Site icon Vistara News

ರಾಜ ಮಾರ್ಗ ಅಂಕಣ : ತುತ್ತು ಅನ್ನಕ್ಕಿದೆ ಕೋಟಿ ಮೌಲ್ಯ: ಅರಿತು ಬಳಸೋಣ, ಅದನ್ನು ಎಸೆಯದೆ ಹಂಚಿ ತಿನ್ನೋಣ

food

ಜಗತ್ತಿನ ಒಟ್ಟು ಜನಸಂಖ್ಯೆಯು ಅಂದಾಜು 600 ಕೋಟಿ. ಅದರಲ್ಲಿ ಅಂದಾಜು 80 ಕೋಟಿ ಜನರು ದಿನವೂ ಖಾಲಿ ಹೊಟ್ಟೆಯಲ್ಲಿ ಮಲಗುತ್ತಾರೆ ಎಂದರೆ ನೀವು ನಂಬಲೇ ಬೇಕು! ಜಗತ್ತಿನಾದ್ಯಂತ ಹಸಿವಿನಿಂದ ಮಲಗುವ ನಾಲ್ಕು ಜನರಲ್ಲಿ ಒಬ್ಬ ಭಾರತೀಯ ಅನ್ನುವುದು ಕೂಡ ಬೆಚ್ಚಿ ಬೀಳಿಸುವ ಸಂಗತಿ ಆಗಿದೆ!

ಭಾರತವು ಪ್ರತೀ ವರ್ಷವೂ 25 ಕೋಟಿ ಟನ್ ಆಹಾರ ಧಾನ್ಯಗಳನ್ನು ಉತ್ಪಾದನೆ ಮಾಡುತ್ತದೆ. ಭಾರತದ ಜನಸಂಖ್ಯೆಯು ಅಗಾಧವಾಗಿ ಬೆಳೆಯುತ್ತಿರುವ ಕಾರಣ ನಮಗೆ ವರ್ಷವೂ 122 ಕೋಟಿ ಟನ್ ಆಹಾರ ಧಾನ್ಯಗಳು ಬೇಕು! ಅಂದರೆ ಭಾರತದಲ್ಲಿ ಅಂದಾಜು 20 ಕೋಟಿ ಜನರು ಉಪವಾಸದಲ್ಲಿಯೇ ಮಲಗುತ್ತಾರೆ! ಒಂದು ತುತ್ತು ಅನ್ನಕ್ಕಾಗಿ ಪರದಾಡುತ್ತಾರೆ!

ಭಾರತೀಯರಿಗೆ ಆಹಾರ ಪ್ರಜ್ಞೆ ಇಲ್ಲ ಅನ್ನುತ್ತದೆ ಸಂಶೋಧನೆ!
ಭಾರತೀಯರಿಗೆ ತೀವ್ರವಾದ ಹಸಿವು ಇದೆ. ಆದರೆ ಆಹಾರ ಪ್ರಜ್ಞೆ ಇಲ್ಲ ಅನ್ನುತ್ತಾರೆ ವಿಜ್ಞಾನಿಗಳು! ಭಾರತೀಯರು ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶಗಳ ತೀವ್ರ ಕೊರತೆ ಇದೆ. ಸಮತೂಕದ ಆಹಾರದ ಬಗ್ಗೆ 85% ಭಾರತೀಯರಿಗೆ ಅರಿವು ಇಲ್ಲ ಅನ್ನುತ್ತದೆ ಸಂಶೋಧನೆ! ಇದರಿಂದ ಭಾರತದಲ್ಲಿ ಹುಟ್ಟುವ 40% ಮಕ್ಕಳು ಅಪೌಷ್ಟಿಕತೆಯಿಂದ
ಕೃಶಕಾಯರಾಗಿ ಅನಾರೋಗ್ಯದ ಕಾರ್ಖಾನೆಯಾಗಿ ನರಳುತ್ತಿದ್ದಾರೆ. ಭಾರತದಲ್ಲಿ ಏಡ್ಸ್, ಮಲೇರಿಯಾ, ಕ್ಷಯ ರೋಗಕ್ಕಿಂತ ಹೆಚ್ಚು ಜನರು ಹಸಿವು ಎಂಬ ಕಾಯಿಲೆಯಿಂದ ಸಾಯುತ್ತಿದ್ದಾರೆ ಎಂದರೆ ನಿಮಗೆ ನಂಬಲು ಕಷ್ಟ ಆಗಬಹುದು!

ಪೋಲಾಗುವ ಆಹಾರದ್ದೇ ಇನ್ನೊಂದು ಸಮಸ್ಯೆ!
ಇನ್ನೊಂದು ಆಘಾತಕಾರಿಯಾದ ಅಂಶವೆಂದರೆ ಭಾರತದಲ್ಲಿ ಮದುವೆ ಮನೆಗಳಲ್ಲಿ, ಪಾರ್ಟಿಗಳಲ್ಲಿ, ಹೋಟೆಲುಗಳಲ್ಲಿ ಸಿದ್ಧಪಡಿಸುವ ಆಹಾರ ಪದಾರ್ಥಗಳಲ್ಲಿ 20-25% ಆಹಾರ ವಸ್ತುಗಳು ವ್ಯರ್ಥವಾಗಿ ಕಸದ ತೊಟ್ಟಿ ಸೇರುತ್ತವೆ ಎನ್ನುವುದು! ಈ ರೀತಿಯಲ್ಲಿ ವ್ಯರ್ಥವಾಗುವ ಆಹಾರ ಪದಾರ್ಥಗಳ ಒಟ್ಟು ವೆಚ್ಚವು ಅಂದಾಜು ವರ್ಷಕ್ಕೆ 58,000 ಕೋಟಿ ರೂಪಾಯಿ! ಭಾರತದಲ್ಲಿ ಸಿದ್ಧವಾಗುವ ಆಹಾರ ಪದಾರ್ಥಗಳಲ್ಲಿ ಮೂರನೇ ಒಂದರಷ್ಟು ಆಹಾರವು ಕಸದ ತೊಟ್ಟಿ ಸೇರುತ್ತಿರುವುದನ್ನು ನಾವೇ ಕಣ್ಣಾರೆ ನೋಡುತ್ತಿದ್ದೇವೆ. ಆಹಾರದ ಪೋಲು ಇಂದಿನ ದಿನದಲ್ಲಿ ಹೆಚ್ಚಿನವರಿಗೆ ಒಂದು ಶೋಕಿ ಆಗಿಬಿಟ್ಟಿದೆ.

ಈ ರೀತಿಯ ಆಹಾರ ಅಪವ್ಯಯ ಆಗುವುದನ್ನು ನಾವು ತಪ್ಪಿಸಿದರೆ ಭಾರತದ ಇನ್ನಷ್ಟು ಕೋಟಿ ಜನರ ಹಸಿವು ನೀಗಿಸಬಹುದು. ಆದರೆ ಹೇಗೆ?

ತುತ್ತು ಅನ್ನದ ಮೌಲ್ಯವನ್ನು ಅರಿಯಿರಿ!
೧) ಮದುವೆ ಮೊದಲಾದ ಕಾರ್ಯಕ್ರಮಗಳಲ್ಲಿ ಊಟಕ್ಕೆ ಕೂತಾಗ ಎಷ್ಟು ಬೇಕೋ ಅಷ್ಟೇ ಆಹಾರ ಹಾಕಿಸಿಕೊಳ್ಳಿ. ಆಹಾರ ಪೋಲು ಆಗದ ಹಾಗೆ ನೋಡಿಕೊಳ್ಳಿ.

೨) ಪಂಕ್ತಿಯಲ್ಲಿ ಊಟಕ್ಕೆ ಕೂತಾಗ ಹೆಚ್ಚು ಆಹಾರ ಪೋಲು ಆಗುವ ಸಾಧ್ಯತೆ ಇದೆ. ಬಫೆ ಊಟದಲ್ಲಿ ಈ ಪೋಲನ್ನು ನಿಯಂತ್ರಣ ಮಾಡಬಹುದು.

೩) ಹೆಚ್ಚು ಆಹಾರವನ್ನು ತಟ್ಟೆಯಲ್ಲಿ ಹಾಕಿಕೊಂಡು ಆನಂತರ ಬಿಟ್ಟು ಏಳುವುದು ಪ್ರತಿಷ್ಠೆಯ ಸಂಗತಿ ಆಗುವುದು ಬೇಡ.

೪) ಮದುವೆಯಂತಹ ಪಾರ್ಟಿಯಲ್ಲಿ ಉಳಿದ ಆಹಾರವನ್ನು ಅಂದೇ ಅನಾಥಾಶ್ರಮ ಅಥವಾ ವೃದ್ಧಾಶ್ರಮಗಳಿಗೆ ತೆಗೆದುಕೊಂಡು ಹೋಗಿ ವಿತರಣೆ ಮಾಡುವುದು ತುಂಬ ಒಳ್ಳೆಯ ಯೋಜನೆ. ಹಾಗೆ ಕೊಡುವಾಗ ಭಿಕ್ಷೆ ಎಂದು ಕೊಡಬೇಡಿ ಅಥವಾ ಅಪಮಾನ ಮಾಡಿ ಕೊಡಬೇಡಿ. ಆಹಾರ ಪದಾರ್ಥಗಳನ್ನು ಬಿಸಿ ಮಾಡಿ ಕೊಟ್ಟರೆ ತುಂಬಾ ಒಳ್ಳೆಯದು. ನಿಮ್ಮ ಊರಲ್ಲಿ ಇರುವ ಜೋಪಡಿ, ಕೊಳೆಗೇರಿಗಳಿಗೆ ಈ ಆಹಾರವನ್ನು ಹಂಚುವುದು ತುಂಬಾ ಒಳ್ಳೆಯದು. ಆದರೆ ಅವರ ಸ್ವಾಭಿಮಾನಕ್ಕೆ ತೊಂದರೆ ಆಗದ ಹಾಗೆ ನೋಡಿಕೊಳ್ಳಿ.

೫) ಊಟದ ಮೆನು ದೊಡ್ಡದು ಮಾಡಿ ಪ್ರತಿಷ್ಠೆ ಮೆರೆಯುವ ಶ್ರೀಮಂತರಿಗೆ ನಾನು ವಿನಂತಿ ಮಾಡಿಕೊಳ್ಳುವುದು – ತುಂಬಾ ಐಟಂ ಮಾಡಿದರೆ ಮಾತ್ರ ಊಟ ಶ್ರೀಮಂತ ಎಂದು ದಯವಿಟ್ಟು ಭಾವಿಸಬೇಡಿ. ಊಟಕ್ಕೆ ಹೆಚ್ಚು ಐಟಂ ಮಾಡಿದರೆ ಆಹಾರ ಪೋಲಾಗುವ ಸಾಧ್ಯತೆ ಹೆಚ್ಚಿದೆ (ಅದು ನಮ್ಮಿಷ್ಟ ಸರ್ ಎಂದು ವಾದ ಮಾಡಬೇಡಿ ಮತ್ತೆ)!

ಮಾದರಿ ಆದ ಕಾರ್ಕಳ ‘ರೋಟರಿ ಅನ್ನಪೂರ್ಣ ಯೋಜನೆ’
ನನ್ನೂರು ಕಾರ್ಕಳದಲ್ಲಿ ರೋಟರಿ ಸಂಸ್ಥೆಯವರು ‘ರೋಟರಿ ಅನ್ನಪೂರ್ಣ’ ಎಂಬ ಅರ್ಥಪೂರ್ಣವಾದ ಯೋಜನೆ ರೂಪಿಸಿದ್ದಾರೆ. ಕಾರ್ಕಳದ ಎಲ್ಲ ಕಲ್ಯಾಣ ಮಂಟಪಗಳಲ್ಲಿ ಸಂಪರ್ಕ ಸಂಸ್ಥೆಯ ಜೊತೆಗೆ ಒಂದು ಸೂಚನಾ ಫಲಕ ಇರಿಸಿದ್ದಾರೆ. ಯಾವುದೇ ಕಾರ್ಯಕ್ರಮಗಳಲ್ಲಿ ಒಂದಿಷ್ಟು ಆಹಾರ ಪದಾರ್ಥ ಉಳಿದರೆ ಆ ಸಂಪರ್ಕ ಸಂಖ್ಯೆಗೆ ಮಧ್ಯಾಹ್ನದ ಹೊತ್ತಿಗೆ ಕಾಲ್ ಬರುತ್ತದೆ. ಆಗ ಕಾರ್ಯಕರ್ತರು ಆ ಸ್ಥಳಕ್ಕೆ ಹೋಗಿ ಆಹಾರ ವಸ್ತುವನ್ನು ಕಾರ್ಕಳ ಬಸ್ ನಿಲ್ದಾಣಕ್ಕೆ ತೆಗೆದುಕೊಂಡು ಬರುತ್ತಾರೆ. ತರುವಾಗ ಸ್ವಚ್ಛತೆಯ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಾರೆ. ಅಲ್ಲಿ ಆಹಾರ ಪದಾರ್ಥಗಳನ್ನು ಬಿಸಿ ಮಾಡುವ ವ್ಯವಸ್ಥೆ ಇದೆ. ಬಡಿಸಲು ಪಾತ್ರೆಗಳು ಮತ್ತು ತಟ್ಟೆಗಳು ಇರುತ್ತವೆ. ಕಾರ್ಯಕರ್ತರು ಅಷ್ಟೇ ಪ್ರೀತಿಯಿಂದ ಬಡಿಸುತ್ತಾರೆ.

ಅಪರಾಹ್ನ 3ರಿಂದ ಆಹಾರ ಪದಾರ್ಥಗಳು ಮುಗಿಯುವತನಕ ಬಸ್ ಪ್ರಯಾಣಿಕರು, ರಿಕ್ಷಾ ಚಾಲಕರು, ಬಸ್ ಚಾಲಕರು, ನಿರ್ವಾಹಕರು, ಹಸಿದವರು ಯಾರು ಬಂದರೂ ಉಚಿತವಾಗಿ ಊಟ ಮಾಡುವ ದೃಶ್ಯವು ನನಗೆ ತುಂಬಾ ಪ್ರೇರಣೆ ಕೊಟ್ಟಿದೆ. ಕೋರೋನ ಸಮಯದಲ್ಲಿ ಈ ವ್ಯವಸ್ಥೆಗೆ ಸ್ವಲ್ಪ ತೊಂದರೆ ಆದದ್ದನ್ನು ನಾನು ಗಮನಿಸಿದ್ದೇನೆ.

ಆದರೆ ಅದು ಅತ್ಯಂತ ಶ್ರೇಷ್ಠವಾದ ಕಾರ್ಯಕ್ರಮ ಅನ್ನುವುದರಲ್ಲಿ ಎರಡು ಮಾತಿಲ್ಲ! ಈ ಯೋಜನೆಗೆ ಬೆಂಗಾವಲಾಗಿ ನಿಂತಿರುವ ಕಾರ್ಕಳ ಬಸ್ ಏಜೆಂಟರ ಬಳಗಕ್ಕೆ ಕೂಡ ನನ್ನ ಅಭಿನಂದನೆ!

ಜೇಸಿಐ, ರೋಟರಿ, ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಗಳು, ಯುವಕ, ಯುವತಿ ಮಂಡಲಗಳು, ಸರಕಾರೇತರ ಸಂಸ್ಥೆಗಳು ಇಂತಹ ಮಾದರಿ ಯೋಜನೆಯನ್ನು ತಮ್ಮ ಊರಲ್ಲಿ ಕೂಡ ರೂಪಿಸಬಹುದು. ಒಂದೊಂದು ತುತ್ತು ಅನ್ನ ಹಸಿದವರ ಒಡಲು ಸೇರಿದಾಗ ಆ ತುತ್ತಿಗೆ ಒಂದು ಮೌಲ್ಯ ಬರುತ್ತದೆ ಮತ್ತು ಅದನ್ನು ಬಡಿಸಿದವರಿಗೂ ಕೂಡ!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಶ್ರೀಧರನ್‌ ಎಂಬ ಕರ್ಮಯೋಗಿ: 46 ದಿನಗಳಲ್ಲಿಯೇ ರೈಲ್ವೆ ಸೇತುವೆ ಕಟ್ಟಿದ ಎಂಜಿನಿಯರಿಂಗ್ ವಿಸ್ಮಯ!

Exit mobile version