು ಕೊಲ್ಲುವುದು ಹೇಗೆ ಎಂಬ ಸಬ್ಜೆಕ್ಟ್‌!

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ನತಾಷಾ ಪೆರಿಯನಾಯಗಂ – ಇವಳು ವಿದ್ಯಾರ್ಥಿಗಳ ಪಾಲಿನ ಸ್ಫೂರ್ತಿ ದೇವತೆ!

Exit mobile version