ತಮಿಳುನಾಡಿನ ಕುಂಭಕೋಣಂ ಜಿಲ್ಲೆಯ ಸಾರಂಗಪಾಣಿ ರಸ್ತೆಯ ಮೂಲೆಯಲ್ಲಿ ಇದ್ದ ಒಂದು ಸಣ್ಣ ಮನೆ ಅದು. ಅದನ್ನು ಹುಡುಕಲು ನನಗೆ ತುಂಬಾ ಕಷ್ಟ ಆಗಲಿಲ್ಲ. ಅದು ಮಾಸಲು ಗೋಡೆಗಳ ಸಾಂಪ್ರದಾಯಿಕವಾದ ಮನೆ! ಮನೆಯ ಗೋಡೆಗಳ ಮೇಲೆ ಸುಣ್ಣದ ಬೊಟ್ಟುಗಳಿಂದ ಬರೆದ ರಂಗೋಲಿಗಳು. ಮನೆಯ ಮುಂದೆ ಹಸೆಗಳನ್ನು ಬರೆದ ವಿಶಾಲವಾದ ಜಗಲಿ.
ಆ ಜಗಲಿಯ ಮೇಲೆ ದಶಕಗಳ ಕಾಲ ಕುಳಿತು ಸ್ಲೇಟ್ ಹಿಡಿದು ಗಣಿತ ಸಾಮ್ರಾಜ್ಯದ ನಿಗೂಢವಾದ ರಹಸ್ಯಗಳನ್ನು ಆ ಗಣಿತ ಸಾಮ್ರಾಟ ಬಿಡಿಸುತ್ತಾ ಹಸಿವು ನಿದ್ರೆಗಳನ್ನು ಮರೆಯುತಿದ್ದ! ಆ ಸ್ಲೇಟ್ ಮೇಲೆ ಮೂಡಿದ ಗಣಿತದ ವಿಸ್ಮಯಗಳನ್ನು ಒಂದು ನೋಟ್ ಬುಕ್ಕಿನಲ್ಲಿ ಬರೆಯುತ್ತ ಆತ ಗಣಿತವೇ ಆಗಿ ಹೋಗಿದ್ದ!
ಅವರೇ ಶ್ರೀನಿವಾಸ್ ರಾಮಾನುಜನ್! ಜಗತ್ತು ಕಂಡ ಅತೀ ಶ್ರೇಷ್ಠರಾದ ಗಣಿತಜ್ಞರ ಸಾಲಿನಲ್ಲಿ ನಿಲ್ಲುವ ಭಾರತದ ಪ್ರತಿಭೆ! ಗಣಿತ ಲೋಕದ ವಿಸ್ಮಯ! ದುರಂತ ಅಂತ್ಯ ಕಂಡ ಭಾರತದ ಶ್ರೇಷ್ಠ ರತ್ನ! ಡಿಸೆಂಬರ್ 22 ಅವರ ಹುಟ್ಟುಹಬ್ಬ. ಅಂತೆಯೇ ರಾಷ್ಟ್ರೀಯ ಗಣಿತ ದಿನ!
ಕೇಂಬ್ರಿಜ್ ವಿವಿಯಲ್ಲಿ ದಾಖಲೆ ಬರೆದ ರಾಮಾನುಜನ್!
ಶ್ರೀನಿವಾಸ ರಾಮಾನುಜನ್ ಲಂಡನ್ನಿನಲ್ಲಿ ಇದ್ದದ್ದು ನಾಲ್ಕರಿಂದ ಐದು ವರ್ಷ ಮಾತ್ರ. ಅಷ್ಟರಲ್ಲಿ ಅದ್ಭುತಗಳನ್ನು ಅವರು ಸಾಧಿಸಿ ಆಗಿತ್ತು! ಅಲ್ಲಿನ ಕೇಂಬ್ರಿಜ್ ವಿವಿಯಲ್ಲಿ ಅವರು ಗಣಿತ ಲೋಕದ ಅಗಣಿತವಾದ ವಿಸ್ಮಯಕಾರಿ ಫಲಿತಾಂಶಗಳನ್ನು ಕಂಡುಹಿಡಿದರು. ಅಲ್ಲಿ ಅವರ ಗುರುಗಳಾದ ಹಾರ್ಡಿ ಸರ್ ಅವರು ರಾಮಾನುಜನ್ ಅವರ ಅಪೂರ್ವ ಪ್ರತಿಭೆಗೆ ಸಾಣೆ ಹಿಡಿದವರು.
ಆ ಸಾಧನೆ ಮಾಡಿದ ಭಾರತದ ಮೊದಲ ಸಾಧಕ!
ಅದರ ಪರಿಣಾಮವಾಗಿ 1917 ಡಿಸೆಂಬರ್ 6ರಂದು ಅವರಿಗೆ ಲಂಡನ್ ಮ್ಯಾಥಮೆಟಿಕಲ್ ಸೊಸೈಟಿಯ ಸದಸ್ಯತ್ವವು ದೊರೆಯಿತು. ರಾಯಲ್ ಸೊಸೈಟಿ ಫೆಲೋಶಿಪ್ ಕೂಡ ದೊರೆಯಿತು. ಆ ಫೆಲೋಶಿಪ್ ಪಡೆದ ಜಗತ್ತಿನ ಮೊತ್ತಮೊದಲ ಇಂಗ್ಲೀಷೇತರ ವ್ಯಕ್ತಿ ಅಂದರೆ ಅದು ರಾಮಾನುಜನ್! ಆಗಲೇ ಅವರ ಅನೇಕ ಗಣಿತದ ಸಂಶೋಧನಾ ಪ್ರಬಂಧಗಳು ಅಂತಾರಾಷ್ಟ್ರೀಯ ಮ್ಯಾಗಝಿನ್‌ನ ಮುಖಪುಟದಲ್ಲಿ ಪ್ರಕಟವಾಗಿದ್ದವು. ಆಗಲೇ ಅವರನ್ನು ಜಾಗತಿಕ ಗಣಿತ ಲೋಕವು ಓರ್ವ ಲೆಜೆಂಡ್ ಆಗಿ ಸ್ವೀಕಾರ ಮಾಡಿತ್ತು!
ಆದರೆ ಲಂಡನ್ನಿನ ಚಳಿಯಲ್ಲಿ ನರಳಿದ ಗಣಿತ ಐಕಾನ್!
ಆದರೆ ರಾಮಾನುಜನ್ ಅವರ ಖಾಸಗಿ ಬದುಕು ಮತ್ತು ಆರೋಗ್ಯಗಳು ತುಂಬಾ ಶಿಥಿಲ ಆಗಿದ್ದವು. ಲಂಡನ್‌ನಲ್ಲಿ ಅವರು ತೀವ್ರವಾದ ಒಬ್ಬಂಟಿತನದಿಂದ ಪಡಬಾರದ ಪಾಡುಪಟ್ಟರು. ಅವರು ಅಲ್ಲಿಂದ ಭಾರತದಲ್ಲಿ ಇದ್ದ ತನ್ನ ಪ್ರೀತಿಯ ಹೆಂಡತಿ ಜಾನಕಿಗೆ ತುಂಬಾ ಪ್ರೀತಿಯ ಪತ್ರಗಳನ್ನು ಬರೆದಿದ್ದರು. ಅವುಗಳಿಗೆ ಒಂದಕ್ಕೂ ಹೆಂಡತಿ ಉತ್ತರ ಕೊಟ್ಟಿರಲಿಲ್ಲ! ಅದೂ ಅಲ್ಲದೆ ಇಂಗ್ಲೆಂಡಿನ ಚಳಿಯ ವಾತಾವರಣವು ಅವರ ಆರೋಗ್ಯವನ್ನು ಪೂರ್ತಿ ಖಾಲಿ ಮಾಡಿತ್ತು. ಸಂಪೂರ್ಣ ಸಸ್ಯಾಹಾರಿ ಆಗಿದ್ದ ರಾಮಾನುಜನ್‌ಗೆ ಇಂಗ್ಲೆಂಡಿನಲ್ಲಿ ಸರಿಯಾದ ಸಸ್ಯಾಹಾರ ದೊರೆಯದೆ ಅವರೇ ಅಡುಗೆ ಮಾಡಿ ಉಣ್ಣಬೇಕಾಯಿತು.
ಆದರೆ ಪೂರ್ತಿಯಾಗಿ ಗಣಿತ ಪ್ರಪಂಚದಲ್ಲಿ ಮುಳುಗಿಹೋಗಿದ್ದ ಅವರಿಗೆ ಅಡುಗೆ ಮಾಡಲು ಮನಸ್ಸೇ ಆಗುತ್ತಿರಲಿಲ್ಲ. ಸೀಮೆ ಎಣ್ಣೆ ಸ್ಟೌವಲ್ಲಿ ಅನ್ನ ಮಾಡಿ ಅದಕ್ಕೆ ಲಿಂಬೆರಸ ಮತ್ತು ಉಪ್ಪು ಹಾಕಿ ಊಟ ಮಾಡುತ್ತಿದ್ದರು. ಎಷ್ಟೋ ಬಾರಿ ನೀರು ಕುಡಿದು ಹಾಗೆ ಮಲಗಿದ್ದು ಇತ್ತು. ಕೆಲವೊಮ್ಮೆ ಮೂರು ಮೂರು ದಿನ ನಿದ್ರೆ, ಊಟ ಮಾಡದೇ ಸಂಶೋಧನೆಯಲ್ಲಿ ಮುಳುಗಿ ಹೋಗಿದ್ದು ಇತ್ತು!
ಕಂಟಕವಾಗಿ ಕಾಡಿತು ಕ್ಷಯ ರೋಗ!
ಈ ಅಶಿಸ್ತಿನ ಜೀವನದಿಂದ ಅವರ ಮೈಯಲ್ಲಿ ಅಮರಿದ್ದು ಆ ಕಾಲಕ್ಕೆ ಮಾರಕವಾದ ಕ್ಷಯ ರೋಗ! ಅದರ ಜೊತೆಗೆ ಕರುಳಲ್ಲಿ ಹುಣ್ಣು ಮತ್ತು ಹೈಡ್ರೋಸಿಲ್ ಕಾಯಿಲೆಗಳು!
ಈ ಅನಾರೋಗ್ಯ ಮತ್ತು ಮಾನಸಿಕ ತುಮುಲಗಳಿಂದ ನೊಂದುಕೊಂಡು ರಾಮಾನುಜನ್ ಒಮ್ಮೆ ಲಂಡನ್ನಿನ ರೈಲ್ವೆ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಲು ಪ್ರಯತ್ನಪಟ್ಟರು! ಅವರು ಓಡುತ್ತಿದ್ದ ರೈಲಿನ ಎದುರು ಹಳಿಗಳ ಮೇಲೆ ಹಾರಿದ್ದರು. ರೈಲು ನಿಧಾನವಾಗಿ ಬರುತ್ತಿದ್ದ ಕಾರಣ ಮತ್ತು ಚಾಲಕ ಸಡನ್ನಾಗಿ ಬ್ರೇಕ್ ಹಾಕಿದ ಕಾರಣ ಅವರು ಬದುಕಿದ್ದರು!
ಆಗಲೇ ಕೃಶಕಾಯರಾಗಿದ್ದ ರಾಮಾನುಜಂ ತುಂಬಾ ಸೊರಗಿ ಹೋಗಿದ್ದರು. ಇನ್ನು ಮನುಷ್ಯ ಬದುಕುವುದು ಕಷ್ಟ ಎಂದು ಖಚಿತವಾದ ಸಂದರ್ಭದಲ್ಲಿ ಹಾರ್ಡಿ ಸರ್ ಮತ್ತು ಅವರ ಗೆಳೆಯರು ಸೇರಿ ರಾಮಾನುಜನ್ ಅವರನ್ನು ಒತ್ತಾಯಪೂರ್ವಕ ಭಾರತಕ್ಕೆ ಹಡಗಿನಲ್ಲಿ ಕಳುಹಿಸಿಕೊಟ್ಟರು.
ಭಾರತಕ್ಕೆ ಬಂದಾಗ ಎಲುಬಿನ ಚಕ್ಕಳ ಆಗಿದ್ದರು ರಾಮಾನುಜನ್!
ಒಂದು ಸುಂದರವಾದ ಹಡಗಿನಲ್ಲಿ ಆರು ತಿಂಗಳ ಪ್ರಯಾಣ ಮಾಡಿ ರಾಮಾನುಜನ್ ಭಾರತಕ್ಕೆ ಬಂದರು. ಅವರನ್ನು ಸ್ವಾಗತ ಮಾಡಲು ಅವರ ತಾಯಿಯಾದ ಕೋಮಲತ್ತಮಾಳ್ ಮತ್ತು ತಮ್ಮ ಲಕ್ಷ್ಮೀ ನರಸಿಂಹ ಬಂದಿದ್ದರು. ಹೆಂಡತಿ ಜಾನಕಿ ಬಂದಿರಲಿಲ್ಲ. ರಾಮಾನುಜನ್ ತಾಳ್ಮೆ ಕಳೆದುಕೊಂಡು ಅವಳೆಲ್ಲಿ ಎಂದು ಮತ್ತೆ ಕಿರುಚಿದರು! ಗೊತ್ತಿಲ್ಲ ಅಂದರು ಅವರ ಅಮ್ಮ! ರಾಮಾನುಜನ್ ಮತ್ತೆ ಮತ್ತೆ ಅವಳೆಲ್ಲಿ ಎಂದು ಕಿರುಚಿದರು.
ನಿಜವಾಗಿ ಏನಾಗಿತ್ತು ಅಂದರೆ ರಾಮಾನುಜನ್ ಲಂಡನ್‌ಗೆ ಹೋಗಿದ್ದಾಗ ಅತ್ತೆ ಸೊಸೆಯರ ನಡುವೆ ಸಹಜವಾದ ಮಾತ್ಸರ್ಯ ಸ್ಫೋಟ ಆಗಿತ್ತು. ಲಂಡನ್ನಿನಿಂದ ರಾಮಾನುಜನ್ ಬರೆಯುತ್ತ ಇದ್ದ ಅಷ್ಟೂ ಪತ್ರಗಳನ್ನು ಅಡಗಿಸಿಟ್ಟು ಸೊಸೆಗೆ ದೊರೆಯದ ಹಾಗೆ ಮಾಡಿದ್ದು ಅದೇ ಅಮ್ಮ ಕೋಮಲತ್ತಮಾಳ್ ಹಾಗೆಯೇ ಸೊಸೆ ಪ್ರೀತಿಯಿಂದ ಗಂಡನಿಗೆ ಬರೆಯುತ್ತ ಇದ್ದ ಅಷ್ಟೂ ಪತ್ರಗಳನ್ನು ಹರಿದು ಹಾಕುತ್ತಿದ್ದದ್ದು ಇದೇ ತಾಯಿ!
ಸೊಸೆಯ ಪ್ರೀತಿಯ ಸೆಳೆತಕ್ಕೆ ಒಳಗಾಗಿ ಮಗನು ಗಣಿತದ ಸಂಶೋಧನೆಯಿಂದ ವಿಮುಖನಾಗಿ ಭಾರತಕ್ಕೆ ಹಿಂದೆ ಬರಬಹುದು ಎನ್ನುವ ಆತಂಕ ಅಮ್ಮನಿಗೆ ಇತ್ತೇ ಹೊರತು ಬೇರೆ ಯಾವ ಸ್ವಾರ್ಥವೂ ಇರಲಿಲ್ಲ! ಆದರೆ ಈ ನಿಲುವು ಇಬ್ಬರೂ ದಂಪತಿಗಳ ಪ್ರೀತಿಗೆ ಮಾರಕ ಆದದ್ದು ಸುಳ್ಳಲ್ಲ.
ಅತ್ತೆಯ ಕಿರುಕುಳದಿಂದ ನೊಂದುಕೊಂಡು ಸೊಸೆ ತನ್ನ ತಾಯಿ ಮನೆಗೆ ಹೋಗಿ ತುಂಬಾ ತಿಂಗಳಾಗಿತ್ತು. ರಾಮಾನುಜನ್ ಹೆಂಡತಿಯನ್ನು ತುಂಬಾ ಪ್ರೀತಿ ಮಾಡುತ್ತಿದ್ದರು. ಅವರೇ ಹೋಗಿ ಹೆಂಡತಿಯನ್ನು ಕರೆದುಕೊಂಡು ಬಂದರು.
ಮತ್ತೆ ಪುಟಿಯಿತು ಜೀವನೋತ್ಸಾಹ, ಆದರೆ!
“ನನ್ನ ಗಂಡ ಕೇವಲ ಎಲುಬಿನ ಚಕ್ಕಳ ಆಗಿದ್ದರು. ನಾನು ಅವರ ಜೊತೆಗೆ ಲಂಡನ್‌ಗೆ ಹೋಗಿದ್ದರೆ ಈ ಆರೋಗ್ಯ ಸಮಸ್ಯೆ ಬರ್ತಾನೆ ಇರಲಿಲ್ಲ. ನನಗೆ ಕಣ್ಣೀರು ಬಂತು!” ಎಂದು ಜಾನಕಿ ತನ್ನ ಗಂಡನ ಬಗ್ಗೆ ಹೇಳಿದ್ದಾರೆ. ಮುಂದೆ ಒಂದು ವರ್ಷ ಗಂಡ ಹೆಂಡತಿಯರು ತುಂಬಾನೆ ಪ್ರೀತಿಯಿಂದ ಚೆನ್ನೈಯಲ್ಲಿ ಬದುಕಿದ್ದರು. ಆಗಲೇ ಅವರ ಆಯಸ್ಸು ಖಾಲಿ ಆಗತೊಡಗಿತ್ತು. ಕ್ಷಯ ರೋಗವು ದೇಹದಾದ್ಯಂತ ಹರಡಿ ಆಗಿತ್ತು. ಮುಂದೆ ಅವರು ಅತೀವ ನೋವು ಪಡುತ್ತಾ ನರಳಿದರು!
ಆ ವಿಷಮ ಸ್ಥಿತಿಯಲ್ಲಿ ಕೂಡ ಅವರು ಸುಮ್ಮನೆ ಕೂರದೆ ‘ಮಾಕ್ ತೀಟಾ ಫಂಕ್ಷನ್ ‘ ಎಂಬ ಗಣಿತದ ವಿಸ್ಮಯಕಾರಿ ಸಂಶೋಧನೆ ಪೂರ್ತಿ ಮಾಡಿದ್ದರು. ಸುಮಾರು 650 ಹೊಸ ಸಮೀಕರಣಗಳ ನಿರೂಪಣೆ ಪೂರ್ತಿ ಮಾಡಿದ್ದರು. ಅದನ್ನೆಲ್ಲ ಅವರು ತನ್ನ ಗುರು ಹಾರ್ಡಿ ಸರ್ ಅವರಿಗೆ ಲಂಡನ್ನಿಗೆ ಟಪ್ಪಾಲು ಮೂಲಕ ಕಳುಹಿಸಿದ್ದರು.
ಅಂತಹ ಗಣಿತ ಪ್ರಪಂಚದ ಮೇರು ಪ್ರತಿಭೆಯು 1920ರ ಏಪ್ರಿಲ್ 20ರಂದು ತಮ್ಮ ಪ್ರಾಣವನ್ನು ಕಳೆದುಕೊಂಡರು. ಅಂದು ಇಡೀ ಜಗತ್ತಿನ ಗಣಿತ ಶಾಸ್ತ್ರಜ್ಞರು ಕಂಬನಿ ಮಿಡಿದರು. ಎಲ್ಲ ಇಂಗ್ಲಿಷ್ ಮತ್ತು ಭಾರತದ ಪ್ರಮುಖ ಪತ್ರಿಕೆಗಳು ರಾಮಾನುಜನ್ ಬಗ್ಗೆ ಸಂಪಾದಕೀಯ ಬರೆದು ಅವರಿಗೆ ಶೃದ್ಧಾಂಜಲಿ ನೀಡಿದವು. ಆಗ ಅವರಿಗೆ ಕೇವಲ 32 ವರ್ಷ. ಅವರ ಹೆಂಡತಿ ಜಾನಕಿಗೆ ಇಪ್ಪತ್ತರ ಆಸುಪಾಸು ಅಷ್ಟೇ!
ಅವರ ಮರಣದ ನಂತರ ಅವರ ಚೆನ್ನೈಯ ಮನೆಯಲ್ಲಿ ಅವರ ಅಮ್ಮನ ಚರ್ಮದ ಪೆಟ್ಟಿಗೆಯಲ್ಲಿದ್ದ ಗಣಿತದ ವಿಶ್ವರೂಪವನ್ನು ತೆರೆದಿಟ್ಟ 138 ಪುಟಗಳ ಟಿಪ್ಪಣಿ ದೊರೆತಿತು. ಅವುಗಳು ರಾಮಾನುಜನ್ ಬಿಟ್ಟು ಹೋದ ಗಣಿತದ ಅಮೂಲ್ಯ ಕೊಡುಗೆಗಳು. ಆ ಹಾಳೆಗಳನ್ನು ಕೇಂಬ್ರಿಜ್ ವಿವಿಯು ‘The Last note books of Ramanujan’ ಎಂಬ ಹೆಸರಿನಲ್ಲಿ ಮುದ್ರಿಸಿ ಪ್ರಕಟಮಾಡಿದೆ.
ಆ ಕುಂಭಕೋಣಂ ಹಂಚಿನ ಮನೆಯ ಮುಂದೆ ನಿಂತು ಈ ಘಟನೆಗಳು ಕಣ್ಣ ಮುಂದೆ ಸುಳಿದು ನಾನು ಕುಸಿದುಹೋಗಿದ್ದೆ!
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಮಕ್ಕಳು ಯಾವ ಪುಸ್ತಕ ಓದಬೇಕು ಮತ್ತು ಹೇಗೆ ಓದಬೇಕು: ಇಲ್ಲಿದೆ ಮಹತ್ವದ ಟಿಪ್ಸ್- ಭಾಗ 2