Site icon Vistara News

ರಾಜ ಮಾರ್ಗ ಅಂಕಣ : ಅದೆಂಥಾ ಕ್ಷಮಾಗುಣ: ಅನ್ನದ ಬಟ್ಟಲಿಗೆ ಉಗುಳಿದ ಜೈಲರನ್ನೇ ಮನೆಗೆ ಕರೆದಿದ್ದರು ಮಂಡೇಲಾ!

Nelson Mandela

ದಕ್ಷಿಣ ಆಫ್ರಿಕಾದ ಜನರಿಂದ ರಾಷ್ಟ್ರಪಿತ ಎಂದು ಹೆಮ್ಮೆಯಿಂದ ಕರೆಸಿಕೊಂಡಿರುವ ನೆಲ್ಸನ್ ಮಂಡೇಲಾ ಜನಾಂಗ ದ್ವೇಷದ ವಿರುದ್ಧ ಜೀವಮಾನವಿಡೀ ಹೋರಾಟ ಮಾಡಿದವರು. ಅವರು ದಕ್ಷಿಣ ಆಫ್ರಿಕಾದ ಮೊದಲ ಕರಿಯ ಅಧ್ಯಕ್ಷರಾಗಿ ಭಾರಿ ಜನಪ್ರಿಯತೆ ಪಡೆದವರು. ನನಗೆ ವಿಸ್ಮಯ ಮೂಡಿಸಿದ್ದು ಅವರು ಪ್ರಿಟೋರಿಯಾ ಸೆರೆಮನೆಯಲ್ಲಿ ಕಳೆದಿದ್ದ 27 ವರ್ಷಗಳ ಸುದೀರ್ಘ ಅವಧಿಯ ಜೈಲುವಾಸ! ಕರಿಯರ ಪರವಾಗಿ ಮತ್ತು ವರ್ಣ ತಾರತಮ್ಯದ ವಿರುದ್ಧವಾಗಿ ಅವರು ಹೋರಾಟ ಮಾಡಿದ್ದಕ್ಕೆ ದೊರಕಿದ ಶಿಕ್ಷೆ ಅದು!

ಜೈಲಲ್ಲಿ ಮಂಡೇಲಾ ಅವರು ಅತ್ಯಂತ ಕೆಳ ದರ್ಜೆಯ ಪ್ರಿಸನರ್ ಆಗಿದ್ದರು. ಎಂಟು ಅಡಿ ಉದ್ದ ಮತ್ತು 7 ಅಡಿ ಅಗಲ ಇದ್ದ ಕಿಟಕಿ ಕೂಡ ಇಲ್ಲದ, ಸರಿಯಾದ ಬೆಳಕು, ಗಾಳಿ ಮತ್ತು ನೀರಿನ ವ್ಯವಸ್ಥೆ ಇಲ್ಲದ, ಉಸಿರುಗಟ್ಟುವ ಸೆರೆಮನೆಯ ಕೋಣೆಯಲ್ಲಿ ಅವರು ತಮ್ಮ ಜೀವನದ ಬಹು ಪ್ರಾಮುಖ್ಯವಾದ ಎರಡೂವರೆ ದಶಕಗಳನ್ನು ಹೇಗೆ ಕಳೆದರು? ಹಗಲು ಪೂರ್ತಿ ಕಲ್ಲುಗಣಿಗಳಲ್ಲಿ ಮೈ ಮುರಿಯುವ ದುಡಿತವನ್ನು ತಪ್ಪಿಸುವ ಹಾಗೆ ಇರಲಿಲ್ಲ. ಪ್ರತೀ ರಾತ್ರಿ ಮೂರು ಗಂಟೆ ಕಾನೂನು ಪದವಿಗಾಗಿ ಓದು. ಮಧ್ಯರಾತ್ರಿ ಕಳೆದ ನಂತರ ಹುಲ್ಲಿನ ಚಾಪೆಯ ಮೇಲೆ ಮಲಗುವುದು! ಇದು ಅವರ ಪ್ರತೀ ದಿನದ ದಿನಚರಿ ಆಗಿತ್ತು.

ಆರು ತಿಂಗಳಿಗೆ ಒಮ್ಮೆ ಅವರು ತಮ್ಮ ಗೆಳೆಯರನ್ನು ಮತ್ತು ಸಂಬಂಧಿಕರನ್ನು ಭೇಟಿ ಮಾಡಲು ಅವಕಾಶ ಇತ್ತು. ಆರು ತಿಂಗಳಿಗೆ ಒಮ್ಮೆ ಮಾತ್ರ ಮನೆಯವರಿಗೆ ಪತ್ರ ಬರೆಯಲು ಅವಕಾಶ. ಇದರ ನಡುವೆ ಅವರು ಕಠಿಣ ಅಧ್ಯಯನ ನಡೆಸಿ ಕರೆಸ್ಪಾಂಡೆನ್ಸ್ ಮೂಲಕ ಕಾನೂನು ಪದವಿ ಪಡೆದರು. ಅದು ತನ್ನ ಪರವಾಗಿ ಕೋರ್ಟಲ್ಲಿ ತಾನೇ ವಾದ ಮಂಡಿಸಬೇಕು ಎಂಬ ಛಲಕ್ಕಾಗಿ!

ಇದಕ್ಕಿಂತ ಹೀನಾಯವಾದ ಸಂಗತಿ ಎಂದರೆ ಜೈಲಿನ ಒಳಗಿನ ಕರಿಯ ಕೈದಿಗಳಿಗೆ ಮಧ್ಯಾಹ್ನ ಊಟದ ಹೊತ್ತಿಗೆ ಒಂದು ಬಟ್ಟಲು ನವಣೆಯ ಅನ್ನ ಕೊಡುತ್ತಿದ್ದರು. ಅದು ದೊರಗು ಅನ್ನ. ತಿನ್ನಲು ಬಹಳ ಕಷ್ಟ.

ಅದನ್ನು ಕರಿಯ ಕೈದಿಗಳಿಗೆ ಕೊಡುವ ಮೊದಲು ಜೈಲರ್ ಅದರ ಮೇಲೆ ಮೇಲೆ ಎಂಜಲು ಉಗಿದು ಆಮೇಲೆ ತಿನ್ನಲು ಕೊಡುತ್ತಿದ್ದರು. ಮಂಡೇಲಾ ಒಂದಿಷ್ಟೂ ತಾಳ್ಮೆಯನ್ನು ಕೆಡದೇ ಆ ಎಂಜಲು ಬಿದ್ದ ಭಾಗವನ್ನು ಮಾತ್ರ ಬದಿಗೆ ಇಟ್ಟು ಉಳಿದ ಭಾಗವನ್ನು ಚಂದವಾಗಿ ಊಟ ಮಾಡಿ ಮುಗಿಸುತ್ತಿದ್ದರು. ಆಗೆಲ್ಲ ಕಣ್ಣಲ್ಲಿ ಬೆಂಕಿ ಇಟ್ಟುಕೊಂಡು ಮಂಡೇಲಾ ಅವರ ಮುಂದೆ ಜೈಲರ್ ನಿಂತುಕೊಂಡು ಇರುತ್ತಿದ್ದನು! ಇದು ಪ್ರತೀ ದಿನದ ಆಚರಣೆ ಆಗಿತ್ತು.

ಮುಂದೆ ಜೈಲಿಂದ ಬಿಡುಗಡೆ ಆದ ನಂತರ ನೆಲ್ಸನ್ ಮಂಡೇಲಾ ಚುನಾವಣೆಯನ್ನು ಗೆದ್ದು 1994- 1999ರ ಅವಧಿಗೆ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಆಗುತ್ತಾರೆ. ಪ್ರತಿಜ್ಞಾ ವಿಧಿ ಪೂರ್ತಿ ಆದ ಕೂಡಲೇ ಅದೇ ಜೈಲರನ್ನು ತನ್ನ ಮನೆಗೆ ಕರೆಸಿಕೊಳ್ಳುತ್ತಾರೆ. ಜೈಲರ್ ಭಯ ಪಡುತ್ತಾ, ನಡುಗುತ್ತ ಅಧ್ಯಕ್ಷರ ಮನೆಗೆ ಬರುತ್ತಾನೆ.

ಮಂಡೇಲಾ ಒಂದಿಷ್ಟು ಕೂಡ ಆಕ್ರೋಶವನ್ನು ತೋರದೆ “ಜೈಲರ್, ಭಯ ಪಡುವುದು ಖಂಡಿತ ಬೇಡ. ನನಗೆ ನಿನ್ನ ಮೇಲೆ ಒಂದಿಷ್ಟು ಸಿಟ್ಟು ಇಲ್ಲ. ನೀನು ನಿನ್ನ ಕರ್ತವ್ಯ ಮಾತ್ರ ಮಾಡಿದ್ದೀಯ ಎಂದು ನನಗೆ ಗೊತ್ತಿದೆ. ನಿನ್ನ ಮೇಲಧಿಕಾರಿಗಳ ಆದೇಶವನ್ನು ಪಾಲಿಸಲು ಹಾಗೆ ಮಾಡಿದ್ದೀಯ. ನಿನ್ನನ್ನು ಜೈಲಲ್ಲಿ ಇದ್ದಾಗಲೇ ನಾನು ಕ್ಷಮಿಸಿದ್ದೇನೆ ಹೋಗು” ಎಂದರು!

ಮತ್ತೆ ಮುಂದುವರಿದು ಮಂಡೇಲಾ ಅವರು ಇನ್ನು ಮುಂದೆ ದಕ್ಷಿಣ ಆಫ್ರಿಕಾದ ಯಾವ ಸೆರೆಮನೆಯಲ್ಲಿ ಕೂಡ ಅಸ್ಪೃಶ್ಯತೆ, ಜನಾಂಗೀಯ ಅವಮಾನಗಳು ಆಗಬಾರದು ಎಂದು ಆದೇಶ ಹೊರಡಿಸಿದರು. ತಮ್ಮ ಇಡೀ ಜೀವನವನ್ನು ವರ್ಣ ತಾರತಮ್ಯದ ನಿವಾರಣೆಗೆ ಸಮರ್ಪಣೆ ಮಾಡಿದರು.

ಮಂಡೇಲಾ ಅವರಿಗೆ 250ಕ್ಕಿಂತ ಅಧಿಕ ಸಂಖ್ಯೆಯ ಜಾಗತಿಕ ಮಟ್ಟದ ಪ್ರಶಸ್ತಿಗಳು ದೊರೆತಿವೆ. ನೊಬೆಲ್ ಪ್ರಶಸ್ತಿ, ಭಾರತ ರತ್ನ ಪ್ರಶಸ್ತಿ ಇವೆಲ್ಲವೂ ದೊರೆತಿವೆ. ಜೈಲರ್ ಜೊತೆಗೆ ಅವರು ಅಧ್ಯಕ್ಷರಾದ ನಂತರ ಆಡಿದ ಮಾತುಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ಅವರ ಕ್ಷಮಾ ಗುಣವೂ ನಮಗೆ ಟಚ್ ಆಗುತ್ತದೆ.

ಭರತ ವಾಕ್ಯ
ಸಣ್ಣ ತಪ್ಪುಗಳಿಗೆ ನಾವು ದ್ವೇಷ ಮಾಡುತ್ತಾ ಹೋದರೆ ನಾವು ಎಲ್ಲರನ್ನೂ ದ್ವೇಷ ಮಾಡಬೇಕು ಅಲ್ಲವೇ? ನಮ್ಮ ಗಂಡ, ಹೆಂಡತಿ, ಮಕ್ಕಳು, ಸಂಬಂಧಿಕರು, ಅಪ್ಪ, ಅಮ್ಮ, ಬಾಸ್, ವಿದ್ಯಾರ್ಥಿಗಳು ಎಲ್ಲರನ್ನೂ ದ್ವೇಷ ಮಾಡುತ್ತಾ ಹೋಗಬೇಕು. ಹಾಗೆ ಕ್ಷಮಿಸುತ್ತ ಹೋದರೆ ನಾವು ಗ್ರೇಟ್ ಆಗುತ್ತೇವೆ.

ದ್ವೇಷ ಮಾಡುವುದಾದರೆ ನಾನು ಮೊದಲಾಗಿ ನನ್ನನ್ನೇ ದ್ವೇಷ ಮಾಡಬೇಕು! ಏಕೆಂದರೆ ನಾನು ಹೇಳಿದ್ದನ್ನು ಎಷ್ಟೋ ಬಾರಿ ನಾನೇ ಒಪ್ಪುವುದಿಲ್ಲ! ಒಬ್ಬನನ್ನು ದ್ವೇಷ ಮಾಡಲು ದೊರೆಯುವ ನೂರು ಕಾರಣಗಳಿಗಿಂತ ಹೆಚ್ಚು ಕಾರಣಗಳು ಆತನನ್ನು ಪ್ರೀತಿ ಮಾಡಲು ದೊರೆಯುತ್ತವೆ. ಅಲ್ಲವೇ?

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಆಲ್ಫ್ರೆಡ್ ನೊಬೆಲ್: ಅವನನ್ನು ಮರಣ ವ್ಯಾಪಾರಿ ಎಂದು ಬದುಕಿದ್ದಾಗಲೇ ಶ್ರದ್ಧಾಂಜಲಿ ಬರೆದಿತ್ತು ಪತ್ರಿಕೆ!

Exit mobile version